(ವರುಣದೂತನ ಆಗಮನ)

ಕಂದಪದ್ಯಗೌಳ

ಗುರುವರ‌್ಯನೆ ಬಿನ್ನಪವಿದೇ  ವರುಣಾ
ಲಯದಲಿ  ಯಾಗಕಾರ‌್ಯ ನಿಮಿತ್ಯಂ  ಬರ
ಬೇಕು  ನೀವು ಯಮ್ಮಯ  ಅರಸನು
ಲೇಖನವನಿತ್ತು ಕಳುಹಿಸಿದನೀಗಂ ॥

ವರುಣದೂತ : ಹೇ ಗುರು ಕುಲಶಿಖಾಮಣಿಯೇ. ನಮ್ಮ ದೊರೆಯಾದ ವರುಣ ದೇವರು ಯಾಗ ನಿಮಿತ್ಯ ನಿಮ್ಮನ್ನು ಕರೆತರುವದೆಂದು ಪೇಳಿ ಕರದಲ್ಲಿ ಪತ್ರಿಕೆಯನ್ನು ಕೊಟ್ಟು ಕಳುಹಿಸಿ ಇದ್ದಾರೆ ಚರಣಕ್ಕೆ ವಪ್ಪಿಸಿಕೊಂಡು ತ್ವರಿತಮಾಗಿ ಬರಬೇಕೈ ಸ್ವಾಮಿ ಶರಣಾಗತ ಪ್ರೇಮಿ.

ವಾಲ್ಮೀಕಿ  : ಹೇ ಚಾರನೇ, ವರುಣದೇವರು  ಕರೆಸಿದ ಬಳಿಕ ಇರುವದುಂಟೆ. ಪರಮ ಸಂತೋಷವಾದ ವಾರ್ತೆಯನ್ನು ಬರೆಯಿಸಿದ್ದಾನಾದ ಕಾರಣ ತ್ವರಿತದಲ್ಲಿಯೇ ತೆರಳಿ ಬರುತ್ತೇವೆ. ವರತಾಂಬೂಲವನ್ನು ತೆಗೆದುಕೊಂಡು ತೆರಳುವಂಥವನಾಗೋ ಚಾರನೇ ಚಾರರೋಳ್ ಶೂರನೇ.

ವಾಲ್ಮೀಕಿ : ಯಲೈ ಸೀತಾ ಕುಮಾರಕರೇ, ಮಾತೆಯ ನುಡಿಗಳನ್ನು ಮೀರದೇ ಜೊತೆಯ ಹುಡುಗರೊಡನೆ ಕ್ಯಾತೆ ಪೌರುಷಗಳಿಗೆ ಹೋಗದೆ ನೀತಿ ಶಾಸ್ತ್ರಗಳ ಪಠಿಸಿಕೊಂಡು ಪ್ರೀತಿಯಿಂದ ಇರುವಂಥವರಾಗಿರಿ. ಯಾಗ ನಿಮಿತ್ಯವಾಗಿ ನಾವು ವರುಣಲೋಕಕ್ಕೆ ಪೋಗಿ ಬರುತ್ತೇವೈಯ್ಯ ಕುಶಲವ ಕುಮಾರರೇ.

ಕುಶಲ : ದಯಮಾಡಿಸಿ ಬರಬಹುದೈ ಸ್ವಾಮಿ ಗುರು ಕುಲಶಿಖಾಮಣಿಯೇ.

ಭಾಗವತರ ಕಂದ

ಅತ್ತಂ ಕುಶಲವರಿರುತಿರ  ಲಿತ್ತಂ ಲಕ್ಷ್ಮಣ
ಅಯೋಧ್ಯ ಪುರಕೈತಂದು  ಅಣ್ಣಗೆ ಭೂ
ಪುತ್ರಿಯ  ವೃತ್ತಾಂತವೆಲ್ಲವ ಪೇಳ್ದಕಂ ॥

ಕಂದಗೌಳ

ವಂದನೈ ಅಗ್ರಜಾ  ಭೂ ನಂದನೆಯನು
ಬಿಟ್ಟು ಬಂದೆನು ಘೋರಡವಿಯೊಳು  ಸಂದಿ
ತೇ  ನಿಮ್ಮಯ ಪಂಥವೂ  ಚಂದಿರಮುಖಿ ರಾಮ
ರಕ್ಷಿಸೆಂದು ಅಳುತಿಹಳು ॥

ಲಕ್ಷ್ಮಣ : ನಮೋ ನಮೋ ಅಣ್ಣ ದಾನವಾಂತಕ, ನೀನು ಪೇಳಿದ ಪ್ರಕಾರ ಜಾನಕೀದೇವಿಯನ್ನು ಕರೆದುಕೊಂಡು ಪೋಗಿ ಭಾನು ರಸ್ತೆಗಳನ್ನು ಕಾಣದಂತಿರುವ ಕಾನನ ಮಧ್ಯ ಪ್ರದೇಶದೊಳ್ ಬಿಟ್ಟು ಹೊರಟು ಬಂದೆನು. ಆ ಮಾನವತಿಯಾದ ಮಾನಿನಿಯು ಮಾನಸದಲ್ಲಿ ಆಲಾಪವಿಟ್ಟು ಶ್ರೀ ರಾಮ ರಕ್ಷಿಸೆಂದು ಆಲಾಪಿಸುತ್ತಿರುವಳಪ್ಪಾ ಅಣ್ಣ, ನಾನಾಗಿ ಅಡವಿಪಾಲು ಮಾಡಿದೆನಲ್ಲಪ್ಪಾ  ಅಣ್ಣಯ್ಯ.

ಪದ

ಯೇನಾ ಪೇಳ್ದಳು ವನದೀ  ಲಕ್ಷ್ಮಣ
ನಿನ್ನೊಳ್  ಆ ನಾಗವೇಣಿ ಸೀತೇ  ॥
ಮಾನಸದೊಳು ಚಿಂತೆಗೈದಳೋ ಸುಯ್‌ದಳೋ
ತಾ ನೊಂದುಕೊಂಡಳೇನೋ ॥
ಪಾಪಿ ರಜಕನಾಡಿದಾ  ದುರ್‌ನುಡಿಗಳಿಗೆ
ಆ ಪತಿವ್ರತೆಯಳನ್ನ  ತಾಪಾಪಡಿಸಿ ಬಂದೆ
ಜರಿದು ವನಕೆ ನೂಕಿ  ನಾ ಪಾಪಕೆ ವಳಗಾದೆನೋ ॥

ರಾಮ : ಅಪ್ಪಾ ತಮ್ಮಾ, ಕಾನನದಲ್ಲಿ ಜಾನಕಿ ನಿನ್ನೊಡನೆ ಯೇನೆಂದು ಪೇಳಿದಳು. ಆ ಮಾನವತಿ ಯನ್ನೇನಾದರು ಹೀನಾಯ ಮಾಡಿದಳೋ, ಪನ್ನಗವೇಣಿ ತನ್ನ ಮಾನಸದಲ್ಲಿ ತಾನೇನೆಂದುಕೊಂಡು  ಚಿಂತೆಗೈದು ಸುಯ್ದುಕೊಂಡಳೋ, ಕಾಂತಾರದಲ್ಲಿ ಕಾಂತೆಯ ಗತಿಯೇನು ಮಾಡಿ ಬಂದೆಯಪ್ಪಾ ಲಕ್ಷ್ಮಣಾ.

ಪದ

ಲೋಕಾಪವಾದಕಿನ್ನು  ಆರಣ್ಯಕ್ಕೆ  ಆ ಕಮ
ಲಾಕ್ಷಿಯನ್ನ  ನೂಕಬೇಕಾಯಿತು  ಕೀಕಾ
ರಣ್ಯದೊಳೆಷ್ಠು  ಶೋಕಾರ್ತಿಯಾಗಿಹಳೋ॥

ರಾಮ : ಹೇ ತಮ್ಮಾ ಲಕ್ಷ್ಮಣ, ಲೋಕದ ಅಪವಾದಗಳನ್ನು ಸೈರಿಸಲಾರದೇ ಆ ಕಮಲಾಕ್ಷಿಯನ್ನ  ಜೀಯೆಂಬೊ ಮಲೆಗೆ ನೂಕಬೇಕಾಗಿ ಬಂತು. ರಾಗಸುಧಾಕರ ಬಿಂಬವದನೆಯನ್ನು ನಾ ಕಳೆದುಕೊಂಡು ಅವಿವೇಕಿಯಾದೆನಲ್ಲಾ. ಕೀಕಾರಣ್ಯದೊಳಗೆ ಯೇನು ಗತಿಯಾದಳೊ ತಿಳಿಯಲಿಲ್ಲ. ನಾಗವೇಣಿಯ ಕಷ್ಠವನ್ನು ಶ್ರೀಕಂಠನೇ ಬಲ್ಲಾ ಯನ್ನ  ನೆನೆನೆನೆದು ಎಷ್ಠು ಶೋಕಾರ್ತಿಯಾಗಿಹಳೋ ನಾ ಕಾಣೆನಪ್ಪಾ ತಮ್ಮಾ ಇದು ನಮ್ಮ ಕರ್ಮ.

ಪದ

ಕಾಡಿನೊಳಿರಲಾರದೇ  ರೋದಿಸಿದರೇ
ಕೂಡಲೇ ಕರತರದೇ  ಮಾಡಿದೆ ಸತಿಯಳಾ
ಮೃಗಗಳ ಪಾಲನೂ  ರೂಢೀಶ ಮೆಚ್ಚನೂ ॥

ರಾಮ : ಅಯ್ಯ ಸೌಮಿತ್ರಿ, ಕಾಡಿನಲ್ಲಿ ವೋರ್ವಳೇ ಇರಲಾರದೆ ಬಾಡಿಬಳಲಿ ಬಾಯಾರಿ ನಿನ್ನ ಬೇಡಿಕೊಂಡರೆ ಕರಗೂಡಿ ಕೂಡಲೇ ಕರೆದುಕೊಂಡು ಬಾರದೆ ರೂಢಿಜಾತೆ ದುಃಖಿಸುವುದ ಕಣ್ಣಾರೆ ಕಂಡು ನಿಷ್ಕರುಣಿಯಾಗಿ ಕಾಡುಮೃಗಗಳ ಬಾಯಿಗೆ ಈಡು ಮಾಡಿದೆಯೇನಪ್ಪಾ ತಮ್ಮಾ ರೂಢಿಗೀಶನಾದ ಗಂಗಾಧರೇಶನು ನಿನ್ನ ಕೇಡು ಕೃತ್ಯಗಳನ್ನು ನೋಡಿ ಸರ್ವಥಾ ಮೆಚ್ಚಲಾರನಪ್ಪಾ ಲಕ್ಷ್ಮಣ.

ಲಕ್ಷ್ಮಣ : ಅಣ್ಣ ಶ್ರೀರಾಮಚಂದ್ರ, ನೀನಾಗಿ ನೀನು ಮುಷ್ಕರವಿಡಿದು ಮಾಡಿದ ಕಾರ‌್ಯಕ್ಕೆ ನಾನೇನು ಮಾಡಲಪ್ಪ ಅಗ್ರಜಾ ಸದ್ಗುಣ ತೇಜ.

ದ್ವಿಪದೆಮುಖಾರಿ

ಅಯ್ಯ ಜಾನಕಿ  ನಿನ್ನನ್ನು  ಬಹು
ವಿಧದಿ ಕೈಯ್ಯರಾ  ವನಕೀಗ ಕಳಹುವಂ
ತಾಯಿತೇ  ಅಯ್ಯೋ ಚಂಪಕಮಾಲೆ
ಅತಿಗುಣಶೀಲೆ ಅಯ್ಯ ಸ್ಮರನರಗಿಣಿಯೇ
ಅಯ್ಯೋ ಕುಲಸತಿಯೇ  ಅಯ್ಯೋ ಸದ್ಗುಣವ
ತಿಯೇ  ಅಯ್ಯೋ ಪತಿವ್ರತೆಯೇ  ಕಾಗೆ
ಹಿಂಡಿನೋಳ್  ಕೋಗಿಲೆ ಸೇರಿದಂತೆ  ನಾಗವೇ
ಣಿಯೇ  ವನದೊಳಗಿರುವೆಯ ರಮಣಿ
ಹ್ಯಾಗೆ ಮರೆಯಲಿ ನಿನ್ನ  ಹೇ ರಾಜವದನೇ  ಹೀಗಾ
ಯಿತೇ  ನಿನ್ನ ಗತಿ ಭೂಜಾತೆ ॥

ರಾಮ : ಅಪ್ಪಾ ತಮ್ಮಾ, ನಾನು ದಾನವನಾದ ರಾವಣನಂ ವಧಿಸಲಾಗಿ ನ್ಯೂನವಿಲ್ಲದೆ ಬ್ರಹ್ಮಹತ್ಯಪಾತಕವೆನಗೆ ಸಂಘಟಿಸಿ ಜಾನಕಿಯನ್ನು ಕಾನನಕ್ಕೆ ಪೊರಮಡಿಸಿದಂತಾಯಿತು. ನಾನು ಇದರ ವಿಮೋಚನಾರ್ಥವಾಗಿ ಯಾಗವನ್ನು ಮಾಡಬೇಕಾದ ಪ್ರಯುಕ್ತ ಯಮ್ಮ ಗುರುಗಳಾದ ವಸಿಷ್ಠರನ್ನು ಜಾಗ್ರತೆಯಿಂದ ಕರೆಸುವಂಥವನಾಗಪ್ಪ ತಮ್ಮಾ.

ಲಕ್ಷ್ಮಣ : ಯಲೈ ಸಾರಥಿ  ಜಾಗ್ರತೆ ಇಂದ ಪೋಗಿ  ಯಮ್ಮ ಗುರುಗಳಾದ  ವಸಿಷ್ಠರನ್ನು ಕರೆದುಕೊಂಡು ಬರುವಂಥವನಾಗೆಲಾ ಸಾರಥಿ ॥

ಪದ

ಮಂದರಗಿರಿಧರ ಹರಿಯೇ  ಕೃಪೆಯಿಂದ
ಪಾಲಿಸಬೇಕೋ ದೊರೆಯೇ ॥ಇಂದಿರಪತಿ
ವಿಜಯಸಖ  ಅರವಿಂದನಾಭ ಮುಕುಂದನೆ ॥
ನಂದನಂದನಾ ಕಂದಾ ಶ್ರೀ ಗೋವಿಂದ ॥ಸುರಕುಲ
ಭೃತ್ಯವಂದನೇ  ವಾರಿಜನಯನ ಮಾಧವನೆ
ಕಾಯೋ ಕಾರುಣ್ಯನಿಧಿ ರಾಧಾಪ್ರಿಯನೇ
ಕ್ಷೀರವಾರುಧಿಶಯನಾ  ಶಾಂತಾಕಾರ ವಿವಿಧ
ವಿಚಾರನೇ   ಮಾರ ಮಿತ ಸುಗುಣ
ಹಾರ  ಸಾರಸಕಾರ ರಿಪು ಸಂಹಾರನೇ
ಮಂದರಗಿರಿಧರ ಹರಿಯೇ ॥
ಮಂಗಳಾತ್ಮಕ ತ್ರಿಪುರಸಂಹಾರನೇ ॥

ರಾಮ : ಇದೇ ಶಿರಸಾಷ್ಠಾಂಗ ಬಿನ್ನಹಂಗಳು ಸ್ವಾಮಿ  ಶ್ರೇಷ್ಠ ಗುರು ವಸಿಷ್ಠರೆ  ಯಿಷ್ಠ ಕಾಮ್ಯದಾತರೆ॥

ವಸಿಷ್ಠ : ಶ್ರೀರಸ್ತು ಶುಭಮಸ್ತು  ಸಕಲೈಶ್ವರ‌್ಯಮಸ್ತು  ವಸ್ತು ವಾಹನ  ಧನಕನಕ  ಅಭಿವೃದ್ಧಿಯಾಗಲೈ ರಾಮ  ಘನಸಾರ್ವಭೌಮ ॥

ವಸಿಷ್ಠ : ಅಯ್ಯ ಕಾಮಜನಕನಾದ  ರಾಮಚಂದ್ರನೇ ಕೇಳು. ಯನ್ನಿಷ್ಟು ಜಾಗ್ರತೆ ಇಂದ  ಕರೆಸಿದ ಕಾರ‌್ಯಾರ್ಥವೇನು  ತೀವ್ರದಿಂದ ಪೇಳುವಂಥವನಾಗೈ ರಾಜ ಮಾರ್ತಾಂಡತೇಜ ॥

ಪದ

ಗುರುವರೇಣ್ಯ  ಲಾಲಿಸೈಯ್ಯ  ಪರಿಯ
ನೆಲ್ಲವಾ  ವರೆಯುವೆ  ಮರೆಮಾಜದಂತೆ
ಕರುಣಿಸೋ ದೇವಾ ॥ರಾವಣನ ಕೊಲ್ಲಲು ಯನಗೆ
ಬ್ರಹ್ಮತ್ಯವು  ಆವರಿಸಿ ಕಾಡು
ತಿಹುದು ॥ದೇವ ನಿತ್ಯವೊ ॥

ರಾಮ : ಸ್ವಾಮಿ ಗುರುವರೇಣ್ಯರೇ, ಕರುಣವಿಟ್ಟು ಲಾಲಿಸುವಂಥವರಾಗಬೇಕು. ಹರಿಹರ ಸುರಾದಿಗಳನ್ನು ಕೂಡ ಗಣನೆಗೆ ತಾರದೇ ಪರಿಭಂಗಿಸುತ್ತಾ ಯನಗೆ ಸರಿ ಇಲ್ಲವೆಂದು ಮೆರೆಯುತ್ತಿದ್ದ ಲಂಕಾಧ್ಯಕ್ಷನ ಸಂಹರಿಸಿದ್ದರಿಂದ ಬ್ರಹ್ಮತ್ಯ ಪಾತಕವೆನಗೆ ಸಂಘಟಿಸಿ ಕಾಡುತ್ತಿರುವದೈಯ್ಯ ಮುನಿಪತಿ ಮುಂದೇನುಗತಿ.

ಪದ

ಸುಮ್ಮನೀಗ ಪೋಗುತಿಹುದೆ  ಬ್ರಹ್ಮಹತ್ಯವೂ
ಯಮಗಿಂಗದೈದ ಕಾರ‌್ಯ  ನಿಮ್ಮ ಚಿತ್ತವೂ ॥
ಸುಮ್ಮನೀಗ ಪೋಗುತಿಹುದೆ ॥

ವಸಿಷ್ಠ : ಹೇ ಕಮ್ಮಗೋಲ ಪಿತನೇ  ಹಮ್ಮು ಹೆಮ್ಮೆ ಪರಾಕ್ರಮಗಳಿಂದ  ಮಾಡಿದಂಥ  ಬ್ರಹ್ಮಹತ್ಯ ಪಾತಕವು  ಸುಮ್ಮನೇ ಪೋಗುವದಿಲ್ಲ  ಗಮ್ಮನೇ ಇದಕ್ಕೆ ತಕ್ಕ ಶಾಂತಿಯನ್ನು  ಮಾಡಿದರೇ  ವಿಮುಖವಾಗಿ ತೊಲಗುವದೈಯ್ಯ ರಾಮ  ನೀ ತಿಳಿ ಸಾರ್ವಭೌಮ ॥

ಪದ

ಕೃತ ಮಾಡಲೆಣಿಸಿ ಇಹೆನು  ಯತಿವರೇ
ಣ್ಯನೆ  ಮುದದಿಂದ ಪೂರ್ತಿಗೊಳಿಸೀಗ
ವ್ರತವ ದೇವನೆ  ಗುರುವರೇಣ್ಯನೆ ॥

ರಾಮ : ಸ್ವಾಮಿ ಯತಿ ಮಹಾತ್ಮರೆ, ಅತಿ ದುರಾತ್ಮಕನಾದ ರಾವಣನ ಗತಿಸಿದ ಬ್ರಹ್ಮಹತ್ಯ ಪಾತಕವು ಕ್ಷಿತಿಯೋಳ್ ಹರಿಹರಾರ್ತಕಮಾಗಿ ಕೃತವಂ ಮಾಡಲೆತ್ನಿಸಿ ನಿಮ್ಮನ್ನು ಕರೆಯಿಸಿದ್ದೇನೆ. ಮತಿಯಲ್ಲಿ ತಂದು ವ್ರತವನ್ನು ಸಾಂಗಪಡಿಸಿ ತೆರಳಬೇಕೈ ಮುನಿಪ ಕರುಣ ಕಲಾಪ.

ಪದ

ನಡಿಸಲಾಗದೀಗ ಕೃತವ ಮಡದಿ ಇಲ್ಲದೇ ॥
ಪಿಡಿಯಬ್ಯಾಡ ವ್ರತವ ರಾಮ  ನಡತೆ ತಿಳಿ
ಯದೇ ॥ಸುಮ್ಮನೀಗ ಪೋಗುತಿಹುದೆ ॥

ವಸಿಷ್ಠ : ಅಯ್ಯ ಪೊಡವಿ ಪಾಲಕ, ಮಡದಿಯಿಲ್ಲದೆ ದೀಕ್ಷಿತನಾಗಿ ಯಜ್ಞಾದಿ ಕೃತ್ಯಗಳನ್ನು ನಡೆಸಬಾರದು. ಜಡಮತಿಯರ ಹಾಗೆ ನೀನು ನಡತೆ ತಿಳಿದವನೇನೈಯ್ಯ ರಾಮ ಬಿಡು ಯೀ ಪ್ರೇಮ.

ಪದ

ಹೇಮದಲ್ಲಿ ನಿರ್ಮಿಸುವೆನು  ಭೂಮಿ
ಜಾತೆಯ  ತಾಮಸಕ್ಕೆ ಪಾಲಿಸೆನಗೆ
ಸ್ವಾಮಿ ದೀಕ್ಷೆಯಾ ॥ಗುರುವರೇಣ್ಯ ॥

ರಾಮ : ಹೇ ಸ್ವಾಮಿ ರುಷಿವರ‌್ಯರೇ, ಹೇಮ ನಿರ್ಮಿತವಾದ ಭೂಮಿಜೆಯನ್ನು ವಾಮಭಾಗದೊಳ್ ಪರುಟವಿಸಿಕೊಂಡು ಈ ಮಹಾಯಜ್ಞವನ್ನು ಸಾಂಗವಾಗಿ ನಡೆಸುತ್ತೇನೆ. ತಾಮಸ ಯಿಲ್ಲದೆ ನೇಮವನ್ನು ದಯಪಾಲಿಸಬೇಕೈ ಮುನಿಪ ಕರುಣ ಕಲಾಪ.

ಪದ

ಸುರಚಿರಾ ಸೀತೆ ಸಹಿತ  ತುರಗಮೇ
ಧವಾ  ಗಿರಿಜೆಯರಸನಾಣೆ ನಡೆಸು  ನರ
ಹರಿ ಮಾಧವ ॥ಸುಮ್ಮನೀಗ ॥

ವಸಿಷ್ಠ : ಹೇ ನರಹರಿ ಮಾಧವಾ, ಸುರಚಿರ ನಿರ್ಮಿತವಾದ ಧರಣಿಜಾತೆಯನ್ನು  ಪರುಟವಿಸಿಕೊಂಡು ಗಿರಿಜಾತೆ ಪ್ರಾಣನಾಥ ಗಂಗಾಧರೇಶನಾಣೆಯಾಗಿ ಕೃತವನ್ನು ಮಾಡಬಹುದೈಯ್ಯ ರಾಜ ಸಿತಕಲ್ಪ
ಭೋಜ.

ರಾಮ : ಅಯ್ಯ ರುಷಿವರಾ, ತುರಗಶಾಲೆಯಂ ಪೊಕ್ಕು ಯಜ್ಞಕ್ಕೆ ಸರಿಯಾದ ಕುದುರೆಯನ್ನೊದಗಿಸಿ ಅಷ್ಠವಿಧಾಚರಣೆಯಿಂದ ಷೋಡಶೋಪಚಾರದಿಂ ಪೂಜಿಸಿ ಅದರ ಪಣೆಗೆ ಯಜ್ಞಗಳಿತೆಯ ಬಿರುದನ್ನು ಧರಿಸುವಂಥವನಾಗೈಯ್ಯ ವರಗುರು ವಸಿಷ್ಠ ಪರಮರುಷಿ ಶೇಷ್ಠ.

ವಸಿಷ್ಠ : ಅದೇ ರೀತಿ ನಡಿಸುತ್ತೇನೈಯ್ಯ ರಾಮ ಅರಿಕಟಕ ಭೀಮ.

ರಾಮ : ಯಲಾ ಸಾರಥಿ, ತುರಗಾಲಯಕ್ಕೆ ಪೋಗಿ ಗುರುಗಳು ನೇಮಿಸಿದ ಅಶ್ವವನ್ನು ತ್ವರಿತದಿಂದ ತೆಗೆದುಕೊಂಡು ಬರುವಂಥವನಾಗೋ ದೂತ ರಾಜಸಂಪ್ರೀತ.

ವಸಿಷ್ಠ : ಅಯ್ಯ ರಾಜತೇಜಿಯನ್ನಾದರೆ ಪೂಜಿಸಿದ್ದಾಯಿತು. ರಾಜಿಸುವ ಗಜತುರಗ ರಥ ಚತುರಂಗ ಸೈನ್ಯವನ್ನು ಮೇಳವಿಸಿ ರಾಜ್ಯದ ಮೇಲೆ ತೇಜಿಯನ್ನು ಬಿಡಬಹುದೈಯ್ಯ ರಾಮ ಸಹಸ್ರ ಕಾರ‌್ಯಧಾಮ.

ರಾಮ : ಯಲಾ ಸಾರಥಿ. ಯನ್ನ ಅನುಜನಾದ ಶತ್ರುಘ್ನನನ್ನು ಅತಿ ಜಾಗ್ರತೆ ಇಂದ ಕರೆಸುವಂಥವ ನಾಗೆಲಾ ಸಾರಥಿ

ರಾಮ : ಯಲೈ ಶೂರನಾದ ಶತ್ರುಘ್ನನೇ ಕೇಳು. ಚಾರುತರಮಾದ ಯಜ್ಞಾಶ್ವದೊಡನೆ ಶೂರರಾದ ಮೂರು ಕೋಟಿ ಕ್ಷೋಣಿ ಬಲಸಮೇತನಾಗಿ ತೆರಳಿ ಸಕಲ ಧರಣೇಶ್ವರಕ್ಕೆ ಕಪ್ಪ ಕಾಣಿಕೆಯನ್ನು ಕೈಕೊಂಡು ಬರುವಂಥವನಾಗಪ್ಪಾ ಅನುಜಾ ದಿನಮಣಿ ತೇಜ.

ಶತ್ರುಘ್ನ : ಭಳಿರೇ ಇಳೆಯಾಧಿಪತಿ, ಗಳಿಲನೆ ದಳವೇರಿ ಪೊಳೆವಶ್ವದೊಡನೆ ತೆರಳಿ ಮಲಯಾಳ ಮಗಧ ನೇಪಾಳ ಮೊದಲಾದ ಇಳೆಯಣ್ವರ ಕೈಯ್ಯ ಕಪ್ಪ ಕಾಣಿಕೆಯ ಕೈಗೊಂಡು ತಳುವುದೆ ಬರುವೆನೋ ನಳಿನದಳನಯನಾ ತಿಳಿಯದು ಈ ಕಾರ‌್ಯದ ಹದನ.

 

ಭಾಗವತರ ಕಂದ (ಗೌಳ)

ಮುನಿವರನ ಶಿಕ್ಷೆಯಿಂದಲೀ  ಘನತರ ಸಾಹಸಿ
ಗಳು  ಕುಶಲವರೀರ್ವರು ವನದೊಳಗಿರಲೊಂದು ದಿನ
ಅನುಜನ ಕರೆದೆಂದನು  ಕುಶ॥

ಪದ

ಅನುಜನೇ ಲಾಲಿಸು  ಕುಶಸಮಿತ್ತು
ಗಳನೂ  ವಿನಯದಿಂ ತರುವುದಕ್ಕೆ
ವನಕೀಗಲೇ ನಾಂ  ಪೋಗಿ ಬರುವೆನು
ಮುನಿಗೃಹದೊಳು ಜೋಕೆ ॥

ಕುಶಲ : ಯಲೈ ಅನುಜನಾದ ಲವಕುಮಾರನೇ ಲಾಲಿಸು. ಕುಶಸಮಿತ್ತುಗಳನ್ನು ತರುವ ವುದ್ದಿಶ್ಯವಾಗಿ ನಾನು ವನಾಂತರಕ್ಕೆ ಪೋಗಿ ಬರುತ್ತೇನೆ. ನೀನು ಮುನಿಗೃಹದೊಳಗೆ ಬುದ್ಧಿವಂತನಾಗಿ ಜೋಕೆ ಇಂದ ಇರಬೇಕೈಯ್ಯ ಲವನೇ ನೀನರಿಯದವನೇ.

ಪದ

ವರಮುನಿಪುತ್ರರ  ಜೊತೆಯೊಳಗಾಡೈ
ತಾರದೆ ಕಲಹವನು  ಕೇಳಿನ್ನು ಅರಿತು ನಡೆ
ಯುವುದು  ಪರರಾಧೀನದೊಳಿರುವೆವು
ನಾವಿನ್ನು ಕೇಳಿನ್ನು ॥

ಕುಶ : ಹೇ ಸಹೋದರ, ನಾವು ಪರರ ಅಧೀನದೊಳಗಿರುವೆವು. ಈ ವ್ಯಾಳ್ಯದಲ್ಲಿ ಶಿರಬಾಗಿ ನಡೆಯ ಬೇಕಲ್ಲದೆ ದುರುಳರ ಹಾಗೆ ಇಚ್ಛಾನುಸಾರ ಗುರುಪುತ್ರರೊಡನೆ ಕಲಹಕ್ಕೆ ಪೋಗದೆ, ನಾನು ಬರುವ ಪರಿಯಂತರಕ್ಕೂ ವರಮಾತೆಯ ಸನ್ನಿಧಿಯಲ್ಲಿ ಇರುವಂಥವನಾಗಪ್ಪ ಅನುಜಾ.

ಪದ

ಕಂದಮೂಲ ಫಲಹಾರವ ಜನನಿಗೆ  ತಂದು
ಕೊಡೈ ನೀನು ॥ಕೇಳಿನ್ನು ॥ಸುಂದರ ಪ್ರಕಟನಪುರ
ನೆಲೆವಾಸನು  ಚಂದದಿಂ ಮೆಚ್ಚುವನು ॥

ಕುಶ : ಹೇ ತಮ್ಮಾ, ಮಂದಗಮನೆಯಾದ ಜನನಿಗೆ ಯೇನೊಂದು ಕುಂದುಕೊರತೆಯನ್ನು ಕೊಡದೆ ಕಂದಮೂಲ ಫಲಗಳನ್ನು ತಂದಿತ್ತು ಚಂದದಿಂದ ವುಪಚರಿಸಿದರೆ, ಇಂದು ಗಂಗಾಧರೇಶನು ಚಂದದಿಂ ಮೆಚ್ಚುವನಪ್ಪಾ ಅನುಜಾ ಕೇಳ್ ಸಹಜಾ.

ಲವ : ಅಣ್ಣ ಕುಶಲ ಕುಮಾರನೆ, ವುಣ್ಣಿಮೆ ಶಶಿಯಾದ ತಾಯಿಗೆ ಕಂಣ್ಣಿಗೆ ಬೇಕಾದ ಹಣ್ಣುಗಳನ್ನು ವದಗಿಸುತ್ತಾ ಇದ್ದೇನೆ. ಸಣ್ಣವನ ಮಾತು ಸಟೆಯೆಂದು ಭಾವಿಸದೆ ಅರಣ್ಯಕ್ಕೆ ಪೋಗುವಂಥವನಾಗೈ
ಅಣ್ಣಯ್ಯ.

 

(ಅಶ್ವಮೇಧ ಕುದುರೆ ಬರುವಿಕೆ)

ಕಂದ ಗೌಳ

ಇಂತು ಭೂಪಾಲಕರ  ಹಯವಂದು ಬರಲು
ಪೂ ತೋಟಮಂ ಪೊಕ್ಕು  ವೃಕ್ಷ ತಲೆಗಳಾ
ಮುರಿದುನಕೆಗಳು ಚಳಪಳನುದುರೆ
ವೃಕ್ಷವ ಕೆದರೆ  ಇದಂ ಕಂಡ ಲವ ಕುಮಾರ
ಸಂಗರ ಶೂರಾ ॥

ಪದ

ತುರುಗಧಾರದೋ ಇದರ ಪರಿ ತಿಳಿಯ
ದೋ  ಮರುಗ ಮಲ್ಲಿಗೆ  ಪುಷ್ಪಲತೆಯ
ಮುರಿಯುತಿರ್ಪುದೂ ॥

ಲವ : ಯಲೈ ಮುನಿಕುಮಾರಕರೇ, ಗುರುಗಳ ತಪೋವನದಲ್ಲಿ ಇಚ್ಚಾನುಸಾರಮಾಗಿ ಚರಿಸುವ ಈ ತುರಗ ಧಾರದೋ ತಿಳಿಯಲಿಲ್ಲವಲ್ಲಾ. ಮರುಗ ಮಲ್ಲಿಗೆ ಸುರಗಿ ಸಾಮಂತಿಗೆ ಇರುವಂತಿ ಮೊದಲಾದ ಪುಷ್ಪಲತೆಗಳನ್ನು ಮುರಿ ಮುರಿದು ಧರೆಗೀಡಾಡುವುದ ನೋಡಿದರೇನಯ್ಯ ಯತಿಕುಮಾರಕರೇ.

ಪದ

ಯತಿಯು ಬರುವನೋ  ಖತಿಯುಗೊಳುವನೈ
ಇನ್ನೇನ ಗೈಯುವೆ ಮುನಿಸುತರೆ ಪೇಳಿರೈ ॥

ಲವ : ಅಯ್ಯ ಮಿತ್ರರಾದ ಗುರುಕುಮಾರಕರೇ, ಯತಿವರೇಣ್ಯರು ಬಂದು ನೋಡಿದ ಮಾತ್ರದಲ್ಲಿ ಯಮ್ಮನ್ನು ಖತಿಗೊಂಡು ಬಡಿಯುವರಾದ ಕಾರಣ ಮುಂದೇನು ಗತಿಯಯ್ಯ ಮುನಿಸುತರೇ.

ಪದ

ವಾಜಿಫಣೆಯೊಳು  ರಾಜಲಿಪಿಗಳು
ಮಾಜದೊಪ್ಪುತಿಹುದೇನು  ಸೂಜಿ ಇಳೆಯೊಳು ॥

ಲವ : ಯಲೈ ತಾಪಸೋತ್ತಮರೇ  ಈ ವಾಜಿಫಣೆಯ ಮಧ್ಯದಲ್ಲಿ  ರಾಜಿಸುವ  ರಾಜಲಿಪಿಯುಳ್ಳ ಬಿರುದು  ಮಾಜದೇ ಒಪ್ಪುತಿರುವುದು  ಭಲಾ ತೇಜಿಯ ಸಮೀಪಕ್ಕೆ  ಸೇರಿ ನೋಡೋಣ ಬನ್ನಿರೈಯ್ಯ ರುಷಿಕುಮಾರಕರೇ ॥

ಪದ

ತೆಗೆವೆ ಬಿರುದನು  ಬಿಗಿವೆ ಹಯವನೂ
ಜಗಳಕ್ಯಾರು ಬರುವವರ  ಪೊಗರು ಮುರಿವೆನೂ ॥

ಲವ : ಯಲೈ ನೆಗುಮುಖದ  ಕಕ್ಷಿಜಾತರೆ  ಬಗಬಗೆಯ  ವಕ್ಕರಣೆಗಳನ್ನು ಇಕ್ಕೆ  ಜಗದೇಕವೀರನೆಂದು ಕಡು ಗರ್ವದಿಂದ ಬರೆದು ಕಟ್ಟಿರುವ  ಬಿರುದನ್ನು ತೆಗೆದು  ಆ ಗಂಡುವಾದಿಯನ್ನು  ಸೊಗಡು ಕೆಡಿಸಿ ಬಿಗಿಯುತ್ತೇನೆ  ಭಲಾ ಜಗಳಕ್ಕೆ  ಬರುವವರ ಪೊಗರನ್ನು ಮುರಿದು  ಹರಣಪಡಿಸಿ  ನಗೆಗೀಡು ಮಾಡಿ  ನಗರದ ಕಡೆಗೆ ವೋಡಿಸುವಂತೆ ಮಾಡುತ್ತೇನೈಯ್ಯ ತಾಪಸೋತ್ತಮರೇ

ಪದ

ಧರಣಿ ಪ್ರಕಟನಾ  ಪುರನಿವಾಸನಾ  ಕರು
ಣದಿಂದ ವಾಚಿಸುವೆನು  ಬಿರುದನೀಗ ನಾಂ ॥

ಲವ : ಪ್ರಕಟನಪುರದ ಗಂಗಾಧರೇಶನ ಕರುಣದಿಂದ ತುರಗದ ಮಸ್ತಕಾಗ್ರದೋಳ್ ಬರೆದು ಧರಿಸಿರುವ ಬಿರುದನ್ನು ವಾಚಿಸುತ್ತಾ ಇದ್ದೇನೆ ಲಾಲಿಸಿರೈಯ್ಯ ಮುನಿ ಕುಮಾರರೇ.

ಕಂದಗೌಳ

ತರಣಿಕುಲ ಶಿಖಾಮಣಿಯೇ ವರಕೌ
ಸಲ್ಯಾ ಗರ್ಭಜಾತ  ಶ್ರೀರಘುವೀರನ
ತುರಗವಿದೆನ್ನದು  ಭೂಮಿಯೋಳ್ ॥

ಲವ : ಕೇಳಿದಿರೇನೈಯ್ಯ ಮುನಿಕುಮಾರಕರೇ, ತರಣಿಕುಲದ ಅರಸರೊಳಗೆಲ್ಲಾ ತಾನೇ ಶಿಖಾಮಣಿ ಯಂತೆ. ವರ ಕೌಸಲ್ಯಾದೇವಿಯ ತರಳನಾದ ರಘುರಾಮನ ತುರಗವಂತೆ. ಧರಣಿಯ ಮೇಲೆ ಸಮರ್ಥಶಾಲಿಗಳಿದ್ದರೆ ಕಟ್ಟಬಹುದಂತೆ. ಆಹಾ ಅವನ ಅಹಂಕಾರವನ್ನು ಮುರಿಯದಿದ್ದೊಡೆ ನಾನು ಸೀತಾ ಸಂಭವನಲ್ಲಯ್ಯ ಮುನಿಕುಮಾರಕರೇ.

ಕಂದ

ಭೂಪಾಲರ ಹಯವಿದು  ಕೋಪದಿಂ
ಬಂಧಿಸಲು  ಸೇನಾನಾಯಕರು ಗಿರಾಪು
ಮಾಡುವರು ನಿನ್ನನು  ಶ್ರೀ ಪಾರ್ವತಿಯ
ಅರಸನಾಣೆ  ತಡೆಯದಿರೈ  ಅಶ್ವವಾ

ಮುನಿಸುತರು : ಯಲೈ ಲವಕುಮಾರಕನೇ, ಈ ತುರುಗದ ಗೊಡವೆ ನಿನಗ್ಯಾಕೆ. ಅನಿಪರು ಬಂದು ಕೊಂದರೆ ಯೇನು ಮಾಡಬಲ್ಲೆ. ಹರಹರಾ ನೀನು ಅವಿವೇಕಿಯಲ್ಲವೆ, ಶಿವನಾಣೆ ಈ ಕುದುರೆಯನ್ನು ಕಟ್ಟದಿರೈ ಲವನೇ ನೀನು ಅವಿವೇಕಿತನದವನೂ.

ಕಂದ ಪದ್ಯ

ಪಾರುವವನಿದನು ಬಿಡಲಿಕೆ ಧಾರು
ಮಾಣಿಸುತೆ ಅಣುಗನಲ್ಲವೋ  ನಿಮ್ಮಂದದೋಳ್
ಪಾರುವರ ಪುತ್ರನಲ್ಲವೋ  ಹೇ ರಣ
ಹೇಡಿಗಳೇ  ಪೇಳಬೇಡಿರೋ ಯನಗೇ ॥

ಲವ : ಯಲಾ ಧಾತು ಕೆಟ್ಟ ಹುಡುಗರೇ, ಜಾತಿಯಲ್ಲಿ ನೀವು ಬ್ರಾಹ್ಮಣರಾದ ಕಾರಣ ಭೀತಿಯಿಂದ ಮಾತನಾಡುತ್ತೀರ. ಈ ತುರಗವನ್ನು ಬಿಡಿಸಿಕೊಂಡು ಪೋಗಲ್ಕೆ ಬಂದವರ ಶಿರಗಳನ್ನ ನಾ ತವಕದಿಂ ಕಡಿದು ಭೂತಪ್ರೇತಾದಿಗಳ ಪಾಲು ಮಾಡದ ಮೇಲೆ, ಭೂತಳದಲ್ಲಿ ನಾನು ಸೀತಾಪುತ್ರನಾಗಿ ಜನಿಸಿ ಫಲವೇನು. ಯಾತರ ಮಾತನ್ನಾಡುವಿರಿ ಬಡ ಬ್ರಾಹ್ಮಣರೇ.

ಪದ

ಬಿಡಿರೋ ಯಮ್ಮಯ ವಡೆಯನಶ್ವವಾ
ಹುಡುಗರಿರಾ ನಿಮ್ಮಾ ಬಡಿದು ಹಿಡಿದು
ಕೊಂಡು ಪೋಪೆವು ॥

ಭಟರು : ಯಲಾ ಕಡುಮೂರ್ಖರಾದ ಹುಡುಗರೆ ಕೇಳಿ, ಕಡುಗಲಿಯಾದ ಯಮ್ಮ ವಡೆಯನ ಕುದುರೆಯನ್ನು ದುಡುಕಿನಿಂದ ಪಿಡಿದು ಕಟ್ಟುವುದು ನಡತೆಯಲ್ಲ. ಹೊಡೆತಕ್ಕೆ  ತಡೆಯುವ ಬಾಲಕರಲ್ಲ. ಆದ್ದರಿಂದ ಕೈ ಮಾಡಲಿಲ್ಲ. ಇದನ್ನು ತಿಳಿದು ತಡಮಾಡದೇ  ಕುದುರೆಯನ್ನು ಬಿಡುವಂಥವರಾಗಿರೋ ಬಾಲಕರಿರಾ.

ಪದ

ಅವಿವೇಕಿಗಳಿರಾ  ಬಿಡಿರೋ ಹಯವನೂ
ಆಲಸ್ಯವ್ಯಾಕೆ  ಕಡಿದು ಬಿಡುವೆ  ಈಗ ನಿಮ್ಮನು ॥

ಭಟರು : ಯಲಾ ಅವಿವೇಕಿಗಳಾದ ಹುಡುಗರೇ, ಕಿವಿಗಳು ಕೇಳದವರಂತೆ ಸುಮ್ಮನೆ ಇರುವುದು ಮರಿಯಾದೆಯಲ್ಲ. ತವಕದಿಂದ ಹಯವನ್ನು ಬಿಡದೆ ಆಲಸ್ಯ ಮಾಡಿದ್ದೇ ಆದರೆ ಇಕ್ಕೋ ಭವರದಲ್ಲಿ ಬಲವೆಲ್ಲ ಕವಿದು ಅಸ್ತ್ರಶಸ್ತ್ರಗಳಿಂದ ನಿಮ್ಮನ್ನು ತಿವಿದು ಪ್ರಾಣಗೆಡಿಸಿ ಜವನ ಪಟ್ಟಣವನ್ನು ಕಾಣಿಸುವೆನೆಲಾ ಖೂಳ ಬಾಲಕರೆ.