Categories
ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ) ಕನ್ನಡ ಕಲೆ ನೃತ್ಯ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಲಲಿತಾ ಶ್ರೀನಿವಾಸನ್

ಕರ್ನಾಟಕದ ನೃತ್ಯ ರಂಗವನ್ನು ದೇಶ ವಿದೇಶಗಳಲ್ಲಿ ಮೆರೆಸಿದ ಹಿರಿಮೆ ಲಲಿತಾ ಶ್ರೀನಿವಾಸನ್ ಅವರದು. ಸ್ವತಃ ನರ್ತಕಿಯಾಗಿ, ನೃತ್ಯ ಸಂಯೋಜಕಿಯಾಗಿ, ನೃತ್ಯ ಶಿಕ್ಷಕಿಯಾಗಿ ನಾಡಿನ ನೃತ್ಯ ರಂಗದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಗಳಿಸಿಕೊಂಡಿರುವ ತನ್ನ ಪ್ರಾರಂಭಿಕ ನೃತ್ಯ ಶಿಕ್ಷಣವನ್ನು ಗುರು ಹೆಚ್. ಆರ್.ಕೇಶವಮೂರ್ತಿಯವರಿಂದ ಪಡೆದರು. ನಂತರ ಅಭಿನಯ ವಿಶಾರದೆ ಡಾ|| ಕೆ. ವೆಂಕಟಲಕ್ಷ್ಮಮ್ಮ. ಮೂಗೂರು ಜೇಜಮ್ಮ, ಗುರು ನರ್ಮದಾ ಮುಂತಾದವರಿಂದ ಹೆಚ್ಚಿನ ಶಿಕ್ಷಣ ಪಡೆದು ನೃತ್ಯದ ವಿದ್ಯುತ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಪಡೆದ ಈ ಕಲಾವಿದೆ ೧೯೬೦ರಲ್ಲಿ ರಂಗ ಪ್ರವೇಶ ಮಾಡಿದರು. ಅಲ್ಲಿಂದ ಮುಂದೆ ಭಾರತದ ಬಹುತೇಕ ಎಲ್ಲ ಪ್ರತಿಷ್ಠಿತ ಸಾಂಸ್ಕೃತಿಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಲಲಿತ ಶ್ರೀನಿವಾಸನ್ ಅವರ ನೃತ್ಯ ಶಾಲೆ. “ನೂಪುರ” ಅನೇಕ ಒಳ್ಳೆಯ ನೃತ್ಯ ಕಲಾವಿದರನ್ನು ತಯಾರು ಮಾಡಿದೆ. “ನೂಪುರ” ದ ವಾರ್ಷಿಕ “ನಿತ್ಯ ನೃತ್ಯ” ಮಹೋತ್ಸವ ನಾಡಿನ ನೃತ್ಯ ರಂಗದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. “ಶೃಂಗಾರ ನಾಯಿಕಾ”, “ಶೃಂಗಾರನಾಯಿಕಾ”, “ಕೃಷ್ಣ ಪಾರಿಜಾತ”, “ಕೌಶಿಕ ಸುಕೃತಂ”, “ಬೀಬಿ ನಾಚಿಯಾರ್”, “ನೌಕಾ ಚರಿತ್ರೆ” ಲಾಸ್ಯೋತ್ಸವ ಮುಂತಾದ ಅನೇಕ ನೃತ್ಯ ರೂಪಕಗಳು ಈ ಕಲಾವಿದೆಯ ಮಹತ್ವದ ಕೊಡುಗೆ. ಹಾಗೆಯೇ ’ಸುಳಾದಿ ನೃತ್ಯ’ಗಳನ್ನು ಪುನರುತ್ಥಾನ ಮಾಡಿದ ಹಿರಿಮೆ ಇವರದು. ಅಮೇರಿಕೆಯಲ್ಲಿ ನೃತ್ಯ ಕಲೆಯ ಬಗ್ಗೆ ಹೆಚ್ಚಿನ ಅಭ್ಯಾಸ ಮಾಡಿದ ಕೀರ್ತಿ ಇವರದು.

ಬಹುಮುಖ ಪ್ರತಿಭೆಯ ಈ ನೃತ್ಯ ಕಲಾವಿದೆಗೆ ಕೇಂದ್ರ ಸರ್ಕಾರದ ಮಾವನ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಫೆಲೋಶಿಪ್ ದೊರೆತಿವೆ. ಲಲಿತಾ ಅವರು ಕರ್ನಾಟಕ ನೃತ್ಯ ಶಿಲ್ಪಗಳು ಹಾಗೂ ಮೈಸೂರು ಅರಮನೆಯಲ್ಲಿ ನೃತ್ಯದ ವಿಷಯವಾಗಿ ಸಂಶೋಧನೆ ನಡೆಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ. ಪದವಿ ಹಾಗೂ ಸಂಸ್ಕೃತದಲ್ಲಿ “ಕೋವಿದ” ಪದವಿ ಇವರಿಗೆ ಲಭ್ಯವಾಗಿವೆ.

ರಾಷ್ಟ್ರಪತಿಗಳಿಂದ “ಶಿರೋಮಣಿ ಪ್ರಶಸ್ತಿ” ಹಾಗೂ ಮಾನವ ಸಂಪನ್ಮೂಲ ಮಂತ್ರಿಗಳಿಂದ “ಪ್ರಿಯದರ್ಶಿನಿ” ಅಲ್ಲದೇ ಲಲಿತಾರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೮೯-೯೦ನೇ ಸಾಲಿನ ಗೌರವ ಪ್ರಶಸ್ತಿಯನ್ನು ’ಕರ್ನಾಟಕ ಕಲಾ ತಿಲಕ’ ಬಿರುದಿನೊಂದಿಗೆ ಲಲಿತಾ ಶ್ರೀನಿವಾಸನ್ ಅವರಿಗೆ ನೀಡಿ ಗೌರವಿಸಿದೆ.