ತ್ರಿಪುಡೆ

ಅಂಜನಾಸುತನು ಸುರಕುಲಗಜ ಭಂಜಿತಾಗ್ರೇ
ಸರಿಯು  ಬಂದನು ಕಂಜನಾಭನ ಧ್ಯಾನಿಸುತ
ಶ್ರೀ ಆಂಜನೇಯನೂ ॥
ರಾಮ ಕಳುಹಿಸಿದ ನೀಲಮೇಘಶ್ಯಾಮ ಕರಸಿದ
ಕಾರ‌್ಯಧನವನು ಪ್ರೇಮದೊಳು ಬೆಸೆಗೊಂಬೆನೆನುತಲಿ
ಭೀಮವಿಕ್ರಮನೋ ॥
ಪೊಡವಿಪ್ರಕಟಣ ಪುರವರ ಶ್ರೀ ಮೃಢನ
ಸಖನಡಿಗೊಂಬೆನೆನುತಲಿ  ಸಡಗರದೊಳೈ ಬಂದು
ಯರಗಿದ ಕಡಲ ಶಯನಂಗೆ ॥

ಕಂದ

ವಂದನೆ ಮಂದರಗಿರಿಧರಾ  ವಂದನೆ ಲೋಕೈಕ
ಶೂರಾ  ದನುಜಕುಠಾರಾ  ವಂದನವೋ
ದುರಿತದೂರ  ವಂದನೆ ತಮ್ಮ ಪಾದಕ್ಕೆ ಧೀರಾ
ಶ್ರೀ ರಘುವೀರಾ ॥

ಆಂಜನೇಯ : ಇದೋ ಸಹಸ್ರ ವಂದನಗಳೈ ಸ್ವಾಮಿ ಶ್ರೀರಾಮಚಂದ್ರ ಮೂರುತಿಯೇ ॥

ರಾಮ : ಚಿರಂಜೀವಿಯಾಗಿ ಸಂತೋಷದಿಂದ ಬರುವಂಥವನಾಗಪ್ಪಾ ವಾಯುತನಯಾ ॥

ಆಂಜನೇಯ : ಹೇ ಪರಮ ಪುರುಷಾ ಶರಧಿಶಯನನಾದ ಶ್ರೀಮನ್ ನಾರಾಯಣನೇ, ತಮ್ಮ ಚರಣ ಸೇವಕನನ್ನು ತ್ವರಿತದಿಂದ ಕರೆಸಿದ ಕಾರ‌್ಯಾರ್ಥವೇನೋ ಕರುಣವಿಟ್ಟು ಅಪ್ಪಣೆ ಕೊಡಬೇಕೈ ದೇವ ದೀನರ ಪೊರೆವಾ.

ಪದ

ಯೇನ ಪೇಳಲೋ ವಾಯುಜಾತಾ ॥ಆಹಾ ದೂತಾ ॥
ಕಾನನದೊಳು ಮುನಿ ಸೂನುಗಳೊಳು
ಕಾಯ್ದು  ತಾನು ಮಲಗಿದನೈಯ್ಯ  ತಮ್ಮ ಲಕ್ಷ್ಮ
ಣನೂ ॥ಯೇನ ಪೇಳಲೋ ॥

ರಾಮ : ಯಲೈ ವಾನರಶ್ರೇಷ್ಠನಾದ ವಾಯುಜಾತನೇ ಕೇಳು. ಯನ್ನ ಹೀನ ಸ್ಥಿತಿಯನ್ನು ನಿನ್ನೊಡನೆ ಯೇನೆಂದು ಹೇಳಲೀ. ಕಾನನದಲ್ಲಿ ಮುನಿಕುಮಾರಕರು ಕಟ್ಟಿರುವ ಕುದುರೆಯನ್ನು ತರುವೆನೆಂದು  ಸೇನೆ ಸಹಿತ ಸಂಗರಕ್ಕೆ ಪೋದ ಲಕ್ಷ್ಮಣ ಶತ್ರುಘ್ನರೀರ್ವರು ಮುನಿಸೂನುಗಳಿಂದ ಘಾಸಿಪಟ್ಟು ಕಾನನದಲ್ಲಿ ಮಲಗಿದರಪ್ಪಾ ಮಾರುತಿ ಮುಂದೇನು ಗತಿ.

ರೂಪಕ

ಶತ್ರುಘ್ನ ಲಕ್ಷ್ಮಣಾ  ಈರ‌್ವರು ಧುರದೊಳು
ನಿತ್ರಾಣವನು ಹೊಂದಿ  ಧಾತ್ರಿಗುರುಳಿದರು ॥

ರಾಮ : ಅಹೋ ಸೇವಕನಾದ ಮಾರುತಿ ಪುತ್ರನೇ ಕೇಳು. ಧಾತ್ರಿ ಬಾಲಕರಲ್ಲಿ ಪೌರುಷ ವೀರ‌್ಯಹೋತ್ರರಾದ ಶತ್ರುಘ್ನ ಲಕ್ಷ್ಮಣರು ತ್ರುಣಮಾತ್ರರಾದ ಮುನಿಪುತ್ರರೊಡನೆ ಧಾತ್ರಿಯೋಳ್ ಸೆಣಸಿ ನಿತ್ರಾಣರಾಗಿ ಮಲಗಿದರಪ್ಪಾ ವಾಯುಜಾತನೆ ಮುಂದೇನು ಯೋಚನೆ.

ರೂಪಕ

ಸೃಷ್ಟಿಗೀಶನ ಕೃಪೆ  ತಪ್ಪಿದಾ ಕಾರಣ
ಕಷ್ಠ ತೋರಿತೊ ಒಡಹುಟ್ಟಿದವರಿಗೆ ॥

ರಾಮ : ಇಷ್ಠದೂತನಾದ ವಾಯುಜಾತನೇ ಕೇಳು. ಸಹೋದರನನ್ನು ಬಿಟ್ಟು ಹ್ಯಾಗೆ ಬಾಳಲಿ. ಈ ಕೆಟ್ಟ ಜನ್ಮವು ಸುಟ್ಟು ಹೋಗಲಿ. ಸೃಷ್ಠಿಕರ್ತನಾದ ಅಷ್ಠಮೂರ್ತಿ ಗಂಗಾಧರೇಶನು ಈ ವ್ಯಾಳ್ಯದಲ್ಲಿ ಸ್ಪಷ್ಠವಾಗಿ ಕೈ ಬಿಟ್ಟಿರುವನಪ್ಪಾ ಮಾರುತಿ ಮುಂದೇನು ಗತಿ.

ಕಂದ

ಮಾರುತಿಗೆ ಬೆವರು ಜನಿಸಲ್  ಧಾರುಣಿಯೊಳಗಾರು
ಬೀಸಿ ಬಿಬ್ಬರಿಪಡುವರು  ನಾರಾಯಣನ ಮನಃಕ್ಲೇಶವ
ಮೀರುವ ಸಾಮರ್ಥ್ಯ ಯನ್ನೊಳಿಹುದು ದೇವಾ ॥

ಆಂಜನೇಯ : ಸ್ವಾಮಿ ಪರಮ ಪುರುಷ ಪರತರ ಪರಂಜ್ಯೋತಿ ಸ್ವರೂಪನಾದ ಶ್ರೀ ರಾಮಚಂದ್ರ ಮೂರುತಿಯೆ, ಮಾರುತಿಗೆ ಬೆವರು ಪುಟ್ಟಿದರೆ ಧಾರುಣಿಯೊಳಗೆ ಅಳವಟ್ಟಗಳಂ ಬಿಸಿ ಬಿಜ್ಜಳವಿಟ್ಟು ಸಂತೈಸುವರು ಧಾರು. ತತ್‌ಕಾರಣ ಭವದುರಿತ ಸಂಹಾರ ಭವದೂರ ತಾರಕಾರಣ್ಯ ಖರದೂಷಣಾಧಿಗಳ ಸಂಹಾರಕ ನಾರಾಯಣನಾದ ನಿಮ್ಮ ಮನದ ಕ್ಲೇಶವನ್ನು ನೀಗುವ ಸಾಹಸಕ್ಕೆ ವಾನರಗೊಪ್ಪುವುದೆ. ದೇವಾ ತೇಜಮಿತ್ರ ತಲೆದೋರಿದರೆ ಗಾಡಾಂಧಕಾರ ಪರಿದೋಡುವಂತೆ ಮಾಡಿ ತಮ್ಮ ಕಾರುಣ್ಯವೆಂಬ ಶೂರತ್ವ ಪರಿಪೂರ್ಣವಾಗಿ ಯನ್ನಲ್ಲಿ ಇದ್ದಿದ್ದೇ ಆದರೆ ಭರತ ಭೂಪಾಲಕರೊಡನೆ ತೆರಳಿ ಧುರದಲ್ಲಿ ಅರಿಗಳ ಸೆರೆಪಿಡಿದು ಅರಿಸಹಿತವಾಗಿ  ಮರೆವುಗೊಂಡಿರುವ ಶತ್ರುಘ್ನ ಲಕ್ಷ್ಮಣ ದೇವರನ್ನು ಚರಣದೆಡೆಗೆ ಕರೆದುಕೊಂಡು ಬರುವೆನೋ ದೇವ ಬಿಡು ಮನದ ನೋವ.

ರಾಮ : ಭಲಾ ಸಹೋದರನಾದ ಭರತ ಭೂಪಾಲಕನೇ ಕೇಳು. ಯಮ್ಮ ಪರಿವಾರದೊಳಗೆ ಸೈನ್ಯವನ್ನು ಕರೆದುಕೊಂಡು ಧುರಕ್ಕೆ ಅನುವಾಗಿ ತೆರಳಪ್ಪಾ ಅನುಜಾ ಇದು ತಿಳಿ ಸಹಜ.

ಭರತ : ಭಲೈ ಅಗ್ರಜನೇ, ತಮ್ಮ ಆಶೀರ್ವಾದ ಕಟಾಕ್ಷದಿಂದ ನಿಗ್ರಹಿಸಿಕೊಂಡು ಬರುತ್ತೇನಪ್ಪಾ ಅಣ್ಣಯ್ಯ.

ಲವ : ಯಲೈ ಜಡಮತಿಯಾದ ಪೊಡವಿಪರ ಗಡಣಕ್ಕೆ ಗಂಡುಗಲಿಯಾದ ಕುಶಕುಮಾರನೇ ಕೇಳು. ನೀನು ಶೀಘ್ರದಿಂದೆದ್ದು ಬಿಲ್ಲು ಹುಡುಕುವಂಥವನಾಗು. ಪೊಡವಿಪನಾವನೋ ಕುದುರೆಗೋಸ್ಕರವಾಗಿ ಗಡಬಡಿಸಿ ಕಿಡಿಕಿಡಿಯಾಗುತ್ತಾ ಕಿಡಿಗಣ್ಣ ರುದ್ರನಹಾಗೆ ಖಡ್ಗವಂ ಜಳಪಿಸುತ್ತಾ ಪಡೆ ಸಹಿತವಾಗಿ ಬಂದಿರುವನು. ಅವನ ತೊಡೆಗಳನ್ನೊಡೆದು ಕುಡಿಮೀಸೆಗಳನ್ನು ತಿದ್ದಿ ಅವನಿಗೆ ಎದುರಾಗಿ ನಿಂತು ಹುಡುಗರ ಪರಾಕ್ರಮವನ್ನು ತೋರಿಸೋಣ ಬಾರಪ್ಪಾ ಅಣ್ಣಾ ಹರಿಸುವೆ ಅವರ ಬಣ್ಣ.

ಕುಶ : ಭಲಾ ತುಂಗವಿಕ್ರಮನಾದ ಅನುಜನೇ ಕೇಳು. ಅಂಗವಿಕಾರಿಗಳಾದ ಮಂಗ ಕಪಿಗಳನ್ನು ಸಂಗಡ ಕರೆದುಕೊಂಡು ಸಂಗರ ಸಿಂಗರಂತೆ ಸಿಂಗಾರವಾಗಿ ಬಂದು ಭಂಗಿಸುವ ರಾಜ ಅಧಮನಂ ಹಿಡಿದು ಭಂಗಪಡಿಸಿ ಅಂಗುಳದ ನಾಲಿಗೆಯ ಗಮಕದಿಂ ಕಿತ್ತು ಅಂಗಮಂ ಸಿಗಿದು ಸಂಗರದ ಅವನಿಯೋಳ್ ರಿಂಗಣವಾಡುತ್ತಿರುವ ಭೂತಂಗಳ ಸಮೂಹಕ್ಕೆ ಅವುತಣವನ್ನು ಮಾಡಿಸುತ್ತಾ ಇದ್ದೇನೆ. ಭಲಾ ನೀನು ತುರುಗದ ಬೆಂಗಾವಲಿಗೆ ನಿಲ್ಲು. ನಾನು ಸಂಗರಕ್ಕೆ ಸಿಂಗಾರವಾಗಿ ಪೋಗುತ್ತೇನೈ ಅನುಜಾ ಇದು ತಿಳಿ ಸಹಜಾ.

ಪದ

ಕಂದರೇ ನೀವ್ಯಾರೋ ನಿಮ್ಮ ತಂದೆ ತಾಯಿ
ಗಳು ಯಾರೋ  ಒಂದೂ ತಿಳಿಯದೆ ನಿಮ್ಮ
ನೆಲೆಯ ಪೇಳಿ ॥ಚಂದದಿ ಪೇಳಿ ॥ನೀವು ಪೇಳಿ ॥

ಭರತ : ಯಲಾ ಕಂದರ್ಪನ ಅಂದವನ್ನು ನಿಂದಿಪ ಅರಸು ಸುಂದರತ್ವವುಳ್ಳ ಕಂದರೇ, ನೀವು ಧಾರು ಇಂದು ಈ ಅಡವಿಯಲ್ಲಿ ನಿಮ್ಮನ್ನು ಪೆತ್ತ ತಂದೆ ತಾಯಿಗಳು ಯಾರು? ವಂದಿಷ್ಟೂ ಮರೆಮಾಜದೆ ಯನ್ನೊಂದಿಗೆ ವಿಶದಮಾಗಿ ಪೇಳಿರೈಯ್ಯ ಅಸಮಬಾಲಕರೇ.

ಪದ

ಕನ್ಯಕಾಮಣಿ ಸೀತೇ  ಯಲವೋ ಮಾನ್ಯಳೇ
ನಿಜ ಮಾತೆ  ಯನ್ನನು ಕುಶನೆಂಬುವರು
ಈ ಚಿಣ್ಣನೆ ಲವನು ॥

ಕುಶ : ಯಲೈ ಮನ್ನಣೇಶ್ವರನೇ, ಇನ್ನು ನಾವೀರ್ವರು ಕನ್ನೆ ಶಿರೋರತ್ನೆಯಾದ ಸೀತಾದೇವಿಯ ಅನ್ವಯದಲ್ಲಿ ಜನನವಾದವರು. ಯನ್ನ ನಾಮಾಂಕಿತವು ಕುಶಕುಮಾರನೆಂದು ಕರೆಯುವರು ಇನ್ನೋರ್ವನೇ ಚಿಣ್ಣನಾದ ಲವನು. ಲವ ಕುಮಾರಕನು ಯನಗೆ ಅನುಜನಾಗಬೇಕೈಯ್ಯ ಮಾನವೇಶ್ವರ.

ಪದ

ತರಳರೇ ನಿಮಗಿನ್ನು  ಇದು ತರವೆ ತುರು
ಗವನ್ನು  ತ್ವರಿತದಿಂದಲಿ ಬಿಟ್ಟು ನೀವು ತೆರಳಿರೋ ॥

ಭರತ : ಯಲೈ ಸ್ಮರಸುಂದರರಾದ ತರಳರೇ ಕೇಳಿ. ದುರುಳ ಬುದ್ದಿಯಿಂದ ಮೆರೆಯುವದು ಸರ್ವಥಾ ತರವಲ್ಲಾ. ತುರಗವನ್ನು ಬಿಟ್ಟು ಸರಸಿಜಾಕ್ಷಿಯಾದ ನಿಮ್ಮ ಮಾತೆ ಇರುವ ಸ್ಥಳಕೆ ತೆರಳುವಂಥವರಾಗಿರೈ ಬಾಲಕರಿರಾ.

ಪದ

ತೊಟ್ಟೆನೋ  ಶರ ನೂರ  ಇಕ್ಕೊ ಬಿಟ್ಟೆ
ನೋಡೆಲೊ ಶೂರ  ಸ್ರಿಷ್ಠಿಗೀಶನ ದಯವು
ನಿನಗೆ ನಷ್ಠವಾಯಿತು  ವರಗೋ ಧರೆಗೆ ॥

ಪದ

ಯಲೈ ದುಷ್ಠತರಮಾದ  ನೂರು ದಿವ್ಯಾಸ್ತ್ರಗಳನ್ನು
ವಂದೇ ಬಾರಿಗೆ ತೊಟ್ಟು  ನೆಟ್ಟನೇ ಗುರಿ ಇಟ್ಟು ಬಿಟ್ಟಿದ್ದೇನೆ
ಸೃಷ್ಠಿಗೀಶನಾದ  ಅಷ್ಠಮೂರ್ತಿ ಗಂಗಾಧರೇಶನ
ದಯದ್ರಿಷ್ಟಿ ನಿನಗೆ  ನಷ್ಠವಾಗಿ ಇರುವುದಾದ ಕಾರಣ
ನಾವು ಬಿಟ್ಟ ದುಷ್ಠ ಶರಗಳು ತಟ್ಟನೇ ಮುಸಕಿ
ಹುಟ್ಟಡಗಿಸಿ ಬಿಟ್ಟವು  ಇನ್ನೇನು  ಮುಖಕೆಟ್ಟು ಹೋಗಿ
ತೊಟ್ಟಿರುವ  ಅಸ್ತ್ರಾಸ್ತ್ರಗಳನ್ನು  ಹೊಟ್ಟೆಯ ಮೇಲೆ
ಚಾಚಿಕೊಂಡು  ಈ ಧಾರುಣಿಯ ಮೇಲೇ
ವರಗುವಂಥವನಾಗೋ ಭ್ರಷ್ಠ ಮನುಜನೇ ॥

ಭರತ : ಅಯ್ಯೋ ಶ್ರೀ ರಾಮ ರಾಮ, ಈ ದುಷ್ಟ ಬಾಲಕರು ಬಿಟ್ಟ ದುಷ್ಠಾಸ್ತ್ರಗಳಿಂದ ಪೆಟ್ಟು ತಿಂದು ಕೆಟ್ಟೆನಲ್ಲೊ ಶ್ರೀರಾಮ ರಾಮ.

 

(ಭರತನ ಮೂರ್ಛೆ)

ಪದತ್ರಿಪುಡೆ

ಮಂದಮತಿ ಬಾಲಕರೇ ಭರತನ
ಕೊಂದುದ್ಯಾತಕೆ ಸಮರಕೀಗಲೇ
ಬಂದು ನಿಲ್  ತಂದಿಡುವೆನದ್ರಿಯಾನೊಂದ ಮೇಲೇ ॥

ಆಂಜನೇಯ : ಯಲಾ ಮಂದಮತಿ ಬಾಲಕರೇ, ಇಂದಿರೇಶನಾದ ಗೋವಿಂದನ ತುರುಗವನ್ನು ಕಟ್ಟಿ ಯೋಚಿಸಿ ನೋಡದೇ ಸುಂದರ ಸುಗುಣ ಗೋವಿಂದ ವಿಶಾಲನಾದ ಭರತ ಭೂಪಾಲಕರನ್ನು ಕೊಂದುದ್ಯಾತಕೆ. ಕುಂದದೇ ವಂದು ಮಹಾದ್ರಿಯನ್ನು ತಂದು ಕವುಚಿ ನಿಮ್ಮೀರ್ವರನ್ನು ಕೊಂದು ಹಾಕುವೆನೆಲಾ ಮಂದಮತಿಗಳಿರಾ.

ಪದ

ವೃದ್ಧ ಮರ್ಕಟ ಕೇಳು ಧುರದೊಳು
ಬಿದ್ದ ಕಪಿಗಳನೇಕ ನಿನಗೆಲೋ  ಬುದ್ಧಿ
ಸಾಲದೆ ಬಂದೆ ಯಮ್ಮೊಳು  ಯುದ್ಧಕೀಗ ॥

ಕುಶ : ಯಲಾ ಗದ್ದಗಸಕ ಗುದ್ದರಗಣ್ಣು ವುದ್ಧವಾದ ಬಾಲವುಳ್ಳ ವೃದ್ಧ ಮರ್ಕಟನೇ ಕೇಳು. ಯುದ್ದದಲ್ಲಿ ಯಮ್ಮನ್ನು ಗೆದ್ದು ಹೋಗುವುದಕ್ಕೆ ಸಿದ್ಧವಾಗಿ ಬಂದು ವುದ್ಧಟ ಮಾತಿನ ಕಪಿಗಳನೇಕ ಮಡಿದು  ಬಿದ್ದು, ಹದ್ದು ನಾಯಿಗಳ ಪಾಲಾಗಿ ಹೋದರು. ಬಿದ್ದ ಬಳಿಯಲ್ಲಿ ಸುಮ್ಮನೇ ಬಿದ್ದಿರಲಾರದೆ ನಾನೇ ಮಹಾಪರಾಕ್ರಮಶಾಲಿಯೆಂದು ಯೆದ್ದೆದ್ದು ಕುಣಿದು ಗದ್ದಲವನ್ನು ಮಾಡಿಕೊಂಡು ಬುದ್ದಿ ಶೂನ್ಯನಾದ ಕಪಿ ನೀನೋರ್ವನು, ಯಮ್ಮೊಡನೆ ಯುದ್ದಕ್ಕೆ ಸಿದ್ದವಾಗಿ ಬಂದೆಯಾ. ಭಲಾ ವಳಿತಾಯಿತು ಬಾ. ಮುದ್ದು ಬಾಲಕನಾದ ಯನ್ನ ಕೂರ್ಗಣೆಯಿಂದ ಸದ್ದನ್ನ ಅಡಗಿಸಿ ಬಿಡುವೆನೆಲಾ ಶುದ್ಧ ಭ್ರಷ್ಠನೇ.

ಪದ

ಖುಲ್ಲ ಕಪಿ ನಾನಲ್ಲ ತಿಳಿಯಿರೋ  ಕುಲ್ಲಗಿರಿ
ತಂದೀಗ ನಿಮ್ಮಯ  ತಲೆಗಳ ನೆಗ್ಗೊತ್ತಿ
ಬಿಡುವೇ ಯಲಾ ಕುಮಾರಕರೇ ॥

ಆಂಜನೇಯ : ಯಲೋ ದುರುಳರಾದ ಬಾಲಕರೇ, ಜಲನಿಧಿಯ ಮಧ್ಯದೋಳ್ ಆಲಯವ ರಚಿಸಿಕೊಂಡು ಜಲಜಭವ ಕುಲಶಾಯುಧಪಾಣಿ ಮುರಹರಾಧಿಗಳಾದ ಹಲವು ಕೆಲಸಗಳ ಕೈಗೊಂಡು, ಸುರಲಲನೆಯರನ್ನ ಛಲದಿಂ ಸೆರೆಯ ಪಿಡಿದು ಮೆರೆಯುತಿದ್ದಾ ಭಲ ಛಲ ಕಂಠೀರವಮಾದ ದಶಕಂಠನ ಸುಲಭೋಪಾಯದಿಂ ಗೆದ್ದ ಬಲಶಾಲಿಯನ್ನು, ಖುಲ್ಲ ಕಪಿಯೆಂದು ತಿಳಿಯಬ್ಯಾಡ. ಕುಲಗಿರಿಯನ್ನು ತಂದು ಕವಿಚಿ ನಿಮ್ಮ ತಲೆಗಳನ್ನು ಹೊಡೆದು ಹಾಕುವೆನೆಲಾ ಮೂಢಬಾಲಕರೇ.

ಪದ

ಚಿತ್ತಜಾರಿಯ ದಯದಿ ಮುನಿವರನಿತ್ತ
ವಜ್ರಾಸ್ತ್ರದೊಳು ಗಿರಿಯನು  ಕತ್ತರಿಸಿ
ಕೆಡಹಿದೆವು ಧಾತ್ರಿಗೆ  ಹತ್ತು ಭಾಗದಲೀ ॥

ಕುಶ : ಯಲಾ ನೆತ್ತಿ ಬೋಳು ಕತ್ತರಗಿವಿ ಪತ್ತಿದ ಮೂಗು ಕುತ್ತಿಗೆ ನೀಳಮಾದ ಕತ್ತೆಯ ಮುಖದ ಕಪಿಯೇ ಕೇಳು, ನೀ ತಂದ ಖುಲ್ಲಗಿರಿಯನ್ನ ಒಂದೇ ಬಾಣದಿಂದ ಹಿಂದಕ್ಕೆ ಹೊಡೆದಿದ್ದೇನೆ. ಕುತ್ತಿಗೆಯೆತ್ತಿ ನೋಡುವಂಥವನಾಗೋ ಕಪಿಯೇ.

ಆಂಜನೇಯ : ಹಾ ಮಹದೇವ, ನಾನು ಹೊರಲಾರದಂತೆ ತಂದಿದ್ದ ಮಹಾದ್ರಿಯನ್ನು ಖಂಡ್ರಿಸಿದ ಬಾಹುಬಲಶೂರರಾದ ಈ ಹುಡುಗರ ಸಾಹಸವು ವಿಚಿತ್ರವಾಗಿ ತೋರುವುದು. ದೇಹ ಛಾಯ ರೂಪು ಗುಣಾತಿಶಯಗಳನ್ನು ನೋಡಿದರೆ ಶ್ರೀಹರಿಯ ವೋಲಿಕೆಯಾಗಿ ಕಾಣುವದಲ್ಲಾ. ಈ ಬಾಲಕರ ಮೇಲೆ ಯನ್ನ ಸಾಹಸವು ನಡೆಯುವುದಿಲ್ಲ. ಆ ಹರಿಯು ಮಾಡಿದ ಪ್ರತಿಜ್ಞೆ ನೆರವೇರದೇ ಹೋಯಿತು. ಸ್ವಾಮಿ ದ್ರೋಹಕ್ಕೆ ವಳಗಾದೆನಲ್ಲಾ ಶ್ರೀರಾಮ ರಾಮ.

ಭಾಗವತರ ಕಂದ (ಸಾವೇರಿ)

ಧಾರುಣಿಗೆ ಭರತನು ಬೀಳಲು  ಮಾರುತಿ ಯೆದುರಾಂತು
ಕಾದು ಕೈಗುಂದಿರಲು  ಅರಣ್ಯದೊಳಿರ್ದ
ಚಾರನೋರ್ವನು  ಶ್ರೀ ರಘುಪತಿಯರೊಡನೆ ಬಿನ್ನೈಸಿದನು ॥

ಪದ

ಸ್ವಾಮಿ ಪರಾಕು  ಪ್ರೇಮಿ ಪರಾಕು
ಭೂಮಿ ಪಾಲಕ ರಘು ರಾಮ ಪರಾಕು ॥

ಚಾರ : ಹೇ ಪೊಡವಿಪಾಲಕ, ಆ ಬಾಲಕರೀರ್ವರು ವಂದಾಗಿ ಈ ಪೊಡವಿಗತ್ಯಧಿಕವಾದ ಮೃಢಗಂಗಾಧರೇಶ್ವರನು ಸಹ ನಡುಗಿ ಕಂಪನಗೊಳ್ಳುವಂತೆ ಭಯಂಕರವಾದ ಅಸ್ತ್ರಗಳಂ ಪಿಡಿದು ಕಡುಗಲಿಗಳಾದ ಶತ್ರುಘ್ನ ಲಕ್ಷ್ಮಣ ಭರತ ಭೂಪಾಲಕರಂ ಕೆಡಹಿದರೈಯ್ಯ ಶ್ರೀರಾಮ
ರಾಮ.

ರಾಮ : ಯಲೈ ಚಾರ, ತಮ್ಮಂದಿರಂ ಜೈಸಿದಂಥ ಅರಿಗಳನ್ನ ಕಾಣಲಿಲ್ಲ. ಈ ದಿನ ರಣಾಗ್ರದಲ್ಲಿ ಸಹಜಾತರಂ ಕೊಂದಂಥ ಬಾಲಕರಂ ನೋಡಬೇಕು. ಮಂದಿಕುದುರೆ ವಂದು ವುಳಿಯದಂತೆ ಯನ್ನೊಂದಿಗೆ ಪ್ರಯಾಣವಾಗುವಂತೆ ಪುರದೊಳಗೆ ಡಂಗೂರವನ್ನು ವಡಿಸುವಂಥವನಾಗೋ ಚರನೇ ಚಾರರೋಳ್ ಬಹುಶೂರನೇ.

ಚಾರ : ಈ ದಿನ ಮಧ್ಯಾಹ್ನಕ್ಕೆ ಸರಿಯಾಗಿ ನಮ್ಮ ದೊರೆಯಾದ ಶ್ರೀರಾಮರೊಂದಿಗೆ ಮಂದಿ ಮಾರ್ಬಲವೆಲ್ಲ ವಂದುಗೂಡಿ ರಣರಂಗಕ್ಕೆ ಬರಬೇಕು. ಮಂದಮತಿಗಳು ಮಂದಿರದಲ್ಲಿ ನಿಂತಿದ್ದೇ ಆದರೆ ಒಂದು ನೂರು ರೂಪಾಯಿ ಜುಲ್ಮಾನೆ ಆರು ತಿಂಗಳು ಕಠಿಣ ಸಜ ವಿಧಿಸುತ್ತೆ. ಆದುದರಿಂದ ನಿಲ್ಲಬೇಡಿ ನಿಲ್ಲಬೇಡಿ.

ಲವ : ಅಣ್ಣಾ ಕುಶಕುಮಾರಕನೇ ಕೇಳು. ಬಣಗುರಾಜ ಅಧಮರು ಗಣನೆ ಇಲ್ಲದೆ ಕಪಿಕಟಕರ ಸೇನೆಯನ್ನು ಅಣಿ ಮಾಡಿಕೊಂಡು ಕೊಬ್ಬಿನಿಂದ ಬರುತ್ತಿಹರು. ಕಣ್ಣೋಳ್ ಕವಿದು ತಿಣುಕುವಂತೆ ಹಣಿದು ಕೆಡಹಬೇಕಪ್ಪಾ ಅಗ್ರಜವೀರಾ.

ಕುಶ : ಭಳಿರೇ ತಮ್ಮಾ  ಮಂಡಲ ಪ್ರಾಣತಲ್ಪ ಪುಂಡರೀಕಾಕ್ಷ  ಗೋವಿಂದ  ಅಜದೇವರು  ನಡೆದುಬಂದಾಗ್ಗು  ಕುಶಕುಮಾರನ  ಕೋದಂಡ ದರ್ಪವನ್ನು ತಿಳಿದರೆ  ಮಂಡೆಗಳು ವುಳಿದರೆ ಸಾಕೆಂದು  ಕಂಡಕಡೆಗೆ  ಓಡಿ ಪೋಪರು  ಅಂಥ ಸಾಹಸಿಗಳಾರು ಬಂದಾರೂ  ಬಂದವರ ಮಂಡೆಯನ್ನು  ಖಂಡ್ರಿಸದಿರ್ದಡೆ  ನಿನ್ನ ಅಗ್ರಜನೆಂದು ತಿಳಿಯಬೇಡಪ್ಪಾ ಸಹೋದರಾ ॥

ಪದ

ಕಂದಗಳಿರ ನಿಮ್ಮಾ  ತಂದೆ ತಾಯಿಗಳ್ಯಾರು
ವಂದಿಷ್ಠು ಮರೆಮಾಜದೆ ಪೇಳಿ  ನೀವು ಪೇಳೀ ॥

ರಾಮ : ಯಲೈ ಕಂದರ್ಪ ಸುಂದರರಾದ ಮುದ್ದು ಬಾಲಕರೆ, ಬಂಧುರಶಾಲಿಗಳಾದ ನಿಮ್ಮನ್ನು ಪೆತ್ತ ತಂದೆ ತಾಯಿಗಳಾರು ಸುಂದರ ಸುಶೀಲರಾದ ನಿಮ್ಮ ನಾಮಾಂಕಿತವೇನು? ಅಂದದಿಂ ಪೇಳಿರೈಯ್ಯ ಬಾಲಕರಿರಾ.

ಪದ

ಭೂತಳಾಧಿಪ ಕೇಳು  ಈ ತಾಪವನ
ದೊಳಗೆ  ಸೀತೆ ಪಡೆದಳು  ನಮ್ಮವಳಿಸುತರಾಗಿ ॥

ಕುಶ : ಯಲೈ ಭೂತಳೇಶ್ವರನೇ ಕೇಳು. ನೀತಿ ಕೋವಿದೆಯಾದ ಯಮ್ಮ ಮಾತೆ ಸೀತಾದೇವಿಯು ಈ ತಪೋವನದಲ್ಲಿ ಅವಳಿಸುತರಾಗಿ ಖ್ಯಾತಿವಂತರಾದ ನಮ್ಮ ಈರ‌್ವರನ್ನು ಪಡೆದಳೈಯ್ಯ ರಾಜ.

ಪದ

ಯಲವೋ ಬಾಲರೆ ನಿಮಗೆ
ಬಿಲ್ಲು ವಿದ್ಯಾಬ್ಯಾಸವನ್ನು
ನೆಲೆಗೊಳಿಸಿದವನ್ಯಾವ ಗುರುವು ಪೇಳೆಮಗೆ

ರಾಮ : ಯಲೈ ಸುಪ್ರವೀಣರಾದ ಮುದ್ದು ಬಾಲಕರೇ ಕೇಳಿ. ಈ ನೆಲದೊಳು ವಿದ್ಯಾಬ್ಯಾಸವನ್ನು ನೆಲೆಗೊಳಿಸಿದ ವಿದ್ಯಾ ಗುರುಗಳ್ಯಾರೋ ಯನ್ನೊಂದಿಗೆ ಪೇಳಬೇಕೈಯ್ಯ ಬಾಲಕರಿರಾ.

ಪದ

ಅನುಜ ಈತನು ಯನಗೆ  ಧನುರ್‌ವಿದ್ಯಾ
ಗಮಗಳನು  ವಿನಯದಿಂ ಪೇಳ್ದಾ
ವಾಲ್ಮೀಕಿ ಮುನಿಯು ॥

ಕುಶ : ಯಲೈ ರಾಜನೇ, ಘನಪರಾಕ್ರಮಿಯಾದ ಯನಗೆ ಲವಕುಮಾರಕನು ಅನುಜನಾಗಬೇಕು. ಜನನ ಕಾಲಾರಾಭ್ಯದಿಂದ ಮುನಿವರರು ಯಮ್ಮನ್ನು ರಕ್ಷಿಸಿ ಧನುರ್‌ವಿದ್ಯೆ ಮೊದಲಾದ ವಿದ್ಯವನ್ನು ಉಪದೇಪಶಗೈದರೈಯ್ಯ ರಾಜ.

ಪದ

ಯಾರಿಂದ ಪಾಲಿಪುದು  ಶೂರತನವು ನಿಮಗೆ
ಮಾರಹರನಾಣೆ ಪೇಳಿ ಯನಗೇ ॥

ರಾಮ : ಯಲಾ ಮುದ್ದು ಬಾಲಕರೇ, ಅರಣ್ಯರುಷಿಪುತ್ರರಂತೆ ನೀವು ಅರಣ್ಯದಲ್ಲಿ ವಾಸಿಸಿಕೊಂಡು ನಾರು ಬೇರುಗಳನ್ನು ಭುಜಿಸಿಕೊಂಡಿರ್ಪ ಹಸುಬಾಲಕರು. ಮೀರಿದ ಶೂರತ್ವವು ನಿಮಗೆ ಯಾರಿಂದ ವುಂಟಾಯಿತು. ಮಾರಹರ ಗಂಗಾಧರೇಶ್ವರನ ಆಣೆಯು ಮರೆಮಾಜದೆ ಕಾರುಣಿಕವನ್ನು ವಿಸ್ತಾರವಾಗಿ ಪೇಳುವಂಥವರಾಗಿರೈಯ್ಯ ಮುದ್ದು ಬಾಲಕರೇ.

ಪದ

ರಾಮಚರಿತಾಮೃತವಾ  ಆ ಮುನಿವರ
ನರುಹಿದನು  ಭೂಮಿ ಪ್ರಕಟನಪುರ
ಶ್ರೀ ಸೋಮೇಶನ ದಯದೀ ॥ಕೇಳ್ ದಯದೀ ॥

ಕುಶ : ಅಯ್ಯ ಭೂಮಿಪಾಲಕ. ಈ ಮಹಿಗತಿ ವಿಚಿತ್ರಮಾದ ಪ್ರಕಟನ ಪುರವನ್ನು ಪ್ರೀತಿಯಿಂದ ಪರಿಪಾಲಿಸುವ ಗಿರಿಜೇಶ ಗಂಗಾಧರೇಶ್ವರನ ಕರುಣದಿಂದ, ರಾಮಾಯಣ ಆದ್ಯಂತಮಾಗಿ ಆ ಮುನಿಮಹಾತ್ಮರಾದ ವಾಲ್ಮೀಕರು ಅರುಹಿದರಾದ ಕಾರಣ, ಸಾಮರ್ಥ್ಯಶಾಲಿಗಳಾದೆವೈಯ್ಯ ಭೂಮಿಪಾಲಕನೇ.

ಕಂದ

ಮಕ್ಕಳೋಳ್ ಭವರಗೈಯಲು  ಅಕ್ಕರ
ವಿದಲೇಕೆ ಯನಗೀಗಂ  ದಕ್ಕುವುದೇ
ಬಗೆಯದಿವರನು  ಇಕ್ಕುವೆನು ಕೂರ್ಗಣೆಗಳಿಂದಂ ॥

ಪದ

ಬಾರೋ ಬಾರೆಲೋ  ಯೀಗ
ಕೇಳ್ ಬಿಡುವೆನೋ ಶರಜಾಲ  ವೀರ
ಭಟರ ಕೊಂದು ಪೌರುಷ ತೋರೊ ಯ
ನ್ನೊಳು ಯುದ್ದಕೆ  ಸಾರಿ ಯುದ್ದಕೇ ॥

ರಾಮ : ಯಲೋ ಘೋರ ಬಾಲಕರೇ ಭೋರನೇ ಯುದ್ದಕ್ಕೆ ವದಗುವಂಥವರಾಗಿ. ಮೆರೆವ ಕ್ರೂರಾಸ್ತ್ರವೈದನ್ನು ಜೋಡಿಸಿ ಬಿಡುವೆನು. ಬಂದ ಭಟರನ್ನು ಕೊಂದ ಪೌರುಷವನ್ನು ಯನ್ನ ಮುಂದೆ ತೋರಿಸಬ್ಯಾಡವೋ ಭಂಡಾ ಛೀ ಪುಂಡಾ.

ಪದ

ವುಬ್ಬಟ ನುಡಿಬ್ಯಾಡ  ಯಲ ತಬ್ಬ
ಲಿಗನೇ ನೋಡೋ  ಬೊಬ್ಬೆಗೊಳ್ಳುತ
ನಿಬ್ಬರದೊಳು ದೊಬ್ಬು ಕಣೆಗಳಿಂದ ಭಳಿರೇ ॥

ಕುಶ  :  ಯಲಾ ತಬ್ಬಲಿ ಭ್ರಷ್ಠನೇ, ಗರ್ವದಿಂದ ವುಬ್ಬಟ ನುಡಿಗಳನ್ನ ಆಡಬ್ಯಾಡ. ಹೆಬ್ಬುಲಿಯಂತೆ ನಾವೀರ‌್ವರು ವಂದಾಗಿ ಬೊಬ್ಬೆಗೊಟ್ಟು ನಿಬ್ಬರದಿ ಕಣೆಗಳಿಂದ ಕವಿಸುವೆವೋ ರಾಜಾ ಮಾರ್ತಾಂಡತೇಜ.

ಪದ

ಆದ್ರಿ ಶರವೂಡಿ  ನಿಮ್ಮ ಛೇದಿ
ಸುವೆನು ಜೋಡಿ  ಕ್ಷುದ್ರ ಪ್ರಳಯ
ರುದ್ರನಂತೆ  ಆದ್ರಿ ಬಾಣವವೂಡಿ ಬಿಡುವೆ ॥

ರಾಮ  :  ಯಲೈ ದಿಟ್ಟ ಬಾಲಕರೇ, ಈ ರಣಾಗ್ರದೋಳ್ ಪ್ರಳಯ ಕಾಲರುದ್ರನಂತೆ ಆದ್ರಿ
ಬಾಣವನ್ನು ಹೂಡಿದವನಾಗಿ ನಿಮ್ಮನ್ನು ಕ್ಷುದ್ರಿಸಿಬಿಡುತ್ತೇನೆ. ಭದ್ರವಾಗಿ ನಿಲ್ಲುವಂಥವರಾಗಿರೋ ಮುದ್ದು ಬಾಲಕರೇ.

ಪದ

ದುರುಳ ಕೇಳೋ ನೀನು  ಕರಶರಗ
ಳನ್ನು ನಾನು  ದುರುಳ ನಿನ್ನ ಹರಿಹರಿ
ಯೆಂದು  ಕುಶಲ ಶರದಿ ತರಿದುಬಿಡುವೆನು ॥

ಕುಶ  : ಯಲಾ ದುರುಳಾ, ತರತರವಾಗಿ ಬಿಟ್ಟ ಗಿರಿ ಶರಗಳನ್ನು ಕುಶಲತನದಿಂದ ಹರಿಗರಿಸಿ ತರಿದು ಧರಣಿಯ ಮೇಲೆ ಉರುಳಿಸಿ ಇದ್ದೇನೆ. ತ್ವರಿತದಿಂದ ತಲೆ ಎತ್ತಿ ನೋಡೋ ಧರಣಿ ಪಾಲಕನೇ.

ರಾಮ  : ಶಿವ ಶಿವ ಕುಂಕುಮಪುರಿವಾಸ ಅಷ್ಟಮೂರ್ತಿ ಗಂಗಾಧರೇಶ, ಬಾಲಕರ ಮಹಾಪರಾಕ್ರಮವನ್ನು ಯೆಷ್ಠು ಹೇಳಿದರು ಅಶಕ್ಯವಾಗಿದೆ. ಶರಗಳ ಘಾತಿಗೆ ಕೆಟ್ಟು ಹೋದೆನೋ ದೇವ ಇದರ ಮೇಲೆ ನಿನ್ನ ಪ್ರಭಾವ.