ಪದ

ಬಿಟ್ಟು ಬಿಡಿರೋ ಹಯವ ತಕ್ಷಣಾ  ಹರ
ನಾಣೆ ನಿಮಗೆ  ಪೆಟ್ಟ ನೀಡದೆ ಪೋಪೆನೀ ಕ್ಷಣ ॥

ಭಟರು : ಯಲಾ ಬಾಲಕರೇ, ಶ್ರೇಷ್ಠರ ಕುದುರೆಯನ್ನು ದಿಟ್ಟನೆ ಬಿಟ್ಟಿದ್ದೇ ಆದರೆ, ಸೃಷ್ಠಿಗೀಶನಾದ ಅಷ್ಠಮೂರ್ತಿ ಗಂಗಾಧರೇಶನಾಣೆಯಾಗಿಯು ನಿಮಗೆ ಪೆಟ್ಟುಗಳಿಡದೇ ಬಿಟ್ಟು ಪೋಗುತ್ತೇವೆ. ನಿಮ್ಮ ಇಷ್ಠವೇನು ಪೇಳಿರೋ ದುಷ್ಠ ಬಾಲಕರೇ.

 

ಕಂದಪದ್ಯ (ಸೌರಾಷ್ಟ್ರ)

ಕಡುಗಲಿ ಸುಭಟರೇ  ನಿಮ್ಮ ವಡೆಯನ
ಕುದುರೆಯನ್ನು  ಪಿಡಿದು ಕಟ್ಟಿದವರು
ನಾವಲ್ಲವು  ಪಿಡಿದು ಕಟ್ಟಿದವ ಈ ಲವನು
ಬಡ ಹಾರುವರನೇಕೆ  ಬಡಿಯುವಿರಿ ಸುಮ್ಮನೇ ॥

ಮುನಿಸುತರು : ಅಯ್ಯ ಕಡುಗಲಿಯಾದ ಭಟರೆ. ನಿಮ್ಮ ವಡೆಯನ ಕುದುರೆಯನ್ನು ಪಿಡಿದವರು ನಾವಲ್ಲ, ಮೃಢನಾಣೆ ಬ್ಯಾಡವೆಂದರು ಕೇಳದೇ ಶಿಡಿಲಿನಂತೆ ಯಮ್ಮನ್ನು ಗರ್ಜಿಸಿ ನುಡಿದು ಇಕ್ಕೋ ನೋಡು ದುಡುಕುತನದಿಂದ ಲವನೆಂಬ ಈ ವುಡುಗನು ಪಿಡಿದು ಕಟ್ಟಿಹನು. ನೀವು ನಡತೆ ರೀತಿಗಳು ತಿಳಿಯದೇ ಬಡ ಬ್ರಾಹ್ಮಣರ ಪುತ್ರರನ್ನು ಯಾತಕ್ಕೆ ಸುಮ್ಮನೆ ಹೊಡೆಯುತ್ತೀರೈಯ್ಯ ಭಟರೇ ಚಟುಲಾರ್ಭಟರೇ.

ಭಟರು : ಯಲೈ ರಾಜಭಟರುಗಳಿರಾ, ನಾವುಗಳು ಮೂಜಗವಂ ಜೈಸುವ ಶೂರರಾಗಿ ಕೊಳಕಾದ ಈ ವುಡುಗರೊಡನೆ ಕಾಳಗವನ್ನು ಬೆಳೆಸಿದರೆ ಬರುವ ಫಲವೇನು. ತವಕದಿಂದ ತೇಜಿಯನ್ನು ಕೊಂಡು ಅವನಿಪನೆಡೆಗೆ ಪೋಗೋಣ ಬಾರೈಯ್ಯ ಭಟಾಗ್ರಗಣ್ಯರೇ.

ಲವ : ಯಲೋ ತಾರತಮ್ಯಗಳು ತಿಳಿಯದ  ಭಟರೆ ಕೇಳಿ  ಬ್ರಾಹ್ಮಣ ಹುಡುಗರನ್ನ  ಬೆದರಿಸಿ  ಚಾರುತರಮಾದ ಕುದುರೆಯನ್ನು ಬಿಡಿಸಿಕೊಳ್ಳಬೇಕಾದರೆ  ಯುದ್ಧಕ್ಕೆ ನಿಲ್ಲಿರೋ ಭಟರೇ ಯಲಾ ಕುಲಾಧಮರೆೀ.

ಭಟರು : ಯಲಾ ತುಡುಗು ಮುಂಡೇದೆ. ಹುಡುಗನೆಂದು ಭಾವಿಸಿ ಬಡಿಯದೇ ಬಿಟ್ಟರೆ ವಡೆಯನ ತುರಗವನ್ನು ಕಟ್ಟಿ ಗಡಿತಕ್ಕೆ ಬಂದು ಬಡಿವಾರದ ನುಡಿಗಳನ್ನ ನುಡಿಸುತ್ತಿಯಾ. ಯಲಾ ಖುಲ್ಲಾ ಪಿಡಿದಿರುವ ಕೋದಂಡ ಚಕ್ರಗದೆಗಳಿಂದ ನಿನ್ನ ಶಿರವನ್ನು ಕಡಿದು ಪುಡಿ ಪುಡಿ ಮಾಡಿ ಬಿಡುವೆವೋ ಮೂಢ ಇದು ತಿಳಿ ಗಾಢ.

 

(ಯುದ್ಧ ಭಟರು ಮೂರ್ಛೆ ಹೋಗುವುದು)

ಹೊಡಿರೋ ಭಟರೆ ಯುದ್ಧ  ನಾ ಬಿಡೆನು ಹಯ
ವ ಬದ್ದ  ಫಡೆಫಡೆಲೋ ನಿಮ್ಮೆಲ್ಲರಾ
ಕೊಡುವೆನಾಹುತಿಯನ್ನು  ಪೊಡವಿ ದೇವಿಗೆ

 

(ಶತ್ರುಘ್ನ ಬರುವಿಕೆ)

ಪದ

ತರಳ ನೀನು  ಧಾರು ಪೇಳೆಲೋ  ಕೆಡ
ಬೇಡವೆಮ್ಮ  ತುರಗವನ್ನು ಬಿಟ್ಟು ಬಿಡೆಲೋ ॥
ಚರರನ್ಯಾಕೆ  ತರಿದು ಬಿಟ್ಟೆಲೋ
ಈ ಶರದಿ ನಿನ್ನ  ಪರಿಹರಿಸುವೆ  ನೀನೆದುರಾಗೊ ॥

ಶತ್ರುಘ್ನ : ಯಲಾ ತರಳ, ನೀನು ಧಾರು ನಿನ್ನ ಪೆಸರೇನು? ಭಲಾ ನಮ್ಮ ಪರಿವಾರವೆಲ್ಲವನ್ನ ತರಿದು ಬಿಸುಟ ನಿನ್ನ ಪರಾಕ್ರಮಕ್ಕೆ ಮೆಚ್ಚಬೇಕಾಯಿತು. ದುರುಳ ಬುದ್ಧಿಯಿಂದ ಕೆಡದೆ ಮರಿಯಾದೆ ಇಂದ ತುರಗವನ್ನು ಬಿಟ್ಟು ತೆರಳೆಲೋ ಬಾಲಾ ಸುಗುಣ ಶೀಲಾ.

ಪದ

ಭಂಡ ಮನುಜ ಬಿಡಬಿಡೆಲವೋ ಪುಂಡ
ಮಾತನು  ಲಂಡ ನಿನ್ನ ಪುಲ್ಲಶಿರವ ಕಂಡ್ರಿಸುವೆ॥

ಲವ : ಯಲಾ ಕ್ರೂರ ಮನುಷ್ಯನೇ, ನಿನ್ನ ಮೋರೆಯನ್ನು ನೋಡಿದರೆ ಸಂಗರನ ಹೇಡಿಯ ಹಾಗೆ ಕಾಣುವದು. ಶೂರಜನ ಗಂಭೀರನಾದ ಯನ್ನ ಕಾರಣವನ್ನು ಕೇಳುವ ಪಾರುಪತ್ಯ ನಿನಗ್ಯಾಕೆ. ಯಾರಾದರೇನು ಈ ಚಾರುತರಮಾದ ಈ ತುರಗವನ್ನು ಬಿಡಲಿಕ್ಕಿಲ್ಲವೋ ಭ್ರಷ್ಠ ಅತಿ ನತದೃಷ್ಠ.

ಪದ

ಸೆಣೆಸಬ್ಯಾಡ ನಿನ್ನ ಕಣೆಯನು  ಕೂರ್ಗಣೆ
ಗಳಿಂದ ತ್ರಿಣಯನಾಣೆ  ಹೊಡೆದು ಬಿಡುವೆನು ॥

ಶತ್ರುಘ್ನ : ಯಲಾ ಬಣಗು ಹುಡುಗ  ರಣ ಪರಾಕ್ರಮಿಯಾದ ಯನ್ನ ಮುಂದೆ  ಗರ್ವದಿಂದ ಅಣಕದ ಮಾತು ನೀ ಚೆಲ್ಲಿಸಬ್ಯಾಡ  ತ್ರಿಣಯ ಗಂಗಾಧರೇಶನಾಣೆಯಾಗಿಯೂ  ಕೂರ್ಗಣೆಗಳಿಂದ ಈ ಕ್ಷಣ ಮಾತ್ರದಲ್ಲಿ ನಿನ್ನ ಪಣೆಯನ್ನ ಹೊಡೆದು ಬಿಡುತ್ತೇನೆ  ರಣಹೇಡಿ ॥

ಪದ

ಕೆಟ್ಟೆನಹ ಹಳಿವನೆ ಬಾಣ ನೆಟ್ಟು ಪ
ಣೆಯೊಳು  ತೊಟ್ಟಿಡುತಿದೆ  ಶೋಣಿತಾ
ಯೆಷ್ಠು ತಡೆಯಲಿ  ಮಹದೇವ ನಾನ್ಯಾಗೆ ತಡೆಯಾಲಿ ॥

ಲವ : ಯಲಾ ಸೃಷ್ಠಿ ಅಧಮನೇ, ನೀನು ಬಿಟ್ಟ ದುಷ್ಠ ಶರವನ್ನು ತಟ್ಟನೇ ಕತ್ತರಿಸಿ ಕೆಡಹುವ ಅನಿತರೋಳ್ ಕೆಟ್ಟ ಶರದರೊಳಗರ್ಧ ಪುಟನೆಗೆದು ಹಾರಿ ತುದಿ ಬಾಣವು ಯನ್ನ ಪಣೆಗೆ ನೆಟ್ಟು ಶೋಣಿತ ತೊಟ್ಟಿಡುತಲಿಹುದು. ಅಕಟಕಟಾ ಯಷ್ಠಂತ ನಾನು ಸಹಿಸಿಕೊಳ್ಳಲಿ. ಅಹೋ ಅದೃಷ್ಠಮೂರ್ತಿ ಗಂಗಾಧರೇಶನೇ ನಿನ್ನ ದಯಾದೃಷ್ಟಿ ತಪ್ಪಿದ ಕಾರಣ ಹೀಗಾಯಿತಲ್ಲದೆ ಅಕಟಕಟ ನಾನು ಕೆಟ್ಟು ಹೋದೆನೋ ದೇವಾ ಕರುಣ ಪ್ರಭಾವ.

ಭಾಗವತರ ಕಂದ ಪದ್ಯ

ಕರ ಕದಳಿ ತರುವ ಗೀಸಿದ ತೆರದೋಳ್  ಶತ್ರುಘ್ನ
ಲವನ ಘಾತಿಸಿ  ಕೆಡಹಿದ ಪರಿಯರಿತು
ಮುನಿ ಪುತ್ರರು ಮರುಗುತಲೈತಂದು
ಧರಣಿಜಾತೆಯೋಳ್  ಅರುಹಿದರು ॥

ಪದ

ವನಜನೇತ್ರೆ ಕೇಳು  ಪೇಳ್ವೆವು  ನಾವೆಲ್ಲ
ಪೋಗಿ ವನದೊಳು  ಆಟವಾಡುತಿರ್ದೆವು ॥
ಜನಪತಿಗಳದೊಂದು ತುರಗ  ಮುನಿವ
ನಕೆ ಬರಲು  ಅದನು  ಘನಪರಾಕ್ರಮ
ದೋಳ್ ನಿಮ್ಮ  ತನಯ ಲವನು
ಬಂಧಿಸಿದನು ॥ಪ ॥ಜನಕಜಾತೆ ಕೇಳು ಪೇಳುವೆ ॥

ಮುನಿಸುತರು : ಅಮ್ಮಾ ಜನಕಜಾತೆಯಾದ ಸೀತಾದೇವಿಯೇ ಕೇಳು. ಮುನಿಮಹಾತ್ಮರಾದ ವಾಲ್ಮೀಕರ ವುಪವನಕ್ಕೆ ಭೂಪತಿಗಳದೊಂದು ಯಜ್ಞಾಶ್ವವೈತಂದು ಅನುವಾದ ಪುಷ್ಪವೃಕ್ಷದ ಕೊನೆಗಳನ್ನ ಮುರಿದು ಮನಬಂದಂತೆ ಚರಿಸುತ್ತಿರಲು, ನಿಮ್ಮ ತನಯನಾದ ಲವ ಕುಮಾರ ಅದನ್ನ ನೋಡಿದವನಾಗಿ ಘನ ಪರಾಕ್ರಮದಿಂದ ಕಟ್ಟಿದನಮ್ಮಾ ತಾಯೇ ಕರುಣವಿಟ್ಟೆನ್ನ ಕಾಯೆ.

ಪದ

ಬಂದು ಸೇನೆ ಕವಿದು ಕೋಪದಿಂದ  ಭವರ
ಗೈದು ಲವನ  ಘಾತಿಸಿ ಕುದುರೆಯನ್ನ
ಕೊಂಡು ವಂದುಗೂಡಿ ಪೋದರಮ್ಮಾ ॥
ಜನಕಜಾತೆ ಕೇಳು ಪೇಳ್ವೆವು ॥

ಮುನಿಸುತರು : ಅಮ್ಮಾ ಮಂದಗಮನೇ, ವಂದು ಯೋಜನ ವಿರ್ಸ್ತೀರ್ಣವಾದ ಸೇನೆ ಇಕ್ಕೋ ಯೆಂದು ಆರ್ಭಟಿಸಿ ಬಂದು ಕವಿದು ಕುಂದದೇ ಬವರಮಂ ಗೈದು ಚಂದಿರಾನನೆಯೇ, ನಿಮ್ಮ ಕಂದನಾದ ಲವಕುಮಾರನ ಘಾತಿಸಿ ಬಂಧಿಸಿ ಕುದುರೆಯಂ ಕೊಂಡು ಮಂದಿಸಂದಣೆಯಲ್ಲಾ ವಂದುಗೂಡಿ ಪೋದರಮ್ಮಾ ಸುಂದರಾಂಗಿ.

ಸೀತಾದೇವಿ : ಅಯ್ಯೋ ಶ್ರೀರಾಮ ರಾಮ  ಪಟ್ಟಣವನ್ನು ಬಿಟ್ಟು ವನವಾಸವಾಗಿದ್ದರು  ಯನಗೆ ಪ್ರಾರಬ್ಧ ಬಿಟ್ಟಿದ್ದಂಲ್ಲ. ಅಯ್ಯೋ ಪುಟ್ಟ ಬಾಲಕನೇ  ಭ್ರಷ್ಠರು ನಿನ್ನನ್ನು ಕಷ್ಠಪಡಿಸಿದರೇನಪ್ಪಾ ಕುವರಾ  ನಿನಗ್ಯಾಕೊ ಭವರ ॥

ಪದ

ಪಗೆಯ ಕೈವಶವಾಗಿ  ಮಗುವೆ ನೀ ಪೋದೆಯಾ
ಜಗದೊಳೆಂತು ನಾಂ ಮರೆಯಲೋ ನಿನ್ನ ॥
ತೆಗೆದು ಮುನಿಯ ಸುತರುಗಳ ಮಾತನ್ನ
ವಿಗಡ ತೇಜಿಯನ್ನಾಕೆ ಕಟ್ಟಿದೆಯೋ ಮಗನೆ ॥

ಸೀತಾದೇವಿ : ಅಯ್ಯೋ ವಿಗುಣವರ್ಜಿತನಾದ ಹೇ ಬಾಲಾ, ಅಗಣಿತಮಾದ ನಿನ್ನ ಸುಗುಣಾತಿಶಯಗಳನ್ನ ಜಗದೊಳಗೆ ಬಗೆಬಗೆಯಾಗಿ ವರ್ಣಿಸಿದರೂ ತೀರದು. ಹೇ ಮಗುವೇ, ನಿಗಮ ಪಂಡಿತರಾದ ಮುನಿಸುತರ ಮಾತನ್ನು ತೆಗೆದು ವಿಗಡವಾಜಿಯನ್ನ ಬಿಗಿದು ಜಗಳವಾಡಿ ಪಗೆಗಳ ಕೈಗೆ ವಶವಾಗಿ ಪೋದೆಯೇನಪ್ಪಾ ಕೂಸೇ ಬಂದಿತೆ ಗಾಸೇ.

ಪದ

ಧರಣಿಪಾಲರು ಬಹು  ಕರುಣ ಹೀನರು
ತರಳನೆನ್ನದೆ ಯೆಂತು ಸರಳ ಸುರಿಸಿದರು ॥

ಸೀತಾದೇವಿ : ಅಯ್ಯೋ ಯನ್ನ ಕೊರಳ ಪದಕವಾದ ರತ್ನವೇ, ಧರಣಿಪಾಲರು ಬಹಳ ಕರುಣಹೀನರಲ್ಲವೇ. ಹರಿಣನ ಮೇಲೆ ಕೇಸರಿ ಎಗರಿದಂತೆ, ಗಿರಿತರುಗಳಮೇಲೆ ಸುರಪನಾಯುಧವ ಗುರಿ ಇಟ್ಟಂತೆ, ಸರಿಸಾಟಿಯಿಲ್ಲದ ತರಳನ ಮೇಲೆ ಸರಳುಗಳನ್ನು ಸುರಿಯುವುದಕ್ಕೆ ಪರಮ ದ್ರೋಹಿಗಳಿಗೆ ಕರವೆಂತು ಬಂತೋ ಬಾಲ ಸುಗುಣ ವಿಶಾಲ.

ಪದ

ಗಿರಿಜೆಯರಸನೇ ದೇವಾ  ದುರಿತದೂರ
ನೇ  ರಕ್ಷಿಸೋ ಯನ್ನ ತರಳ ಲವನನ್ನು ॥

ಸೀತಾದೇವಿ : ಹೇ ಗಿರಿಜೇಶ ಪರಮೇಶ ದುರಿತ ವಿನಾಶನಾದ ಶ್ರೀಮದ್ ಗಂಗಾಧರೇಶನೇ, ನೀನು ಕರುಣವಿಟ್ಟು ಯನ್ನ ತರಳನ ಪ್ರಾಣವನ್ನು ಕಾಯಬೇಕೋ ಹರನೇ ತ್ರಿಪುರ ಸಂಹಾರನೆ.

ಭಾಗವತರ ಕಂದ ಪದ್ಯ (ಗೌಳ)

ಅಸಹಾಯ ಕುಶ ಕುಮಾರನು  ಬಿಸಿಲೋಳ್
ಬಸವಳಿದು ಬಂದು ಕಂದನು ಮುಖದೋಳ್
ಮುಸುಕಿಟ್ಟು ಅಳುವ ಮಾತೆಯ
ವೆಸನವಿದೇನೆನುತ  ಕೇಳ್ದ ದಯನುಡಿಯಿಂದ ॥

ಪದ

ತಾಯೇ ನೀ ಯಾತಕೆ ಮರುಗುವೆಯೇ
ಈ ಯಾತನೆ ಸರಿಯೇ ॥
ಆಯಾಸ ವ್ಯಾರಿಂದ ವದಗಿತು ನಿಮಗೆ
ಈ ಯತಿಗೃಹದೊಳಗೆ  ತೋಯಜಾಕ್ಷಿಯೇ
ಪೇಳೆನ್ನೊಳಗೆ  ತಾಯೇ ಕರುಣದಿ ಕಾಯೇ
ಸದ್ಗುಣ ಶ್ರೀಯೇ ನಿಮ್ಮನು ನೋಯಿಸಿದವರನು
ಸಾಯಲಿಕ್ಕಿ ಯಮರಾಯಗೊಪ್ಪಿಸುವೆನು  ಹೇ ತಾಯೇ ॥

ಕುಶ : ಹೇ ತಾಯೇ ಜನನಿ, ಈ ತರದಿ ಯಾತನೆಯಿಂದ ನೀನು ಘನವಾದ ದುಃಖವನ್ನು ಮಾಡುವಂಥ ಕಾರಣವೇನು? ಈ ಯತಿಗೃಹದೊಳಗೆ ಧಾವ ಮತಿಹೀನರಿಂದ ಆಯಾಸವುಂಟಾಯಿತು. ಹೇ ತೋಯಜಾಕ್ಷಿಯೇ, ನೀನೆನಗೆ ತಿಳಿಸಿದ್ದಾದರೆ ಅಂಥ ನಾಯಿಗಳನ್ನ ಯಮಧರ್ಮರಾಯನಿಗೆ ವೊಪ್ಪಿಸಿ ಬಿಡುತ್ತೇನೆ ಪೇಳುವಂಥವಳಾಗಮ್ಮ ಜನನಿ.

ಪದ

ತಮ್ಮ ಲವನೆಲ್ಲಿಗೆ ಪೋಗಿಹನಮ್ಮಾ  ನಿಮ್ಮೆ
ಡೆಯೊಳಿಲ್ಲಮ್ಮ  ಮರ್ಮವಿದೇನೋ ತಿಳಿಯ
ದಮ್ಮ  ಅಮ್ಮಾ  ಸಂಶಯವಮ್ಮ  ಲವನೆಲ್ಲಮ್ಮಾ
ತಿಳಿಸೆನ್ನಮ್ಮಾ ಸುಲಲಿತೆ ಗಮ್ಮನೆ ನಿಮ್ಮಡಿಗೆರಗುವೆನಮ್ಮಾ ॥

ಕುಶ : ಅಮ್ಮಾ ಜನನೀ, ಯನ್ನ ತಮ್ಮನಾದ ಲವಕುಮಾರಕನು ಧಾವಲ್ಲಿ ಪೋದನೋ ಧಾವೆಡೆಯೊಳಿಹನೋ? ನಿಮ್ಮ ಬಳಿಯಲ್ಲಿ ಇಲ್ಲವಾದ ಕಾರಣ ಅಮ್ಮಾ ಯನ್ನ ಮನಸ್ಸಿಗೆ ಬಹಳ ಸಂಶಯವಾಗುವದಲ್ಲಂಮ್ಮ ಜನನೀ ಫಣಿರಾದ್ವೇಣಿ.

ಪದ

ಭೂತಳಧಿ ಅಧಿಕವೆನಿಸಿ, ಮೆರೆವ ಶ್ರೀ
ತುಮಕೀಪುರವ  ಪ್ರೀತಿಯಿಂದ ಪರಿಪಾಲಿಸುವ ॥
ವಿಧಾತ ದುರಿ ವಿಹಾರ ಭಜಕಪ್ರೀತಾ ॥
ಗಿರಿಜನಾಥನ ದಯವಿರೆ  ಮಾತೆ ಮ
ರುಗುವದ್ಯಾತಕೆ  ಬಿಡು ಬಿಡು

ಕುಶ : ಹೇ ತಾಯೇ, ಭೂತಳದಿ ಅಧಿಕವೆನಿಸಿ ಮೆರೆಯುವ ಶ್ರೀ ತುಮಕೀಪುರಾಧಿಪ ಭೂತಳೇಶ ಖಂಡ ಪರಶು ಗಿರಿಜಾತೆ ಪ್ರಾಣನಾಥನಾದ ಗಂಗಾಧರೇಶ್ವರನ ಕೃಪಾಕಟಾಕ್ಷವು ಯಮ್ಮ ಮೇಲೆ ಇರಲಿಕ್ಕೆ ಈ ತರದಿ ಯಾತನೆ ಪಡುವುದು ನೀತಿಯಲ್ಲ. ಭೀತಿವಿರಹಿತಳಾಗಿ ಪೇಳಬೇಕಮ್ಮ ಮಾತೇ ಲೋಕವಿಖ್ಯಾತೆ.

ದ್ವಿಪದೆ (ಮುಖಾರಿ)

ಯೇನ ಪೇಳಲೋ ಕುಶಲನೇ  ಯನಗೀಗ ಬಂದ
ಹೀನಾಯಗಳನ್ನ  ಕೇಳೆಂನ್ನ ಕಂದ  ಭೂ
ನಾಥರದೊಂದು ಅಶ್ವವು  ಮುನಿಸುತನ  ವುದ್ಯಾ
ನವನವಂ ಪೊಕ್ಕು  ನಾನಾತಿಶಯದ  ಪೂನೆಲ್ಲ ॥
ಇಳೆಗುದುರಿಸುತ್ತಾ ಬರಲೆಂನ್ನ  ಸೂನು ಲವನು
ಹಯವ ಪಿಡಿದು ಬಂಧಿಸಲು  ಸೇನೆ ಬಂದು
ಆರ್ಭಟಿಸಿ ಕವಿದು  ಯೇನೊಂದು
ಅರಿಯದ ಹಸುಳೆಯ ತ್ರಾಣಗೆಡಿಸಿ  ಜ್ಞಾನತಪ್ಪಿದ
ಸುತನ  ರಥಕ್ಕೆ ತಂದಿಳುಹಿದರಂತೆ
ಹೀನಾಯ ವದಗಿತೋ ಕಂದಾ  ಕುಶ
ಕುಮಾರಾ  ನಾನು ಈ ಧಾತ್ರಿಯೋಳ್ ಪರದೇಸಿಯಾ
ದೆ  ಯೇನು ಮಾಡಲಿ ಹರನೇ  ಹೇ ಸಾಂಬಶಿವ
ದೀನರಕ್ಷಕ ತುಮಕೀಪುರನೆಲವಾಸ  ನೀನೇ
ಪಾಲಿಸೋ ಲವನ ಗಂಗಾಧರೇಶಾ ॥

ಕುಶ : ಭಳಿರೇ ಚಂದಿರವದನೆಯಾದ ಜನನಿಯೇ ಕೇಳು. ನಿನ್ನ ಕಂದನಾದ ಯನ್ನ ಪರಾಕ್ರಮವನ್ನು ತಿಳಿಯದೇ ಕುಂದುವದ್ಯಾತಕ್ಕೆ ತಾಳು. ಭಲ ಇಂದಿನದಿನ ಅರ್ಕಾಧಿಪತಿಯಾದ ದೇವೇಂದ್ರ ಇಂದುಧರ ಮುಕುಂದ ಅಜದೇವರೊಂದಾಗಿ ಬಂದು ನಿಂದಾಗ್ಯು ಅಂದಗೆಡಿಸಿ ಬಂದ ಪಥವಿಡಿದು ಹಿಂದಕ್ಕೆ ಪೋಡುವಂತೆ ಮಾಡಿ ವಂದು ನಿಮಿಷದಲ್ಲಿ ನಿಮ್ಮ ಕಂದನನ್ನು ತಂದೊಪ್ಪಿಸದ ಮೇಲೇ ಕುಶನೆಂಬ ಪೆಸರು ಯನಗ್ಯಾಕಮ್ಮ ಜನನಿ.

ಸೀತೆ : ಅಪ್ಪಾ ಕುಶಕುಮಾರ, ಬಿಸಿಲಿನಲ್ಲಿ ಬಸವಳಿದು ಬಂದಿರುವೆಯಾದ ಕಾರಣ ಮಿಸುನಿಯ ಬಣ್ಣದಂತೊಪ್ಪುವ ರಸವತ್ತಾದ ಹಣ್ಣುಗಳಂ ಕೊಡುವೆ. ಅಶನಗೈದು ಫಲವಸೇವಿಸಿ ಸಕಲ ಆಯುಧಗಳಂ ವಶವರ್ತಿಗೊಂಡು ನಸುನಗುತ್ತಾ ಪೋಗಿ ಬರುವಂಥವನಾಗಪ್ಪಾ ಕಂದ ನೀ ಬಹುಚಂದ.

ಕಂದ

ಅವನು ಯನ್ನನುಜಾತನ  ಜೀವಕೆ ಮುನಿದವನು
ಧರಣಿಪಾಧಮನು  ಧಾವ ಮಾರ್ಗದೋಳ್
ಪೋದನೋ  ಹೇ ವರಮುನಿಸುತರೆ ತೋರಿಸಿ ಕೊಡಿ ಯನಗಂ ॥

ಕುಶ : ಮುನಿ ಕುಮಾರರೇ, ಬಹುಶೂರನಾದ ಯನ್ನ ಸಹೋದರನ ಘಾಸಿಗೊಂಡೊಯ್ದ ಮಹಿಪನು ಧಾವ ಮಾರ್ಗದಿ ಪೋದರೋ ತೋರಿಸಿ ಕೊಡಿರೈಯ್ಯ ತಾಪಸೋತ್ತಮರೇ.

ಮುನಿಸುತರು : ಯಲೈ ಕುಶಕುಮಾರಕನೇ, ಅಸಮಬಲನಾದ ಲವನ ಬಸವಳಿಸಿದ  ವಸುಮತೀಶ್ವರರು ಮಿಸುನಿಯ ಬಂಣ್ಣದಂತೊಪ್ಪುವ ತೇಜಿಯನ್ನು ಹೊಡೆದುಕೊಂಡು ಹೊಸರಥವೇರಿ ಈ ಪಥವಿಡಿದು ಪೋದರೈಯ್ಯ ಪ್ರುಥ್ವಿಜನ ತನಯ.

ಪದ

ವದಗೋ ಕದನಕೇ  ಮದವಿದ್ಯಾತಕೇ
ಸದೆಯ ಬಡಿವೆ  ಪೋಗದಿರೆಲವೋ ಅಧಮ
ಮುಂದಕೆ ॥ಚದುರ ತಮ್ಮನಾ  ಮದ
ರೂಪನ  ಬೆದರಿಸೆಲ್ಲಿ ಗೊಯ್ವೆ ನಿನ್ನ ವಧಿಸಿ ಬಿಡುವೆ ನಾಂ ॥

ಕುಶ : ಯಲೋ ಮದನಾಕಾರನಾದ ಯನ್ನ ಸಹೋದರನನ್ನು ಬೆದರಿಸಿ, ಕುದುರೆಯ ಸಹಿತವಾಗಿ ಬಲುವದನದಿಂದ ಬೆದುರುಬಿದ್ದವನಾಗಿ ಹೋಗುವೆ ಮದಾಂಧನೇ, ಕದಳಿತರುವನ್ನು ವಧಿಸಿದಂತೆ ನಿನ್ನನ್ನು ಸದೆ ಬಡಿಯುತ್ತೇನೆ. ಕದನಕ್ಕೆ ವದಗಿ ಬಾರೆಲಾ ಖೂಳಾ ಆಮೇಲೆ ನೋಡು ನಿನ್ನ ಗೋಳಾ.

ಪದ

ಆರೆಲೋ ಬಾಲಾ ನೀಂ  ತೋರುವೆ ಪೌರುಷಾ
ಮೇರೆ ತಪ್ಪಿ ಬಂದು ನಿಂದು ॥
ದಾರಿಯ ಬಿಡು ಬಿಡು  ವಾರೆಯಾಗಲೋ ನೀಂ
ಘಾಸಿಗೊಳಲ್ಯಾಕೊ ಸಾಕು ॥

ಶತ್ರುಘ್ನ : ಯಲಾ ಕ್ರೂರಬಾಲಕನೇ, ನೀ ಧಾರು ನಿನ್ನ ಪೆಸರೇನು? ನಿನ್ನ ಮೋರೆಯನ್ನು ನೋಡಿದರೆ ಮಾರಿಯಂತೆ ತೋರುತ್ತಾ ಇದ್ದೀ. ಯಲೋ ಅಪರಬುದ್ದಿ, ಚಾರು ವಾಕ್ಯದ ಪೌರುಷಗಳಂ ತೋರದೆ ದಾರಿಯನ್ನ ಬಿಟ್ಟು ವಾರೆಯಾಗೆಲಾ ಬಾಲಾ ದುರ್ಗುಣಶೀಲಾ.

ಪದ

ಮೃಢನ ನೆನೆಯಲೋ  ದೃಢದಿ ನಿಲ್ಲೆಲೋ
ಬಿಡುವೆ ಶರಗಳೈದನೀಗ  ತಡೆದುಕೊಳ್ಳೆಲೋ ॥

ಕುಶ : ಯಲೋ ಧರಣಿಪ ಅಧಮನೇ ಕೇಳು. ಧುರಕ್ಕೆ ಅನುವಾಗಿ ನಿಲ್ಲಲಾರದೆ ಪರಮಾತ್ಮನಂತೆ ನೀ ಧಾರೆಂದು ಯಮ್ಮ ಗುರುತು ಪೆಸರುಗಳನ್ನು ವಿಚಾರಿಸುತ್ತಾ ಇದ್ದೀಯಲ್ಲಾ. ಅಹೋ ಖುಲ್ಲ. ಈ ತರಳನ ಪರಾಕ್ರಮವನ್ನು ತಿಳಿಯಬಲ್ಲ ಶರಮುಖದಿಂದ ತೋರಿಸುವೆನು ನೋಡೋ ಭಂಡ ನಾನೇ ನಿನಗೆ ಮಿಂಡ.

ಪದ

ಬಾಲನೆಸೆದ ಶರ  ಜಾಲವೆನಗೆ
ತಾಕಿ  ಸಾಲಿಡುತಿದೆ ರುಧಿರ  ಪೋರ
ಮೇಲಕೇಳಲು ಶಕ್ತಿ ಸಾಲದು ಯನ
ಗೀಗ  ಪಾಲಿಸೋ ಸರ‌್ವೇಶ ॥

ಶತ್ರುಘ್ನ : ಅಯ್ಯೋ ಹರಹರಾ ತುಮಕೀಪುರಾಧೀಶ್ವರಾ ಮೃತ್ಯುಂಜಯ ಫಾಲಲೋಚನ ಪಾರ್ವತೀಪ್ರಿಯ, ಈ ಬಾಲಕನು ಬಿಟ್ಟ ಶರಜಾಲಗಳು ಯನ್ನ ಶರೀರಕ್ಕೆ ತಾಕಿ ಕಾಲಾಗ್ನಿಯಂತೆ ದೇಹವನ್ನ ದಹಿಸುತ್ತಲಿರುವುವು. ಅಕಟಕಟ ಮೇಲಕ್ಕೆ ಯೇಳುವೆನೆಂದರೆ ಶಕ್ತಿ ಸಾಲದೆ ಕಾಲುಗಳು ಕುಸಿದು ಬೀಳುವುದು. ನೀನೇ ಪಾಲಿಸಬೇಕೋ ಈಶ ಗಂಗಾಧರೇಶ.

 

(ಶತ್ರುಘ್ನನ ಮೂರ್ಛೆ)

ಭಾಗವತರ ಕಂದ ಪದ್ಯ (ಗೌಳ)

ಬಂಧಿಸಿ ತುರಗವ ಸಮರಕ್ಕೆ  ನಿಂದಿಹ
ಬಾಲಕರ ಬಾಹು  ಬಲಮಂ ನಿಟ್ಟಿಸಿ ನೊಂದಿ
ಳಿದ ಕಾಲದೋಳ್ ಓರ‌್ವನು ಬಂದನು
ರಾಘವನ ಬಳಿಗೆ  ಚಚ್ಚರದೊಳಗೆ ॥

ಚಾರ : ಸ್ವಾಮಿ ಶ್ರೀರಾಮಚಂದ್ರ ಮೂರ್ತಿಯೇ, ತಮ್ಮ ಚಾರನಾದ ಯನ್ನದೊಂದು ಬಿನ್ನಪವನ್ನು ಚನ್ನಾಗಿ ಲಾಲಿಸಬೇಕು. ಸ್ವಾಮಿಯವರು ಬಿಟ್ಟಿದ್ದ ಯಜ್ಞಾಶ್ವವು ಭೂಮಿಯಲ್ಲಾ ಸಂಚರಿಸಿಕೊಂಡು ಪರಿವಾರದೊಡನೆ ಬರುತ್ತಿರಲು ಕಾಮರೂಪನಾದ ಬಾಲಕನೋರ್ವನು ಬಂದು ಶಾಮಲ ರತಿಯರಸನಂತೆ ಮುಳಿದು ಶತ್ರುಘ್ನ ರಾಜನಂ ಕೆಡುಹಿ ಕುದುರೆಯನ್ನು ಪಿಡಿದು ಕಟ್ಟಿದರು. ಈ ಮಹಾಯಘ್ನ ಹೋಮಾದಿಗಳನ್ನು ಈಗ್ಗೆ ನಿಲ್ಲಿಸಿ ಸಂಗ್ರಾಮಕ್ಕೆ ಶೀಘ್ರವಾಗಿ ತೆರಳಬೇಕೈ ಸ್ವಾಮಿ ಸೇವಕಜನ ಪ್ರೇಮಿ.

ಪದ

ಕೇಳೆಲೊ ಮರುಳೆ  ಶತ್ರುಘ್ನನ ಜಯಿಸುವ
ಆಳುಗಳನು ಕಾಣೆ  ಜಗದೊಳಗೆ ॥
ಪಾಲಾಕ್ಷನಾದರು ಗೋಳಿಡಿಸುವ ತಮ್ಮಾ
ಪೇಳದಿರೆನ್ನೊಳು  ಸಟೆಯಾ  ಕುಟಿಲತೆಯಾ ॥
ಕುಂಭಿಣಿ ಪ್ರಕಟಣ ಪುರವಾಸನಾಣೆ
ನಾಂ  ನಂಬಲಾರೆನೋ ನಿನ್ನಾ ॥ಕೇಳೂ ॥

ರಾಮ : ಕೇಳೆಲೋ ದುರುಳ ಮುಂಡೇದೆ, ಪಾಲಾಕ್ಷನಾದಾಗ್ಯು ಕಾಳಗದಲ್ಲಿ ಗೋಳಿಡಿಸಿ ಬಿಡುವ ತೋಳುಗಳುಳ್ಳ ಶತ್ರುಘ್ನನೊಡನೆ ಕಾಳಗವನ್ನು ಮಾಡಿ ಜೈಸುವಂಥ ಪರಾಕ್ರಮಶಾಲಿಗಳನ್ನು ಈ ಲೋಕದಲ್ಲಿ ಕಾಣಲಿಲ್ಲ. ಖೂಳನೇ ನೀನು ಪೇಳಿದ ವಚನಗಳ್ಯಾವತ್ತಿಗೂ ಕೇಳುವದಿಲ್ಲವೋ ಶುದ್ಧ ಭ್ರಷ್ಠನೇ.

ಚಾರ : ಆಳಿದೊಡೆಯನ ಸನ್ನಿಧಿಯಲ್ಲಿ ಸಟೆಯ ವಾಕ್ಯಗಳನ್ನು ಪೇಳಿದವನಾಗಿದ್ದರೆ ನೀಳಮಾದ ಯನ್ನ ನಾಲಿಗೆಯನ್ನು ಸೀಳಬಹುದೈಯ್ಯ ಮಹಾ ಪ್ರಭುವೆ.

ರಾಮ : ಆಹಾ ಸಹೋದರನಾದ ಸೌಮಿತ್ರಿಯೇ ಕೇಳು. ಬಹು ಶೂರನಾದ ಶತ್ರುಘ್ನನನ್ನ
ನೋಯಿಸಿದ ಪರಾಕ್ರಮಶಾಲಿಗಳ್ಯಾರೋ ತಿಳಿಯಲಿಲ್ಲವಲ್ಲಾ. ಇದಕ್ಕೆ ಹ್ಯಾಗೆ ಮಾಡಬೇಕಪ್ಪಾ ತಮ್ಮಾ ಲಕ್ಷ್ಮಣಾ.

ಪದ

ಪೊಡವಿಪಾಲಕ ರಾಮಾ  ಕೊಡು ತಡವ
ಮಾಡದೆ ನೇಮಾ  ದುಡುಕಿನಿಂದಲಿ
ಹಯವ ತಡೆದ  ಹುಡುಗರೀರ್ವರ
ಪಿಡಿದು ತರುವೆ ॥

ಲಕ್ಷ್ಮಣ : ಅಣ್ಣ ಪೊಡವಿಪತಿಯಾದ ರಾಘವ ಮೂರ್ತಿಯೇ ಲಾಲಿಸು. ತಡಮಾಡದೆ ಕಡುಸಡಗರದಿಂದ ನೇಮವನ್ನು ದಯಪಾಲಿಸಿದ್ದೇ ಆದರೆ ದುಡುಕು ಬುದ್ಧಿಯಿಂದ ಹಯವನ್ನು ತಡೆದು ಕಟ್ಟಿರುವ ಹುಡುಗರನ್ನು ಗಡಣಿಸಿ ಪಿಡಿದುಕೊಂಡು ಬಂದು ತಡೆಯದೆ ನಿಮ್ಮ ಅಡಿದಾವರೆಗೆ ವಪ್ಪಿಸುವೆನೋ ಅಣ್ಣಾ ತಿಳಿಸುವೆ ಹುಡುಗರ ಬಣ್ಣ.