‘ಬೇಕಾಗಿದ್ದಾರೆ – ಭಾರತದಲ್ಲಿ ಬಂಡಾಯವೆಬ್ಬಿಸಲು ಸೈನಿಕರು.

ವೇತನ – ಸಾವು

ಬಹುಮಾನ – ಹುತಾತ್ಮತೆ

ಪನ್ಷನ್ – ಸ್ವಾತಂತ್ರ್ಯ

ಯುದ್ಧ ಕ್ಷೇತ್ರ – ಭಾರತ’

ದಪ್ಪ ದಪ್ಪ ಅಕ್ಷರಗಳಲ್ಲಿ ಈ ಜಾಹೀರಾತು, ೧೯೧೪ನೆಯ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಹೊರಬಿದ್ದ “ಗದರ್” ಪತ್ರಿಕೆಯ ಮುಖಪುಟದಲ್ಲಿ ಅಚ್ಚಾಗಿತ್ತು. ಗದರ್ (ಬಂಡಾಯ) ಪಕ್ಷ, ಗದರ್ ಪತ್ರಿಕೆ – ಮೊದಲನೆಯ ಮಹಾಯುದ್ಧ ಆರಂಭವಾಗುವುದಕ್ಕೆ ಸ್ವಲ್ಪ ಮುಂಚೆ ಸ್ಥಾಪಿತವಾಗಿ, ಸಶಸ್ತ್ರ ಬಂಡಾಯವೆಬ್ಬಿಸಿ ಭಾರತವನ್ನು ಸ್ವತಂತ್ರಗೊಳಿಸಲು ಮಹಾನ್ ಪ್ರಯತ್ನ ನಡೆಸಿದವು. ಈ ಕ್ರಾಂತಿಯ ಉರಿಯೆಬ್ಬಿಸಿದ ಸಾಹಸಿ ಲಾಲಾ ಹರದಯಾಳ್.

ಜನನ, ವಿದ್ಯಾಭ್ಯಾಸ

ಲಾಲಾ ಹರದಯಾಳ್ ದೆಹಲಿಯಲ್ಲಿ ೧೮೮೪ರ ಅಕ್ಟೋಬರ್ ೧೪ರಂದ ಜನಿಸಿದರು. ತಂದೆ ಗೌರಿ ದಯಾಳ್ ಮಾಥುರ್, ತಾಯಿ ಭೋಲಿರಾಣಿ. ಅವರ ಮನೆ ಸಿಖ್ಖರ ಒಂಬತ್ತನೇ ಗುರುವಾದ ಗುರು ತೇಗ ಬಹಾದ್ದೂರ್ ಹುತಾತ್ಮನಾದ ಸ್ಥಳದ ಆಸುಪಾಸಿನಲ್ಲಿತ್ತು. ಗೌರಿ ದಯಾಳ್ ಪಾರ್ಸಿ ಮತ್ತು ಉರ್ದು ಪಂಡಿತನಾಗಿದ್ದು ಜಿಲ್ಲಾ ಕಚೇರಿಯಲ್ಲಿ “ರೀಡರ್” ನೌಕರಿಯಲ್ಲಿದ್ದ. ಹರ ದಯಾಳ್ ಆತನ ಏಳು ಮಕ್ಕಳಲ್ಲಿ ಆರನೆಯವರು.

ಭೋಲೀರಾಣಿ ಧರ್ಮನಿಷ್ಠ ಮಹಿಳೆ. ಆಕೆಯಿಂದ ಧಾರ್ಮಿಕ ಮಹಾಪುರುಷರ ಕಥೆಗಳು, ರಾಮಾಯಣದ ಪ್ರಸಂಗಗಳು, ಹಬ್ಬ ಹರಿದಿನಗಳ ಮಹತ್ವಗಳು – ಇವನ್ನೆಲ್ಲ ಕೇಳಿ ಬಾಲಕ ಹರದಯಾಳ್ ಹಿಂದೂ ಧರ್ಮ, ಹಿಂದೂ ಸಂಸ್ಕೃತಿಗಳ ಪ್ರಥಮ ಪರಿಚಯ ಪಡೆದ. ಆ ಮೊದಲ ಪ್ರೇಮ ಎಳೆಯ ಹೃದಯದಲ್ಲಿ ನಾಟಿ ಹೆಮ್ಮರವಾಯಿತು. ತಂದೆ ಮಗನನ್ನು ಹತ್ತಿರದಲ್ಲಿಯೇ ಇದ್ದ ಕೇಂಬ್ರಿಜ್ ಮಿಷನ್ ಶಾಲೆಗೆ ಸೇರಿಸಿದ.

ಅಸಾಧಾರಣ ಬುದ್ಧಿಶಕ್ತಿ

ಹರದಯಾಳ್ ಐದನೆಯ ತರಗತಿಯಲ್ಲಿ ಓದುತ್ತಿದ್ದಾಗ ಒಂದು ಕುತೂಹಲಕಾಗಿ ಪ್ರಸಂಗ ನಡೆಯಿತು.

ಅವರ ಎದುರು ಮನೆಯ ಹುಡುಗ ಶಿವನಾರಾಯಣ ಒಂಬತ್ತನೆಯ ತರಗತಿಯಲ್ಲಿ ಕಲಿಯುತ್ತಿದ್ದ. ಒಂದು ದಿನ ಅವನು ಬಿಸಿಲು ಮಚ್ಚಿನಲ್ಲಿ ಕುಳಿತು ರೇಖಾಗಣಿತದ ಒಂದು ಪ್ರಮೇಯವನ್ನು ಬಾಯಿಪಾಠ ಮಾಡುತ್ತಿದ್ದ. ಹರದಯಾಳ್ ತನ್ನ ಮನೆಯ ಮಹಡಿಯ ಮೇಲೆ ಕುಳಿತು ಪಾಠ ಬರೆಯುತ್ತಿದ್ದ. ಶಿವನಾರಾಯಣ ಹೇಳಿದ್ದನ್ನೇ ಹೇಳುತ್ತಿದ್ದುದು ಕಿವಿಗೆ ಬಿತ್ತು. ಎದ್ದು ನಿಂತು, “ಇದೇನಯ್ಯಾ, ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತೀಯಲ್ಲಾ ? ” ಎಂದು ಕೇಳಿದ.

ಮೇಲಿನ ತರಗತಿಯ ವಿದ್ಯಾರ್ಥಿಯ ದೊಡ್ಡತನ ಎದ್ದು ನಿಂತಿತು. “ನಿನಗೇನು ಗೊತ್ತು? ಇನ್ನೂ ಹುಡುಗ. ಮುಂದೆ ದೊಡ್ಡ ತರಗತಿಗೆ ಬಂದು ರೇಖಾ ಗಣಿತ ಕಲಿಯುವಾಗ ಗೊತ್ತಾಗುತ್ತೆ.” ಎಂದು ಉತ್ತರ ಹೇಳಿದ ಬಿಗುಮಾನದಿಂದ.

“ಓಹೋಹೋ, ಈಗ ನೀನು ಏನು ಹೇಳುತ್ತಿದ್ದೆಯೋ ಅದನ್ನು ಹೇಳಲೇನು? ಎಂದು ಕೇಳಿದ ಹರದಯಾಳ್. ಶಿವನಾರಾಯಣ ಬಾಯಿಪಾಠ ಮಾಡುತ್ತಿದ್ದ ಪ್ರಮೇಯವನ್ನು ಚಾಚು ತಪ್ಪದೆ ಒಪ್ಪಿಸಿದ. ಶಿವನಾರಾಯಣ ದಂದಾಗ.

ಒಂದು ವಿಚಾರವನ್ನು ಒಮ್ಮೆ ಕೇಳಿದರೆ ಸಾಕು, ಒಮ್ಮೆ ಓದಿದರೆ ಸಾಕು, ಅದು ಹರದಯಾಳನ ಮನಸ್ಸಿನಲ್ಲಿ ಅಚ್ಚಾದಂತೆಯೇ. ಪತ್ರಿಕೆಗಳ ಸಂಪಾದಕೀಯಗಳು, ಷೇಕ್ಸ್ ಪಿಯರನ ನಾಟಕಗಳು- ಎಲ್ಲ ಆತನ ಸ್ಮೃತಿಯಲ್ಲಿದ್ದವು.

ಲಾಹೋರಿನ ಸರ್ಕಾರಿ ಕಾಲೇಜಿನಲ್ಲಿ ಕಲಿತು ಹರದಯಾಳ್ ತಮ್ಮ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಇಂಗ್ಲಿಷ್ ಮತ್ತು ಇತಿಹಾಸಗಳಲ್ಲಿ ಎಂ.ಎ.ಪದವಿಗಳನ್ನು ಗಳಿಸಿದರು. ಅವರು ಪಡೆದಷ್ಟು ಅಂಕಗಳನ್ನು ಹಲವಾರು ವರ್ಷಗಳ ಕಾಲ ಯಾರು ಪಡೆದಿರಲಿಲ್ಲ.

ವ್ಯಾಸಂಗದ ದೃಷ್ಟಿಯಿಂದ ಉತ್ತರ ಭಾರತದಲ್ಲಿ ಪ್ರಸಿದ್ಧಿ ಪಡೆದ ಹರದಯಾಳ್ ಮೂರು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಅಧ್ಯಯನ ಮಾಡಲು ಸರ್ಕಾರದಿಂದ ವಿದ್ಯಾರ್ಥಿ ವೇತನ ಪಡೆದರು. ಇನ್ನೂ ಎರಡು ವಿದ್ಯಾರ್ಥಿ ವೇತನಗಳು ದೊರೆತವು.

ಆ ವೇಳೆಗಾಗಲೇ ಮೀರತ್ತಿನ ದಿವಾನ್ ಗೋಪಾಲ ಚಂದ್ ಎಂಬುವರ ಮಗಳು ಸುಂದರ ರಾಣಿಯೊಂದಿಗೆ ವಿವಾಹವೂ ಆಗಿತ್ತು.

೧೯೦೫ರಲ್ಲಿ ಸುಮಾರಿನಲ್ಲಿ ಹರದಯಾಳ್ ಇಂಗ್ಲೆಂಡಿಗೆ ಹೋಗಿ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ, ರಾಜನೀತಿ ಮತ್ತು ಸಂಸ್ಕೃತಗಳ ಉನ್ನತ ಅಧ್ಯಯನ ಮಾಡತೊಡಗಿದರು.

ಕ್ರಾಂತಿಕಾರಿ ಆವರಣ

ಇಂಗ್ಲೆಂಡಿಗೆ ಉನ್ನತ ಅಧ್ಯಯನಕ್ಕಾಗಿ ಹೋದ ಹರದಯಾಳರಿಗೆ ದೊರೆತ ಮಿತ್ರರು ಅವರ ಜೀವನ ದೃಷ್ಟಿಯನ್ನು ಮಾರ್ಪಡಿಸಲು ಕಾರಣಕರ್ತರಾದರು. ಶ್ಯಾಮಜೀ ಕೃಷ್ಣಶರ್ಮ, ವಿನಾಯಕ ದಾಮೋದರ ಸಾವರಕರ್, ಭಾಯಿ ಪರಮಾನಂದಜಿ – ಈ ಮೂವರು ಭಾರತೀಯ ಕ್ರಾಂತಿಕಾರಿ ಅಂದೋಳನದ ಇತಿಹಾಸದಲ್ಲಿ ಪ್ರಸಿದ್ಧರು.

ಶ್ಯಾಮಜೀ ಕೃಷ್ಣಶರ್ಮ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಬ್ಯಾರಿಸ್ಟರ್ ಪದವಿ ಗಳಿಸಿದರು. ೧೮೮೩ರಲ್ಲಿ ಭಾರತಕ್ಕೆ ಹಿಂದಿರುಗಿ ಅವರು ಕೆಲ ಕಾಲ ಮುಂಬೈ ಹೈಕೋರ್ಟಿನಲ್ಲಿ ವಕೀಲರಾಗಿದ್ದರು. ಹಲವು ಸಂಸ್ಥಾನಗಳಲ್ಲಿ ಮಂತ್ರಿಯಾಗಿದ್ದರು. ಆದರೆ ಅಂದಿನ ಭಾರತದಲ್ಲಿ ಅಭಿಪ್ರಾಯ ಸ್ವಾತಂತ್ರಯು ಬಹಳ ಮೊಟಕಾಗಿತ್ತು. ಇದರಿಂದ ಅವರು ಅತೃಪ್ತರಾಗಿ ೧೮೯೭ರಲ್ಲಿ ಇಂಗ್ಲೆಂಡಿಗೆ ಮರಳಿದರು. ಅಲ್ಲಿ ಭಾರತೀಯ ಸ್ವಾತಂತ್ರ್ಯಕ್ಕಾಗಿ ಪ್ರಚಾರ ಕಾರ್ಯದಲ್ಲಿ ನಿರತರಾದರು. “ಇಂಡಿಯನ್ ಸೋಷಿಯಾಲಜಿಸ್ಟ್ ” ಎಂಬ ನಿಯತಕಾಲಿಕ ಪತ್ರಿಕೆಯನ್ನು ಸ್ಥಾಪಿಸಿ, ಅದರ ಮೂಲಕ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರು. “ಇಂಡಿಯನ್ ಹೋಮ್‌ ರೂಲ್ ಸೊಸೈಟಿ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಲ್ಲದೆ, ಲಂಡನ್ನಿನಲ್ಲಿ ಭಾರತೀಯ ಸ್ವಾತಂತ್ರ್ಯ ವೀರರು ಇಳಿದುಕೊಳ್ಳುವುದಕ್ಕೂ ಸಭೆ ಇತ್ಯಾದಿಗಳನ್ನು ನಡೆಸುವುದಕ್ಕೂಅನುಕೂಲವಾಗುವಂತೆ ಒಂದು ಮನೆಯನ್ನು ಕೊಂಡುಕೊಂಡು “ಇಂಡಿಯಾ ಹೌಸ್” ಎಂದು ಹೆಸರಿಟ್ಟರು.

ಹರದಯಾಳರು ಸ್ವಾತಂತ್ರ ಯೋಧರ ನಿಕಟ ಸಂಪರ್ಕ ಪಡೆದರು. ” ಇಂಡಿಯನ್ ಸೋಷಿಯಾಲಜಿಸ್ಟ್ ಪತ್ರಿಕೆಗೆ ಲೇಖನಗಳನ್ನು ಬರೆಯಹತ್ತಿದರು.

ಈ ನಡುವೆ ಕಾಲೇಜುಗಳಿಗೆ ರಜೆ ದೊರೆತಾ ಹರದಯಾಳ್ ಒಮ್ಮೆ ಭಾರತಕ್ಕೆ ಬಂದರು. ಆಗ ಅವರು ತಮ್ಮ ಪತ್ನಿಯನ್ನು ತಮ್ಮೊಂದಿಗೆ ಇಂಗ್ಲೆಂಡಿಗೆ ಕರೆದೊಯ್ಯಲು ಬಯಸಿದ್ದರು. ನೆಂಟರೆಲ್ಲಾ ವಿರೋಧಿಸುವರೆಂದು ತಿಳಿದು, ತಮ್ಮ ಮಿತ್ರನೊಬ್ಬನ ನೆರವು ಪಡೆದು ಸುಂದರರಾಣಿಗೆ ಪುರುಷವೇಷ ಹಾಕಿ ಆ ಮಿತ್ರನೊಂದಿಗೆ ಮೀರತ್ತಿಗೆ ಹೊರಟಂತೆ ಮಾಡಿದರು. ಇಬ್ಬರು ದೆಹಲಿಯಲ್ಲಿ ರೈಲು ಹತ್ತಿದರು. ಗಾಜಿಯಾಬಾದ್ ಸ್ಟೇಷನ್ನಿನಲ್ಲಿ ಸುಂದರರಾಣಿಯವರ ನಂಟ ಅಮೀರ‍್ಚಂದನಿಗೆ ಅನುಮಾನ ಹುಟ್ಟಿತು. ಹತ್ತಿರ ಬಂದು ನೋಡಿ, ಹರದಯಾಳರನ್ನು ಕೆಳಕ್ಕೆ ಎಳೆಯತೊಡಗಿದ. ಅವರ ಸ್ನೇಹಿತ ಅಡ್ಡಬಂದು, ಅವರನ್ನು ಹಿಂದಕ್ಕೆ ಎಳೆದು ನಿಲ್ಲಿಸಿದ. ರೈಲೂ ಹೊರಟಿತು. ಪತಿ, ಪತ್ನಿ ಮುಂಬಯಿಗೆ ತಲುಪಿ ಲಂಡನ್ನಿಗೆ ಹೊರಟರು.

ಭಾರತಕ್ಕೆ ಬಂದಿದ್ದಾಗ ಹರದಯಾಳ್ ಮೀರತ್ತಿನಲ್ಲಿ ಕೆಲವು ಮಿತ್ರರ ಸಮ್ಮುಖದಲ್ಲಿ “ರಾಷ್ಟ್ರವಾದಿಗಳು ಎದುರಿಸುತ್ತಿರುವ ಸಮಸ್ಯೆಗಳು” ಎಂಬ ವಿಷಯವನ್ನು ಕುರಿತು ಭಾಷಣ ಮಾಡಿದ್ದರು. ಅವರ ವಾದ ಸರಣಿಗೂ ವಾಕ್ಪ್ರವಾಹಕ್ಕೂ ಆ ಮಿತ್ರತು ಮನಸೋತು ಅವನ ಅನುಯಾಯಿಗಳಾದರು.

ಹರದಯಾಳರು ಆಕ್ಸ್ ಫರ್ಡಿನಲ್ಲಿ ಅಧ್ಯಯನವನ್ನು ಮುಂದುವರಿಸುತ್ತಾ, ತಮ್ಮ ಪತ್ನಿಯ ಶಿಕ್ಷಣಕ್ಕೂ ಸಾಕಷ್ಟು ಗಮನ ನೀಡಿದರು.

ಸ್ಪಲ್ಪಕಾಲದಲ್ಲೇ ಹರದಯಾಳರಲ್ಲಿ ಕ್ರಾಂತಿಕಾರಿ ಭಾವನೆಗಳು ಸ್ಪಷ್ಟರೂಪ ತಳೆದವು. ಬ್ರಿಟಿಷ್ ಸರ್ಕಾರದ ವಿರುದ್ಧ ಶಸ್ತ್ರ ಹಿಡಿದೇ ಹೋರಾಡಬೇಕು ಎಂಬ ಅಭಿಪ್ರಾಯ ಅವರಲ್ಲಿ ಬಲವಾಗುತ್ತಿತ್ತು.

ವಿದ್ಯಾರ್ಜನೆ ನಿಂತಿತು

ಪಂಜಾಬಿನಲ್ಲಿ ಸರ್ಕಾರವು ನೀರಾವರಿ ಕಾಲುವೆಗಳನ್ನು ವಿಸ್ತರಿಸಿತ್ತು. ಅದರ ಲಾಭ ರೈತರಿಗೆ ಆಗದಂತೆ ನೀರಾವರಿ ಕಂದಾಯಗಳನ್ನು ಹೇರತೊಡಗಿತು. ಇದೇ ಸಮಯದಲ್ಲಿ ಸರ್ಕಾರ ಬಂಗಾಳ ಪ್ರಾಂತವನ್ನು ಎರಡು ಭಾಗಗಳನ್ನಾಗಿ ಮಾಡಿದುದು ದೇಶದಲ್ಲೆಲ್ಲ ಚಳವಳಿಗೆ ಕಾರಣವಾಯಿತು. ಈ ಕಾರಣಗಳಿಂದ ಪಂಜಾಬಿನಲ್ಲಿ ಅತೃಪ್ತಿ ಹರಡಿತು. ಪಂಜಾಬಿನ ಜನಪ್ರಿಯ ನಾಯಕರಾಗಿದ್ದ ಲಾಲಾ ಲಜಪತರಾಯ್ ಮತ್ತು ಅಜಿತ ಸಿಂಹರನ್ನು ಬಂಧಿಸಿ, ಗಡೀಪಾರು ಮಾಡಿ ಬರ್ಮಾದಲ್ಲಿ ವಾಸಿಸುವಂತೆ ಆಜ್ಞೆ ನೀಡಿತು.

ಕ್ರಾಂತಿ ಭಾವನೆಗಳಿಂದ ಉದ್ವಿಗ್ನಗೊಂಡಿರುವ ಹರದಯಾಳಿರಿಗೆ ಈ ಸುದ್ದಿ ತಿಳಿದೊಡನೆ ಬೆಂಕಿಯಂತಹ ಕೋಪ ಬಂದಿತು. ಅವರಲ್ಲಿ ಆ ಪ್ರಥಮ ಪ್ರತಿಕ್ರಿಯೆ – ” ಈ ದಬ್ಬಾಳಿಕೆಗೆ ಕಾರಣವಾದ ಬ್ರಿಟಿಷ್ ಸರ್ಕಾರದಿಂದ ಹಣ ಪಡೆದು ನಾನು ವಿದ್ಯಾಭ್ಯಾಸ ಸಾಗಿಸುತ್ತಿರುವೆನಲ್ಲಾ? ಇದು ಹೇಯ” ಎಂದು. ವಿದ್ಯಾರ್ಥಿ ವೇತನ ಕೈಬಿಟ್ಟರೆ ಮುಂದಿನ ನಿರ್ವಹಣೆ ಹೇಗೆ ಎಂಬ ಎಚ್ಚರಿಕೆ ನೀಡಿದರು ಸುಂದರರಾಣಿ. ಆದರೆ ತಮ್ಮ ಕ್ಷೇಮವಷ್ಟನ್ನೇ ಕುರಿತು ಚಿಂತಿಸುವವರಲ್ಲ ಹರದಯಾಳ್. ಕೂಡಲೇ ತಮ್ಮ ಮೂರು ವಿದ್ಯಾರ್ಥಿ ವೇತನಗಳಿಗೂ ರಾಜೀನಾಮೆ ಕೊಟ್ಟರು. ತಾವು ಹಿಂದೆ ಪಡೆದಿದ್ದ ಹಣವನ್ನೂ ಹಿಂತಿರುಗಿಸಿ ಬ್ರಿಟಿಷ್ ಸರ್ಕಾರದ ಋಣ ಹರಿಸಿಕೊಂಡರು.

ಶಿಕ್ಷಣವನ್ನು ತಜ್ಯಸುವುದಾಗಿ ಪ್ರಿನ್ಸಿಪಾಲರಿಗೆ ಹೇಳಿದರು.

ರಾಷ್ಟ್ರಭಕ್ತಿಯ ಕಾರಣದಿಂದ ತಮಗೆ ದೊರೆತ ವಿದ್ಯಾರ್ಥಿ ವೇತನವನ್ನು ಬಿಟ್ಟುಕೊಟ್ಟವರಲ್ಲಿ ಲಾಲಾ ಹರದಯಾಳ್‌ ಮೊದಲಿಗರು. ಅನಂತರವೂ ಅವರ ಮೇಲ್ಪಂಕ್ತಿಯಂತೆ ನಡೆದವರು ಬಹು ಕಡಿಮೆ.

ವಿದ್ಯಾರ್ಥಿ ವೇತನವನ್ನು ತ್ಯಾಗ ಮಾಡಿದ ಹರದಯಾಳರಿಗೆ ಶ್ಯಾಮಜೀಯವರಿಂದ ಬೆಂಬಲ ದೊರೆಯಿತು. ಆಗ ಅವರಲ್ಲಿ ಮುಂದಿನ ತರ್ಕಬದ್ಧ ಆಲೋಚನೆ ಇದ್ದಿತು. ” ಈ ಬ್ರಿಟಿಷ್ ವಿಶ್ವ ವಿದ್ಯಾನಿಲಯಗಳಲ್ಲಿ ಕಲಿತು ಗಳಿಸಿದ ಪದವಿಗಳಿಂದ ರಾಷ್ಟ್ರಕ್ಕೆ ಆಗುವ ಲಾಭವೇನು? ” ಆ ಶಿಕ್ಷಣ ಬರಿಯ ಕಾಲಹಣರ ಎನ್ನಿಸಿತು. ಅವರು ತಮ್ಮ ಕಾಲೇಜಿನ ಪ್ರಿನ್ಸಿಪಾಲರಲ್ಲಿ ಹೋಗಿ ತಮ್ಮ ಶಿಕ್ಷಣವನ್ನು ತ್ಯಜಿಸುವುದಾಗಿ ಹೇಳಿದರು, ಹಾಗೆಯೇ ಬರೆದುಕೊಟ್ಟರು. ಅವರು ಶಿಕ್ಷಣವನ್ನು ಮುಂದುವರಿಸುವಂತೆ ಮಾಡಲು ಹಲವು ಮಿತ್ರರು ಯತ್ನಿಸಿದರು. ಆದರೆ ಹರದಯಾಳ್ ದೃಢನಿಶ್ಚಯಕ್ಕೆ ಬದ್ಧರಾಗಿದ್ದರು. ವಿಲಾಯತಿ ಶಿಕ್ಷಣಕ್ಕೆ ಮಂಗಳ ಹಾಡಿದರು.

ಮರಳಿ ಮಾತೃಭೂಮಿಗೆ

ಹರದಯಾಳ್ ಶಿಕ್ಷಣಕ್ಕೆ ತಿಲಾಂಜಲಿ ನೀಡುವ ಮೊದಲೇ, ಭಾರತವು ಸ್ವತಂತ್ರವಾಗಲು ಶ್ರಮಿಸಬೇಕಾದ, ಸಶಸ್ತ್ರ ಕ್ರಾಂತಿಯಲ್ಲಿ ವಿಶ್ವಾಸವಿಟ್ಟ ಒಂದು ರಾಜಕೀಯ ಸಂಘಟನೆಯ ಪೂರ್ಣ ವಿವರಗಳನ್ನು ಸಿದ್ಧಗೊಳಿಸಿದ್ದರು. ಆಕ್ಸ್ ಫರ್ಡಿನಲ್ಲಿ ವಿದ್ಯಾಭ್ಯಾಸವನ್ನು ತ್ಯಜಿಸಿ ಲಂಡನ್ನಿಗೆ ಬಂದು ಇಂಡಿಯಾ ಹೌಸಿನಲ್ಲಿ ತಂಗಿದರು.

ಆಗ ಲಂಡನ್, ರಷ್ಯದ ಕ್ರಾಂತಿಕಾರಿಗಳಿಗೂ ಐರ್ಲೆಂಡಿನ ಸ್ವಾತಂತ್ರ್ಯ ಹೋರಾಟಗಾರರಿಗೂ ಕೇಂದ್ರವಾಗಿತ್ತು. ಆ ರಾಜಕೀಯ ಚಳವಳಿಗಳ ಪ್ರಭಾವ ಭಾರತೀಯ ಕ್ರಾಂತಿಕಾರಿಗಳ ಮೇಲೂ ಆಗಿತ್ತು. ಪಾಠಕ್ ಎಂಬ ಯುವಕನು ಕೈಬಾಂಬುಗಳನ್ನು ತಯಾರಿಸಿ, ಪ್ರಯೋಗಿಸುವುದನ್ನು ಕಲಿತು ಅದನ್ನು ಕುರಿತು ಒಂದು ಪುಸ್ತಕವನ್ನು ರಚಿಸಿದ್ದನು. ಅದರ ಪ್ರತಿಗಳನ್ನು ಕಲ್ಲಚ್ಚಿನಲ್ಲಿ ತಯಾರಿಸಿ ಭಾರತಕ್ಕೆ ಕಳುಹಿಸಲಾಗಿತ್ತು. ಭಾರತದ ಹಲವಾರು ಕ್ರಾಂತಿಕಾರಿ ಗುಂಪುಗಳು ಆ ಪುಸ್ತಕದ ಸೂಚನೆಗಳನ್ನು ಅನುಸರಿಸಿ ಕ್ರಿಯಾಶೀಲವಾಗಿದ್ದವು.

ಲಂಡನ್ನಿನಲ್ಲಿ ಶ್ಯಾಮಜೀ ಕೃಷ್ಣಶರ್ಮ, ಸಾವರಕರ್ ಮತ್ತು ಹರದಯಾಳರ ನಡುವೆ ವಿಫುಲವಾಗಿ ಚರ್ಚೆ ನಡೆದು, ಹರದಯಾಳ್ ಭಾರತಕ್ಕೆ ರಾಜಕೀಯ ಕ್ರಾಂತಿಕಾರಿ ಪಕ್ಷವೊಂದನ್ನು ಸಂಘಟಿಸಬೇಕು ಎಂದು ನಿರ್ಧಾರವಾಯಿತು.

೧೯೦೮ರ ಜನವರಿಯಲ್ಲಿ ಹರದಯಾಳರು ಹೆಂಡತಿಯೊಡನೆ ಭಾರತಕ್ಕೆ ಬಂದರು.

ಸನ್ಯಾಸಿಯ ಶಿಬಿರ

ಹರದಯಾಳ್ ಪುಣೆಗೆ ಹೋಗಿ ತಿಲಕರನ್ನು ಭೇಟಿಯಾಗಿ ತಮ್ಮ ಮುಂದಿನ ಕಾರ್ಯಕ್ರಮಗಳನ್ನು ವಿವರಿಸಿದರು. ಅನಂತರ ಪತ್ನಿಯೊಂದಿಗೆ ಪಾಟಿಯಾಲಕ್ಕೆ ಹೋದರು. ಅಲ್ಲಿ ಅವರು ಬಂಧುಗಳ ಸಮ್ಮುಖದಲ್ಲಿ ಸನ್ಯಾಸ ಸ್ವೀಕರಿಸಲು ಪತ್ನಿಯ ಅನುಮತಿ ಪಡೆದರು. ಸಂಸಾರ ಜೀವನದಿಂದ ಮುಕ್ತರಾದರು.

ಎಂಟು ಮಂದಿ ಶಿಷ್ಯರನ್ನು ಸೇರಿಸಿ, ಕಾನ್ಪುರದಲ್ಲಿ ಪ್ರಸಿದ್ಧ ವಕೀಲರಾಗಿದ್ದ ಪೃಥ್ವೀನಾಥ ಚಕ್‌ರವರ ಮನೆಯಲ್ಲಿ ಶಿಷ್ಯರಿಗಾಗಿ ಒಂದು ಅಧ್ಯಯನ ಶಿಬಿರವನ್ನು ಆರಂಭಿಸಿದರು.

ಇಪ್ಪತ್ತೊಂದು ದಿನ ನಡೆದ ಆ ಅಧ್ಯಯನ ಶಿಬಿರದ ಪಠ್ಯಕ್ರಮವು ಕಾರ್ಯಕರ್ತರಿಗೆ ರಾಜಕೀಯ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ದೊರೆಕಿಸಿ ಕೊಡಲು ರೂಪಿತವಾಗಿತ್ತು. ಪ್ರಪಂಚದಲ್ಲಿ ನಡೆದಿರುವ ಹಲವಾರು ರಾಜಕೀಯ ಚಳವಳಿಗಳನ್ನು ಕ್ರಾಂತಿಗಳನ್ನೂ ಕುರಿತು ಅವರಿಗೆ ತಿಳಿವಳಿಕೆ ಕೊಡಲಾಯಿತು. ಫ್ರಾನ್ಸಿನ ಕ್ರಾಂತಿ, ಜರ್ಮನಿಯ ಐಕ್ಯತೆ, ಇಟಲಿಯ ಸ್ವಾತಂತ್ರ‍ ಸಮರ, ರಷ್ಯದಲ್ಲಿ  ಚಕ್ರವರ್ತಿಯ ವಿರುದ್ಧ ಕ್ರಾಂತಿ, ಪೋಲೆಂಡಿನ  ರಾಷ್ಟ್ರವಾದಿ ಹೋರಾಟ, ಜಪಾನಿನ ಉತ್ಥಾನ – ಇವೆಲ್ಲದರ ಅಧ್ಯಯನವಾಯಿತು. ಭಾರತದಲ್ಲಿ ಬ್ರಿಟಿಷರನ್ನು ಎದುರಿಸುವ ಬಗೆ ಹೇಗೆ, ಸ್ವತಂತ್ರ ಸಂಯುಕ್ತ ಭಾರತವನ್ನು ರೂಪಿಸುವ ಮಾರ್ಗ ಮೊದಲಾದ ಸಮಸ್ಯೆಗಳನ್ನು ಕುರಿತು ಶಿಬಿರದಲ್ಲಿ ಚರ್ಚೆ ಏರ್ಪಡುತ್ತಿತ್ತು.

ಸನ್ಯಾಸಿ ಶಿಷ್ಯರು

ಲಾಲಾ ಲಜಪತರಾಯ್ ಅವರು ಹರದಯಾಳರನ್ನು ಲಾಹೋರಿಗೆ ಆಹ್ವಾನಿಸಿ, ಅಲ್ಲೇ ನೆಲೆಸುವಂತೆ ಸೂಚಿಸಿದರು. ಅವರು ನಡೆಸುತ್ತಿದ್ದ “ಪಂಜಾಬಿ” ದಿನ ಪತ್ರಿಕೆಯ ಸಂಪಾದಕರನ್ನು ಬಂಧಿಸಿದ್ದುದರಿಂದ ಪತ್ರಿಕೆಯ ಸಂಪಾದಕರಾಗಲು ಅವರಿಗೆ ಒಬ್ಬ ಸಮರ್ಥ ವ್ಯಕ್ತಿಯ ಅವಶ್ಯಕತೆಯಿತ್ತು.

೧೯೦೮ರ ಏಪ್ರಿಲ್‌ನಲ್ಲಿ ಹರದಯಾಳ್ ತಮ್ಮ ಯುವಕ ಮಂಡಲಿಯೊಂದಿಗೆ ಲಾಹೋರಿಗೆ ಬಂದರು. ಅವರ ಆಶ್ರಮ ಲಾಹೋರಿನ ಶಿಕ್ಷಿತ ಜನರಿಗೆಲ್ಲಾ ಒಂದು ಕೇಂದ್ರವಾಯಿತು. ಶಿಷ್ಯವರ್ಗ ಹೆಚ್ಚಿತು.

ಶಿಷ್ಯರಿಗೆ ಶಿಕ್ಷಣ ನೀಡುವುದರ ಜೊತೆಗೆ ಹರದಯಾಳ್ ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಮೇಲೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಲೇಖನಗಳನ್ನು ಬರೆಯತೊಡಗಿದರು. “ಭಾರತದಲ್ಲಿ ಬ್ರಿಟಿಷರ ಶೈಕ್ಷಣಿಕ ನೀತಿ” ಮತ್ತು ಹಿಂದೂ ಜನಾಂಗದ ಮೇಲೆ ಬ್ರಿಟಿಷರ ಸಾಮಾಜಿಕ ವಿಜಯ” ಇವು ಮಾಡರ್ನ್‌‌ ರಿವ್ಯೂ” ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರಸಿದ್ಧವಾದ ಲೇಖನಗಳು.

ಕೆಲವೇ ತಿಂಗಳಲ್ಲಿ ಹರದಯಾಳರ ಅನುಯಾಯಿಗಳ ಸಂಖ್ಯೆ ಹೆಚ್ಚಿತು. ಆಗ ಮೊದಲಿದ್ದ ಮನೆ ಸಾಲದೆ ನವಾಕೋಟ್‌ ಬಡಾವಣೆಯಲ್ಲಿ ಒಂದು ಬಂಗಲೆಯನ್ನು ಬಾಡಿಗೆಗೆ ಹಿಡಿದರು.

ವೆಚ್ಚ ಏರುತ್ತಿತ್ತು. ಮೊದಲ ಕೆಲಸವು ಕಾರ್ಯಕರ್ತರಾದರೂ ತಮ್ಮ ತಮ್ಮ ಕೆಲಸಗಳನ್ನು ಪ್ರಾರಂಭಿಸಲು ಹಣ ಬೇಕಾಗಿತ್ತು. ಜನಕಾರ್ಯದಲ್ಲಿ ನಿರತರಾದವರಿಗೆ ಜನರೇ ಜೀವನ ಮಾರ್ಗವನ್ನು ಒದಗಿಸಬೇಕು ಎಂಬುದು ಹರದಯಾಳರ ಅಭಿಪ್ರಾಯವಾಗಿತ್ತು. ಇದನ್ನು ಕಾರ್ಯರೂಪಕ್ಕೆ ತರವುದು ಹೇಗೆ? ತಾವೆಲ್ಲ ಸನ್ಯಾಸ ಸ್ವೀಕರಿಸಿದರೆ ಪ್ರತಿಯೊಬ್ಬ ಧಾರ್ಮಿಕ ಹಿಂದುವಿನ ಗೃಹದಲ್ಲೂ ಸ್ವಾಗತ ನಿಶ್ಚಯ. ಪ್ರಚಾರ ಕಾರ್ಯವೂ ಹಗುರ; ಜೀವನದ ದಾರಿಯೂ ಸುಲಭ. ಈ ಸೂಚನೆಯು ಮುಂದೆ ಬಂದಾಗ ಹರದಯಾಳರಿಗೆ ಬಹಳವಾಗಿ ಹಿಡಿಸಿತು. ಅವರು ಜೆ.ಎನ್‌.ಚಟರ್ಜಿ ಮತ್ತು ಚರಣದಾಸ್ ಎಂಬ ಇಬ್ಬರು ಅನುಯಾಯಿಗಳನ್ನು ಸನ್ಯಾಸ ದೀಕ್ಷೆ ಪಡೆದು ಬರಲು ಹರಿದ್ವಾರಕ್ಕೆ ಕಳುಹಿಸಿದರು. ಅವರಿಬ್ಬರೂ ಹರಿದ್ವಾರಕ್ಕೆ ಬಂದು ಹಲವಾರು ಸನ್ಯಾಸ ಪಂಥಗಳ ಸಂಪರ್ಕ ಗಳಿಸಿ, ದೀಕ್ಷೆ ಪಡೆಯಲು ಪ್ರಯತ್ನಿಸಿದರು.

ಆದರೆ ಯಾವ ಪಂಥದವರೂ ಈ ರಾಜಕೀಯ ಕಾರ್ಯಕರ್ತರಿಗೆ ಸನ್ಯಾಸ ದೀಕ್ಷೆ ನೀಡಲು ಸಿದ್ಧರಿರಲಿಲ್ಲ! ನಿರಾಶರಾಗಿ ಅವರು ತಾವೇ ಸನ್ಯಾಸಿಗಳಾಗುವ ನಿರ್ಧಾರ ಮಾಡಿದರು.

ಭಾರತ ಬಿಟ್ಟರು

ಈ ನಡುವೆ ರಾಜಕೀಯ ಪರಿಸ್ಥಿತಿ ಬಿಗಡಾಯಿಸಿತ್ತು. ಬ್ರಿಟಿಷ್ ಸರ್ಕಾರದ ಕಣ್ಣು ಹರದಯಾಳರ ಮೇಲೆ ಬಿತ್ತು. ವೈಸರಾಯ್ ಕೌನ್ಸಿಲ್ ನ ಭಾರತೀಯ ಸದಸ್ಯರೊಬ್ಬರು ಲಹಪತರಾಯರಿಗೆ ಒಂದು ಸಂದೇಶ ಕಳುಹಿಸಿ, “ಲಾಲಾ ಹರದಯಾಳರ ಕಾರ್ಯ ರೀತಿಗಳ ಬಗ್ಗೆ ಉನ್ನತ ವರ್ತುಲಗಳಲ್ಲಿ ಸಂದೇಹವೆದ್ದಿದೆ. ಅವರನ್ನು ಉಳಿಸಲು ಅವರನ್ನು ದೇಶದಿಂದ ಹೊರ ಹೋಗಲು ಹೇಳಿ ” ಎಂದು ತಿಳಿಸಿದ್ದರು. ಭಾರತದಲ್ಲಿಯೇ ಉಳಿದು ಸೆರೆಮನೆಯಲ್ಲಿ ಕಾಲ ಕಳೆಯಬೇಕು; ಇಲ್ಲವೇ ಕಲೆಕಾಲದ ಮಟ್ಟಿಗಾದರೂ ದೇಶ ಬಿಟ್ಟು ಹೊರಹೋಗಬೇಕು. ಸಮಸ್ಯೆ ಇಷ್ಟು ಗಂಭೀರವಾದಾಗ ತಮ್ಮ ಅನುಯಾಯಿಗಳು ಕೆಲಸವನ್ನು ಬಿಡದೆ ಮುಂದುವರಿಸುವಂತೆ ಮಾಡಲು ಹೇಗೆ ಸಾಧ್ಯ ಎಂಬುದೂ ಮಹತ್ವಪೂರ್ಣ ಕಗ್ಗಂಟಾಯಿತು.

ಹರದಯಾಳ್ ತಾವು ನಡೆಸುತ್ತಿದ್ದ ಆಶ್ರಮವನ್ನು ಮೆಚ್ಚಿ, ತಮ್ಮ ಅನುಯಾಯಿಗಳಿಗೆ ಕೆಲಕಾಲ ತಮಗಾಗಿ ಕಾಯುವಂತೆ ಸೂಚನೆ ನೀಡಿದರು. ತಾವು ನಿರ್ಮಿಸಿದ್ದ ಸಂಘಟನೆಯನ್ನು ಕಾರ್ಯಶೀಲವಾಗಿಡುವ ಜವಾಬ್ದಾರಿಯನ್ನು ದೆಹಲಿಯಲ್ಲಿದ್ದ ತಮ್ಮ ಪ್ರಮುಖ ಅನುಯಾಯಿ ಮಾಸ್ಟರ್ ಅಮೀರ್ ಚಂದರಿಗೆ ಒಪ್ಪಿಸಿದರು. ದೆಹಲಿಯಿಂದ ಹೊರಟು ಹೋದರು. 

ತ್ತೆ ಯುರೋಪು

 

೧೯೦೮ರ ಮೇ ತಿಂಗಳಲ್ಲಿ ಲಂಡನ್ನಿನ ಇಂಡಿಯಾ ಹೌಸಿನಲ್ಲಿ ೧೮೫೭ರ ಸ್ವಾತಂತ್ರ್ಯ ಯುದ್ಧದ ಐವತ್ತನೆಯ ವಾರ್ಷಿಕೋತ್ಸವವು ಅದ್ಧೂರಿಯಿಂದ ನಡೆಯಿತು. ಭಾರತೀಯ ವಿದ್ಯಾರ್ಥಿಗಳು ಸ್ಮರಣಾರ್ಥವಾಗಿ ಹೊರಡಿಸಿದ್ದ ಬ್ಯಾಡ್ಜುಗಳನ್ನು ಧರಿಸತೊಡಗಿದ್ದರು. ಭಾರತೀಯರಲ್ಲಿ ಹರಡುತ್ತಿದ್ದ ಕ್ರಾಂತಿಕಾರಿ ಭಾವನೆಗಳು ಬ್ರಿಟಿಷ್ ಸರ್ಕಾರದ ಗಮನಕ್ಕೆ ಬಂದು ಗುಪ್ತಚರರ ಚಟುವಟಿಕೆಗಳು ಜೋರಾದವು.

೧೯೦೯ರಲ್ಲಿ ಭಾರತೀಯ ದೇಶಭಕ್ತ ಮದನಲಾಲ್ ಧಿಂಗ್ರಾ ಸರ್ ಕರ್ಜನ್ ವಾಯ್ ಲಿಯನ್ನು ಒಂದು ಸತ್ಕಾರ ಕೂಟದಲ್ಲಿ ಕೊಲೆ ಮಾಡಿದನು. ಅವನಿಗೆ ಮರಣ ದಂಡನೆಯಾಯಿತು.

ಇವೆಲ್ಲಾ ಕೂಡಿ ಲಂಡನ್ನಿನಲ್ಲಿ ಭಾರತೀಯ ಕ್ರಾಂತಿಕಾರಿಗಳು ತಮ್ಮ ಕಾರ್ಯ ನಿರ್ವಹಣೆ ಮಾಡಲು ಹೆಚ್ಚಿನ ಅಡೆತಡೆಗಳು ಉಂಟಾದವು. ಪ್ಯಾರಿಸಿಗೆ ಅವರು ತಮ್ಮ ಕೇಂದ್ರವನ್ನು ಬದಲಿಸಿಕೊಂಡರು. ಲಾಲಾ ಹರದಯಾಳರೂ ಪ್ಯಾರಿಸಿಗೆ ಹೋದರು.

ಮೇಡಂ ಕಾಮಾ ಮತ್ತು ಮಿತ್ರರು ಕೂಡಿ ಭಾರತೀಯ ಸ್ವಾತಂತ್ರಕ್ಕಾಗಿ ಪ್ರಚಾರ ಮಾಡಲು “ವಂದೇ ಮಾತರಂ” ಎಂಬ ನಿಯತಕಾಲಿಕ ಪತ್ರಿಕೆಯನ್ನು ಆರಂಭಿಸಿದರು. ಲಾಲಾ ಹರದಯಾಳ್ “ವಂದೇ ಮಾತರಂ ” ಪತ್ರಿಕೆಯ ಸಂಪಾದಕರಾದರು. ೧೯೦೯ರ ಸೆಪ್ಟೆಂಬರ್ ಹತ್ತರಂದು ಪ್ರಥಮ ಸಂಚಿಕೆ ಹೊರಟಿತು.

ಬ್ರಿಟನ್ ಮತ್ತು ಫ್ರಾನ್ಸ್ ಗಳಿಗೆ ಇದ್ದ ಮಿತ್ರ ಸಂಬಂಧಗಳಿಂದಾಗಿ ಇಂತಹ ಪತ್ರಿಕೆಯನ್ನು ಫ್ರಾನ್ಸ್ ನಲ್ಲಿ ಸಹ ಅಚ್ಚು ಮಾಡುವುದು ದುಸ್ತರವಾಗಿತ್ತು. ಆದ್ದರಿಂದ ಮೊದಲು ಜನೀವ (ಸ್ವಿಟ್ಜ್ ರ‍್ಲೆಂಡ್) ಅನಂತರ  ರಾಟರ್ ಡಾಂ (ಹಾಲೆಂಡ್)ಗಳಲ್ಲಿ ಪತ್ರಿಕೆ ಅಚ್ಚಾಗುತ್ತಿತ್ತು. ಮೊದಲ ಸಂಚಿಕೆಯ ಹುತಾತ್ಮ ಮದನಲಾಲ್ ಧಿಂಗ್ರಾನ ಸ್ಮರಣೆಗೆ ಅರ್ಪಿತವಾಗಿತ್ತು.

೧೯೧೦ರ ಮಾರ್ಚ್‌‌ನಲ್ಲಿ ಲಂಡನ್ನಿನಲ್ಲಿ ಸಾವರ್ಕರ್ ರನ್ನು ಬಂಧಿಸಿ ಭಾರತಕ್ಕೆ ಕರೆತರುತ್ತಿರುವಾಗ ಮಾರ್ಸೆಲ್ಸಿನಲ್ಲಿ ಅವರು ಹಡಗಿನಿಂದ ಸಮುದ್ರಕ್ಕೆ ಹಾರಿದರು. ಈಜುತ್ತಾ ಫ್ರಾನ್ಸಿನ ತೀರವನ್ನು ಸೇರಿದರು. ಅವರನ್ನು ಪಾರು ಮಾಡಲು ಪ್ರಯತ್ನಿಸಿದ ಮಿತ್ರ ಮಂಡಲಿಯಲ್ಲಿ ಹರದಯಾಳರೂ ಒಬ್ಬರಾಗಿದ್ದರು. ಅವರ ಪ್ರಯತ್ನಗಳು ಫಲಿಸದೆ ಸಾವರ್ ಕರರನ್ನು ಬ್ರಿಟಿಷರು ಮತ್ತೆ ಹಿಡಿದರು. ಆದರೂ ಹರದಯಾಳರು ಫ್ರಾನ್ಸಿನ ಕೆಲವು ಪಾರ್ಲಿಮೆಂಟ್ ಸದಸ್ಯರ ಮೂಲಕ ಅವರ ಬಿಡುಗಡೆಗೆ ವಿಶ್ವ ಪ್ರಯತ್ನ ಮಾಡಿದರು.

ಆದರೆ ಅವರ ನಿತ್ಯಜೀವನ ನಿರ್ವಹಣೆಯೇ ಬಹಳ ಕಷ್ಟವಾಗಿತ್ತು. ಪ್ಯಾರಿಸಿನಂತಹ ದುಬಾರಿ ಪ್ರದೇಶದಲ್ಲಿ ಅತ್ಯಂತ ಸರಳವಾಗಿ ಜೀವಿಸುವುದೂ ಸಹ ಅಸಾಧ್ಯವಾಗುತ್ತ ಬಂತು. ಶ್ರೀಮಂತರು ದೇಶಭಕ್ತಿಯ ಮಾತುಗಳಲ್ಲಿ ಧಾರಾಳವಾಗಿದ್ದಷ್ಟು ಹಣದ ವಿಚಾರದಲ್ಲಿ ಇರಲಿಲ್ಲ. ಹಲವು ಕಾಲ ಆಲೋಚಿಸಿ ಹರದಯಾಳರು ಸುಲಭದಿಂದ ತಮ್ಮ ಜೀವನ ನಿರ್ವಹಣೆ ಸಾಗುವಂತರ ಸ್ಥಳಕ್ಕೆ ಹೋಗಲು ನಿರ್ಧರಿಸಿದರು. ಬ್ರಿಟಿಷ್ ಸಾಮ್ರಾಜ್ಯದ ಯಾವುದೇ ಭಾಗದಲ್ಲಿಯಾದರೂ ಅವರಿಗೆ ಆಪತ್ತೇ ಕಾದಿರುತ್ತಿತ್ತು. ಆದರಿಂದ ಫ್ರೆಂಚರ ಆಧೀನದಲ್ಲಿದ್ದ ವೆಸ್ಟ್ ಇಂಡೀಸಿನ ಲಾಮಾರ್ಟಿನಿಕ್  ದ್ವೀಪಕ್ಕೆ ಹೋದರು.

ಲಾಮಾರ್ಟಿನಿಕ್‌ನಲ್ಲಿ ಕೆಲವು ಬಾಲಕರಿಗೆ ಇಂಗ್ಲಿಷ್ ಪಾಠ ಹೇಳಿಕೊಡುತ್ತ ಹರದಯಾಳ್ ಜೀವನ ನಿರ್ವಹಣೆ ಮಾಡುತ್ತಿದ್ದರು. ಸಹಜವಾಗಿ ಧಾರ್ಮಿಕ ಪ್ರವೃತ್ತಿಯ ಮನಸ್ಸಿನವರಾಗಿದ್ದುದರಿಂದ ವೈರಾಗ್ಯ ಬಲವಾಗುತ್ತ ಬಂದಿತು.

ಅಮೆರಿಕದಲ್ಲಿ ಭಾರತೀಯರ ಸಮಸ್ಯೆಗಳು

ಸ್ನೇಹಿತರೊಂದಿಗೆ ಸಮಾಲೋಚನೆ ಮಾಡಿ ೧೯೧೧ರ ಆದಿಭಾಗದಲ್ಲಿ ಹರದಯಾಳ್ ಅಮೆರಿಕದ ಸಂಯುಕ್ತ ಸಂಸ್ಥಾನಕ್ಕೆ ಹೋಗಿ ಸ್ಯಾನ್ ಫ್ರಾನ್ಸಿಸ್ಕೋವಿನಲ್ಲಿ ನೆಲೆಸಿದರು.

ಉತ್ತರ  ಅಮೆರಿಕದ ಫೆಸಿಫಿಕ್ ತೀರ ಪ್ರದೇಶದ ಕೆನಡಾಕ್ಕೆ ಸೇರಿದ ವಿಕ್ಟೋರಿಯ, ವಾಂಕುವರ್ ಪ್ರಾಂತಗಳಲ್ಲೂ ಸಂಯುಕ್ತ ಸಂಸ್ಥಾನಕ್ಕೆ ಸೇರಿದ ಕ್ಯಾಲ ಪೋನಿಯಾ, ಓರೆಗಾಂವ್ ರಾಜ್ಯಗಳಲ್ಲೂ ಸಹಸ್ರಾರು ಭಾರತೀಯರು ನೆಲೆಸಿದ್ದರು.

ಕೆನಡಾ ಸರ್ಕಾರಕ್ಕಾಗಲೀ, ಸಂಯುಕ್ತ ಸಂಸ್ಥಾನದ ಸರ್ಕಾರಕ್ಕಾಗಲೀ ಏಷ್ಯಾದಿಂದ ವಲಸೆಗರರು ಬಂದು ತಮ್ಮ ದೇಶಗಳಲ್ಲಿ ನೆಲೆಸುವುದು ಇಷ್ಟವಿರಲಿಲ್ಲ. ಅವು ಹಲವಾರು ತಡೆಗಳನ್ನು ವಿಧಿಸಿದವು.

೧೯೧೦ರಲ್ಲಿ ಕೆನಡಾ ಸರ್ಕಾರವು ರಷ್ಯದ ವಲಸೆಗಾರರ ಕಾನೂನನ್ನು ಜಾರಿ ಮಾಡಿತು. ಅದರ ಪ್ರಕಾರ ಕೆನಡಾಕ್ಕೆ ಬರಲು ಅನುಮತಿ ಮಾತರ ಪಡೆದು, ದಾರಿಯಲ್ಲಿ ಎಲ್ಲಿಯೂ ತಂಗದೆ ನೇರವಾಗಿ ಕೆನಡಾಕ್ಕೆ ಬಂದ ಏಷ್ಯನ್ನರಿಗೆ ಮಾತ್ರ ಅಲ್ಲಿ ನೆಲೆಸುವ ಅವಕಾಶ ದೊರೆಯುವಂತಾಯಿತು. ಸಂಯುಕ್ತ ಸಂಸ್ಥಾನಗಳಲ್ಲಿ ಅಲ್ಲಿನ ಪೌರತ್ವ ಪಡೆಯದವರು ಸ್ಥಿರ ಆಸ್ತಿಗಳನ್ನು ಮಾಡಿಕೊಳ್ಳುವ ಅವಕಾಶವಿರಲಿಲ್ಲ. ಉಚ್ಚ ವರ್ಗದ ಭಾರತೀಯರಿಗೆ ಮಾತ್ರ ಯುರೋಪಿಯನ್ ವೇಷ ಭೂಷಣಗಳನ್ನು ಧರಿಸಿದರಿಗೆ ಮಾತ್ರ ಪೌರತ್ವ ದೊರೆಯುತ್ತಿತ್ತು. ಸಿಖ್ಖರು ಅವರ ಮತದ ನಿಯಮದಂತೆ ಕೂದಲು ಕತ್ತರಿಸುವಂತಿರಲಿಲ್ಲ. ಹೀಗಾಗಿ ಅವರು ಆಸ್ತಿ ಮಾಡಿಕೊಳ್ಳುವಂತಿಲ್ಲ. ಈ ಪಕ್ಷಪಾತಗಳಿಂದಾಗಿ ಅಮೆರಿಕದಲ್ಲಿ ನೆಲೆಸಿದ್ದ ಭಾರತೀಯರಲ್ಲಿ ಅತೃಪ್ತಿ ಹರಡಿತ್ತು.

ಪರಿಸ್ಥಿತಿ ಹೀಗಿದ್ದಾಗ ಹರದಯಾಳ್ ಸ್ಯಾನ್ ಫ್ರಾನ್ಸಿಸ್ಕೋವಿಗೆ ಹೋದರು. ಭಾಯಿ ಪರಮಾನಂದಜಿ ಅವರೂ ಅವರೊಂದಿಗೆ ಕೆಲವು ಕಾಲ ಇದ್ದರು. ಬರ್ಕ್ಲೆ ಮತ್ತು ಸ್ಟಾನ್ ಪರ್ಡ್ ವಿಶ್ವ ವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿದ್ದ ಹಲವಾರು ವಿದ್ವಾಂಸರ ಸ್ನೇಹ ಸಂಪರ್ಕ ಗಳಿಸಿದರು. ಆ ವಿಶ್ವವಿದ್ಯಾನಿಲಯಗಳಲ್ಲಿ ಭಾರತೀಯ ತತ್ವಶಾಸ್ತ್ರವನ್ನು ಕುರಿತು ಭಾಷಣಗಳನ್ನು ಮಾಡಿದರು. ಭಾಷಣಗಳು ಮತ್ತು ಲೇಖನಗಳ ಮೂಲಕ ಭಾರತದಲ್ಲಿ ಬ್ರಿಟಿಷರ ಅತ್ಯಾಚಾರ, ಕ್ರಾಂತಿಕಾರಿ ಚಳವಳಿಗಳ ಬಗ್ಗೆ ಪ್ರಚಾರ ನಡೆಸಿದರು. ಅಲ್ಲಿ ಅಧ್ಯಯನ ನಡೆಸುತ್ತಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸಂಘಟಿಸಿದರು. ಅಲ್ಲಿನ ಭಾರತೀಯರಿಂದ ಹಣ ಕೂಡಿಸಿ ಐವರು ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಸಿದರು.

ವೈಸರಾಯನ ಮೇಲೆ ಬಾಂಬು

೧೯೧೨ರ ಡಿಸೆಂಬರ್ ೨೩ರಂದು ದೆಹಲಿಯಲ್ಲಿ ಭಾರಿ ಮೆರವಣಿಗೆ ಭಾರತದ ರಾಜಧಾನಿಯನ್ನು ಕಲ್ಕತ್ತೆಯಿಂದ ದೆಹಲಿಗೆ ವರ್ಗಾವಣೆ ಮಾಡುವ ಸಂಬಂಧವಾಗಿ ವೈಸರಾಯನಾಗಿದ್ದ ಲಾರ್ಡ್‌ ಹಾರ್ಡಿಂಜನ ಮೆರವಣಿಗೆ ಅದು. ದೇಶೀಯ ರಾಜ್ಯಗಳ ಅರಸರು, ಉನ್ನತ ಅಧಿಕಾರಿಗಳು, ವಿಧಾನ ಸಭೆಗಳ ಸದಸ್ಯರು – ಇವರೆಲ್ಲ ಓಲೈಸುತ್ತಿರಲು, ಭಾರಿ ಆನೆಯ ಮೇಲೆ ಅಂಬಾರಿಯಲ್ಲಿ ಕುಳಿತ ವೈಸರಾಯನ ಮೆರವಣಿಗೆ ಚಾಂದನಿ ಚೌಕ ಪ್ರದೇಶದಲ್ಲಿ ಸಾಗಿತ್ತು. ನೂರಾರು ಆನೆಗಳು, ಕುದುರೆಗಳು, ಸಹಸ್ರಾರು ಸೈನಿಕರು, ತೋಪುಗಳು, ಫಿರಂಗಿಗಳು, ರಣವಾದ್ಯಗಳು – ಕಳೆಗೂಡಿಸಿದ್ದವು. ರಾಜಮಾರ್ಗದ ಇಕ್ಕೆಲಗಳಲ್ಲೂ ಲಕ್ಷಾಂತರ ಜನ ನೆರೆದು ನೋಡುತ್ತಿದ್ದರು.

ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ಶಕ್ತಿ ಅಜೇಯ, ಅಮರ ಎನ್ನಿಸುತ್ತಿತ್ತು ಅದನ್ನು ನೋಡಿದವರಿಗೆ, ಇದ್ದಕ್ಕಿದ್ದಂತೆ ಆ ವೈಭವದ ಕೇಂದ್ರವಾಗಿದ್ದ ವೈಸರಾಯನ ಮೇಲೆ ಒಂದು ಕೈ ಬಾಂಬು ಬಂದೆರಗಿ ಸಿಡಿಯಿತು!

ಆನೆಯ ನಡಿಗೆ ತಪ್ಪಿತು. ವೈಸರಾಯನ ಅಂಗ ರಕ್ಷಕನಿಗೆ ಏಟಾಗಿ ಚಿಮ್ಮಿದ ರಕ್ತದಿಂದ ವೈಸರಾಯನಿಗೆ ರಕ್ತಾಭಿಷೇಕವಾಯಿತು. ಭಾರತದ ಸ್ವಾತಂತ್ರಾ ಕಾಂಕ್ಷೆ ಬತ್ತಿ ಹೋಗಿಲ್ಲವೆಂಬುದು ಲೋಕಕ್ಕೆ ವಿದಿತವಾಯಿತು.

ಪೊಲೀಸರಿಂದ ವಿಚಾರಣೆ ಪ್ರಾರಂಭವಾಯಿತು.

ಲಾಲಾ ಹರದಯಾಳ್ ಸಂಘಟಿಸಿದ್ದ ಕ್ರಾಂತಿಕಾರಿ ತಂಡದ ಕಾರ್ಯಚರಣೆ ಅದು. ಬಂಗಾಳದಿಂದ ತಲೆ ತಪ್ಪಿಸಿಕೊಂಡು ಬಂದಿದ್ದ ಕ್ರಾಂತಿಕಾರಿ ರಾಸಬಿಹಾರಿ ಬೋಸರೇ ಬಾಂಬನ್ನು ಎಸೆದವರು.

ವೈಸರಾಯನಿಗೆ ಏನೂ ಆಗಲಿಲ್ಲ. ಯಾರ ಮೇಲೂ ಆರೋಪಕ್ಕೆ ತಕ್ಕಷ್ಟು ಸಾಕ್ಷ್ಯ ದೊರೆಯಲಿಲ್ಲ. ಆದರೆ ಇಂತಹ ಇಂದು ಧೈರ್ಯ ಪ್ರದರ್ಶನ ನಡೆದಾಗ ಸರ್ಕಾರವು ಯಾರನ್ನಾದರೂ ಶಿಕ್ಷಿಸಲೇ ಬೇಕಲ್ಲವೇ ! ಹರದಯಾಳರ ಪ್ರಮುಖ ಅನುಯಾಯಿಗಳಾಗಿದ್ದ ಅಮೀರ್ ಚಂದ್, ಅವದ ಬಿಹಾರಿ, ಬಾಲಮುಕುಂದ ಹಾಗೂ ವಸಂತ ಕುಮಾರ – ಈ ನಾಲ್ವರಿಗೆ ಮರಣ ದಂಡನೆಯಾಯಿತು. ಕ್ರಾಂತಿಕಾರಿ ಗುಂಪಿನಲ್ಲಿದ್ದ ದೀನನಾಥನೆಂಬುವನೇ, ದ್ರೋಹವೆಸಗಿ, ಪೊಲೀಸರ ಸಾಕ್ಷಿಯಾದ.

ಆತ್ಮಗೌರವದ ಪ್ರಶ್ನೆ.

ಈ ಬಾಂಬಿನ ಪ್ರಕರಣವು ಕ್ರಾಂತಿಕಾರಿ ಚಳವಳಿಗೆ ನವಚೇತನ ನೀಡಿತು. ಹರದಯಾಳರು ಭಾವಪೂರ್ಣವಾದ ಭಾಷೆಯಲ್ಲಿ, ಈ ಪ್ರಕರಣವನ್ನು ಕುರಿತು “ಯುಗಾಂತರ ಸರ್ಕ್ಯುಲರ್” ಎಂಬ ಕಿರು ಪುಸ್ತಕವನ್ನು ರಚಿಸಿದರು. ಅದನ್ನು ಪ್ಯಾರಿಸಿನಲ್ಲಿ ಮುದ್ರಿಸಿ, ಫ್ರೆಂಚ್ ಸಾರಿಗೆಗಳ ಮೂಲಕ ಭಾರತಕ್ಕೆ ಕಳುಹಿಸಲಾಯಿತು.

ಈ ನಡುವೆ ಸಂಯುಕ್ತ ಸಂಸ್ಥಾನದ ಭಾರತೀಯರಲ್ಲಿ ಹರಡಿದ್ದ ಅತೃಪ್ತಿಯ ರಾಜಕೀಯ ಸಂಘಟನೆಯ ರೂಪ ತಳೆಯಿತು. ಸೇಂಟ್ ಜಾನ್ ಎಂಬ ಊರಿನಲ್ಲಿ ಭಾರತೀಯ ವಲಸೆಗಾರ ಸಮ್ಮೇಳನವೊಂದನ್ನು ಇಂಡಿಯಾ ಇಂಡಿಪೆಂಡೆನ್ಸ್ ಲೀಗ್ ಏರ್ಪಡಿಸಿತು. ಅಲ್ಲಿ ಗದರ್ ಪಕ್ಷ ಜನ್ಮ ತಳೆದು, ಹರದಯಾಳ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾದರು.

ಅಲ್ಲಿನ ಭಾರತೀಯರು ತಮ್ಮ ಚಳವಳಿಯ ನೇತೃತ್ವವಹಿಸುವಂತೆ ಹರದಯಾಳರನ್ನು ಕೇಳಿಕೊಂಡರು. ಅವರ ನೇತೃತ್ವದಲ್ಲಿ ಶಿಷ್ಯಮಂಡಲವೊಂದು ವಾಷಿಂಗ್ಟನ್ನಿಗೆ ಹೋಗಿ, ಅಮೆರಿಕದ ಕಾಂಗ್ರೆಸ್ಸಿನ ಮುಂದೆ ತಮ್ಮ ಮನವಿ ಯನ್ನಿಟ್ಟರು. ಅದರ ಮುಖ್ಯ ಅಂಶವೆಂದರೆ ಸಿಕ್ಖರ ಮತಕ್ಕೆ ಹಾನಿಬರುವ ಷರತ್ತುಗಳನ್ನು ಹಾಕದೇ ಪೌರತ್ವ ನೀಡಬೇಕೆಂಬುದು. ಆದರೆ ಬ್ರಿಟಿಷ್ ಸರ್ಕಾರವು ಭಾರತೀಯರನ್ನೂ ಇತರ ಪ್ರಾಚ್ಯ ಜನಾಂಗಗಳಂತೆಯೇ ಪರಿಗಣಿಸಬಹುದೆಂದೂ ಯಾವುದೇ ವಿನಾಮತಿಯ ಅವಶ್ಯಕತೆಯಿಲ್ಲವೆಂದೂ ತಿಳಿಸಿತು. ಶಿಷ್ಟ ಮಂಡಲಿಗೆ ದೊರೆತುದುದೆಲ್ಲ ಪತ್ರಿಕಾ ಪ್ರಚಾರ ಮಾತ್ರ. ಅದು ಬರಿಗೈಯಲ್ಲಿ ಹಿಂತಿರುಗಿತು.

ಭಾರತವು ಗುಲಾಮ ದೇಶವಾಗಿರುವತನಕ ಪರದೇಶಗಳಲ್ಲಿ ಭಾರತೀಯರಿಗೆ ಸಮಾನ ಹಕ್ಕುಗಳಾಗಲಿ, ಗೌರವವಾಗಲಿ ದೊರೆಯದು ಎಂದು ಅಮೆರಿಕದಲ್ಲಿ ನೆಲೆಸಿದ್ದ ಭಾರತೀಯರಿಗೆಲ್ಲ ಹರದಯಾಳರು ಸ್ಪಷ್ಟಪಡಿಸಿದರು. ದೇಶದ ಸ್ವಾತಂತ್ರ್ಯ ಅಮೆರಿಕದಲ್ಲಿ ನೆಲೆಸಿದ್ದ ಭಾರತೀಯರ ಆತ್ಮಗೌರವದ ಪ್ರಶ್ನೆಯೂ ಆಯಿತು.

ಕ್ರಾಂತಿಗಾಗಿ ಹಣ ಕೂಡಿತು. ಜನ ಬಂದರು. ಅವರಲ್ಲಿ ಲೂಧಿಯಾನಾದಿಂದ ಬಂದಿದ್ದ ಯುವಕ ಕರ್ತಾರ್ ಸಿಂಹ, ಮಹಾರಾಷ್ಟ್ರದ ವಿಷ್ಣು ಪಿಂಗಳೆ ಹರದಯಾಳರ ಪರಮನಿಷ್ಠ ಅನುಯಾಯಿಗಳಾದರು.

ಗದರ್

ಕ್ರಾಂತಿಯ ಪ್ರಚಾರಕ್ಕಾಗಿ ಒಂದು ಪತ್ರಿಕೆ ಅವಶ್ಯವಾಗಿತ್ತು. ಹರದಯಾಳರು ಸ್ಯಾನ್ ಫ್ರಾನ್ಸಿಸ್ಕೋವಿನ ಮಿಷನ್ ಡಿಸ್ಟ್ರಿಕ್ಟಿನ್ ೪೩೬ನೇ ನಂಬರು ಮನೆಯನ್ನು ಬಾಡಿಗೆಗೆ ಹಿಡಿದು ಅಲ್ಲಿ ಪತ್ರಿಕೆ ನಡೆಸಲು ಮುದ್ರಣಾಲಯವನ್ನೂ ಪಕ್ಷದ ಮುಖ್ಯ ಕಚೇರಿಯನ್ನೂ ತೆರೆದರು. ತಮ್ಮ ಕಾರ್ಯಕೇಂದ್ರಕ್ಕೆ ಬಂಗಾಳದಲ್ಲಿ ಕ್ರಾಂತಿ ಸಂದೇಶ ಸಾರಿದ ಪತ್ರಿಕೆ ಯುಗಾಂತರ ಸ್ಮರಣೆಗಾಗಿ “ಯುಗಾಂತರ ಆಶ್ರಮ” ಎಂದು ಹೆಸರಿಟ್ಟರು. ಕಾರ್ಯಕರ್ತರ ಜೀವನ ನಿರ್ವಹಣೆಗೆಂದು ಭಾರತೀಯ ರೈತರು ಗೋಧಿ, ಬೇಳೆ, ತರಕಾರಿ, ಹಣ್ಣುಗಳನ್ನು ಒದಗಿಸುತ್ತಿದ್ದರು. ಅವರೆಲ್ಲ ಆಶ್ರಮದಲ್ಲಿ ಒಂದು ಕುಟುಂಬದಂತೆ ನೆಲೆಸಿ ಕ್ರಾಂತಿಗಾಗಿ ದುಡಿಯ ಹತ್ತಿದರು.

೧೯೧೩ರ ನವೆಂಬರ್ ೧ನೆಯ ದಿನಾಂಕ ” ಗದರ್ ” ಪತ್ರಿಕೆಯ ಮೂದಲ ಸಂಚಿಕೆ ಹೊರಬಿದ್ದಿತು. (ಪಂಜಾಬಿ ಭಾಷೆಯಲ್ಲಿ ಗದರ್ ಎಂದರೆ ದಂಗೆ) ಪೂರ್ವಭಾವಿಯಾಗಿ ನಗರದ ಪ್ರಮುಖರನ್ನೂ ಪತ್ರಕರ್ತರನ್ನೂ ಒಂದು ಭೋಜನ ಕೂಟಕ್ಕ ಆಹ್ವಾನಿಸಿ ಪತ್ರಿಕೆಯು ಭಾರತದ ಸ್ವಾತಂತ್ರ‍್ಯಕ್ಕಾಗಿ ಸಮರ ನಡೆಸುವುದಕ್ಕಾಗಿಯೇ ಮೀಸಲಾಗಿದೆ ಎಂದು ತಿಳಿಸಿದರು. ಸ್ಯಾನ್ ಫ್ರಾನ್ಸಿಸ್ಕೋವಿನ ಪತ್ರಿಕೆಗಳಲ್ಲೆಲ್ಲ ಈ ಸುದ್ದಿ ಹೊರಬಂದಿತು.

ಪತ್ರಿಕೆಯ ಮೊದಲನೆಯ ಸಂಚಿಕೆಯಲ್ಲಿ ಈ ಘೋಷಣೆ ಇತ್ತು:

ನಮ್ಮ ಹೆಸರೇನು?

ದಂಗೆ !

ನಮ್ಮ ಕೆಲಸವೇನು?

ದಂಗೆ!

ಎಲ್ಲಿ ?

ಭಾರತದಲ್ಲಿ !

ಯಾವಾಗ ?

ಕೆಲವೇ ವರ್ಷಗಳಲ್ಲಿ !

ಏಕೆ ?

ಜನ ಬ್ರಿಟಿಷರ ದಬ್ಬಾಳಿಕೆಯನ್ನು ಇನ್ನು ಸಹಿಸಲಾರರು.”

ಬ್ರಿಟಿಷ್ ಸರ್ಕಾರದ ದಬ್ಬಾಳಿಕೆ, ಭಾರತೀಯರನ್ನು ಅದು ತುಳಿಯುತ್ತಿದ್ದ ರೀತಿ ಎಲ್ಲವನ್ನೂ ಪತ್ರಿಕೆ ಸಾರಿ ಹೇಳಿತು. ಅಂಡಮಾನಿನ ಜೈಲಿನಲ್ಲಿ ವೀರ ಸಾವರ್ ಕರರು ಎಣ್ಣೆಯ ಗಾಣವನ್ನು ಎಳೆಯುತ್ತಿದ್ದ ಚಿತ್ರವನ್ನು ಪ್ರಕಟಿಸಿತು.

ಪ್ರಪಂಚದ ವಿವಿಧ ದೇಶಗಳ ಸ್ವಾತಂತ್ರ್ ಸಮರಗಳ ವಿವರಗಳು, ಭಾರತದಲ್ಲಿ ಬ್ರಿಟಿಷ್ ಅತ್ಯಾಚಾರಗಳ ವಿವರಗಳು, ಭಾತರದ ಆರ್ಥಿಕ ಅವನತಿ, ಪರದೇಶಗಳಲ್ಲಿ ಭಾರತೀಯರು ಗುರಿಯಾಗಿದ್ದ ಅಪಮಾನದ ಸ್ಥಿತಿಗತಿಗಳು, ಪಕ್ಷಪಾತದ ಕಾನೂನುಗಳು – ಹೀಗೆ ವಿವಿಧ ಲೇಖನಗಳು ಪ್ರಕಟಿಸಿ ಓದುಗರಲ್ಲಿನ ಸ್ವಾತಂತ್ರೇಚ್ಛೆ ಉತ್ಕಟಗೊಳ್ಳುವಂತೆ ಪತ್ರಿಕೆ ರೂಪಗೊಂಡಿತು. ಸಾವರ್ಕರರ ೧೮೫೩ರ ಸ್ವಾತಂತ್ರ್ಯ ಯುದ್ಧ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು.

ಕ್ರಾಂತಿಗೆ ಸಿದ್ಧತೆ

ಸ್ವಾತಂತ್ರ್ಯ ಪಡೆಯಲು ಪ್ರಚಾರ ಮಾತ್ರ ಸಾಕೇ ? ಭಾರತೀಯರನ್ನು ಕ್ರಾಂತಿಗಾಗಿ ಸಿದ್ಧಗೊಳಿಸುವುದು ಮತ್ತು ಯಾವ ದೇಶದಿಂದ ಅಂತಹ ಕ್ರಾಂತಿ ಸಮರದಲ್ಲಿ ನಾವು ಪ್ರೋತ್ಸಾಹವನ್ನು ಪಡೆಯುವುದು – ಈ ಸಮಸ್ಯೆಗಳತ್ತ ಹರದಯಾಳರು ಗಮನ ನೀಡಿದರು. ಯುವಕರನ್ನು ಸಂಘಟಿಸುವುದರೊಂದಿಗೆ ಭಾರತೀಯ ಸೇನೆಯಲ್ಲಿ ಪ್ರಚಾರ ನಡೆಸುವ ಕಾರ್ಯಕ್ಕೆ ಕೈಯಿಟ್ಟರು. ಭಾರತೀಯ ಸೇನೆಯಲ್ಲಿ ಸಿಖ್ಖರು ಒಂದು ಪ್ರಮುಖ ಅಂಗವಾಗಿದ್ದುದು ಸಹಕಾರಿಯಾಯಿತು. ರಜೆಗಾಗಿ ಬಂದ ಸೈನಿಕರು ಮತ್ತು ಸೈನಿಕ ನೆಂಟರ ಮೂಲಕ ಗುಪ್ತ ಪ್ರಚಾರ ಭಾರತೀಯ ಸೇನಾ ಸ್ಥಾವರಗಳನ್ನು ಮುಟ್ಟಿತು.

ಅಗ ಇಂಗ್ಲೆಂಡನ್ನು ಎದುರಿಸಿ ತಲೆಯೆತ್ತಿ ನಿಂತಿದ್ದ ಏಕೈಕ ಪ್ರಬಲ ರಾಷ್ಟ್ರವೆಂದರೆ ಜರ್ಮನಿ. ಹರದಯಾಳ್ ಜರ್ಮನಿಯ ಸಂಪರ್ಕ ಬೆಳೆಸಿದರು. ೧೯೧೩ರ ಡಿಸೆಂಬರ್ ೩೦ರಂದು ಸ್ಯಾಕಮೆಂಟ್ರೋ ಎಂಬ ಊರಿನಲ್ಲಿ ಯುಗಾಂತರ ಆಶ್ರಮದ ಆಶ್ರಯದಲ್ಲಿ ಭಾರಿ ಸಭೆ ನಡೆಯಿತು. ಅಲ್ಲಿ ವೇದಿಕೆಯ ಮೇಲೆ ಜರ್ಮನ್ ಸರ್ಕಾರದ ಪ್ರತಿನಿಧಿಯು ಗದರ್ ಪಕ್ಷದ ನಾಯಕರೊಂದಿಗೆ ಉಪಸ್ಥಿತನಿದ್ದನು.

ಹೊತ್ತುತ್ತಿದ್ದ ಈ ಕ್ರಾಂತಿಯ ದಳ್ಳುರಿಯನ್ನು ಕಂಡು ಬ್ರಿಟಿಷ್ ಸರ್ಕಾರ ಸುಮ್ಮನೆ ಇರಲಿಲ್ಲ. ಅಮೆರಿಕ ಸರ್ಕಾರದ ಮೇಲೆ ಒತ್ತಾಯ ಹೇರಿ ಅಮೆರಿಕದ ವಲಸೆಗರರ ಕಾನೂನಿನಂತೆ ಹರದಯಾಳರನ್ನು ಬಂಧಿಸುವಂತೆ ಮಾಡಿತು. ಐನೂರು ಡಾಲರುಗಳ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಿ ವಲಸೆಗಾರರ ಇಲಾಖೆಯ ಮೊಕದ್ದಮೆ ನಡೆಸಿತು.

ಇನ್ನು ಸಂಯುಕ್ತ ಸಂಸ್ಥಾನಗಳಲ್ಲಿ ಸ್ವತಂತ್ರವಾಗಿದ್ದು ತಮ್ಮ ಕಾರ್ಯವನ್ನು ಮುಂದುವರಿಸುವ ಸಾಧ್ಯತೆಯಿರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅಮೆರಿಕ ಸರ್ಕಾರವು ಹರದಯಾಳರನ್ನು ಬ್ರಿಟಿಷ್ ಸರ್ಕಾರಕ್ಕೆ ಒಪ್ಪಿಸಿಬಿಟ್ಟರೆ ಕಲ್ಪಿಸಿಕೊಳ್ಳಲಾರದಂತಹ ಆಪತ್ತು ಕಾದಿತ್ತು. ಅವರು ಕಟ್ಟಿದ ಇಡೀ ಆಂದೋಳನಕ್ಕೆ ಆಘಾತವಾಗುತ್ತಿತ್ತು. ಇವನ್ನೆಲ್ಲ ಯೋಚಿಸಿ ಹರದಯಾಳ್ ಸ್ವಿಟ್ಜರ್ಲೇಂಡಿಗೆ ಪ್ರಯಾಣ ಮಾಡಿದರು.

ಕೋಮಟಾಗಾ ಮಾರು

ಕೆನಡಾದ ಕಾನೂನಿನಂತೆ ಭಾರತದಿಂದ ಕೆನಡಾಕ್ಕೆ ಹೊರಟ ಜಹಜಿನಲ್ಲಿ ಪ್ರಯಾಣ ಮಾಡಿದವರು ಅಲ್ಲಿ ನೆಲಸಬಹುದಾಗಿತ್ತಷ್ಟೆ. ಭಾರತದಿಂದ ನೇರವಾಗಿ ಕೆನಡಾಕ್ಕೆ ಯಾವ ಜಹಜೂ ಪ್ರಯಾಣ ಮಾಡುತ್ತಿರಲಿಲ್ಲ. ಆ ಸಮಸ್ಯೆಯ ನಿವಾರಣೆಗಾಗಿ ಗುರುದತ್ ಸಿಂಗ್ ಎಂಬುವರು ಒಂದು ಲಕ್ಷ ಡಾಲರನ್ನು ಬ್ಯಾಂಕಿನಲ್ಲಿ ಕೂಡಿಸಿಟ್ಟು ಗುರುನಾನಕ್ ನ್ಯಾವಿಗೇಷನ್ ಕಂಪನಿಯನ್ನು ಆರಂಭಿಸಿದರು. ಕಂಪನಿಯ ಪರವಾಗಿ ಕೋಮಾಗಾಟಾ ಮಾರು ಎಂಬ ಜಪಾನೀ ಜಹಜನ್ನು ಬಾಡಿಗೆಗೆ ಪಡೆದು ಕಲ್ಕತ್ತೆಗೆ ತಂದರು. ಅದರಲ್ಲಿ ಐನೂರು ಮಂದಿ ಕೆನಡಾಕ್ಕೆ ಪ್ರಯಾಣ ಬೆಳೆಸಿದರು. ಈ ಪ್ರಯಾಣವನ್ನು ಹೇಗಾದರೂ ತಡೆಯಲು ಬ್ರಿಟಿಷ್ ಸರ್ಕಾರವು ಗುರುದತ್‌ ಸಿಂಗರನ್ನು ಹಾಂಗ್ ಕಾಂಗ್ ನಲ್ಲಿ ಬಂಧಿಸಿ ಬೆದರಿಸಿ ನೋಡಿತು. ಆದರೆ ಆತ ಧೈರ್ಯದಿಂದ ನಷ್ಟಗಳನ್ನೆದುರಿಸಿ ಕೆನಡಾಕ್ಕೆ ಹಡಗನ್ನು ಒಯ್ದರು.

೧೯೧೪ರ ಮೇ ೨೨ನೆಯ ದಿನಾಂಕ ಆ ಹಡಗು ವಾಂಕುವರ್ ಬಂದರಿಗೆ ಬಂದಿತು. ಆದರೆ ಕೆನಡಾದ ಅಧಿಕಾರಿಗಳು ಬಂದವರನ್ನು ಪ್ರವೇಶಿಸಲು ಅದಕ್ಕೆ ಅನುಮತಿ ನೀಡಲಿಲ್ಲ. ವಾಂಕುವರಿನಲ್ಲಿದ್ದ ಭಾರತೀಯರು ಮಾಡಿದ ಸರ್ವ ಪ್ರಯತ್ನಗಳೂ ನಿಷ್ಫಲವಾದವು. ಕೆನಡಾದ ಅಧಿಕಾರಿಗಳು ಹಡಗನ್ನು ಉಡಾಯಿಸುವುದಾಗಿ ಹೆದರಿಸಿದರು. ಆದರೆ ಅಲ್ಲಿನ ಭಾರತೀಯರು ಇಡೀ ವಾಂಕುವರನ್ನೇ ಸುಟ್ಟು ಹಾಕಲು ಸಿದ್ಧರಿರುವುದಾಗಿ ಪ್ರತಿ ಬೆದರಿಕೆ ಹಾಕಿದರು.

ಎರಡು ತಿಂಗಳು ಸೆಣಸಾಟ ವಿಫಲವಾಯಿತು. ಕೆನಡಾ ಸರ್ಕಾರವು ನಷ್ಟ ಪರಿಹಾರವೆಂದು ಕೆಲವು ಲಕ್ಷ ರೂಪಾಯಿಗಳನ್ನು ನೀಡಿ ಹಡಗು ಹಿಂತಿರುಗುವಂತೆ ಮಾಡಿತು. ಭಾರತದಿಂದ ಹೊರಟಿದ್ದ ಪ್ರಯಾಣಿಕರು ಈ ವರ್ತನೆಯಿಂದ ಕೆರಳಿದರು. ಹಿಂದಕ್ಕೆ ಪ್ರಯಾಣ ಮಾಡುವಾಗ ಜಪಾನಿನ ಬಂದರುಗಳಲ್ಲಿ ಅಸ್ತ್ರ ಶಸ್ತ್ರಗಳನ್ನು ಕೂಡಿಸಿಕೊಂಡರು. ಕಲ್ಕತ್ತೆಗೆ ಕೋಮಾಗಾಟಾ ಮಾರು ಬಂದಾಗ ಬ್ರಿಟಿಷ್ ಸೇನೆ ಅದನ್ನು ಸುತ್ತುವರಿದು ಅದರಲ್ಲಿದ್ದವರನ್ನು ಬಲವಂತವಾಗಿ ರೈಲು ಹತ್ತಿಸಿ, ಬಂಧಿಗಳನ್ನಾಗಿ ಮಾಡಿ ಶಿಬಿರಕ್ಕೆ ಕೊಂಡೊಯ್‌ಉವ ಪ್ರಯತ್ನ ಮಾಡಿತು. ಪರಿಣಾಮವಾಗಿ ಸೇನೆಗೂ ಪ್ರಯಾಣಿಕರಿಗೂ ಗುಂಡಿನ ಕಾಳಗ ನಡೆದು ಹದಿನೆಂಟು ಮಂದಿ ಸಿಖ್ಖರು ಮರಣ ಹೊಂದಿದರು. ಕೆಲಸದವರು ಬಂಧಿಗಳಾದರು. ಕೆಲವರು ತಪ್ಪಿಸಿಕೊಂಡರು.

ವಿಫಲವಾದ ದಂಗೆ

ಕೋಮಾಗಾಟ ಮಾರು ಪ್ರಕರಣದಿಂದ ಅಮೆರಿಕದಲ್ಲಿ ನೆಲೆಸಿದ್ದ ಭಾರತೀಯರು ಸಿಡಿದೆದ್ದರು. ಗದರ್ ಪಕ್ಷವು ಭಾರತಕ್ಕೆ ಬೇಗ ಹಿಂತಿರುಗಲು ವಿದೇಶಗಳಲ್ಲಿ ನೆಲೆಸಿದ್ದ ಭಾರತೀಯರಿಗೆ ಕರೆ ನೀಡಿತು. ೧೯೧೪ರ ಆಗಸ್ಟಿನಲ್ಲಿ ಮೊದಲನೆಯ ಮಹಾಯುದ್ಧ ಆರಂಭವಾಯಿತು.

ಆಗ ಹರದಯಾಳ ಸ್ವಿಟ್ಜರ‍್ಲಂಡಿನ ಜನೀವಾದಲ್ಲಿದ್ದರು. ಅವರಿಗೂ ಜರ್ಮನಿಗೂ ಸಂಪರ್ಕ ಬೆಳೆದು ಅವರು ತುರ್ಕಿಗೆ ಹೋದರು. ತುರ್ಕಿಯ ಮೂಲಕ ಭಾರತದ ಮೇಲೆ ದಾಳಿ ಮಾಡಲು ಯೋಜನೆಯೊಂದು ರೂಪಗೊಂಡಿತು. ಆ ವೇಳೆಗಾಗಲೇ ಜರ್ಮನಿಯಲ್ಲಿ ಚಂಪಕರಮಣ ಪಿಳ್ಳೆಯವರ ನೇತೃತ್ವದಲ್ಲಿ ಬರ್ಲಿನ್ ಸಮಿತಿ ಎಂದು ಪ್ರಸಿದ್ಧವಾದ “ಭಾರತೀಯ ಸ್ವಾತಂತ್ರ‍್ಯ ಸಮಿತಿ ಸ್ಥಾಪನೆಯಾಗಿತ್ತು. ಹರದಯಾಳರು ಬರ್ಲಿನ್ನಿಗೆ ಹೋದರು. ಗದರ್ ಪಕ್ಷ, ಬರ್ಲಿನ್ ಸಮಿತಿ ತಮ್ಮ ಪ್ರಯತ್ನಗಳನ್ನು ಏಕಸೂತ್ರಗೊಳಿಸಿದವು.

ಕ್ಯಾಲಿಫೋರ್ನಿಯಾದಿಂದ ಹೊರಟ ಕರ್ತಾರ್ ಸಿಂಹ ಮತ್ತು ಪಿಂಗಳೆ ಇಬ್ಬರೂ ೧೯೧೪ರ ಕೊನೆಯಲ್ಲಿ ಭಾರತಕ್ಕೆ ಬಂದರು. ರಾಸಬಿಹಾರಿ ಬೋಸರ ಸಂಪರ್ಕ ಬೆಳೆಸಿದರು. ೧೯೧೫ರ ಫೆಬ್ರುವರಿ ೨೧ಕ್ಕೆ ಸೇನೆಯಲ್ಲಿ ಬಂಡಾಯವೆಬ್ಬಿಸುವುದು ಎಂದು ನಿರ್ಧಾರವಾಯಿತು. ಮೂವರು ಲಾಹೋರ್, ಮೀರತ್, ಅಲಹಾಬಾದ್, ಕಾನ್ಪುರ, ಆಗ್ರಾ, ವಾರಾಣಸಿಗಳ ಸೇವಾ ಸ್ಥಾವರಗಳಿಗೆ ಭೇಟಿಯಿತ್ತರು. ಪ್ರತಿಯೊಂದು ಸ್ಥಾವರದಲ್ಲಿಯೂ ಕ್ರಾಂತಿ ಸಮಿತಿಗಳು ರಚಿಸಲ್ಪಟ್ಟವು. ಆದರೆ ಅವರುಗಳೊಂದಿಗೆ ಕೈಪಾಲ ಸಿಂಹನೆಂಬೊಬ್ಬ ದ್ರೋಹಿ ಸೇರಿದ್ದ. ಅವನಿಂದ ಸುದ್ದಿಯೆಲ್ಲ ಸರ್ಕಾರಕ್ಕೆ ತಿಳಿದು ಹೋಯಿತು. ತುಕಟಿಗಳ ವರ್ಗಾವಣೆ, ಸಂಶಯಕ್ಕೆ ಗುರಿಯಾದವರ ಬಂಧನ ಆರಂಭವಾಗಿ ಗಡಿಬಿಡಿಯೆದ್ದಿತು. ಬೆಟ್ಟದಂತೆ ಕಂಡು ಬಂದ ಬಂಡಾಯ ಮಂಜಿನಂತೆ ಕರಗಿತು.

ಕರ್ತಾರ್ ಸಿಂಹ, ಪಿಂಗಳೆ, ಭಾಯಿ ಪರಮಾನಂದಜಿ ಮೊದಲಾಗಿ ಈ ಪ್ರಯತ್ನದ ಪ್ರಮುಖರನ್ನೆಲ್ಲಾ ಸರ್ಕಾರದವರು ಹಿಡಿದು ಮೊಕದ್ದಮೆ ಹೂಡಿದರು. ನಿರಾಶರಾದ ರಾಸಬಿಹಾರಿ ಬೋಸರು ಪಿ.ಎನ್.ಠಾಕೂರ್ ಎಂಬ ಗುಪ್ತನಾಮ ತಳೆದು ಜಪಾನಿಗೆ ಪರಾರಿಯಾದರು. ಒಂಬತ್ತು ಮಂದಿಗೆ ಮರಣದಂಡನೆಯಾಯಿತು; ಹದಿನೈದು ಮಂದಿಗೆ ಗಡಿಪಾರು ಶಿಕ್ಷೆಯಾಯಿತು.

ಮತ್ತೆ ನಿರಾಸೆ!

ಇದರಿಂದ ಕಾರ್ಯ ವಿಮುಖರಾಗದೆ ಬರ್ಲಿನ್ ಸಮಿತಿ ಹಾಗೂ ಹರದಯಾಳರು ತಮ್ಮ ಕಾರ್ಯಗಳಲ್ಲಿ ಮಗ್ನರಾಗಿದ್ದರು. ಬಂಗಾಳದ ಕ್ರಾಂತಿಕಾರಿ ಸಂಸ್ಥೆಗಳು ಕಾರ್ಯನಿರತವಾಗಿದ್ದವು. ಅವರಿಗೆ ಶಸ್ತ್ರಗಳ ಸರಬರಾಜು ಮಾಡಿ ಬಂಗಾಳ, ಅಸ್ಸಾಂಗಳನ್ನು ಮುಕ್ತಗೊಳಿಸುವ ಯೋಜನೆಯೊಂದು ರೂಪಿತವಾಯಿತು. ಜರ್ಮನಿಯ ಸರ್ಕಾರವು ಎರಡು ಲಕ್ಷಕ್ಕೂ ಮೀರಿದ ವೆಚ್ಚ ಮಾಡಿ ಲಾರ್ಸನ್ ಮತ್ತು ಮಾವರಿಕ್ ಎಂಬ ಜಹಜುಗಳನ್ನು ಕೊಂಡು ಶಸ್ತ್ರಗಳನ್ನು ತುಂಬಿ ಬಂಗಾಳದ ಸುಂದರ ಬನದಲ್ಲಿ ಗೊತ್ತಾಗಿದ್ದ ಸಾಂಕೇತಿಕ ನೆಲೆಗೆ ಕೊಂಡೊಯ್ಯಲು ಆದೇಶಿಸಲಾಗಿತ್ತು. ಆದರೆ ಅಬು ಒಂದನ್ನೊಂದು ಭೇಟಿಯಾಗಬೇಕಾಗಿದ್ದ ಸ್ಥಳ, ಕಾಲ ಕೂಡಿ ಬರಲಿಲ್ಲ. ಮತ್ತೆ ಇಡೀ ಪ್ರಯತ್ನ ನೀರಿನಲ್ಲಿ ಮಾಡಿದ ಹೋಮವಾಯಿತು.

ಹೀಗೆಯೇ ಆಫ್ಘಾನಿಸ್ಥಾನ, ತುರ್ಕಿಗಳಲ್ಲಿ ಮಾಡಿದ ಯೋಜನೆಗಳೂ ವಿಫಲಗೊಂಡವು. ಈ ಮಧ್ಯೆ ಯುರೋಪಿನಲ್ಲಿ ಯುದ್ಧ ನಿರ್ವಹಿಸುವುದೇ ಭಾರವಾಗಿ ಸಹಜವಾಗಿಯೇ ಜರ್ಮನಿಗೆ ಈ ಯೋಜನೆಗಳಲ್ಲಿದ್ದ ಉತ್ಸಾಹವು ಕುಗ್ಗಿತು.

೧೯೧೫ರ ನವೆಂಬರಿನಿಂದ ಲಾಲಾ ಹರದಯಾಳರಿಗೂ ಬರ್ಲಿನ್‌ ಸಮಿತಿಗೂ ನಡುವೆ ಮನಸ್ತಾಪ ಎದ್ದಿತು. ಅವರು ಜರ್ಮನಿಯನ್ನು ಬಿಟ್ಟು ತಟಸ್ಥ ರಾಷ್ಟ್ರಗಳಿಗೆ ಹೋಗಬಯಸಿದರು. ಆದರೆ ಜರ್ಮನ್ ಸರ್ಕಾರ ಒಪ್ಪಲಿಲ್ಲ. ಸ್ವಲ್ಪ ಕಾಲ ಅವರು ಜರ್ಮನಿಯಲ್ಲಿ ಸೆರೆಯಲ್ಲಿರಬೇಕಾಯಿತು. ಅನಂತರ ಅವರ ಬಿಡುಗಡೆಯಾಯಿತು. ಆದರೂ ೧೯೧೬ರ ಫೆಬ್ರುವರಿಯಿಂದ ಯುದ್ಧ ಮುಗಿಯುವವರೆಗೆ ಅವರ ಚಲನವಲನಗಳ ಮೇಲೆ ನಿರ್ಬಂಧವಿತ್ತು.

ಹರದಯಾಳರು ಜರ್ಮನಿಯಲ್ಲಿ ಸ್ವಲ್ಪ ಕಾಲ ಸೆರೆಮನೆಯಲ್ಲಿದ್ದರು.

ಹರದಯಾಳರ ದುರದೃಷ್ಟ. ಅವರು ಕಳುಹಿಸುತ್ತಿದ್ದ ರಹಸ್ಯ ಪತ್ರಗಳೆಲ್ಲ ಬ್ರಿಟಿಷ್ ಸರ್ಕಾರದ ಗೂಢಚಾರರ ಕೈ ಸೇರುತ್ತಿದ್ದವು. ಒಮ್ಮೆ ಅವರು ಒಂದು ಯೋಜನೆಯ ವಿವರಗಳನ್ನು ಒಬ್ಬ ಮನುಷ್ಯನ ರೇಷ್ಮೆ ಕೋರ್ಟಿನ ಮೇಲೆ ಬರೆದು ಕಳುಹಿಸಿದರು. ಅದು ಶತ್ರುಗಳ ಕೈಗೆ ಸಿಕ್ಕಿಬಿದ್ದಿತು.

ಸ್ವೀಡನ್ನಿನಲ್ಲಿ

ಜರ್ಮನಿಯು ಯುದ್ಧದಲ್ಲಿ ಸೋತಿತು. ಅನಂತರ ೧೯೧೯ರ ಫೆಬ್ರುವರಿಯಲ್ಲಿ ಹರದಯಾಳರು ಸ್ವೀಡನ್ನಿಗೆ ಹೋಗಿ ನೆಲೆಸಿದರು. ಭಾರತೀಯ ಸಂಸ್ಕೃತಿ, ತತ್ವ ಶಾಸ್ತ್ರ, ಕಲೆಗಳ ಮೇಲೆ ಭಾಷಣಗಳನ್ನು ಮಾಡುತ್ತ ಜೀವನ ನಡೆಸಿದರು.

೧೯೨೭ರಲ್ಲಿ ಬ್ರಿಟಿಷ್ ಸರ್ಕಾರ ರಾಜಕೀಯ ಅಪರಾಧಿಗಳಿಗೆ ಕ್ಷಮೆ ನೀಡಿತು. ಆಗ ಹರದಯಾಳ್ ಲಂಡನ್ನಿಗೆ ಬಂದರು.

ಅವರು ಮೊದಲಿನಿಂದಲೂ ತತ್ವಶಾಸ್ತ್ರದಲ್ಲಿ, ಮುಖ್ಯವಾಗಿ ಬುದ್ಧನ ಉಪದೇಶಗಳಲ್ಲಿ ತೀಕ್ಷಣ ಕುತೂಹಲ ಉಳ್ಳವರಾಗಿದ್ದರು. ಇಂಗ್ಲೆಂಡಿನಲ್ಲಿ ನೆಲೆಸಿ ೧೯೩೨ರಲ್ಲಿ “ಭೋದಿಸತ್ತ್ವ ಸಿದ್ಧಾಂತ” (ಬೋಧಿಸತ್ತ್ವ ಡಾಕ್ಟ್ರಿನ್) ಎಂಬ ಉದ್ಗ್ರಂಥ ರಚಿಸಿ ಲಂಡನ್ ವಿಶ್ವ ವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದರು. ವಿಶಾಲವಾದ ಜೀವನಾನುಭವ ಮತ್ತು ಪಾಂಡಿತ್ಯದ ಆಧಾರದ ಮೇಲೆ ” ಹನ್ನೆರಡು ಮತಧರ್ಮಗಳು ಹಾಗೂ ಆಧುನಿಕ ಜೀವನ” ಮತ್ತು “ಆತ್ಮಸಂಸ್ಕಾರಕ್ಕೆ ಸೂಚನೆಗಳು” ಎಂಬ ಮೌಲಿಕ ಕೃತಿಗಳನ್ನು ರಚಿಸಿದರು.

ಭಾರತ ಮತ್ತು ಬ್ರಿಟನಗಳಲ್ಲಿದ್ದ ಅವರು ಮಿತ್ರರುಗಳ ಸತತ ಪ್ರಯತ್ನದಿಂದ ೧೯೩೯ರಲ್ಲಿ ಅವರಿಗೆ ಭಾರತಕ್ಕೆ ಹಿಂದಿರುಗಲು ಅನುಮತಿ ದೊರೆಯಿತು. ಆದರೆ ಅನುಮತಿ ಪತ್ರ ದೊರೆಯುವ ವೇಳೆಗೆ ಉಪನ್ಯಾಸ ಪ್ರವಾಸಕ್ಕಾಗಿ ಸಂಯುಕ್ತ ಸಂಸ್ಥಾನಕ್ಕೆಹೋಗಿದ್ದರು.

ಭಾರತದಲ್ಲಿ ಅವರ ಮಿತ್ರರು, ಅನುಯಾಯಿಗಳು ಕುತೂಹಲದಿಂದ ಅವರ ನಿರೀಕ್ಷಣೆ ಮಾಡುತ್ತಿರುವಾಗಲೇ ಪತ್ರಿಕೆಗಳಲ್ಲಿ “೧೯೩೯ರ ಮಾರ್ಚ್ ೪ರಂದು ಲಾಲಾ ಹರದಯಾಳರು ಫಿಲಡೆಲ್ಫಿಯಾದಲ್ಲಿ ಮರಣ ಹೊಂದಿದರು” ಎಂಬ ವಾರ್ತೆ ಪ್ರಕಟವಾಯಿತು.

ಮಹಾನ್‌ ಆತ್ಮ

ಯಾವುದೇ ದೃಷ್ಟಿಕೋನದಿಂದ ನೋಡಿದರೂ ಲಾಲಾ ಹರದಯಾಳರು ಒಂದು ಮಹಾನ್ ಆತ್ಮ. ಅವರು ಕಲ್ಪಿಸಿಕೊಂಡ ಕ್ರಾಂತಿ, ಅದರ ವಿಶಾಲ ಹರಹು, ಅವರ ಕಾರ್ಯ ಚಾತುರ್ಯ, ಅನುಯಾಯಿಗಳಲ್ಲಿ ತುಂಬುತ್ತಿದ್ದ ಸ್ಫೂರ್ತಿ- ಇವನ್ನೆಲ್ಲ ನೋಡಿದಾಗ ಸೋತರೇನಂತೆ, ಆ ಸೋಲು ಸಹ ಮಹಾನ್ ಸೋಲು ಎಂಬುದು ಎದ್ದು ಕಾಣುತ್ತದೆ. ಸೋಲಿನಿಂದ ಮುರಿದು ಬೀಳಿದ ಸ್ಥಿತಪ್ರಜ್ಞರು ಅಪರೂಪ. ಅಂತಹ ಅಪರೂಪದ ಸ್ಥಿತಪ್ರಜ್ಞರ ಸಾಲಿಗೆ ಸೇರಿದವರು ಲಾಲಾ ಹರದಯಾಳ್.