ತಾರೀಖು 25-09-1949 ರ ಭಾನುವಾರದಂದು ದೊಡ್ಡಬಳ್ಳಾಪುರದ ಎಲೇಪೇಟೆ
ಶ್ರೀ ಆರ್. ತಮ್ಮಯ್ಯನವರು ಪ್ರತಿ ಮಾಡಿರುವುದು.

 

ಭಾಗವತರ ತ್ರಿಪುಡೆ

ಲಾಲಿಸೀ ಕಥೆ ಸುಜನರೆಲ್ಲರೂ
ಲವಕುಶಲರೊಡನೆ ಕದನವಾ
ಲೀಲೆಯಾಮೃತ  ಪೇಳ್ವೆ ನಾವಿನ್ನು
ಲಾಲಿಪುದು ನೀವು ॥

ರಾಮಲಕ್ಷ್ಮಣರೊಡನೆ ಕದನವ  ವಿಭೂ
ಷಣ  ಗೈದ ಪರಿಭವ  ಜನಕ
ನಂದನೆ  ಬಿಟ್ಟು ವನದೊಳ ॥
ಪೇಳ್ವೆ ನಾವಿನ್ನೂ ॥

ರಾಮ : ಅಯ್ಯ ಮನುಷ್ಯನೇ ಮತ್ತೂ ಹೀಗೆ ಬರುವಂಥವನಾಗು. ಯಲೈ ಮನುಷ್ಯನೇ ಮಾರ್ತಾಂಡ ತೇಜದಿಂದ ಸಭಾ ಪಾಂಡಿತ್ಯರ ಮಂಡಲಕ್ಕೆ  ದಿಂಡೀ ವಾಳಗದ ಪಟ್ಟಸ ಬಿಲ್ಲು ಬತ್ತಳಿಕೆ ಮೊದಲಾದ ಬತ್ತೀಸಾಯುಧಂಗಳಂ ಹಸ್ತದೊಳೆ ಶಿಸ್ತಿನಿಂದ ಧರಿಸಿಕೊಂಡು ಮಿತ್ರರಂ ಮನ್ನಿಸಿ ಶತ್ರುಗಳೆಂಬ ಮತ್ತೇಭಗಳ ಇಂಡಿಗಳ ಚಂಡ ಕಂಠೀರವನಂತೆ ನಿಂತಿರುವ ಯಮ್ಮ ಸಮ್ಮುಖದಿ ಬಂದು ನಿಂತು  ವಿಧವಿಧವಾಗಿ ವಿವರಿಸುವ ಚದುರ ನೀ ಧಾರೋ ಚಂದವಾದ ನಿನ್ನ ಅಭಿದಾನವೇನೊ ಅಂದದಿಂದ ವಿಸ್ತರಿಸೋ ದ್ವಾರಪಾಲಕ.

ಯಲೈ ಚಾರಕಾ ನಾಗ ಸುರನರ ಲೋಕ ಸಹಿತ ಭೀಕರಂಗೊಳಿಸಿ ಬೇಕಾದ ಸುರನಾರಿಯರ ಸಹಿತ ಸೆರೆಪಿಡಿದು ಶೋಕಪಡಿಸುತ್ತಿರ್ದ್ದ ಕಾಕಂದಸ ಕಂದರನಪುರ ಓಣಿಗೆ ತಾಳಲಾರದೆ ಆ ಕಮಲಭವ ಪಿತನಾದ ಪಾಕನಾಶನ ಮೊದಲಾದ ಅನೇಕ ದೇವಾಸುರರು ಯನ್ನಲ್ಲಿ ಬಂದು ಯೇ ಕಮಲ ಲೋಚನಾ ನೀ ಕಾಯಬೇಕೆಂದು ಮೊರೆಯಿಟ್ಟರಾದ ಕಾರಣ ಭಲೈ ಸಾರಥಿ ಆ ಕಾಲದೊಳ್ ನಾನು ಅವರಿಗೆ ಅಭಯವನ್ನಿತ್ತು ಈ ಭೂಲೋಕದಲ್ಲಿ ಅಯೋಧ್ಯಪುರದರಸನಾದ ದಶರಥ ಮಹಾರಾಜನ ಗರ್ಭದಲ್ಲಿ ಅವತರಿಸಿ ಕುಶಲವರ್ತನೆ ಲೋಕಪಾವನೆಯಾದ ಜಾನಕಿಯ ಕರಪಿಡಿದು ಪಿತ್ರುವಾಕ್ಯ ಪರಿಪಾಲನಾರ್ಥವಾಗಿ ಕಾನನಕ್ಕೆ ತೆರಳಲು ಆ ಕಾಲದಲ್ಲಿ ಖಳನು ಇಳಾಸುತೆಯನ್ನು ಲಂಕೆಗೆ ತೆರಳಿಸಿಕೊಂಡು ಪೋಗಲು ಪಂಕಜಾಬನಾದ ನಾನು ದನುಜನ ಬಿಂಕವಂ ಬೊಂಕಿಸಲ್ಕೆ ಶಂಕೆ ಇಲ್ಲದೆ ಕಪಿಕಟಕರೊಡನೆ ಲಂಕೆಗೆ ತೆರಳಿ ಚಕ್ಕಿ ಚೆಂಡಾಡಿದ ಕೋದಂಡರಾಮ ಹರಿಕಟಕ ಭೀಮ ಮಾರ್ತಾಂಡಕುಲ ಸಾರ್ವಭೌಮನೆಂದು ಈ ಸಭೆಯವರ ಮುಂದೆ ಕಿತಾಪ್ ಮಾಡಿಸುವಂಥವನಾಗೋ ಸಾರಥೀ.

ರಾಮ : ಆಹೋ ಸಾರಥೀ, ಯನ್ನನುಜನಾದ ಸೌಮಿತ್ರೀ ಧಾವಲ್ಲಿದ್ದಾನೋ ಕರೆತರುವಂಥವನಾಗೊ ಚಾರಾ ಚರರೊಳ್ ಶೂರ.

ಲಕ್ಷ್ಮಣ : ಯಲೋ ದ್ವಾರಪಾಲಕ  ಹೀಗೆ ಬಾ.  ಯಲೈ ಚಾರಕಾ ಮತ್ತೂ ಹೀಗೆ ಬರುವಂಥವನಾಗು. ಯಲೈ ಚಾರ ಹೀಗೆ ಬಂದವರು ಧಾರೆಂದು ಕರಕಂಜಗಳ ಪುಟವೆತ್ತಿ ಪರಿಪರಿ ಕತಾಂಜಲಿ ಬದ್ಧನಾಗಿ ಮಾತು ಮಾತಿಗೂ ಭೀತಿಯಂಪಡದೆ  ವಿಚಾರಿಸುವಾ ಮನುಷ್ಯ ನೀ ಧಾರೊ ಯನ್ನೊಳ್ ಸಾರೊ.

ಯಲೈ ದ್ವಾರಪಾಲಕ ಸ್ವರ್ಗ ಮರ್ತ್ಯ ಪಾತಾಳವೆಂಬ ತ್ರಿಲೋಕದೊಳ್ ಬಂಧುರಮಾಗಿ ಚಂದದಿಂದೊಪ್ಪುವಾ ಅಂಗ ವಂಗ ಕಳಿಂಗ ಕಾಶ್ಮೀರ ಕಾಂಬೋಜ ಕರಹಾಟ ವರಹಾಟ ದ್ರಾವಿಡ ಮಹರಾಷ್ಟ್ರ ಮತ್ಸ್ಯ ಮಗಧ ಚೇದಿ ನೇಪಾಳ ಜರ್ಜರ ಬರ್ಬರ ಕೊಂಕಣ ಟೆಂಕಣ ಕೇಕಯಾ ಪಾಂಡ್ಯ ಚೋಳ ವರಾಳ ಮೊದಲಾದ ಚಪ್ಪನ್ನ ದೇಶಂಗಳಿಗೆ ವುಪ್ಪರಿಗೆಯಂತೊಪ್ಪುವ ಇಪ್ಪತ್ತಾರು ಯೋಜನ ವಿಸ್ತೀರ್ಣವುಳ್ಳ ಅಯೋಧ್ಯಾ ನಗರವನ್ನು  ಒಪ್ಪದಿಂದ ಪರಿಪಾಲಿಸುವಾ  ತರಣಿಕುಲ ಸಾರ‌್ವಭೌಮನಾದ ನರಹರಿ ನಾರಾಯಣ ಖರದೂಷಣಾರಿ ಮುರಹರಿ ಮಾಧವ ಸಾಕ್ಷಾತ್ ಪರಿಪೂರ್ಣನಾದ ಶ್ರೀರಾಮಚಂದ್ರ ದೇವನಿಗೆ ಪ್ರೇಮದನುಜನಾದ ಲಕ್ಷ್ಮಣದೇವನೆಂದು ತಿಳಿಯುವಂಥವನಾಗೋ ಚಾರ ವರಫಣಿಹಾರ.

ಲಕ್ಷ್ಮಣ : ಭಳಿರೇ ಚಾರಕಾ, ಯನ್ನ ಆಜ್ಞಾಧಾರಕ ಸುರಪತಿಯ ಸಭೆಯ ತಿರಸ್ಕರಿಸುವ ಈ ವರ ಸಭೆಗೆ ತೆರಳಿದ ಕಾರಣವೇನೆಂದರೆ ಯಮ್ಮಣ್ಣನಾದ ಶ್ರೀರಾಮಭದ್ರನೂ ಕರೆಸಿದ ಕಾರಣ ಬಾಹೋಣವಾಯಿತೊ ಸಾರಥಿ. ಯಮ್ಮಣ್ಣನಾದ ಶ್ರೀರಾಮಚಂದ್ರರನ್ನು ತೋರಿಸುವಂಥವನಾಗೊ ಸಾರಥೀ ಸಂಧಾನವ ನಡೆಸುತೀ,

ಕಂದ

ಜಾನಕಿ ಅರಸನೆ ಬಿನ್ನಹಾ  ದಾನವ ಕುಲ ಮರ್ದನ ಭೀಮಾ ॥
ಶ್ರೀ ರಘುರಾಮಾ  ನೀನೆನಗೆ ಆಶೀರ್ವಾದವಂ ಮಾನವಪಿತ
ಪಾಲಿಸೈಯ್ಯ  ನಿಮಗೆ ನಮಿಸುವೆನೊ ಜೀಯಾ ॥

ಲಕ್ಷ್ಮಣ : ಇದೇ ಶಿರ ಸಾಷ್ಟಾಂಗ ಬಿನ್ನಹಂಗಳೈಯ್ಯ ಅಗ್ರಜ ಭೂಪತೀ ನೃಪತಿ.

ರಾಮ : ಸಕಲೈಶ್ಯರ‌್ಯಾಭಿವೃದ್ಧಿರಸ್ತೂ ದೀರ್ಘಾಯುಷ್ಯಮಸ್ತು.ಬಾರೈ ತಮ್ಮ ಲಕ್ಷ್ಮಣ. ಈ ಪೀಠವನ್ನ ಲಂಕರಿಸುವಂಥವನಾಗಪ್ಪಾ.

ಲಕ್ಷ್ಮಣ : ತಪ್ಪದೇ ತಮ್ಮ ಅಪ್ಪಣೆಯಂತೆ ಕುಳಿತುಕೊಳ್ಳುವೆನಪ್ಪಾ ಸಾರಸಾಕ್ಷ.

ರಾಮ : ಯೆಲಾ ಸಾರಥಿ, ಯನ್ನ ಮನೋಪ್ರೀತೆಯಾದ ಸೀತೆಯನ್ನು ಕರೆದುಕೊಂಡು ಬರುವಂಥವನಾಗೈ ದೂತಾ ರಾಜ ಸಂಪ್ರೀತ.

ದ್ವಿಪದಿ

ಶ್ರೀನೀವೇಣಿ  ಭಾಸುರ ಕೀರವಾಣಿ  ಮಾನಿನಿ ಗುಣಮಣಿ  ಮಹಿತೆ ಕಲ್ಯಾಣಿ  ವರ ಸರಸಿಜ ಪಾಣಿ ವನಿತೆ ಕಲ್ಯಾಣಿ  ಕರಿರಾಜಾಗಮನೇ ಶ್ರೀ ಕರಚಂದ್ರವದನೆ  ನಿರುಪಮ ಸುಚಾರಿತ್ರೆ  ನಿರ್ಮಲಗಾತ್ರೆ  ಪರಮಸೀತೆ  ಭುವನ ವಿಖ್ಯಾತೆ  ಸರಸದಿಂ ಪನ್ನೀರು  ಜಳಕಂಗಳಾಡಿ  ಜರತಾರಿ ಸೀರೆಯನು  ನಿರಿವಿಡಿದುಟ್ಟು  ವರಸ್ವರ್ಣಮಯವಾದ  ಕಂಚುಕವ ತೊಟ್ಟು  ಫಣಿಗೆ ಕಸ್ತೂರಿಬಟ್ಟ ಪಣತಿ ತಾನಿಟ್ಟು  ವಾಲೆ ಭಾಪುರಿಯಾ ಜಡೆಬಿಲ್ಲೆ ರ‌್ಯಾಗಟಿಯು  ಮೇಲಾದ   ಹಸ್ತ ಕಡಗವನು  ತಾ ಧರಿಸಿ  ಯೆಳೆಯ ಸಿಂಗನ ಪೋಲ್ವ  ತಟಿನ ಮಧ್ಯದಲಿ  ಥಳಥಳಿಪ  ಒಡ್ಯಾಣವನ್ನು ಧರಿಸಿ ಕಾಲುಸರಪಣಿ ಕಡಗ ಗೆಜ್ಜೆಯನಿಟ್ಟು  ಬಾಲಪ್ರಾಯದ ಚಲುವೆ  ಗಲಿರುಗಲಿರೆನುತಾ  ರಾಮನಂ ಕಾಣುತಾ  ಪ್ರೇಮದಿಂ ಸೀತೆ  ಭೂಮಿ ಪ್ರಕಟನ  ಪುರ ನಿವಾಸನೆಂಬೋ  ತಾಮಸವಿಲ್ಲದೆ  ಬಂದಳಾ ಸಭೆಗೇ ॥

ದರುವು

ನೀರೆ ತೋರೆ  ತೋರಿಸು ಬಾರೆ ವಾರಿಜಾ  ಸಖ ಮುಖಾನ  ॥
ಸಖಮುಖನ  ಯನ್ನ ಪ್ರಾಣಕಾಂತನ  ನೀರೆ ತೋರೆ ॥

ಸೀತೆ : ಅಹೋ ಚಾರ ಸರಸ ಗುಣವಿಚಾರ, ಪೇಳುವೆನು ಕೇಳೋ ಧೀರ. ಶ್ರೀ ಮಹೀಮಂಡಲದ ಮಧ್ಯದೊಳ್ ಸೋಮಾಧಿಕ್ಯರ ತೇಜದಿಂ ವಿರಾಜಿಸುವ  ಸುಗುಣಾಕರ ಚಂದ್ರ ದಶರಥ ರಾಜೇಂದ್ರನಿಗೆ ಶಿಶುವಾಗಿ ಉದ್ಧರಿಸಿದ ದಿನಕರ ಕುಲೇಂದ್ರನಾದ ರಘುರಾಮ ಚಂದ್ರರಿಗೆ ಪ್ರಾಣಪತ್ನಿಯಾದ ಸೀತಾದೇವಿ ಎಂದು ಕರೆಯುವರಪ್ಪಾ ಚಾರ ವರ ಫಣಿಹಾರ.

ಸೀತೆ : ಎಲೈ ಸಾರಥಿ, ಯೀ ಸಭೆಗೆ ಆಗಮಿಸಿದ ಉದ್ಯುಕ್ತವೇನೆಂದರೆ ಸಾಧುಗುಣ ದಯಾಪರಿಪಾಲಕ ಯನ್ನಿಷ್ಠ ನಾಯಕನಾದ  ರಘುಮಹೇಶನು ಇಷ್ಠವಿಟ್ಟು ಕರೆಸಿದರಾದ ಕಾರಣ ಬಾಹೋಣವಾಯಿತು. ಚರಣ ದರುಶನವನ್ನು ಮಾಡಿಸೋ ದೂತ ಲಾಲಿಸು ಸಂಪ್ರೀತ.

ಕಂದರೇಗುಪ್ಪಿ

ರಘುಪತಿ ವಂದನೆ ಮಾಡುವೇ  ಅಘಹರ ಜಗದೇಕವೀರ
ಸುಗುಣಾಕರನೆ  ಜಗಕಧಿಕವಾದ ಅಯೋಧ್ಯ  ನಗರಾಧಿ
ಪತಿಯಾ  ಪ್ರಿಯಾಂಗಿ ಬಿನ್ನಪ ರಾಯಾ ॥

ಸೀತೆ : ಯಿದೇ ಶಿರಸಾಷ್ಠಾಂಗ ಬಿನ್ನಪಂಗಳೈ ಸ್ವಾಮಿ ಪ್ರಾಣನಾಯಕ ಶ್ರಿತಬಿಷ್ಠದಾಯಕ.

ರಾಮ : ಕಲ್ಯಾಣಾಭಿವೃದ್ಧಿರಸ್ತು ಜಾನಕಿ ಪ್ರಾಣನಾಯಕಿ.

ಸೀತೆ : ಹೇ ಪ್ರಾಣೇಶ್ವರ ಪ್ರಭು ಕುಲೇಶ್ವರ, ಯನ್ನನ್ನಿಷ್ಠು ಜಾಗ್ರತೆಯಿಂದ ಕರೆಸಿದ ಕಾರಣವೇನು. ವಿಸ್ತರಿಸಬೇಕೋ ಸ್ವಾಮಿ ಯನ್ನ ಮನೋಪ್ರೇಮಿ ॥

ರಾಮ : ಅದೇ ಪ್ರಕಾರ ವಿಸ್ತರಿಸುತ್ತೇನೆ ಕಾಂತೆ ಮತಿಗುಣವಂತೆ.

ದರುವು

ಜನಕಾ ಸಂಭವಸುತೆ  ಕೇಳೆ  ಬಾಲೆ  ಕೇಳೆ
ಯನ್ನ ಮನಕೊಂದು ಚಿಂತೆ  ಸಂಭವಿಸಿತೀ ವ್ಯಾಳೆ ॥
ಸಂತಾನ ಅಭಿವೃದ್ದಿ ಇಲ್ಲಾ ಯಮಗಿಲ್ಲ॥

ಬಹು ಚಿಂತೆಗೀಡಾಗಿ  ದುಃಖಿಸುತಿಹೆನಲ್ಲಾ
ಸಂತೋಷವನು ಕಾಣಲಿಲ್ಲಾ  ಕಾಣಲಿಲ್ಲಾ
ಭಾಗ್ಯವಂತರಾಗಿದ್ದೆವೊ  ಸುತರೆಮಗಿಲ್ಲ ॥

ರಾಮ : ಅಹೋ ಜನಕ ನಂದನೆಯಾದ ಜಾನಕಿಯೇ ಕೇಳು, ದಿನಕರನ ಕುಲಾನ್ಮಯನಾದ ನಾನು ಮನ ಮುನಿಗಳಿಂದ ನುತಿಸಿಕೊಳ್ಳುವನಾಗಿ ಘನಪರಾಕ್ರಮಿಯಂದೆನಿಸಿ ವಂಬತ್ತು ಸಾವಿರ ವರುಷ ಈ ಕುಂಭಿಣಿಯನ್ನು ಪರಿಪಾಲಿಸಿದಾಗ್ಯು ಈ ದೊರೆತನಕ್ಕೆ ಪುತ್ರ ಸಂತಾನವಿಲ್ಲದಿರುವ ಕಾರಣ ಯನ್ನ ಬಾಳು ವ್ಯರ್ಥವಾಯಿತೇ ಕಾಂತೆ ಮತಿಗುಣವಂತೆ.

ದರುವು

ಕಾಂತ ನಾನೇನ ಪೇಳ್ವೆ  ಸುಕ್ರುತ ಫಲವೆಂತಿರುವದು  ಕಾಣೆನು ॥
ಸಂತತಿಯನು ಪಡೆದಂಥ ನಾರಿಯು ಜಗಕೆ  ಯಂತ ಪುಣ್ಯಾತ್ಮಕಿಯೊ ॥
ನಾ ಪೂರ‌್ವ ಭವದೊಳಗೆ  ಮಾಡಿದಾ ಪಾಪಲೇಪಕವಾಗಿ ಯನಗೆ ॥
ರೂಪುಳ್ಳ ತನಯರ ಪಡೆದು ಮುದ್ದಿಸುವಂಥ  ಅಪೇಕ್ಷೆ ಯಾಕೊ ಯನಗೆ ॥

ಸೀತೆ : ಹೇ ಕಾಂತ, ಸಂತಾನ ಸಿದ್ಧಿಯಿಲ್ಲವೆಂದು ಅತ್ಯಂತ ವ್ಯಾಕುಲಚಿತ್ತರಾಗಿ ಚಿಂತಿಸಿದರೆ ಕಂತುವೈರಿಯ ಕರುಣವಿಲ್ಲದ್ದಕ್ಕೆ ನಾನೇನು ಮಾಡಲಿ. ಈ ಪೃಥ್ವಿಯಲ್ಲಿ ವಾರಿಗೆ ಯುವತಿಯರೆಲ್ಲರು ಪುತ್ರವತಿಯ ರಾಗಿಲ್ಲವೇ ಅಲ್ಲದೇ ನಾನು ಪೂರ‌್ವ ಜನುಮದಲ್ಲಿ ಮಾಡಿದ ಪಾಪ ವೆಗ್ಗಳವಾಗಿ ಕಾಡುತ್ತಿರುವಲ್ಲಿ ಪಾಪಿಯಾದ ನಾನು ರೂಪವುಳ್ಳ ಕುಮಾರರಂ ಪಡೆದು ಕರವೆರಡರಿಂದೆತ್ತಿ ಮುದ್ದಿಸಿ ಮಾಡುವೆನೆಂದು ಅಪೇಕ್ಷಿಸಿದರೆ ಹ್ಯಾಗೆ ಲಭಿಸುವದೋ ರಮಣಾ ಕರುಣಾಭರಣ.

ದರುವು

ಮಕ್ಕಳಿಲ್ಲದೆ ಬಾಳ್ವ ನಾನು  ಕೇಳೆ ನೀನು
ಬಲು ವೆಕ್ಕಸದ ದುಃಖವ ಮಾಡುತಿಹನೇ ॥
ಕಕ್ಕಸಕುಚೆ ಕೇಳೆ ನೀನು  ಕೇಳೇ ನೀನೂ ॥
ನಮ್ಮ ಅರ್ಕವಂಶಕೆ ಮುಂದೆ ದಿಕ್ಯಾರೆ ರಮಣಿ ॥
ಕಕ್ಕಸಕುಚೆ ಕೇಳೆ ನೀನೂ ಕೇಳೆ ನೀನು ॥

ರಾಮ : ಅಹೋ ಯನ್ನ ಮೊಗಕ್ಕೆ ತಕ್ಕ ಕಕ್ಕಸ ಕುಚೆಯಾದ ಸಖಿಮಣಿಯೇ ಕೇಳು, ಈ ಚಿಕ್ಕ ಪ್ರಾಯದಲ್ಲಿ ಯಮಗೆ ಮಕ್ಕಳ ಫಲವು ಪ್ರಾಪ್ತವಾಗಲಿಲ್ಲವಾದ ಕಾರಣ ಮುಂದೆ ನಮ್ಮ ಅರ್ಕವಂಶಕ್ಕೆ ದಿಕ್ಯಾರೇ ಕಾಂತೆ ಮತಿಗುಣವಂತೆ.

ದರುವು

ಕಂದಾರಾಡುವ ಲೀಲೆಯಾ  ನೋಡುವ
ಪುಣ್ಯಯಂದಿಗಾಗುವದೋ ರಮಣಾ ॥
ಅಂದದಿಂದೆರಡು ಕರದೊಳೆತ್ತಿ  ಪ್ರೀತಿಯೊಳ್
ಯಂದುಣಿಸುವೆ ಮೊಲೆಯಾ ಕಾಂತಾ ಕೇಳೊ॥ ॥

ಸೀತೆ : ಹೇ ರಮಣಾ, ಮಂದಭಾಗ್ಯಳಾದ ನಾನು ಕಂದರಂ ಪಡೆದು ಅಂದವಾದ ಯನ್ನ ಕರವೆರಡರಿಂ ದೆತ್ತಿ ಸ್ತನ್ಯಪಾನವನಿತ್ತು ವೊಂದಾರು ಭುಜಮಾಗಿ ಹಿಗ್ಗುವಂತಾ ಪುಣ್ಯವನ್ನು ಯಿನ್ನೆಂದಿಗೆ ಕಾಂಬೆನೊ ಪ್ರಿಯಾ ಕೀರ್ತಿ ಸಹಾಯ.

ದರುವು

ಸುತಹೀನನಾದ ಮಾನವಗೇ  ಮಾನವಗೇ
ಲೇಶಗತಿಯಿಲ್ಲವೆಲೆ ಬಾಲೆ ಇಹಪರದೊಳಗೆ
ನುತಿಸಾವು ಸ್ತುತಿಗತಿ ಹೀಗೆ  ಕೇಳೇ ಹೀಗೇ
ಭೂತಪತಿ ಶ್ರೀಕಂಠನ ಕೃಪೆಯಿಲ್ಲವೆಮಗೇ ॥

ರಾಮ : ಪುತ್ರಸಂತಾನವಿಲ್ಲದವರಿಗೆ ಸ್ವರ್ಗಮೋಕ್ಷಾದಿಗಳು ಯಿಲ್ಲದೇ ದುರ್ಗತಿಗೆಳೆಯುವರೆಂದು ಶೃತಿಶಾಸ್ತ್ರಾಗಮಗಳಲ್ಲಿ ಹೇಳಲ್ಪಟ್ಟಿರುವುದಾದ ಕಾರಣ ಶ್ರೀಕಂಠನಾದ ಗಂಗಾಧರೇಶನ ಕೃಪಾಕಟಾಕ್ಷವು ಯಮ್ಮ ಮೇಲೆ ಫಲಿಸಲಿಲ್ಲವಾದ ಕಾರಣ ಮುಂದೆ ಗತಿಯೇನೇ ಸೀತೆ ಭುವನವಿಖ್ಯಾತೆ.

ದರುವು

ಧರಣಿಗತ್ಯಧಿಕಮಾದ  ಪ್ರಕಟಣ ಪುರವರ ಪರಿಪಾಲನಾದ
ದುರಿತಾರಿ ಶ್ರೀ ಗಂಗಾಧರನ ಕಾರುಣ್ಯವು
ಯಂತಿರುವುದೊ ಕಾಣೆನೋ ಕಾಂತಾ ಕೇಳೋ ॥

ಸೀತೆ : ಹೇ ರಾಜ, ಈ ಧರಣಿಗದಿಕಮಾದ ಪ್ರಕಟನ ಪುರ ಪರಿಪಾಲನಾದ ಶ್ರೀ ಗಂಗಾಧರೇಶನ ಕಾರುಣ್ಯವು ಯಂತಿರುವುದೊ ಅಂತಾಗುವುದೈ ದೊರೆಯೇ ನೀ ಚಿಂತಿಪ ಪರಿ ಸರಿಯೆ.

ಕಂದ

ಸತಿಪತಿಯೀರ‌್ವರೂ ಮನದೊಳ್  ಸುತರೆಮಗಿಲ್ಲವೆಂದು
ಚಿಂತಿಸುತಿರ್ಪ ಸಮಯದೊಳ್
ಯತಿವರ ವಸಿಷ್ಟ ಮುನಿಗಳ್  ನುತಿಸುತಿಹಲ್
ಅರಿರಾಯನಿದಿರೋಳ್  ಸುಳಿಯಲ್ ॥

ಪದ

ಹರಿಹರಿ ಶ್ರೀಪತಿ ಮುರಹರ ಕಾಂತಕ  ಪರಮ ಪುರುಷ ಕಾಯೋ ॥
ಸಾರಿಸುವೆ ನಾ ನಿನ್ನ  ಚರಣ ಕಮಲವನ್ನು ಸುರುಚಿರ ಪದವಿಯ ॥

ನಿಂದು ಮತನ ಗೋವಿಂದ ಸಕಲ ಸುರಬೃಂದವ ಸಲಹಿದನೆ ॥
ಕೊಂದು ಹಿರಣ್ಯನ ಶಿಶು ಪ್ರಹ್ಲಾದನ ಬಂಧನ ಬಿಡಿಸಿದವನೆ ॥

ಖಳ ದುಶ್ಯಾಸನನು  ಸಭೆಯೊಳು  ದೃಪದಿಯ ಹೆರಳನು ಪಿಡಿತಂದು ॥
ಸೆಳೆಯಲು ಸೀರೆಯ ಆ ಬಾಲೆಗಿತ್ತು ಮಾನವನುಳುಹಿದವನೆ ॥

ಅಂಗಜಪಿತ ಭವಭಂಗ ಚಿತ್ತಜ  ಸಂಗ ದಯಾತಪನೇ ॥
ಹಿಂಗದೆ ಪಾಲಿಸೋ ಶ್ರೀ ತುಮಕೀಪುರ ಗಂಗಾಧರಸುತನೆ ॥

ವಸಿಷ್ಠ : ಅಣ್ಣಾ ಸಾರಥಿ, ದುಷ್ಟಾನಿಗ್ರಹ ಶಿಷ್ಯ ಪರಿಪಾಲನಾಶೀಲ ಜಗದುತ್ಕೃಷ್ಟ ಅಷ್ಟಮೂರ್ತಿ ಪಟ್ಟಭದ್ರ ಶ್ರೇಷ್ಟ ಶ್ರೀರಾಮಚಂದ್ರರ ಅನುಜ್ಞೆಯಿಂದ ಪರಿಪಾಲಿಸುವ ಅಯೋಧ್ಯಾ ಪಟ್ಟಣದಿ ಆಶ್ರಮ ಕಲ್ಪಿಸಿಕೊಂಡು ಜಪತಪ ಕೃತ್ಯಗಳೇ ಮೊದಲಾದ ನಿತ್ಯ ಕರ‌್ಮಂಗಳಂ ಮಾಡಿಕೊಂಡು ವಾಸವಾಗಿರುವ ಶ್ರೇಷ್ಟ ರುಷಿ ವಸಿಷ್ಟರೆಂದು ತಿಳಿಯೊ ದೂತ ಕೇಳೆನ್ನ ಮಾತ. ಯಲಾ ಸಾರಥಿ ಯೀ ಸಭೆಗೆ ಬಂದ ಕಾರಣವೇನೆಂದರೆ ವಾರುಧಿಶಯನ ನೀರಜನನ್ನು ಕಾಣುವ ಉದ್ದಿಶ್ಯ ಬಾಹೋಣವಾಯಿತು. ರಾಜರ ಭೇಟಿಯನ್ನು ಮಾಡಿಸೊ ಸಾರಥಿ.

ಕಂದ

ಗುರುವರರ ಸಂದರುಶನ  ದೊರಕಿತು ನಾಂ
ಧನ್ಯನಾದೆ ಯನ್ನಯ  ಮಾನಸಕೀಗಂ  ಹರುಷಮ
ದಾಯ್ತು  ತಮ್ಮ ಪಾದಕ್ಕೆರಗುವೆ  ಸಾಷ್ಠಾಂಗ
ಬಿನ್ನ ಪಂಗಳೈ ಮುನಿಪಾ ॥

ರಾಮ : ಇದೇ ಶಿರಸಾಷ್ಠಾಂಗ ಬಿನ್ನಪಂಗಳೈ ಮುನಿಪ ಮಾಡುವೆನು ಬಿನ್ನಪ.

ವಸಿಷ್ಠ : ದೀರ್ಘಾಯುಷ್ಯುಮಸ್ತು ಐಶ್ವರ‌್ಯ ಅಭಿವೃದ್ದಿಯಾಗಲೈಯ್ಯ ರಾಮ ಘನಸಾರ‌್ವಭೌಮ.

ಪದ

ರಾಜ ಮಾರಾಜನೈ ಬಹುಸು ಯಾಗೈ
ಮಹೀ ಪರಿಪಾಲನೆ  ಮಾಡುವನಾಗೈ
ಪ್ರಜೆಗಳ ನೇಮವೇ  ವಿಜಯದಿ ನೇಮ
ಮಹಿಪರಿಪಾಲನೆ ಮಾಡುವನಾಗೈ ॥

ರಾಮ

ಯೇನ ಪೇಳಲೊ ಗುರುವರ ॥ಗುರುವರ ॥
ಸುತಹೀನನಾಗಿರುವೆ  ಕ್ಷೋಣೀಶನಾದುದ
ಯೇನ ಪೇಳಲೋ ಗುರುವರಾ ॥ಯೇನ ॥

ರಾಮ : ಸ್ವಾಮಿ ಶ್ರೇಷ್ಠ ರುಷಿ ವಶಿಷ್ಠರೇ, ತಮ್ಮ ಆಶೀರ್ವಾದ ಕರುಣಕಟಾಕ್ಷದಿಂದ ಸಕಲ ವೈಭವಗಳು ಪ್ರಕಟಿಸಿರುವದಲ್ಲದೆ ಪುತ್ರಸಂತಾನವಿಲ್ಲದಿರುವದೊಂದು ಅಂತರಂಗದಲ್ಲಿ ಚಿಂತೆಗೊಂಡಿರುವದೈ ಮುನಿಪ ಮಾಡುವೆನು ಬಿನ್ನಪ.

ಪದ

ಕಂತು ಜನಕನೇ ಮನದೀ  ಚಿಂತೆಯಾ
ತಕೆ ನಿನಗೇ  ಕಾಂತೆಗೆ ಸಂತಾನವಿಹುದೋ ॥

ವಸಿಷ್ಠ : ಅಯ್ಯ ಕಂತು ಜನಕನಾದ ರಾಘವ, ದಂತಿಗಮನೆಗೆ ಸಂತಾನ ಸಿದ್ದಿಸುತ್ತಾ ಇದ್ದೀತು. ನಿನ್ನ ಅಂತರಂಗದಲ್ಲಿ ಚಿಂತಿಸಲಾಗದೈಯ್ಯ ರಾಮ ಹರಿಕಟ ಭೀಮ.

ಪದ

ಪರಮಾ ಮುನಿವರ ಮುಂದೆ ತರಳರಾಗುವ
ತೆರನ  ವರೆಯಾ ಬೇಕೆನಗತಿ  ಭರಧೀ ॥

ರಾಮ : ಅಯ್ಯ ವಸಿಷ್ಠರೇ, ಈ ಧರೆಯನ್ನು ನವ ಸಾವಿರ ವರುಷ  ಪರಿಯಂತರ ಪರಿಪಾಲಿಸಿದಾಗ್ಯು  ಈ ದೊರೆತನಕ್ಕೆ ಪುತ್ರ ಸಂತಾನವಿಲ್ಲದಿರುವ ವ್ಯಾಕುಲತೆ ತಪ್ಪಲಿಲ್ಲವಲ್ಲ. ಸಾರಸಾಕ್ಷಿ ಸೀತೆಗೆ ಸುತರಾಗುವರೆಂದು ವರೆಯುವಿರಲ್ಲಾ ಗುರುವೇ ಆ ಪರಿಗಳನ್ನೆಲ್ಲಾ ಅರುಹಬೇಕೈ ತಾಪಸ ತಂದೊಡ್ಡಿದೆ ಸಂತೋಷ.

ಪದ

ಜನಕ ನಂದನೆಗಿನ್ನು  ತನಯರಾಗುವ ಮಂತ್ರ
ವಿನಯದಿಂದುಪದೇಶ  ಮಾಳ್ಪೇ

ವಸಿಷ್ಠ : ಅಯ್ಯ ಇನಕುಲ ಸಂಜಾತ ಶ್ರೀ ರಘುನಾಥ ನಾನಾಡುವ ಮಾತೇ ಯತಾರ್ಥ. ನೀನನುಮಾನಿಸದೇ ತಿಳಿಯಿದರ ಅರ್ಥ. ವನಜ ಲೋಚನೆಯಾದ ಜನಕನಂದನೆಗೆ ದಿನಕರನ ಧಿಕ್ಕರಿಪ ತನಯರು ಪುಟ್ಟುವ ಅರ್ಥ ಘನವಾದ ಮೂಲಮಂತ್ರವನ್ನು ವುಪದೇಶವಂಗೈದು ಇದ್ದೇನೆ. ಮನದನುತಾಪ ಯಾತಕಯ್ಯ ದೀನ ಜನಪಾಲ ದಾನವ ಕುಲಶೀಲಾ.

ಪದ

ಸತಿಗಾಗೋ ಸಂತಾನ  ಸುತರೋ ಸುಂ
ದರಿಯರೋ  ಯತಿರಾಯ  ಪೇಳ
ಬೇಕೆನಗೇ ॥

ರಾಮ : ಸ್ವಾಮಿ ಯತಿಕುಲ ಚಕ್ರವರ್ತಿ, ಲಾಲಿಸಬೇಕು. ಮನಪೂರ್ತಿ ಪ್ರತಿಕರಿಸುವುದಾದರೆ ಮತಿಭ್ರಮಣೆಯಿಂದ ಬಿನ್ನಯಿಸುತ್ತೇನೆ. ಸತಿಯಾದ ಸೀತೆಯ ಗರ್ಭದೋಳ್ ಜನಿಸುವರು ಸುತರೋ  ಸುಂದರಿಯರೋ ಅತಿಯತದಿಂದ ಪ್ರತಿಪಾದಿಸಬೇಕೈ ಯತಿಕುಲೋತ್ತಮಾ ತಾಪಸರೋಳ್ ನೀನೇ ಅತ್ಯುತ್ತಮ.

ಪದ

ರಕ್ಕಸಾರಿಯೇ ಗಂಡು  ಮಕ್ಕಳುದಿಸುವರೈಯ್ಯ
ಮುಕ್ಕಣ್ಣನಾಣೆ  ನಿಜವೈಯ್ಯ  ನಿಜವೈಯ್ಯ ॥

ವಸಿಷ್ಠ : ಅಯ್ಯ ರಕ್ಕಸ ಸಂಹಾರಿ ವುಕ್ಕಿತು ನಿನಗೆ ಸಿರಿ ಟಕ್ಕು ನುಡಿಗಳಲ್ಲವೈಯ್ಯ ಶೌರಿ. ಅಕ್ಕರದಿಂದ  ತುಮಕೀಪುರದ ಚಿಕ್ಕಪೇಟೆ ಪೂರ್ವದಿಕ್ಕಿನಲ್ಲಿ ನೆಲೆಗೊಂಡಿರ್ಪ ಮುಕ್ಕಣ್ಣ ಪಾರ್ವತೀಶನಾದ ಶ್ರೀಮದ್‌ಗಂಗಾಧರೇಶನಾಣೆಯಾಗಿಯು ದೊರೆತನಕ್ಕೆ ತಕ್ಕ ಈರ್ವರು ಗಂಡು ಮಕ್ಕಳುದಿಸಿ  ಪಾಂಡಿತ್ಯರಾಗುವರು. ನಾವು ಬಂದು ಬಹಳ ಹೊತ್ತಾಯಿತು. ನಮ್ಮ ಬಡ ತಪೋ ನಿವಾಸಕ್ಕೆ ಪೋಗಿಬರುತ್ತೇನೈ ರಾಮ ಜಾನಕೀ ಪ್ರಿಯ.

ಪದ

ಮುನಿಪಾಲ ನಿನ್ನಾಗಮನದಿ  ವನಜನಾಭ
ನಾಗುವ ಸುಗುಣ  ಮುನಿಪಾಲ ನಿನ್ನಾಗಮ
ನದಿ ॥ಯನ್ನಯ ಪೂರ್ವದ ಪುಣ್ಯ ದಯ
ದಿಂದ  ಧನ್ಯನು ನಾನಾದೆನೈಯ್ಯ ॥
ಪೊಡವಿಗಧಿಕ ತುಮಕೀಪುರದೊಳಿಹ  ಮೃ
ಢ ಗಂಗಾಧರನಾಣೆ  ಧನ್ಯನಾದೆ ನಾಂ ॥

ರಾಮ : ಹಾಗಾದರೆ ಪೋಗಿ ಬರುವದೈಯ್ಯ ರುಷಿವರ‌್ಯರೇ ॥

ಪದ

ವಾರೀಜಾಕ್ಷಿ  ಸಖಿ ನೀ ಬಾರೇ  ನಾರೀ
ನಾ ನಿರ್ವಹಿಸಲಾರೇ ॥ತೋರುತಿದೆ
ಬಯಕೆ ನೀರೇ  ತೋರಿದೊಸ್ತುಗಳನ
ತಾರೇ ॥ಅಂಗನೇ ಕೇಳು ನಾಲ್ಕು
ತಿಂಗಳಾಯಿತಿಲ್ಲಿಗೆ  ಯನ್ನಂಗವೇನೋ
ಭಾರವಾಗೀ  ಯಿಂಗದೇ ತೋರುತಲಿದೆ ॥

ಸೀತಾದೇವಿ  : ಅಮ್ಮಾ ವಾರಿಜಾಕ್ಷಿಯಾದ ಸಖಿಶಿರೋಮಣಿಯೇ ಕೇಳು. ಚಾರುತರ ಫಲಭರಿತಮಾದ ಧಾರುಣಿಗೆ ಕುಸಿದಂತೆ ಈ ನಾಲ್ಕು ಮಾಸದ ಗರ್ಭವು ಅವತರಿಸಿ ಅಡಿಯಿಡಲು ತನುಭಾರಮಾಗಿ ಜಗ್ಗಿಸುವದಲ್ಲಮ್ಮಾ ಸಖಿಯೇ ವರಚಂದ್ರಮುಖಿಯೇ.

ಸಖಿ : ಅಮ್ಮಾ ಪುಟ್ಟ ಕಂಗಳೆಯಾದ ಸೀತೆಯೇ ಕೇಳು. ಸೃಷ್ಠಿಯಲ್ಲಿ ಸ್ತ್ರೀ ಜನ್ಮವೆತ್ತಿ ಪುಟ್ಟಲೇ ಬಾರದು ಪುಟ್ಟಿದ ಕಾಲಕ್ಕಾದರು ಇಂಥ ಕಷ್ಠಗಳೇ ಪ್ರಾಪ್ತಿಸುವುದಲ್ಲದೆ ಎಷ್ಠೆಷ್ಠು ಮಾತ್ರಕ್ಕು ಸುಖ ಫಲಿಸಲಾರದಮ್ಮಾ ತಾಯೇ ರಘುರಾಮನ ಸ್ತ್ರೀಯೇ.

ಪದ

ಚದುರೆ ಕೇಳೆ  ಹದುಳಾದಿಂದಾ  ವದ
ಗೀತಾರು  ತಿಂಗಳೆನಗೆ  ಸುದತೀ  ಮೌ
ಕ್ತಿಕಗಳನು ತಾರೆ ॥

ಸೀತಾದೇವಿ : ಅಮ್ಮಾ ಚದುರೇ ಹದುಳ ತವಕದಿಂದ ಆರು ಮಾಸಂಗಳು ವದಗಿ ವಿಧವಿಧಮಾದ ಆಭರಣಗಳ ಬಯಕೆ ಪುಟ್ಟಿರುವುದಾದ ಕಾರಣ ಸದನಕ್ಕೆ ತೆರಳಿ ಮುತ್ತಿನಹಾರ ಪದಕ ಕಂಠೀಸರಗಳನ್ನು  ತಂದು ಯನ್ನ ಕಂಠದಲ್ಲಿ ಧರಿಸುವಂಥವಳಾಗಮ್ಮ ಸಖಿಯೇ ವರಚಂದ್ರ ಮುಖಿಯೇ.