ಪದ

ಸಾರಸಾಕ್ಷಿಯೆ ಕೇಳೀ ಪರಿಯಾ
ಸಾರಿ ಪೇಳುವೆನು ವೈಖರಿಯ ॥

ಪದ

ತೋಯಾಜಾಕ್ಷಿ  ಯೆಂಟು ತಿಂಗಳಾಯಿ
ತಿಲ್ಲಿಗೆ  ಶ್ರೀ ತುಮಕೀಪುರದ  ರಾಯ  ಗಂ
ಗಾಧರನ ಕರುಣದಲಿ  ಸಲಿಸಿತಮ್ಮ ॥

ಸೀತಾದೇವಿ : ಅಮ್ಮಾ ತೋಯಜಾಕ್ಷಿ, ಪ್ರಿಯನಿಗೆ ಸರಸ ಸ್ತ್ರೀಯರಿಗೆ ಆಯಾಸವೆಂಬುವುದು ನ್ಯಾಯವೇ. ಹೀಗಿರುವಲ್ಲಿ ಬಾಯಿಬಿಟ್ಟು ಆಡಲ್ಯಾತಕ್ಕೆ ಅವನಿಗೆ ವುತ್ತಮವಾದ ತುಮಕೀಪುರದೊಡೆಯ ಕಾಮದ ವೈರಿಯಾದ ಗಂಗಾಧರೇಶನ ಕರುಣದಿಂದ ಯೆಂಟು ಮಾಸಂಗಳು ಕಳೆದು ಆಯಾಸ ಪುಟ್ಟಿರುವುದಾದ ಕಾರಣ ಪ್ರಿಯನೊಡನೆ ಯನ್ನ ಬಯಕೆಯನ್ನು ಬೇಡಿಕೊಳ್ಳುತ್ತೇನಮ್ಮ ಸಖಿಯೇ ವರಚಂದ್ರ ಮುಖಿಯೇ.

ಪದ

ರೂಢಿಗೊಡೆಯ  ಲಾಲಿಸೆನ್ನ  ಬಿನ್ನಪ
ವನೋ  ಬೇಡಿಕೊಂಬೆ ಕಾಂತ ಕೇಳೋ
ಬಯಕೆಯೊಂದನೂ ॥ಪ ॥ವನಕೀಗಲೆನ್ನ
ಕಳುಹು ಪೋಪೆ  ಮನುಜಪಾಲ ನಾ  ಮು
ನಿಪತ್ನಿ ಸುತರ ಕೂಡೆ ಯಿರುವೆ  ವಿನಯದಿಂದ ನಾಂ ॥

ಸೀತಾದೇವಿ : ಹೇ ಸ್ವಾಮಿ ಭೂಮಿ ಪಾಲ ಶಿರೋಮಣಿಯಾದ ಶ್ರೀರಾಮಭದ್ರನೆ ಲಾಲಿಸಬೇಕು, ಯನ್ನ ಬಿನ್ನಪದ ನುಡಿಯ, ಮುನಿಪತ್ನಿಯ ಸತಿಯರೊಡನೇ ವನದೊಳಗೆ ವಿನೋದದಿಂದ ಇರಬೇಕೆಂದು ಯನ್ನ ಮನಸ್ಸಿನಲ್ಲಿ ಬಯಕೆ ಬಯಸಿರುವದಾದ ಕಾರಣ, ವನಿತೆಯ ನುಡಿಯನ್ನು ನಿಮ್ಮ ಮನಸ್ಸಿಗೆ ತಂದು ವನಕೆ ಕಳಿಸುವಂಥವರಾಗಿರೈ ಕಾಂತ ಮತಿಗುಣವಂತಾ.

ಪದ

ಭೂಸುತೆಯೇ ಹಿಂದೆ ವನವಾಸ ಮಾಡಿದ
ಕ್ಲೇಶ ಸಾಲದೆಂತು ಮನದಾಸೆ ಬೇಡಿದೇ ॥ಪ ॥
ಮನದಾಸೆ ಬೇಡಿದೆ॥

ರಾಮ : ಹೇ ಭೂಸುತೆಯಾದ ಸೀತೆಯೇ ಕೇಳು. ಹಿಂದೆ ಈರೇಳು ವರುಷ ವನವಾಸ ಮಾಡಿ ದನುಜನ ಗಲ್ಲೆಣೆಗೆ ಸಿಕ್ಕಿ ಘಾಸಿಪಟ್ಟ ಕ್ಲೇಶ ಸಾಲದೆಂದು ಇಂದು ಮಂದಮತಿಯಿಂದ ವನಕ್ಕೆ ತೆರಳಬೇಕೆಂಬ ಆಸೆ ಪುಟ್ಟಿರುವುದೇನೇ ಕಾಂತೆ ಮತಿ ಗುಣವಂತೆ.

ಪದ

ಕಳುಹೆನ್ನ  ವಡನೆ  ಲಕ್ಷ್ಮಣನಾ  ವನಕೆ
ತೆರಳುವೇ  ನಳಿನಾಕ್ಷ ರಾಮಚಂದ್ರ ಯಾಕೆ
ಜಾಲ ಮಾಡುವೇ ॥

ಸೀತಾದೇವಿ : ಹೇ ಸ್ವಾಮಿ ನಳಿನದಳ ನಯನಾ, ಹಿಂದೆ ವನದೊಳಗೆ ಖಳನು ರಮಣಿಯಳ ಬಳಲಿಸಿದನೆಂಬ ಕಳವಳವು ನಿನ್ನ ಮನಸ್ಸಿನಲ್ಲಿ ತಿಳಿಯುವುದಾದರೆ, ಖಳತರುಣಿಯಳ ಕಣನಾರ್ಸಿಕವಂ ಶೆಳೆದುರುಳಿಸಿದ  ಲಕ್ಷ್ಮಣದೇವರನ್ನೇ ಯನ್ನೊಡನೆ ಕಳುಹಿಸಿ ಕೊಡಬೇಕೈ ಕಾಂತಾ ಸದ್ಗುಣವಂತಾ.

ಪದ

ಮತಿವಂತೆ ಕೇಳು ಪೇಳ್ವೆ ಯನ್ನ  ಮನದ
ಯೋಚನೇ  ಹಿತದಿಂದ ನಾಳೆ ಕಳುಹು
ವೆನೇ  ರಾಜೀವ ಲೋಚನೇ ॥

ರಾಮ : ಮತಿವಂತೆಯರೊಳಗೆ ಚಲುವೆಯಾದ ಸತಿ ಶಿರೋಮಣಿಯೇ ಕೇಳು, ಹಿತವಾದ ಯನ್ನ ಹಿತವಚನವನ್ನು ಮತಿಯಲ್ಲಿ ತಂದು ಇಂದಿನ ದಿನ ಮಂದಿರದಲ್ಲಿ ಚಂದದಿಂದಿರು. ನಾಳಿನ ಅರುಣೋದಯಕ್ಕೆ ಸರಿಯಾಗಿ ಯತಿಸತಿಸುತರಿರುವ ಮಂದಾಕಿನೀ ತೀರದ ಬಳಿಗೆ ಚಂದದಿಂದ ಕಳುಹಿಸಿಕೊಡುವೆನೇ ರಾಜೀವಲೋಚನೇ ಬಿಡು ನಿನ್ನಯ ಮನದ ಯೋಚನೇ.

ಪದ

ಭೂಪೇಂದ್ರ ನಿಮ್ಮ ನುಡಿಗೆ  ಪ್ರತಿ ನಿರೂಪಗೈವೆನೇ
ಕಪಾಲಿ ದಯದಿಂದ ವನಕೆ  ನಾ ಪೋಪೆನಲ್ಲದೆ ॥

ಸೀತಾದೇವಿ : ಆಹೋ ಯನ್ನ ಮನೋ ಶರಧಿ ಚಂದ್ರ ಭೂಪೇಂದ್ರ ರಘುರಾಮ ಚಂದ್ರ ಭೋಗದೇವೇಂದ್ರನೇ ಲಾಲಿಸು. ವುನ್ನತಮಾದ ನಿನ್ನ ನುಡಿಗೆ ಪ್ರತಿ ವಚನವಾಡಬಲ್ಲನೇ. ಹೇ ಚಿನ್ಮಯರೂಪ, ಮನ್ಮಥಾರಿಯಾದ ಕಾಪಾಲಿ ಭೂತಿಧರಶೂಲೀ ಶ್ರೀಮದ್‌ಗಂಗಾಧರೇಶನ ಅಂಗದಲ್ಲಿ ಧ್ಯಾನಿಸಿ ನವಮೋಹನಾಂಗನ ಶೃಂಗಾರ ಮಂಟಪಕ್ಕೆ ತೆರಳೋಣ ಬಾರೈ ಕಾಂತ ಸದ್ಗುಣವಂತ.

ರಾಮ : ಯಲಾ ಸಾರಥಿ, ಯಮ್ಮ ಅಂತಃಪುರದಲ್ಲಿರುವ ಚಾರನನ್ನು ಕರೆಸುವಂಥವನಾಗೆಲಾ ಸಾರಥಿ.

 

(ಚಾರನ ಬರುವಿಕೆ)

ಚಾರ : ಇದೋ ತಮ್ಮ ಚರಣಾರವಿಂದಗಳಿಗೆ ಶಿರಬಾಗಿ ವಂದನೆಯಂ ಮಾಡುವೆನೈ ಸ್ವಾಮಿ ಭಕ್ತಜನ ಪ್ರೇಮಿ.

ರಾಮ : ಯಲಾ ಚಾರಕುಲ ಶಿಖಾಮಣಿಯೇ, ಈ ಪುರದೊಳಗೆ ಗಸ್ತು ತಿರುಗಿ ಯಾರಾದರು ಯಮ್ಮ ತರಣಿ ಕುಲದ ವಂಶಾವಳಿಯನ್ನು ಸ್ತುತಿಸುವರೋ, ಜರಿದು ನಿಂದಿಸುವರೋ, ಬೀದಿ ಬೀದಿಸಂದು ಗೊಂದುಗಳಲ್ಲಿ ಚನ್ನಾಗಿ ಸಲಿಸೋ ಬೆಸಕೊಂಡು ಬಂದು ಯನ್ನೊಡನೆ ಪೇಳುವಂಥವನಾಗೆಲಾ ಚಾರಶಿಖಾಮಣಿಯೇ.

ಚಾರ : ಅದೇ ಪ್ರಕಾರವಾಗಿ  ನೋಡಿಕೊಂಡು ಬರುತ್ತೇನೈ ಸ್ವಾಮಿ ಭಕ್ತಜನ ಪ್ರೇಮಿ ॥

 

(ರಜಕ ರಜಕಿ ಬರುವಿಕೆ)

ಪದ

ಬಂದನೂ  ಮಡಿವಾಳಿ ಮಾರಯ್ಯ  ವ
ಯ್ಯರದಿಂದ ॥ಬಂದನೂ ಮಡಿವಾಳಿ ಮಾರಯ್ಯ ॥ಪ ॥

ಅಂದವೂರ ಮೈಲಿಗೆಯನ್ನು
ಚಂದದಿಂದ ಎತ್ತಿಕೊಂಡು  ಹೊತ್ತು ಆಯಿ
ತೆಂದು ಮಡಿಯ  ಕತ್ತೆಯ ಮೇಲೆಯೇ
ರಿಕೊಂಡು ಬಂದನು

ಮತ್ತೆ ಯೆಗಲ ಮೇಲೆ ಬಾನಿಯ
ಮತ್ತೆ ಪುರದ ಮಾರ್ಗವ ಪಿಡಿದು  ಬಂದನೀ ॥ಪ ॥

ಯಲ್ಲಿ ವೋದಳೋ ಚಲ್ವ ಮೂಳೀ
ಇಲ್ಲ ಮನೆಯ ವಳಿಗೆ ಯನ್ನುತ
ಅಲ್ಲಿ ನೆರೆವರೆಯವರ ಕೇಳು
ತಾ  ಗಲ್ಲಿ ಗಲ್ಲಿಗಳಲ್ಲಿ ಹುಡುಕುತಾ
ಬಂದನೂ ॥ಪ ॥

ಕಂಡನಗಸರ ಮಾರನು
ಯೆಂಡತಿಯ  ಪುರಬೀದಿಯೊಳ
ಗೆ  ಮಂಡೆ ಕುರುಳನು  ಪಿಡಿದು ಸೆ
ಳೆದನು  ರಂಡೆ ನಡಿನಡಿ  ನೀರೆ ಯಾಕೆ
ನುತಲಿ ॥ಬಂದನು ॥ಪ ॥

ಯಲ್ಲಿಗೆ ವೋಗಿದ್ದೆ  ಹೊಲರಂಡೇ ನಿನ್ನ
ಚಲ್ಲು ಬುದ್ದಿಗಳನ್ನು ಬಿಡಲಿಲ್ಲವಲ್ಲೇ ॥
ನೆರೆಹೊರೆಯವರೆಲ್ಲ ನಗುವರೇ
ಲೌಡಿ  ಪುರಸೂಳೆಯಂದದಿ ತಿರುಗುವೆಯಾ ಗಾಡಿ ॥

ರಜಕನ : ಯಲೇ ಹೊಲ ರಂಡೇ, ಮನೆಯನ್ನು ಸಾರಿಸದೆ ವಲೆಯನ್ನು ಹಚ್ಚದೇ ಇದುವರತನಕ  ಯೆಲ್ಲಿಗೆ ವೋಗಿದ್ದೆಯೇ ಕುಲಗೇಡಿ ಮೂಳೀ. ಇನ್ನೂ ನಿನ್ನ ಚಲ್ಲು ಬುದ್ದಿಗಳನ್ನು ಬಿಡಲಿಲ್ಲ ಕಂಡೆಯಾ ಯದೆಯ ಮೇಲೆ ಸೆರಗನ್ನು ಬಿಡಲಿಲ್ಲ ಕಂಡೆಯಾ, ಯದೆಯ ಮೇಲೆ ಸರಗನ್ನು ಹಾಕದೇ ವಲಪು ಮಾಡುತ್ತಾ ವೂರು ಸೂಳೆಯಂತೆ ಮನೆಮನೆಯನ್ನು ತಿರುಗುವುದು ನೋಡಿದರೇ ನೆರೆಹೊರೆಯವರೆಲ್ಲಾ ನಗುವಿರಲ್ಲೇ ಲೌಡಿ ಆದಲ್ಲೇ ಗಾಡಿ.

ಪದ

ಬಾಳುವ ಗರತಿಯಾ  ಸೂಳೆ ಯೆನ್ನಲಿ
ಬೇಡ  ಮೂಳನೆ ಮೀಸೆಯ  ಕೀಳುವೆ ಗಾಡಾ ॥

ರಜಕಿ : ಯಲಾ ಮೂಳನಾದ ಖೂಳ ಗಂಡನೇ, ತಾಳಿ ಕಟ್ಟಿದಂದಿನಿಂದ ಗೋಳಿಟ್ಟು ಬೇಡಿಕೊಂಡರು ಯನ್ನಲ್ಲಿ ಒಂದು ಇರುಳಾದರು ಆಳುವ ಸಾಮರ್ಥ್ಯ ನಿನಗೆ ಯಿಲ್ಲದೆ ಕೀಣಯ ಬಿದ್ದವನಂತೆ  ಗೋಳಾಡುತಾ ಇದ್ದಿ. ಬಾಳುವ ಗರತಿಯನ್ನು ಸೂಳೆಯೆಂದು ಆಡಿದರೆ ಮೂಳನೇ ನಿನ್ನ ಮೀಸೆಗಳನ್ನು ಕೀಳುವೆನೋ ನಲ್ಲಾ ಕೇಳೆಂನ್ನ ಸೊಲ್ಲಾ.

ಪದ

ಮೀಸೆಯ ಮುಟ್ಟಿ  ಗಾಸಿಯಾ ಪಟ್ಟು  ನಾಸಿ
ಕವನು ಕೊಯ್ವೆ  ಲೌಡಿ ನೀ ಕೆಟ್ಟೆ ॥

ರಜಕ : ಯಲೇ ರೋಸಿದ ಮೂಳಿಯೇ, ಮಾಸಿದ ಮೈಲಿಗೆ ಯೆನ್ನದೆ ಯೆದ್ದ ಹಾಸಿಗೆಯ ಮೇಲೆ ದೋಸೆ ಕಡುಬುಗಳನ್ನು ತಿಂದು ವಡಲು ಪೋಷಿಸಿಕೊಂಡಿರುವೆನೆಂಬ ಕಡು ದುರಹಂಕಾರದಿಂದ ಮಾತುಗಳ್ ವಸರಿಸದೆ ನೀನು ಸರಸಕೆ ಬಂದು ಯನ್ನ ಮೀಸೆಯನ್ನು ಮುಟ್ಟಿದ್ದೇ ಆದರೆ ಈ ಸಭಾಜನರ ಮುಂದೆ ಗಾಸಿಪಟ್ಟೀಯ ಕಂಡೆಯೇ ಮೋಸಗಾತಿ. ಈ ಸಮಯದಲ್ಲಿ  ನಿನ್ನ ಕರ್ಣನಾಸಿಕವಂ ಛೇಧಿಸಿ ಕಾಸಿಗೆ ನಿನ್ನ ಕಡೆ ಮಾಡಿ ದೇಶವನ್ನು ಬಿಟ್ಟು ವೋಡಿಸುವೆನೇ ಲೌಡಿ ಆದಲ್ಲೆ ಗಾಡೀ.

ಪದ

ಕೆಟ್ಟ ವಚನಗಳಾ  ಕಟ್ಟಿಡೊ ಯನ್ನ  ಭಟ್ಟಿ
ಗಳ್ಳನೇ ಮೂತಿಗೆಟ್ಟುವೆ ನಿನ್ನಾ ॥

ರಜಕಿ : ಯಲೋ ದುಷ್ಠ ವಲ್ಲಭನೇ ದಟ್ಟದಾರಿದ್ರನೇ, ಶ್ರೇಷ್ಠವಾದ ಶುಕ್ರವಾರದ ಸಂಜೆಯಲ್ಲಿ ಇಂಥ ಕೆಟ್ಟ ಮಾತುಗಳನ್ನು ಆಡಬೇಡ. ಸಿಟ್ಟು ಬಂದರೆ ನಾನು ಬಹಳ ಕೆಟ್ಟ ಮುಂಡೆ. ಕೆಟ್ಟ ಮಾತುಗಳನ್ನು ಬೊಗಳಿದ್ದಾದರೇ ನಾ ಬಿಟ್ಟ ಮುಟ್ಟು ಬಟ್ಟೆಯನ್ನು ಮೂಟೆಯ ಕಟ್ಟಿ ನಿನ್ನ ಮೇಲೆ ಹೊರಿಸಿ ಈ ಪಟ್ಟಣದ ಶ್ರೇಷ್ಠ ವರ್ತಕರ ಮುಂದೆ ಹೊರಿಸೇನು ಕೆಟ್ಟೆ ಹೋಗೋ ಯನ್ನ ಭಟ್ಟಿಗಳ್ಳನೇ.

ಪದ

ಬಲು ಹೆಚ್ಚಬೇಡ ಹೊಲೆ ಮೂಳಿ ನೋಡೆ  ಮೊಲೆ
ಮೂಗು ಕೊಯ್ವೆನು  ಕುಲಗೇಡಿ ಮೂಳೀ ॥

ರಜಕ : ಯಲೇ ಹೊಲೆರಂಡೆ, ಮೊಲೆಯ ಮೇಲೆ ಸೆರಗನ್ನು ಹಾಕದೇ ತಲೆಯನ್ನು ಕೆದರಿಕೊಂಡು ಬಲುತರದಿ ಹೆಚ್ಚಿ ಕಲಹಕ್ಕೆ ಬಂದರೆ ಮೊಲೆ ಮೂಗುಗಳನ್ನು ಕೊಯ್ದು ತಲೆಯನ್ನು ಬೋಳಿಸಿ ಕುಲಗೋತ್ರ ನೆಲಗೆಡುವಂತೆ ವಲಗೇರಿಯಲ್ಲಿ ಹಲವು ಕೆಲಸಕ್ಕೆ ನೆಲಗೆಡಿಸುವೆನೇ ಹೊಲೆಮೂಳಿ ಕೊಡು ನಿನ್ನ ತಾಳಿ.

ಪದ

ಪತಿಯಲ್ಲ ನೀನು  ಸತಿಯಲ್ಲ ನಾನು  ಮತಿ
ಗೇಡಿ ಪೋಪೆನು ಪಿತನೂರಿಗಿನ್ನು ॥

ರಜಕಿ : ಯಲಾ ಅತಿ ದುರಾತ್ಮಕಾ, ಯನಗೆ ನೀನು ಪತಿಯಲ್ಲಾ ನಿನಗೆ ನಾನು ಸತಿಯಲ್ಲಾ. ಮತಿಗೇಡಿ ಮನುಷ್ಯನೇ ನಿನ್ನ ಮಾಂಗಲ್ಯವನ್ನು ತೆಗೆದುಕೋ. ಯನ್ನ ಪಿತನೂರಿಗೆ ಪೋಪೆನೋ ನಲ್ಲಾ  ಕೇಳೆಂನ್ನ ಸೊಲ್ಲಾ.

ರಜಕಿ ಪಿತ : ಹೇ ಮಗಳೇ, ಅಗಣಿತ ಸುಗುಣವುಳ್ಳವಳೇ ಅಳಿಯನ ಮಂದಿರವನ್ನೇ ಬಿಟ್ಟು ದುಗುಡದಿಂದ ವೋರ್ವಳೇ ಅಳುತ್ತಾ ಬಂದ ಕಾರಣವೇನು? ಜಗಳವಾಡಿಕೊಂಡು ಬಂದ ಹಾಗೆ ತೋರುವದಮ್ಮಾ  ಮಗಳೆ ಮಲ್ಲಿಗೇ ಹರಳೇ.

ರಜಕಿ : ಹೇ ಜನಕಾ, ನಾನೇನೆಂದು ಹೇಳಲಿ ಮನೆ ಬದುಕು ಹಾಳಾಗಿ ಹೋಗಲಿ. ಜನಕಂಟಕ ಯನ್ನ ಗಂಡನು ಮನಕೆ ಬಂದಂತೆ ದುರ್ಭಾಷೆಗಳಾಡಿ ಮುನಿಸಿಕೊಂಡು ಮನೆಯನ್ನು ಬಿಟ್ಟು ತೆರಳೆಂದು ವನಕೆಯಿಂದ ಬಡಿದನಾದ ಕಾರಣ ಮುನಿಸಿ ಬಂದೆನೈ ತಂದೆ ಗತಿಯೇನು ಮುಂದೆ.

ರಜಕಿ ಪಿತ : ಹೇ ಸುತೆಯೇ, ಮತಿಗೇಡಿ ಮನುಷ್ಯನು ಮಿತಿಗೊಂಡು ನಿನ್ನ ಬಡಿದರೆ  ಪ್ರತಿವಚನವಾಡದೇ ಸೈರಿಸಿಕೊಂಡು ಪತಿಯನುಮತದಿಂದ ಇರುವುದು ನಿನಗೆ ಯೋಗ್ಯವಲ್ಲದೇ ಹೀಗೆ ಬರುವುದು ನ್ಯಾಯವಲ್ಲಾ, ಆದರೂ ಚಿಂತೆಯಿಲ್ಲಾ. ನಿನ್ನ ಪತಿಗೆ ಸಮಾಧಾನವನ್ನು ಹೇಳಿ ಸಮ್ಮತಿಸಿ ಬಿಟ್ಟು ಬರುವೆ ಬಾರಮ್ಮಾ ಯನ್ನ ಕಟ್ಟಾಣಿಮಣಿಯೇ.

ಮಾವ : ಯಲೈ ಅಳಿಯನೆ, ನಿಲಯದ ಮಾತು ವಳಗಿರಬೇಕಲ್ಲದೇ ಇಳೆಯಲ್ಲಾ ಬೆಳಗುವ ರೀತಿ ಮಾಡಿದೆಯಲ್ಲಾ ಆದರೂ ಚಿಂತೆಯಿಲ್ಲ. ನಿನ್ನ ಸತಿಯಳನ್ನು ಜತನದಿಂದ ಕರೆದು ತಂದು ಇದ್ದೇನೆ ಖತಿಗೊಂಡು ಬಡಿದು ಘಾತಿಸದೆ ಹಿತದಿಂದ ಕೂಡಿ ಸಂರಕ್ಷಿಸಬೇಕೋ ಅಳಿಯಾ ನೀತಿಗಳ್ ನೀ ತಿಳಿಯಾ.

ಅಳಿಯ : ಹೇ ಮಾವ ತಿಳಿಯಿತು ನಿನ್ನ ಮಗಳ ಸ್ವಭಾವ. ರಾವಣಾಸುರನ ವಸತಿವರ್ತಿಯಲ್ಲಿ ಇದ್ದ ಸೀತಾದೇವಿಯನ್ನು ಕೂಡಿದ ರಾಮಚಂದ್ರನ ಹಾಗೆ ಅಗಲಿದ ಸತಿಯಳನ್ನ ಕೂಡಿ ಈ ಜಗದೊಳಗೆ ನಾನು ಅಪಕೀರ್ತಿಯನ್ನು ಪಡೆಯುವನಲ್ಲಾ. ಸರ್ವಥಾ ಈ ನಲ್ಲೆಯನ್ನು ನಾನೊಲ್ಲೆನೈ ಮಾವಾ ಬಿಡು ಬಿಡು ಮನದ ಭಾವ.

ಮಾವ : ಹಾಗಾದರೆ ನಾನು ಪೋಗಿ ಬರುತ್ತೇನೈ ಅಳಿಯಾ.

ಅಳಿಯ : ಅಗತ್ಯವಾಗಿ ನಿಮ್ಮ ಮಗಳನ್ನು ಈಗಲೇ ಕರೆದುಕೊಂಡು ಪೋಗಬಹುದೈ ಮಾವ ತಿಳಿಯಿತು ನಿನ್ನ ಸ್ವಭಾವ.

ಪದ

ಸ್ವಾಮಿ ಪರಾಕು  ಪ್ರೇಮಿ ಪರಾಕು  ಭೂಮಿ
ಪಾಲಕ ರಘುರಾಮ ಪರಾಕು ॥

ಹತ್ತವತಾರಾ  ಯೆತ್ತಿದಾ ಧೀರಾ  ಬೆತ್ತಲೆ
ನಿಂತಿದ್ದ   ಬೌದ್ದಾವತಾರ ॥ಆದಿಯೊಳೊಂ
ದು  ವೇದವ ತಂದು  ಮೇಧಿನಿಯನು ಕಾದೆಯ
ಹೇ ದಯಾ ಸಿಂಧು ॥ಕ್ಷೋಣಿಗಧೀಕ್ಷ ದ್ರೋ
ಣಪುರೀಷ  ಪ್ರಾಣಸಖನೇ ಚಕ್ರಪ್ರಾಣಿ ಲಕ್ಷ್ಮೀಶ ॥

ಚಾರ : ಇದೋ ಚರಣಾರವಿಂದಗಳಿಗೆ  ಶಿರಬಾಗಿ ವಂದನೆ ಮಾಡುವೆನು ಸ್ವಾಮಿ ಶ್ರೀ ರಾಮಚಂದ್ರ ಮೂರ್ತಿಯೇ.

ರಾಮ : ಯಲೈ ಚಾರಕುಲ ಶಿಖಾಮಣಿಯೇ, ಈ ಪುರದೊಳಗೆ ಧಾರಾದರು ಯನ್ನ ತರಣೀಕುಲದ. ವಂಶಾವಳಿಯನ್ನು ಜರಿದು ನಿಂದಿಸಿದ ಪರಿಗಳನ್ನು ಅರಿತವನಾಗಿದ್ದರೆ ಮಾಜದೆ ರಭಸದಿಂ ಪೇಳುವಂಥವನಾಗೈ ಚಾರನೇ ಚಾರರೋಳ್ ಮಹಾಶೂರನೇ.

ಚಾರ : ಹೇ ದೇವ ಮಹಾನುಭಾವ, ಭೂವಲಯವನ್ನು ತೀವಿ ಬೆಳಗುವ ದಿನೇಶಂಗೆ ಕಾವಳ ಕವಿದಂತೆ ಅಜ್ಞಾನಿಗಳಾಡಿದ ನುಡಿಗಳನ್ನು ಉಸುರಲಂಜುವೆನು ಮನ್ನಿಸಿ ಕಾಯಬೇಕೈ ಮಹಾಪ್ರಭು.

ರಾಮ : ಯಲೈ ಚಾರನೇ, ಸೂರ‌್ಯನಿಗೆ ಕಾವಳ ಕವಿಯುವುದುಂಟೇ? ನಿನ್ನ ವಚನದಲ್ಲಿ ಯೇನೋ ಕಪಟವಿದೆ. ಅಂಜಬೇಡ ನಿನಗೆ ಅಭಯವನ್ನು ಕೊಡುವೆನು. ಅದರ ವಿಚಾರವನ್ನು ಮರಮಾಚದೇ ವಿಸ್ತರಿಸೋ ಚಾರನೇ ಚಾರರೋಳ್ ಮಹಾಶೂರನೇ.

ಕಂದ

ಈರೇಳು ಭುವನಕ್ಕೆಲ್ಲಮಂ  ನಾರಾಯಣ
ಮೂರ್ತಿ ನೀನು  ಕರ್ತನು ಯನುತ  ಸಾರುತಿ
ದೇ  ಚಾರುವೇದವು  ಧಾರುಣಿಯೋಳ್  ನಿಮ್ಮ
ಭಜಿಪ ನರರು  ಕೃತಾರ್ಥರೂ ॥

ಚಾರ : ಹೇ ದೇವ, ನೀವು ಈರೇಳು ಲೋಕಕ್ಕೆ ಕಾರಣಕರ್ತರಾದ ಮಧುಸೂಧನನೆನ್ನುವ ತಮ್ಮ ನಾಮಾಂಕಿತವನ್ನು ಪೊಗಳುವ ಮನುಜರು ಧನ್ಯರಾಗುವರು. ಅರಿಯದ ಮೂಢರು ತಮ್ಮನ್ನೆ ದೂರು ಮಾಡುವರಾದ ಕಾರಣ ಹೇ ಸ್ವಾಮಿ, ಈ ಪುರದ ರಜಕನು ಕೋಪಗೊಂಡು ತನ್ನ ಮಡದಿಯನ್ನು ಹೊಡೆಯಲಾಗಿ ಮುನಿಸಿಕೊಂಡು ತೌರೂರಿಗೆ ಸೇರಲಾಗಿ ಪಿತನಾದವನು ಮಗಳಿಗೆ ಬುದ್ದಿಗಳಂ ಪೇಳಿ ಕರತಂದು ಅಳಿಯನಿಗೆ ತಿಳುಹಲಾಗಿ ಆ ದುರುಳ ರಜಕನು ಕೇಳದೇ ಮರುಳು ಬುದ್ದಿಯಿಂದ ದಶಕಂಠನ ವಶವರ್ತಿಯಲ್ಲಿದ್ದ ಬಿಸುಜಾಕ್ಷಿ ಸೀತೆಯನ್ನು ಕೂಡಿದ ರಾಮಚಂದ್ರನ ಹಾಗೆ ಅಗಲಿದ ಸತಿಯನ್ನು ನಾನು ಕೂಡಿ ಈ ಜಗದೊಳಗೆ ಅಪಯಶಸ್ಸನ್ನು ಪಡೆಯುವನಲ್ಲಾ. ಸರ್ವದಾ ಈ ನಲ್ಲೆಯಾ ನಾನೊಲ್ಲೆನೆಂದು ಖೂಳ ರಜಕನು ನುಡಿದನಾದ ಕಾರಣ ಆ ನುಡಿಗಳನ್ನು ದೇವರ ಚಿತ್ತದಲ್ಲಿ  ಇರಿಸಲಾಗದು. ಅಪ್ಪಣೆಯಾದರೆ ಪೋಗಿ ಬರುತ್ತೇನೈ ಮಹಾಪ್ರಭು.

ರಾಮ : ತೆರಳಬಹುದೈ ಚಾರನೇ  ಚಾರರೋಳ್ ಮಹಾಶೂರನೇ ॥

ಕಂದ

ಕೇಳಿದಿರೇನೈ ಸಭಾ ಜನರೇ  ಈ ಪ್ರಕಾರ ಮಾಗಿ
ರಾಮನು ದೂತನಾಡಿದ ಮಾತುಗಳಂ ಕೇಳಿ
ಬಂಧನಕೊಳಗಾದ  ಮತ್ತಗಜದಂತೆ  ನಿಜಶಿ
ರವನೊಲಿದು  ಮೂಗಿನ ಮೇಲೆ ಬೆರಳಿಟ್ಟು
ಮೌನದಿಂ ನಿಂತು  ಬೆರಗಾಗಿ ಚಿತ್ತದೋಳ್ ನೊಂದು
ವುತ್ತವ ಪೊಗುವ ಹಾವಿನಂತೆ  ಅಂತಃಪು
ರವಂ ಸಾರ್ದು  ಚಿಂತಿಸುತ್ತಿರಲೂ  ಇತ್ತಾ ಭರತ
ಲಕ್ಷ್ಮಣಾದಿಗಳು  ಈ ವಾರ್ತೆಯನ್ನರಿತು
ಅಣ್ಣನಂ ಕಾಣಲೋಸುಗ  ಬಂದರಾಗಾ ॥

ಪದ

ಕೇಳಾಲಾರೆ ಜನರಾ ನಿಂದೆಯನೂ  ಬಾಳು
ವ್ಯರ್ಥವಾಯಿತು  ಪೇಳಲೇನು ॥

ಸ್ತ್ರೀ ವನಿತೆಯರ  ರಮಣನೆಂದೆನಿಸೀ
ದೇವಾಸುರನರರೊಳು ಕೀರ್ತವಹಿಸೀ
ಕೋವಿದಸುರನಾ  ಕುಲಸಂಹರಿಸೀ
ಭಾಮೆ ಸೀತೆಯ  ಮನದಿಷ್ಠ ಸಲಿಸೀ ॥

ರಾಮ : ಅಯ್ಯೋ ಶಿವ ಶಿವ, ಕಾಲವಿಜಯಶೂಲಿ ಪ್ರತ್ಯವಿಜಯಪಾಲ ಲೋಚನಾ ಪಾರ್ವತೀ ಪ್ರಿಯಾ ನಿನ್ನ ಪ್ರಾಣ ಸಖನಾದ ಯನಗೆ ಯೇನು ಅಪಕೀರ್ತಿಯನ್ನು ತಂದು ವೊಡ್ಡಿದೆಯೋ ಯೇಣಾಂಕಧರನೇ. ಅಯ್ಯೋ ವಿಧಿಯೇ, ದುಷ್ಠ ರಜಕನಿಂದ ಪೊಂದಬಾರದ ಅಪನಿಂದ್ಯವನ್ನು ಹೊಂದಬೇಕಾಯಿತೇ. ಮಂದಮತಿ ಜನರು ಮುಕುಂದನ ಬಾಳು ರಜಕನಿಗೆ ಇಂದಾಯಿತೆಂದು ಅಂದುಕೊಳ್ಳುವರಾದ ಕಾರಣಾ ಯನ್ನ ಬಾಳು ವ್ಯರ್ಥವಾಯಿತೇ ಗೌರೀಪತೇ.

ಪದ

ಕೊಂದು ಅಸುರನಾ  ಸೀತೆಯ ತರಲೂ  ವಂ
ದು ಸಂಶಯಾ  ಬೃಂದಾವಂದಿಸಲೋ ॥ಸುಂದರಿ
ಯಳಗ್ನಿಯೊಳ್ ಪರೀಕ್ಷಿಸಲೋ  ಬಂದು ಸು
ರಕುಲ  ಬೃಂದಾವಂದಿಸಲೂ ॥

ರಾಮ : ಅಯ್ಯೋ ಇಂಧುಧರ ಮಿತ್ರ, ಹಿಂದೆ ತಂದೆಯಾಜ್ಞೆಯಿಂದ ವನವಾಸ ಪ್ರಾಪ್ತವಾಗಿ ಕಿಷ್ಕಿಂಧೆಯಲ್ಲಿ ಅರವಿಂದ ಮಿತ್ರ ಸಂಭವಾದಿ ಕಪಿಸೇನೆ ಬೃಂದದೊಡನೆ ಲೆಂಕೆಗೆ ತೆರಳಿ ಮಂದಮತಿ ದಾನವನ ಕೊಂದು ಭೂನಂದನೆಯನ್ನು ತಂದು ವಂದುಗೂಡುವುದಕ್ಕೆ ಸಂದೇಹಚಿತ್ತನಾಗಿ  ಸುಂದರಿಯನ್ನು ಕೂಡದೇ ಪಾವಕನ ಮುಖದಿಂ ಪರೀಕ್ಷಿಸಿದ ವ್ಯಾಳೆಯಲ್ಲಿ ಭೃಂದಾದಕರು ಬಂದು ಸಂದೇಹಿಸದಿರೆಂದು ವಂದಿಸಿ ಪೋಗಲು, ಅಂದಿನಿಂದ ಮನಸ್ಸಿನ ಕಲಾಪವಂ ಬಿಟ್ಟು ವಂದುಗೂಡಿ ಚಂದದಿಂದಿದ್ದರು ಇಂದು ಈ ಪುರದ ಖೂಳ ರಜಕನ ನಿಂದಿಸಿದ ನುಡಿಯನ್ನು ಕೇಳಬೇಕಾಯಿತೆ ದೇವಾ ಇದು ನಿನ್ನ ಪ್ರಭಾವ.

ಪದ

ಅಗಸ ನಿಂದ್ಯವಾ ಮಾಡಿದಾ ಯನಗೆ  ಮು
ಸುಕಿತು ಅಪಕೀರ್ತಿ ಮೂಲೋಕದೊಳಗೇ ॥
ಶಶಿಮುಖಿಯಳ ಕಳುಹುವೆ ದೊಡ್ಡ ಮಲೆಗೆ
ಭಸಿತಧರ ಚಿಂತೆ  ಪರಿಹರಿಸಲೆನಗೆ ॥

ರಾಮ : ಅಯ್ಯ ಶಶಿಧರಾ  ನಸುಮಾಸಿದ  ವಸ್ತ್ರಗಳನ್ನು ತೊಳೆದು  ಜೀವಿಸುವ ಪಿಸುಣ  ರಜಕನಿಂದ ತ್ರಿಲೋಕಗಳಲ್ಲಿ  ಅಪಕೀರ್ತಿ  ಮುಸುಕಿತಾದ ಕಾರಣ  ನಿನ್ನ ಹೆಸರಿನ ಮೇಲೆ  ವಸುಧಾ ಸುತೆಯಳನ್ನು ಅಸಮಕಾನನಕ್ಕೆ ವಶವರ್ತಿ ಮಾಡುತ್ತೇನೆ  ಕುಸುಮ ಗಂಧಿನಿಯನ್ನು  ನೀನೇ ಕಾಯಬೇಕೋ  ಶಶಿಧರ ಶಿವನೆ ಶುಭಕರನೇ ॥

 

(ಭರತ ಶತ್ರುಘ್ನರು ಬರುವಿಕೆ)

ತ್ರಿಪುಡೆ

ತರಣಿ ಕುಲಘನ ಸಾರ್ವಭೌಮರು
ಭರತ ಲಕ್ಷ್ಮಣ ಶತ್ರುಘ್ನರುಗಳು  ಮರುಗುತಿಹ
ಶ್ರೀರಾಮಚಂದ್ರನಾ  ಪರಿಯ ತಿಳಿದಾಗಾ ॥
ಪೊಕ್ಕರಂತಃಪುರ ವಿಭವದೊಳು  ಬಿಕ್ಕಿ
ಬಿರಿಬಿರಿದಳುತ ಮಲಗಿಹ  ರಕ್ಕಸಾರಿಯ ಕಾ
ಣುತಲೇ  ಪಾದಕೇ ನಮಿಸೀ  ॥
ಪೊಡವಿ ಪ್ರಕಟನ ಪುರವ ಪಾಲಿಪ  ಮೃಢನ ಸಖನೆ
ದುಗುಡದೊಳಿರೇ ನುಡಿಸಲಾರದೆ  ನಮಿಸಿ
ನಿಂದರು  ತೊಡೆದು  ಕಣ್ಣೀರಾ ॥

ಭರತ : ಇದೇ ಸಿರಿ ಸಾಷ್ಠಾಂಗ ಬಿನ್ನಪಂಗಳೈ ಅಣ್ಣ

ರಾಮ : ಧೀರ್ಘಾಯುಷ್ಯಮಸ್ತು  ಬಾರಪ್ಪ ತಮ್ಮಾ ಭರತ.

ಲಕ್ಷ್ಮಣ : ಸಿರಸಾಷ್ಟಾಂಗ ಬಿನ್ನಪ ಮಾಡುವೆನೈ ಅಗ್ರಜಾ.

ರಾಮ : ಚಿರಂಜೀವಿಯಾಗಿ ಬಾಳಪ್ಪ ತಮ್ಮಾ ಲಕ್ಷ್ಮಣಾ.

ಶತ್ರುಘ್ನ : ನಮೋ ನಮೋ ಅಣ್ಣಯ್ಯ ರಾಘವೇಂದ್ರ.

ರಾಮ : ಧೀರ್ಘಾಯಸ್ಸು ಐಶ್ವರ‌್ಯಾಭಿವೃದ್ಧಿರಸ್ತು ಬಾರಪ್ಪಾ ಶತ್ರುಘ್ನ ॥