೧೯೨೮ರ ಅಕ್ಟೋಬರ ೩೦ರ ಸಂಜೆ. ಲಾಹೋರ ನಗರದಲ್ಲಿಂದ ಕಿಕ್ಕಿರಿದು ತುಂಬಿದ ಸಾರ್ವಜನಿಕ ಸಭೆಯ ವೇದಿಕೆಯ ಮೇಲೆ “ಪಂಜಾಬಿನ ಕೇಸರಿ” ಎನಿಸಿದ  ವ್ಯಕ್ತಿಯೋಬ್ಬರು ನಿಂತು ಸ್ಫೂರ್ತಿದಾಯಕ ವಾಣಿಯಲ್ಲಿ ಹೇಳಿದರು:

“ನಮ್ಮ ದೇಹಗಳ ಮೇ ಈ ದಿನ ಮಧ್ಯಾಹ್ನ ಬಿದ್ದ ಒಂದೊಂದು ಹೊಡೆತವೂ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಶವದ ಪೆಟ್ಟಿಗೆಗೆ ಒಂದೊಂದು ಮೊಳೆಯನ್ನು ಹೊಡೆದಂತೆ”.

ಹೃದಯಸ್ಪರ್ಶಿ ಭಾಷಣ  ಮಾಡಿದ ಭವ್ಯ ವ್ಯಕ್ತಿಯ ಎದೆ ಹಾಗೂ ಮೈಮೇಲೆಲ್ಲ ಭೀಕರ ಲಾಠಿಪೆಟ್ಟುಗಳು ಬಿದ್ದಿದ್ದವು. ಇಂಗ್ಲೀಷರ ಅತ್ಯಾಚಾರದಿಂದ ಉಂಟಾದ ತೇಜೋಭಂಗ ವೇದನೆಯು ಗಾಯಗಳ ನೋವಿಗಿಂತಲೂ ಹೆಚ್ಚಾಗಿತ್ತು. ಇದಾದ ಹದಿನೇಳನೆಯ ದಿನ ಬೆಳಿಗ್ಗೆ ಆ ಕ್ರಾಂತಿಕಾರಿ ಕಣ್ಣು ಮುಚ್ಚಿದರು. ಅನುಯಾಯಿಗಳು ಮುಂದೆ ಅವರು ತೋರಿದ ಮಾರ್ಗದಲ್ಲಿ ಭಾರತದ ಸ್ವಾತಂತ್ಯ್ರ ಪ್ರಾಪ್ತಿಗಾಗಿ ಹೋರಾಟ ಸಾಗಿಸಿದರು.

ಅಂದಿನ ಸಾಮ್ರಾಜ್ಯ ಶಾಹಿ ಪಂಜಾಬ್ ಸರಕಾರದ ಅತ್ಯಾಚಾರಕ್ಕೆ  ಒಳಗಾಗಿ ವೀರ ಮರಣ ಪಡೆದ ಆ ಮಹಾನ್ ವ್ಯಕ್ತಿ ಲಾಲಾ ಲಜಪತ್ ರಾಯ್.

ಬುದ್ಧಿವಂತ ವಿದ್ಯಾರ್ಥಿ

ದೇಶಭಕ್ತ ಲಾಲಾ ಲಜಪತ್ ರಾಯ್ ಪಂಜಾಬ್ ಪ್ರಾಂತ್ಯದ ಫಿರೋಜಪುರ ಜಿಲ್ಲೆಯ ದುಡಿಕೆ ಎಂಬ ಹಳ್ಳಿಯಲ್ಲಿ ೧೮೬೪ರ ಜನೆವರಿ ೨೮ ರಂದು ಜನಿಸಿದರು. ಇವರ ತಂದೆ ಲಾಲಾ ರಾಧಾಕಿಷನ್ ಸರಕಾರಿ ಪಾಠಶಾಲೆಯಲ್ಲಿ ಉರ್ದು ಉಪಾಧ್ಯಾಯರಾಗಿದ್ದರು. ಸ್ವಾತಂತ್ಯ್ರ ಪ್ರೇಮ ಹಾಗೂ ಆತ್ಮಾಭಿಮಾನಕ್ಕೆ ಹೆಸರಾದ ಅಗರವಾಲ ಮನೆತನಕ್ಕೆ ಸೇರಿದವರು. ಲಜಪತ್ ರಾಯ್ ಅವರ ತಾಯಿ ಗುಲಾಬ್ ದೇವಿ ಅನಕ್ಷರಸ್ಥೆಯಾದರೂ ಆದರ್ಶ ಹಿಂದು ಮಹಿಳೆ. ಆಕೆಯಿಂದಲೇ ಲಾಲಾಜೀ ರಾಷ್ಟ್ರೀಯತೆಯ ಭಾವನೆಗಳನ್ನು ಪಡೆದುದು.

ಲಾಲಾಜಿ ಶಾಲೆಯಲ್ಲಿ ಅತ್ಯಂತ ಬುದ್ಧಿವಂತರಾಗಿದ್ದರು. ವಿದ್ಯಾರ್ಥಿ ವೇತನಗಳನ್ನು ಪಡೆದ ಬಾಲಕ. ಮನೆತನದ ಬಡತನ ಮತ್ತು ಅನಾರೋಗ್ಯ ಅವರ ಉನ್ನತ ವ್ಯಾಸಂಗಗಳಿಗೆ ಅಡ್ಡಿಯಾಗಿದ್ದವು. ೧೮೮೦ರಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯದ ಎಂಟ್ರೇನ್ಸ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಪಡೆದರು. ಅದೇ ವರ್ಷ ಪಂಜಾಬ್ ವಿಶ್ವವಿದ್ಯಾನಿಲಯದ ಎಂಟ್ರೇನ್ಸ್ ಪರೀಕ್ಷೆಯಲ್ಲಿಯೂ ಸಹ ತೇರ್ಗಡೆ ಹೊಂದಿದರು. ಅನಂತರ ಲಾಹೋರಿನ ಸರಕಾರಿ ಕಾಲೇಜು ಸೇರಿದರು. ಜೊತೆಯಲ್ಲಿಯೇ ನ್ಯಾಯಶಾಸ್ತ್ರದ ಓದು ಸಾಗಿತು. ಮನೆಯ ಆರ್ಥಿಕ ಪರಿಸ್ಥಿತಿಯ ಕಾರಣ ಅವರ ಓದು ಎರಡು ವರ್ಷಗಳ ಕಾಲ ನಿಂತು ಹೋಯಿತು.

ಆದರ್ಶಗಳ ಉದಯ

ಲಾಹೋರಿನಲ್ಲಿ ಕಳೆದ ಆ ಎರಡು ವರ್ಷಗಳು ಲಾಲಾಜಿಯವರ ಜೀವಿತದಲ್ಲಿ ಒಂದು ಮುಖ್ಯವಾದ ಘಟ್ಟ.  ಭಾರತದ ಹಿಂದಿನ ವೈಭವದ ಚರಿತ್ರೆ, ಭಾರತದ ಮಹಾಚೇತನಗಳ ಜೀವನ ಚರಿತ್ರೆ ಇವನ್ನು ಓದುತ್ತ ತರುಣ ಲಾಲಾಜಿ ಕಣ್ಣೀರು ಸುರಿಸುತ್ತಿದ್ದರು.  ಸ್ವಾತಂತ್ಯ್ರ ಪ್ರೇಮ, ದೇಶ ಸೇವೆ ಮಾಡಬೇಕೆಂಬ ತೀವ್ರ ಹಂಬಲ ಈ ಕಾಲದಲ್ಲಿಯೇ ಅವರಲ್ಲಿ ಬೆಳೆದವು. ಅಂದಿನ ದಿನಗಳಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರಿಂದ ಸ್ಥಾಪಿತವಾದ ಆರ್ಯಸಮಾಜದ ಪ್ರಗತಿಶೀಲ ಆದರ್ಶ ಮತ್ತು ಸುಧಾರಿತ ಯೋಜನೆಗಳಿಂದ ಅಕರ್ಷಿತರಾಗಿದ್ದ ಕಾಲ ಅದು. ಲಾಲಾಜಿಯವರಿಗೆ ಆಗ ಕೇವಲ ಹದಿನಾರು ವರ್ಷ.  ೧೮೮೨ರಲ್ಲಿ ಆರ್ಯ ಸಮಾಜದ ಸದಸ್ಯರಾದ ಮೇಲೆ ಅವರ ಸಾರ್ವಜನಿಕ ಸೇವಾ ಕಾರ್ಯಗಳು ಪ್ರಾರಂಭವಾದವು.ದೇಶಾಭಿಮಾನವು ಜಾಗೃತವಾಯಿತು. ಭಾರತೀಯರ ದಾಸ್ಯ ಸಂಕೊಲೆಯನ್ನು ಕತ್ತರಿಸಿ ಹಾಕಬೇಕೆಂಬ ದೃಢಭಾವನೆಯು ಮನಸ್ಸಿನಲ್ಲಿ ನಿಂತಿತು.

ಭಾರತದ ಹಿರಿಮೆಯ ಚರಿತ್ರೆಯನ್ನು ಓದುತ್ತಾ ಯುವಕ ಲಾಲಾಜಿ ಕಣ್ಣೀರು ಸುರಿಸುತ್ತಿದ್ದರು.

ವಕೀಲರು

೧೮೮೩ರಲ್ಲಿ ನ್ಯಾಯ ಶಾಸ್ತ್ರದ ಪ್ರಥಮ ಪರೀಕ್ಷೆ ಮುಗಿಸಿದ ಮೇಲೆ ಲಾಲಾಜಿ ಮುಖ್ತಾರಿ (ಸಣ್ಣ ವಕೀಲ) ಕೆಲಸಕ್ಕೆ ಅನುಮತಿ ಪಡೆದರು. ಮನೆಯ ನಿರ್ವಹಣೆಯ ಭಾರವೂ ಸಹ ಅವರಿಗಿತ್ತು. ೧೮ ವರ್ಷದ ಲಾಲಾಜಿ ಜಗ್ರಾಂವ್ ಪಟ್ಟಣದ ರೆವಿನ್ಯೂ ಕೋರ್ಟನಲ್ಲಿ ಮುಖ್ತಾರಿ ವೃತ್ತಿ ನಡೆಸಿದನು. ೧೮೮೯ರಲ್ಲಿ ಪ್ಲೀಡರ‍್ ಪರೀಕ್ಷೆ ಮುಗಿಸಿ, ದಕ್ಷಿಣ ಪಂಜಾಬಿನ ಹಿಸಾರ ಎಂಬಲ್ಲಿಗೆ ಬಂದು ವಕೀಲ ವೃತ್ತಿ ಪ್ರಾರಂಭಿಸಿದರು.

ಈ ವೃತ್ತಿಯಿಂದ ಹಣ ಸಂಪಾದಿಸಿ ಸುಖವಾಗಿ ಕುಳಿತುಕೊಳ್ಳುವ ಇಚ್ಛೆ ಅವರದಾಗಿರಲಿಲ್ಲ. ಇಟಲಿಯ ವೀರ ಕ್ರಾಂತಿಕಾರಿ ಮ್ಯಾಜಿನಿಯ ಜೀವನ ಚರಿತ್ರೆಯನ್ನು ಓದಬೇಕೆಂದು ಅವರಿಗೆ ಆಸೆಯಾಯಿತು.  ಭಾರತದಲ್ಲಿ ಅವರಿಗೆ ಆ ಪುಸ್ತಕ ದೊರೆಯಲಿಲ್ಲ. ಇಂಗ್ಲೆಂಡಿನಲ್ಲಿದ್ದ ಸ್ನೇಹಿತರೊಬ್ಬರಿಗೆ ಬರೆದು ತರಿಸಿಕೊಂಡರು. ಆ ವೀರರ ಸಾಹಸ ಪ್ರವೃತ್ತಿ, ಉದಾರ ಸ್ವಭಾವ ದೇಶಾಭಿಮಾನ- ಇವು ಅವರನ್ನು ರೋಮಾಂಚನಗೊಳಿಸಿದವು.

ಸಾರ್ವಜನಿಕ ಸೇವೆಯ ಪ್ರಾರಂಭ

ಹಿಸಾರದಲ್ಲಿ ಅವರು ಆರು ವರ್ಷಗಳ ಜೀವನವು ಮುಂದಿನ ಸಾರ್ವಜನಿಕ ಸೇವೆಗೆ ಶಿಕ್ಷಣ ಕ್ಷೇತ್ರವಾಯಿತು. ಸ್ವಾಮಿ ದಯಾನಂದ ಮರಣದ ನಂತರ ಲಾಲಾಜಿ ತಮ್ಮ ಸಹೋದ್ಯೋಗಿಗಳೊಂದಿಗೆ ದಯಾನಂದ ಅಂಗ್ಲೋ ವೇದಿಕ್ ಕಾಲೇಜಿನ (ಡಿ.ಎ.ವಿ ಕಾಲೇಜು) ಅಭ್ಯುದಯಕ್ಕಾಗಿ ದುಡಿದರು. ಆರ್ಯಸಮಾಜದ ಮೂರು ಧ್ಯೇಯಗಳು ಸಮಾಜ ಸುಧಾರಣೆ, ಹಿಂದೂ ಧರ್ಮದ ಏಳಿಗೆ ಮತ್ತು ವಿದ್ಯಾಭಿವೃದ್ಧಿ. ಲಾಲಾಜಿಯವರ ಮಾಸಿಕ  ವರಮಾನ ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚಾಗಿತ್ತು. ತಂದೆ ನಿರಾತಂಕವಾಗಿರುವಂತೆ ಒಂದಿಷ್ಟು ಹಣವನ್ನು ತೆಗೆದಿಟ್ಟು, ಅದರ ಮೇಲಿನ ಬಡ್ಡಿ ತಂದೆಗೆ ಸಲ್ಲುವಂತೆ ಏರ್ಪಾಡು ಮಾಡಿದರು.  ಅವರ ಆದಾಯದಲ್ಲಿ ಹತ್ತರಲ್ಲೊಂದು ಪಾಲು ದೇಶಕ್ಕೆ ಮೀಸಲು. ಅದರ ಅಧಿಕಾಂಶವು ಆರ್ಯಸಮಾಜದ ಕಾರ್ಯಗಳಿಗೆ ವೆಚ್ಚವಾಗುತ್ತಿತ್ತು.

ಲೆಫ್ಟಿನೆಂಟ್ ಗವರ್ನರ‍್ ಹಿಸಾರಕ್ಕೆ ಭೇಟಿ ಇತ್ತಾಗ ಅವನಿಗರ್ಪಿಸುವ ಮಾನ ಪತ್ರವು ಉರ್ದು ಭಾಷೆಯಲ್ಲಿರಬೇಕೆಂದು ಲಾಲಾಜಿ ವಾದಿಸಿದರು. ಇಂಗ್ಲೀಷ್ ಅಧಿಕಾರಿಯನ್ನು ಸಂತೃಪ್ತಿಗೊಳಿಸಲು ಭಾಷಣ ಬರಹವು ಇಂಗ್ಲೀಷ ಭಾಷೆಯಲ್ಲಿ ಸಿದ್ಧವಾಗಿತ್ತು. ಲಾಲಾಜಿಯವರ ವಾದ ಎಲ್ಲರನ್ನು ಬೆದರಿಸಿತು. ಆದರೆ ಅವರು ಯಾವ ಅಂಜಿಕೆಯೂ ಇಲ್ಲದೆ ಮಾನಪತ್ರವನ್ನು ಉರ್ದುವಿನಲ್ಲಿಯೇ ಸಮರ್ಪಿಸಿ ಬ್ರಿಟಿಷರ ವಕ್ರದೃಷ್ಟಿಗೆ ಪಾತ್ರರಾದರು.

ಆರ್ಯ ಸಮಾಜದ ಕಾರ್ಯಗಳಿಗೆ ಅವರ ಹೆಚ್ಚು ಕಾಲವು ವಿನಿಯೋಗವಾಗುತ್ತಿತ್ತು. ಅವಿಶ್ರಾಂತವಾಗಿ ಕೆಲಸ ಮಾಡಿ ಆರ್ಯ ಸಮಾಜದ ಶಾಖೆಗಳನ್ನು ಸ್ಥಾಪಿಸಿದರು. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಅಷ್ಟಾದರೂ ಅವರು ಜಾತಿಪರ ವ್ಯಕ್ತಿಯಾಗಿರಲಿಲ್ಲ. ಮುಸ್ಲಿಮರು ಅಧಿಕವಾಗಿದ್ದ ಕ್ಷೇತ್ರದಿಂದ ಪುರಸಭೆಯ ಸಮಿತಿಗೆ ಅವಿರೋಧವಾಗಿ  ಚುನಾಯಿತರಾದರು.

ರಾಜಕೀಯ  ಕ್ಷೇತ್ರಕ್ಕೆ

೧೮೮೮ರಲ್ಲಿ ವಕೀಲ ವೃತ್ತಿಯೊಂದಿಗೆ ರಾಜಕೀಯ ಕ್ಷೇತ್ರಕ್ಕೂ ಕಾಲಿರಿಸಿದರು. ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥೆಯು ದೇಶದ ಸ್ವಾತಂತ್ಯ್ರಕ್ಕಾಗಿ ಹೋರಾಟ ನಡೆಸಿತ್ತು.  ಸ್ವಾತಂತ್ಯ್ರದ ತೀವ್ರ ಅಗತ್ಯವನ್ನು ಕಂಡ ಲಾಲಾಜಿ ಸಂಗ್ರಾಮದ ಸಿಪಾಯಿಯಾಗಿ ಕಾಂಗ್ರೆಸ್ ಸೇರಿದರು. ಅದುವರೆಗೆ ಕಾಂಗ್ರೆಸ್ ಸಂಸ್ಥೆಯಲ್ಲಿದ್ದ ಸರ‍್ ಸೈಯ್ಯದ ಅಹಮದ್ ಆ ಸಂಸ್ಥೆಯನ್ನು ತ್ಯಜಿಸಿದ್ದರು. ಮುಸ್ಲಿಮರು ಕಾಂಗ್ರೆಸನ್ನು ಸೇರಬಾರದೆಂದೂ ಅವರು ಸರಕಾರಕ್ಕೆ ಬೆಂಬಲ ಕೊಡಬೇಕೆಂದೂ ವಾದಿಸಲು ಪ್ರಾರಂಭಿಸಿದ್ದರು. ಲಾಲಾಜಿ ಅವರಿಗೆ ಉರ್ದು ವಾರ ಪತ್ರಕೆಯಾದ “ಕೋಹ್-ಇ-ನೂರ‍್” ಮೂಲಕ ಕಟುವಾದ ಬಹಿರಂಗ ಪತ್ರವನ್ನು ಬರೆದರು. ಅವು ರಾಜಕೀಯ ವಲಯಗಳಲ್ಲಿ ಅತ್ಯಂತ ಮೆಚ್ಚುಗೆ ಪಡೆದ ಪತ್ರಗಳು. ಅದೇ ವರ್ಷ ಅಲಹಾಬಾದನಲ್ಲಿ ಸೇರಿದ ಕಾಂಗ್ರೆಸ್ ಅಧಿವೇಶನದಲ್ಲಿ ಪಂಜಾಬ್ ವಿಭಾಗದ ಎಂಬತ್ತು ಪ್ರತಿನಿಧಿಗಳೊಂದಿಗೆ ಆಗಮಿಸಿದ ಲಾಲಾಜಿಯವರಿಗೆ ಪ್ರಚಂಡ ಸ್ವಾಗತ ದೊರೆಯಿತು. ಅಲ್ಲಿನ ಅವರ ವೀರಾವೇಶದ ಉರ್ದು ಭಾಷಣದಿಂದ ಕಾಂಗ್ರೆಸ್ ಪ್ರಮುಖರ ಮೇಲೆ ಮಹತ್ತರವಾದ ಪರಿಣಾಮವುಂಟಾಯಿತು. ಲಾಲಾಜಿ ೨೩  ವರ್ಷದ ತರುಣರು. ಕಾಂಗ್ರೆಸ್ ನಲ್ಲಿ ಅವರ ಪ್ರತಿಭೆ ಹಾಗೆಯೇ ವೇಗವಾಗಿ ಬೆಳೆಯುತ್ತಾ ಹೋಯಿತು.

ಲಾಹೋರಿನಲ್ಲಿ

ಸಾಮಾಜಿಕ ಕಾರ್ಯ ಚಟುವಟಿಕೆಗಳು ಹೆಚ್ಚಿದ ಮೇಲೆ ಅವರಿಗೆ ಹಿಸಾರದಂತಹ ಚಿಕ್ಕ ಪಟ್ಟಣವು ಕಾರ್ಯವ್ಯಾಪ್ತಿಗೆ ಸಾಲದಾಯಿತು. ಪಂಜಾಬಿನ ಮುಖ್ಯ ನ್ಯಾಯಾಲಯದಲ್ಲಿ ವಕೀಲ ವೃತಿ ನಡೆಸುವ ಅರ್ಹತೆ ಪಡೆದ ಮೇಲೆ ೧೮೯೨ರಲ್ಲಿ ಲಾಹೋರಿಗೆ ಬಂದು ನೆಲೆಸಿದರು. ೧೮೯೩ರಲ್ಲಿ ಕಾಂಗ್ರೆಸ್ ಅಧಿವೇಶನವು ಲಾಹೋರನಲ್ಲಿ ಸೇರಿತು.  ಅಂದಿನ ಬ್ರಿಟಿಷ್ ಪಾರ್ಲಿಮೆಂಟನಲ್ಲಿ ಪ್ರಥಮ ಭಾರತೀಯ ಸದಸ್ಯರಾಗಿದ್ದ ದಾದಾಭಾಯಿ ನವರೋಜಿಯವರು ಅಧಿವೇಶನದ ಅಧ್ಯಕ್ಷರಾಗಿದ್ದರು.

ಲಾಲಾಜಿ ಉತ್ಸಾಹಿ ಸ್ವಯಂ ಸೇವಕರಾಗಿ ಕೆಲಸ ಮಾಡಿದರು. ಲಾಲಾಜಿಯವರದು ದುಂಬಿಯ ದುಡಿತ. ವಿಶ್ರಾಂತಿಗೆ ಎಡೆಯೇ ಇರಲಿಲ್ಲ. ಕಾಂಗ್ರೆಸನ ಕಾರ್ಯಗಳಲ್ಲಿ ಮುಳುಗಿದ ಕಾಲದಲ್ಲೇ ಆರ್ಯ ಸಮಾಜದಲ್ಲಿ ಒಡಕು ಕಾಣಿಸಿಕೊಂಡಿತು. ಸಂಸ್ಥೆಗೆ ಹೊಸ ರೂಪ ಕೊಟ್ಟು ಡಿ.ಎ.ವಿ. ಕಾಲೇಜಿನ ಹಿತಕ್ಕಾಗಿ ನಿಂತರು ಲಾಲಾಜಿ.

ಸಿಡಿಲ ಲೇಖನಿ

ಲಾಲಾಜಿ ಅಗ್ರಮಾನ್ಯ ರಾಜಕಾರಣಿ ಮಾತ್ರವಲ್ಲ, ಸಮರ್ಥ ಲೇಖಕರೂ ಹೌದು. ಉರ್ದು ಭಾಷೆಯಲ್ಲಿ ಅವರು ರಚಿಸಿದ ಜೀವನ ಚರಿತ್ರೆಗಳು ಉಲ್ಲೇಖಾರ್ಹ. ಇಟಲಿ ದೇಶದ ಐಕ್ಯತೆಯನ್ನು ಸಾಧಿಸಿದ ಮ್ಯಾಜಿನಿ ಮತ್ತು ಗ್ಯಾರಿಬಾಲ್ಡಿ ಎಂಬ ದೇಶಪ್ರೇಮಿಗಳ ಜೀವನ ಚರಿತ್ರೆಗಳನ್ನು ರಚಿಸಿದರು. ಭಾರತೀಯ ಮಹಾಪುರುಷರಾದ ಶಿವಾಜಿ, ಶ್ರೀ ಕೃಷ್ಣ ಮತ್ತು ದಯಾನಂದ ಸರಸ್ವತಿಯವರನ್ನು ಕುರಿತು ಮಹತ್ತರ ಪುಸ್ತಕಗಳನ್ನು ಬರೆದರು. ಮ್ಯಾಜಿನಿ ಹಾಗೂ ಶಿವಾಜಿಯ ಕೃತಿಗಳಲ್ಲಿ ಜನರನ್ನು ಸ್ವಾತಂತ್ಯ್ರದ ಹೋರಾಟಕ್ಕೆ ಪ್ರಚೋದಿಸುವ ವಿವರಣೆಗಳು ಇದ್ದು, ಸರಕಾರವು ಅವರನ್ನು ಬಂಧಿಸುವ ಯೋಚನೆಯನ್ನು ಮಾಡಿತು.

ಕಷ್ಟದಲ್ಲಿರುವವರ ಸೇವಕ

ದೀನ, ದಲಿತ, ಕಷ್ಟಪೀಡಿತರ ವಿಷಯದಲ್ಲಿ ಲಾಲಾಜಿಯವರು ತೋರಿದ ಸೇವಾ ಮನೋಭಾವವು, ವಹಿಸಿದ ಶ್ರಮವು ಅವರ ಸಾರ್ವಜನಿಕ ಕಾರ್ಯವೈವಿಧ್ಯತೆಗೆ ಭೂಷಣ ಪ್ರಾಯ. ೧೮೯೬ರಲ್ಲಿ ಮಧ್ಯ ಪ್ರಾಂತ್ಯದಲ್ಲಿ ಭೀಕರ ಕ್ಷಾಮ ದಾಳಿ ಇಟ್ಟಿತ್ತು. ಅನಾವೃಷ್ಟಿಯ ಕಾರಣದಿಂದಾಗಿ ಜನ ತತ್ತರಿಸಿದರು. ಆಗ ಲಾಲಾಜಿಯವರು ನಿರ್ವಹಿಸಿದ ಪಾತ್ರವನ್ನೂ  ಯಾರೂ ಮರೆಯುವಂತಿಲ್ಲ. ಅಧಿಕ ಸಂಖ್ಯೆಯಲ್ಲಿ ಅನಾಥ ಮಕ್ಕಳು ಮತ್ತು  ಜೀವನಾಧಾರವಿಲ್ಲದವರು ಕ್ರೈಸ್ತ ಮತಪ್ರಚಾರಕರ ದಯೆಗೆ ಒಳಗಾಗುತ್ತಿದ್ದರು.  ಮತ್ತು ಮತಾಂತರ ಹೊಂದುತ್ತಿದ್ದರು.  ಲಾಲಾಜಿ ಅನಾಥ್ ಪರಿಹಾರಕ್ಕಾಗಿ ಚಳುವಳಿ ಪ್ರಾರಂಭಿಸಿದರು. ಜಬ್ಬಲಪುರ, ಬಿಲಾಸಪುರ, ಮತ್ತಿತರ ಜಿಲ್ಲೆಗಳ ೨೫೦ ಕಂಗಾಲ ಮಕ್ಕಳನ್ನು ರಕ್ಷಿಸಿ ಪಂಜಾಬಿಗೆ ಕರೆತಂದು ಆರ್ಯ ಸಮಾಜದ ಅನಾಥಾಲಯಗಳಲ್ಲಿ ಸೇರಿಸಿದರು. ಸಾರ್ವಜನಿಕ ಸೇವೆ, ವಕೀಲ ವೃತ್ತಿ, ಎರಡಕ್ಕೂ ತಕ್ಕಷ್ಟು ಸಮಯ ದೊರೆಯುವುದಿಲ್ಲ ಎಂದು, ೧೮೯೯ರಿಂದ ತಮ್ಮ ವಕೀಲ ವೃತ್ತಿಯ ಕೆಲಸವನವನೇ ಕಡಿಮೆ ಮಾಡಿಕೊಂಡರು. ೧೮೯೯ರಲ್ಲಿ ಇನ್ನೂ ಘೋರವಾದ ಕ್ಷಾಮವು ಪಂಜಾಬ್, ರಾಜಪುತ್ರ ಸ್ಥನ, ಕಾಥೆಯವಾಢ ಮತ್ತು ಮಧ್ಯಪ್ರಾಂತ್ಯಗಳಲ್ಲಿ ಕಾಣಿಸಿತು.  ಮತ್ತೇಲಾಲಾಜಿ  ದಿಕ್ಕೆಟ್ಟ ಮಕ್ಕಳ ರಕ್ಷಣೆಗಾಗಿ ಆರ್ಯಸಮಾಜದ ಕೆಲಸಗಳ ಮುಂದಾಳತ್ವ ವಹಿಸಿದರು. ಅದು ಅವರ ಸತ್ವ ಪರೀಕ್ಷೆಯ ಕಾಲ. ಅಸಾಧಾರಣ ಚಳುವಳಿ ನಡೆಸಿದರು. ೨೦೦೦ ಅನಾಥರ ರಕ್ಷಣೆಯಾದುದಲ್ಲದೇ ಅವರಿಗೆ ಅಹಾರ, ಬಟ್ಟೆ, ವಿದ್ಯೆ, ಉದ್ಯೋಗ ಎಲ್ಲವೂ ದೊರೆತವು. ಅವರ ಚಳುವಳಿಯಲ್ಲಿ ಕ್ರೈಸ್ತ ಮತ ಪ್ರಚಾರಕರೊಂದಿಗೆ ಘರ್ಷಣೆಗಳೂ ನಡೆದವು. ೧೯೦೧ರಲ್ಲಿ ಸರಕಾರವು ಕ್ಷಾಮ ನಿವಾರಣಾ ನಿಯೋಗವೊಂದನ್ನು ನೇಮಿಸಿತ್ತು. ಮತ್ತು ಲಾಲಾಜಿಯವರ ಅಭಿಪ್ರಾಯ ಪಡೆಯಿತು. ಅವರು ನೀಡಿದ ವಿವರ ಹಾಗೂ ಅಭಿಪ್ರಾಯಗಳಿಂದಾಗಿ ಸರಕಾಋವು ಅನಾಥರ ವಿಷಯದಲ್ಲಿ ತನ್ನ ಧೋರಣೆ ಬದಲಾಯಿಸಿತು.  ಹಿಂದುಗಳು ಮತ್ತಿತ್ತರ ಮತಗಳವರು ತಮ್ಮ ಮತಗಳ ಅನಾಥ ಮಕ್ಕಳಿಗಾಗಿ ಪ್ರತೆಯೇಕ ಅನಾಥಾಲಯಗಳನ್ನು ಏರ್ಪಡಿಸುವಂತಾಯಿತು. ೯೦೫ರಲ್ಲಿ ಜನತೆಯ ಕಷ್ಟ ನಿವಾರಣಾ ಕಾರ್ಯದಲ್ಲಿ ಲಾಲಾಜಿ ಮತ್ತಷ್ಟು ಗಾಢವಾಗಿ ಮುಳುಗಬೇಕಾದ ಪ್ರಸಂಗವೊಂದು ಬಂತು. ಕಾಂಗರಾ ಜಿಲ್ಲೆಯಲ್ಲಿ ಭೀಖರ ಭೂಕಂಪ ಸಂಭವಿಸಿ ಜನರ ಪ್ರಾಣ ಮತ್ತು ಆಸ್ತಿಗಳಿಗೆ ಅಪಾರವಾದ ಹಾನಿಯುಂಟಾಯಿತು. ಲಾಹೋರಿನ ಆರ್ಯಸಮಾಜವು ಪರಿಹಾರ ಸಮತಿಇಯನ್ನು ರಚಿಸಿತು. ಲಾಲಾಜಿ ಅದರ ಕಾರ್ಯದರ್ಶಿಯಾಗಿ ಪಂಜಾಬ್ ಪ್ರಾಂತವನ್ನು ಪೂರ್ತಿಯಾಗಿ ಪ್ರವಾಸ ಮಾಡಿ ಹಣ ಸಂಗ್ರಹಿಸಿದರು. ಮರೆಯಲಾಗದಂತಹ ಉಪಯುಕ್ತ ಸೇವೆ ಅವರಿಂದ ಸಂದಿತು.

ಇಂಗ್ಲೇಂಡಿಗೆ ಭೇಟಿ

ಅದೇ ವರ್ಷ ಭಾರತ ರಾಷ್ಟ್ರೀಯ ಕಾಂಗ್ರೆಸ್ ಬ್ರಿಟನ್ನಿನ ಮಹಾಚುನವಣೆಗಳಿಗೆ ಮುಂಚೆ ಅಲ್ಲಿನ ಜನತೆಗೆ ಭಾರತದ ಸ್ಥಿತಿಗತಿಗಳನ್ನು ಮನದಟ್ಟು ಮಾಡಿಕೊಡಲು ಇಬ್ಬರು ಪ್ರತಿನಿಧಿಗಳನ್ನು ಕಳೂಹಿಸಲು ನಿರ್ಣಯಿಸಿತು. ಲಜಪತ್ರಾಯ್  ಮತ್ತು ಗೋಪಾಲ ಕೃಷ್ಣ ಗೋಖಲೆ ಅವರೇ ಆ ಇಬ್ಬರು ಪ್ರತಿನಿಧಿಗಳು. ಅವರು ಪ್ರವಾಸವನ್ನು ಮುಗಿಸಿ ಹಿಂದಿರುಗಿದಾಗ ಲಾಹೋರಿನ ರೈಲ್ವೆ ನಿಲ್ದಾಣದಲ್ಲಿ ಸಹಸ್ರಾರು ಜನ ಸೇರಿ ಸ್ವಾಗತಿಸಿದರು. ವಿದ್ಯಾರ್ಥಿಗಳು ಅವರ ಗಾಡಿ ಕುದುರೆಗಳನ್ನು ಬಿಚ್ಚಿ ತಾವೇ ಗಾಡಿಯನ್ನು ಎಳೆದರು.

ಇಂಗ್ಲೇಂಡ್ ಪ್ರವಾಸದಲ್ಲಿ ಲಾಲಾಜಿ ಅಲ್ಲಿನ ಜನರಿಗೆ ಬ್ರೀಟಿಷ್ ಆಡಳಿತದಲ್ಲಿ ಭಾರತೀಯರ ಸ್ಥಿತಿಗತಿ ಏನೆಂಬುವುದನ್ನು ಅನೇಕ ಭಾಷಣಗಳಲ್ಲಿ ತಿಳಿಸಿದರು. ಅದಕ್ಕೂ ಹೆಚ್ಚಾಗಿ ಅವರು ಗ್ರಹಿಸಿ ತಂದ ಅಭಿಪ್ರಾಯಗಳು ಮುಖ್ಯ. ಭಾರತದ ಭವಿಷ್ಯವು ಭಾರತೀಯರಿಂದಲೇ ರೂಪಿತವಾಗಬೇಕೆಂದೂ ಅದಕ್ಕಾಗಿ ಸರಕಾರವು ಜನತೆಯ ಕೈಗೆ ಬರಬೇಕೆಂದೂ ಸ್ಪಷ್ಟ ಆರಿವು ಬಂದಿತ್ತು. ಸ್ವರಾಜ್ಯಕ್ಕೆ ಹೋರಾಟ, ಸ್ವದೇಶಿ ವಸ್ತುಗಳ ಬಳಕೆ, ವಿದೇಶಿ ವಸ್ತುಗಳ ಬಹಿಷ್ಕಾರ ಇವು ಭಾರತದ ಸಂಕಲ್ಪವಾಗಬೇಕೆಂಬುವುದು ಅವರ ನಿರ್ಧಾರ. ೧೯೦೭ರ ಸೂರತ್ ನಗರದ ಕಾಂಗ್ರೆಸ್ ಅಧಿವೇಶನದಲ್ಲಿ ಈ ಎಲ್ಲ ಅಭಿಪ್ರಾಯಗಳನ್ನು ಅವರು ನಿರೂಪಿಸಿದರು.

ಸರಕಾರದ ರೋಷ

೧೯೦೭ನೇ ವರ್ಷವು ಲಾಲಾಜಿಯವರ ಸಾಹಸ ಮಯ ಜೀವಿತದಲ್ಲಿ ಹೆಗ್ಗುರುತು ಮೂಡಿಸಿತು. ಜನರಲ್ಲಿ ಹೊಸ ಭಾವಣೆಗಳು, ಉತ್ಸಾಹ, ತುಂಬಿ ಹೊಸ ಗಾಳಿ ಬೀಸುತ್ತಿದ್ದ ಕ್ರಾಂತಿಕಾಲ ಆದು. ಲಾಹೋರ‍್ ಮತ್ತು ರಾವಲ್ಪಿಂಡಿಯಲ್ಲಿ ಗಲಭೆಗಳು ಉಂಟಾದವು.   ಮೀರತನಲ್ಲಿ ಸಿಪಾಯಿ ದಂಗೆಯ ಐವತ್ತನೇ ವರ್ಷದ ಸಮಾರಂಭದ ಸಿದ್ಧತೆಯು ನಡೆದಿತ್ತು. ಪಂಜಾಬ್ ನಲ್ಲಿ ಸರಕಾರವು ನೀರಿನ ದರವನ್ನು ಏರಿಸುವ ಪ್ರಯತ್ನವನ್ನು ಮಾಡಿದುದರಿಂದ ರೈತವರ್ಗದವರಲ್ಲಿ ಅಸಮಾಧಾನ ಮೂಡಿತ್ತು. ಲಾಲಾಜಿ ಮತ್ತು ಕೆಲವು ವಕೀಲರು ರೈತರ ಬೆಂಬಲಕ್ಕೆ ನಿಂತುದು ಸರಕಾರದ ಕಣ್ಣಿನಲ್ಲಿ ಭಯಂಕರ ಅಪರಾಧವಾಯಿತು.

ಪಂಜಾಬಿನ ಲೆಫ್ಟಿನೆಂಟ್ ಗವರ್ನರ‍್ ಸರ‍್ ಡೆನ್ಸಿಲ್ ಇಬೆಟ್ ಸನ್ ಎಂಬುವನು ಆಗ ಬ್ರೀಟಿಷ ಮಂತ್ರಿ ಮಂಡಲದಲ್ಲಿ ಭಾರತದ ವಿಷಯಗಳಿಗೆ ಮಂತ್ರಿಯಾಗಿದ್ದ. ಲಾಡ್ ಮಾರ್ಲೆಗೆ ಹೀಗೆ ಪತ್ರ ಬರೆದ: “ಲಾಲಾಜಿಯವರಂತಹ ಕೆಲವು ಮುಖಂಡರು ಬ್ರಿಟಿಷರನ್ನು ಭಾರತದಿಂದ ಹೇಗಾದರೂ ಓಡಿಸುವಂತೆ ಶಪತ ಮಾಡಿದ ಹಾಗೆ ತೋರುತ್ತದೆ.  ಇಂಗ್ಲೀಷ ಜನಾಂಗದ ಬಗೆಗೆ ಜನತೆಯಲ್ಲಿ ದ್ವೇಷ ಹುಟ್ಟಿಸಿ ಸರಕಾರದ ಆಡಳಿತ ಯಂತ್ರವನ್ನು ಛಿದ್ರಗೊಳಿಸುವ ಯತ್ನ ನಡೆದಿದೆ.

ಅಧಿಕಾರಿಗಳ ವಲಯದಲ್ಲಿ ಶಂಕೆ ಹೆಚ್ಚಿದ ಅದೇ ಕಾಲದಲ್ಲಿ ಇಂಗ್ಲೀಷನವನೊಬ್ಬನ ಕೊಲೆ ನಡೆಯಿತು. ಪತ್ರಿಕೆಯಲ್ಲಿ ನಿಜಾಂಶ ಪ್ರಕಟವಾಯಿತು. ಪಂಜಾಬಿ ಪತ್ರಿಕೆಯವನ ಮೇಲೆ ಕೊಲೆಯ ಅಪರಾಧ ಹೊರಿಸುವ ಪ್ರಯತ್ನ ಸಾಗಿತು. ಪಂಜಾಬಿನ ಜನತೆ ಸರಕಾರದ ಕುತಂತ್ರವನ್ನು ಪ್ರತಿಭಟಿಸಿತು. ಇದರೊಂದಿಗೆ ವಸಾಹತು ಸ್ಥಾಪನೆಯ ಮಸೂದೆ, ಜಮೀನು ಮತ್ತು ಕಾಲುವೆ ನೀರು ಬಳಕೆಯ ಕಂದಾಯಗಳ ಏರಿಕೆ  ಇದೆಲ್ಲದರ ಗಲಭೆಗಳೂ ಸೇರಿದವು. ಸರ‍್ ಡೆನ್ಸಿಲ್ಗೆ ದಿಕ್ಕು ಗೆಡುವಂತಾಯಿತು.  ಲಾಲಾಜಿಯವರನ್ನೂ ಅವರೊಂದಿಗೆ ದೇಶಭಕ್ತಿ ಭಗತ್ ಸಿಂಗರ ಬಂಧುವಾದ ಅಜಿತಸಿಂಗರನ್ನೂ ಕಾರಣವಿಲ್ಲದೇ ಬಮಾ ದೇಶದ ಮಾಂಡಲೆಗೆ ಗಡೀಪಾರು ಮಾಡಿದ.

ಸಾಕಷ್ಟು ಕಾರಣವಿಲ್ಲದೆ ಸರಕಾರ ಕೈಗೊಂಡ ಉಗ್ರಕ್ರಮವನ್ನು ದೇಶಾದ್ಯಂತ ಜನರು ವಿರೋಧಿಸಿದರು. ತಿಲಕರ “ಕೇರಿ” ಪತ್ರಿಕೆಯಲ್ಲಿ ಹೀಗೆ ಬರೆದರು; “ಬ್ರಿಟಿಷ ಆಳರಸರ ರಷ್ಯಾ ದೇಶದ ಅರಸರಂತೆ ಕ್ರಮ ಕೈಗೊಂಡರೆ, ಭಾರತದ ಪ್ರಜೆಗಳು ರಷ್ಯಾ ದೇಶದ ಪ್ರಜೆಗಳಂತೆಯೇ ಪ್ರತಿಕ್ರಿಯೆ ಸೂಚಿಸಬೇಕಾಗುತ್ತದೆ, ಜನರ ಮತ್ತು ವಕೀಳ ವರ್ಗದ ಪ್ರಚಂಡ ಪ್ರತಿಭಟನೆ, ಪ್ರದರ್ಶನಗಳಿಗೆ ಸರಕಾರವು ಮಣೀಯದೇ ಬೇರೆ ಮಾರ್ಗವಿರಲಿಲ್ಲ. ಗಡೀಪಾರು ಆಜ್ಞೆಯು ಅನುಚಿತ ಮತ್ತು ಅನ್ಯಾಯವೆಂಬುವುದನ್ನು ಅರ್ಥಮಾಡಿಕೊಂಡ ಸರಕಾರ ಲಾಲಾಜಿಯವರನ್ನು ಬಿಡುಗಡೆ ಮಾಡಿ ನವೆಂಬರ‍್ ೧೮ ರಂದು ಲಾಹೋರಿಗೆ ತಂದುಬಿಟ್ಟಿತು.

ಲಾಲಾಜಿ ಕಾಂಗ್ರೆಸ್ನ ತೀವ್ರ ದಳದ ಮೂವರು ಮಹಾನ್ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು. ಆ ಮಹನೀಯರು ಪಂಜಾಬಿನ ಲಾಲಾ ಲಜಪತ್ ರಾಯ್, ಮಹಾರಾಷ್ಟ್ರದ ಬಾಲ ಗಂಗಾಧರ ತಿಲಕ್ ಮತ್ತು ಬಂಗಾಳದ ಬಿಪಿನ ಚಂದ್ರಪಾಲ, ದೇಶವು ಇವರನ್ನು ಆತ್ಮೀಯವಾಗಿ ಲಾಲ್, ಬಾಲ್, ಪಾಲ್ ಎಂದು  ಕರೆಯುತ್ತಿತ್ತು. ಕಾಂಗ್ರೆಸ್ ಸಂಸ್ಥೆಯ ತೀವ್ರದಳ ಮತ್ತು ನಮ್ರದಳಗಳ ನಡುವೆ ವಿರಸ ಉಂಟಾಗಿತ್ತು. ಎರಡು ದಳಗಳ ಮಧ್ಯೆ ಸಾಮರಸ್ಯ ಏರ್ಪಡಿಸಲು ಸಾಧ್ಯವಾಗದಿದ್ದಾಗ ಲಾಲಾಜಿ ಕೆಲವು ವರ್ಷಗಳ ಕಾಲ ಕಾಂಗ್ರೆಸಿನಿಂದ ದೂರವಾದರು.

೧೯೧೧ರಲ್ಲಿಎರಡನೆಯ ಬಾರಿಗೆ ಲಾಹೋರ‍್ ಪುರಸಭಾ ಆಡಳಿತದಲ್ಲಿ ಪ್ರವೇಶಿಸಿದರು. ಪುರಸಭಾ ಸಮಿತಿಯ ಚುನಾವಣೆಗೆ ನಿಂತಾಗ ಅವರ ಜನಪ್ರೀಯತೆ ಅಪಾರವಾಗಿತ್ತು. ಕಿವುಡರು, ಮೂಕರು, ಅಂಗವಿಕಲರು ಸಹ ಅವರಿಗೆ ಮತ ನೀಡಲು ಶ್ರದ್ದೇಯಿಂದ ಬಂದರು. ಮೂಕ ಮತದಾರನೊಬ್ಬನು ತಾನು ಯಾರಿಗೆ ಮತ  ನೀಡುವೆನೆಂದು ತೋರಲು ಲಾಲಾಜಿಯವರ ಭಾವಚಿತ್ರ ಹಿಡಿದು ಬಂದ.

ವಿದೇಶಗಳಲ್ಲಿ

೧೯೧೨ರಲ್ಲಿ ಕಾಂಗ್ರೆಸ್ಸ್ ಗೆ ಲಾಲಾಜಿಯವರ ಮರುಪ್ರವೇಶವಾಯಿತು.

ಲಾಲಾಜಿಯವರ ತಲೆ , ಮೈಮೇಲೆ ಕೈ ದೊಣ್ಣೆಯ ಪೆಟ್ಟುಗಳು ಬಿದ್ದವು.

೧೯೧೪ರ ಏಪ್ರಿಲ್ ನಲ್ಲಿ ಕಾಂಗ್ರೆಸ್ ನಿಯೋಗದೊಡನೆ ಪಂಜಾಬಿನ ಪ್ರತಿನಿಧಿಯಾಗಿ ಇಂಗ್ಲೇಂಡಿಗೆ ತೆರಳಿದರು. ಆರು ತಿಂಗಳ ಕಾಲ ಅಲ್ಲಿರುವುದಾಗಿ ಮೊದಲು ಭಾವಿಸಿದ್ದರೂ ಪ್ರಪಂಚದ ಮೊದಲನೆಯ ಮಹಾಯುದ್ಧ ಪ್ರಾರಂಭವಾದ ಕಾರಣ ಅವರ ಯೋಜನೆ ಬದಲಾಯಿತು. ಆ ಸಂದರ್ಭದಲ್ಲಿ ಭಾರತಕ್ಕೆ ಹಿಂತಿರುಗುವುದು ಸರಿ ತೋರಲಿಲ್ಲ. ಬ್ರೀಟಿಷ್ ಆಡಳಿತವು ಅವರನ್ನು ದೀರ್ಘಕಾಲದವೆಗೆ ಬಂಧಿಸಿಡುವ ಸಂಭವವಿತ್ತು. ಲಾಲಾಜಿ ಇಂಗ್ಲೇಂಡಿನಿಂದ ಅಮೇರಿಕ್ಕೆ ಹೊರಟರು. ಅವರು ಅಮೇರಿಕಕ್ಕೆ ಕೊಟ್ಟ ಭೇಟಿಯೂ ತಾವಾಗಿಯೇ ತಂದುಕೊಂಡ “ಗಡಿಪಾರು”. ಅಮೇರಿಕಾದಲ್ಲಿ ಭಾರತದ ವಿಷಯ ಮತ್ತು ಸ್ಥಿತಿಗಳ ಬಗೆಗೆ ಅನೇಕ ಭಾಷಣಗಳನ್ನು ಮಾಡಿದರು.  ಪುಸ್ತಕಗಳನ್ನು ಬರೆದರು. ಭಾರತೀಯ ಚಳುವಳಿಯನ್ನು ಬೆಳೆಸುವ ಅಂಗವಾಗಿ ನ್ಯೂಯಾರ್ಕ ನಗರದಲ್ಲಿ “ಇಂಡಿಯನ್ ಹೋಮ್ ರೂಲ್ ಲೀಗ್”  ಸ್ಥಾಪಿಸಿದರು. ದೀರ್ಘಕಾಲ ಅಮೇರಿಕದಲ್ಲಿದ್ದ ಭಾರತದ ದೀರನಿಗೆ ಕೆಲಸಗಳೇನೂ ಬಡತನ? “ಇಂಡಿಯಾ ಇನಫರ್ಮೇಷನ್ ಬ್ಯೂರೋ” ಸಂಸ್ಥೆಯನ್ನು  ನಿರ್ಮಿಸಿದರು. “ಯಂಗ್ ಇಂಡಿಯಾ” ಎಂಬ ಪತ್ರಿಕೆಯನ್ನು ಪ್ರಾರಂಭಿಸಿ ಚಳುವಳಿಯನ್ನು  ಹೆಚ್ಚಿಸಿದರು. ಅವರೇ ಪತ್ರಿಕೆಯ ಸಂಪಾದಕರು. ಭಾರತದ ಸಂಸ್ಕೃತಿಯನ್ನು ಸಾರಿದ, ಭಾರತದ ಸ್ವಾತಂತ್ಯ್ರದ ಅಗತ್ಯವನ್ನು ವಿವರಿಸಿ ತಿಳಿಸಿದ ಪತ್ರಿಕೆಯು ಶೀಘ್ರದಲ್ಲಿಯೇ ಎಲ್ಲರ ಮನಸ್ಸನ್ನು ಆಕರ್ಷಿಸಿತು.  ಪ್ರಸಾರ ಸಂಖ್ಯೆ ಏರಿತು. ಭಾರತೀಯರಷ್ಟೇ ಅಲ್ಲದೆ ಅಮೇರಿಕಾದದವರೂ ಬೇರೆ ದೇಶಗಳವರೂ ಸಹಪತ್ರಿಕೆ ಓದಿ ಲಾಲಾಜಿಯವರ ಧ್ಯೇಯ ಧೋರಣೆಗಳನ್ನು ಅರ್ಥಮಾಡಿಕೊಂಡು ಭಾರತದ ಬಗೆಗೆ ಸಹಾನೂಭೂತಿ ವ್ಯಕ್ತಪಡಿಸಲು ಸಾಧ್ಯವಾಯಿತು. ಚಳುವಳೀಗೆ ಬೆಂಬಲ ದೊರಕಿತು.

ಅಮೇರಿಕಾದಲ್ಲಿದ್ದಾಗ, “ಆರ್ಯಸಮಾಜ”  ಮತ್ತು “ಇಂಗ್ಲೆಂಡ್ ಡೆಟ್ ಇನ್ ಇಂಡಿಯಾ” ಎಂಬ ಪುಸ್ತಕಗಳನ್ನು ಬರೆದರು. ಅಮೇರಿಕದಲ್ಲಿ ಅವರ ಜೀವನವು ಹೂವಿನ ಹಾಸಿಗೆಯಾಗಿರಲಿಲ್ಲ. ತಮ್ಮ ಅಡುಗೆಯನ್ನು ತಾವೇ ಮಾಡಿಕೊಳ್ಳುತ್ತಿದ್ದರು.  ಬರೆಯುತ್ತಿದ್ದ ಲೇಖನ ಮತ್ತು ಪುಸ್ತಕಗಳಿಂದ ಬಂದ ಹಣವೇ ಅವರ ಜೀವನಕ್ಕೆ ಆಧಾರ. ಯುದ್ಧದಲ್ಲಿ ತೊಡಗಿದ್ದ ಜರ್ಮನ್ ಸರಕಾರವು ಲಾಲಾಜಿಯವರನ್ನು ಒಲಿಸಿಕೊಂಡು ಭಾರತೀಯರ ಅತೃಪ್ತಿಯ ಲಾಭ ಪಡೆಯಲು ಯತ್ನಿಸಿತು. ಆದರೆ ಲಾಲಾಜಿ ಜರ್ಮನ್ನರ ಆಕರ್ಷಣೆಗೆ ಒಳಗಾಗಲಿಲ್ಲ.

ಲಾಲಾಜಿ ಅಮೇರಿಕದಲ್ಲಿದ್ದಾಗ ಜಪಾನ್ ದೇಶಕ್ಕೆ ಭೇಟಿ ನೀಡಿದರು.  ಎರಡು ದೇಶಗಳಲ್ಲಿಯೂ ಅವರು ಗಳಿಸಿದುದು ಉಪಯುಕ್ತ ವ್ಯಕ್ತಿಗಳ ಸ್ನೇಹ ಮತ್ತು ಸಹಾನೂಭೂತಿ. ಆ ಎರಡು ದೇಶಗಳೂ ತಮ್ಮ ಕಾರ್ಯಗಳಲ್ಲಿ ವಿಶ್ವಾಸ ವಿಡುವಂತೆ ವರ್ತಿಸಿ ಹೆಸರು ಗಳಿಸಿದರು. ಮಹಾಯುದ್ಧ ಮುಗಿದ ಮೇಲೆ ೧೯೧೯ರಲ್ಲಿ ಭಾರತಕ್ಕೆ ಹಿಂತಿರುಗಲು ರಹದಾರಿ ಕೇಳಿದಾಗ ಬ್ರಿಟಿಷರು ಒಪ್ಪಿಗೆ ಕೊಡಲಿಲ್ಲ. ಭಾರತದಲ್ಲಿ ಅಮೃತಸರದ ಜಲಿಯನ್ ವಾಲಾಬಾಗ್ ನಲ್ಲಿ ಬ್ರಿಟಿಷರ‍್ ಸೈನಿಕರು ಸಭೆ ಸೇರಿದ್ದ ಅಸಹಾಯಕ ಭಾರತೀಯರನ್ನು ಗುಂಡಿಟ್ಟು ಕೊಂದರು. ನ್ಯೂಯಾರ್ಕನಲ್ಲಿದ್ದಾಗಲೇ ಜಲಪತ್ ರಾಯರಿಗೆ ಆ ಹತ್ಯಾಕಾಂಡದ ಭೀಕರ ಸುದ್ಧಿ ಬಂತು. ಭಾರತೀಯರನ್ನು ಸೇರಲು ಉತ್ಸುಕರಾದರು. ವರ್ಷದ ಅಂತ್ಯದಲ್ಲಿ ಅವರಿಗೆ ರಹದಾರಿ ದೊರಕಿತು. ಲಾಲಾಜಿ ೧೯೧೯ರ ಡಿಸೆಂಬರ‍್ನಲ್ಲಿ ನ್ಯೂಯಾರ್ಕನಿಂದ ಲಂಡನ್ ನಿಗೆ ಬಂದರು. ಅಲ್ಲಿ ಉಳಿದ ಕೆಲವು ದಿನಗಳಲ್ಲಿ ಪ್ರಸಿದ್ಧ ಲೇಖಕ ಬರ್ನಾಡ್ ಷಾ ಮತ್ತು ಸಮಾಜವಾದಿ ಸ್ನೇಹಿತರನ್ನು ಭೇಟಿಮಾಡಿ ಪ್ಯಾರಿಸ್ ಗೆ ಬಂದರು.

ಅಸಹಕಾರ ಆಂದೋಳನ

ಸ್ವದೇಶದ ಬಗ್ಗೆ ಪರದೇಶದಲ್ಲಿಯೂ ಪ್ರಚಂಡ ಕ್ರಾಂತಿ ಮಾಡಿ ೧೯೨೦ರ ಫೆಬ್ರವರಿಯಲ್ಲಿ ತಾಯ್ನಾಡಿಗೆ ಹಿಂತಿರುಗಿದಾಗ ಲಾಲಾಜಿಯವರಿಗೆ ಲೋಕಮಾನ್ಯ ತಿಲಕ್, ಜಿನ್ನಾ ಮತ್ತು ಶ್ರೀಮತಿ ಅನಿಬೆಸೆಂಟ್ ರಿಂದ ವಿರೋಚಿತ ಸ್ವಾಗತ ದೊರೆಯಿತು. ಮುಂಬಯಿ, ದೆಹಲಿ ಮತ್ತು ಲಾಹೋರ‍್, ಸಮಾರಂಭಗಳಲ್ಲಿ ಅವರಿಗೆ ಮಾನಪತ್ರಗಳು ಅರ್ಪಿಸಲ್ಪಟ್ಟವು. ೧೯೨೦ರ ಸೆಪ್ಟೆಂಬರನಲ್ಲಿ ಸೇರಿದ ವಿಶೇಷ ಕಾಂಗ್ರೆಸ್‌ ಅಧಿವೇಶನಕ್ಕೆ ಅವರು ಅಧ್ಯಕ್ಷರಾಗಿ ಚುನಾಯಿತರಾದರು.

ಮರುವರ್ಷ ಗಾಂಧೀಜಿ ಅಸಹಾಕಾರ ಚಳುವಳಿಯನ್ನು ಪ್ರಾರಂಭಿಸಿದರು. ರಾಷ್ಟ್ರದಲ್ಲಿ ಅಸಹಕಾರ ಅಂದೋನ ರಭಸದಿಂದ ಸಾಗಿತು. ಲಾಲಾಜಿಯವರು ತಮ್ಮ ಮಿತ್ರರಾದ ಕ್ರಾಂತಿಕಾರಿ ಅಜಿತಸಿಂಗ್ ರೊಂದಿಗೆ ಅಂದೋಲನಾ ರಣರಂಗಕ್ಕಿಳಿದರು.  ಲಾಲಾಜಿಯವರ ಸಿಂಹಗರ್ಜನೆ, ವೀರ ಆದೇಶಗಳಿಗೆ ಇಡೀ ಪಂಜಾಬ್ ಪ್ರಾಂತ್ಯವು ಚಳುವಳಿಯ ಕಣಕ್ಕೆ ಇಳೀಯಿತು.  ಅಂದೋಳನದ ತೀವ್ರತೆಯಿಂದ ಸರಕಾರದ ಭದ್ರಬುನಾದಿ ಅಲುಗಾಡಿ ಹೋಯಿತು. ಸರಕಾರಿ ಶಾಲಾ ಕಾಲೇಜುಗಳು ಬಹಿಷ್ಕೃತವಾದವು. ಕೋರ್ಟು ಕಚೇರಿಗಳು ಸ್ಥಗಿತಗೊಂಡವು. ಪ್ರಜಾವರ್ಗವು ಸಾಮ್ರಾಜ್ಯಶಾಹಿಯ ವಿರುದಧ ಪಣತೊಟ್ಟು ನಿಂತಿತ್ತು.  ಲಾಲಾಜಿ ಲಾಹೋರಿನಲ್ಲಿ ತಾವೇ ಮುಂದಾಗಿ ರಾಷ್ಟ್ರೀಯ ಶಾಲೆಯನ್ನು, ತಿಲಕ್ ರಾಜನೀತಿ ಶಾಸ್ತ್ರ ಶಾಲೆಯನ್ನು  ಪ್ರಾರಂಭಿಸಿ ಬಿಸಿ ರಕ್ತದ ತರುಣರಿಗೆ ಸೂಕ್ತ ಶಿಕ್ಷಣದ ವ್ಯವಸ್ಥೆ ಮಾಡಿದರು. ಪಂಜಾಬಿನಲ್ಲಿ ಆ ಕಾರ್ಯಕ್ಕಾಗಿ ಹತ್ತು ದಿನಗಳ ಬಿರುಗಾಳಿ ವೇಗದ ಪ್ರವಾಸ ಕೈಗೊಂಡು ಒಂಬತ್ತು ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದರು. ಜನತೆ ಅವರ ಮೇಲಿನ ಭಕ್ತಿಯಿಂದ ಮುಕ್ತ ಹಸ್ತದಿಂದ ಹಣ ನೀಡಿತು.

ಸೆರೆಮನೆ

ಲಜಪತ್ ರಾಯರ ಸಂಘಟನಾ ಶಕ್ತಿ, ವೀರವಾಣಿ ಮಹಾ ಪ್ರಭಾವಶಾಲಿಯಾಗಿದ್ದವು. ದಿನೇ ದಿನೇ ವೃದ್ಧಿಗೊಳ್ಳುತ್ತಿದ್ದ ಭಯಂಕರ ಅಸಹಕಾರತೆಯನ್ನು ಎದುರಿಸುವುದು ಸರಕಾರಕ್ಕೆ ಅಸಾಧ್ಯವಾಯಿತು. ದೇಶಾದ್ಯಂತ ಹೋರಾಟ, ಹರತಾಳಗಳು ನಡೆಯುತ್ತಿದ್ದು ಆಳರಸರು ತಲ್ಲಣಿಸಿದರು. ಸರಕಾರಕ್ಕೆ ಲಾಲಾಜಿ ಭಯಂಕರ ವ್ಯಕ್ತಿಯಾದರು. ೧೯೨೧ರ ಡಿಸೆಂಬರನಲ್ಲಿ ಲಾಲಾಜಿಯವರ ಬಂಧನವಾಯಿತು. ಚಳುವಳಿಯ ಇತರ ನಾಯಕರಾದ ಮೋತಿಲಾಲ್ ನೆಹರು ಮತ್ತು ಚಿತ್ತರಂಜನ ದಾಸ್ ರವರೂ ಜೈಲು ಸೇರಿದರು. ಲಾಲಾಜಿಯವರಿಗೆ ೧೮ ತಿಂಗಳ ಕಠಿಣ ಶಿಕ್ಷೆ ವಿಧಿಸಲಾಯಿತು. ಸಾರ್ವಜನಿಕರ ಪ್ರತಿಭಟನೆ ಮತ್ತು ನ್ಯಾಯಪಂಡೀತರ ವಾದಗಳಿಂದ ಎರೆಡು ತಿಂಗಳ ಅನಂತರ ಅವರ ಬಿಡುಗಡೆ ಆಯಿತು.  ಅವರ ಬಿಡುಗಡೆ ಆದಾಗ ರಾತ್ರಿ ಒಂದು ಗಂಟೆ. ಅವರು ಬಾಗಿಲಿನ ಬಳಿ ಬರುತ್ತಲೇ ಮತ್ತೇ ಬಂಧಿಸಲಾಯಿತು.

ಮತ್ತೊಂದು ಆಪಾದನೆಯ ಮೇಲೆ ಅವರು ಎರಡು ವರ್ಷಗಳ ಕಠಿಣ ಸಜೆಗೆ ಒಳಗಾದರು. ಜೈಲಿನಲ್ಲಿ ಕಾಯಿಲೆ ಬಿದ್ದು ಅವರ ಆರೋಗ್ಯ ಕೆಟ್ಟಿತ್ತು. ಈ ಸಂಗತಿ ಜನತೆಗೆ ತಿಳಿಯುತ್ತಲೇ ದೇಶದಲ್ಲೆಲ್ಲ ಅವರ ಬಿಡುಗಡೆಗಾಗಿ ಉಗ್ರವಾದ ಚಳುವಳಿ ಪ್ರಾರಂಭವಾಯಿತು. ಸರಕಾರ ಅವರನ್ನು ಬಿಡುಗಡೆ ಮಾಡಿತು.  ಲಾಲಾಜಿ ಆರೋಗ್ಯ ಸುಧಾರಣೆಗಾಗಿ ಸೋಲಾನ್ ಎಂಬಲ್ಲಿಗೆ ಹೋದರು.

ಹಿಂದೂ ಸಂಘಟನೆ

ವಿಶ್ರಾಂತಿಯ ತರುವಾಯ ಮತ್ತೇ ಚಟುವಟಿಕೆ ಆರಂಭವಾಯಿತು. ಮೋತಿಲಾಲ್ ನೆಹರುರವರು ಸ್ಥಾಪಿಸಿದ “ಸ್ವರಾಜ್ಯ ಪಕ್ಷ” ಸೇರಿದರು. ಕೇಂದ್ರ ಶಾಸನ ಸಭೆಗೆ ಚುನಾಯಿತರಾದರು. ಆ ಕಾಲಕ್ಕೆ ಮಹಾತ್ಮ ಗಾಂಧಿ ಯವರಿಂದ ರೂಪಿತವಾದ ಹಿಂದೂ-ಮುಸ್ಲಿಂರ ಐಕ್ಯಮತ್ಯದ ಅಗತ್ಯವನ್ನು ಬಲ್ಲವರಾಗಿದ್ದರು. ಅನೇಕ ಮುಸ್ಲಿಮರು ಐಕ್ಯತೆಯ ಕಟ್ಟಿನಿಂದ  ದೂರವಾದರು. ಅಸಹಕಾರ ಅಂದೋಳನವು ಕುಸಿದು ಮತೀಯ ವೈಮನಸ್ಸುಗಳು  ಹೆಚ್ಚಿ ಅಪಾಯಕಾರಿ ಘಟಟ ಮುಟ್ಟಿದವು. ೧೯೨೪ರಲ್ಲಿ ವಾಯುವ್ಯ ಪ್ರಾಂತಗಳ ಕೊಹಾತನಲ್ಲಿ ಹಿಂದು-ಮುಸ್ಲಿಂ ಗಲಭೆಗಳು ನಡೆದು ಹಿಂದುಗಳು ವಿಪರೀತ ನೊವಿಗೆ ಒಳಗಾದರು. ಎರಡು ದಿನಗಳ ಸಭೆಯಲ್ಲಿ ೧೫೦ ಹಿಂದುಗಳ ಕೊಲೆ ಆದುದಲ್ಲದೇ ೪೦೦೦ ಮಂದಿ ಗಾಯಗೊಂಡವರನ್ನು ರಾವಲ್ಪಿಂಡಿಗೆ ವರ್ಗಾಯಿಸಬೇಕಾಯಿತು. ಮಹಾತ್ಮಗಾಂಧಿ ಉಪವಾಸ ಸತ್ಯಾಗ್ರಹ ನಡೆಸಿದರು.  ಮತಗಳ ಐಕ್ಯತೆಗಾಗಿ ಸಮ್ಮೇಳನ ನಡೆದು ರಾಷ್ಟ್ರೀಯ ಪಂಚಾಯಿತಿ ರಚಿಸಿತು. ಆದರೆ ಸಮಸ್ಯೆ ಬಗೆಹರಿಯಲಿಲ್ಲ. ಕೊಹಾತ್ ದುರಂತದಿಂದ ಲಾಲಾಜಿಯವರಿಗೆ ಅತೀವ್ ನೋವು ಮತ್ತು ನಿರಾಶೆ ಉಂಟಾಗಿತ್ತು. ಅವರು ಅಸಹಾಯಕ ಹಿಂದುಗಳ ಪಕ್ಷ ವಹಿಸಿ ನಿಲ್ಲಬೇಕಾಯಿತು. ಮುಸ್ಲಿಮರು ರಚಿಸಿಕೊಂಡ ಕೂಟಗಳಿಗೆ ವಿರುದ್ಧವಾಗಿ ಲಾಲಾಜಿ :”ಹಿಂದು ಶುದ್ಧಿ” ಮತ್ತು “ಹಿಂದು ಸಂಘಟನೆ” ಚಳುವಳಿಗಳನ್ನು ಅವ್ಯಾಹತವಾಗಿ ನಡೆಸಿದರು.  ಮುಂದೆ ಮುಸ್ಲಿಮರು ಭಾರತವನ್ನು ವಿಭಜಿಸಿ ತಮಗಾಗಿ ಪ್ರತ್ಯೇಕ ರಾಷ್ಟ್ರವನ್ನು ಕೇಳಬಹುದೆಂದು ಶಂಕೆಯನ್ನು ಅಂದೇ ವ್ಯಕ್ತಪಡಿಸಿದ್ದು, ಲಾಲಾಜಿಯವರ ದೂರದರ್ಶಕತ್ವಕ್ಕೆ ದೊಡ್ಡ ನಿದರ್ಶನ.

೧೯೨೫ರಲ್ಲಿ ಕಲ್ಕತ್ತಾದಲ್ಲಿ ನಡೆದ ಹಿಂದು ಮಹಾಸಭೆಯ ಅಧ್ಯಕ್ಷ ಸ್ಥಾನವನ್ನು ಇವರೇ ವಹಿಸಿಕೊಂಡಿದ್ದರು. ಹಿಂದು ಧರ್ಮ ಹಾಗೂ ಅದರ ರಕ್ಷಣೆಯ ಕುರಿತು ಅವರು ಮಾಡಿದ ಭಾಷಣವು ಸಮಗ್ರ ಹಿಂದುಗಳನ್ನು ಬಡಿದೆಬ್ಬಿಸಿತು. ೧೯೨೬ರಲ್ಲಿ ಲಾಲಾಜಿ ಜಿನಿವಾದಲ್ಲಿ ಸೇರಿದ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಭಾರತದ ಕಾರ್ಮಿಕರ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಬ್ರೀಟನ್ ಮತ್ತು ಫ್ರಾನ್ಸನಲ್ಲಿ ನಡೆದ ಅಂತಹದೇ ಸಮ್ಮೆಳನಗಳಲ್ಲಿಯೂ ಭಾಗವಹಿಸಿದರು.

‘ಅನ್ ಹ್ಯಾಪಿ ಇಂಡಿಯಾ’

೧೯೭೨ರಲ್ಲಿ ಲಾಲಾಜಿ ಅರೋಗ್ಯ ಸುಧಾರಣೆಗಾಗಿ ಯೂರೋಪಿಗೆ ತೆರಳೀದರು. ಕ್ಯಾಥೆರಿನ್ ಮೇಯೋ ಎಂಬ ವಿದೇಶಿ ಪತ್ರಕರ್ತೆ ಭಾರತಕ್ಕೆ ಭೇಟಿ ನೀಡಿ ಭಾರತದ ನಾಗರಿಕತೆ ,  ಸಂಸ್ಕೃತಿ, ಜನ ಜೀವನದ ಬಗೆಗೆ “ಮದರ ಇಂಡಿಯಾ: ಎಂಬ ಪುಸ್ತಕವನ್ನು ಬರೆದಳು. ಭಾರತದ ಬಗ್ಗೆ ತಪ್ಪು ವರದಿಗಳ ಪುಸ್ತಕ ಅದು. ಗಾಂಧೀಜಿ ಅದನ್ನು “ಚರಂಡಿ ಇನ್ಸಫೆಕ್ಟರ ವರದಿ” ಎಂಬ ಲೇಖನದಿಂದ ವಿರೊಧಿಸಿರು.  ಮೇಯೋ ಬರೆದ ಪುಸ್ತಕವು ಪ್ರಕಟವಾದದ್ದು ಲಾಲಾಜಿ ಲಂಡನ್ನಲ್ಲಿದ್ದಾಗ. ಪುಸ್ತಕದಿಂದ ಭಾರತ ಮತ್ತು ಬ್ರಿಟನ್ ನಲ್ಲಿ ಹಗರಣ ಉಂಟಾಯಿತು. ಭಾರತದ ಸ್ವಾತಂತ್ಯ್ರ ವಿರೊಧಿ ವರ್ಗದವರ ಹಣದ ಬೆಂಬಲದಿಂದ ಹೊರಬಿದ್ದ ಕೃತಿಯನ್ನು ಲಾಲಾಜಿ ಓದಿದರು. ಅವರಿಂದ ಸುಮ್ಮನಿರಲು ಆಗಲಿಲ್ಲ. ಭಾರತಕ್ಕೆ ಹಿಂತಿರುಗಿದ ಕೂಡಲೇ ಕ್ಯಾಥೆರಿನ್ ಮೇಯೋಳ ಪುಸ್ತಕದ ವಿವರಗಳನ್ನು ಪ್ರತಿಭಟಿಸಿ “ಅನ್ ಹ್ಯಾಪಿ ಇಂಡಿಯಾ” (ದುಃಖಿ ಭಾರತ) ಎಂಬ ಗ್ರಂಥವನ್ನು ಬರೆದುದು ಅವರ ಪ್ರಥಮ ಕೆಲಸ. ಮಿಸ್ ಮೇಯೋಳ ಅಪಪ್ರಚಾರಕ್ಕೆ ಅವರು ಸಾರ್ಥಕ ಉತ್ತರ ನೀಡಿದರು.

ಸೈಮನ್ ಕಮೀಷನ್

ಅಸಹಕಾರ ಅಂದೋಳನವು ವಿಫಲವಾದ ಮೇಲೆ ರಾಜಕೀಯ ಚಟುವಟಿಕೆಗಳಿಗೆ ಗ್ರಹಣ ಹಿಡಿದಂತಾಗಿತ್ತು. ೧೯೨೭ರಲ್ಲಿ ಭಾರತದ ಸುಧಾರಣೆಗಳ ವಿಷಯದಲ್ಲಿ ಮತ್ತು ಭಾರತದ ಸಂವಿಧಾನ ವಿಸ್ತರಣದ ಬಗೆಗೆ ವರದಿ ಪಡೆಯಲು ಬ್ರಟಿಷ ಸರಕಾರ ಒಂದು ಅಯೋಗ ರಚಿಸಿತು. ಆ ಅಯೋಗದ ಅಧ್ಯಕ್ಷನಾದ ಸರ‍್ ಜಾನ್ ಸೈಮನ್ ಮತ್ತು ಇತರೆ ಅರು ಜನ ಸದಸ್ಯರು ಇವರೆಲ್ಲಾ ಬ್ರೀಟನ್ ಶಾಸಕಾಂಗದ ಸದಸ್ಯರಾಗಿದ್ದರು. ಭಾರತೀಯರೊಬ್ಬರೂ ಇಲ್ಲದೆ ಕೇವಲ ಬಿಳಿಯ ಜನರಿಂದಲೇ ಕೂಡಿದ್ದ ಆಯೋಗ ಭಾರತೀಯರನ್ನು ಅಪಮಾನಗೊಳಿಸಲು ರಚಿಸಿದ ಕೂಟವಾಗಿತ್ತು. ಭಾರ‍ತದ ಭವಿಷ್ಯವನ್ನು ಕೇವಲ ಬಿಳಿಯರೇ ರೂಪಿಸಲಾಗುವುದೆಂದು ಜನ ಸಿಡಿದೆದ್ದರು. ಲಾಲಾಜಿಯವರ ನೇತೃತ್ವದಲ್ಲಿ ಸೈಮನ್ ಅಯೋಗವನ್ನು ಬಹಿಷ್ಕರಿಸಲು ನಿರ್ಣಯವಾಯಿತು.  ಇಡೀ ರಾಷ್ಟ್ರವು ಒಂದಾಗಿ ನಿಂತಿತು.

೧೯೨೮ರ ಫೆಬ್ರವರಿಯಲ್ಲಿ ಲಜಪತರಾಯರು ಕೇಂದ್ರ ಶಾಸನ ಸಭೆಯಲ್ಲಿ ಒಂದು ನಿರ್ಣಯವನ್ನು ಮಂಡಿಸಿದರು.  “ಆಯೋಗದ ಈಗಿನ ರಚನೆ ಮತ್ತು ಯೋಚನೆಯ ಈ ಸಭೆಯ ಸ್ವೀಕಾರಕ್ಕೆ ಆರ್ಹವೇ ಅಲ್ಲ, ಆದುದರಿಂದ  ಆಯೋಗಕ್ಕೂ ಈ ಸಭೆಗೂ ಯಾವ ರೀತಿಯ ಸಂಬಂಧವೂ ಇರುವುದಿಲ್ಲ ಎಂದು ಈ ಸಭೆ ಸರಕಾರಕ್ಕೆ ತಿಳಿಸುತ್ತದೆ”. ಆ ಸಂದರ್ಭದಲ್ಲಿ ಅವರು ಮಾಡಿದ ಭಾಷಣ ಮೈನವಿರೇಳಿಸುವಂತಹದು ಶಾಸನ ಸಭೆಯಲ್ಲಿ ಇಂಗ್ಲೀಷರೂ ಅವರ ಸರ್ಕಾರದ ಅಧಿಕಾರಿಗಳು ಅನೇಕರಿದ್ದರು.  ಅವರು ನಿರ್ಣಯಕ್ಕೆ ವಿರುದ್ಧವಾಗಿಯೇ ಮತದಾನ ಮಾಡುವರೆಂದು ತಿಳಿದೇ ಇತ್ತು. ಭಾರತೀಯ ಸದಸ್ಯರಿಗೆ ಲಾಲಾಜಿ ಹೀಗೆ ಮನವಿ ಮಾಡಿಕೊಂಡರು. “ಬ್ರಿಟಿಷ್ ಸರಕಾರದ ದೃಷ್ಟಿಯಲ್ಲಿ, ಜಗತ್ತಿನ ದೃಷ್ಟಿಯಲ್ಲಿ ತಾವು ದಾಸರು ಎಂಬುವುದನ್ನು ನಮ್ಮ ಸದಸ್ಯರು ಅರ್ಥಮಾಡಿಕೊಳ್ಳಲಿ. ನಿರ್ಣಯದ ಮೇಲೆ ಮತದಾನ ಮಾಡುವಾಗ ಅವರು ೧೯೧೮ರಲ್ಲಿ ಒಂದೇ ಒಂದು ಸಾಂಕ್ರಾಮಿಕ ಜಾಡ್ಯದಿಂದ ನಮ್ಮ ದೇಶದಲ್ಲಿ ಆರುಕೋಟಿ ಜನ ಸತ್ತರು ಎಂಬುವುದನ್ನು ನೆನಪಿಡಲಿ. ಈ ದೇಶದಲ್ಲಿ ಹತ್ತು ಕೋಟಿ ಜನಕ್ಕೆ ಎರಡು ಹೊತ್ತು ಊಟವಿಲ್ಲ ಎಂಬುವುದನ್ನು ನೆನಪಿಡಲಿ”.

ಭಾರತಕ್ಕೆ ಅಗತ್ಯವಾದ ಸಂವಿಧಾನವನ್ನು ರಚಿಸಲು ಬ್ರೀಟಿಷ ಪಾರ್ಲಿಮೆಂಟಿಗೆ ಏನು ಹಕ್ಕು? ಅದು ಲಾಲಾಜಿಯವರ ನಿರ್ಭೀತ ಪ್ರಶ್ನೆ. ಭಾರತೀಯರ ಭವಿಷ್ಯವು ಪೂರ್ಣವಾಗಿ ಭಾರತೀಯರಿಗೆ ಸೇರಿದ್ದು. ಅದು ಅವರ ದೃಢ ಸಂಕಲ್ಪ. ಮೋತಿಲಾಲ್ ನೆಹರು ಮತ್ತು ಅವರ ಅವರ ಸಹದ್ಯೋಗಿಗಳ ವರದಿ ಸಿದ್ಧವಾಯಿತು. ಅದರಲ್ಲಿ ಬ್ರಿಟಿಷ್ ಧೋರಣೆಯನ್ನು ಪ್ರತಿಭಟಿಸಲಾಗಿತ್ತು. ನೆಹರೂ ವರದಿಯ ಪ್ರಚಾರಕ್ಕಾಗಿ ಲಾಲಾಜಿ ಭಾರತದಲ್ಲೆಲ್ಲಾ ಪ್ರವಾಸ ಮಾಡಿ ಬಂದರು. “ವರದಿಯನ್ನು ವಿರೋಧಿಸುವವರು ಸ್ವರಾಜ್ಯದ ವಿರೋಧಿಗಳು ಮತ್ತು ಭಾರತದ ಶತ್ರುಗಳು” ಎಂಬುವುದು ಅವರ  ಘೋಷಣೆಯಾಗಿತ್ತು.

ಸಾಮ್ರಾಜ್ಯಶಾಹಿಯ ಪ್ರಹಾರ

೧೯೨೮ರ ಅಕ್ಟೋಬರ‍್ ೩೦ನೇ ತಾರೀಕು ಭಾರತದ ರಾಜಕೀಯ ಇತಿಹಾಸದಲ್ಲಿ ದುರ್ದೈವದ ದಿವಸ. ಆ ದಿನ ಸೈಮನ್ ಕಮೀಷನ್ ಲಾಹೋರಿಗೆ ಬರುವುದಿತ್ತು. ಮುಂಜಾಗರೂಕತೆಯಾಗಿ ಆಳರಸರು ಎಲ್ಲ ವ್ಯವಸ್ಥೆಗಳನ್ನು ಮಾಡಿ ಪ್ರತಿಬಂಧಕ ಆಜ್ಞೆಯನ್ನು ಹೊರಡಿಸಿದ್ದನು.  ಅಂದು ಲಾಲಾಜಿಯವರ ಆರೋಗ್ಯ ಸರಿ ಇರಲಿಲ್ಲ. ಆದರೂ ಅಯೋಗವನ್ನು ವಿರೋಧಿಸಲು ಪ್ರಚಂಡ ಮೆರವಣೀಗೆ ಮುಂದಾಳುವಾದರು.

ಸೈಮನ್ ಸಮಿತಿಯ ತಂಡ ಬಂದಾಗ ದೇಶದ್ರೋಹಿ ಗಳಿಂದ ಸ್ವಾಗತವೊಂದು ಕಡೆ. ಕ್ರಾಂತಿಕಾರಿಗಳಿಂದ ಪ್ರತಿಭಟನೆ ಇನ್ನೊಂದು ಕಡೆ.  ಪ್ರತಿಭಟನೆಯ ಮೆರವಣಿಗೆಯಲ್ಲಿ ತರುಣರು ಪ್ರಚಂಡ ಪ್ರದರ್ಶನ ಮಾಡಿದರು. ಅಂದು ಅದ್ಭುತ ಹರತಾಳ, ಕಪ್ಪು ಬಾವುಟಗಳ ಸಾಗರ, ಸೈಮನ್, ಹಿಂತಿರುಗು ಎಂಬ ಪುರುಷ ಸಿಂಹ  ಘೋಷಣೆ! ಈ ಮೆರವಣೀಗೆಯ ಮುಂದೆ ಪುರುಷ ಸಿಂಹ  ಲಾಲಾ ಲಜಪತರಾಯರವರು, ರೈಲು ನಿಲ್ದಾಣಕ್ಕೆ ಗಾಡಿ ಬಂದೊಡನೆ ಆಕಾಶ ಬಿರಿಯುವಂತೆ “ಸೈಮನ್ ಹಿಂತಿರುಗು” ಎಂಬ ಘೋಷಣೆ ಸಾಮೂಹಿಕ ಒಕ್ಕೊರಲಿನ ಕೂಗು. ಪೋಲಿಸರು ಬಂದೋಬಸ್ತ ವ್ಯವಸ್ಥೆಯು ಕಳಚಿಬಿತ್ತು. ಕದಲುವುದಕ್ಕೆ ಸಾಧ್ಯವಿಲ್ಲದಂತಹ ದಟ್ಟ ಜನಸಂದಣಿ. ಪೋಲಿಸರ ಲಾಠಿ ಪ್ರಹಾರ ಪ್ರಾರಂಭವಾಯಿತು.  ನಿರಾಪರಾಧಿಗಳ ರಕ್ತ ಹರಿಯಲಾರಂಭಿಸಿತು.  ಲಾಲಾಜಿಯವರ ರಕ್ಷಣೆಗಾಗಿ ಅವರ  ಮಿತ್ರರಾದ ಸುಖದೇವ, ಯಶಪಾಲ್, ಭಗವತಿ ಚರಣ ಮೊದಲಾದವರು ಸುತ್ತುಗಟ್ಟಿ ನಿಂತರು. ಪೋಲಿಸ ಅಧೀಕ್ಷಕ ಸ್ಕಾಟ್, ಲಾಲಾಜಿಯವರನ್ನು ಮತ್ತು ಅವರ ರಕ್ಷಕರನ್ನು ನೋಡಿದ. ರಕ್ಷಕರನ್ನು ಹೊಡೆಯಲು ಪೋಲಿಸರಿಗೆ ಸ್ಕಾಟ್ ಆಜ್ಞೆ ಕೊಟ್ಟ. ಸ್ಟಾಂಡರ್ಸ್ ಎಂಬ ಪೋಲಿಸ ಅಧಿಕಾರಿ ಈ ಕೆಲಸಕ್ಕೆ ಮುಂದೆ ಬಂದ. ಲಾಲಾಜಿಯವರ ತಲೆ, ಮೈಮೇಲೆಲ್ಲ ಕೈ ದೊಣ್ಣೆಯ ಪೆಟ್ಟುಗಳು ಬಿದ್ದವು. ಈ ಘಟನೆಯಿಂದ ಮುಂದೆ ರಕ್ತಪಾತ, ಕೊಲೆಗಳು,  ಸಂಭವಿಸುವುದನ್ನು ಗ್ರಹಿಸಿದ ಲಾಲಾಜಿ ಕ್ರಾಂತಿಯುವಕ ತಂಡಕ್ಕೆ “ಇಲ್ಲಿಂದ ಹೊರಟುಬಿಡಿ”ಎಂದು ಹೇಳಿದರು. ಗುಂಪು ಚದುರಿತು.

ಅಂದೇ ಸಂಜೆ ಪ್ರಚಂಡ ಸಭೆ ಸೇರಿತು. ಪೋಲಿಸರ ಹೇಯ ವರ್ತನೆಯನ್ನು ಉಗ್ರವಾಗಿ ಖಂಡಿಸಿ ಸೈಮನ್ ಸಮಿತಿಯನ್ನು ಬಹಿಷ್ಕರಿಸಿತು. ಆ ಸಭೆಗೆ ಪೋಲಿಸ ಡೆಪ್ಯೂಟಿ ಸೂಪರಿಟೆಂಡೆಂಟ್ ನೀಲ್ ಬಂದಿದ್ದ.  ಲಾಲಾಜಿ ನೀಲ್ ಕಡೆಗೆ ತಿರುಗಿ ಅವನಿಗೆ ಅರ್ಥವಾಗಲೆಂದೇ ಇಂಗ್ಲೀಷನಲ್ಲಿ ಹೀಗೆ ಹೇಳಿದರು: “ನನ್ನ ಮೇಲೆ ಇಂದು ಬಿದ್ಧ ಹೊಡೆತಗಳು, ಬ್ರಿಟಿಷ್ ಸಾಮ್ರಾಜ್ಯಶಾಹಿಯ ಶವದ ಪೆಟ್ಟಿಗೆಗೆ ಹೊಡೆದ ಕಟ್ಟಕಡೆಯ ಮೊಳೆಗಳು”.

ಲಜಪತರಾಯರ್ ಒಂದು ಸೂಚನೆಗೆ ಪಂಜಾಬಿನ ಯುವಕರು ರಕ್ತದ ನದಿ ಹರಿಯಲು ಸಿದ್ಧರಾಗಿದ್ದರು. ಆದರೆ ಲಾಲಾಜಿ ಅಹಿಂಸೆಯ ವ್ರತಪಾಲಕರು. ದೇಶವು ಉದ್ರೇಕ, ಕೋಪ ಅಡಗಿಸಿಕೊಳ್ಳಬೇಕಾಯಿತು. ಘಟನೆಯು ಸಂಭವಿಸಿದ ವಾರದಲ್ಲಿಯೇ ಲಾಲಾಜಿ ದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಮತ್ತು ಸರ್ವಪಕ್ಷ ಸಮ್ಮೆಳನದಲ್ಲಿ ಭಾಗವಹಿಸಿದರು. ನಿಶ್ಯಕ್ತಿಯಿಂದಾಗಿ ಲಾಹೋರಿಗೆ ಹಿಂತಿರುಗಿದರು. ಅಸ್ವಸ್ಥತೆಯಿಂದ ಮಲಗಿದ ಲಾಲಾಜಿಯವರು ೧೯೨೮ರ ನವೆಂಬರ‍್ ೧೭ ರಂದು ಹೃದಯಘಾತದಿಂದ ಕಣ್ಮುಚ್ಚಿದರು. ಲಾಠಿಯ ಪ್ರಹಾರಗಳಿಂದ ಆದ ಮರಣ  ಅದು ಎಂದು ಭಾರತೀಯರಿಗೆಲ್ಲ ಎನ್ನಿಸಿತು. ಪೋಲಿಸರಿಂದ ಉದ್ದೇಶಪೂರ್ವಕವಾಗಿ ಆದ ಕೊಲೆ!

ಅವರ ದೇಹದ ಮೆರವಣಿಗೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

 


ಬ್ರಿಟಿಷ್ ಸಾಮ್ರಾಜ್ಯಶಾಹಿಯ ಶವದ ಪೆಟ್ಟಿಗೆಗೆ ಹೊಡೆದ ಕಟ್ಟ ಕಡೆಯ ಮೊಳೆಗಳು.


 

ದೇಶ ಮರೆಯಲಿಲ್ಲ

ಲಾಲಾಜಿಯವರ ಮರಣದಿಂದ ಚಳುವಳಿಯಾವ ರೀತಿಯಲ್ಲಿಯೂ ಇಳಿಮುಖವಾಗಲಿಲ್ಲ. ಮತ್ತಷ್ಟು ಭೀಕರ ಸ್ವರೂಪ ತಾಳಿತು. ಕಾಂಗ್ರೆಸ್ ಪಕ್ಷವು “ಕರ ನಿರಾಕರಣೆ” ಚಳುವಳಿಯನ್ನು ಪ್ರಾರಂಭಿಸಿತು.  ಲಾಲಾಜಿಯವರ ಮರಣವನ್ನು ಪಂಜಾಬ್ ಸುಲಭವಾಗಿ ಮರೆಯುವಂತಿರಲಿಲ್ಲ. ನಮ್ಮ ನೆಚ್ಚಿನ ಮುಖಂಡನ ಮೇಲೆ ನಡೆಸಿದ ಹೇಡಿ ಬಿಳಿಯರ ಅತ್ಯಾಚಾರದ ಪ್ರತೀಕಾರಕ್ಕಾಗಿ ಭೀಕರ ಕ್ರಾಂತಿ ಪಂಜಾಬನಲ್ಲಿ ಪುಟ್ಟದೆದ್ದಿತು. ಲಾಲಾಜಿಯವರ ಮೇಲೆ ದಾಳಿ ನಡೆಸಲು ಪ್ರಮುಖವಾಗಿ ಕಾರಣನಾದ ಪೋಲಿಸ ಅಧಿಕಾರಿ ಸ್ಟ್ಯಾಂಡರ್ಸ್ ತರುಣ ಕ್ರಾಂತಿಕಾರ ಭಗತ್ ಸಿಂಗ್ ಎಂಬುವನಿಂದ ಭೀಕರ ರೀತಿಯಲ್ಲಿ ಕೊಲ್ಲಲ್ಪಟ್ಟ. ಇದು ಲಾಲಾಜಿಯವರು ನಿಧನರಾದ ಒಂದು ತಿಂಗಳೀಗ ಸರಿಯಾಗಿ ಡಿಸೆಂಬರ ೧೭ ರಂದು ನಡೆಯಿತು. ಮರುವರ್ಷದಲ್ಲಿ ಭಗತ್ ಸಿಂಗ್ ಬ್ರಿಟಿಷರಿಂದ ಫಾಸಿ ಶಿಕ್ಷೆಗೆ ಒಳಗಾದ.

ಪಂಜಾಬಿನ ಸಿಂಹ

ಪಂಜಾಬಿನ ಸಿಂಹ ಲಾಲಾ ಲಜಪತ್ ರಾಯ್ ರಾಷ್ಟ್ರಕ್ಕೆ ಕಲಿಸಿಕೊಟಿದ್ದು ಧೈರ್ಯದ ಪಾಠ. ದಾಸ್ಯದ ಸಂಕೊಲೆಗೆ ಸಿಕ್ಕಿದ ಭಾರತೀಯರಿಗೆ ಕೊಟ್ಟ ಸಂದೇಶ ಇದು: “ಸ್ವಾತಂತ್ಯ್ರವು ಬೇಡಿಕೆ ಅಥವಾ ಪ್ರಾರ್ಥನೆಗೆ ಸಿಕ್ಕುವುದಲ್ಲ. ಅದರ ಪ್ರಾಪ್ತಿಗೆ ಹೋರಾಟ ಮತ್ತು ಬಲಿದಾನ ಅಗತ್ಯ”. ಜೀವನಪೂರ್ತಿ ಸಾಹಸದ ಹೋರಾಟ ನಡೆಸಿದುದರ ಕಾರಣಕ್ಕಾಗಿಯೇ ಅವರನ್ನು ದೇಶವು “ಪಂಜಾಬ್ ಕೇಸರಿ” ಎಂದು ಕರೆದದ್ದು. ಅವರ ಬಲಿದಾನ ರಣಭೂಮಿಯ ವೀರನ ಮರಣದಂತೆ.

ಹಲವು ಮುಖಂಡರ ವಜ್ರ

ಹುತಾತ್ಮರಾದ ಮಹಾ ವ್ಯಕ್ತಿ ಲಾಲಾ ಜಲಪತ್ ರಾಯ್ ಸಕಲ ಗುಣಗಳ ಆಗರ. ಅವರ ವ್ಯಕ್ತಿತ್ವಕ್ಕೆ ಮೆರಗು ಕೊಡುಂವತೆ ಕೂಡಿದ್ದವು. ಕಾರ್ಯಧಕ್ಷತೆ  ಅವಿಶ್ರಾಂತ ದುಡಿಮೆ ಮತ್ತು ರಾಷ್ಟ್ರಪ್ರೇಮ. ಅವರು ಸ್ನೇಹಪರರು, ಭಾರತ ಮತ್ತು ವಿದೇಶಗಳಲ್ಲಿ ದೇಶದ ಹಿತಕ್ಕಾಗಿ  ಗಳಿಸಿದ ಮಿತ್ರರ ಸಂಖ್ಯೆಗೆ ಲೆಕ್ಕವಿಲ್ಲ. ಅಸಾಧಾರಣ ಭಾಷಣಕಾರರು ಅವರು. ವೇದಿಕೆಯ ಮೇಲೆ ನಿಂತು ಗಂಟೆ ಗಟ್ಟಲೆ ನಿರರ್ಗಳವಾಗಿ ಪ್ರಚಂಡ ಪ್ರಚೋದಕ ಭಾಷಣ ಮಾಡುತ್ತಿದ್ದರು. ಮಂತ್ರಮುಗ್ದರಂತೆ ಜನ ಭಾಷಣ ಕೇಳೀ ಜಾಗೃತಿ ಪಡೆಯುತ್ತಿದ್ದರು.  ಆ ಕ್ಷೇತ್ರದಲ್ಲಿ ಅವರು ಪುರುಷ ಸಿಂಹ.

ವಿದ್ಯಾ ಕ್ಷೇತ್ರದಲ್ಲಿ ಮೈ ಮನ ಸವೆಸಿದ ಮೇಧಾವಿ ಅವರು. ಡಿ.ಎ.ವಿ.ಕಾಲೇಜು, ನ್ಯಾಷನಲ್ ಕಾಲೇಜು, ತಿಲಕ ರಾಜನೀತಿ ಶಾಸ್ತ್ರ ಶಾಲೆ, ಮುಂತಾದವು ಅವರ ದೇಶಪ್ರೇಮದ ಜೀವಂತ ರೂಪಗಳು. ಪತ್ರಿಕಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಕಡಿಮೆಯಾದುದಲ್ಲ.  ಉರ್ದು ದಿನಪತ್ರಿಕೆ “ವಂದೇಮಾತರಂ” ಹಾಗೂ ಇಂಗ್ಲೀಷ್ ವಾರಪತ್ರಿಕೆ “ದಿ ಪೀಪಲ್” ಅವರು ಸ್ಥಾಪಿಸಿದ ಉತತಮ ದರ್ಜೆಯ ಆದರ್ಶ ಪತ್ರಿಕೆಗಳು. ವಾಣೀಜ್ಯ ಕ್ಷೇತ್ರದಲ್ಲಿಯೂ ಅವರ ನೆನಪು ಶಾಶ್ವತವಾಗಿ ನಿಂತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಲಕ್ಷ್ಮೀ ಇನ್ಸೂರೆನ್ಸ್ ಕಂಪನಿ ಇವುಗಳನ್ನು ಸ್ಥಾಪಿಸಿದವರು ಲಾಲಾಜಿ. ಆರ್ಯ ಸಮಾಜದ ಸದಸ್ಯರಾಗಿ ಕ್ರೀಯಾಶೀಲರಾಗಿ ದುಡಿದರು.  ಅಸ್ಪ್ರಶ್ಯತೆಯ ವಿರುದ್ಧ ಹೋರಾಡಿದರು. ಮಹಾತ್ಮಗಾಂಧಿಯವರು “ಹರಿಜನ ಸೇವಕ ಸಂಘವನ್ನು ಪ್ರಾರಂಭಿಸಿದಾಗ ಆ ಸಂಸ್ಥೆಗೆ ದುಡಿದರು. ದಿಕ್ಕಿಲ್ಲದ ಮಕ್ಕಳಿಗೆ ತಂದೆ ಅವರು. ದೇಶದ ಅಸಂಖ್ಯಾತ ಅನಾಥಾಲಯಗಳ ಪ್ರಾರಂಭಕ್ಕೆ ಕಾರಣಕರ್ತರು ಅವರು. ಗುಲಾಬ್ ದೇವಿ ಆಸ್ಪತ್ರೆ ಮತ್ತು ಸರ್ವೆಂಟ್ಸ್ ಆಫ್ ಪೀಪಲ್ ಸೊಸೈಟಿ ಆ ಮಹಾ  ವ್ಯಕ್ತಿಯ ಜೀವಿತ ಸ್ಮಾರಕಗಳು.

ಭಾರತದಲ್ಲಿ ಸಮಾಜವಾದದ ಬೀಜ ಬಿತ್ತಿದವರಲ್ಲಿ ಲಾಲಾಜಿ ಒಬ್ಬರು. ಬ್ರಿಟನ್ನಿನಲ್ಲಿ ಸಮಾಜವಾದಕ್ಕೆ ಪುಷ್ಟಿ ಕೊಟ್ಟ ಹೆನ್ರಿ ಮೇಯರ‍್ಸ, ಬಿಟಾಟ್ರಿಸ್ ವೆಬ್,ಲ್ಯಾಮ್ಸ ಬರಿ ಮೊದಲಾದವರನ್ನು ಚೆನ್ನಾಗಿ ಬಲ್ಲವರು ಅವರು. ಕಾರ್ಮಿಕರ ಸಂಘಟನೆಗೆ ಅವರು ಮುಂದಾಳಾದರು. “ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್”ನ್ನು ಸ್ಥಾಪಿಸಿದ ಅವರೇ ಅದರ ಅಧ್ಯಕ್ಷರಾಗಿದ್ದರು. ಕಾರ್ಮಿಕರ ಸ್ಥಿತಿಯನ್ನು ಉತ್ತಮಗೊಳಿಸುವ ವ್ಯವಸ್ಥಿತ ಪ್ರಯತ್ನದ ಪ್ರಾರಂಭ ಮಾಡಿದರು. ಅವರು. ಕೈಗಾರಿಕೆಯಲ್ಲಿ ಬರುವ ಲಾಭದಲ್ಲಿ ಕಾರ್ಮಿಕರಿಗೆ ಪಾಲನ್ನು ಕೊಡಬೇಕು ಎಂದು ವಾದಿಸಿದರು.

ಸಾಮಾನ್ಯ ಜನರ ಹೃದಯದಲ್ಲಿ ಸ್ವಾತಂತ್ಯ್ರದ ಚೇತನವನ್ನು ಎಬ್ಬಿಸಿ, ಗುಲಾಮಗಿರಿಯ ಸರಪಣಿಯನ್ನು ಮುರಿದು ಹಾಕಲು ಜನರನ್ನು ಸಂಘಟಿಸಿದ ಶಕ್ತಿಯ ಮೂರ್ತಿಮಂತರು, ಲಾಲಾಜಿ, ಮಹಾತ್ಮಗಾಂಧಿ ಹೇಳಿರುವಂತೆ, “ಭಾರತದ ಆಕಾಶದಲ್ಲಿ ಸೂರ್ಯ ಹೊಳೆಯುವವರೆಗೂ ಲಾಲಾಜಿಯವರಂತಹ ವ್ಯಕ್ತಿಗಳಿಗೆ ಮರಣವಿಲ್ಲ”.

ಲಜಪತ್ ರಾಯರು ಒಮ್ಮೆ ಹೇಳಿದರು: “ಭಾರತದ ಪತ್ರಿಕೆಗಳ ಮೇಲೆನಾನೇನಾದರೂ ಪ್ರಭಾವ ಬೀರಲು ಸಾಧ್ಯವಿದ್ದಿದ್ದರೆ, ಪ್ರತಿನಿತ್ಯ ಮೊದಲನೆಯ  ಪುಟದಲ್ಲಿ ದಪ್ಪ ಅಕ್ಷರಗಳಲ್ಲಿ ಈ ಕೆಳಗಿನ ಶಿರ್ಷಿಕೆಗಳನ್ನು ಅಚ್ಚು ಮಾಡುವಂತೆ  ಬೇಡುತ್ತಿದ್ದೆ:”

“ಮಕ್ಕಳಿಗೆ ಹಾಲು
ವಯಸ್ಕರಿಗೆ ಆಹಾರ
ಎಲ್ಲರಿಗೆ ವಿದ್ಯಾಭ್ಯಾಸ”.