ಕಂದಗೌಳ

ಧರಣಿಸುತೆ ಕೇಳ್  ಹರಿಹರ ಸರಸಿಜ
ವದನಗೆ  ಪೂರ್ವಜನ್ಮದ ಫಲಂಗಳ್  ಮೀ
ರಲ್ ಬಲ್ಲರೇ  ಮಿಕ್ಕ ಭೂರಿಯ
ನರಜನರ  ಪಾಡದೆಂತೆಣೆ ನಾರಿ ॥

ಲಕ್ಷ್ಮಣ : ಅಮ್ಮಾ ಧರಣಿಜಾತೆಯೇ, ಹರಿಯಾಗಲೀ ಹರನಾಗಲೀ ಬ್ರಹ್ಮದೇವರಾದಾಗ್ಯು ಅವರವರ ಜನ್ಮಾಂತರ ಫಲಗಳನ್ನು ಅನುಭವಿಸಿ ತೀರಬೇಕಲ್ಲದೆ ಮೀರಿ ಬಾಳಲಾರರಾದ ಕಾರಣ ಈ ಧರಣಿಯಲ್ಲಿ ಮಿಕ್ಕ ನಾಡ ಮಾನವರ ಪಾಡೇನಮ್ಮಾ ಮಾತೇ ಜನಕನ ಸಂಜಾತೆ.

ಕಂದ ಸೌರಾಷ್ಟ್ರ

ಶ್ರೀಕರವಹ  ಕುಂಕುಮಪುರ  ಪ್ರಕಟ
ಶ್ರೀ ಲಕ್ಷ್ಮೀನಾಥ  ಭಜಕರ ಪ್ರೀತಾ  ಈ ಕಾಲ
ದೊಳಗೆನಗೊದಗಿಹ  ವ್ಯಾಕುಲ ಪರಿಹರಿಸಿ
ಕಾಯಬೇಕೋ ವರ ನರಸಿಂಹಾ ॥

ಸೀತೆ : ಅಯ್ಯೋ ಕುಂಕುಮ ನಗರ ನಿವಾಸನಾದ ಪಂಕಜಾಕ್ಷ ಪದ್ಮನಾಭ ಮುಕುಂದನೇ ವೆಂಕಟರಮಣನೇ, ಯನ್ನ ಸಂಕಟವನ್ನ ನೀನಾದರೂ ಪರಿಹರಿಸಬಾರದೇ ದೇವಾ ಭಕ್ತಸಂಜೀವಾ.

ಪದ

ಹ್ಯಾಗೆ ಬಿಟ್ಟು ಪೋಗಲಿನ್ನು  ನಾಗವೇಣಿಯಾ
ಸೋಗೆಗಣ್ಣಿನ ಬಾಲೆಯಾದ  ಯೀ ಗುಣಾಡ್ಯಳಾ ॥
ಧರುಣಿದೇವಿ ತಾಯೇ ಈ
ತರುಣಿ ಸೀತೆಯಾ  ಪರಮ ನೀಲವೇಣೀ
ಪೊರೆಯೇ  ನಿರುತ ಮಾತೆಯಾ ॥
ಭಾನುಶಶಿಯೇ  ಕಾಯುವದೀಗ  ಮಾನವತಿಯನು
ಕಾನನದೊಳು  ಅಳುತಲಿರ್ಪ ಜಾನಕಿಯನೂ ॥
ಅಡವಿಯೊಳಗೆ ಅಳುತ ಬಾಯಿ
ಬಿಡುತಲಿರ್ಪಳೂ  ಕಡೆ ಹಾ
ಯಿಸೋ ಮೃಡನೇ ಕೈಯ್ಯ  ಬಿಡದೆ ಕೃಪೆಯೊಳು ॥

ಲಕ್ಷ್ಮಣ : ಅಯ್ಯೋ ದಾನವಾಂತಕನೇ, ಯನ್ನ ಮಾತೆಯಾದ ಸೀತಾದೇವಿಯು ನಿರ್ಭಾಗ್ಯಳಲ್ಲವೇ. ಈ ಪನ್ನಗವೇಣಿಯನ್ನು ಹ್ಯಾಗೆ ಬಿಟ್ಟು ಪೋಗಲೀ. ಅಯ್ಯೋ ಭೂ ದೇವತೇ ಆಕಾಶವೇಣಿಯೇ ಚಂದ್ರ ಸೂರ‌್ಯರೇ ಆದಿಯಾಗಿ ಅಷ್ಠ ದಿಕ್‌ಪಾಲಕರುಗಳಿರಾ, ಯನ್ನ ಮಾತೆಯನ್ನ ರಕ್ಷಿಸಿ. ರಕ್ಷಿಸಿ ವನವೃಕ್ಷಗಳಿರಾ ಘನ ಮೃಗ ಕ್ರಿಮಿ ಕೀಟಕಾ ತ್ರುಣ ಮಹತ್ತಾದಿಯಾದ ಪಂಚ ಭೂತಗಳಿರಾ, ಯಲೈ ಧರ್ಮದೇವತೆಯೇ ಜಗದ್ ಜನನಿಯಾದ ಯನ್ನ ಮಾತೆ ಸೀತಾದೇವಿ ಇಲ್ಲಿ ಇದ್ದಾಳೆ. ಕರುಣದಿಂದ ನೋಡಿ ಆರೈದು ಕೊಳ್ಳಿರಿ. ಹೇ ಮೃಢ ಮೃತ್ಯುಂಜಯನೇ ಯನ್ನೊಡೆಯನ ಮಡದಿಯಾದ ಸೀತಾದೇವಿಯನ್ನು ಕಡೆ ಹಾಯಿಸೋ ಈಶಾ ಗಂಗಾಧರೇಶ.

ಪದ

ನಾಗವೇಣಿ ನಾನು ಪೋಗಿ ಬರುವೆನು  ಈಗ
ಮನದೊಳು  ಬಲು ಬ್ಯಾಗೆ ಪಡುವುದು ॥
ಅಡಿಗಳೇಳವು  ತೊಡೆಯು ನಡುಗು
ತಿರುವುದು  ಬಿಡದೇ ಶೋಕವು  ದುಕ್ಕ ತಡೆಯಲಾರೆನು ॥

ಲಕ್ಷ್ಮಣ : ಅಮ್ಮಾ ಅತ್ತಿಗಮ್ಮನವರೇ, ನಾನು ಪೋಗಿ ಬರುತ್ತೇನೆ. ತಾಯೇ ಕರುಣದಿಂದ ಯನ್ನ ಕಾಯೇ.

ಸೀತೆ : ಅಯ್ಯೋ ಪುಣ್ಯವೇ ಯನ್ನ ಕಣ್ಣಿಗೆ ಮರೆಯಾಗಿ ಪೋದೆಯೇನಪ್ಪಾ ಲಕ್ಷ್ಮಣಾ.

ದ್ವಿಪದೆ

ಹರಿಹರಿ ಶ್ರೀಕಾಂತ ಕಾಪಾಡೆಯಾ  ದಯಾವಂತಾ ಮರೆಯಾಗಿ  ಲಕ್ಷ್ಮಣನು ಪೋದನವನತ್ತಾ  ಕರುಣವುಳ್ಳವರನ್ನ  ಧರಣಿಯೋಳ್ ಕಾಣನೆ  ತೆರನೇನು ಗತಿ ಮುಂದೆ  ಸಾರಸಾಕ್ಷನೊಂದೆ  ತಾಟಕಾಂತಕನೇ  ಕರುಣ ಸಾಗರನೇ  ಕೌಸಲ್ಯಾತ್ಮಜನೇ ಶರಣಾಗತ ತ್ರಾಣಿ  ನಾ ನಿನ್ನ ರಾಣೀ ಮೊರೆ ಹೊಕ್ಕೆನೊ ನಲ್ಲಾ  ಕರುಣವ್ಯಾಕಿಲ್ಲಾ  ಪರಮ ಪುರುಷನೇ  ಘೋರ ಕಾನನದೊಳಗೆ  ತರಹರಿಸುವದೆಂತು ಯೆನಗೀ ವಿಧಿಯು ಬಂತು  ತೊರೆದೆನ್ನ ತರುಬಿದೆಯಾ ದೊರೆಯೇ ಪರದೇಸಿಯಾದೆನು  ಪ್ರಾಣನಾಯಕನೇ  ವಸುಧೀಶ ಜನಕ ಚಕ್ರೇಶನು ಧರೆಯೋಳ್  ಕುಶಲದಿಂದ ಅವತರಿಸಿ  ಜಾನಕಿಯೆನಿಸಿ ಪೆಸರೊಡೆದ ದಶರಥನ ಸುತಗೆ  ಸತಿಯಾಗಿ  ಬಿಸುಜಾಕ್ಷಿ ಕೌಸಲ್ಯೆಗೆ ಮುದ್ದು ಸೊಸೆಯೆನಿಸಿ  ವಸುಧೆಗೆ ಪೊಸದಾದ  ವರ ಅಯೋಧ್ಯೆಯಲ್ಲಿ  ದೆಸೆದೆಸೆಯ  ಪುರಗಳೊಳು  ಕೀರ್ತಿಯನ್ನು ಪೊಸರಿಸಿ  ತುಸುಮಾತ್ರ ಯನ್ನೊಳಗೆ  ಅಪರಾಧ ವರೆಯುವದೆನೆ ಅತಿ ಚೋದ್ಯವಲ್ಲಾ  ಬಸುರೀ ಯೆಂಬುವದೊಂದು  ಯಸರು ವುಂಟಲ್ಲಾ  ತುಸುವಾದರು ನಿನಗೆ ಕರುಣವ್ಯಾಕಿಲ್ಲಾ  ರಾಮ ರಘುವಂಶಾಬ್ಧಿಸೋಮಾ  ಸಲಹೆನ್ನ ಭೀಮ  ವಿಕ್ರಮ ಪುಣ್ಯನಾಮ ಸಂಪನ್ನ  ನಾ ಮುನ್ನ ಸೋತ  ಫಲ ಕೈಗೂಡಿತೀಗ  ಈ ಮಹಾರಣ್ಯದೊಳಗೇನು ಗತಿ  ಭೂಮಿ ಪ್ರಕಟನ  ಪುರನಿವಾಸ  ಸರ್ವೇಶ ಸೋಮೇಶಧರನೆ ಸಲಹೆನ್ನಾ ಗಂಗಾಧರೇಶ ॥

ಕಂದಗೌಳ

ಮುನಿ ವಾಲ್ಮೀಕಿ ತನಯಾ  ಘನಶಿಷ್ಯರೊಡಗೂಡಿ ದರ್ಭೆಸಮಿತ್ತು
ಸಮಿಧೆಯನೊರೆಯಲ್  ವನಕಾಗ ಆಗಮಿಸಲೊಂದೆಡೆ  ಜನಕಜೆಯು
ಕುಳಿತಿರಲು ನೋಡಿ  ವಿನಯದಿಂದ ನುಡಿದನು

ಪದ

ಆರಮ್ಮಾ ಜನನಿಯೇ  ಘೋರಕಾನನ
ದೊಳು ವೋರ್ವಳೆ ಕುಳಿತಿರುವೇ ॥

ಕಾರಣವೇನಿದು  ಮೀರಿದ ದುಕ್ಕವು
ಕಾಂತೆಯೇ ಪೇಳೆನಗೇ ॥ಆರಮ್ಮಾ ಜನನಿಯೇ ॥

ವಾಲ್ಮೀಕಿ : ಅಮ್ಮ ಜನನೀ, ನೀನು ಯಾರು ನಿನ್ನ ನಾಮಾಂಕಿತವೇನು? ಈ ಘೋರಡವಿಯೋಳ್ ವೋರ್ವಳೇ ಕುಳಿತುಕೊಂಡು ಈ ರೀತಿ ದುಃಖವನ್ನು ಮಾಡುವಂಥ ಕಾರಣವೇನಮ್ಮ ತಾಯೇ.

ಪದ

ನಾಥನು ಧಾರಮ್ಮಾ  ಮಾತೆಯೇ ಯನ್ನೊಳು
ಪ್ರೀತಿಯಿಂದಲೀ ಪೇಳು ॥
ಭೀತಿಯ ಪಡದಿರು  ಸೈರಿಸು ಸೈರಿಸು
ಯಾತಕೆ ಈ ಗೋಳು ॥

ವಾಲ್ಮಿಕಿ : ಅಮ್ಮಾ ತಾಯೇ, ನಿನ್ನ ರೀತಿಯನ್ನು ನೋಡಿದರೆ ಜಾತನಾಯಕನ ಪ್ರೀತೆಯಾಗೆ ತೋರುವುದು. ಖ್ಯಾತಿವಂತನಾದ ನಿನ್ನ ನಾಥನು ಧಾರು? ಭೀತಿಪಡದೇ ಪ್ರೀತಿಯಿಂದೆನ್ನೊಡನೆ ವಿವರಿಸಿ ಪೇಳುವಂಥವಳಾಗಮ್ಮಾ ಮಾತೆ ಲೋಕಪ್ರಖ್ಯಾತೆ.

ಪದ

ದಿಟ್ಟೆಯೇ ನಿನ್ನನು  ಬಿಟ್ಟವರ‌್ಯಾರೀ
ಕಟ್ಟಾರಣ್ಯದೊಳಗೆ  ಗುಟ್ಟೆನು ತಿಳುಹು
ಪಾರ್ಥಗೆ ವರವನು  ಕೊಟ್ಟವನಾಣೆ ಯನಗೇ ॥

ವಾಲ್ಮೀಕಿ : ಅಮ್ಮಾ ದಿಟ್ಟೆಯಾದ ಬಟ್ಟ ಕಂಗಳೇ, ಈ ಕಟ್ಟಾರಣ್ಯ ಮಧ್ಯದಲ್ಲಿ ನಿನ್ನನ್ನು ಕರೆತಂದು ಬಿಟ್ಟವರ‌್ಯಾರು. ಅಕಟಕಟಾ ಇಂತಾ ಕೆಟ್ಟ ಕಾರ‌್ಯಗಳನ್ನು ಮಾಡಬಹುದೇ. ನೀನು ಯೆಷ್ಠು ಮಾತ್ರಕ್ಕೂ ಚಿಂತಿಸಬೇಡ. ಅಷ್ಠ ಮೂರ್ತಿ ಗಂಗಾಧರೇಶನಾಣೆಗೂ ನಿನ್ನ ಮನಸ್ಸಿನಲ್ಲಿರುವ ಸಿಟ್ಟನ್ನು ಬಿಟ್ಟು  ಸಮಗ್ರವಾಗಿ ತಿಳಿಸಬೇಕಮ್ಮಾ ಸೃಷ್ಠಿಜನ ಮಾತೆ.

ಕಂದ

ವಂದನೆ ವರಮುನಿರಾಯನೆ  ಹಿಂದೋ
ರ್ವ ಖೂಳ ಖಳನು  ಈ ರೂಪಿನೋಳ್
ಬಂದು  ಬಹು ಬಾಧೆಯಂ
ಪಡಿಸಿದನಾದ ಕಾರಣ  ಅಂದಿನಪರಿ
ಯೆಂದಿತೆಂದು  ಸಂದೇಹಿಪೆನೈ ಮುನಿಪಾ ॥

ಸೀತೆ : ವಂದನೆಗೈದು ಬಿನೈಸುತ್ತೇನೈ ಸ್ವಾಮಿ ರುಷಿವರ‌್ಯರೇ. ಹಿಂದೆ ಒಬ್ಬ ಖಳನು ಈ ರೂಪಿನಿಂದ ಬಂದು ಬಹಳ ತೊಂದರೆಪಡಿಸಿ ಬಳಲಿಸಿದನಾದ ಕಾರಣ, ಇಂದು ನಿಂಮೊಂದಿಗೆ  ಯನ್ನ ನೆಲೆಯನ್ನು ತಿಳಿಸುವುದಕ್ಕೆ ಸಂದೇಹವಾಗುವದೈ ಮುನಿಪಾ ಮಾಡುವೆನು ಬಿನ್ನಪಾ.

ವಾಲ್ಮೀಕಿ : ಅಮ್ಮಾ ಸುಂದರಾಂಗಿ, ಯನ್ನ ಪೆಸರು ವಾಲ್ಮೀಕಿ ಮುನಿವರ‌್ಯನೆಂದು ಕರೆಯುವರು. ನಮ್ಮ ತಪೋ ನಿವಾಸವು ಇಲ್ಲಿಗೆ ಸಮೀಪವಾಗಿರುವುದು. ಯಾಗ ನಿಮಿತ್ಯವಾಗಿ ಗಂಧಚಂದನಾಧಿ ದರ್ಭೆ ಸಮಿತ್ತುಗಳನ್ನ ಕುಯ್ಯುವುದಕ್ಕಾಗಿ ಬಂದು ಇದ್ದೇನೆ. ಸಂದೇಹಿಸದೆ ನಿಮ್ಮ ನೆಲೆಯನ್ನು ಚಂದದಿಂದ ವಿಸ್ತರಿಸಬೇಕಮ್ಮಾ ಸುಂದರವದನೆ.

ಪದ

ಪರಮಗುರುವೆ ಕರುಣಿಸೆನ್ನ  ಪರಿಯ
ನಿಮ್ಮೊಳು  ವೊರೆವೆನೋ ಯನ್ನ ॥
ಪುರವು ಅಯೋಧ್ಯಾ ಪಾಲನಾದ  ಸ
ರಸಿಜಾಕ್ಷನ ಅರಸಿ  ಅರಸನು ತೊರೆದ ॥

ಸೀತಾ : ಹೇ ಪರಮ ಗುರುವೇ, ಕರುಣಿಸುವುದಾದರೆ ಯನ್ನ ಪರಿಯನ್ನ ವಿವರಿಸುತ್ತೇನೆ. ಪುರ ಅಯೋಧ್ಯಾ ನಗರದ ಅರಸನಾದ ಸಾರಸಾಕ್ಷ ರಾಮಚಂದ್ರನ ಅರಸಿ ಸೀತಾದೇವಿಯಾದ ನಾನು ಪರಮಸೌಖ್ಯದಿಂದ ಅರಮನೆಯೊಳಗಿರಲೊಂದು ದಿವಸ, ತರಣಿಕುಲಜಾತನು ದುರುಳನುಡಿ ಕೇಳಿದವನಾಗಿ ಹೇ ಗುರುವೇ, ಯನ್ನ ತಿರಸ್ಕರಿಸಿ ನರಸಂಚಾರವಿಲ್ಲದಿರುವ ಈ ಘೋರ ಅಡವಿಗೆ ತರುಬಿ ಪರದೇಸಿಯಳ ಮಾಡಿ ಬಿಟ್ಟನೈಯ್ಯ ಮುನಿಯೇ ಸರ್ವಜ್ಞ ಮತಿಯೇ.

ಪದ

ದುರುಳ ರಜಕಾನು ಜರಿದನು ಯೆಂದು
ಈ ತೆರನ ಮಾಡಿದನು ॥ಪರದೇಶಿಯಾದೆ ॥

ಸೀತಾ : ಹೇ ಕರುಣಾಕರನೇ ಗುರು ವಾಲ್ಮೀಕನೇ, ಕಿರಿದಾದ ಈ ತಾಳೆಯನ್ನು ವರೆದು ನೋಡದೆ ಸುರಚಿರಕ್ಕೆ ಸರಿಯೆಂದು ಭಾವಿಸಿ ಬೆಲೆಗೈದ ಮೂಢರಂತೆ ದುರುಳ ರಜಕನಾಡಿದ ಮೂಢತನದ ವಚನವನ್ನು ಅರಿತವನಾಗಿ ಯನ್ನ ತೊರೆದುಬಿಟ್ಟನೈಯ್ಯ ಮುನಿಯೇ ಸರ್ವಜ್ಞಮತಿಯೇ.

ಪದ

ಧರಣಿ ತುಮಕೀಪುರವಾಸನಾದ
ಪರಶಿವ ಮುನಿಯನ್ನು ದೊರಕಿಸಿದನು ॥

ಸೀತೆ : ಹೇ ಗುರುವೇ, ಈ ಧರಣಿಗಧಿಕವಾದ ತುಮಕೀಪುರವಾಸ ಗಂಗಾಧರೇಶನು ತರಳೆಯ ಮೇಲೆ ಸಂಪೂರ್ಣ ಅಂತಃಕರಣವಿಟ್ಟು ಪೊರೆಯಬೇಕೋ ಗುರು ಮಹಾತ್ಮ ಪರಿಪೂರ್ಣ
ಆತ್ಮ.

ವಾಲ್ಮೀಕಿ : ಅಂಬುಜೋಧರಿ ಕೇಳು ಕಂಬುಕಂದರೀ. ಕುಂಭಿಣೀಶನಾದ ಜನಕ ಚಕ್ರೇಶನೆಂಬ  ಭೂಮಿಪಾಲಕನಿಗೆ ಸಾಂಬನಾಣೆಯಾಗಿಯೂ ಸಂಭ್ರಮದ ಗುರುಗಳ ಹಾಗೆ ಇಹೆವು. ಡಂಭದ ಮುನಿಯೆಂದು ತಿಳಿಯದೆ ನಂಬಿ ಗಂಭೀರವಾದ ನಮ್ಮ ಆಶ್ರಮಕ್ಕೆ ಬಂದು ವಿನಯದಿಂದ ಇರಬಹುದಮ್ಮಾ ತಾಯೇ ರಘುರಾಮರ ಪ್ರಿಯೇ.

ಸೀತೆ : ಹೇ ಗುರುವೇ, ನಿಮ್ಮ ಚಿತ್ತಾನುಸಾರದಂತೆ ಪರಮ ಆಶ್ರಮಕ್ಕೆ ತೆರಳುವಂತಾ ಪಥವನ್ನು ತೋರಿ ಕರೆದುಕೊಂಡು ಪೋದರೆ ಬರುವಂಥವಳಾಗುತ್ತೇನೈ ಸ್ವಾಮಿ ಭಕ್ತಜನ ಪ್ರೇಮಿ.

ವಾಲ್ಮೀಕಿ : ಅಮ್ಮಾ ಸೀತಾದೇವಿ, ಇದೇ ಪಥವಾಗಿ ಪೋಗೋಣ ಬಾರಮ್ಮಾ ಸೀತೆ ಪೃಥ್ವೀಜನ ಮಾತೆ.

ಕಂದಸೌರಾಷ್ಟ್ರ

ಯೇನೆಂಬೆ ಈ ಮಹಾಸ್ಥಳ  ಮನ
ಕಾನಂದಮಾಗಿ  ತೋರ್ಪುದು ಯೆನಗಂ ॥ಪ ॥
ಈ ಮೃಗಮಿಷ್ಲ  ಶುಕಪಿಕ
ಗಾನವ  ಪಾಡುತಲಿರ್ಪುದು ಮುನಿಪಾಲನಾಂ ॥

 

ಭಾಗವತರ ಕಂದಪದ್ಯ (ಸೌರಾಷ್ಟ್ರ)

ಕೇಳಿದರೇನೈಯ್ಯ ಸಭಾಜನರೇ ಈ ಪ್ರಕಾ
ರವಾಗಿ ಲಕ್ಷ್ಮಣನು  ಸೀತಾ ಅಮ್ಮಯ್ಯನವ
ರಿಗೆ ನಮಸ್ಕರಿಸಿ  ಹೊರಟವನಾಗಿ  ಬಿಟ್ಟು ವೋಗು
ವುದಕ್ಕೆ ಮನಸ್ಸಿಲ್ಲದೆ  ಯಮ್ಮಲೆಯಂತೆ  ಹಿಂ
ದಕ್ಕೆ ಹೋಹುತ್ತಾ  ಮುಂದಕ್ಕೆ ಬರುತ್ತಾ  ಕಡೆಗೆ
ದೃಢಮನಸ್ಮಾಡಿ  ಸಂಪೂರ್ಣಮಾದ
ದುಕ್ಕದಿಂದ ಹೊರಟುಹೋಗಲು  ಸೀತೆಯು ಹಾ
ಲಕ್ಷ್ಮಣ ಯೆಂದು  ಬಿದ್ದು ಮೋರ್ಚಿತಳಾಗಿ  ಇರು
ವಲ್ಲಿ  ಆ ವನದ  ಮೃಗಪಕ್ಷಿಗಳು ಬಂದು
ಸೀತೆಯ ಕಷ್ಠ ತಂಮ್ಮದೆಂದು  ಭಾವಿಸಿ  ಬಾಲದಿಂ
ದಲೂ  ರೆಕ್ಕೆಯಿಂದಲೂ  ನೀರುತಂದು  ತಳಿ
ಯಲು  ಸೀತೆಯು ಯೆಚ್ಚರಗೊಂಡು  ಅಗಲಿ
ಹೋದ ಲಕ್ಷ್ಮಣನೆಂದು  ಅನಾಥದೈವರಕ್ಷಕಾ
ಯೆಂದು  ಇಂತೆಂದಳು ॥

ಪದ

ತಡೆಯಲಾರೇನಮ್ಮಾ ನಾನು  ಮಡದಿ
ಮಣಿಗಳಿರಾ  ಯನ್ನ ನಡುವು  ಕಳು
ಕಳುವೆನುತ  ಕಡುಬಾಡಿ ತೋರುತಲಿದೆ ॥

ಸಾರಸಾಕ್ಷಿಯರು ಕೇಳಿ  ಆರು ಮೂರು
ಮಾಸ  ಈಗ ಪೂರೈಸಿತಿನ್ನ  ತೋರುತಿದೆ
ಜನನ ಬಾಧೆ ॥ಸಾರಸಾದಿ ಪಂಜರದಿ
ಕೂಕವು  ತ್ವರಿತದಿಂ ಸಂಚರಿಸುವ  ತೆರದಿ
ಯನ್ನ ಗರ್ಭಾಂಬುಧಿಯಲ್ಲಿ  ತಿರುಗುತಿರ್ಪು
ದೀಶಿಶುವು ॥ಭಾಸುರಾಂಗಿ  ಯಾರು
ಇಲ್ಲ  ಈ ವನದೊಳು ಯನ್ನ ಮಾಸಕೊಡದಿ
ರಕ್ಷಿಸಲು  ಈಶ ಗಂಗಾಧರೇಶ ಪೊರೆವ ॥

ದ್ವಿಪದೆ

ಮುನಿಸತಿಯರೆಲ್ಲಾರು  ವಿನಯದಿಂ ಕೇಳಿ
ಜನನ ಬಾಧೆಯು ಕೇಳಿ ಯನಗೆ ಘನವಾಯಿ
ತೆಂದು  ತನುವು ತರಹರಿಸುತ್ತಿದೆ  ತಡೆಯ
ಲೆಂತಿರ್ಪುದು  ಸರಸದಿಂ ಪ್ರಿಯನೋಳ್
ಸುರತ ಕ್ರೀಡೆಯೊಳ್ ಇರಲಾಗದಮ್ಮ
ತರಳಾಯತಾಕ್ಷಿಗಳಿರಾ  ನೀವೆಲ್ಲ
ವಂದಾಗಿ  ಕರುಣವಿಟ್ಟೆನ್ನನು  ಕಾ
ಯಬೇಕೆಂದು  ಧರಣಿಯೋಳ್ ಪ್ರಕ
ಟನಪುರ ನಿವಾಸನಾದ  ಪರಶಿವ ನಿಮ್ಮನ್ನ
ರಕ್ಷಿಸುವನಮ್ಮಾ ॥

 

ಭಾಗವತರ ಕಂದಪದ್ಯ (ಗೌಳ)

ಜನಿಸಿದ ಬಾಲಕರೀರ್ವರ  ತನುಕಾಂ
ತಿಯ ನೋಡಿ  ಹಿಗ್ಗುತಾಲಾಗ  ದಿನದಿನದ
ಹೊತ್ತು ಕಳೆದ ಬಳಿಕಂ  ಮುನಿವರ
ಪೆಸರಿಡಲವಂಗೆ  ಕುಶಲವರೆನುತಂ ॥

ಜೋಗುಳ ಪದ

ತೂಗಿರೆ ನಾರಿಯರೆಲ್ಲರು ಬಾಲರ  ಜೋ
ಗುಳವನು ಪಾಡಿ  ಬಾಡಿ ಬಳುಕುತಲಿ
ಬಟ್ಟ ಕುಚೆಯರು  ಒಡಸ್ವರಗೂಡಿ ॥
ದಶರಥನಂದನ  ನಣುಗರೆ
ಜೋಜೋ ಕುಶಲವ ಕುಮಾರರೇ ಜೋಜೋ ॥
ಶಶಿಮುಖಿ ಸೀತೆಯ  ಬಸುರೊಳು
ಜನಿಸಿದ  ಅಸಮಸಾಹಸರೇ ಜೋ ಜೋ
ರವಿಶಶಿಯಂದದಿ  ಪೊಳೆವರೆ ಜೋ ಜೋ
ನವಪ್ರಜ್ವಲರೆ ಜೋ ಜೋ
ಭೂಮಿ ಪ್ರಕಟನಪುರ ಶಿವ ಸಖನಿಗೆ ನಿಜ
ಕುವರರೆ ಪಾಡುವೆ  ಜೋ ಜೋ ॥

ಭಾಗವತರ ಕಂದಪದ್ಯ (ಗೌಳ)

ದಿನಕೊಂದು ಪರಿ ಬೆಳೆಯುತೆ  ಶಶಿ
ಯಂತೆಸೆವ  ಬಾಲರಾಟವನು ನೋಡುತಾ
ಧನುರ್‌ವಿದ್ಯೆಗಮದ್ಯಾವ ವಿನಯದೊಳ್
ವುಪದೇಷ ಮುನಿಗೈದ ವಾಲ್ಮೀಕಿಯೂ ॥

ಪದರೂಪಕ

ಬನ್ನಿರೋ ಬಾಲರೆ  ಮನ್ಮಥಕಾರರೇ
ಕನ್ಯಕಮಣಿ ಸೀತೆ ಜನ್ಮ ಸಂಭವರೆ ॥

ವೇದಶಾಸ್ತ್ರಾಗಮ ಸಾಧನೆಗಳ ಕ್ರಮಾ
ಬೋಧನೆಯನು ಪೇಳ್ವೆ

ವಾಲ್ಮೀಕಿ : ನವಮನ್ಮಥಕಾರರಾದ ಹೇ ಮುದ್ದು ಬಾಲಕರೇ ಬನ್ನಿ. ನಿಮ್ಮನ್ನ ವಿವಿಧೋಪಚಾರದಿಂದಾರೈದು ಅವಿರಗಣಮಂತ್ರ ಶಕ್ತಿವೇದಶಾಸ್ತ್ರಗಳನು ಅಸ್ತ್ರಶಸ್ತ್ರ ಸಾಧನೆಗಳ ಕ್ರಮವನ್ನು ಸವಿಸ್ತಾರದಿಂ ಬೋಧಿಸುತ್ತಾ ಇದ್ದೇನೆ. ತವಕದಿಂ ಅನುಗ್ರಹಿಸಿರೈಯ್ಯ ಸೀತಾಕುಮಾರರೆ.

ಪದ

ಹೇ ಮಗು ಕುಶಲವರೆ  ಆ ಮಹಾಕಾ
ವ್ಯವಾ  ಪ್ರೇಮದಿ ಪೇಳುವೆ  ರಾಮಚರಿತವ ॥
ಬನ್ನಿರೋ ಬಾಲರೆ ॥

ವಾಲ್ಮೀಕಿ : ಯಲೈ ಕಾಮಸನ್ನಿಭರಾದ ಕುಶಲವ ಕುಮಾರಕರೇ, ಆ ಮಹಾ ಕಾವ್ಯ ಪ್ರಬಂಧಮಾದ ಶ್ರೀರಾಮಚರಿತ ವ್ರತವೆಂಬುದನ್ನು ಸಂಪೂರ್ಣವಾಗಿ ಪೇಳುತ್ತೇನೆ. ಪ್ರೇಮವಿಟ್ಟು ಕೇಳಿದರೆ ಬುದ್ಧಿ ಕುಶಲತೆಯುಂಟಾಗುವದೈಯ್ಯ ಮುದ್ದು ಬಾಲಕರೇ ಬಾಲ ಸೂರ‌್ಯ ಪ್ರಭಾಕರರೆ.

ಪದ

ತರಳರೇ ನಿಮಗಿನ್ನು  ವರ ಧನುರ್ವಿದ್ಯೆಯಾ
ಹರನ ಕರುಣದೊಳು  ಅರುಹುವೆ ಇನ್ನ ॥

ವಾಲ್ಮೀಕಿ : ತರಣಿಕುಲ ಸಂಜಾತರಾದ ತರಳರೇ ಕೇಳಿ. ದೊರೆ ಮಕ್ಕಳಾಗಿ ಪುಟ್ಟಿದ ಬಳಿಕ ಅರಿರಾಯರನ್ನು ಜೈಸುವುದಕ್ಕೆ ತಕ್ಕ ಪರಿಪರಿಯ ಸನ್ನಾಹವನ್ನು ಅರಿತಿರಬೇಕು. ಆದ ಕಾರಣ ಈ ಧರಣಿಗಧಿಕವಾದ ಪ್ರಕಟನಪುರನಿವಾಸ ಈಶ ಗಂಗಾಧರೇಶನ ಭಾಸುರ ಕರುಣನಿಂದ ಅನುಗ್ರಹಿಸಿರೈಯ್ಯ ಸೀತಾ ಕುಮಾರಕರೇ.

ಕುಶಲವರು : ಗುರುಗಳ ಅಪ್ಪಣೆಯ ಮೇರೆಗೆ ತಪ್ಪದೇ ನಡೆದುಕೊಳ್ಳುತ್ತೇವೈ ಸ್ವಾಮಿ ಭಕ್ತಜನ ಪ್ರೇಮಿ.