(ಕರ್ಕಾಟಕಿ ಬರುವಿಕೆ)

ಪದ

ಬಂದಳಸುರೆ ಬೇಗದಿಂದಲೀ  ವನಮಧ್ಯದ
ಲ್ಲಿ ನಿಂದು ಕೂಗಿ ಆರ್ಭಟಿಸುತ್ತಲಿ ॥
ದುರುಳಧರಕೆ ಕರವ ಬಡಿಯುತ  ಹೆ
ಮ್ಮಾರಿಯಂತೆ  ತೆರೆದು ಕಣ್ಣ  ಕಿಡಿಯ ಸುರಿಯುತಾ ॥
ಮಾರ್ಗ ಮಧ್ಯದಲ್ಲಿ ಚರಿಸುತಾ ॥ಮಾನವರ
ಹಿಡಿದು  ತನುವ ಸೀಳಿ  ಕುಡಿವೆ ರುಧಿರವಾ ॥
ಧರಣಿಗಧಿಕ ದ್ರೋಣಪುರವನು  ಪಾಲಿಸುವ
ಗಂಗಾಧರನು ದೊರಕಿಸಿದನು ॥ಪ ॥ನರರನೀಗ

ಕರ್ಕಾಟಕಿ : ಯಲವೆಲವೊ ನರನೇ ವರಭಯ ಪೋರನೇ, ಸರಸದಿಂ ಈ ವರಸಭೆಗೆ ಬಂದ ಪರಮ ಸುಂದರಿ ಧಾರೆಂದು ವಿಚಾರಿಸುತ್ತಾ ಇದ್ದೀ ನೀ ಧಾರು ನಿನ್ನ ಪೆಸರೇನು ಜಾಗ್ರತೆಯಿಂದ  ವಿಸ್ತರಿಸೋ ನರನೇ ವರಭಯ ಪೋರನೆ.

ಯಲಾ ಸಾರಥಿ ಈ ಸೃಷ್ಠಿಗೆ ಶ್ರೇಷ್ಠತರಮಾದ ಲಂಕಾ ಪಟ್ಟಣಾಧಿಪ ಅಷ್ಠದಕ್ಷ ಬಾಹುಬಲ ಗರ್ವಿಷ್ಠನಾದ ರಾವಣನ ಅಷ್ಠಮಂದಿ ದಾನವಿಯರ ಸಮೂಹಕ್ಕೆ ಶ್ರೇಷ್ಠಳಾದ ಕರ್ಕಾಟಕಿಯೆಂದು ತಿಳಿಯೋ ಚಾರ ವರಭಯ ಪೋರ.

ಯಲಾ ಚಾರಕಾ ಈ ವರಸಭೆಗೆ ಬಂದ ಕಾರಣವೇನೆಂದರೆ ವಿಸ್ತಾರವಾಗಿ ಪೇಳುತ್ತೇನೆ ಕೇಳೋ ನರನೆ ವರಭಯ ಪೋರನೇ.

ಪದ

ಭಳಿರೆ ಡಿಳಿರೆ  ದಿಗ್ಬಳಿಗರನೊಬ್ಬನೇ
ಬಹು ನಿಬ್ಬರದೊಳು  ತಬ್ಬುವೆ ನಿಬ್ಬಟೆಯು
ರಿ  ದೆಬ್ಬುಲಿ ಪರಿ ಹುಬ್ಬರಿಸುವೆ  ನೋಡಿ
ನೋಡಿವರ  ಜೋಡಿಯ
ಸಿಗಿದಿಡುವೆ  ಕೋರೆದಾಡೆಗಳಲಿ
ನಮ್ಮ ಎಡೆಯ ಮಾಡಿಸುವೆನು
ನೋಡ್ ತನವ ॥ಭಳಿರೆ ॥

ಕರ್ಕಾಟಕಿ : ಅಪ್ಪಾ ಸಾರಥಿ. ನಮ್ಮ ವನಾಂತರದಲ್ಲಿ ಬರುವ ನರ ಮಾನವರು ರಥಚೀತ್ಕಾರವು ತುರಗರವದ ಹೇಶಾರವ ಈ ಶಬ್ದಗಳು ಕೇಳಿ ಅಹಹಾ ಯನ್ನ ಕರ್ಣ ಕಠೋರವಾಗಿರುವುದು. ಬರುವ ಚಂಡರ ರುಂಡವಂ ಖಂಡಿಸಿ ತಿಳಿ ರುಧಿರಮಂ ಘಳಿಲನೆ ಕೂನವಂಗೈದು ವಳಗಿರುವ ಮಾಂಸವನ್ನು ಸಂಶಯದೆ ತರಿದು ಮಸಾಲೆಯಿಟ್ಟು ಪಾಕವಂಗೈದು ಯನ್ನ ಬಂಧುಗಳಿಗೆಲ್ಲಾ ಶ್ರೇಷ್ಠ ಅವುತಣ ಮಾಡಲಿಕೆ ಬಂದು ಇದ್ದೇನೋ ಸಾರಥಿ.

ಅಹೋ ಸಾರಥಿ, ಪ್ರೀತಿಯಿಂದ ನರಮಾಂಸವನ್ನು ತೃಪ್ತಿಯಿಂದ ಭೋಜನಗೈದು ಅನೇಕ ದಿನಗಳಾಗುತ್ತಾ ಬಂತು. ಅಹಹಾ ಯನ್ನ ಅದೃಷ್ಟ ಪುಣ್ಯದಿಂದ ಇಂದಿನ ದಿನ ತೊಂದರೆಯಿಲ್ಲದೆ ಸಿಕ್ಕಿತು. ಮುಂದೆ ಮಂದಮತಿ ನರರ ಸಂದೇಹವಿಲ್ಲದೆ ಹಿಡಿದುಕೊಂಡು ತಿನ್ನಲಿಕ್ಕೆ ಬಂದು ಇದ್ದೇನೋ ದೂತ ನೋಡೆನ್ನ ಘಾತ.

ಪದ

ಯೀಶ ಮಹೇಶ ಯೀಶನು ಮ
ಹೇಶನು  ಜಗದೀಶನು ಗಿರಿಜೇಶನ
ದಯ  ವೋಸರಿಸದೆ  ಸೂಸಿತು ನಾ ಮೀಸ
ಲಿರುವೆನೀ ಸಮಯದೀ ॥ಭಳಿರೆ ॥

ಕರ್ಕಾಟಕಿ : ಆಹಾ ಸಾರಥಿ, ಈ ಪೊಡವಿಯ ಮಧ್ಯದಲ್ಲಿ ಸಡಗರದಿ ರಾಜಿಸುವ ತುಮಕೀ ಪಟ್ಟಣವ ನಿಷ್ಠೆಯಿಂ ಪಾಲಿಸುವ ಈಶ ಗಂಗಾಧರೇಶನ ಭಾಸುರನ ಪಯೋದ್ರುಷ್ಠಿಯಿದ ಯನ್ನ ನಾಸಿಕಕ್ಕೆ ಸೂಸಿದ ನರವಾಸನೆಯಂ ಕಂಡು ಆಸೆಪಟ್ಟು ಮೀಸಲಾಗಿ ಕಾದಿರುವೆನೋ ಸಾರಥಿ.

ಸೀತೆ : ಅಪ್ಪಾ ಲಕ್ಷ್ಮಣಾ, ಲಕ್ಷ ಪಣೆಗಳಾದರು ವಂದೇ ಬಾರಿ ಕುಕ್ಷಿಗಾಧಾರಗೊಂಬ ಈ ರಾಕ್ಷಸ ಮೂಳಿಯು ಯಮ್ಮನ್ನು ಹಿಡಿದು ಭಕ್ಷಿಸದೇ ಬಿಡುವಳಲ್ಲ. ಅಕ್ಷಯಾಸ್ತ್ರದಿಂದ ತಕ್ಷಣ ಪರಿಹರಿಸ ಬಾರದೇನಪ್ಪಾ ಲಕ್ಷ್ಮಣಾ ರಕ್ಷಿಸಲೈ ಲಕ್ಷ್ಮೀರಮಣಾ.

ಲಕ್ಷ್ಮಣ : ಅಮ್ಮಾ ಫಣಿನಿಭವೇಣೀ, ಬಣಗು ಮೂಳಿಯಾದ ರಕ್ಕಸಿಯನ್ನು ಕ್ಷಣ ಮಾತ್ರದಲ್ಲಿ ಈ ಕಣೆಯಿಂದ ಹಣಿದು ಕೆಡಹಿ ರಣಭೂತಗಳ ಪಾಲು ಮಾಡುವೆನಮ್ಮಾ ಗುಣ ಪಯೋನಿಧಿಯೇ.

ಪದ

ಬಿಡು ಬಿಡು ಬಿಡು ದಾರಿಯ  ಯೆಲೆ ಧಡಿಗ
ರಕ್ಕಸಿಯೇ ನೀನು ಕೆಟ್ಟೆಯಾ  ಗುಡಿಗುಡಿಸುತ
ನಿನ್ನ  ಕಡುಗರ್ವಗಳನ್ನು  ಕಡೆಗಾಣಿಸುವೆನು
ದೃಢಕರತೆರದೊಳು  ಬಿಡು ಬಿಡು ದಾರಿಯಾ
ಯಲೆ ಧಡಿಗ ರಕ್ಕಸಿಯೇ ॥

ಲಕ್ಷ್ಮಣ : ಯಲೇ ಧಡಿಗ ರಕ್ಕಸಿಯೇ ಕೇಳು, ಮಡಿದ ಪೆಣಗಳನ್ನು ತಿಂದು ಹಡಗಿನಂತೆ ವಡಲಂ ಬೆಳಸಿಕೊಂಡಿರುವ ರಕ್ಕಸಿಯೇ ಕೇಳು  ಗದ್ದಲಿಸಿ ಯನ್ನನ್ನು ಪಿಡಿದು ಭಕ್ಷಿಪೆನೆಂದು ಕಡಗೋಲಿನಂತೆ ಪಲ್‌ಗಳಂ ಕಟಿಕಟಿನೆ ಕಡಿದು ಗುಡಿಗುಡಿಸಿ ನುಡಿದ ಮಾತ್ರವೇ ನಿನ್ನ ಪುಡಿಗರ್ಜನೆಗೆ ಭಯಪಡುವನಲ್ಲಾ, ನಿನಗೆ ತುದಿಗಾಲ ವದಗಿದೇ ರಂಡೆ. ಎಲೇ ಪಾತಕಿ ರಂಡೆ ಕಡು ತೀವ್ರದಿಂದ ಪಥವನ್ನು ಬಿಡದೆ ರಥವನ್ನು ತಡೆದಿದ್ದೆ ಆದರೆ ನಿನ್ನ ತೊಡೆ ಯೆಲುಬುಗಳನ್ನು ಪುಡಿ ಪುಡಿಯಾಗಿ ಕತ್ತರಿಸಿ ವಡಲೊಳಗಿರುವ ನಿನ್ನ ಕರುಳುಗಳನ್ನು ಕಡೆಗೆ ಸುರಿಯುವಂತೆ ಇಕ್ಕೋ ದ್ರುಢ ಶರಕರದೋಳ್ ಪಿಡಿದಿರುವ ಕೂರ‌್ಗಣೆಯಿಂದ ಜಡಿದು ಕೆಡಹುವೆನೆ ತುಚ್ಛರಕ್ಕಸಿ.

ಪದ

ಬಿಡೆ ಬಿಡೆನೆಲೋ ಮನುಜಾ ನಿನ್ನ ಹಿಡಿದು
ಭಕ್ಷಿಪೆ ಸಹಜಾ  ತಡೆಯದೆ ನಿನ್ನೊಡಲ ಬಗೆದು
ಬಿಡದೆ ರುಧಿರವ ಕುಡಿಯುವೆನೀಗ ॥

ಕರ್ಕಾಟಕಿ : ಯಲೇ ತಡಕಿ ನೋಡಿದರು ವಡಲೊಳಗೆ ಹಿಡಿ ಮಾಂಸವಿಲ್ಲದೆ ತಡಿಕೆಯಂತೆ ಬಡಿದಾಡುವ ಬಡಮನುಜನೇ ಕೇಳು, ವಡಲ ತೃಷೆಯನ್ನ ತಡೆಯಲಾರದೇ ಕಡು ಕಳವಳವ ಪಡುತ್ತಾ ಮಡಿದ ಶವಗಳನ್ನು ತಡಕುತ್ತಲಿರ್ದ ಈ ಧಡಿಗ ರಕ್ಕಸಿಯ ಬಾಯಿಗೆ ಕಡಲೇಗಿಡದಂತೆ ನಡುಗಿಡದಲ್ಲಿ ನೀನು ಸಿಕ್ಕಿದ ವೇಳೆ ಬಿಡುವಳಲ್ಲ. ಅಹೋ ಖುಲ್ಲ, ತಡೆಯದೆ ನಿನ್ನ ಗಡಣಿಸಿ ಪಿಡಿದು ವಡಲಿನಲ್ಲಿರುವ ರುಧಿರವನ್ನು ಕುಡಿದು ನಡು ತೊಡೆಗಳನ್ನು ಮುರಿದು ಪುಡಿ ಪುಡಿ ಮಾಡಿ ಬೇಯಿಸಿ ಸಡಗರದಿಂದ ನುಂಗಿ ನೀರ್ ಕುಡಿದು ಬಿಡುವೆನೆಲೋ ನರನೇ ತಿಳಿ ಪಾಮರನೇ.

ಪದ

ಹೆಚ್ಚು ವಚನ ಬಿಡು ಮೂಳಿಯೇ  ಛೀ
ಮುಚ್ಚು ಬಾಯಿ ಕುಲಗೇಡಿಯೇ  ಎ
ಚ್ಚು ಶರವ ನಾನೀಗಲೇ ನಿನ್ನಯಾ  ಕೆ
ಚ್ಚು ಮುರಿಯುವೆ ಯಚ್ಚರದಿಂದಿರು ॥
ಬಿಡು ಬಿಡು ದಾರಿಯಾ ॥ಯಲೆ ಧಡಿಗೆ ॥

ಲಕ್ಷ್ಮಣ : ಯಲೇ ತುಚ್ಛ ಮೂಳಿಯೇ, ಹೆಚ್ಚಿನ ರೋಷದಿಂ ಬಿಚ್ಚಿದ ನೇತ್ರಂಗಳಂ ಮುಚ್ಚದೆ ಕಿಚ್ಚಿನಂತೆ ಕಿಡಿಗರೆದು ವುಚ್ಚುನಾಯಿಯಂತೆ ಬೊಗಳಿದ ಮಾತ್ರವೀ ನಿನ್ನ ಪುಡಿ ಘರ್ಜನೆಗೆ ನಾನು ಬೆಚ್ಚಿ ಬೆದರುವೆನೆ. ಹೇ ಕಚ್ಚುರುಕ ರಂಡೆ ಹುಚ್ಚು ಮುಂಡೆ, ಹೆಚ್ಚು ವಚನಗಳನ್ನು ವುಚ್ಚರಿಸದೆ ಯಚ್ಚರಗೊಂಡು ಬಚ್ಚಲು ರಚ್ಚೆಯಂತೇ ನಾರುವ ನಿನ್ನ ಬಾಯನ್ನು ಮುಚ್ಚುವಂಥವಳಾಗು. ಇಚ್ಛೆಗೆ ಬಂದಂತೆ ಹುಚ್ಚು ಮಾತುಗಳಂ ಬೊಗಳಿದ್ದೇ ಆದರೆ ಈ ಕ್ಷಣದಲ್ಲಿ ನಿನ್ನನ್ನು ಸಂಹರಿಸುತ್ತೇನೆ ನೋಡುವಂಥವಳಾಗೆ ತುಚ್ಛ ರಕ್ಕಸಿ.

ಪದ

ಯಲವೋ ಖೂಳನೇ ನಿನ್ನವರ ಬೊಲುಮೆ
ಪೇಳಿದರಿಂನ್ನ  ಭಲಭಲರೆ ಭ್ರಷ್ಠಾ ನಿನ್ನನು
ಛಲಧಿ ನುಗ್ಗಿ  ಜಲವ ಕುಡಿಯುವೆ ॥

ಕರ್ಕಾಟಕಿ : ಯಲಾ ಖೂಳನಾದ ಮನುಜನೇ ಕೇಳು. ಈ ಸೃಷ್ಠಿಯಲ್ಲಿ ಯನ್ನ ಪೆಸರು ಕೇಳಿದ ಮಾತ್ರದಲ್ಲಿಯೇ ಸುರೇಂದ್ರ ಮೊದಲಾದ ದೇವರ್ಕಗಳೆಲ್ಲರು ಆಳುವ ನಗರಗಳನ್ನು ಬಿಟ್ಟು ಗೋಳಿಡುತ್ತಾ ಪಲಾಯನಕ್ಕೊಳಗಾಗುವರು. ಜಾಳು ನರಮನುಜ ಬಾಳಿಕೆಯಿಲ್ಲದ ಬಲುಮೆಯನ್ನು ಧೂಳೀಪಟ ಮಾಳ್ಪ ಈ ರಕ್ಕಸಿಯ ಮುಂದೆ ಬಹಳವಾಗಿ ಪೇಳಿಕೊಂಡ ಮಾತ್ರವೇ ಕೇಳಿ ಭಯತಾಳಿ ಹೋಗುವಳಲ್ಲ. ಹೋ ಖುಲ್ಲಾ ನೀಳವಾದ ಯನ್ನ ತೋಳುಗಳಿಂದ ತಪ್ಪದೆ ನಿನ್ನನ್ನು ಪಿಡಿದಪ್ಪಿ ತಪ್ಪನೆ ನೆಲಕ್ಕೆ ಅಪ್ಪಳಿಸಿ ತಿಂದು ತೇಗುಬಿಡುತ್ತೇನೋ ನರ ಮನುಜಾ.

ಪದ

ಧರೆಯೊಳು ದ್ರೋಣಪುರೀಶನ  ಶ್ರೀ
ಚರಣದಾಣೆ ಸೆರದಿಂದ ನಾ  ದುರುಳೆ ನಿನ್ನಯ
ಕಿವಿ  ನಾಸಿಕ ಸ್ತನಗಳ  ಗರಿಗರಿಯೆನುತಲೀ
ತರಿದು ಕೆಡಹುವೆನು ॥ಬಿಡು ದಾರಿಯ ॥

ಲಕ್ಷ್ಮಣ : ಯಲೆ ತುಚ್ಚರಕ್ಕಸಿ, ಸರಸರನೆ ನಾವು ಪೋಗುವ ದಾರಿಗೆ ಯೆದುರಾಗಿ ಬಿರಬಿರನೆ ಬಂದು ಹೆಮ್ಮಾರಿಯಂತೆ ನಿಂತು ಧುರಧುರನೆ ನೋಡಿದರೆ ನಾನು ಭಯಪಡುವನಲ್ಲೆ ಪಾತಕಿ ರಂಡೆ ದುರಹಂಕಾರದ ಮುಂಡೆ. ಈ ಧರಣಿಗತಿಶಯಮಾದ  ಪ್ರಕಟನಪುರ ನಿವಾಸ ಈಶ ಗಂಗಾಧರೇಶನ ಚರಣ ಸಾಕ್ಷಿಯಾಗಿ ಪರಮ ಪಾತಕಿಯೇ ನಿನ್ನ ಕರಚರಣ ಕರ್ಣನಾಸಿಕ ಕುಚಗಳನ್ನು ಛೇದಿಸಿರುತ್ತೇನೆ ಭ್ರಷ್ಠ ರಕ್ಕಸೀ.

ಪದ

ವರ ಸೌಮಿತ್ರಿ ತರಳ ನಾವು  ಇರುವ ವನದೊಳು
ಚರಿಸುತಿಹವು  ಕರಿಯು ವರಾಹ  ಕರಡಿ ಪುಲಿಗಳು ॥
ಮುನಿಗಳಿರುವೊ  ಸ್ಥಳ
ವಿದಲ್ಲಾ  ಜನರು ಸುಳಿಯದ  ವನಕೆ ತಂದು
ಭೀತಿಯನ್ನು ಮನಕೆ ಬಿತ್ತಿದಾ ॥

ಸೀತೆ : ಅಪ್ಪಾ ಸೌಮಿತ್ರಿ, ತರಳನೇ ಕೇಳು. ಗುರು ಪತ್ನಿ ಪುತ್ರರಿರುವ ಪರಮ ಆಶ್ರಮಕ್ಕೆ ಕರದೊಯ್ಯಬೇಕೆಂದು ಬೇಡಿಕೊಂಡರೆ ದುಷ್ಟಕರಿವರಾಹ ಕರಡಿ ವ್ಯಾಘ್ರದಿಂ ದುರುಳ ಮೃಗಕುಲ ಚರಿಸುವ ನರ ಸಂಚಾರವಿಲ್ಲದ ಈ ಕಾನನಕ್ಕೆ ಯನ್ನನ್ನು ಕರೆತಂದು ಕೊರತೆಗೆ ಈಡು ಮಾಡಿದೆಯೇನಪ್ಪಾ ಲಕ್ಷ್ಮಣಾ.

ಪದ

ಸಿದ್ಧ ಸಾಧ್ಯರಿಲ್ಲದಂತಾ  ಅದ್ವಾನ
ವನವಿದು  ಮುದ್ದು ಮುನಿಕುಮಾರರಿ
ರುವ  ಸದ್ದು ಕಾಣದೋ  ವರ ಸೌಮಿತ್ರಿ ॥

ಸೀತೆ : ಅಪ್ಪಾ ಲಕ್ಷ್ಮಣ, ನಿನ್ನ ನುಡಿ ಬದ್ಧವೆಂದು ನಿರ್ಧಾರವಾಗಿ ನಂಬಿದ್ದಕ್ಕೆ ಗದ್ದೆಗಿಕ್ಕಿದ ನೀರಿನಂತೆ ಬಯಲು ಮಾಡಿ ಇದ್ದ ಬಳಿಯಲ್ಲಿ ಇರಗೊಡದೆ ವುದ್ಯಾನವನಕ್ಕೆ ಕಾರಣವೇನೆಂದು ಪ್ರಸಿದ್ಧಪಡಿಸಿ ಸಿದ್ದಸಾದ್ಯರು ವಿದ್ಯಾಭ್ಯಾಸ ಮಾಡುವ ಮುದ್ದು ಮುನಿಪುತ್ರರೇ ಮೊದಲಾದ ಸದ್ದು ಸುಳುವೇ ಇಲ್ಲದಿರುವ ಅದ್ವಾನ ಕಾನನಕ್ಕೆ ಯನ್ನನ್ನು ಕರೆತಂದು ಬಿಟ್ಟ ಕಾರಣವೇನಪ್ಪ ಲಕ್ಷ್ಮಣಾ.

ಪದ

ಸುಡುವಾ ಬಿಸಿಲು ತೊಡರಾಗಲು
ಗಿಡದಾ ಪೊದೆಯೋಳ್  ನಡೆಯಲಾರೇ
ಕಡೆಹಾಯಿಸೋ  ಮೃಡನ ಕೃಪೆಯೊಳು ॥ವರನ ಮಿತ್ರಾ ॥

ಸೀತೆ : ಅಪ್ಪಾ ಲಕ್ಷ್ಮಣಾ ಈ ಘೋರಡವಿಯಲ್ಲಿ, ಸುಡುವ ಬಿಸಿಲು ತೊಡರಗಲ್ಲು ನಡೆವರೆ ಮುಳ್ಳು ಗಿಡದ ಪೊದೆಗಳೊಳಗೆ ಅಡಿಯನಿಡಲಾರದೇ ತಡವರಿಸಿ ತೊಡೆಗಳೆರಡು ಗಡಗಡನೆ ನಡುಗುತ್ತಿರುವುದು. ಈ ಕಡು ಕಷ್ಠವನ್ನು ನೀನೆ ಕಡೆ ಹಾಯಿಸಬೇಕೋ ಯೀಶಾ ಗಂಗಾಧರೇಶ.

ಲಕ್ಷ್ಮಣ : ಆಯುಃ ಪರಿಮಾಣವನ್ನು, ಗಳಿಸಿದ ದ್ರವ್ಯವನ್ನು, ಕಲಿತ ಮಂತ್ರವನ್ನು, ಕೊಡುವ ಔಷಧವನ್ನು ನೀಡಿದ ದಾನವನ್ನು, ತನಗೆ ಬಂದ ಮಾನ ಅಪಮಾನಗಳನ್ನು ಬಹಿರಂಗಪಡಿಸಬಾರದಾದ ಪ್ರಯುಕ್ತ ಹೇ ತಾಯೇ ನಾಯಿ ರಜಕನಿಂದ ಅಪನಿಂದ್ಯ ಅವತರಿಸಿತೆಂದು ನಿಮ್ಮ ಪ್ರಿಯನಾದ ಶ್ರೀ ಅರಸನು ಉಪಾಯದಿಂದ ದೇವಿಯವರನ್ನು ಬಿಡಲು ಪ್ರಯತ್ನಿಸಿ ನಿಮ್ಮನ್ನು ವನದೊಳಗಿರಿಸಿ ಬಾರೆಂದು ಯನಗೆ ನೇಮಿಸಿದರಾದ ಕಾರಣ ಈ ಅದ್ವಾನವಾದ ಕಾನನಕ್ಕೆ ವಡಗೊಂಡು ಬಂದೆನಮ್ಮಾ ತಾಯೇ, ಹೀಗಾಯಿತೆಂದು ವರಮನಸ್ಸಿನಲ್ಲಿ ನೊಂದುಕೊಳ್ಳದೇ ನೀ ಗಮನಿಸಬೇಕಮ್ಮಾ ತಾಯೇ ರಾಘವನ ಪ್ರಿಯೇ.

ಸೀತೆ : ಅಯ್ಯೋ ಶ್ರೀ ರಾಮ ರಾಮ, ನಿರ್ಧರವಾಯಿತು ದುಶ್ಶಕುನ ಫಲವು, ನೀನೇ ಕಡೆ ಹಾಯಿಸಬೇಕೈ ಶ್ರೀರಾಮಚಂದ್ರ ಮೂರುತಿಯೆ.

ಕಂದ ಸೌರಾಷ್ಟ್ರ

ಕುಂಕಮ ನಗರ ನಿವಾಸನೇ  ಪಂಕಜದಳ
ನಯನ  ಪದ್ಮನಾಭ ಮುಕುಂದನೇ  ವೆಂಕಟ
ರಮಣನೇ  ಯನ್ನಯ ಸಂಕಟವನು
ಪರಿಹರಿಸಿ ಕಾಯೋ  ಶ್ರೀವರ ನರಸಿಂಹಾ

ಸೀತೆ : ಅಯ್ಯೋ ಶಂಕರ ಮಿತ್ರ ಕುಂಕುಮ ಪುರನಗರಕರ್ತ ಪಂಕಜನೇತ್ರನಾದ ಶ್ರೀ ನರಸಿಂಹ ಮೂರ್ತಿಯೇ, ನಿನ್ನ ಪಾದ ಕಿಂಕರಳಾದ ಯನ್ನ ಸಂಕಟವನ್ನು ಪರಿಹರಿಸಬಾರದೇ ದೇವಾ ಕರುಣಾ ಪ್ರಭಾವ.

ಪದ

ಬಿಟ್ಟನೇ ಪ್ರಾಣೇಶನೋ  ಲಕ್ಷ್ಮಣ ದೇವ
ಕೆಟ್ಟೆನಲೈಯ್ಯ ನಾನು  ಕೊಟ್ಟನೇ
ನೇಮವಾ  ಕರುಣವಿಲ್ಲದೆ ವನಕೆ  ಬಿಟ್ಟು
ಬಾರೆಂದೆನುತಾ ॥
ಕೈಯ್ಯ ಖಡ್ಗದೊಳೆನ್ನಯಾ  ಕೊರಳನು ತಾನು
ಕೊಯ್ಯಲಾರದೆ ಕಾಂತನು  ಜೀಯೆಂಬೋ ವನದೊಳು
ಬಿಟ್ಟು ಬಾರೆಂದೆನುತಾ  ಕೊಟ್ಟನೇ ನೇಮವನ್ನು ॥

ಸೀತೆ : ಅಯ್ಯೋ ಲಕ್ಷ್ಮಣಾ, ಕಾಂತನು ತನ್ನ ಕೈಯ್ಯ ಖಡ್ಗದಿಂದ ಯನ್ನ ಕೊರಳನ್ನು ಕೊಯ್ಯಲಾರದೇ ಕಾಂತಾರದಲ್ಲಿ ಬಿಟ್ಟು ಬಾರೆಂದು ನಿನಗೆ ಅಪ್ಪಣೆಯನ್ನು ಕೊಟ್ಟು ಕಳುಹಿಸಿದನಲ್ಲವೇ, ಅಯ್ಯ ಕರ್ಮವೇ ಅಕಟಕಟ ನಾನು ಕೆಟ್ಟೆನಲ್ಲಪ್ಪಾ ಲಕ್ಷ್ಮಣಾ.

ಪದ

ಹರಬ್ರಹ್ಮ ಸುರಪರೆಲ್ಲಾ  ದಿಕ್ ಪಾಲಕರು
ನೆರೆದು ಯೋಚಿಸಿದರಲ್ಲಾ  ವುರಿಯೊಳು
ಪೋಗಿಸಿ  ದಂದಿಯನೊಳು ದೋಷ
ತರಣಿ ವಂಶಜ ಕಂಡನೇ ॥

ಸೀತೆ : ಅಪ್ಪಾ ಲಕ್ಷ್ಮಣಾ, ಆ ರಾಘವನು ಯನ್ನ ತಿರಸ್ಕರಿಸಿ ಬಿಡುವುದಕ್ಕೆ ಕಾರಣವೇನು? ಪುರದಲ್ಲಿ ವುರಿಯುವ ಅಗ್ನಿಯೋಳ್ ಪರೀಕ್ಷಿಸಿದ ವ್ಯಾಳ್ಯದಲ್ಲಿ ಹರಸುರ ವಿರಿಂಚಾದಿ ದಿಕ್‌ಪಾಲಕರಾದಿಯಾಗಿ ನೆರೆದು ಪರಿಹರಿಸಿ ಪುಷ್ಪ ವೃಷ್ಠಿಯನ್ನು ಸುರಿಸಿದ್ದು ನಿನ್ನ ಮನಸ್ಸಿನಲ್ಲಿಲ್ಲದೆ ದೋಷಿಯೆಂದು  ದೂಷಿಸಿ ಈ ಘೋರ ಅಡವಿಗೆ ಕಳುಹಿದರೇನಪ್ಪಾ ಲಕ್ಷ್ಮಣಾ ಮತಿವೀಚಕ್ಷಣಾ.

ಪದ

ಧರಣೀ ಪ್ರಕಟನ ಪುರವಾ  ಪಾಲಿಪ
ಚಂದ್ರಧರನೇ ನಿಮ್ಮಯ ಪಾದವಾ
ನೆರೆನಂಬಿದೆನು ಈಗ  ದೊರಕಿದ ಕಷ್ಠ
ವಾ  ಪರಿಭವಗೊಳಿಸೋ ದೇವಾ ॥

ಸೀತೆ : ಅಯ್ಯೋ ಹರಹರ, ತುಮಕೀಪುರಾಧೀಶ್ವರಾ ಪರಶಿವನಾದ ಗಂಗಾಧರೇಶ್ವರ, ಈಗಿನ ವ್ಯಾಳ್ಯದಲ್ಲಿ ದೊರಕಿರುವಾ ಕಷ್ಠ ನಿಷ್ಠುರವನ್ನು ನೀನೇ ಕರುಣವಿಟ್ಟು ಕಾಯಬೇಕೋ ದೇವಾ ಕರುಣ ಪ್ರಭಾವ.

ಪದ

ಪತಿಯು ತೊರೆದ ಬಳಿಕಾ  ಯನಗೆ
ಗತಿ  ಯಾರಕಟ ಧಾತ್ರಿಯೊಳಗೆ  ॥

ಕರದಾಯುಧದಿ  ಅರಸನು ಯನ್ನಾ  ಕೊರಳ
ಕಂಡ್ರಿಸದೇ  ತರುಬಿದ ವನಕೆ  ॥

ವುರಿವಾಗ್ನಿಯೊಳು  ರಮಣನು
ಯನ್ನ ಪರಿಕಿಸಿ ಕಂಡನೇ  ಅಪರಾಧವನ್ನಾ ॥
ಧರಣಿಗಧಿಕ  ತುಮಕೀ ಪುರವ
ಪರಶಿವ ನಂಬಿದೇ  ತಮ್ಮ ದಿವ್ಯಪಾದ ॥

ಸೀತೆ : ಅಯ್ಯೋ ಶ್ರೀ ರಾಮರಾಮ, ಕೈಯ್ಯರೆ ಯನ್ನ ಕೊರಳನ್ನು ಕಂಡ್ರಿಸಲಾರದೇ ಜೀಯೆಂಭೋ ಕಾಂತಾರದಲ್ಲಿ ಇಂದು ಮೃಗಗಳ ಪಾಲಾಗಿ ಪೋಗಲೆಂದು ಈ ಚಂಡ ಕಾನನಕ್ಕೆ ತಳ್ಳಿದೆಯ ನಲ್ಲಾ ಕರುಣವ್ಯಾಕೆ ನಿನಗಿಲ್ಲ.

 

(ಸೀತೆಯ ಮೂರ್ಛೆ)

ಪದ

ಏಳು ಭೂಜಾತೆ ಏಳಮ್ಮಾ ಸೀತೆ
ಗೋಳು ನೋಡಲಾರೇ ನಾನು  ಜಗನ್
ಮಾತೆ ॥ಮೇಲು ಹಾಸಿಗೆ  ಲೇಸುದಿಂಬು
ಗಳು  ಆಲಯದೊಳಿರ್ದು  ಬರಿಯ
ಧಾತ್ರಿಯೊಳು ॥ತೋಳು ತಲೆದಿಂಬು
ಮಡಿಸೀ ಈ  ಧೂಳೊಳು ಮಲಗು
ವಂತಾಯಿತೇ  ಚಿಂತೆಯೊಳು ॥

ಲಕ್ಷ್ಮಣ : ಅಮ್ಮಾ ಪರಮಪತಿವ್ರತೆಯಾದ ಸೀತಾದೇವಿಯೇ ಕೇಳು. ನಮ್ಮ ಅರಮನೆಯೊಳಗೆ ಮಣಿಮಂಚ ಲೇಸುದಿಂಬು ಸುಪ್ಪತ್ತಿಗೆಗಳಿದ್ದು ನಿಮ್ಮ ಕರವೆರಡನ್ನು ಗಮ್ಮನೇ ತಲೆದಿಂಬಿಟ್ಟು
ಸುಮ್ಮನೇ ಉಮ್ಮಳಿಸಿ ದುಕ್ಕಿಸುತ್ತಾ ಧರಣಿಯ ಮೇಲೆ ಮಲಗುವಂತಾಯಿತೇನಮ್ಮಾ ತಾಯೇ ಪರಮ ಪಾವನೆಯೇ.

ಪದ

ಪದುಮ ವದನೆಯೇ  ಸಿರಿಮುಡಿ
ಯಲ್ಲಾ  ಚದುರೆ ನೆಲದೊಳು  ಮಲಿ
ನವಾಯಿತಲ್ಲಾ  ಮೃದುತರಮಾದ
ಶರೀರದೊಳೆಲ್ಲ  ಬಿದುರು ಮುಳ್ಳು
ಕಲ್ಲುಗಳಾ ಗಾಯವೆಲ್ಲ  ಯೇಳು ಭೂಜಾತೆ ॥

ಲಕ್ಷ್ಮಣ : ಅಮ್ಮ ಪದುಮ ವದನೆಯೇ, ಮೃದುತರಮಾದ ನಿಮ್ಮಯ ಸಿರಿಮುಡಿಯಲ್ಲಾ ಚದುರಿ ಮಲಿನವಾಗಿ ವಿಧವಿಧಮಾದ ಸುಗಂಧಲೇಪನಗೈಯುವ ತನುವಿಗೆ ಬಿದರುಮುಳ್ಳು ಕಲ್ಲುಗಳು ತಾಕಿ ರುಧಿರ ಲೇಪನಕೊಂಬ ಕಾಲ ವದಗಿತೇನಮ್ಮಾ ತಾಯೇ ಕರುಣವಿಟ್ಟೆನ್ನ ಕಾಯೇ.

ಪದ

ಧರಣೀ ಪ್ರಕಟನಪುರನೆಲೆವಾಸ ॥
ದುರಿತದೂರ ಶ್ರೀ ಗಂಗಾಧರೇಶಾ ॥
ಮರೆಹೊಕ್ಕೆ ನಿಮ್ಮನೂ ಜಗದೀಶಾ
ತರುಣಿ ಸೀತೆಯ ಕಾಯೋ  ಸರ್ವೇಶಾ ॥

ಲಕ್ಷ್ಮಣ : ಅಯ್ಯೋ ಹರಹರಾ ತುಮಕೀಪುರಾಧೀಶ್ವರಾ, ಶ್ರೀ ರಾಮಚಂದ್ರದೇವನ ಚರಣ ಸೇವೆಯನ್ನು ಚನ್ನಾಗಿ ಮಾಡಿದವನಾಗಿದ್ದರೆ ಈ ಭೂಜಾತೆಯ ಮೂರ್ಛೆಯನ್ನು ತಿಳಿದೇಳಿಸೋ ಪಾರ್ವತೀಶಾ ಪ್ರಾಣದೊಲ್ಲಭ ಜಗದೀಶ.

ಪದ ರಾಗ ರೂಪಕ

ಯಾತಕೆ ಕರತಂದೆ  ಕೀಕಾರಣ್ಯ ಮಧ್ಯ
ಕ್ಕೆ  ಅನೇಕ ಮೃಗಗಳಿರುವ  ಕೀಕಾರುಣ್ಯ ಮಧ್ಯಕ್ಕೆ ॥

ಸೀತೆ : ಅಪ್ಪಾ ಲಕ್ಷ್ಮಣಾ, ಕುಶಲದಿಂದ ಮುನಿಪತ್ನಿಯರ ತೋರುವೆನೆಂದು ಹುಸಿನುಡಿಗಳನ್ನಾಡಿ ಅಸಮಕಾನನಕ್ಕೆ ಯನ್ನನ್ನು ಕರೆತಂದು ಬಿಸಿಲಿನೊಳೆನ್ನ ಬಳಲಿಸಿ ಬಾಯಾರಿಸುವುದು ನಿನಗೆ ಕ್ಷೇಮವೇನಪ್ಪಾ ಸೌಮಿತ್ರಿ.

ಪದ ರಾಗ ರೂಪಕ

ಕಂಡ ಕಾರ‌್ಯವನ್ನು  ಕಂಡುಕೊಂಬೆ ನಾನು
ಗಂಡ ರಾಮನಲ್ಲಿಗೆ  ನೀ ಖಂಡಿತಾದಿ ಪೋಗಿನ್ನು ॥

ಸೀತೆ : ಅಪ್ಪಾ ಗಂಡುಗಲಿಯಾದ ಲಕ್ಷ್ಮಣಾ, ನೆರೆ ಬಾಧಿಸುವ ಮೃಗಗಳೊಡನೆ ಸೇರಿ ನನ್ನ ಮನಕ್ಕೆ ಕಂಡದ್ದು ಕಾಂಬುವೆನು, ಗಂಡನಾದ ಪುಂಡರೀಕಾಕ್ಷನ ಬಳಿಗೆ ಖಂಡಿತವಾಗಿ ಪೋಗುವಂಥವನಾಗಪ್ಪ ಸೌಮಿತ್ರಿ.

ಪದರಾಗರೂಪಕ

ಶ್ರೀ ತುಮಕೀಪುರದಾತಾ  ಗಂಗಾಧರನಾಥ
ತರಳೆಯನ್ನ  ಪ್ರೀತಿಯಿಂದ ರಕ್ಷಿಸೋ ॥

ಸೀತೆ : ಅಕಟಕಟಾ ಧರಣಿಗಧಿಕವಾದ ಪ್ರಕಟನಪುರವನ್ನು ಪರಿಪಾಲಿಸುವ ಪರಶಿವ ಮೂರ್ತಿಯಾದ ಶ್ರೀ ಗಂಗಾಧರೇಶನೇ, ನಿನ್ನ ಚರಣಗಳ ಮೇಲೆ ಮಮತೆ ಇಟ್ಟು ಮರೆಯದೆ ಪೊರೆಯಬೇಕೋ ಶಂಕರಾ ಚಂದ್ರಶೇಖರಾ.

ಲಕ್ಷ್ಮಣ : ಅಮ್ಮಾ ಸೃಷ್ಠಿ ಜಾತೆಯಾದ ಸೀತಾದೇವಿಯೇ ಕೇಳು. ನಿಮ್ಮ ಇಷ್ಠನಾಯಕನಾದ ರಾಮಭದ್ರನು ದುಷ್ಠ ರಜಕನ ಕೆಟ್ಟ ವಚನಗಳಿಗೆ ಮನಗೊಟ್ಟು ಕ್ಲೇಶಪಟ್ಟವನಾಗಿ ಎಷ್ಟ ಪೇಳಿದಾಗ್ಯೂ ಕೇಳದೇ ಇಷ್ಠ ನಾಯಕಿಯಂ ಬಿಟ್ಟು ಬಿಡುವೆನೆಂದು ಛಲವನ್ನು ತೊಟ್ಟವನಾಗಿ ಗುಟ್ಟಿನಿಂದ ನಿಮ್ಮನ್ನು ಕರೆದೊಯ್ದು ಕಟ್ಟಾರಣ್ಯದ ಮಧ್ಯದೊಳ್ ಬಿಟ್ಟು ಬಾರೆಂದು ಯನಗೆ ಅಪ್ಪಣೆಯನ್ನು ಕೊಟ್ಟ ಕಾರಣದಿಂದ ಕರೆದುಕೊಂಡು ಬಂದು ಬಿಟ್ಟೆನು. ಹೇ ತಾಯೇ ನೀನು ನಿಟ್ಟುಸುರುಬಿಟ್ಟು ನೆಟಿಕೆಯ ಮುರಿದು ಕೆಟ್ಟೆನೆಂದು ಗಟ್ಟಿಯಾಗಿ ಗೋಳಿಟ್ಟರೇ ನಾನೇನು ಮಾಡಲಮ್ಮಾ ಮಾತೇ. ನೀನು ಯನ್ನನ್ನು ಸುಮ್ಮನೆ ನಿಷ್ಠೂರ ಮಾಡಬೇಡ. ಯೆಷ್ಠು ಮಾತ್ರಕ್ಕೂ ನಿನ್ನಿಂದ ಬಂದಿದ್ದಲ್ಲ. ದುಷ್ಠ ಮೃಗಗಳಿರುವ ಕಟ್ಟಾರಣ್ಯ ಮಧ್ಯದಲ್ಲಿ ಕಷ್ಠಚಿತ್ತಳಾಗಿ ದುಖಿಸಲೇಕೇ ಮುಂದೆ ಯಾವುದಾದರೂ ವಂದು ಯೋಚನೆಯನ್ನು ಮಾಡಿಕೊಳ್ಳಬಹುದಮ್ಮಾ ಮಾತೆ ಲೋಕ ಪ್ರಖ್ಯಾತೆ.

ಸೀತೆ : ಅಯ್ಯೋ ಹೀನ ಅದೃಷ್ಟವೇ  ದಾನವಾಂತಕನಾದ ಶ್ರೀರಾಮಚಂದ್ರನು  ಯೇನು ಅನ್ಯಾಯವನ್ನು ಮಾಡಿದನಪ್ಪಾ ಲಕ್ಷ್ಮಣಾ ॥

ಪದ

ಯಾರ ಬಳಿಯಾ  ಸೇರಲೈಯ್ಯ  ಧೀರ
ಲಕ್ಷ್ಮಣಾ  ಅನ್ಯಾಯವಾಗಿ  ಅಗಲಿದ
ರಾಮಚಂದ್ರ ಎನ್ನನು ॥ಸರಸಿಜಾ
ಕ್ಷನಾ ಕರವ ನಾನು  ಪಿಡಿಯಲಿಲ್ಲವೇ ಪರ
ದೇಶಿಯಳ ಮಾಡಿ ಯನ್ನ  ತೊರೆದನಲ್ಲದೆ ॥

ಸೀತೆ : ಅಯ್ಯೋ ಲಕ್ಷ್ಮಣ, ಹರಸುರಾದಿ ದಿಕ್ ಪಾಲಕರಾಗಿ ಸರ್ವರು ಅರಿದಂತೆ ಸರಸಿಜಾಕ್ಷನಾದ
ಶ್ರೀ ರಾಮನ ಕರವನ್ನು ನಾನು ಪಿಡಿಯಲಿಲ್ಲವೆ. ಪತಿಪಾರಾಯಣಳಾದ ಸತಿಯನ್ನು ತೊರೆದು ಪರದೇಶಿಯಳ ಮಾಡಿದ ಬಳಿಕ ಧಾರ ಬಳಿಯಲ್ಲಿ ಸೇರಿಕೊಳ್ಳಲಪ್ಪಾ ಲಕ್ಷ್ಮಣಾ.

ಪದ

ಧರಣಿಯೊಳಗೆ  ತರುಣಿಯರಾಗಿ
ಜನಿಸಬಾರದೂ  ಪರಿಪರಿಯಾ
ಕಷ್ಠವಿನ್ನು  ದೊರಕುವುದಿಹುದು ॥

ಸೀತೆ : ಅಪ್ಪಾ ಲಕ್ಷ್ಮಣಾ, ಹರಿಸಾಕ್ಷಿಯಾಗಿಯೂ ಈ ಧರಣಿಯ ಮೇಲೆ ತರುಣಿಯಾಗಿ ಪುಟ್ಟಲೇ ಬಾರದು. ಪುಟ್ಟಿದ ಬಳಿಕ ಉತ್ಕೃಷ್ಠವಾದ ಕಷ್ಠಗಳು ಫಲಿಸುವುದಲ್ಲದೆ ಈ ಶರೀರವು ಇರುವ ತನಕ ಸೌಖ್ಯಗಳು ಬೇರೆ ದೊರೆಯುವುದಿಲ್ಲವಪ್ಪಾ ಲಕ್ಷ್ಮಣಾ.

ಪದ

ಪೋಗು ಲಕ್ಷ್ಮಣಾ  ಕಾಂತನಲ್ಲಿಗೇ  ಬೇಗದಿಂ
ದಲೀ  ಶ್ರೀ ಗಿರಿಜೆಯರಸನು  ಈಗ ಸಲಹಲೀ ॥

ಸೀತೆ : ಅಪ್ಪಾ ಸೌಮಿತ್ರಿ, ಈ ಘೋರಾರಣ್ಯದೊಳಗೆ ಬಿಸಿಲಿನ ಬೇಗೆಯಲ್ಲಿ ಯನಗಾಗಿ ನೀನು ಬಸವಳಿಯಲ್ಯಾತಕ್ಕೆ. ಅಸುರಾರಿಯ ಬಳಿಗೆ ಪೋಗುವಂಥವನಾಗು. ಅಸಮಾಕ್ಷನಾದ ಬಿಸುಜಾಕ್ಷನ ಸಖನೇ ಯನ್ನ ಭಂಗವನ್ನು ಪರಿಹರಿಸಬೇಕಪ್ಪ ಲಕ್ಷ್ಮಣಾ ನೀ ತೆರಳೀಕ್ಷಣಾ.