ಪದ

ಬಂದು ನಿಲ್ಲಲಿ ಜವನು ಸುರಬೃಂದ
ನೆರೆದರೇನು  ಇಂದವರನು ಅಂದ
ಗೆಡಿಸಿ  ಬಂದ ಪಥವನೊಂದಿಸುವೆನೋ ಅಣ್ಣಾ ॥

ಲಕ್ಷ್ಮಣ : ಭಳಿರೇ ಇಂದಿರಾ ರಮಣ ಮುಕುಂದ ಸದಾನಂದ ಗೋವಿಂದ, ದಯದಿಂದ  ಲಾಲಿಸಬೇಕೋ ಮಂದರಾದ್ರೀಧಾರಕ ಹೇ ಕಂದರ್ಪಜನಕಾ, ಇಂದಿನ ದಿನ ನಂದಿವಾಹನ ಅಜದೇವ ಗಜಗಮನ ಕಾಲರೊಂದಾಗಿ ಬಂದು ನಿಂದಾಗ್ಯು ಅಂದಗೆಡಿಸಿ ಬಂದ ಪಥವಿಡಿದು ಹಿಂದಕ್ಕೆ ಹೋಗುವಂತೆ ಮಾಡುವೆ ಮುಂದಾಗಿ ಕಳುಹಿಸಿಕೊಡುವಂಥವನಾಗಪ್ಪಾ ಅಗ್ರಜಾ.

ಪದ

ಧರಣಿ ತುಮಕೀಪುರವ  ಅನವರತ
ಪಾಲಿಸುತ್ತಿರುವ  ಪರಶಿವ ತರಳರ
ವಹಿಸಿ ಬರಲು ಧುರಧೀಶೆಯರ ತರುಬುವೆ ॥

ಲಕ್ಷ್ಮಣ : ಅಣ್ಣಾ ಸಾರಸಾಕ್ಷ, ಈ ಧರಣಿಗಧಿಕವಾದ ತುಮಕಿಯ ಪುರವನ್ನು ಪರಿಪಾಲಿಸುವ ಗಿರಿಜಾತೆಯರಸ ಗಂಗಾಧರೇಶನೇ ಆ ತರಳರಿಗೆ ಸಹಾಯಭೂತನಾಗಿ ಬಂದಾಗ್ಗು ಬಿಡದೆ ಆ ಹುಡುಗರನ್ನು ಸೆರೆಪಿಡಿದು ನಿಮ್ಮ ಚರಣಾರವಿಂದದೆಡೆಗೆ ತರುವೆನೈ ಅಗ್ರಜ ಭೂಪತೀ ನೃಪತಿ.

ರಾಮ : ಭಳಿರೇ ಕದನ ಕೋವಿದನಾದ ಚದುರ ಲಕ್ಷ್ಮಣನೇ ಕೇಳು. ಮದನಾಕಾರನಾದ ಶತ್ರುಘ್ನನನ್ನು ಕದನದೊಳ್ ಜೈಸಿದ ಬಾಲಕರನ್ನು ಧಾವ ವಿಧದಿಂದಲಾದರು ವಧಿಸುವಂಥವನಾಗಪ್ಪಾ ಅನುಜಾ ಸಾಮ್ರಾಜ್ಯ ತನುಜ.

ಭಾಗವತರ ಕಂದ ಪದ್ಯ (ಗೌಳ)

ಮತಿಯ ತಿಳಿದೆದ್ದ ಲವನೆರಗುತ್ತ  ಅಗ್ರಜನ
ಪಾದಕ್ಕೆ ಗುರು ಕರುಣಿಸಿದ  ವರಮಂತ್ರಶಕ್ತಿಯಿಂ
ದಲಿ  ತರಣಿಯ ಸ್ತುತಿಗೈದು  ಪಡೆದ  ಸನ್ಮೋಹನಾಸ್ತ್ರಮಂ ॥

ಲವ : ಭಲೈ ಮೂರು ಲೋಕಕ್ಕೆ ಮೀರಿದ ಪೋಂಕಾರಿಯಾದ ಮದಾಗ್ರಜನೇ ಲಾಲಿಸು. ಬಹಳ ದೂರದ ಪಥದಲ್ಲಿ ಭೇರಿ ಡಂಕ ವಾದ್ಯಗಳಿಂದ ಅಹಹ ಭೋರಿಡುವ ಚತುರಂಗ ಆಯುಧಂಗಳ ಸಮೇತ ಸಂಗರಕ್ಕೆ ಸಿದ್ದವಾಗಿ ಬರುವರು. ಭಲಾ ಅಗ್ರಜಾ, ಭೂರಿ ಭುಜಬಲದಿಂದ ಪಿಡಿಯುವ ಕ್ರೂರಮಾದ ಯನ್ನ ಆಯುಧವು ನೆನ್ನೆಯ ಬವರದಲ್ಲಿ ಬಿದ್ದಿತು. ತತ್ ಕಾರಣ ಪರಮ ಮೂರ್ತಿಗಳಾದ ಗುರುಗಳಿಂದ ಅನುಗ್ರಹಿಸಲ್ ಪಟ್ಟಿರುವ ಘನಮಂತ್ರೋಪಶಕ್ತಿಯಿಂದ ದಿನಪನಂ ಪ್ರಾರ್ಥಿಸಿದವನಾಗಿ ಘೋರತರಮಾದ ಮೇಘಾಸ್ತ್ರಮಂ ಪಡೆದು ವೈರಿಗಳ ನಿರ್ನಾಮಪಡಿಸುವೆನೈ ಅಗ್ರಜ ವೀರಾ.

ಭಳಿರೇ ಅಗ್ರಜಾ, ಮುನಿವರ‌್ಯನುಪದೇಶ ಗೈದು ಘನ ಮಂತ್ರೋಪಶಕ್ತಿ ಇಂದ ದಿನಪನಂ ಪ್ರಾರ್ಥಿಸಿದವನಾಗಿ ಅನುಪಮ ದಿವ್ಯಾಸ್ತ್ರವಂ ಪಡೆದು ಇದ್ದೇನೆ. ಇನ್ನು ಕದನಕ್ಕೆ ಸಿದ್ಧರಾಗಿ ಪೋಗೋಣ ನಡಿಯೈ ಅಗ್ರಜ ಈ ಮಾತು ಸಹಜ.

ಕುಶ : ಹೇ ಅನುಜಾ, ಭುವನ ಪ್ರಾಣಿಗಳನ್ನ ಪಾಲಿಸುವ ವಿಜೇಂದ್ರನಾಗಲೀ ದೇವೇಂದ್ರನೇ ಬರಲಿ ಬೆದರದೇ ಅವನ ಕಿವಿ ಮೂಗುಗಳಂ ತಂದು ಈ ರಣ ಭೂಮಿಯಲ್ಲಿ ಕೆಡುಹದಿದ್ದರೆ ಕುಶನೆಂಬ ಪೆಸರು ನನಗ್ಯಾಕೊ ಸಹೋದರಾ ಸಂಗರ ಸಾಹಸಕರ.

ಭಾಗವತರ ಕಂದ ಪದ್ಯ

ಅಗ್ರಜನ ಅಪ್ಪಣೆಯಾಗಲೂ ॥
ಶೀಘ್ರದಿ ಸೌಮಿತ್ರಿ ತೆರಳಿ ಬರುತ್ತಿರೆ
ರಣದೋಳ್ ವ್ಯಗ್ರದಿಂ ನೋಡುತ್ತಾ ಬಾಲರು
ಉಗ್ರತಮರಾಗಿ  ಧನುವನೊದರುತ ನಿಂದರು ॥ನಿಂದರು ॥

ರೂಪಕಾ

ಮಾರ ಸನ್ನಿಭರೇ ನೀವ್ಯಾರ ಪುತ್ರರೇ
ಪೇಳಿ  ಧಾರುಣಿಯೋಳ್ ಪಡೆದ ನಾರೀಮಣಿ
ಯಾರು  ಪಿತನ್ಯಾರು ॥

ಲಕ್ಷ್ಮಣ : ಯಲೈ ಮಾರಸನ್ನಿಭರಾದ ಬಾಲಕರೇ, ನೀವು ಧಾರು ಈ ಧಾರುಣಿಯೊಳಗೆ ನಿಮ್ಮನ್ನು ಪೆತ್ತ ತಂದೆ ತಾಯಿಗಳ್ಯಾರು? ಜಾಗ್ರತೆ ಇಂದ ಪೇಳಿರೈಯ್ಯ ಬಾಲರೇ.

ಪದ

ಯಲವೋ ಬಾಲರೆ ನಿಮಗೀ ಬಿಲ್ಲು ವಿದ್ಯಾಭ್ಯಾಸ
ವನ್ನು  ನೆಲೆಗೊಳಿಸಿದ ಗುರುಗಳ್ಯಾರೋ
ಯನಗೆ ಪೇಳಿ ಬೇಗ ಪೇಳಿ ॥

ಲಕ್ಷ್ಮಣ : ಯಲೈ ಮುದ್ದು ಬಾಲಕರೇ, ಸದ್ಯಕ್ಕೆ ಈ ವುದ್ಯಾನವನದಲ್ಲಿ ನಿಮಗೆ ಬಿಲ್ಲು ವಿದ್ಯಾಬ್ಯಾಸವನ್ನು ಗೈದು ಬುದ್ಧಿಯಂ ಪೇಳಿದ ವಿದ್ಯಾಗುರುಗಳ್ಯಾರು ಬದ್ಧವಾಗಿ ಪೇಳುವಂಥವರಾಗಿರೈಯ್ಯ ಬಾಲಕರಿರಾ.

ಪದ

ಧರಣೀ ಶ್ರೀ ಪ್ರಕಟನ  ಪುರ ಗಂಗಾಧರನಾಣೆ
ಮರೆಯ ಮಾಚದೆ ನಿಮ್ಮ  ಪರಿಯ ಪೇಳೆನಗೆ ॥

ಲಕ್ಷ್ಮಣ : ಯಲೈ ತರಳರೇ, ಈ ಧರಣಿಗಧಿಕವಾದ ಪ್ರಕಟನಪುರವನ್ನು ಪಾಲಿಸುವ ಗಂಗಾಧರೇಶನ ಚರಣಸಾಕ್ಷಿಯಾಗಿಯೂ ಮರೆಮಾಜದೆ ಪೇಳಿರೈಯ್ಯ ಮುದ್ದು ಬಾಲಕರೇ.

ಲವ : ಭಳಿರೇ, ದುರುಳ ವೈರಿಗಳೆಂಬ ವುರುಗ ಕುಲಕ್ಕೆ ಗರುಡನೋಪಾದಿಯಲ್ಲಿರುವ ಅಗ್ರಜನೇ ಲಾಲಿಸು. ಕರಿತುರಗರಥಪದಾತಿಗಳ ಸಮೇತ ಭರಭರಾಟೆಯಿಂ ಮೆರೆಯುತ್ತಾ ಬಂದು ಥರಥರಾಯುಧಗಳಿರ್ದು ಧುರ ಧುರಾಗ್ರದೋಳ್ ನಿಂದು, ಸರಿಸರಿಯಾಗಿ ಕಾದುವ ಸಾಮರ್ಥ್ಯ ತನಗಿಲ್ಲದೆ ಪರಿಚಯ ಬಲ್ಲ ನೆಂಟನಂತೆ ಮರ‌್ಯಾದೆ ಇಂದ ಯಮ್ಮ ಗುರುಗಳನ್ನು ಕೇಳುವದಕ್ಕೆ ಧುರ ಹೇಡಿ, ಇವನು ಧಾರೋ ಭಲಾ ಅರಿತುಕೊಳ್ಳಲೀ ನಮ್ಮ ಪರಿಯನ್ನು ಪೇಳುವಂಥವನಾಗೈ ಅಗ್ರಜಾ.

ಕುಶ : ಯಲೈ ತಮ್ಮಾ ಅವರುಗಳು ದುರುಳರಾದಾಗ್ಯು ಮರಿಯಾದೆಗೆ ಬಂದ ಕೊರತೆಯೇನೋ ಈ ನರಪಾಲರೊಡನೇ ಯಮ್ಮ ಪರಿಯನ್ನ ಸ್ವಲ್ಪ ವರೆದು ನೋಡೋಣಪ್ಪ ಅನುಜಾ ಇದು
ತಿಳಿ ಸಹಜಾ.

ಪದತ್ರಿಪುಡೆ

ಯಮ್ಮಯ ಪರಿಯಾ  ಧರಣೀಶ್ವರ
ಲಾಲಿಸಬೇಕೀಗಾ ಧರೆಯೊಳೆಮ್ಮನು
ಭರದಿ ಪೆತ್ತಳು  ಸರೋಜಾಕ್ಷಿ ಸೀತೆ ॥

ಕುಶ : ಯಲೈ ಧರಣೀಶ್ವರನೇ, ಯಮ್ಮ ಕಾರುಣಿಕವನ್ನು ಸವಿಸ್ತಾರವಾಗಿ ಪೇಳುತ್ತೇವೆ ಲಾಲಿಸುವಂಥವನಾಗೈ ದೊರೆಯೇ ಬಾಲಕರ ಪರಿ ನೀನರಿಯೇ.

ಪದ

ತಡೆಯದೋರ‌್ವನೂ  ಕಡು ದುರಾತ್ಮಕಾ ಪೊಡವಿಜಾತೆಯನ್ನು
ತಾನು  ಅಡವಿ ಮಧ್ಯದಲಿ ಬಿಡಲು
ಮುನಿವರ‌್ಯನು ವಡಗೊಂಡು ಬಂದು ತಂದ ॥

ಕುಶಲ : ಅಯ್ಯ ರಾಜ, ಪೊಡವಿಜಾತೆಯಾದ ಯಮ್ಮ ಮಾತೆ ಸೀತಾದೇವಿಯನ್ನು, ಕಡುಮೂರ್ಖನಾದ ಪೊಡವಿ ಪಾಲಿಪ ಅಧಮನೋರ್ವ, ವಡಗೊಂಡು ಪೋಗಿ ಘೋರ ಅಡವಿಯೋಳ್ ಬಿಟ್ಟು ತೆರಳಲು, ಜಲಜಾಕ್ಷಿಯ ದುಖವನ್ನು ನೋಡಿ ತಡೆಯಲಾರದೇ ಕಡು ಮಮತೆ ಇಂದೋರ‌್ವ, ಯತಿಮಹಾತ್ಮನು ಕಂಡು ಬಿಡದೆ ತನ್ನ ಆಶ್ರಮಕ್ಕೆ ಕರೆದುಕೊಂಡು ಪೋಗಿ ವುಪಚರಿಸಿದ ನಂತರ ಗಂಡುಗಲಿಗಳಾದ ನಾವೀರ‌್ವರು ಪುಟ್ಟಿದೆವೈಯ್ಯ ಪೊಡವಿಪಾಲಕರೇ.

ಪದ

ಅಸಮ ಮುನಿವರ‌್ಯ ಪೆಸರನಿಟ್ಟನು  ಕು
ಶಲವರೆನುತ  ಸತತ ವಸುಧೆ ವಿದ್ಯೆಯನ್ನುಸುರಿ
ಶರಗಳಾವ ವಶವರ್ತಿಗೈದಾ ॥ಕಾಯ್ದ ॥

ಕುಶಲ : ಯಲೈ ವಸುಧಾಧಿಪನೇ, ಅಸಮಗುರುವಾದ ವಾಲ್ಮೀಕಿ ರುಷೀಶ್ವರನು ಕುಶಲವರೆಂಬ ನಾಮಾಭಿದಾನವಂ ರಚಿಸಿ, ರಾಮಾಯಣ ಸಾದ್ಯಂತಮಾಗಿ ತಿಳಿಸಿ ಭೂರಿ ಭುಜಬಲ ಮಾಡಿ ಧನುರ್ ವಿದ್ಯಗಳಂ ತೋರಿ, ಇಕ್ಕೋ ಈ ಕಾಮ್ಯಕಾಸ್ತ್ರವಂ ಕೊಟ್ಟಿರುತ್ತಾರೆ. ಮೀರಿದ ಅರಿರಾಯರ ಹಸ್ತಮಸ್ತಕಮಂ ಛೇದಿಸಿ ಬಿಡುವ ದಿಟ್ಟ ಬಾಲಕರೆಂದು ಸತ್ಯವಾಗಿ ತಿಳಿಯಬೇಕೈಯ್ಯ ಭೂಪ.

ತ್ರಿಪುಡೆ

ತರಳಾ ಕೇಳೆಲೋ ಕುಶನೇ  ಅರಿತು ನೀನು
ಘಳಿಲನೇ  ತುರಗವನು ಬಿಟ್ಟು ರಾಮರ
ಚರಣಕೆರಗಿ ಬಾಳೋ ಕುಶನೇ ॥

ಲಕ್ಷ್ಮಣ : ಯಲೈ ಅರಿಯದ ತರಳರಾದ  ಕುಶಕುಮಾರಕನೇ ಕೇಳು  ದುಡುಕು ಬುದ್ಧಿ ನಿಮಗೆ ತರವಲ್ಲ  ಮರಿಯಾದೆ ಇಂದ  ತುರಗವನ್ನು ಬಿಟ್ಟು  ಸಾರಸಾಕ್ಷನ ಚರಣಾರವಿಂದಗಳಿಗೆರಗಿ  ಬದುಕುವುದು ಪರಿಣಾಮವಾಗಿರುವದೈಯ್ಯ  ಕುಶನೇ ॥

ತ್ರಿಪುಡೆ

ಬರಲಿ ಸಂಗರಕೆ ರಾಮನು  ಚರದೊಳೀ
ಗ ತರಿವೆನು  ಧರುಮಗೇಡಿಯೇ ಹೋ
ಗೋ ನಿನಗೆ  ತುರಗದ ಆಸೆ ಯಾತಕಿನ್ನು ॥

ಕುಶ  : ಅಹಹಾ ಯಂಥಾ ತಿರಸ್ಕಾರದ ಮಾತುಗಳನ್ನ ಆಡಿದೆ. ಯಲಾ ಅಧಮನೇ, ಅರಿಗಳಿಗೆ ಶರಣಾಗತನಾಗಿರುವುದಕ್ಕೆ ನಾವು ನಿನ್ನಂಥ ರಣ ಹೇಡಿಯಲ್ಲಾ. ಇದೆಲ್ಲಾ ಕೇಳಬೇಕಾದ್ದಿಲ್ಲ ಗುರುಗಳ ಕಟಾಕ್ಷದಿಂದ ಅರಿತಮಟ್ಟಿಗೂ ಶಸ್ತ್ರಾಯುಧಗಳಿಂದ  ಗುರುತನ್ನ ಮಾಡಬಲ್ಲೆನು. ಭಲಾ ಧುರಕನುವಾಗಿ ರಾಮನೆಂಬ ಸಮಾಜವು ಬರಲೀ ಮಹಾ ಕಾಠಿಣ್ಯನಂತೆ ನಿಂತು ಶರಮುಖದಿಂದ ಪರಿಭಂಗಿಸಿ ಬಿಡುವೆವೋ ಭ್ರಷ್ಠಾ ಪರಮ ಪಾಪಿಷ್ಠ.

ಪದ

ಹೆಚ್ಚು ಮಾತು ಬಿಡೆಲೋ ಮುಚ್ಚು ಬಾಯಿ
ಸಾಕು ॥ಯೆಚ್ಚರದಿಂದಲಿ ನಿನ್ನ ಶಿರವಾ  ಕೊಚ್ಚಿ
ಬಿಡುವೆನೆಚ್ಚು ಶರವ ತರಳ ಕೇಳೆಲವೋ ॥

ಲಕ್ಷ್ಮಣ : ಯಲಾ ಹುಚ್ಚು ವುಡುಗನೇ, ಹೆಚ್ಚು ಮಾತುಗಳನ್ನುಚ್ಛರಿಸದೆ ಯಚ್ಚರಗೊಂಡು ಕರಗಳಿಂದ ಬಾಯನ್ನ ಮುಚ್ಚುವಂಥವನಾಗು. ಇಚ್ಛೆಗೆ ಬಂದಂತೆ ಉಚ್ಚರಿಸಿದ್ದೇ ಆದರೆ ಇಕ್ಕೋ ನೋಡು ಹರಿವಿರಂಚಿಗಳು ಮೆಚ್ಚುವಂತೆ ಮುಚ್ಚುಮರೆ ಇಲ್ಲದೆ ನಿನ್ನ ಶಿರವನ್ನು ಕೊಚ್ಚಿಬಿಡುವೆನೋ ಬಾಲಾ ದುರ್ಗುಣಶೀಲಾ.

ತ್ರಿಪುಡೆ

ಅಡಿಗಡಿ ಶರಗಳೈದನು  ವಡನೆ ಚರಿ
ಸಿಬಿಡುವೆನು  ಪೊಡವಿಗಧಿಕ  ಪ್ರಕಟನ
ಪುರದೊಡೆಯ  ಬಂದರೂ ಬಿಡೆನೋ ಇನ್ನೂ ॥

ಕುಶ : ಯಲೋ ಪೊಡವಿಪ  ಅಧಮನೇ ಕೇಳು. ಗಂಡುಗಲಿಯಾದ ಯನ್ನೊಡನೆ ಕಾಳಗವನ್ನು ಮಾಡಲಾರದೆ, ಹುಡುಗನ ಮೇಲೆ. ಕಡುಮಮತೆಯುಳ್ಳವನಂತೆ ಬಡ ಮನಸ್ಸಿನಿಂದ ಕಳ್ಳನೆಪವನ್ನು ತಾಳಿದ ಮಾತ್ರಕೆ ನಿನ್ನನ್ನು ಬಿಡಲಿಲ್ಲಾ ಕಂಡೆಯಾ. ಇದೇ ಗಡಿಗಡಿಸಿ ಬಿಡಿಬಿಡಿಸಿ ಇರುವ  ಖಡ್ಗಾಯುಧ ತರಮಾದ ಕೂರ್ಗಣೆಗಳಿಂದ ಭೋರ್ಗರಿಸಿ ಬಿಡುವೆ. ಈ ಪೊಡವಿಗಧಿಕಮಾದ  ಮೃಢ ಗಂಗಾಧರೇಶನೇ ನಿನಗೆ ಸಹಾಯಭೂತನಾಗಿ ಬಂದರೂ ಜೈಸಿ ಬಿಡುತ್ತೇನೆ. ಕಾಮ್ಯಕಾಸ್ತ್ರವಂ ಬಿಟ್ಟಿರುತ್ತೇನೆ ತಡೆದುಕೊಳ್ಳು ವಂಥವನಾಗೋ ಭ್ರಷ್ಠ ಪರಮ ಪಾಪಿಷ್ಠ.

ಲಕ್ಷ್ಮಣ : ಅಯ್ಯೋ ರಾಘವ ಈ ಪುಟ್ಟ ಬಾಲಕರು ಬಿಟ್ಟ ದುಷ್ಠ ಶಸ್ತ್ರಗಳಿಂದ ನಾನು ಕೆಟ್ಟೆನೋ ಕೆಟ್ಟೆ.

 

(ಲಕ್ಷ್ಮಣನ ಮೂರ್ಛೆ)

ಭಾಗವತರ ಕಂದ ಪದ್ಯ

ಈ ಪರಿ ಇಂದಲೀ  ಶ್ರೀರಘು ಭೂಪತಿ  ಸೌಮಿತ್ರಿಯರ
ಕಾಣದೆ  ಬಹಳ ಆಲಾಪಿಸುತ್ತಿರ್ಪ  ಸಮಯಕ್ಕೆ
ಆ ಪಥದಿಂದೋರ್ವ  ಚಾರನು ಬಂದು ಅರುಹಿದನು ॥

ಚಾರ : ಹೇ ದೇವ ಮಹಾನುಭಾವ, ದೀಕ್ಷೆಯಿಂದ ಇಳಿದು ಕದನಕ್ಕೆ ಸಿದ್ಧವಾಗಿ ತೆರಳಬೇಕೈ ದೇವಾ. ಪಟು ಪರಾಕ್ರಮಿಗಳಾದ ಬಾಲಕರು ತಾವೀರ‌್ವರೂ ಒಂದಾಗಿ ಲಕ್ಷ್ಮಣ ದೇವರನ್ನು  ಭವರದಲ್ಲಿ ಜೈಸಿದರಾದ ಕಾರಣ ಅವರ ವಿಚಾರವನ್ನು ಪೇಳಲು ಅಸಾಧ್ಯವಾಗಿರುವದೈ ದೇವಾ ಮಹಾನುಭಾವ.

ಕಂದ (ಮುಖಾರಿ)

ಆಹಾ ಲಕ್ಷ್ಮಣ ಮತಿವೀಕ್ಷಣಾ  ಮೂರು ಲೋಕಕ್ಕೆ
ಶೂರನೆಂದೆಣಿಸಿ  ವನದೊಳಗೀಗ  ಬಾಲಕರಂ
ಕೆಣಕಿ ನೊಂದೆಯಾ  ಪಾಲಿಪರ‌್ಯಾರೈ ಯನ್ನಂ ಕೆಟ್ಟೆನೋ ತಮ್ಮಾ ॥

 

(ರಾಮನ ಮೂರ್ಛೆ)

ಭರತ : ಹೇ ಸಾರಸಾಕ್ಷ, ಚಾರನ ನುಡಿ ಕೇಳಿದ ಮಾತ್ರದಲ್ಲಿಯೇ ನೀನು ಧರಣಿಯ ಮೇಲೆ ಮೂರ್ಛೆ ತಾಳಬಹುದೆ ಅಗ್ರಜಾ. ಹರಿಹರ ವಿರಂಚಿ ಸುರ ದಿಕ್‌ಪಾಲಕರಾದಾಗ್ಯು  ಪರಿಭಂಗಗೊಳಿಸಿ ಸೆರೆಗಳನ್ನು ಪಿಡಿದು ತರುವ ಧುರಪರಾಕ್ರಮಿಯಾದ ಭರತ ಭೂಪಾಲ ನಾನಿದ್ದ ಬಳಿಕ ನೀನು ಮರುಗುವುದು ಯಾತಕ್ಕೆ? ಕರವೆರಡರಿಂದೆತ್ತಿ ವುಪಚರಿಸುತ್ತೇನೆ. ತ್ವರಿತದಿಂದ ಯೆದ್ದು ಮಾತನಾಡೈಯ್ಯ ಅಣ್ಣಯ್ಯ.

ರಾಮ : ಅಯ್ಯೋ ಅಕಟಕಟ, ಯಾಗ ಕಾರ‌್ಯ ನಿರ್ವಾಹಕನಾದ ಸೌಮಿತ್ರಿಯನ್ನು ಕಳೆದುಕೊಂಡು ಹ್ಯಾಗೆ ಬಾಳಲಪ್ಪಾ ತಮ್ಮಾ ಭರತಾ.

ಪದ

ವರ ಸೌಮಿತ್ರಾ  ತರಳನೇ ನಿನ್ನ  ಮರೆಯ
ಲಾರೆನೋ  ಸುಗುಣ ಸಂಪನ್ನ ॥ಪ ॥
ಮೂರುಲೋಕದೋಳ್  ಶೂರನೆಂದೆನಿಸಿ  ವೀರಾಗ್ರಣಿ
ಗಳೆನ್ನ ಕಾರ‌್ಯ ಜೈಸಿ  ವೋರ್ವ ಬಾಲಕ
ನೊಳು ಯುದ್ಧ ಬೆಳಸಿ  ಧೀರ ಮಲಗಬಹುದೆ॥

ರಾಮ : ಅಯ್ಯೋ ಸೌಮಿತ್ರೀ, ಸುರಲೋಕ ನರಲೋಕ ವುರುಗ ಲೋಕವೆಂಬ ಎರಡರೊಂದು ಲೋಕಂಗಳೊಳಗಾಗಿ ನೀನೇ ಸಾಮರ್ಥ್ಯಶಾಲಿಯೆಂಬ ಬಿರುದನ್ನು ವಹಿಸಿದವನಾಗಿ, ಸರಿಸಾಟಿ ಇಲ್ಲದ ತರಳರಿಂದ ಈ ಧರಣಿಯ ಮೇಲೆ ಮಲಗಬಹುದೇನಪ್ಪಾ ತಮ್ಮಾ ಲಕ್ಷ್ಮಣಾ.

ಪದ

ಹಿಂದೆ ವನದೊಳು  ಯನಗಾಗಿ ಬಹಳ
ನೊಂದು ಗೆಲಿದಿ  ಸರ್ವಕಾರ‌್ಯಗಳ  ॥

ವಂದು ಮರಿಯಲಾರೆನೋ ಸಾಹಸಗಳ
ಮುಂದೆ ನಡೆಸುವರ‌್ಯಾರೀ ಯಜ್ಞಗಳ ॥

ರಾಮ : ಅಯ್ಯೋ ಕಂದರ್ಪ ಸುಂದರನಾದ ಹೇ ತಮ್ಮಾ, ಹಿಂದೆ ಯನಗೋಸ್ಕರ ವನದೊಳಗೆ ಬಹಳವಾಗಿ ಬಳಲಿ, ಬಂದ ದುಷ್ಕಾರ‌್ಯಗಳನ್ನ ಕಾಯ್ದು ಯಂನೊಂದಿಗೆ ಕಾಡಿನಲ್ಲಿ ತಿರುಗಿದೆ. ನಿನ್ನ ಸಾಹಸವನ್ನ ವಂದಿಷ್ಠು ಮರೆಯಲಾರೆನು. ಮುಂದೆ ಈ ಯಜ್ಞವನ್ನು ನಿರ‌್ವಿಘ್ನವಾಗಿ ನಡೆಸುವರ‌್ಯಾರಪ್ಪಾ ತಮ್ಮಾ.

ಪದ

ನಿನ್ನ ಮುಖ ಕಮಲವನೆಂತು  ತೊರೆವೆ
ಯನ್ನನು ಬಾ ಬಾರೆಂದು ಯಾರನ್ನು ಕರೆವೆ
ಇನ್ನು ಮರೆಯಲಾರೆನೋ  ಕಲ್ಪತರುವೆ
ಪನ್ನಗಾಧರನೊಲುಮೆ  ತಪ್ಪಿರುವೆ ॥

ರಾಮ : ಆಹಾ ಸೌಮಿತ್ರಿ, ನಿನ್ನ ಮುಖ ಕಮಲವನ್ನು ತೊರೆದು ಹ್ಯಾಗೆ ಬಾಳಲಿ. ಯನ್ನ ಸಹೋದರನೇ ಬಾರೆಂದು ವರ್ಣಿಸಿ ಪ್ರೀತಿಯಿಂದ ಧಾರನ್ನು ಕರೆಯಲೀ. ಯನ್ನ ಇಷ್ಠಾರ್ಥಸಿದ್ದಿಯಾದ ಕಲ್ಪತರುವೆ ಕಾಮಧೇನುವೇ ನಿನ್ನನ್ನು ಮರೆತು  ಇನ್ಯಾರನ್ನು ಆಶ್ರಯಿಸಿ ಬದುಕಲಿ. ಪನ್ನಗಾಧರನಾದ ಗಂಗಾಧರನ ವುನ್ನತ ಕರುಣವು ಈ ವ್ಯಾಳೆಯಲ್ಲಿ ನಿನ್ನ ಮೇಲೇ ಇಲ್ಲದೇ ಹೋಯಿತೇನಪ್ಪಾ ತಮ್ಮಾ ಲಕ್ಷ್ಮಣಾ.

ಪದ

ಅಗ್ರಜಾ ರಾಘವ  ಅಪ್ಪಣೆ ಕೊಡು ಕೊಡು
ನಿಗ್ರಹ ಯನಗೆನಗೆ  ನನಗೆ  ನಿಗ್ರಹದೊಳು
ಬಾಲಕಾಗ್ರಹ ಮುರಿದು  ಶೀಘ್ರದಿಂದ ಪಿ
ಡಿದು ತರುವೆ  ಬರುವೆ ॥

ಭರತ : ಆಹಾ ಅಗ್ರಜನಾದ ರಾಘವ ಭೂಪತೀ ನೃಪತೀ, ಯುದ್ಧಕ್ಕೆ ನೇಮವನ್ನು ಶೀಘ್ರದಿಂದ ಅನುಗ್ರಹಿಸಿದ್ದೇ ಆದರೆ ಮಹೋಗ್ರತರ ವೇಗದಿಂ ತೆರಳಿ ಅರ್ಭಕರ ಆಗ್ರಹವಂ ಮುರಿದು ಶೀಘ್ರದಿಂ ಪಿಡಿದು ತರುವೆನಪ್ಪಾ ಅಗ್ರಜಾ.

ಪದ

ಧುರಹೇಡಿ ಚಾರಕನೊರೆದ ವಚನವ
ಕೇಳಿ  ದೊರೆಯೇ ಮರುಗಬಹುದೆ ॥
ಅಹುದೆ  ಕರುಣಿಸು ನೇಮಾವ  ತುರಗ
ಬಾಲರ ಸಹಿತ  ಚರಣದೆಡೆಗೆ ತರುವೇ ॥ಬರುವೆ ॥

ಭರತ : ಅಣ್ಣಾ ಸಾರಸಾಕ್ಷ, ಧುರಹೇಡಿಯಾದ ಚಾರಕ ನುಡಿದ ಬರಡು ವಚನ ಕೇಳಿ, ದೊರೆಯೇ ನೀನು ಪರಿಪರಿಯ ವಿಧದಿಂದ ಮರುಗಲ್ಯಾತಕೆ. ತ್ವರಿತದಿಂದ ಸಂಗರಕ್ಕೆ ನೇಮವನ್ನು ದಯಪಾಲಿಸಿದ್ದೇ ಆದರೆ, ತರಳರನ್ನ ಪಿಡಿದುಕೊಂಡು ತುರಗಸಮೇತ ನಿಮ್ಮ ಚರಣಾರವಿಂದದೆಡೆಗೆ ತರುವೆನಪ್ಪಾ ಅಣ್ಣಯ್ಯ.

ಪದ

ಧರಣೀ ಶ್ರೀ ಪ್ರಕಟನಾ  ಪುರನಿವಾಸನಾ
ಕೃಪೆ ಇರಲು ಗೆಲ್ಲುವೆ ॥ಬರುವೇ ತ್ವರಿ
ತದಿ  ಕಳುವೆನ್ನ  ಪರಿವಾರ ಸಹಿತಲೀ
ತೆರಳುವೆ ನಾಂ  ಧುರಕೆ ॥

ಭರತ : ಹೇ ಧರಣಿಪಾಗ್ರಣಿಯೇ ಲಾಲಿಸು. ಈ ಧರಣಿಗಧಿಕವಾದ ಪ್ರಕಟನಪುರನಿವಾಸ ಈಶ ಗಂಗಾಧರೇಶನ ಕೃಪಾಕಟಾಕ್ಷವು ಪರಿಪೂರ್ಣವಾಗಿ ಯನ್ನ ಮೇಲೆ ಇದ್ದದ್ದೇ ಆದರೆ ತರಳರನ್ನು ಗೆದ್ದು ತುರಗವನ್ನು ಬಿಡಿಸಿಕೊಂಡು ಬರುತ್ತೇನೆ. ತ್ವರಿತದಿಂದ ಸಂಗರಕ್ಕೆ ನೇಮವನ್ನು ದಯಪಾಲಿಸುವಂಥವನಾಗೈ ಅಣ್ಣಯ್ಯ.

ರಾಮ : ಹೇ ತಮ್ಮ ಭರತ, ಸುಮ್ಮನೇ ನೀನು ಪರಾಕ್ರಮದ ಮಾತುಗಳನ್ನು ಆಡಿದರೆ ನಾನು ಸಮ್ಮತಿಸಲಾರೆ. ಹೆಮ್ಮೆಯಾಡಿ ಪೋದ ತಂಮಂದಿರಿಬ್ಬರು  ನೆಮ್ಮದಿಯಾಗಿ  ರಣಧಾತ್ರಿಯ ಮೇಲೆ ಮಲಗಿದರು. ಗಮ್ಮನೇ ನೀನು ಪೋಗಿ ಅವರಿಗೆ ಇಮ್ಮಡಿಯಾಗಿ ಮಲಗಿದರೆ ನಾನು ಯೇನು ಮಾಡಲೀ. ನಿಮ್ಮಯ ಸಹಾಯಕ್ಕೆ ಯಮ್ಮಯ ದೂತನಾದ ವಾಯುಜಾತನಂ ಕೊಡುವೆ. ನೀ ತವಕ ಪಡದೆ ಕ್ಷಣ ಮಾತ್ರ ಸೈರಿಸಪ್ಪಾ ತಮ್ಮಾ ಭರತ.

ರಾಮ : ಯಲಾ ಸಾರಥಿ ಚಲೋ ಶೂರನಾದ ಪವನ ತನಯನನ್ನ ತವಕದಿಂದ ಕರೆದುಕೊಂಡು ಬರುವಂಥವನಾಗೋ ದೂತ ರಾಜ ಸಂಪ್ರೀತಾ.