ಅಂದು ಸಂತೋಷದಿಂದ ಯಾವುದೋ ವಿಷಯ ಹೇಳಲು ಉದ್ವೇಗದಿಂದ ಒಳಬಂದ ನಾನು ಜಾರಿಬಿದ್ದೆ. ಆಗ ನನ್ನ ತಾಯಿ ನನ್ನನ್ನು ಹಿಡಿದೆತ್ತಿದರು, ಆಗ ನನ್ನ ಮನಸ್ಸಿನಲ್ಲಿ ನನ್ನ ತಾಯಿ ಎಷ್ಟು ಪ್ರೀತಿಯಿಂದ ನನ್ನನ್ನು ಪೋಷಿಸಿದ್ದಾರೆ, ಎಂಬ ಅಂಶ ಅರಿವಿಗೆ ಬಂತು. ಈ ಪೋಷಣೆ ಆಧುನಿಕತೆಯ ತುತ್ತ ತುದಿಯಲ್ಲಿರುವ, ಮಾನವರಲ್ಲಿ ಮಾತ್ರವೇ ಕಂಡುಬರುತ್ತದೆಯೇ? ಎಂಬ ಪ್ರಶ್ನೆ ಉದಯಿಸಿತು. ಅದಕ್ಕೆ ನನ್ನ ತಾಯಿಯಿಂದ ಬಂದ ಕುತೂಹಲಕಾರಿ ಉತ್ತರ ಈ ರೀತಿ ಇದೆ.

“ಮಗು, ಮಾನವರೇ ಅಲ್ಲದೇ ಅದೇ ರೀತಿ ಪ್ರಪಂಚದ ಇತರ ಜೀವಿಗಳು ತಮ್ಮದೇ ರೀತಿಯಲ್ಲಿ ತಮ್ಮದೇ ರೀತಿಯ ಬುದ್ದಿವಂತಿಕೆ ಉಪಯೋಗಿಸಿ, ತಮ್ಮ ಮಕ್ಕಳಿಗೆ ವಿಶೇಷ ರಕ್ಷಣೆ ಮತ್ತು ಪೋಷಣೆ ನೀಡುತ್ತವೆ. ಉದಾಹರಣೆಗೆ ನಾವು ನಮ್ಮ ಸುತ್ತ ಮುತ್ತಲೂ, ‘ವೀವಿಲ್’ಎಂಬ ಒಂದು ಜಾತಿಯ ಜೀರುಂಡೆಯ ಗೂಡನ್ನು ಕಾಣಬಹುದು. ಇವು ತಮ್ಮ ಮರಿಗಳಿಗಾಗಿ ತುತ್ತೂರಿಯಾಕಾರದ ಗೂಡನ್ನು ನಿರ್ಮಿಸುತ್ತವೆ. ಹೇಗೆಂದರೆ ಎಲೆಯ ಒಂದು ನಿರ್ದಿಷ್ಟ ಭಾಗವನ್ನು ಕಚ್ಚುತ್ತಾ ಮಧ್ಯದವರಿಗೆ ಕತ್ತರಿಸುತ್ತದೆ. ಹೀಗೆ ಎಲೆ ಸೊರಗಿದ ನಂತರ ವೀವಿಲ್ ಅದರುದ್ದಕ್ಕೂ ನಡೆದು ಎರಡು ಭಾಗಗಳನ್ನು ಮಡಚುತ್ತದೆ. ನಂತರ ಇದನ್ನು ಸುರಳಿ ಸುತ್ತಿ, ಸಣ್ಣದೊಂದು ತೂತು ಮಾಡಿ ಅದರಲ್ಲಿ ಮೊಟ್ಟೆಯಿಟ್ಟು ಮತ್ತೆ ಸುತ್ತುತ್ತಾ ತೂತನ್ನು ಮುಚ್ಚತ್ತದೆ. ಹೀಗೆ ಸುರುಳಿ ಸುತ್ತಿದ ನಂತರ ಉಳಿದ ಎಲೆಯನ್ನು ಗೂಡಿನ ಬಾಗಿಲಾಗಿ ಮಾಡಿ ಮುಚ್ಚುತ್ತದೆ. ನಂತರ ಇದರಿಂದ ಮರಿಗಳು ಹೊರಬಂದಾಗ ಇವುಗಳಿಗೆ ಆಹಾರಕ್ಕೆ ಕೊರತೆಯಾಗದಂತೆ ಎಲೆಯಲ್ಲಿನ ರಸವನ್ನೇ ತಿಂದು ಪ್ರೌಢಾವಸ್ಥೆಗೆ ಬರುವಂತೆ ಗೂಡುಗಳ ರಚನೆಯಾಗಿರುತ್ತದೆ.

“ಇದೇ ರೀತಿ ನಮಗೆ ಇನ್ನೊಂದು ಪರಿಚಿತ ಜೀವಿ, ‘ಡಂಗ್ ಬೀಟಲ್’ ಸಗಣಿ ಜೀರುಂಡೆ. ಇವು ಗೂಡು ಕಟ್ಟಿ ಕೊಂಡು, ಅದರ ಕಡೆಗೆ ಸಗಣಿ ಉಂಡೆಗಳನ್ನು ಸಾಗಿಸುತ್ತವೆ.  ಹೆಣ್ಣು ಜೀರುಂಡೆ, ಉಂಡೆಗೆ ಹಳ್ಳದಂತೆ ರೂಪಕೊಟ್ಟು, ಅದರ ತುದಿಯಲ್ಲಿ ಒಂದು ಮೊಟ್ಟೆಯಿಡುತ್ತದೆ. ಮಣ್ಣಿನಿಂದ ಅದನ್ನು ಮುಚ್ಚಿ ನಂತರ ಹಳ್ಳದ ಉಂಡೆಯನ್ನು ಮುಚ್ಚುತ್ತದೆ.

ಮೊಟ್ಟೆಯೊಡೆದು ಮರಿ ಹುಟ್ಟಿದಾಗ ಸಗಣಿಯನ್ನು ಮಧ್ಯದವರೆಗೆ ತಿನ್ನುತ್ತದೆ. ಈ ಕತ್ತಲ ಕೋಣೆಯಲ್ಲಿ ಯಾವ ದಿಕ್ಕಿಗೆ ತಿರುಗಬೇಕೆಂದು ಅದಕ್ಕೆ ತಿಳಿದಿರುತ್ತದೆ. ಸಗಣಿಯನ್ನು ತಿನ್ನುತ್ತಾ, ತನ್ನ ಮಲದಿಂದ ಗೂಡಿನ ಗೋಡೆಗಳಿಗೆ ಸವರಿ ಅವನ್ನು ಗಟ್ಟಿಗೊಳಿಸುತ್ತದೆ.  ಪೂರ್ಣವಾಗಿ ಬೆಳೆದು ವಯಸ್ಕ ಜೀರುಂಡೆಯಾದಾಗ ಗೂಡನ್ನು ಮುರಿದು ತೆವಳುತ್ತಾ ಹೊರಬರುತ್ತದೆ ಮತ್ತು ತನ್ನ ಮೊದಲ ಆಹಾರ ಹುಡುಕಿಕೊಂಡು ಹೋಗುತ್ತದೆ. ಇದೇ ರೀತಿ ಸಗಣಿಹುಳು ತನ್ನ ಮರಿಗಾಗಿ ಅದರ ಮುಂದಿನ ಜೀವನಕ್ಕಾಗಿ ಜವಾಬ್ದಾರಿ ತೆಗೆದುಕೊಂಡು ಮರಿಯನ್ನು ಪೋಷಿಸುತ್ತದೆ.

ಹೀಗೆ ಮರಿಗಳಿಗಾಗಿ ವಿಶೇಷ ಕಾಳಜಿ ವಹಿಸಿ ಅವು ಹುಟ್ಟುವ ಮೊದಲೇ ಆಹಾರವನ್ನು ಸಿದ್ಧಪಡಿಸುವ ಜೀವಿಗಳನ್ನು ನೋಡಿದ್ದೇವೆ. ಅಂಥ ಇನ್ನೊಂದು ಜೀವಿ ‘ಕಣಜ’. ಇದು ತನ್ನ ವಿಷದ ಕುಟುಕಿನಿಂದ ಯಾವುದಾದರೂ ಕಂಬಳಿ ಹುಳುವನ್ನು ನಿಶ್ಚೇತನಗೊಳಿಸಿ ಗೂಡಿನಲ್ಲಿ ಹಾಕುತ್ತದೆ. ಅನಂತರ ಅದರ ದೇಹದ ಮೇಲೋ ಗೂಡಿನಲ್ಲೋ ಮೊಟ್ಟೆಯಿಡುತ್ತದೆ. ಹುಟ್ಟಿದ ಮರಿ ಇನ್ನೂ ಬದುಕಿರುವ ಅಸಹಾಯಕ ಕಂಬಳಿ ಹುಳುವನ್ನು ತಿಂದು ಬೆಳೆಯುತ್ತದೆ!

ಇನ್ನೊಂದು ಕೀಟ ವಿಸ್ಮಯಕಾರಿ ‘ಇಕ್‌ನ್ಯುಮನ್ ನೊಣ’ ತನ್ನ ಓವಿ ಪಾಸಿಟರ್, ಮೊಟ್ಟಿಯಿಡುವ ಭಾಗವನ್ನು ಮರದ ತೊಲೆಯೊಳಗೆ ತೂರಿಸಿ ಅದರಲ್ಲಿರುವ ಒಂದು ಕಂಬಳಿ ಹುಳುವಿನ ದೇಹದ ಒಳಗೆ ಮೊಟ್ಟೆಯಿಡುತ್ತದೆ! ಮುಂದೆ ಕಂಬಳಿ ಹುಳುವಿನ ದೇಹದಲ್ಲಿ ಮೊಟ್ಟೆಯೊಡೆದು ಹುಟ್ಟುವ ಮರಿಗಳು ಅದರ ಮಾಂಸವನ್ನೇ ತಿಂದು ಹೊರಬರುತ್ತವೆ! ‘ಹಾರ್ನ್‌ಟೈಲ್’ ತನ್ನ ಮೊಟ್ಟೆಗಳನ್ನು ಒಂದು ಮರದ ಕಾಂಡದಲ್ಲಿಡುತ್ತದೆ. ಹುಟ್ಟುವ ಮರಿಗಳು ಮರವನ್ನು ತಿಂದು ಬೆಳೆಯುತ್ತವೆ!

ಹೀಗೆ ಅನೇಕ ಕೀಟಗಳು ತಮ್ಮ ಮರಿಗಳು ಹುಟ್ಟುವ ಮೊದಲೇ ಆಹಾರವನ್ನೊದಗಿಸಿಟ್ಟರೆ, ಕೆಲವು ತಮ್ಮ ಮೊಟ್ಟೆಗಳಿಗೆ ವಿಶೇಷ ರಕ್ಷಣೆ ನೀಡುತ್ತವೆ! ಅಂಥವೆಂದರೆ:

  • ‘ನೇರಳೆ ರೋಮರೇಖೆ’(ಪರ್ಪ್‌ಲ್ ಹೇರ್‌ಸ್ಟ್ರೀಕ್) ಎಂಬ ಚಿಟ್ಟೆ. ಎಲೆಯಡಿಯಲ್ಲಿ ತಾನಿಟ್ಟ ನೂರಾರು ಮೊಟ್ಟೆಗಳ ಸನಿಹವೇ ಕುಳಿತು ಅದನ್ನು ಕಾಯುತ್ತದೆ.
  • ನೆಲ ಅಗೆಯುವ ಹೆಣ್ಣು ಕ್ರಿಕೆಟ್ ಒಂದು ಗೂಡು ನಿರ್ಮಿಸಿ, ಹುಲ್ಲಿನ ಹಾಸಿಗೆಯುಳ್ಳ ಕೋಣೆ ರಚಿಸುತ್ತದೆ. ಮುಚ್ಚಲ್ಪಟ್ಟ ಆ ಕೋಣೆಯಲ್ಲಿ ಹುಟ್ಟಿದ ನಿಂಫ್ ಮರಿಗಳನ್ನು ರಕ್ಷಿಸುತ್ತಾ ತಾನು ಅಲ್ಲೇ ಇರುತ್ತದೆ.

ಲೆಥೋಸೆರಸ್ ಅಮೆರಿಕಾನಸ್ಎಂಬ ಇನ್ನೊಂದು ಬಗೆಯ ದೈತ್ಯ ತಿಗಣೆ ಮೊಟ್ಟೆಗಳನ್ನು ಬಾಚಿಕೊಂಡು ಆಗಾಗ ನೀರಲ್ಲಿ ಒದ್ದೆಮಾಡುತ್ತದೆ! ಹೀಗೆ ಮಾಡದಿದ್ದರೆ, ಅವು ಒಣಗಿ ಹೋಗಿ ಮುಂದೆ ಮರಿಗಳಾಗುವುದಿಲ್ಲ.

ಹೀಗೆ ಇನ್ನೂ ಅನೇಕಾನೇಕ ಕೀಟಗಳೂ, ಜೀವಿಗಳೂ ತಮ್ಮ ಮರಿ ಮೊಟ್ಟೆಗಳ ಪೋಷಣೆ ಮಾಡುತ್ತವೆ. ಅವನ್ನು ಮತ್ತೆ ತಿಳಿದು ಕೊಳ್ಳೋಣ’ಎಂದು ಅಮ್ಮ ಮಾತುಮುಗಿಸಿದರು.  ಆದರೆ ನನ್ನಲ್ಲಿ ಇನ್ನೂ ಕೇಳುವ ಕುತೂಹಲ ಹಾಗೇ ಇತ್ತು!