ಪದ

ಯೇನಿದೇನಣ್ಣ ಚಿಂತೆ ನಿನ್ನ  ಮಾನಸದೊಳು
ಜ್ಞಾನ ಕೋವಿದನು ಅಗ್ನಿ  ಧೀನಾತ
ನದೊಳು ॥ಅಪರಾಧವದೇನುವುಂಟು
ಅನುಜರಿಂದಲೀ  ಕಪಟವ್ಯಾತಕೆನ್ನೊಳು
ಸುರ  ನೃಪತಿಯನ್ನಲೀ ॥

ಭರತ : ಅಣ್ಣ ರಾಘವೇಂದ್ರ ಸದ್ಗುಣ ಕೀರ್ತಿ ಸಾಂದ್ರ  ಭೋಗ ದೇವೇಂದ್ರನೇ ಲಾಲಿಸು. ಅರಿಯದ ಅಜ್ಞಾನಿಗೆ ಸುಜ್ಞಾನವನ್ನು ವುಪದೇಶಗೈಯ್ಯುವ ಚೈತನ್ಯವುಳ್ಳ ಜ್ಞಾನಾಧಿಕಾರಿಯಾಗಿ ನಿನ್ನೊಳು ನೀನೇ ಚಿಂತಿಸುವುದು ನ್ಯಾಯವೇನಪ್ಪಾ ಅಗ್ರಜವೀರ.

ಪದ

ಭರತನೇ ಭೂ ಪುತ್ರಿ ದೆಸೆಯಿಂದಲೆಮಗೇ
ದೊರಕಿತು ಅಪಕೀರ್ತಿಯು  ಮೂರು
ಲೋಕದೊಳಗೇ ॥

ರಾಮ : ಅಪ್ಪಾ ತಮ್ಮಯ್ಯನಾದ ಭರತನೇ ಲಾಲಿಸು. ಸುಮ್ಮನೇ ಯನಗೆ ಸಮ್ಮತಿಯನ್ನ ಪೇಳುವೆಯಲ್ಲಾ ವುನ್ನತಮಾದ ನಿನ್ನಯ ಮೃದು ವಚನವನ್ನು ಯೆಂದಿಗೂ ಮೀರುವನಲ್ಲಾ. ಆದರೆ ನಮ್ಮ ರವಿವಂಶದಲ್ಲಿ ಅಪಕೀರ್ತಿ ಪೊತ್ತು ಬಾಳಲಾರೆನಲ್ಲಾ. ಈ ಧರೆಯೊಳಗೆ ಜನರಾಡುವ ನುಡಿಯನ್ನ ನಾ ಕೇಳಲಾರೆನಲ್ಲೊ ಭರತಾ.

ಪದ

ಯೇನೀದಾಶ್ಚರ‌್ಯ ಲೋಕಾ  ಮಾತೆ ಸೀ
ತೆಯಾ  ಮಾನಸವನು  ತಿಳಿದು  ಇಂತು
ಹೀನಗೈಯುವೆಯಾ ॥

ಭರತ : ಹೇ ಅಣ್ಣಾ ಶ್ರೀ ರಾಮಚಂದ್ರಾ, ಸಕಲ ಕಲಾನೈಪುಣ್ಯನಾದ ಅಗ್ರಜನೇ ಕೇಳು. ಜಾನಕೀ ದೇವಿಯವರ ಮನೋಭಾವವನ್ನು ಚೆನ್ನಾಗಿ ತಿಳಿದವರಾಗಿ ನೀವಿಂಥ ಮಾತನ್ನ ಆಡಲಾಗದು. ಖೂಳ ರಜಕನು ನಿಮ್ಮನ್ನು ನಿಂದಿಸಿದ ಮಾತ್ರದಲ್ಲಿಯೇ ನಿಮಗಾದ ಮಾನಭಂಗವೇನಪ್ಪಾ ಅಣ್ಣಯ್ಯ.

ಪದ

ಷಡು ಚಕ್ರವರ್ತಿಗಳ್  ವಡೆಯನೆಂದೆನೆ
ಮಡದಿಯಿಂದಪವಾದ  ಪೊಡವಿಯೋಳ್ ವಹಿಸಿ ॥

ರಾಮ : ಕಡುಗಲಿ ಶೂರನಾದ ಭರತನೇ ಕೇಳು, ಈ ಪೊಡವಿಯನ್ನು ಸಡಗರದಿಂದ ಪಾಲಿಸುವ ಮೃಢ ಹರೀಂದ್ರ ನಳಮಾಂಧಾತರೇ ಮೊದಲಾದ ಷಡುರಥರಿಗೆಲ್ಲಾ ವಡೆಯನೆಂದೆನಿಸಿ ಕಡೆಗೆ ಮಡದಿಯ ದೆಸೆಯಿಂದ ಪೊಡವಿಯ ಮೇಲೆ ಅಪಕೀರ್ತಿಯನ್ನು ಪಡೆದು ಒಡಲ ಹೊರೆಯುವದ್ಯಾತಕ್ಕೆ ಉಡುರಾಜ ವದನೆಯನ್ನು ಅಡವಿಪಾಲು ಮಾಡುವೆನೋ ಅನುಜಾ ಈ ನುಡಿ ಸಹಜಾ.

ಪದ

ಜ್ಞಾನಿಯೆನಿಸಿ  ಅರಿಯದ  ಅಜ್ಞಾನಿಯಂದದೀ
ಜಾನಕಿಯನು  ಬಿಡುವ ಭ್ರಾಂತಿಯಿದೇನು ಚಿತ್ತದೀ ॥

ಭರತ : ಹೇ ಮಾನವಾಗ್ರಣ್ಯ ದೀನ ಶರಣ್ಯ, ಯೇನೂ ಅರಿಯದ ಅಜ್ಞಾನಿಗೆ ಭ್ರಾಂತಿಗೊಂಡು ಜಾನಕಿಯನ್ನು ಕಾನನಕ್ಕೆ ಕಳುಹಿಸುವೆನೆಂಬ ಮಾತು ಮಾನನಿಧಿಯಾದ ನಿನಗೆ ಸರ್ವಥಾ ನ್ಯಾಯವಲ್ಲವೈ ಅಗ್ರಜಾ.

ಪದ

ಮೃಢ ಗಂಗಾಧರನಾಣೆ  ಬಿಡುವೆ ಜಾನ
ಕಿಯಾ  ಕೊಡದಿರುತ್ತರ ತಮ್ಮಾ  ಕಡೆಗೆ ಸಾರೈಯ್ಯ ॥

ರಾಮ : ಹೇ ತಮ್ಮಾ ಭರತಾ, ಈ ಪೊಡವಿಗೆ ಸಡಗರಮಾದ ಪ್ರಕಟನಪುರದೊಡೆಯ ಮೃಢ ಗಂಗಾಧರೇಶನಾಣೆಯಾಗಿಯು ಮಡದಿಯಳ ಬಿಡುವೆ. ಯನಗೆ ಪ್ರತ್ಯುತ್ತರಗಳನ್ನು ಕೊಡದೆ ಕಡೆಗೆ ಸಾರೈಯ್ಯ ಭರತಾ ತೆರಳೀಗ ತ್ವರಿತಾ.

ಭರತ : ಅಯ್ಯ ಮುರಹರೀ, ಜಗನ್ಮಾತೆಯಾದ ಜಾನಕಿದೇವಿಗೆ ಯೇನು ಕೊರತೆಯನ್ನ  ತಂದೊಡ್ಡಿದೋ ಶ್ರೀಹರೀ.

ಪದ

ರಾಘವೇಂದ್ರ ಲಾಲಿಸಣ್ಣ  ಈಗಲೆನ್ನ ಬಿನ್ನಪ
ನಾಗವೇಣಿಯನ್ನ ಬಿಟ್ಟು  ಹ್ಯಾಗೆ ನೀನು ಜೀವಿಪೆ ॥
ಕುಲಪತ್ನಿಯಳಾ ಮೇಲೆ ಛಲವ್ಯಾತಕಣೈಯ್ಯ ॥
ಮಲೆಗೆ ಕಳುಹಿ ದರೇನು ॥ಫಲ ಬರುವುದೈಯ್ಯ ॥

ಲಕ್ಷ್ಮಣ : ಅಣ್ಣಯ್ಯ ರಾಘವೇಂದ್ರ ನಿನ್ನ ಭೋಗಭಾಗ್ಯಕ್ಕೆ ಕರ್ತಳಾದ ಸೀತಾಮಾತೆಯನ್ನು ಬಿಟ್ಟು ಹ್ಯಾಗೆ ಜೀವಿಸುವೆಯಪ್ಪಾ. ಈ ವ್ಯಾಳ್ಳದಲ್ಲಿ ಕುಲಪತ್ನಿಯಳ ಮೇಲೆ ಛಲ ಗ್ರಹಿಸಿ  ಕಾನನಕ್ಕೆ ಕಳುಹಿದರೇ ಕರ್ಮಕ್ಕೆ ಕಾರಣವೇ ಹೊರತು ಧರ್ಮ ಕೀರ್ತಿಯೆಂದಿಗು ಫಲಿತಾರ್ಥವಾಗಲಾರದಪ್ಪಾ ಅಣ್ಣಯ್ಯ.

ಪದ

ರಜಕ ತಾನು  ಭೂಸುತೆಯಾ  ನಿಜವನೇನು
ಬಲ್ಲನೈ  ತ್ರಿಜಗದೊಳು  ಪವಿತ್ರೆಯೈ
ತ್ಯಜಿಸಬೇಡ  ಪಾಲಿಸೈ ॥

ಲಕ್ಷ್ಮಣ : ಹೇ ವಿಜಯ ಸಖ ಭುಜಗಶಾಯಿಯೇ ಕೇಳು, ತ್ರಿಜಗವಂದಿತೆಯಾದ ಸೀತಾಮಾತೆಯ ಪತಿವೃತಾ ಭಾವವನ್ನು ಕುಜನನಾದ ರಜಕ ತಾ ಬಲ್ಲನೇ. ಹೇ ಸುಜನ ಪಾಲಕಾ ನೀನು ನಿಜವಿಷ್ಣುವೆನಿಸಿ ಅಜ ಸುರಾದಿಗಳಿಂದ ಭಜಿಸಿಕೊಳ್ಳುವನಾಗಿ ಯೋಚಿಸಿ ನೋಡದೇ ಜಗದ್ ಜನನಿಯಾದ ಸೀತಾಮಾತೆಯನ್ನು ಬಿಡಬಹುದೇ ದೇವ ದೀನರನು ಪೊರೆವ.

ಪದ

ಭೂಮಿ ಪ್ರಕಟನ  ಪುರ ಸೋಮನಾಥನಾಣೆಗು
ಕಾಮಿನಿಯಳ ಕಾಡಿಗೆ  ರಾಮ
ಕಳುಹಲಾಗದೈ  ರಾಘವೇಂದ್ರನೇ ॥

ಲಕ್ಷ್ಮಣ : ಹೇ ಪರಮ ಪುರುಷ ಕಿರಿದಾದ ಹಿತ್ತಾಳೆಯನ್ನು ವರೆದು ನೋಡಿದರೆ ಸುರಚಿರವೆಂದು ಬೆಲೆಗೈದು ಮರುಳರಂತೆ ತಾರತಮ್ಯಗಳನ್ನು ತಿಳಿಯದ ಮೂಢರ ಹಾಗೆ ಕರೆವ ಸುರಭಿಯನ್ನು ಜರಿದು ನಿಂದಿಸಿದರೆ ಈ ಧಾರುಣಿಯಲ್ಲಿ ಅರಿಯದ ಮೂಢರಾಡಿದ ಮಾತುಗಳಿಗೆ ಸೀತಾ ಮಾತೆಯನ್ನು ಕಳುಹಬಹುದೇ ಅಣ್ಣ ಶ್ರೀ ರಾಮಚಂದ್ರ.

ಪದ

ಯಾರೇ ಆಗಲೀ  ನೆಲದೀ  ನಾರಿಯ ವೃದ್ಧ
ಅರ್ಭಕರನೇ ಲಾಲಿಸದೇ  ತಗುಳೇ ಘೋರ
ಪಾತಕವು ॥

ಲಕ್ಷ್ಮಣ : ಹೇ ನೀರಜಾಕ್ಷನಾದ ನಾರಾಯಣನೇ ಕೇಳು, ನಾರಿಯರನ್ನು ವೃದ್ಧರನ್ನು ಬಾಲಕರನ್ನು ಆರೈಕೆ ಮಾಡಿ ಕಾಪಾಡದೆ ನಿರಾಕರಿಸಿದ್ದೇ ಆದರೆ ಅಂತಹವರಿಗೆ ನರಕವು ತಪ್ಪುವದಿಲ್ಲವೈ ಅಣ್ಣಯ್ಯ.

ಪದರೂಪಕ

ಪೊಡವೀ ಪ್ರಕಟನ ಪುರದಾ  ಮೃಢ ಗಂಗಾಧ
ರನಾಣೆ  ಅಡವೀಗಟ್ಟದಿರಂಣ್ಣಾ  ಕಡು
ಪತಿವ್ರತೆಯಾ ॥

ಲಕ್ಷ್ಮಣ : ಅಣ್ಣ ರಘುರಾಮಚಂದ್ರಮೂರ್ತಿ, ಈ ಪೊಡವಿಗೆ ಯೀಗ ಲೇಸೆನಿಸಿ ಸಡಗರದಿಂದ ವಿರಾಜಿಸುವ ಶ್ರೀಮದ್ ಗಂಗಾಧರೇಶನ ಅಡಿದಾವರಂಗಳಾಣೆಯಾಗಿಯೂ ನಿಮ್ಮ ಮಡದಿಯನ್ನು ಅಡವಿಪಾಲು ಮಾಡಬೇಡವಣ್ಣಾ ರಾಮಾ ತಿಳಿ ನೀ ಸಾರ್ವಭೌಮ.

ಶತ್ರುಘ್ನ : ಅಣ್ಣ ಶ್ರೀ ರಾಮಚಂದ್ರ, ಚಿಕ್ಕವನಾದ ನಾನು ನಿಮ್ಮ ಪಾದಕ್ಕೆ ವಂದನೆಯಂ ಮಾಡಿ ಬಿನೈಸುತ್ತೇನೆ, ಅಕ್ಕರವಿಟ್ಟು ಲಾಲಿಸಬೇಕೈ ಅಗ್ರಗಣ್ಯನೇ. ಹಿಂದಕ್ಕೆ ತಂದೆಯ ಆಜ್ಞೆಗೆ ಸಿಕ್ಕಿ ಮೂವರೊಂದಾಗಿ ದುಕ್ಕಿಸುತ್ತಾ ಪಂಚವಟಿಯಲ್ಲಿ ಪಂಚವರ್ಣದ ಮೃಗದ ನೆಪದಿಂದ ವಂಚಕ ಅಧಮನಾದ ರಕ್ಕಸನ ಕೈಗೆ ಅಕ್ಕರದ ಸತೀಮಣಿಯ ಸಿಕ್ಕಿಸಿ ಸೊಕ್ಕು ಜವ್ವನೆಯ ಕಾಣದೇ ಗಕ್ಕನೆ ವದರಿಕ್ಕೆ ದಿಗಿಲು ತಾಕಿ ದಿಕ್ಕರಿಯದೇ ಬೆಕ್ಕಸ ಬೆರಗಾಗಿ ಬಿಕ್ಕಳಿಸಿ ದುಕ್ಕಿಸುತ್ತಾ ಚಿಕ್ಕವನ ಸಮೇತ ನೀ ಕಾನನವಂ ಪೊಕ್ಕು ಸಿಕ್ಕಿದ ಗಿರಿಜರಿ ಬಿದಿರು ಮುತ್ತುಗ ಕಕ್ಕೆ ಬಿಕ್ಕೆ ಅತ್ತಿ ಕಿತ್ತಳೆ ಆಲಬ್ಯಾಲ ಎಕ್ಕೇ ಬೇವು ಮೊದಲಾದ ಗಿಡಗಳ ಅಕ್ಕೆಯಲ್ಲಿ ತಡಕಿ ನೋಡಿ ಧಾವಲ್ಲಿಯೂ ಸಿಕ್ಕದೆ ವಡಲುರಿಯಕ್ಕಿ ದಿಕ್ಕು ದೆಸೆಗೆ ಬಾಯಿ ಬಿಡುತ್ತಾ ಸೊಕ್ಕಿ ಸೊರಗಿ ಮುಕ್ಕಣ್ಣನೇ ಗತಿಯೆಂದು ಮುಂದಕ್ಕೆ ತೆರಳಿದ ವೇಳೆ ಕಿಷ್ಕಿಂದೆಯಲ್ಲಿ ಪಕ್ಷಿಯ ನೆಪದಿಂದ ಇಂದುಮುಖಿ ನೆಲೆ ಸಿಕ್ಕಿದಾಗ ತಕ್ಕ ಸಂನ್ನಾಹದಿಂ ಪೋಗಿ ರಕ್ಕಸನಂ ಸಂಹರಿಸಿ ಸತಿಸಮೇತ ಕಕ್ಕರಪಾಟು ಬಿದ್ದು ಪುರಕ್ಕೆ ಬಂದ ದುಕ್ಕವದು ಸಾಲದೆಂದು ಯಿಂದು ಮೂರ್ಖತೆಯಿಂದ  ಕಾಂತಾರಕ್ಕೆ ಮಾನಿನಿಯ ನೂಕಿದರೆ ಮುಂದಣ ದುಃಖಕ್ಕೆ ನೀವೇ ಕಾರಣಕರ್ತರಾಗುವಿರಿ. ಚಿಕ್ಕವನ ಮಾತು ಲೆಕ್ಕವಿಲ್ಲ ನಾನು ಪೇಳಲ್ಯಾತಕಪ್ಪಾ ಅಣ್ಣಯ್ಯ.

ರಾಮ : ಮಿತ್ರ ಜನ ಪಾಲಾ ಶತ್ರು ಜನ ಕಾಲನೆನಿಪ ಪೌರುಷ ವೀರಹೋತ್ರ, ಶತಪತ್ರ ದಳನೇತ್ರ ಕುಲ ಪವಿತ್ರನಾದ ಶತ್ರುಘ್ನನೇ ಲಾಲಿಸು. ಸತ್ ಪ್ರೀತಿ ಇಂದೆನಗೊರೆದ ಸೂತ್ರವೆಲ್ಲ ಸ್ತೋತ್ರಗಳಿಗೆ ಸೂಕ್ತವಾಯಿತು. ಆದರೆ ಕ್ಷತ್ರಿಯ ವಂಶದೊಳ್ ನಾನು ಗಾತ್ರವೆತ್ತಿ ಧಾತ್ರಿಯಲ್ಲಿ  ಅಪಕೀರ್ತಿಗೆ ಪಾತ್ರನಾಗಲಾರೆನಾದ್ದರಿಂದ ಧಾತ್ರಿಪ ಜನಕರಾಯನ ಪುತ್ರಿಯನ್ನು ಅರಣ್ಯ ಯಾತ್ರೆಗೆ ಇಡದೆ ನೇತ್ರ ಮಾತ್ರದಲ್ಲಿ ಬಿಡುವ ಸೂತ್ರಧಾರಿಯಲ್ಲ. ಯನ್ನೊಡನೆ ಪ್ರತ್ಯುತ್ತರವಾಡದೇ ಅತ್ತತ್ತ ತೆರಳುವಂಥವನಾಗೈ ತಮ್ಮಾ ಶತ್ರುಘ್ನ.

ಶತ್ರುಘ್ನ : ಅಪ್ಪಣೆಯಂತೆ ತಪ್ಪದೇ ತೆರಳುತ್ತೇನೈ ಅಣ್ಣಯ್ಯ.

ರಾಮ : ಹೇ ತಮ್ಮ ಲಕ್ಷ್ಮಣ, ಭೂ ತನುಜೆಯಾದ ಸೀತೆಯನ್ನ ನೀ ತೆರಳಿಸಿಕೊಂಡು ಪೋಗಿ ಭೂತಪ್ರೇತ ಪಿಶಾಚಿ ಪುಲಿಕರಡಿಗಳು ಕಾತರಿಸದಿರುವ ಘೋರಡವಿಗೈದಿಸಿ ಬರುವಂಥವನಾಗು ಇಲ್ಲವಾಯಿತೆ ನೀ ತವಕದಿಂ ಖಡ್ಗವಂ ತೆಗೆದುಕೊಂಡು ಯನ್ನ ಶಿರ ಛೇದಿಸುವಂಥವನಾಗಪ್ಪಾ ತಮ್ಮಾ.

 

ಕಂದಮುಖಾರಿ

ಅಕಟಕಟ  ಭೂಜಾತೆಯ  ಘೋರಡವಿಗೆ  ಕರೆ
ದೊಯ್ದು  ಬಿಡಲು ದುರ್ಗತಿ ಯೆನಗಂ  ಘಟಿಪುದು  ಇದಕೇ
ನುಗೈಯ್ಯುವೆನು  ತಾಟಕಾಂತಕನೇ ಮೀರಲಾರೆ
ತಮ್ಮ ನೇಮವನು ॥

ಲಕ್ಷ್ಮಣ : ಅಣ್ಣಯ್ಯ ಶ್ರೀ ರಾಮಚಂದ್ರ ಮೂರ್ತಿಯೇ, ನಿಮ್ಮ ನೇಮವನ್ನು ಮೀರಿದವನಾದರೆ ಭೂಮಿಯಲ್ಲಿ ಯನಗೆ ಮಾತೃವಧೆ ಗೈಯುವಷ್ಠು ದೋಷ ತಟ್ಟೀತು. ಜಗನ್ಮಾತೆಯಾದ ಜಾನಕೀ ದೇವಿಯನ್ನು ಕಾನನದಲ್ಲಿ ಬಿಟ್ಟು ಬರೆ ಹೀನವಾದ ದುರ್ಗತಿ ಯನಗೆ ಪ್ರಾಪ್ತವಾಗುವುದಿಲ್ಲವೆ ರಾಯ  ಇದಕ್ಕೇನು ವುಪಾಯ.

ರಾಮ : ಹೇ ಸಹೋದರಾ, ನಾನಿರಲಿಕ್ಕಾಗಿ ದೋಷಕ್ಕೆ ಕಾರಣವೇನು. ಮಾನಸದಲ್ಲಿಯೇ ನೊಂದು ಯೋಚನೆಯ ಮಾಡದೇ ಜಾನಕಿಯನ್ನು ಕಾನನಕ್ಕೆ ನೂಕಿ ಬಾರಪ್ಪಾ ತಮ್ಮಾ.

ಲಕ್ಷ್ಮಣ : ಅಯ್ಯೋ ಹರಿ ಹರಿ ದಾನವಾರಿ ಶೌರಿ, ಧರಣಿಜಾತೆಯಾದ ಸೀತಾಮಾತೆಯನ್ನು ಪರದೇಶಿಯ ಮಾಡಿದೆಯಾ ಮುರಹರಿ ಮುಂದೇನು ದಾರಿ.

ಪದ

ಕರುಣಿಸಮ್ಮಾ  ಧರಣಿಜಾತೆ  ಪರಮ ಪಾವನಾಂಗಿ
ಸೀತೆ  ವನಜಾಂಬಿಕೆಯೇ  ಜನಪಾಲ ನಿಮ್ಮ
ಮನದ ಬಯಕೆ ಸಲಿಸೆಂದನಮ್ಮಾ  ಕರುಣಿಸಮ್ಮಾ
ಧರಣಿ ಜಾತೆ ॥

ಲಕ್ಷ್ಮಣ : ಅಮ್ಮಾ ಪನ್ನಗವೇಣಿ, ಮಾನ್ಯರಲ್ಲಿ ಸಂಪನ್ನರಾದ ಅಗ್ರಜಶಿರೋರತ್ನನು ನಿನ್ನ ಮನೋಬಯಕೆಯನ್ನ ಸಲ್ಲಿಸಲೆಂದು ಭಿನ್ನವಿಲ್ಲದೆ ಯನಗೆ ಅಪ್ಪಣೆಯನ್ನು ಕೊಟ್ಟಿರುತ್ತಾನಾದ ಕಾರಣ ಹೇ ಸನ್ನುತಾಂಗಿಯೇ ಇನ್ನೇಕೆ ಆಲಸ್ಯವನ್ನು ಮಾಡುವೆ ತಾಯೇ ಕರುಣವಿಟ್ಟೆನ್ನ ಕಾಯೇ.

ಪದ

ಮುನಿಪತ್ನಿಯರ  ನೋಳ್ಪೆನೆನುವ  ಮನವು
ಇರಲು  ವನಕೆ ಬಾರಮ್ಮ ॥

ಲಕ್ಷ್ಮಣ : ಘನ ಮಹಾತ್ಮರಾದ ಮುನಿಪತ್ನಿಯರನ್ನು ನೋಳ್ಪ ಮನ ನಿಮಗಿದ್ದರೆ ಹೇ ಜನನೀ, ಸಮ್ಮತದಿಂದ ಮನುಮಯವಾದ ರಥವನ್ನೇರಿದರೆ ಜನಪನ ಅಪ್ಪಣಿ ಪ್ರಕಾರ ಕಾನನ ಪಥವಾಗಿ ರಥವನ್ನು ನಡೆಸುವೆನಮ್ಮಾ ಮಾತೆ ರಘುರಾಮರ ಪ್ರೀತೆ.

ಪದ

ಪೊಡವಿಗಧಿಕ ಮಹೀಪುರದ  ಮೃಢ ಶ್ರೀಗಂಗಾ
ಧರನ ಭಜಿಸಿ ॥ಕರುಣಿಸಮ್ಮಾ ಧರಣಿಜಾತೆ ॥

ಲಕ್ಷ್ಮಣ : ಅಮ್ಮಾ ಮಂಗಳಾಂಗಿ, ಅಂಗಜಭವ ಭಸಿತಾಂಗ ದಕ್ಷ ಶಂಭುಲಿಂಗನೆಂಬ ಬಿರುದನ್ನು ವಹಿಸಿರುವ ತುಮಕೀಪುರದ ಭಕ್ತ ಜನಸಂಗ ಹೃತ್ಪದ್ಮಲಿಂಗ ಭವಭಂಗನಾದ ಶ್ರೀ ಗಂಗಾಧರೇಶನ ಪಾದಂಗಳಿಗೆ ಸಾಷ್ಠಾಂಗ ಪ್ರಣೀತೆಯಾಗಿ ಯನ್ನ ಸಂಗಡ ಕಾನನಕ್ಕೆ ಬರಬೇಕಮ್ಮ ಮಾತೆ ಲೋಕ ಪ್ರಖ್ಯಾತೆ.

ಸೀತಾದೇವಿ : ಅಪ್ಪಾ ಲಕ್ಷ್ಮಣಾ, ಯನ್ನ ಮನದ ಬಯಕೆಯನ್ನು ಸಲಿಸಿದ್ದು ಯನಗೆ ಅತಿಸಂತೋಷ ವಾಯಿತು. ವನಜಾಕ್ಷಿಯಾದ ಕೌಸಲ್ಯಾದೇವಿಯೊಡನೆ ಯನ್ನ ಮನದನುವನ್ನು ವಿವರಿಸಿ ವಿನಯ ಪೋಷಕದಿಂದ ನಮಸ್ಕರಿಸಿ ಘನತರದ ಆರ್ಶೀರ್ವಾದವಂ ಕೈಗೊಂಡು ಬರುವೆ. ಅನುವರದಿಂದ ರಥವನ್ನು ಸಿದ್ಧಪಡಿಸಿಕೊಂಡಿರಬೇಕಪ್ಪಾ ಸೌಮಿತ್ರೀ ಚಾರುಚರಿತ್ರೀ.

ಲಕ್ಷ್ಮಣ : ಅದೇ ಮೇರೆಗೆ ರಥವನ್ನು ಸಿದ್ಧಪಡಿಸಿಕೊಂಡಿರುವೆನಮ್ಮಾ ಪೃಥ್ವಿಜ ಮಾತೇ ಸೀತೇ.

 

(ಕೌಸಲ್ಯೆ ಬರುವಿಕೆ)

ಪದ

ಭಾಮಿನೀ ತೋರಿಸೆ  ರಾಮನ ಪ್ರೀತೆಯಾ
ಕಾಮಿನೀ ಮಣಿ  ಭೂಮಿಜಾತೆ ಸೀತೆಯಾ ॥
ವನಕೆ ಪೋಗುವಳೆಂಬೋ  ವಾರ್ತೆಯ ಕೇಳಿ
ಮನಕೆ ಯೋಚನೆ ಪುಟ್ಟಿ ಬಂದೆನಿಲ್ಲಿಗೆ ॥
ತುಂಬಿದ ಬಸುರಿಯಾ  ವನಕೆ ಕಳುಹಿಸು
ವದು  ಅಂಬುಜಾಕ್ಷನಿಗಿದು ಸಂಭ್ರಮವೇನು ॥
ಧರಣೀ ಪ್ರಕಟನಪುರಪರಿಪಾಲ  ಶ್ರೀ
ಗಂಗಾಧರನು  ಮೆಚ್ಚುವನೆ ತೋರೇ ಮುದ್ದು ಸೊಸೆಯ ॥

ಕೌಸಲ್ಯೆ : ಯಲೈ ಚಾರ ಪೇಳುವೆನು ಕೇಳು ನಮ್ಮ ವಿಚಾರ. ಈ ಧರಣಿಮಂಡಲ ಮಧ್ಯದೊಳಗೆ ಸುರಪನಮರಾವತಿಗೆ ಮಿಗಿಲಾಗಿ ಮೆರೆಯುವ ಪುರವ ಅಯೋಧ್ಯೆಯಂ ಆಳುವ ದಶರಥರಾಜೇಂದ್ರರಿಗೆ ವಶವರ್ತಿಯಾದ ಬಿಸುಜಾಕ್ಷಿ ಕೌಸಲ್ಯಾದೇವಿಯೆಂದು ತಿಳಿಯುವಂಥವನಾಗಪ್ಪಾ ಸಾರಥಿ. ಅಪ್ಪಾ ಸಾರಥಿ ಯೀ ಸಭೆಗೆ ಬಂದ ಕಾರಣವೇನೆಂದರೆ ಯನ್ನ ಮುದ್ದು ಸೊಸೆಯಾದ ಜಾನಕಿಯು ಕಾನನಕ್ಕೆ ತೆರಳುವಳೆಂಬ ವಾರ್ತೆಯ ಕೇಳಿ ಬುದ್ದಿಯಂ ಪೇಳಲುದ್ದಿಶ್ಯ ಬಾಹೋಣವಾಯಿತು. ಧಾವಲ್ಲಿ ಇದ್ದಾಳೋ ತೋರಿಸಪ್ಪಾ ದೂತಾ ಲಾಲಿಸೆನ್ನ ಮಾತಾ.

ಸೀತೆ : ನಮೋ ನಮೋ ಅತ್ತೆಮ್ಮನವರೇ ಸತ್ಯಗುಣ ಪಯೋಧರೆ.

ಕೌಸಲ್ಯ : ಸೌಮಂಗಲ್ಯಾಭಿವೃದ್ದಿರಸ್ತು ದೀರ್ಘಾಯುಷ್ಯಮಸ್ತು ಬಾರಮ್ಮಾ ನೀ ಧರಣಿಜಾತೆ.

ಪದ

ಚಿತ್ತವಿಪುದು ತಾಯೇ  ಅತ್ತೆ ಕೌಸಲ್ಯೆಯೇ
ಬಿತ್ತರಿಸುವೆ ನಾನೊಂದು ವುತ್ತರವನ್ನು  ಮುನಿ
ಸುತೆಯರನು ನೋಳ್ಪ  ಮನವು ಇರಲು ಇನ್ನ
ಜನಿಸಿತು  ಪೋಪೆನು  ವನಕೆ ನಾಂ ಬೇಗ ॥
ಚಿತ್ತವಿಪುದು ತಾಯೆ ॥ಅತ್ತೆ ಕೌಸಲ್ಯಾ ॥

ಸೀತೆ : ಅಮ್ಮಾ ತಾಮರಸದಾಕ್ಷಿಯಳಾದ ಕೌಸಲ್ಯಾ ದೇವಿಯೇ ಲಾಲಿಸಬೇಕು. ಭೂಮಿಜನವಿನುತರಾದ ಮುನಿಕಾಮಿನಿಯರನ್ನು ನೋಡಬೇಕೆಂದು ಆ ಮಹಾರಣ್ಯ ಭೂಮಿಗೆ ತೆರಳುವುದಕ್ಕಾಗಿ ನನ್ನ ಮನದಲ್ಲಿ  ಕಾಮಿಸಿದ್ದೇನೆ. ಹೇ ಸಾಮಜಯಾನೇ ನಿನ್ನ ಮದ್ದು ಸೊಸೆಯ ಮೇಲೆ ಪ್ರೇಮವಿರಿಸಿ ತಾಮಸವಿಲ್ಲದೆ ನೇಮವನ್ನು ಪಾಲಿಸಿದರೆ ಪೋಗಿ ಬರುವೆನಮ್ಮ ಅತ್ತೆಮ್ಮನವರೇ.

ಪದ

ತುಂಬಿದ ಬಸುರಿ ನೀ  ಕಂಭು ಕಂದರಿಯೇ
ನಂಬಿ ಕಾಡಿಗೆ ಪೋಪೆನೆಂಬುದು ಸರಿಯೇ ॥

ಕೌಸಲ್ಯ : ಅಮ್ಮಾ ಅಂಬುಜೋದರಿ ಕೇಳು ಕಂಬುಕಂದರೀ, ತುಂಬಿದ ಬಸುರಿನಲ್ಲಿ ಗಂಭೀರದಿಂದ ಆಲಯದೊಳಿರದೆ ಹಂಬಲಿಸಿ ಕಾನನಕ್ಕೆ ಪೋಗುವಳೆಂಬ ಮಾತು ತುಂಬೆ ಮರಿ ಸಂಪಿಗೆಯ ಮರಿಗಳನ್ನು ಬಯಸಿದಂತಾಯಿತು. ಶಂಭುರಾಣಿಸದೃಶೆಯೇ ನೀನು ಪೋಗುವದೇನು, ಸಂಭ್ರಮದಲ್ಲಿ ಅಂಬುಜಾಕ್ಷ ನಿನಗೆ ನೇಮವಿತ್ತನೆಂಬ ವಾರ್ತೆಯಂ ಕೇಳಿ ಗಾಡಾಂಧಕಾರ ಕವಿದಂತೆ ತುಂಬಾ ವ್ಯಸನ ಪುಟ್ಟಿರುವದಮ್ಮಾ ಸೀತೇ ಪೋಗುವದೇನು ರೀತೆ.

ಪದ

ಅಮ್ಮಾ ಅ ಮಹಾವಿಭು  ರಘುರಾಮನ ದಯವು
ಭಾಮೆಯೊಳು ಇರಲೇನು  ಭೂಮಿಯೊಳು ಭಯವು ॥

ಸೀತೆ : ಅಮ್ಮಾ ಕಾಮಿನೀ ಕುಲ ಕಾಮಧೇನುವೆನಿಪ ಅತ್ತೆಮ್ಮನವರೇ ಕೇಳಿ, ಭೂಮಿಯಲ್ಲಿ ಭಕ್ತಜನರಿಗೆಲ್ಲಾ ಕಾಮಿತಾರ್ಥಗಳ ಕೊಡುವ ಸಕಲ ಚೈತನ್ಯ ಸ್ವರೂಪನಾದ ಶ್ರೀ ಮಹಾವಿಷ್ಣುವೆನಿಪ ಆ ಮಹಾವಿಭವ ಶ್ರೀರಾಮನ ಅಂತಃಕರಣ, ಪ್ರೇಮದೊಲ್ಲಭೆಯ ಮೇಲೆ ಪರಿಪೂರ್ಣವಾಗಿ ಇರಲಿಕ್ಕೆ ನೀ ಮರುಗುವದ್ಯಾತಕಮ್ಮಾ ಭಾಮೆ ಸದ್ಗುಣ ಧಾಮೆ.

ಪದ

ಕಟ್ಟಾಣಿ ನೀ ಪೋಗಲಾಗದು ಕೇಳು  ಬಟ್ಟ
ಮುಖವು  ಬಾಡಿ ಬಳಲುವೆ ಕೇಳೇ ॥ಕಟ್ಟಾಣಿ ನೀ ॥

ಕೌಸಲ್ಯೆ : ಅಮ್ಮಾ ಕಟ್ಟಾಣಿ ಮಣಿಯೇ, ಯೆಷ್ಠು ಮಾತ್ರಕ್ಕೂ ನೀನು ವನಾಂತರಕ್ಕೆ ಇಷ್ಠಪಟ್ಟು ಪೋಗಲ್ಯಾತಕ್ಕೆ? ಮತ್ಕುೃಷ್ಠವಾದ ಕಷ್ಠಗಳು ತೋರಿ ಮುಖ ಕಳೆಗೆಟ್ಟು ಕಷ್ಠಕ್ಕೆ ಕಾರಣಳಾಗಿ ಬಳಲುವೆಯಲ್ಲಮ್ಮಾ ಇಳೆಯನಂದನೆಯೇ.

ಪದ

ಶ್ರೀ ತುಮಕೀಪುರ  ದಾತನ ಸಖನು  ಪ್ರೀತಿ
ಯಿಂದಲೀ ಕಾಯುವ  ನಾ ತೆರಳುವೆನೂ
ಚಿತ್ತವಿಪುದು ತಾಯೇ  ಅತ್ತೇ ॥

ಸೀತೆ : ಅಮ್ಮಾ ನೀತಿಕೋವಿದೆಯಾದ ಅತ್ತೆಮ್ಮನವರೇ ಕೇಳಿ, ಭೂತಳಕಧಿಕಮಾದ  ಶ್ರೀತುಮಕೀಪುರ ನಿವಾಸ ಭೂತೇಶ ಗಂಗಾಧರೇಶನ ಸಖನಾದ ಪೀತಾಂಬರನು, ಪ್ರೀತಿಯಿಂದ ಯನ್ನನ್ನು ಪೋಷಿಸುವನಾದ ಕಾರಣ ನೀ ತವಕದಿಂದ ಆಶೀರ್ವದಿಸಿ ಕಳಿಸಿಕೊಡಮ್ಮಾ ತಾಯೇ ಸದ್ಗುಣಸ್ತ್ರೀಯೇ.

ಕೌಸಲ್ಯ : ಅಮ್ಮಾ ವಾಸುಕಿವೇಣಿಯಾದ ಭೂಸುತೆಯೇ ಕೇಳು, ಈ ಸಮಯದಲ್ಲಿ ನಿನಗೆ ಭಾಸುರ ಕುಂಕುಮಪುರವಾಸನಾದ ಶ್ರೀ ಲಕ್ಷ್ಮೀಶ ವಾಸುದೇವನೆಂಬ ನಾರಸಿಂಹನು ಲೇಸುದೋರಲೀ ನೀನು ಸುರಕ್ಷಿತದಿಂದ ಪೋಗಿಬಾರಮ್ಮಾ ಸೀತೆ ಲೋಕಮಾತೆ.

ಸೀತೆ : ಅದೇ ಪ್ರಕಾರ ಪೋಗಿ ಬರುತ್ತೇನಮ್ಮಾ ಮಾತೇ ಲೋಕವಿಖ್ಯಾತೆ ॥ಅಪ್ಪಾ ಲಕ್ಷ್ಮಣಾ ಮುನಿಗಳಿರುವ ಕಾನನಕ್ಕೆ ರಥವನ್ನು ನಡಿಸಬೇಕಪ್ಪಾ, ಲಕ್ಷ್ಮಣ ರಕ್ಷಿಸಲಿ ಲಕ್ಷ್ಮೀರಮಣ.

ಪದ

ನಡೆಸಿದ ರಥವನು  ಲಕ್ಷ್ಮಣದೇವ  ಘೋರ
ಅಡವಿಯ  ಪಥವಿಡಿದಾಕ್ಷಣ  ವಡೆಯನ ಮಡ
ದಿಯ ವಡಗೊಂಡಾಕ್ಷಣ ॥ತೋರಿತು
ಕಡುದುರ್‌ಲಕ್ಷಣ  ತುರಗವ ಸನ್ನೆಯ ಮಾಡಿ
ಕಡುಭರದೊಳು  ಮುಂಬರಿದೋಡಲು
ಗಿರಿಜಂಪರ ಪೊದೆ  ಯೆರಿಗುಟ್ಟೆಗಳನು
ನೆರೆ ದಾಂಟುತಾ  ಘನತರದ ಆರಣ್ಯಕೆ
ನಡೆತಂದಾ ॥ಕ್ಷೋಣಿ ಮಧ್ಯದೊಳ್ ರಾಜಿಪ
ವರದ್ರೋಣಪುರವ ಪರಿಪಾಲಿಪ  ಸ್ಥಾಣುವಿನಡಿ
ಗಳು  ಮಾಣಿರೆ ಭಜಿಸಿ  ತತ್ರಾಣಿ  ಲಕ್ಷ್ಮಣ
ಸತಿ ಜಾಣನು ಮುಂದಕೆ ॥ನಡೆಸಿದಾ ॥

ಪದ

ಧೀರಾ ಲಕ್ಷ್ಮಣ ನೋಡೈ  ದಾರಿಯೊಳ್ ವು
ತ್ಪಾತ  ತೋರುತಲಿದೆ ಯನಗೆ  ಸಾರುತ್ತಲಿದೆ
ಗೃಧ್ರ  ಕಾಕಾಗ್ರ ಕಂಗಳು  ಸೇರಿ ಆರ್ಭಟಿಸುತ್ತಲಿಹವು ॥ಕ್ರೂರ ಪಕ್ಷಿಸಂಕುಲವು

ಸೀತಾ : ಅಪ್ಪಾ ಲಕ್ಷ್ಮಣ, ನಾವು ಪೋಗುವ ದಾರಿಯಲ್ಲಿ ಕ್ರೂರ ಸರ್ಪಾದಿ ಕಾಕಗೋಕಗೃಧೃಂಗಳು ಅನೇಕವಾಗಿ ಸೇರಿ ಭೀಕರಧ್ವನಿಗಳಿಂದ ಆರ್ಭಟಿಸುತ್ತಾ ಯಡಪಾರುವುದನ್ನು ನೋಡಿದರೇ ಮೀರಿದ ವುತ್ಪಾತಗಳಿಗೆ ಕಾರಣವಾಗಿ ತೋರುವುದಪ್ಪಾ ಸೌಮಿತ್ರಿ.

ಪದ

ಯದೆಯು ಅದರುತಲಿದೇ  ಕುದುರೆ ಬೆದರು
ತಲಿದೇ  ಯೆದಿರಿ ನೋಳ್ಪವುದೆ ॥ವಿಧವಿಧವಾದ
ದುಶ್ಶಕುನ ತೋರುತಲಿದೆ ॥ಇದು ಯೇನು
ಕಂಟಕ  ಮುಂದೇನಾಗುವದೋ ಲಕ್ಷ್ಮಣಾ ॥ಧೀರ ॥

ಸೀತಾ : ಅಪ್ಪಾ ಲಕ್ಷ್ಮಣಾ, ಇದು ಯೇನು ಯಮ್ಮ ಯೆದುರಿನಲ್ಲಿ ಹದುಳ ತವಕದಿಂ ಪೋಗುವ ಈ ರಥ ಕುದುರೆಗಳು ಪಡದಲ್ಲಿ ನಿಂತು ಮೈವದರಿಸುತ್ತಾ ಇರುವುದನ್ನು ನೋಡಿ ಯನ್ನ ಹೃದಯದಲ್ಲಿ ಅದುರು ಪುಟ್ಟಿ ಬೆದರಿ ಜರ್ಜರಿಸುವದು. ಮುಂದೆ ಇದು ಯೇನೋ ವಂದು ವಿಧಮಾದ ಕಂಟಕಮೆನಗೆ ತೋರುವದಪ್ಪಾ ಸೌಮಿತ್ರೀ ಚಾರುಚರಿತ್ರೀ.

ಪದ

ಧರಣೀ ಶ್ರೀ ಪ್ರಕಟನಾ  ಪುರನಿವಾಸನಾ
ಚರಣವ ಸ್ಮರಿಸುತ್ತಲೀ ॥ತೆರಳಿಸು
ರಥವನ್ನು  ಮುಂದಕ್ಕೆ ಸೌಮಿತ್ರಿ ಗುರುಪತ್ನಿ
ಯರ ನೋಡುವೆನು ॥ಬ್ಯಾಸರ ಕಳೆಯುವೆನು ॥

ಸೀತಾ : ಅಪ್ಪಾ ಸೌಮಿತ್ರೀ, ಈ ಧರಣಿಗತಿಶಯಮಾದ ಪ್ರಕಟನಪುರದಲ್ಲಿ ಸ್ಥಿರವಾಗಿ ನೆಲಸಿರುವ ಪರಶಿವಮೂರ್ತಿ ಪಾರ್ವತೀಶನಾ ಶ್ರೀ ಗಂಗಾಧರೇಶನಾ ಚರಣಾರವಿಂದಂಗಳಂ ಸ್ಮರಿಸುವನಾಗಿ ಗುರುಪತ್ನಿಯರಿರುವ ಕಾನನಕ್ಕೆ ರಥವನ್ನು ತೆರಳಿಸಪ್ಪಾ ಲಕ್ಷ್ಮಣ ಮತಿ ವಿಚಕ್ಷಣಾ.

ಕಂದ

ವಂದಿಪೆ ಜನನಿಯೆ ಕೇಳ್  ಮಂದಾಕಿನಿ
ಯನು  ದಾಂಟಿಹುದು  ದೋಣಿಯ ಸೇರು
ತಂ  ಮುಂದಿದೆ ತಾಪಸರ  ವನವು ಚಂದಿರವದನೆ ॥

ಲಕ್ಷ್ಮಣ : ಅಮ್ಮಾ ಚಂದಿರವದನೇ, ಸುಂದರವಾದ ಈ ರಥವನ್ನು ಇಳಿದು ದೊಣಿಯನ್ನು ಏರಿ ಮುಂದೆಸೆವ ಮಂದಾಕಿನಿಯನ್ನು ದಾಂಟಿ ವೋದರೇ ಚಂದವಾದ ಮುನಿಪತ್ನಿಯರಿರುವ ನಂದನ ವನವು ಗೋಚರಿಸುವದಮ್ಮಾ ತಾಯೇ ಕರುಣವಿಟ್ಟೆನ್ನ ಕಾಯೇ.

ಸೀತೆ : ಅದೇ ಪ್ರಕಾರ  ದೋಣಿಯನ್ನೇರಿ  ಮುಂದೆಸೆವ ಗಂಗೆಯಂ ದಾಂಟಿ  ಮುಂದಕ್ಕೆ ಸಾಗಿ ಪೋಗೋಣ ಬಾರಪ್ಪಾ ಲಕ್ಷ್ಮಣಾ ॥