(ಶ್ರೀರಾಮರ ಮೂರ್ಛೆ)

ಭಾಗವತರ ಕಂದ (ಸಾವೇರಿ)

ನಳನಳಿಸುವ ಸುಳಿ ಬಳಲುವವೋಲ್
ಕುಶನ ಶರದಿ  ನಳಿನಾಕ್ಷ ಕಳೆಗುಂದಿ
ತಲ್ಲಣಿಸುತ್ತಾ ಗಳಿಲನೆ ಮೈಮರೆತು
ಮೆಲ್ಲನೊರಗಿದ ರಥಕೇ ॥

ಲವ  : ಭಳಿರೆ ಅಣ್ಣೈಯ್ಯ, ನಿನ್ನ ಕಣೆಗಳಿಂದ ಪಣೆವಡೆದು ಮೂರ್ಛಿತನಾಗಿ ಕಣ್ಣು ಮುಚ್ಚಿ ಮಣಿರಥದೋಳ್ ಮಲಗಿರುವ, ರಣಹೇಡಿಯಾದ ಧರಣಿಪನ ಮಣಿಕುಂಡಲ ಆರಾವಳಿಗಳನ್ನು ಮೂಟೆಯನ್ನು ಕಟ್ಟಿಕೊಂಡು, ಈ ರಣಭೂಮಿಯಲ್ಲಿ ಯಲ್ಲವನ್ನು ಶೋಧಿಸಿಕೊಂಡು ಬರುತ್ತೇನಪ್ಪ ಅಗ್ರಜ.

ಆಂಜನೇಯ : ನೋಡಿದರೇನಯ್ಯ ಜಾಂಬವಂತರೇ, ಪುಂಡರೀಕಾಕ್ಷ ಮೊದಲಾದ ಮಂಡಲೇಶ್ವರರನ್ನು ಖಂಡನವಂಗೈದ ಗಂಡುಗಲಿಗಳಾದ ಬಾಲಕರು ಯಮ್ಮನ್ನು ಕಂಡರೆ ಮಂಡೆಯನ್ನು ಪಿಡಿದು ಯೆಳೆಯುವರು. ಪುಂಡರೀಕಾಕ್ಷಿಯ ಬಳಿಗೆ ನಮ್ಮನ್ನು ಕರೆದುಕೊಂಡು ಪೋದರೆ ಆ ಜಗನ್ಮಾತೆಯನ್ನು ಬೇಡಿಕೊಳ್ಳುವೆನು. ತಕ್ಷಣಕ್ಕೆ ಶವಗಳನ್ನು ಮರೆಮಾಡಿಕೊಂಡು ಕ್ಷಣಹೊತ್ತು ಮರದ ಹತ್ತಿರ ವಿಶ್ರಮಿಸಿಕೊಳ್ಳುತ್ತೇನೆ.

ಲವ : ಯಲೈ ಕೋತಿಗಳಿರಾ, ಧಾತುಗೆಟ್ಟು ಮಾತನಾಡುತ್ತಿದ್ದ ಹೊಲಬನ್ನ ಕೇಳಿ ಬಂದು ಇದ್ದೇನೆ. ಯಾತಕ್ಕೆ ಭೀತಿಪಟ್ಟು ಮಲಗಿದ್ದೀರಿ. ಭೂತಳೇಶ್ವರನಾಣೆಗು ನಿಮ್ಮನ್ನು ಘಾತಿಸುವುದಿಲ್ಲ ಯೇಳಿ ನಾನು ತಂದಿರುವ ಭೂತಳೇಶ್ವರನ ವಸ್ತ್ರಾಭರಣಗಳ ಮೂಟೆಯನ್ನು ಹೊತ್ತುಕೊಂಡು ಮಾತೆಯ ಯಡೆಗೆ ಪೋಗೋಣ ಬಂನ್ನಿರೋ ಧಾತು ಕೆಟ್ಟ ಕಪಿಗಳಿರಾ.

ಆಂಜನೇಯ : ಅಪ್ಪಣೆ ಮೇರೆಗೆ ತಪ್ಪದೇ ಬರುತ್ತೇವೆ. ನಮ್ಮನ್ನು ವಡೆಯದೆ ಬಡಿಯದೆ ಕರೆದುಕೊಂಡು ಪೋದರೆ ಬರುತ್ತಾ ಇದ್ದೇವೈ ಬುದ್ಧಿ ಲೋಕ ಪ್ರಸಿದ್ಧಿ.

ಲವ : ಅಣ್ಣಾ ಕುಶಕುಮಾರನೇ, ಅಸಮರೂಪಿನ ಕಪಿಗಳನು ನೋಡಿದೆಯಾ. ವುಸುರುಳಿದರೆ ಸಾಕೆಂದು ಅಸು ತೊರೆದ ಶವಗಳನ್ನು ಮರೆಮಾಡಿಕೊಂಡು ಪಿಸಪಿಸನೆ ಮಾತನಾಡುತ್ತಿದ್ದ ಹೊಲಬನ್ನು ತಿಳಿದು ತಂದು ಇದ್ದೇನೆ. ವಸ್ತ್ರಾಭರಣಗಳ ಮೂಟೆಯನ್ನು ಹೊರಿಸಿಕೊಂಡು ಮಾತೆಯೆಡೆಗೆ ಪೋಗೋಣ ಬಾರೈ ಕುಶನೇ ಅಸಹಾಯಶೂರನೇ.

ಕುಶ : ಭಲಾ ಅನುಜಾ, ಈ ಚಲುವ ಕಪಿಗಳನ್ನು ಹಿಡಿದು ತಂದ ನಿನ್ನ ಸಾಹಸಕ್ಕೆ ಮೆಚ್ಚಬೇಕಾಯಿತು. ನೆಲಪತಿಗಳ ವಸ್ತ್ರಾಭರಣಗಳ ಮೂಟೆಯನ್ನು ಜನನಿಯ ಬಳಿಗೆ ಹೊರಿಸಿಕೊಂಡು ಪೋಗೋಣ ಬಾರಪ್ಪ ಅನುಜಾ ಸಾಮ್ರಾಜ್ಯ ತನುಜಾ.

ಕುಶ : ಇದೇ ಶಿರಸಾಷ್ಠಾಂಗ ಬಿನ್ನಪಂಗಳಂಮ್ಮಾ ತಾಯೇ. ಇಂದಿನ ದಿನದ ಸಮರದಲ್ಲಿ ಶ್ರೀ ರಾಮ ಭರತಲಕ್ಷ್ಮಣ ಶತ್ರುಘ್ನರೆಂಬುವರನ್ನು ಸಂಗರದಲ್ಲಿ  ಕ್ರಮಗೆಡಿಸಿದವನಾಗಿ, ಅವರ ಕರ್ಣ ಕುಂಡಲಗಳೇ ಮುಂತಾದ ದಿವ್ಯ ವಸ್ತ್ರಾಭರಣಗಳ ಮೂಟೆಗಳನ್ನು ಕಟ್ಟಿ ಈ ಕಪಿಕಟಕರ ಮೇಲೆ ಹೊರಿಸಿಕೊಂಡು ನಿಮ್ಮ ಪಾದದೆಡೆಗೆ ಬಂದು ಇದ್ದೇವಮ್ಮಾ ತಾಯೇ.

ಪದ

ಥರವೇ ತರಳರಿರಾ  ದುರುಳತೆ ಗೈದಿರಲ್ಲಾ ॥
ಭರತ ಲಕ್ಷ್ಮಣ ರಾಮ  ಶತ್ರುಘ್ನ
ರನೆಲ್ಲಾ  ಧುರದೊಳು ಬಳಲಿಸಬಹುದೆ
ಕೊರತೆಯ ತಾರಲು ಬಹುದೆ ॥

ಸೀತಾದೇವಿ : ಅಯ್ಯ ತರಳರೇ, ಸಾರಸಾಕ್ಷ ಭರತ ಲಕ್ಷ್ಮಣ ಶತ್ರುಘ್ನರನ್ನ ಧುರದೊಳಗೆ ಶರಮುಖದಿಂದ  ಬಳಲಿಸಬಹುದೇ. ಯಂಥಾ ಕೊರತೆಯನ್ನ ತಂದೊಡ್ಡಿದರಪ್ಪಾ ಕುಮಾರಕರೇ.

ಪದ

ಪಡೆದ ಪಿತನ ಮೇಲೆ  ಇಡುವರೆ ಛಲವನ್ನು
ಬಿಡಲುಬಹುದೇ ಶರಗಳನು  ದು
ಡಿಕಿದಿರೀ ಇನ್ನೇನು ॥

ಸೀತಾದೇವಿ : ಅಯ್ಯ ಕಡು ಮೂರ್ಖಚಿತ್ತರೆ, ಪಡೆದ ಪಿತನ ಮೇಲೆ ಚಲವನ್ನು ಗ್ರಹಿಸಿ ಸಾಂದ್ರತರಮಾದ ಶರಗಳನ್ನು ಜೇಂಕರಿಸಿ ಬಿಡುವದು ನಿಮಗೆ, ಸರ್ವಥಾ ನ್ಯಾಯವಲ್ಲವಪ್ಪಾ ಕಂದ. ಈ ಪೊಡವಿಯೊಳಗೆ ತುಂಬಾ ಅಪಕೀರ್ತಿಯನ್ನು ತಂದಿರೇನಪ್ಪಾ ಕಂದಗಳಿರಾ.

ಪದ

ಪೊಡವಿ ಪ್ರಕಟಣಪುರ  ವಡೆಯನು ನಿಮ್ಮ
ನಡತೆ ಮೆಚ್ಚಲರಿಯನು  ಮಾಡಿದಿರಿ  ದುಷ್ಕಾರ‌್ಯವನು ॥

ಸೀತಾದೇವಿ : ಅಪ್ಪಾ ಲವಕುಮಾರಕರೇ, ಈ ಪೊಡವಿಗೆ ಮಿಗಿಲೆನಿಸಿ ಮೆರೆಯುವ ಸಡಗರದಿಂದೊಪ್ಪುವ ಕರುಣಮಣಿಯಾದ ಪ್ರಕಟನಪುರದೊಡೆಯ ಗಂಗಾಧರೇಶ್ವರನು ಸರ್ವಥಾ ಮೆಚ್ಚಲಾರನಪ್ಪಾ ಬಾಲಾ ಜ್ಞಾನದಲ್ಲಿ ಸುಶೀಲಾ.

ಭಾಗವತರ ಕಂದ (ಸಾವೇರಿ)

ಗುರುವಾಲ್ಮೀಕಿ ಮುನೀಂದ್ರನು  ವರುಣನಾ
ಲಯದಿಂದ  ಬರುವ ಪಥದೊಳ್  ವರದ
ನಾರದ   ಮುಖದಿಂ ತರಳರ  ಚರಿತೆಯನು ಕೇಳ್ದು
ಬಂದ ತನ್ನಾಶ್ರಮದೆಡೆಗಂ ॥

ಪದ

ಹರಿನಾರಾಯಣ  ದುರಿತ ನಿವಾರಣ
ಕರಿಭಯಕರುಣ  ಸರಸಿಜನೇತ್ರನೆ
ಹರಿನಾರಾಯಣ ॥

ಕಂದಸಾವೇರಿ

ಗುರುಗಳಿಗೆ ಶಿರಸಾಷ್ಠಾಂಗವು  ವರುಣನಾಲ
ಯದಿ ಬರುವತನಕ  ಆಲಸ್ಯ ಮಾಡಿದ
ಕಾರಣವೇನೈ ಪೇಳಿ ಸ್ವಾಮಿ ॥

ಕುಶ : ಮುನಿ ಮಹಾತ್ಮರೇ ಸಾಷ್ಠಾಂಗವು. ತಾವುಗಳು ವರುಣಲೋಕದಿಂದ ಬರುವುದು ಆಲಸ್ಯವಾದ ಕಾರಣವೇನು. ಪರಮಹರುಷದಿಂದ ಲವಕುಮಾರನು ವನದೊಳಗಿರಲೊಂದು ದಿನ ರಾಮನೆಂಬೋ ಸಾಮಜ ತುರಗವು ಬಂದು ವನಭಂಗವಂ ಮಾಡುವ ಸಮಯದಲ್ಲಿ, ಆ ತುರಗವನ್ನು ಲವನು ಬಂಧಿಸಲು ಕೂಡಲೇ ಬಂದ ಭಟರ ಸೈನ್ಯ ಕವಿದು, ಶತ್ರುಘ್ನನೆಂಬೋ ಧರಣಿಪಾಧಮನು ಅನುಜನಂ ಘಾತಿಸಿ ಕರೆದೊಯ್ಯಲು, ಆ ಮುನಿಪುತ್ರರರಿತು ಅಮ್ಮನವರಿಗೆ ಬಂದು ಪೇಳಲು ಜಾಗರೂಕನಾಗಿ ಪೋಗಿ, ಧುರದಲ್ಲಿ ಅನುಗ್ರಹನಾಗಿ ನಾನು ಶಿಕ್ಷಿಸಿ ಬರುವ ಸಮಯದೊಳ್ ಆ ಲಕ್ಷ್ಮಣ ಭರತ ರಾಮ ಆಂಜನೇಯರೆಂಬ ಕಪಿಗಳನ್ನು ಕ್ರಮಗೆಡಿಸಿ ಮಾತೆಯ ಬಳಿಗೆ ಬಂದು ಪ್ರೀತಿಯಿಂದ ಪೇಳಲಾಗಿ ಅಳುತ್ತಾ ತಮ್ಮನ್ನು ಸ್ತುತಿಸಿದಳೈಯ್ಯ ಗುರುವರೇಣ್ಯರೇ.

ಕಂದಸಾವೇರಿ

ಕೇಳಿದೆ ನಿಮ್ಮಯ ಚರಿತೆಯಾ  ಕಾಳಗದೊಳ
ಗಾದ  ಕಥನವನ್ನೆಲ್ಲಂ  ನಾರದ ಮುಖದಿಂ  ನಳಿ
ನಾಕ್ಷನೋಳ್  ಭವರಂಗೈಯ್ಯಲು ಬಹುದೇ ॥

ವಾಲ್ಮೀಕಿ : ಅಯ್ಯ ಕುಶಕುಮಾರಕರೇ, ಛೀ ಇಂಥ ದುಷ್ಕಾರ‌್ಯವನ್ನು ಮಾಡಬಹುದೇ. ನಳಿನಾಕ್ಷನಾದ ರಾಮ ಲಕ್ಷ್ಮಣ ಭರತಶತ್ರುಘ್ನರೊಡನೆ ಭವರವಂ ಮಾಡಬಹುದೇ. ರಾಮನು ನಿಮ್ಮ ತಂದೆಯಲ್ಲವೇ ವುಳಿದ ಮೂರು ಮಂದಿಯರು ನಿಮ್ಮ ಚಿಕ್ಕಪ್ಪನವರ ಕೂಡೆ ಸಂಗ್ರಾಮ ಬೆಳೆಸಬಹುದೇ ಬಾಲರೇ ಭಲಾ ಜ್ಞಾನದಲ್ಲಿ ಶೂರರೇ.

ಕಂದಸಾವೇರಿ

ಮುನಿಗಳಿಗೆ ವಂದನವೋ  ಬಾಲಕರು ಮಾ
ಡಿದ ಕಾರ‌್ಯವನು ನೋಡಿ ಬೇಗ  ನಳಿನಾಕ್ಷ
ನೊಡನೆ ಭವರವಂ ಮಾಡಿ  ಅರಿಸಿನವ
ನಳಿಸಿದರೆನಗಂ ॥

ಸೀತಾದೇವಿ : ಹೇ ಗುರು ವಾಲ್ಮೀಕರೇ, ಲಾಲಿಸಬೇಕೈ ಸ್ವಾಮಿ. ಸಾರಸಾಕ್ಷನಾದ ಶ್ರೀರಾಮರನ್ನು ಧುರದಲ್ಲಿ ಕೆಡಹಿ ಬಾಲಕರು ಮಾಡಿದ ಚತುರೋಪಾಯವನ್ನ ನೋಡಿದರೇ ಸೈ ಮುನಿಪ ಕರುಣ ಕಲಾಪ.

ವಾಲ್ಮೀಕಿ : ಅಮ್ಮಾ ತೋಯಜಾಕ್ಷಿ, ನಾನು ತಂದಿರುವ ಕಮಂಡಲಕದಿಂದ ಸರ್ವರನ್ನು ಯೆಚ್ಚರಗೊಳಿಸುತ್ತೇನೆ ಕ್ಷಣಮಾತ್ರ ಸೈರಿಸಮ್ಮಾ ಜನನೀ ಭವಭಯ ಹರಿಣಿ.

ವಾಲ್ಮೀಕಿ : ಯೇಳೈಯ್ಯ ಶ್ರೀರಾಮರಾಮ, ಲಕ್ಷ್ಮಣ ಭರತ ಶತ್ರುಘ್ನ ಸರ್ವರಾದಿಯಾಗಿ ಎದ್ದು ನಿಮ್ಮ ಪುತ್ರರಿಗೆ ಮೋಕ್ಷ ಪದವಿಯನ್ನು ಕೊಟ್ಟು ರಕ್ಷಿಸಬೇಕೈಯ್ಯ ಶ್ರೀರಾಮಚಂದ್ರ ಮೂರುತಿಯೇ.

ಅಯ್ಯ ಕುಶಕುಮಾರಕರೇ ಸಾರಸಾಕ್ಷನು ನಿಮ್ಮ ತಂದೆಯಲ್ಲವೆ. ಲಕ್ಷ್ಮಣ ಭರತ ಶತ್ರುಘ್ನರು ನಿಮ್ಮ ಚಿಕ್ಕಪ್ಪನವರಲ್ಲವೆ. ಸರ್ವರು ನಿಮ್ಮ ಅಯೋಧ್ಯಾಪಟ್ಟಣಕ್ಕೆ ಹೊರಡಬೇಕಯ್ಯ ಬಾಲಕರೇ.

ಕುಶ : ಗುರುಗಳ ಅಪ್ಪಣೆಯಂತೆ ನಡೆದುಕೊಳ್ಳುತ್ತೇವೈ ಸ್ವಾಮಿ ಭಕ್ತ ಜನ ಪ್ರೇಮಿ.

ಸೀತೆ : ಮಹಾತ್ಮರಿಗೆ ನಮಸ್ಕಾರವು. ಇನ್ನು ನನಗೆ ಅಯೋಧ್ಯ ಪಟ್ಟಣದ ಸುಖಸಾಮ್ರಾಜ್ಯವು ಬೇಡ. ನಿಮ್ಮ ತಪೋನಿವಾಸದಲ್ಲಿ ಸೇವೆಗೈದು ನಂಬಿರುತ್ತೇನೈ ಮುನಿಪ ಕರುಣಕಲಾಪ.

ವಾಲ್ಮೀಕಿ : ಅಮ್ಮಾ ಜನನೀ, ರಾಮರು ನಿಷ್ಕಾರಣದಿಂದ ಬಿಟ್ಟ ಕಾರಣ ನಾನು ಅಯೋದ್ಯೆಗೆ ಬಂದು ಪಟ್ಟಾಭಿಷೇಕವಂ ರಚಿಸಿ ಬರುತ್ತೇನೆ. ಜಾಗ್ರತೆಯಾಗಿ ಹೊರಡಬೇಕಮ್ಮಾ ತಾಯೇ ಪರಮ
ಪಾವನೆಯೇ.

ಸೀತಾದೇವಿ : ಗುರುಗಳ ಅಪ್ಪಣೆಯಂತೆ ಸರ್ವರೂ ಕೂಡಿ ಮಂಗಳವಂ ಮಾಡೋಣ ಬನ್ನಿರಿ.

ಮಂಗಳಂ

ಮಂಗಳಂ ಮಂಗಳಂ  ರಂಗೈಯ್ಯನಿಗೆ ಮಂಗಳಂ ॥
ವೇಣುಗೋಪಾಲಗೆ ಜಾಣು ಚನ್ನಿಗನಿಗೆ ಮಂ ॥ಜಯ ಜಯ ಮಂಗಳಂ ಮಂಗಳಂ ॥
ದುಷ್ಠ ರಜಕನಿಂದ ಸೃಷ್ಠಿಜಾತೆಯ ಕೈಯ್ಯ  ಬಿಟ್ಟ ವನಕೆ ನೇಮ  ಕೊಟ್ಟ ರಾಘವಮೂರ್ತಿ ॥ಮಂಗಳಂ ಮಂಗಳಂ ॥ಸೀತೆಯು ವನದೊಳು ರೋಧಿಸುತ್ತಿರೆ ಮುನಿ  ನಾಥನಾರೈಯಲು  ಪ್ರೀತಿವಂದಿತ ರಾಮ  ಮಂಗಳಂ ಮಂಗಳಂ
ಶ್ರೀಶ ಕುಂಕುಮ ಪುರವಾಸ  ಮಂಗಳಂ ॥

ಸಂಪೂರ್ಣಂ