ಭಾರತದ ಚರಿತ್ರೆಯಲ್ಲಿ ೧೯೬೪ರ ಮೇ ೨೭ನೆಯ ತಾರೀಖು ಮರೆಯಲಾಗದ ದಿನ.

ಎಂದಿನಂತೆ ಆ ದಿನವೂ ಬೆಳಗಾಗುತ್ತಲೇ ದೆಹಲಿಯ ಜನ ತಂತಮ್ಮ ದಿನಚರಿಗಳಲ್ಲಿ ನಿರತರಾಗಿದ್ದರು.

ಸ್ವತಂತ್ರ ಭಾರತದ ಮೊದಲನೆಯ ಪ್ರಧಾನಿ ಜವಹರಲಾಲ್ ನೆರಹರೂರವರ ಮನೆಯಾಗಿದ್ದ ತೀನ್ ಮೂರ್ತಿ ಭವನದಿಂದ ಬಂತು ಕೆಟ್ಟ ಸುದ್ದಿ : ನೆರಹರೂಗೆ ಹೃದಯಾಘಾತ.

ಮೇ ೨೭ನೆಯ ತಾರೀಖಿಗೆ ಕೆಲವು ತಿಂಗಳ ಹಿಂದೆ ನೆಹರೂಗೆ ಲಘುವಾದ ಹೃದಯಾಘಾತವಾಗಿತ್ತು. ಆದರೂ ಅವರು ಬಹುಬೇಗ ಚೇತರಿಸಿಕೊಂಡಿದ್ದರು. ತಾವು ಇನ್ನೂ ಬಹುಕಾಲ ಬದುಕುತ್ತೇನೆಂಬುದೇ ಅವರ ಭಾವನೆ.

ಆದರೆ ಆ ದಿವಸ ನೆಹರೂ ಮರೆಯಾದರು.

ನೆಹರೂ ಇನ್ನಿಲ್ಲ. ನಂಬಲಾಗದ ಸತ್ಯ. ’ನೆಹರೂ ಅನಂತರ ಯಾರು? ಎಂಬ ಪ್ರಶ್ನೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರತಿಧ್ವನಿಸಿತು.

ದೇಶವನ್ನಾಳುವ ಪಕ್ಷವಾದ ಕಾಂಗ್ರೆಸ್ಸಿನ ನಾಯಕರೂ  ಇದನ್ನು ಕುರಿತು ಚಿಂತಿಸಿದರು. ಕೈ ಬೆರಳುಗಳ ಮೇಲೆ ನಾಲ್ಕಾರು ಹೆಸರುಗಳನ್ನು ಎಣಿಸಿದರು. ಇವರಲ್ಲಿ ಯಾರು ಸರಿ? ಯಾರು ಪ್ರಧಾನಿಯ ಗದ್ದುಗೆಯನ್ನು ಏರಬಲ್ಲರು?

ಕೊನೆಗೆ ಎಲ್ಲರೂ ಹೀಗೆಂದು ತೀರ್ಮಾನಿಸಿದರು: ಈ ಸಂಕಟ ಸಮಯದಲ್ಲಿ ಭಾರತದ ಆಡಳಿತ ರಥವನ್ನು ಎಳೆಯಲು ತಕ್ಕ ವ್ಯಕ್ತಿ ಲಾಲ್ ಬಹಾದುರ‍್ ಶಾಸ್ತ್ರಿ.

ಕುಬ್ಜಮೂರ್ತಿ, ಕೃಶವಾದ ಮೈ, ಬಂಡಿಯಗಾಲಿಗಳಂತೆ ಬಟ್ಟಗಣ್ಣು. ಸರಳ ಉಡುಪು, ಮೃದು ನುಡಿ, ಆಡಿದ ಮಾತು ಇತರರಿಗೆ ಕೇಳಿತೋ ಇಲ್ಲವೋ. ಆದರೆ ಮಾತಿಗೆ ಮೀರಿದ ಮಂದಹಾಸ. ಗುತ್ತು, ದರ್ಪ ಸ್ವಲ್ಪವೂ ಇಲ್ಲ. ಇಂಥವರು ಐವತ್ತು ಕೋಟಿ ಜನರಿರುವ ಈ ದೊಡ್ಡ ದೇಶವನ್ನು ನಿಜವಾಗಿಯೂ ಆಳಬಲ್ಲರೆ? ಎಂದು ಅನೇಕರಿಗೆ ಸಂದೇಹ.

ಲಾಲ್ ಬಹಾದುರರೇ ತಮ್ಮನ್ನು ತಾವು ತಾವು ಎಂದೂ ಹೊಗಳೀಕೊಂಡವರಲ್ಲ. ’ನಾನೊಬ್ಬ ಸಾಮಾನ್ಯ ಮನುಷ್ಯ. ಅಂಥ ಪ್ರತಿಭಾವಂತನೇನೂ ಅಲ್ಲ’ ಎಂದು ಹೇಳಿಕೊಳ್ಳುತ್ತಿದ್ದರು. ಅವರು ಎಂದೂ ಅಧಿಕಾರವನ್ನು ಬಯಸಿದವರಲ್ಲ. ಅದಕ್ಕಾಗಿ ಕೆಲಸ ಮಾಡಿದ್ದವರಲ್ಲ.

ಆದರು ಅಧಿಕಾರ ಅವರನ್ನು ಅರಸಿ ಬಂತು. ಕೀರ್ತಿ ಅವರಿಗೆ ಕಿರೀಟ ತೊಡಿಸಿತು. ವಾಮನಮೂರ್ತಿ ತ್ರಿವಿಕ್ರಮವಾಗಿ ಬೆಳೆದರು. ಹೂವಿನ ಹಾಗೆ ಮೃದುವಾಗಿರುವ ತಾವು ವಜ್ರದ ಹಾಗೆ ಕಠೋರವಾಗಿಯೂ ಇರಬಲ್ಲರೆಂಬುದನ್ನು ತಮ್ಮ ಕೆಲಸಗಳಿಂದ ತೋರಿಸಿಕೊಟ್ಟರು. ಭಾರತದ ಗೌರವವನ್ನು ನಾಲ್ಕು ದಿಕ್ಕುಗಳಿಗೂ ಹಬ್ಬಿಸಿದರು. ದಿಟ್ಟ ವ್ಯಕ್ತಿ, ಅಸದೃಶ ರಾಷ್ಟ್ರಪ್ರೇಮಿ, ಶಾಂತಿಯ ರೂವರಿ ಎಂದು ಇವರನ್ನು ಲೋಕವೇ ಕೊಂಡಾಡುತ್ತಿದ್ದಾಗ, ತಮ್ಮ ಬಾಳಿನ ಶಿಖರದ ಸಮಯದಲ್ಲಿ, ಹಠಾತ್ತನೆ ಕಣ್ಮುಚ್ಚಿದರು. ಅನಿರೀಕ್ಷಿತವಾಗಿ  ಅಧಿಕಾರಕ್ಕೆ ಬಂದರು, ಅಷ್ಟೇ ಅನಿರೀಕ್ಷಿತವಾಗಿ ಈ ಲೋಕವನ್ನು ಬಿಟ್ಟು ತೆರಳಿದರು.

ಲಾಲ್ ಬಹಾದುರ‍್ ಭಾರತದ ಚರಿತ್ರೆಯಲ್ಲಿ ಉಜ್ವಲವಾಗಿ ಬೆಳಗಿನ ಒಬ್ಬ ನಾಯಕರತ್ನ. ಅವರು ತೀರಿಕೊಂಡು ಮೇಲೆ ನಮ್ಮ ರಾಷ್ಟ್ರಪತಿಗಳು ರಾಷ್ಟ್ರದ ಜನರ ಪರವಾಗಿ ಅವರಿಗೆ ನೀಡಿದ ’ಭಾರತರತ್ನ ’ ಎಂಬ ಬಿರುದು ಅವರಿಗೆ ತುಂಬ ಅನ್ವರ್ಥ.

ವಿದ್ಯಾರ್ಥಿ ಲಾಲ್ ಬಹಾದುರ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯನ್ನು ಸಾರ್ಥಕಗೊಳಿಸಿದ ಮಹಾವ್ಯಕ್ತಿಗಳು ಹಲವರು. ಶಿವಾಜಿಯದು ಎತ್ತರದ ನಿಲುವಲ್ಲ. ಆದರೆ ಅಯಸ್ಕಾಂತದಂತೆ ತನ್ನ ಜನರನ್ನೆಲ್ಲ ಬರಸೆಳೆದು, ಒಗ್ಗೂಡಿಸಿ, ಮಹಾಸಾಮ್ರಾಜ್ಯ ಸ್ಥಾಪಿಸಿದ ಕೀರ್ತಿ ಶಿವಾಜಿಯದು. ನೆಪೊಲಿಯನ್ ಕುಳ್ಳ. ಆದರೆ ಜಗವನ್ನೇ ನಡುಗಿಸಿದ. ಶಾಸ್ತ್ರೀಜಿ ಇವರಿಗಿಂತ ಎತ್ತರದಲ್ಲಿ ಹೆಚ್ಚಲ್ಲ; ಸಾಹಸದಲ್ಲಿ ಕಡಿಮೆಯಲ್ಲ. ದೃಢತೆ, ಸಾಹಸ, ಸಹನೆ, ಚಾತುರ್ಯ ಮುಂತಾದವು ಒಂದು ದಿನದಲ್ಲಿ ಅಥವಾ ಒಂದು ವರ್ಷದಲ್ಲಿ ಸಂಪಾದಿಸಿದ ಗುಣಗಳಲ್ಲ. ಅವರ ಬಾಳು ಬೆಳೆದು ಬಂದ ಬಗೆಯನ್ನು ಕಂಡಾಗ ಅವರಿಗೆ ಈ ಗುಣಗಳೆಲ್ಲ ಹೇಗೆ ಬಂದುವೆಂಬುದು ಅರ್ಥವಾಗುತ್ತದೆ.

ಲಾಲ್ ಬಹಾದುರ‍್ ಶಾಸ್ತ್ರಿ  ಹುಟ್ಟಿದ್ದು (ಅಕ್ಟೋಬರ‍್ ೨, ೧೯೦೪) ಕಾಶಿಗೆ ಏಳು ಮೈಲಿ ದೂರದಲ್ಲಿರುವ ಮುಘಲ್ ಸರಾಯ್ ಎಂಬ ಊರಿನಲ್ಲಿ. ತಂದೆ ಶಾರದಾ ಪ್ರಸಾದ, ತಾಯಿ ರಾಂದುಲಾರಿ ದೇವಿ. ಅವರದು ಕಾಯಸ್ಥವಂಶ; ಶ್ರೀವಾಸ್ತವ ಜಾತಿ. ಶ್ರೀವಾಸ್ತವ ಎಂಬುದು ಲಾಲ್ ಬಹಾದುರ‍್ ರ ಹೆಸರಿನ ಭಾಗವಾಗಿತ್ತು.  ಆದರೆ ಅವರು ದೊಡ್ಡವರಾದ ಮೇಲೆ ಅದನ್ನು ಕಿತ್ತು ಹಾಕಿದರು. ಹೆಸರಿನಲ್ಲಿ ಜಾತಿಯನ್ನು ಸೂಚಿಸುವ ಕ್ರಮ ಅವರಿಗೆ ಒಪ್ಪಿಗೆಯಾಗಿರಲಿಲ್ಲ.

ಲಾಲ್ ಬಹಾದೂರರ ತಂದೆ ಮೊದಲು ಒಬ್ಬ ಉಪಾಧ್ಯಾಯರಾಗಿದ್ದರು. ಅನಂತರ ಲಹಾಬಾದಿನ ರೆವೆನ್ಯೂ ಕಛೇರಿಯಲ್ಲಿ ಗುಮಾಸ್ತರಾಘಿದ್ದರು. ಬಡತನದಲ್ಲಿದ್ದರು. ಆದರೂ ಅವರು ಎಂದೂ ಯಾವ ಆಸೆಗೂ ಕೈಒಡ್ಡಿದವರಲ್ಲ. ಆತ್ಮಗೌರವ ಕಾಪಾಡಿಕೊಂಡು ಬಂದವರು.

ಲಾಲ್ ಬಹಾದೂರ‍್ ಒಂದು ವರ್ಷದ ಕೂಸಾಗಿದ್ದಾಗ ಅವರ ತಂದೆ ತೀರಿಕೊಂಡರು. ತಾಯಿ ರಾಂದುಲಾರಿ ದೇವಿಗೆ ಆಕಾಶವೇ ತಲೆಯ ಮೇಲೆ ಬಿದ್ದ ಹಾಗಾಯಿತು. ಎರಡು ಹೆಣ್ಣು, ಒಂದು ಗಂಡು ಇದ್ದ ಆ ತಾಯಿಗೆ ಮುಂದೆ ಅವಳ ತಂದೆಯೇ ಗತಿ.

ಬಹಾದುರರ ತಾತ ಹಜಾರಿಲಾಲರದು ಬಲು ದೊಡ್ಡ ಸಂಸಾರ. ಹಜಾರಿಲಾಲರ ತಮ್ಮಂದಿರು, ಹಜಾರಿಲಾಲರ ಮತ್ತು ಅವರ ತಮ್ಮಂದಿರ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹೀಗೆ ಅದು ಒಂದು ಸಣ್ಣ ಪ್ರಪಂಚ. ಇವರೆಲ್ಲರಿಗೂ ಹಜಾರಿಲಾಲ್ ಪ್ರೀತಿಯ ಅಕ್ಷಯಪಾತ್ರೆ. ತಮ್ಮ ದೊಡ್ಡ ಸಂಸಾರದಲ್ಲಿದ್ದ ಪ್ರತಿಯೊಬ್ಬರನ್ನೂ ಅವರು ಅಚ್ಚುಮೆಚ್ಚಿನಿಂದ ಕಾಣುತ್ತಿದ್ದರು. ಪುಟ್ಟಲಾಲ್ ಬಹಾದುರರ ವಿಷಯದಲ್ಲಂತೂ ಅವರಿಗೆ ವಿಶೇಷವಾದ ಮಮತೆ. ’ನನ್ಹೆ’ (ಪುಟಾಣಿ) ಎಂದೇ ಅವರು ಅವನನ್ನು ಕರೆಯುತ್ತಿದ್ದರು.

ಲಾಲ್ ಬಹದೂರ‍್ ಮೂರು ತಿಂಗಳ ಮಗುವಾಗಿದ್ದಾಗ ನಡೆದ ಒಂದು ಘಟನೆ ಸ್ವಾರಸ್ಯವಾಗಿದೆ. ಪವಿತ್ರವಾದ ಗಂಗೆಯಲ್ಲಿ ಸ್ನಾನ ಮಾಡುವುದಕ್ಕಾಗಿ ದುಲಾರಿ ದೇವಿ ಹೋಗಿದ್ದಾಗ ನೂಕುನುಗ್ಗಲಿನಲ್ಲಿ ಮಗು ತಾಯಿಯ ತೋಳಿನ ತೆಕ್ಕೆಯಿಂದ ಜಾರಿಕೊಂಡು ದನ ಕಾಯುವವನೊಬ್ಬನ ಕುಕ್ಕೆಯೊಳಗೆ ಬಿತ್ತು. ಅವನಿಗೆ ಮಕ್ಕಳಿರಲಿಲ್ಲ. ಮಗುವಿನ ಆಗಮನವನ್ನು ಅವನು ದೇವರು ಕೊಟ್ಟ ವರವೆಂದೇ ಸಂಭ್ರಮದಿಂದ ಹಬ್ಬ ಮಾಡಿದ.

ಮಗುವನ್ನು ಕಳೆದುಕೊಂಡ ರಾಂದುಲಾರಿ ಗೋಳಾಡಿದರು. ಪೊಲೀಸರಿಗೆ ದೂರು ಹೊತ್ತರು. ಪೊಲೀಸರು  ಮಗುವನ್ನು ನಿಜವಾದ ತಂದೆ ತಾಯಿಯರಿಗೆ ಒಪ್ಪಿಸಲು ಕೊಂಡೊಯ್ದಾಗ ರೈತ ದಂಪತಿಗಳ ಗೋಳು ಹೇಳತೀರದು. ರಾಷ್ಟ್ರವಾಳುವ ಯೋಗ ಇದ್ದ ಲಾಲ್ ಬಹಾದೂರರಿಗೆ ದನ ಕಾಯುವ ಅದೃಷ್ಟ ತಪ್ಪಿಹೋಯಿತು.

ಹುಡುಗನಿಗೆ ಹತ್ತು ವರ್ಷ ಆಗುವವರೆಗೂ ಅವನು ತಾತನ ಮನೆಯಲ್ಲೇ ಇದ್ದ. ಆ ವೇಳೆಗೆ ಅವನು ಆರನೆಯ ತರಗತಿ ದಾಟಿದ. ಆ ಊರಿನಲ್ಲಿ ಪ್ರೌಢಶಾಲೆ ಇರಲಿಲ್ಲ. ಲಾಲ್ ಬಹಾದೂರನ್ನು ಮುಂದೆ ಓದಲು ವಾರಣಾಸಿಗೆ (ಕಾಶಿ) ಕಳುಹಿಸಿದರು.

ಧೈರ್ಯ, ಆತ್ಮಾಭಿಮಾನಗಳು ಲಾಲ್ ಬಹಾದೂರಿಗೆ ಚಿಕ್ಕಂದಿನಿಂದಲೂ ಬಂದ ಎರಡು ದೊಡ್ಡ ಗುಣಗಳು. ವಾರಾಣಾಸಿಯಲ್ಲಿದ್ದಾಗ ಒಮ್ಮೆ ಇವರು ತಮ್ಮ ಗೆಳೆಯರೊಂದಿಗೆ ಗಂಗೆಯ ಇನ್ನೊಂದು ದಡದಲ್ಲಿದ್ದ ಜಾತ್ರೆಯೊಂದನ್ನು ನೋಡಲು ಹೋದರು. ಬರುವಾಗ ದೋಣಿಯಲ್ಲಿ ಗಂಗೆಯನ್ನು ದಾಟಲು ಅವರ ಬಳಿಯಲ್ಲಿ ಹಣ ಉಳಿದಿರಲಿಲ್ಲ. ಗೆಳೆಯರಲ್ಲಿ ಹಣ ಕೇಳಲು ಅವರ ಅಭಿಮಾನ ಒಪ್ಪಲಿಲ್ಲ. ಗೆಳೆಯರಿಗೆ ಗೊತ್ತಾಗದ ಹಾಗೆ ಅವರು ಗುಂಪಿನಿಂದ ಹಿಂದುಳಿದರು. ಗೆಳೆಯರು ಮಾತಿನ ಭರದಲ್ಲಿ ಲಾಲ್ ಬಹಾದೂರರನ್ನು ಮರೆತು ದೋಣಿ ಹತ್ತಿದರು. ಅವರು ಮುಂದೆ ಸಾಗಿದ ಮೇಲೆ, ಮಬ್ಬಿನಲ್ಲಿ ಲಾಲ್ ಬಹದೂರ‍್ ಗಂಗೆಯಲ್ಲಿ ಧುಮುಕಿದರು; ಇತರರು ಭಯದಿಂದ ಉಸಿರು ಹಿಡಿದು ನೋಡುತ್ತಿದ್ದಾಗ ಇವರು ಈಜಿ ದಡ ಸೇರಿದರು.

ಬಹಾದೂರ‍್ ಪುಟ್ಟ ಮೂರ್ತಿಯಾದರೂ ಅವರ ದೈಹಿಕ ಬಲ ಅಸಾಧಾರಣವಾದದ್ದು. ಅದರೊಳಗಿನ ಆತ್ಮಶಕ್ತಿ ಅಪ್ರತಿಮವಾದದ್ದು. ನೀರಿನಲ್ಲಿ ಹೇಗೋ ಹಾಗೆ ಬಾಳಿನಲ್ಲೂ ಅವರು ಈಸಿ ಗೆದ್ದರು. ಎರಡು ಸಾರಿ ಅವರು ನೀರಿನಲ್ಲಿ ಮುಳುಗಿ ಹೋಗುತ್ತಿದ್ದರು. ಪಾರಾದರು. ಎರಡನೆಯ ಸಾರಿ ಅವರು ಅಪಮೃತ್ಯುವಿನಿಂದ ಪಾರಾದಾಗ ಅವರ ಭುಜದ ಮೇಲೆ ತಮ್ಮ ಉಪಾಧ್ಯಾಯರ ಮೂರು ವರ್ಷದ ಮಗು ಇತ್ತಂತೆ.

ಲಾಲ್ ಬಹದೂರರು ಧೈರ್ಯ, ಸಾಹಸ, ಸಹನೆ, ಸಂಯಮ, ವಿನಯ, ಪರೋಪಕಾರ ಬುದ್ಧಿ ಇವನ್ನೆಲ್ಲ ಪಡೆದುಕೊಂಡದ್ದು ತಮ್ಮ ಬಾಲ್ಯದಲ್ಲಿ. ಚಿಕ್ಕಂದಿನಿಂದಲೂ ಅವರಿಗೆ ಓದಿನಲ್ಲಿ ತುಂಬ ಪ್ರೀತಿ. ಸಿಕ್ಕಿದ ಪುಸ್ತಕವನ್ನೆಲ್ಲ ಅದು ಅರ್ಥವಾಗಲಿ, ಆಗದಿರಲಿ ಅವರು ಓದುತ್ತಿದ್ದರು. ಗುರುನಾನಕರ ಪದ್ಯಗಳೆಂದರೆ ನನ್ಹೆಗೆ ಬಲು ಇಷ್ಟ. ’ಓ ನಾನಕನೆ, ಹುಲ್ಲಿನ ಹಾಗೆ ಪುಟಾಣಿಯಾಗಿಯೇ ಇರು, ಏಕೆಂದರೆ ಗಿಡಗಳು ಒಣಗಿದರೂ ಹುಲ್ಲು ಹಸುರಾಗಿಯೇ ಇರುತ್ತದೆ ಎಂಬ ಸಾಲುಗಳನ್ನು ಸರ್ವದಾ ಹೇಳಿ ಕೊಳ್ಳುತ್ತಿದ್ದರು.

ಲಾಲ್ ಬಹದೂರ‍್ ಆರು ವರ್ಷದ ಹುಡುಗನಾಗಿದ್ದಾಗ ನಡೆದ ಒಂದು ಘಟನೆ. ಅವರ ಮನಸ್ಸಿನ ಮೇಲೆ ಬಹಳ ಪರಿಣಾಮ ಉಂಟು ಮಾಡಿತು. ಒಮ್ಮೆ ಇವರ ಜೊತೆಗಾರರು ಹಣ್ಣಿನ ತೋಟವೊಂದಕ್ಕೆ ನುಗ್ಗಿ ಮರ ಹತ್ತಿದರು. ಲಾಲ್ ಬಹಾದುರ‍್ ಕೆಳಗೆ ನಿಂತಿದ್ದರು. ಬಳಿಯಲ್ಲಿದ್ದ ಗಿಡ ಹೂವೊಂದನ್ನು ಕಿತ್ತುಕೊಂಡರು.

ಆ ವೇಳೆಗೆ ತೋಟದ ಕಾವಲುಗಾರ ಈ ಹುಡುಗನನ್ನು ಕಂಡ. ಮರ ಹತ್ತಿದ್ದವರೆಲ್ಲ ಇಳಿದು ಓಡಿಹೋದರು. ಲಾಲ್ ಬಹಾದೂರ‍್ ಕಾವಲುಗಾರನ ಕೈಗೆ ಸಿಕ್ಕಿದರು. ಅವನು ಹುಡುಗನಿಗೆ ಚೆನ್ನಾಗಿ ಥಳಿಸಿದ.

ಬಹಾದುರರಿಗೆ ಬಹಳ ಅಳು ಬಂತು.’ ನಾನು ತಂದೆಯಿಲ್ಲದ ಹುಡುಗ. ನನ್ನನ್ನು ಹೊಡೆಯಬೇಡಿ ಎಂದರು.

ಈ ಮಾತು ಕೇಳಿ ಮಾಳಿ ಕರುಣೆಯಿಂದ ನಕ್ಕ. ’ತಂದೆಯಿಲ್ಲದ ಹುಡುಗನಾದ್ದರಿಂದಲೇ ಒಳ್ಳೆಯ ನಡತೆ ಕಲೀಬೇಕಪ್ಪ’ ಎಂದ.

ತೋಟದವನ ಈ ಮಾತು ಹುಡುಗನ ಮನಸ್ಸಿಗೆ ನಾಟಿತು.”ಇನ್ನು ಮೇಲೆ ಚೆನ್ನಾಗಿ ನಡೆದುಕೊಳ್ಳುತ್ತೇನೆ. ತಂದೆಯಿಲ್ಲದ್ದರಿಂದಲೇ ಒಳ್ಳೆಯ ಗುಣ ಕಲಿಯಬೇಕು ’ ಎಂದು ಮನಸ್ಸಿನಲ್ಲೇ ಪ್ರತಿಜ್ಞೆ ಮಾಢಿಕೊಂಡ.

ಗೆಳೆಯರು ಭಯದಿಂದ ನೋಡುತ್ತಿದ್ದಂತೆ ಲಾಲ್ ಬಹಾದುರ‍್ ಗಂಗೆಯನ್ನು ದಾಟಿದರು.

ಶಾಲೆಯಲ್ಲಿ ಜೊತೆಗಾರರಿಗಿಂತ ಕುಳ್ಳಾಗಿದ್ದರೂ ಲಾಲ್ ಬಹಾದುರ‍್ ಅಂಜುಕುಳಿಯಲ್ಲ. ಎಲ್ಲರೂ ಅವನೊಂದಿಗೆ ಸ್ನೇಹವಾಗಿ ವರ್ತಿಸುತ್ತಿದ್ದರು. ಹುಲ್ಲುಗಾರಿಕೆಯ ಹಾಗೆ ಸರ್ವದಾ ಹಸುರಾಗಿಯೇ, ಹಸನ್ಮುಖಿಯಾಗಿಯೇ ಇರುತ್ತಿದ್ದ ಲಾಲ್ ಬಹಾದೂರ‍್. ಶಾಲೆಯ ದಿನಗಳಲ್ಲಿ ಮಾತ್ರವಲ್ಲ, ಬೆಳೆದು ದೊಡ್ಡವರಾದ ಮೇಲೆ ಕೂಡ ಅವರಾಗಿ ಯಾರನ್ನೂ ದ್ವೇಷಿಸಲಿಲ್ಲ. ಶಾಲೆಯಲ್ಲಿದ್ದಾಗ ಅವರು ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದರಂತೆ. ಮಹಾಭಾರತ ನಾಟಕದಲ್ಲಿ ಅವರದು ಕೃಪಾಚಾರ್ಯರ ಪಾತ್ರ. ಕೌರವನ ಆಸ್ಥಾನದಲ್ಲಿದ್ದೂ ಪಾಂಡವರ ಗೌರವಕ್ಕೆ ಕೂಡ ಪಾತ್ರರಾಗಿದ್ದ ಕೃಪಾಚಾರ್ಯರ ಗುಣವನ್ನು ಲಾಲ್ ಬಹಾದೂರರು ಸಂಪಾದಿಸಿಕೊಂಡಿದ್ದರು.

ಆದರ್ಶ ಸ್ವಾತಂತ್ರ್ಯ ಯೋಧ

ವಾರಣಾಸಿಯ ಹರಿಶ್ಚಂದ್ರ ಪ್ರೌಢಶಾಲೆಯಲ್ಲಿ ಲಾಲ್ ಬಹಾದುರ‍್ ವಿದ್ಯಾರ್ಥಿಯಾಗಿದ್ದಾಗಲೇ ಭಾರತದಲ್ಲಿ ಒಂದು ಮಹಾ ಬಿರುಗಾಳಿ ಎದ್ದಿತ್ತು.

ಆಗ ದೇಶದಲ್ಲಿ ಎಲ್ಲೆಲ್ಲೂ ಸ್ವರಾಜ್ಯದ ಕೂಗು, ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ಎಂಬುದು ಬಾಲ ಗಂಗಾಧರ ತಿಲಕರು ರಾಷ್ಟ್ರಕ್ಕೆ ಬೋಧಿಸಿದ ಮಂತ್ರ

ಲೋಕಮಾನ್ಯ ತಿಲಕರಲ್ಲಿ ಲಾಲ್ ಬಹಾದೂರರಿಗೆ ಅತೀವ ಗೌರವ. ಅವರ ದರ್ಶನ ಮಾಡಬೇಕು. ಅವರ ವಾಣಿಯನ್ನು ಆಲಿಸಬೇಕು. ಇದೇ ಹಂಬಲ. ಒಮ್ಮೆ ತಿಲಕರು ವಾರಣಾಸಿಗೆ ಬಂದಿದ್ದರು. ಆಗ ಐವತ್ತು ಮೈಲಿ ದೂರದ ಊರಿನಲ್ಲಿದ್ದ ಲಾಲ್ ಬಹಾದೂರ‍್ ಸಾಲ ಮಾಡಿ ಹಣ ಪಡೆದು, ರೈಲಿನಲ್ಲಿ ಅಲ್ಲಿಗೆ ಪ್ರಯಾಣ ಮಾಡಿದರು, ತಿಲಕರನ್ನು ಕಂಡರು. ಅವರ ವಾಣಿ ಲಾಲ್ ಬಹಾದೂರರ ಕಿವಿಯಲ್ಲಿ ಪಾಂಚಜನ್ಯದ ಹಾಗೆ ಮೊಳಗಿತು. ರಾಮನ ಪಾದುಕೆಗಳನ್ನು ಹೊತ್ತ ಭರತನಂತೆ ಲಾಲ್ ಬಹಾದುರರು ತಿಲಕರ ಸಂದೇಶವನ್ನು ತಲೆಯಲ್ಲಿ ಧರಿಸಿಕೊಂಡರು. ತಮ್ಮ ಬಾಳಿನ ಕೊನೆಯವರೆಗೂ ಅವರನ್ನು ಬಿಡದೆ ನಡೆಸಿದ ಮಂತ್ರ ಅದು.

ಲಾಲ್ ಬಹಾದೂರರ ಮೇಲೆ ಅತ್ಯಂತ ಪ್ರಭಾವ ಬೀರಿದವರು ಮಹಾತ್ಮಗಾಂಧಿ. ೧೯೧೫ರಲ್ಲಿ ವಾರಣಾಸಿಗೆ ಆಗಮಿಸಿದ ಗಾಂಧಿಯವರು ಮಾಡಿದ ಭಾಷಣವನ್ನು ಕೇಳಿದಾಗ ಲಾಲ್ ಬಹಾದೂರರ ಮೈಯಲ್ಲಿ ವಿದ್ಯುತ್ ಸಂಚಾರವಾಯಿತು. ಅವರ ಬಾಳು ದೇಶಕ್ಕೆ ಮುಡಿಪಾಯಿತು.

ಗಾಂಧಿಯವರು ದೇಶದ ಸ್ವಾತಂತ್ರ‍್ಯಕ್ಕಾಗಿ ಅಸಹಕಾರ ಚಳವಳಿ ಹೂಡಿದಾಗ (೧೯೨೧) ಬ್ರಿಟಿಷರ ಅನ್ಯಾಯದ ಆಡಳಿತದಲ್ಲಿ ಸಹಕರಿಸುವುದಿಲ್ಲವೆಂದು ಘೋಷಿಸಿದಾಗ ಲಾಲ್ ಬಹಾದುರರಿಗೆ ಕೇವಲ ಹದಿನೇಳು ವರ್ಷ. ಸರ್ಕಾರಿ, ಶಾಲೆ, ಕಾಲೇಜು, ನ್ಯಾಯಾಲಯ, ಕಛೇರಿಗಳನ್ನು ಬಹಿಷ್ಕರಿಸಬೇಕು; ರಾಷ್ಟ್ರಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಬೇಕು ಎಂಬ ಕರೆಗೆ ಓಗೊಟ್ಟು, ಶಾಲೆಯಿಂದ ಹೊರಬಂದರು.

ತಾಯಿಯೂ ಬಂಧುಗಳೂ ಹುಡುಗನಿಗೆ ಎಷ್ಟೆಷ್ಟೋ ಬುದ್ಧಿವಾದ ಹೇಳಿದರು. ಹುಡುಗನದು ಒಂದೇ ಹಠ.

ಸರ್ಕಾರದ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಹೊರಟಿದ್ದ ಮೆರವಣಿಗೆಯಲ್ಲಿ ಲಾಲ್ ಬಹಾದೂರರೂ ಭಾಗವಹಿಸಿದರು. ಪೊಲೀಸರು ಅವರನ್ನು ಬಂಧಿಸಿದರು. ಆದರೆ ಲಾಲ್ ಬಹಾದುರ‍್ ಎಷ್ಟಾದರೂ ಹುಡುಗ. ಪೊಲೀಸರು ಅವರನ್ನು ಬಿಟ್ಟುಬಿಟ್ಟರು.

ಆದರೆ ಲಾಲ್ ಬಹಾದೂರ‍್ ಮಾತ್ರ ಬಿಟ್ಟ ಶಾಲೆಯಲ್ಲಿ ಮತ್ತೆ ಕಾಲಿರಿಸಲಿಲ್ಲ. ಕಾಶಿ ವಿದ್ಯಾಪೀಠವೆಂಬ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾದರು. ಅಲ್ಲಿದ್ದ ನಾಲ್ಕು ವರ್ಷಗಳಲ್ಲಿ ಅವರು ಕಲಿತದ್ದು ಅಗಾಧ. ವಿದ್ಯಾಪೀಠದ ಪ್ರಾಚಾರ್ಯರಾಗಿದ್ದ ಡಾ. ಭಗವಾನ್ ದಾಸರು ಬೋಧಿಸಿದ ತತ್ವಶಾಸ್ತ್ರ ಲಾಲ್ ಬಹಾದೂರರಿಗೆ ಬಹಳವಾಗಿ ಹಿಡಿಸಿತು. ಇತರರು ಎಷ್ಟೇ ಬಡಿದಾಡುತ್ತಿರಲಿ, ಅದನ್ನು ಮನಸ್ಸಿಗೆ ಅಂಟಿಸಿಕೊಳ್ಳದೆ ಇರುವಂಥ ಸಮಚಿತ್ತವನ್ನು ಲಾಲ್ ಬಹಾದೂರರು ಸಂಪಾದಿಸಿಕೊಂಡದ್ದು ಭಗವಾನ್ ದಾಸರಿಂದ.

೧೯೨೬ರಲ್ಲಿ ಲಾಲ್ ಬಹಾದೂರರು ’ಶಾಸ್ತ್ರಿ’ ಪದವಿ ಗಳಿಸಿ ಕಾಶಿ ವಿದ್ಯಾಪೀಠದಿಂದ ಹೊರಬಂದರು. ಇಡೀ ದೇಶವೇ ಆವರ ಸಾಧನೆಯ ರಂಗವಾಯಿತು. ಲಾಲಾ ಲಜಪತರಾಯರು ೧೯೨೧ರಲ್ಲಿ ಸ್ಥಾಪಿಸಿದ ಜನಸೇವಕ ಸಂಘದ ಅಜೀವ ಸದಸ್ಯರಾಗಿ ಲಾಲ್ ಬಹಾದುರರು ಸೇರಿಕೊಂಡರು. ದೇಶದ ಏಳಿಗೆಗಾಗಿ ಬಾಳನ್ನು ಮುಡಿಪಾಗಿ ಇಟ್ಟು ದುಡಿಯಬಲ್ಲ ಸ್ವಯಂ ಸೇವಕರನ್ನು ತರಬೇತು ಮಾಡುವುದು ಈ ಸಂಸ್ಥೆಯ ಉದ್ದೇಶ. ಕನಿಷ್ಠ ಪಕ್ಷ ಇಪ್ಪತ್ತು ವರ್ಷಗಳ ಕಾಲ ಸಂಸ್ಥೆಯಲ್ಲಿ ದುಡಿಯುವುದಾಗಿಯೂ, ಅಜೀವ ಪರ್ಯಂತ ಸರಳ ನೇರ ಬದುಕು ನಡೆಸುವುದಾಗಿಯೂ ಇದರ ಪ್ರತಿಯೊಬ್ಬ ಸದಸ್ಯನೂ ಪ್ರತಿಜ್ಞೆ ಮಾಡಬೇಕಾಗಿತ್ತು. ತಮ್ಮ ಶ್ರದ್ಧೆ ದುಡಿಮೆಗಳಿಂದ  ಲಾಲ್ ಬಹಾದೂರರು ಲಾಲ ಲಜಪತರಾಯರ ಮೆಚ್ಚುಗೆ ಗಳಿಸಿದರು. ಮುಂದೆ ಆ ಸಂಸ್ಥೆಯ ಅಧ್ಯಕ್ಷರೂ ಆದರು. ೧೯೨೭ರಲ್ಲಿ ಇವರ ವಿವಾಹವಾಯಿತು. ಲಲಿತಾದೇವಿ ಮಿರ್ಜಾಪುರದ ಹೆಣ್ಣು. ಮದುವೆ ಅತ್ಯಂತ ಸರಳವಾಗಿ ನಡೆಯಿತು. ಮದುಮಗ ಮಾವನಿಂದ ಕೇಳಿದ ವರದಕ್ಷಿಣೆಯೆಂದರೆ ಒಂದು ಚರಕಾ ಮತ್ತು ಕೆಲವು ಗಜಗಳ ಒರಟು ಖಾದಿ ಬಟ್ಟೆ,

೧೯೩೦ರಲ್ಲಿ ದೇಶದಲ್ಲಿ ಸ್ವಾತಂತ್ರ‍್ಯ ಹೋರಾಟ ತೀವ್ರವಾಯಿತು. ಗಾಂಧಿಯವರು ಉಪ್ಪಿನ ಸತ್ಯಾಗ್ರಹವನ್ನಾರಂಭಿಸಿದರು. ಲಾಲ್ ಬಹಾದೂರರು ಚಳವಳಿಯಲ್ಲಿ ವಹಿಸಿದ ಪಾತ್ರ ಪ್ರಮುಖವಾದದ್ದು.

ತಮ್ಮ ಹದಿನೇಳನೆಯ ವಯಸ್ಸಿನಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧವಾದ ಮೆರವಣಿಗೆಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಸೆರೆ ಹಿಡಿದು ಕೂಡಲೇ ಬಿಟ್ಟಿದ್ದ ಸರ್ಕಾರ ಈ ಸಾರಿ ಲಾಲ್ ಬಹಾದೂರರನ್ನು ಕ್ಷಮಿಸಲಿಲ್ಲ. ಕಂದಾಯ ಕೊಡಬೇಡಿ, ತೆರಿಗೆ ಸಲ್ಲಿಸಬೇಡಿ ಎಂದು ಉಪದೇಶ ಮಾಡುತ್ತಿದ್ದ ಲಾಲ್ ಬಹಾದೂರರ ಮೇಲೆ ಅದು ಕೆಂಗಣ್ಣು ಬೀರಿತು. ಅವರಿಗೆ ಎರಡೂವರೆ ವರ್ಷಗಳ ಕಾರಾಗೃಹ ಶಿಕ್ಷೆಯಾಯಿತು. ಅಲ್ಲಿಂದ ಮುಂದಕ್ಕೆ ಲಾಲ್  ಬಹಾದೂರರಿಗೆ ಜೈಲೇ ಎರಡನೇಯ ಮನೆಯಾಯಿತು. ಒಟ್ಟು ಏಳು ಸಾರಿ ಅವರು ಸೆರೆವಾಸ ಮಾಡಿದರು. ಅವರು ಸೆರೆಮನೆಯಲ್ಲಿ ಕಳೆದ ಕಾಲ ಒಟ್ಟು ಒಂಬತ್ತು ವರ್ಷ.

ಲಾಲ್ ಬಹಾದುರ‍್ ಜೈಲಿನ ಒಳಗಿದ್ದದ್ದೂ ಒಂದು ದೃಷ್ಟಿಯಲ್ಲಿ ಒಳ್ಳೆಯದೇ ಆಯಿತು. ಅಲ್ಲಿ ಅವರು ಅನೇಕ ಒಳ್ಳೆಯ ಪುಸ್ತಕಗಳನ್ನು ಓದಿದರು. ಪಾಶ್ಚಾತ್ಯ ತತ್ವಜ್ಞಾನಿಗಳ, ಕ್ರಾಂತಿವಾದಿಗಳ, ಸಮಾಜಸುಧಾರಕರ ವಿಚಾರಗಳ ಪರಿಚಯ ಪಡೆದರು. ಮದಾಂ ಕ್ಯೂರಿ ಎಂಬ ವಿಜ್ಞಾನಿಯ ಆತ್ಮಕಥೆಯನ್ನು ಹಿಂದಿಗೆ ಅನುವಾದಿಸಿದರು.

ಜೈಲಿನಲ್ಲಿ ಕೂಡ ಲಾಲ್ ಬಹಾದುರರ ಒಳ್ಳೆಯ ಗುಣಗಳು ಪ್ರಕಾಶಕ್ಕೆ ಬರದೆ ಇರಲಿಲ್ಲ. ಲಾಲ್ ಬಹಾದುರ‍್ ಆದರ್ಶ ಬಂಧಿ. ಶಿಸ್ತು, ಸಂಯಮಗಳಲ್ಲಿ ಇವರು ಇತರರಿಗೆ ಮೇಲ್ಪಂಕ್ತಿ. ಅನೇಕ ರಾಜಕೀಯ ಬಂಧಿಗಳು ಅಲ್ಪ ವಿಷಯಕ್ಕೂ ತಮ್ಮ ತಮ್ಮಲ್ಲೇ ಕಚ್ಚಾಡುತ್ತಿದ್ದರು. ಸಣ್ಣಪುಟ್ಟ ಅನುಕೂಲಗಳಿಗಾಗಿ ಜೈಲಿನ ಅಧಿಕಾರಿಗಳ ಮುಂದೆ ಹಲ್ಲು ಕಿರಿಯುತ್ತಿದ್ದರು. ಆದರೆ ಲಾಲ್ ಬಹಾದುರ‍್ ತಮಗೆ ದೊರಕಿದ್ದ ಅನುಕೂಲಗಳನ್ನೂ ಅನೇಕ ವೇಳೆ ಇತರರಿಗೆ ಬಿಟ್ಟುಕೊಟ್ಟರು.

ಜೈಲಿನ ಸೂರಿನ ಅಡಿಯಲ್ಲೂ ತಮ್ಮ ಅಭಿಮಾನಕ್ಕೆ ಕುಂದುಂಟು ಮಾಡಿಕೊಳ್ಳದೆ ಇದ್ದದ್ದು ಲಾಲ್ ಬಹಾದುರರ ಹೆಚ್ಚುಗಾರಿಕೆ. ಒಮ್ಮೆ ಇವರು ಜೈಲಿನಲ್ಲಿದ್ದಾಗ ಅವರ ಒಬ್ಬ ಮಗಳು ತೀವ್ರ ಅಸ್ವಸ್ಥಳಾಗಿ ಹಾಸಿಗೆ ಹಿಡಿದಳು. ಲಾಲ್ ಬಹಾದೂರರನ್ನು ತಾತ್ಕಾಲಿಕವಾಗಿ ಜೈಲಿನಿಂದ ಹೊರಕ್ಕೆ ಬಿಡಲು ಜೈಲಿನ ಆಧಿಕಾರಿಗಳು ಒಪ್ಪಿದರಾದರೂ ಆ ಕಾಲದಲ್ಲಿ ಅವರು ಚಳವಳಿಯಲ್ಲಿ ಭಾಗವಹಿಸುವುದಿಲ್ಲವೆಂದು ಬರೆದು ಕೊಡಬೇಕೆಂಬುದು ಅವರ ಷರತ್ತು. ’ತಾತ್ಕಾಲಿಕವಾಗಿ ಜೈಲಿನ ಹೊರಗಿದ್ದಾಗ ಚಳುವಳಿಯಲ್ಲಿ ಭಾಗವಹಿಸುವುದು ನನ್ನ ಉದ್ದೇಶವಲ್ಲವಾದರೂ ನಾನು ಹಾಗೆಂದು ಬರೆದುಕೊಡಲಾರೆ’ ಎಂದು ಲಾಲ್ ಬಹಾದುರ‍್ ಉತ್ತರ ನೀಡಿದರು. ಹಾಗೆ ಬರೆದುಕೊಡುವುದು ತಮ್ಮ ಆತ್ಮಗೌರವಕ್ಕೆ ಕುಂದು ಎಂಬುದು ಅವರ ಭಾವನೆ. ಲಾಲ್ ಬಹಾದುರ‍್ ಸತ್ಯಸಂಧರೆಂಬುದು ಜೈಲಿನ ಅಧಿಕಾರಿಗಳಿಗೆ ಗೊತ್ತಿತ್ತು. ಕೊನೆಗೆ ಅವರು ಆ ಷರತ್ತಿನ ಬಗ್ಗೆ ಒತ್ತಾಯ ಮಾಡದೆ ಲಾಲ್ ಬಹಾದೂರನ್ನು ಹದಿನೈದು ದಿನಗಳ ಅವಧಿಗೆ ಹೊರಗೆ ಬಿಟ್ಟರು.

ಬಲಪ್ರಯೋಗವನ್ನು ಬಲಪ್ರಯೋಗದಿಂದಲೇ ಎದುರಿಸುತ್ತೇವೆ ಎಂದು ಶಾಸ್ತ್ರಿ ೧೯೬೫ರಲ್ಲಿ ಹೇಳಿದರು

ಆದರೆ ಲಾಲ್ ಬಹಾದೂರ‍್ ಮನೆ ತಲುಪುವ ವೇಳೆಗೆ ಸಾವು ಅವರ ಮಗಳ ಜೀವನವನ್ನು ಬಲಿತೆಗೆದುಕೊಂಡಿತ್ತು. ಲಾಲ್ ಬಹಾದುರ‍್ ಮಗಳ ಅಂತ್ಯಕ್ರಿಯೆ ಮಾಡಿ, ಹದಿನೈದು ದಿನಗಳ ಅವಧಿ ಮುಗಿಯುವುದಕ್ಕೂ ಮುಂಚೆಯೇ ಜೈಲಿಗೆ ಹಿಂದಿರುಗಿದರು.

ಆಮೇಲೆ ಒಂದು ವರ್ಷ ಕಳೆಯಿತು. ಅವರ ಮಗ ವಿಷಮಶೀತ ಜ್ವರಕ್ಕೆ ಒಳಗಾದ. ಲಾಲ್ ಬಹಾದುರರಿಗೆ ಬೇಸರತ್ತಾಗಿ ಒಂದು ವಾರ ಕಾಲ ತಾತ್ಕಾಲಿಕವಾಗಿ ಹೊರಗೆ ಇರಲು ಅವಕಾಶ ಲಭಿಸಿತು. ಆ ಅವಧಿ ಮುಗಿಯುವ ವೇಳೆಗೆ ಮಗನ ಜ್ವರ ಇಳಿಯಲಿಲ್ಲ. ಲಾಲ್ ಬಹಾದುರರು ಜೈಲಿಗೆ ಹಿಂದಿರುಗಲು ಹೊರಟು ನಿಂತರು. ಜ್ವರ ಪೀಡಿತ ಮಗ ಕಣ್ಣಿನಲ್ಲೇ ಅಂಗಲಾಚಿದ. ’ಹೋಗಬೇಡ” ಎಂದು ಮೆತ್ತಗೆ ಹೇಳಿದ.

ತಂದೆಯ ಮನಸ್ಸು ಒಂದು ಕ್ಷಣ ವಿಚಲಿತವಾಯಿತು. ಅವರ ಕಣ್ಣುಗಳಲ್ಲಿ ನೀರು ಉರುಳಿತು.

ಮರುಕ್ಷಣವೇ ಅವರು ನಿರ್ಧಾರ ಮಾಡಿಕೊಂಡರು. ಎಲ್ಲರಿಗೂ ನಮಸ್ಕರಿಸಿ ಜೈಲಿಗೆ ಹೊರಟೇಬಿಟ್ಟರು.

ಮಗ ಬದುಕಿಕೊಂಡ.

ದೇಶದ ನಾಯಕನಿಗೆ ಇರಲೇಬೇಕಾದ ಎರಡು ಮುಖ್ಯ ಗುಣಗಳೆಂದರೆ ನಿಷ್ಠೆ ಮತ್ತು ದಕ್ಷತೆ. ಇವೆರಡು ಗುಣಗಳೂ ಲಾಲ್ ಬಹಾದುರರಿಗೆ ಯಥೇಚ್ಚವಾಗಿದ್ದವು. ಎಂಥ ಸಮಯದಲ್ಲೂ ತಮ್ಮ ಗುರಿಯನ್ನೂ ಬಿಟ್ಟುಕೊಡದ ನಿಶ್ಚಲತೆ ಲಾಲ್ ಬಹಾದೂರರದು. ಸ್ವಾತಂತ್ರ‍್ಯಕ್ಕಾಗಿ ಭಾರತದ ಜನ ಹೋರಾಟ ನಡೆಸುತ್ತಿದ್ದ ಕಾಲದಲ್ಲಿ ಲಾಲ್ ಬಹಾದೂರರು ಸ್ವಂತ ಸುಖವನ್ನು ಕಡೆಗಣಿಸಿ ಆ ಹೋರಾಟದಲ್ಲಿ ಮನಃಪೂರ್ವಕವಾಗಿ ಧುಮುಕಿದರು. ಮಗಳ ಸಾವು, ಮಗನ ಕಾಯಿಲೆ, ಬಡತನ ಯಾವುದೂ ಅವರನ್ನು ಅಡ್ಡ ಹಾದಿ ಹಿಡಿಯುವಂತೆ ಮಾಡಲಿಲ್ಲ. ಮುಂದೆ ಮಂತ್ರಿಯಾಗಿ, ಆನಂತರ ಭಾರತದ ಪ್ರಧಾನಿಯಾದಾಗಲೂ ವೈಭವದ ಜೀವನಕ್ಕೆ ಅವರು ಎಂದೂ ಮನಸೋಲಲಿಲ್ಲ.

೧೯೩೯ರಲ್ಲಿ ಎರಡನೆಯ ಮಹಾಯುದ್ಧದಲ್ಲಿ ಬ್ರಿಟಿಷರು ಭಾರತವನ್ನು ಸಿಲುಕಿಸಿದಾಗ ಭಾರತದ ನಾಯಕರಿಗೆ ಉಭಯ ಸಂಕಟ ಪ್ರಾಪ್ತವಾಗಿತ್ತು. ಭಾರತೀಯರು ಗುಲಾಮರಾಗಿ ಬ್ರಿಟನ್ನಿಗೆ ಬೆಂಬಲ ನೀಡುವುದಾದರೂ ಹೇಗೆ?

ಕೊನೆಗೆ ಭಾರತದ ನಾಯಕರು ಅನ್ಯಥಾ ಮಾರ್ಗವಿಲ್ಲದೆ ಸ್ವಾತಂತ್ರ‍್ಯಕ್ಕಾಗಿ ಬ್ರಿಟಿಷ್ ಸರ್ಕಾರದ ವಿರುದ್ಧ ಸತ್ಯಾಗ್ರಹ ಹೂಡಬೇಕಾಯಿತು. (೧೯೪೦). ಸತ್ಯಾಗ್ರಹವೆಂದರೆ ಸತ್ಯದಿಂದ ಕೂಡಿದ ವಿರೋಧ. ಆಗ ಆರಂಭವಾದ ವೈಯಕ್ತಿಕ ಸತ್ಯಾಗ್ರಹ ಹೂಡಿದ ಮೊದಲಿಗರ ಪೈಕಿ ಲಾಲ್ ಬಹಾದೂರರೂ ಒಬ್ಬರು. ಅವರಿಗೆ ಸರ್ಕಾರ ಒಂದು ವರ್ಷದ ಕಾರಾಗೃಹವಾಸದ ಶಿಕ್ಷೆ ವಿಧಿಸಿತು,.

ಸ್ವಾತಂತ್ರ‍್ಯ ಹೋರಾಟ ಮತ್ತೆ ಬಿರುಸಾಯಿತು. ಸೆರೆಮನೆಗಳು ಸತ್ಯಾಗ್ರಹಿಗಳಿಂದ ತುಂಬುತ್ತಿದ್ದವು.

ಕೊನೆಗೆ, ೧೯೪೨ರಲ್ಲಿ ಆಗಸ್ಟ್ ೮ ರಂದು, ಆಗ ಎಲ್ಲ ಜನರ ಪರವಾಗಿ ಹೋರಾಟದ ಹೊಣೆ ಹೊತ್ತಿದ್ದ  ಭಾರತ ರಾಷ್ಟ್ರೀಯ ಕಾಂಗ್ರೆಸ್ಸು ಮುಂಬಯಿಯಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಅಂತಿಮ ಹೋರಾಟದ ಕಹಳೆ ಊದಿತು. ’ಭಾರತ ಬಿಟ್ಟು ತೊಲಗಿ’ ಎಂದು ಘೋಷಿಸಿತು. ’ಮಾಡು ಇಲ್ಲವೇ ಮಡಿ’ ಎಂಬುದೇ ಆಘ ಜನರು ಮಾಡಿದ ನಿರ್ಧಾರ.

ಜ್ವರಪೀಡಿತ ಮಗ ’ಹೋಗಬೇಡಿ;’ ಎಂದ ಆದರೆ ಲಾಲ್ ಬಹಾದೂರರು ನಿರ್ಧಾರ ಮಾಡಿ ಜೈಲಿಗೇ ಹೊರಟೇ ಬಿಟ್ಟರು.

ಸರ್ಕಾರ ಒಡನೆಯೇ ಎಗರಿಬಿತ್ತು. ನಾಯಕರನೇಕರು ದಸ್ತಗಿರಿಯಾದರು. ಜೈಲುಗಳು ಭರ್ತಿಯಾದುವು. ಸರ್ಕಾರ ತನಗೆ ಗೊತ್ತಿದ್ದ ಎಲ್ಲ ಕ್ರೂರ ವಿಧಾನಗಳನ್ನೂ ಬಳಸಿ ಚಳವಳಿಯನ್ನು ಹೊಸಕಿ ಹಾಕಲು ಪ್ರಯತ್ಹಿಸಿತು.

ಆಗ ತಾನೇ ಒಂದು ವರ್ಷದ ಶಿಕ್ಷೆ ಮುಗಿಸಿ ಹೊರಗೆ ಬಂದಿದ್ದ ಲಾಲ್ ಬಹಾದೂರರು ಮುಂಬಯಿಯಿಂದ ಅಲಹಾಬಾದಿಗೆ ರೈಲಿನಲ್ಲಿ ಹೋದರು. ಬೇರೊಂದು ನಿಲ್ದಾಣದಲ್ಲಿ ಇಳಿದು ಪೊಲೀಸರಿಂದ ತಪ್ಪಿಸಿಕೊಂಡರು. ಒಂದು ವಾರ ಅಲಹಾಬಾದಿನಲ್ಲಿ ನೆಹರೂರವರ ಮನೆಯಾಗಿದ್ದ ಆನಂದ ಭವನದಿಂದ ಹೋರಾಟಗಾರರಿಗೆ ಸೂಚನೆಗಳನ್ನು ಕಳುಹಿಸುತ್ತಿದ್ದರು.

ಜವಹರಲಾಲರ ತಂಗಿ ವಿಜಯಲಕ್ಷ್ಮಿ, ಪಂಡಿತರು ಇದ್ದದ್ದೂ ಆನಂದ ಭವನದಲ್ಲೇ. ಅವರನ್ನು  ದಸ್ತಗಿರಿ ಮಾಡಬೇಕೆಂದೂ ಆನಂದಭವನವನ್ನು ಜಪ್ತಿ ಮಾಡಬೇಕೆಂದೂ ಪೊಲೀಸರು ಬಂದರು. ಲಾಲ್ ಬಹಾದೂರರು ಮುಖ್ಯ ಕಾಗದಗಳನ್ನೆಲ್ಲ ನಾಶಪಡಿಸಿದರು. ದೈವವಶಾತ್ ಪೊಲೀಸರು ವಿಜಯಲಕ್ಷ್ಮಿ ಪಂಡಿತರನ್ನು ಮಾತ್ರ ದಸ್ತಗಿರಿ ಮಾಡಿಕೊಂಡು ಹೊರಟು ಹೋದರು.

ಕೆಲವು ದಿನಗಳ ನಂತರ ಲಾಲ್ ಬಹಾದೂರರೇ ಹೊರಬಂದು ಬ್ರಿಟಿಷರ ವಿರುದ್ಧವಾದ ಘೋಷಣೆ ಕೂಗಿದರು. ಪೊಲೀಸರು ಅವರನ್ನು ಹಿಡಿಯದೇ ಬಿಡಲಿಲ್ಲ.

೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ‍್ಯ ಬಂತು.

ಅಲ್ಲಿಂದ ಮುಂದಕ್ಕೆ ಲಾಲ್ ಬಹಾದುರರ ಆಡಳಿತ ದಕ್ಷತೆಯೂ ಸಂಘಟನೆಯ ಚಾತುರ್ಯವೂ ಪ್ರಕಾಶಕ್ಕೆ ಬಂದುವು. ಜನರನ್ನು ಒಂದು ಗೂಡಿಸಿ ಅವರ ಮನಸ್ಸನ್ನು ಗೆಲ್ಲುವ ಕೆಲಸದಲ್ಲಿ ಲಾಲ್ ಬಹಾದೂರ‍್ ಪ್ರವೀಣರು. ಅವರ ಈ ಗುಣವನ್ನು ಕಂಡುಕೊಂಡು ಉತ್ತೇಜನ ನೀಡಿದವರು ಪಂಡಿತ ಗೋವಿಂದವಲ್ಲಭ ಪಂತ್. ಅವರು ಉತ್ತರಪ್ರದೇಶದ ನಾಯಕರು. ೧೯೪೯ರಲ್ಲಿ ಪ್ರಾಂತಗಳಲ್ಲಿ ನಡೆದ ಚುನಾವಣೆಯಲ್ಲಿ ಲಾಲ್ ಬಹಾದುರರು ಮಾಡಿದ ಕೆಲಸದಿಂದ ಗೋವಿಂದವಲ್ಲಭ ಪಂತರ ಪ್ರೀತಿ ಗಳಿಸಿದರು. ಆಗ ಲಾಲ್ ಬಹಾದುರರಿಗೆ ಪಕ್ಷದ ಕಛೇರಿಯೇ ಮನೆಯಾಗಿತ್ತು. ಕೊನೆಗೂ ಅವರ ಪಕ್ಷಕ್ಕೆ ಪ್ರಚಂಡ ಜಯ ಲಭಿಸಿತು.

ಪಂಡಿತ ಗೋವಿಂದವಲ್ಲಭ ಪಂತರು ಉತ್ತರಪ್ರದೇಶದ ಮುಖ್ಯಮಂತ್ರಿಯಾದಾಗ ದಕ್ಷರಾದ ಯುವಕರನ್ನು ಸರ್ಕಾರದ ಕಾರ್ಯಕ್ಕಾಗಿ ತರಬೇತು ಮಾಡಬೇಕೆಂಬುದು ಅವರ ಅಭಿಲಾಷೆ. ಆದರೆ ಅವರ ಬಳಿ ಸೈ ಎನಿಸಿಕೊಳ್ಳುವುದು ಸುಲಭವಲ್ಲ. ಅಧಿಕಾರ ಲಾಲ್ ಬಹಾದುರರಿಗೆ ಬೇಕಿರಲಿಲ್ಲ. ಆದರೂ ಪಂತರ ಸಂಸದೀಯ ಕಾರ್ಯದರ್ಶಿಯಾಗಿ ನೇಮಕವಾದರು. ವಿನಯಶಾಲಿ, ಕಾರ್ಯಶೀಲ,  ನಿಷ್ಠಾವಂತ, ಪ್ರಾಮಾಣಿಕ, ವೃಥಾವಾದಗಳಿಗೆ ಗುರಿಯಾಗುವವರಲ್ಲ ಎಂದು ಲಾಲ್ ಬಹಾದುರರನ್ನು ಪಂತರು ಹೊಗಳಿದರು.

ಸ್ವಾತಂತ್ರ್ಯದ ಹೊಣೆ

ಪಂತರ ಸಂಪುಟದಲ್ಲಿ ಲಾಲ್ ಬಹಾದುರರು ಅನಂತರ (೧೯೪೭) ಪೊಲೀಸ್ ಮತ್ತು ಸಾರಿಗೆ ಮಂತ್ರಿಯಾದರು. ಆಗ ರಾಜ್ಯದಲ್ಲಿ ಶಿಸ್ತು ತರಲು ಇವರು ಕೈಗೊಂಡ ಕ್ರಮಗಳು ಅನೇಕ. ಸಾರಿಗೆ ಮಂತ್ರಿಯಾಗಿ ಸರ್ಕಾರಿ ಬಸ್ಸುಗಳನ್ನು ಶಿಸ್ತಿಗೆ ಒಳಪಡಿಸಿದರು. ಅಲ್ಲಿ ಮಹಿಳಾ ಕಂಡಕ್ಟರುಗಳ ನೇಮಕ ಮಾಡಲು ಇವರೇ ಕಾರಣ. ಪೊಲೀಸ್ ಮಂತ್ರಿಯಾದರೂ ಸಾಮಾನ್ಯವಾಗಿ ಜನಪ್ರಿಯರಾಗಿ ಉಳಿಯುವುದಿಲ್ಲ. ಆದರೆ ಲಾಠಿ, ಗುಂಡುಗಳನ್ನು ಜನರ ಮೇಲೆ ಪ್ರಯೋಗಿಸಲು ಇವರು ಅವಕಾಶ ಕೊಡಲಿಲ್ಲ. ಗಲಭೆಕೋರರ ಗುಂಪುಗಳನ್ನು ಚದುರಿಸಲು ನೀರಿನ ಚಿರಿಕಿ ಬಿಡಬೇಕೆಂಬುದು ಇವರ ಆಜ್ಞೆ. ಇವರ ಆ ಅಧಿಕಾರದ ಕಾಲದಲ್ಲಿ ಉತ್ತರಪ್ರದೇಶದಲ್ಲಿ ಅನೇಕ ಮುಷ್ಕರಗಳಾದರೂ ಒಮ್ಮೆಯಾದರೂ ಜನರು ಇವರ ವಿರುದ್ಧವಾಗಿ ಘೋಷಣೆಗಳನ್ನು ಕೂಗಲಿಲ್ಲ.

ಲಾಲ್ ಬಹಾದೂರರಿಗೆ ಕ್ರಿಕೆಟ್ ಆಟವೆಂದರೆ ತುಂಬ ಪ್ರೀತಿ. ಒಮ್ಮೆ ಕಾನ್ಪುರದಲ್ಲಿ ಇವರು ಕ್ರಿಕೆಟ್ ಪಂದ್ಯವೊಂದನ್ನು ವೀಕ್ಷಿಸುತ್ತಿದ್ದಾಗ ಪ್ರೇಕ್ಷಕರ ಗುಂಪಿನಲ್ಲಿ ಗಲಭೆಯಾಯಿತು. ಪೊಲೀಸರು ನಡುವೆ ಪ್ರವೇಶಿಸಿದರು. ಅವರಿಗೂ ಅಲ್ಲಿದ್ದ ಯುವಕರಿಗೂ ನಡುವೆ ಕೈ ಮಿಲಾಯಿಸಿತು. ಲಾಲ್ ಬಹಾದುರರು ಅಲ್ಲೇ ಇದ್ದುದರಿಂದ ಪರಿಸ್ಥಿತಿ ತೀವ್ರವಾಗಲಿಲ್ಲ. ಈ ಕೆಂಪು ಪೇಟಗಳು (ಪೊಲೀಸರು) ಆಟದ ಮೈದಾನದಲ್ಲಿ ಇರಬಾರದು ಎಂಬ ಯುವಕರ ಷರತ್ತಿಗೆ ಲಾಲ್ ಬಹದೂರ‍್ ಒಪ್ಪಿದರು. ಆದರೆ ಮರುದಿನವೂ ಪೊಲೀಸರು ಅಲ್ಲಿದ್ದುದನ್ನು ನೋಡಿ ಯುವಕರಿಗೆ ಕೋಪ ಬಂತು. ಸರ್ಕಾರ ಮಾತಿಗೆ ತಪ್ಪಿ ನಡೆಯಿತೆಂಬುದು ಅವರ ಆರೋಪ. ಲಾಲ್ ಬಹಾದೂರ‍್ ನಗುತ್ತಾ ನುಡಿದರು : ’ಸರ್ಕಾರ ವಚನಭಂಗ ಮಾಡಿಲ್ಲ. ಕೆಂಪು ಪೇಟಗಳು ಇರಬಾರದೆಂದು ನೀವು ಹೇಳಿದ್ದಿರಿ. ಪೊಲೀಸರು ಖಾಕಿ ಪೇಟ ಧರಿಸಿದ್ದಾರೆ, ನೋಡಿ’ ಯುವಕರು ನಕ್ಕು ಸುಮ್ಮನಾದರು.

ಭಾರತದ ಗಣರಾಜ್ಯವಾದ ಮೇಲೆ ನಡೆದ ಮೊದಲನೆಯ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಪ್ರಚಂಡ ವಿಜಯ ಪ್ರಾಪ್ತವಾಗಲು ಬಹಳವಾಗಿ ಕೆಲಸ ಮಾಡಿದವರು ಲಾಲ್ ಬಹಾದುರರು. ಆಗ ಇವರ ಪಕ್ಷದ ಮಹಾಕಾರ್ಯದರ್ಶಿಯಾಗಿದ್ದರು. ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಕಾರ್ಯಕ್ರಮದ ನಿರ್ದೇಶನ ಇವೆಲ್ಲವನ್ನೂ ಪ್ರತ್ಯಕ್ಷವಾಗಿ ನಿರ್ವಹಿಸಿದವರು ಅವರು. ಆದರೆ ಅವರು ಮಾತ್ರ ಚುನಾವಣೆಗೆ ನಿಲ್ಲಲಿಲ್ಲ. ಆದರೆ ಇಷ್ಟು ದಕ್ಷರೂ ನಿಸ್ಪೃಶ್ಯರೂ ಆದಂಥವರನ್ನು ಹೊರಗೆ ಬಿಡಲು ನೆಹರೂ ಇಷ್ಟಪಡಲಿಲ್ಲ. ರಾಜ್ಯಸಭೆಗೆ ಚುನಾವಣೆಗೆ ನಿಲ್ಲಲು ಅವರು ಲಾಲ್ ಬಹಾದುರರನ್ನು ಬಲವಂತ ಮಾಡಿ ಒಪ್ಪಿಸಿದರು. ಕೇಂದ್ರ ಸರ್ಕಾರದಲ್ಲಿ ಲಾಲ್ ಬಹಾದೂರರು ರೈಲ್ವೆ ಮತ್ತು ಸಾರಿಗೆ ಮಂತ್ರಿಯಾಗಿ ನೇಮಕವಾದರು (೧೯೫೨)

ರೈಲ್ವೆ ನಮ್ಮ ದೇಶದ ಬಹು ದೊಡ್ಡ ಸರ್ಕಾರಿ ಉದ್ಯಮ. ದೇಶದ ಅಭ್ಯುದಯಕ್ಕೆ ನಮ್ಮ ಸಾರಿಗೆ ಬಹಳ ಮುಖ್ಯವಾದದ್ದು. ದೇಶದ ವಿಭಜನೆಯ ಫಲವಾಗಿ ನಮ್ಮ ರೈಲ್ವೆ ವ್ಯವಸ್ಥೆ ಬಹಳ ಜರ್ಝರಿತವಾಗಿತ್ತು. ಇದನ್ನು ಸರಿಪಡಿಸಲು ಲಾಲ್ ಬಹಾದೂರರು ಬಹಳ ಶ್ರಮಿಸಿದರು. ಸರಕುಗಳನ್ನೂ ಪ್ರಯಾಣಿಕರನ್ನೂ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವಲ್ಲಿ, ವೃಥಾ ಕಾಲ ವ್ಯಯವಾಗದಂತೆ, ತೊಂದರೆಯಾಗದಂತೆ ವ್ಯವಸ್ಥೆ ಮಾಡುವುದು ಸುಲಭದ ಕೆಲಸವಲ್ಲ. ಇದರಲ್ಲಿ ಲಾಲ್ ಬಹಾದೂರರು ಬಹಳಮಟ್ಟಿಗೆ ಸಫಲರಾದರು. ಆಗ ರೈಲ್ವೆ ಪ್ರಯಾಣಿಕರಿಗಾಗಿ ಒಂದು, ಎರಡು, ಮಧ್ಯ ಮತ್ತು ಮೂರು ಎಂಬ ನಾಲ್ಕು ತರಗತಿಗಳಿದ್ದವು. ಒಂದನೆಯ ತರಗತಿಯ ವೈಭವ ಅನುಪಮವಾದದ್ದು. ಅದೊಂದು ಸ್ವರ್ಗ. ಆದರೆ ಮೂರನೆಯ ತರಗತಿಯ ಪ್ರಯಾಣಿಕರ ಕಷ್ಟ ಹೇಳತೀರದು. ಅವರಿಗೆ ಸಾಮಾನ್ಯವಾದ ಸೌಲಭ್ಯಗಳೂ ಇರಲಿಲ್ಲ. ಈ ಅಂತರವನ್ನು ನಿವಾರಿಸಲು ಲಾಲ್ ಬಹಾದುರ‍್ ಮಾಡಿದ ಏರ್ಪಾಟುಗಳನ್ನು ಮರೆಯುವಂತಿಲ್ಲ. ರಾಜವೈಭವದಿಂದ ಕೂಡಿದ ಹಳೆಯ ಒಂದನೆಯ ತರಗತಿ ರದ್ದಾಯಿತು. ಹಳೆಯ ಎರಡನೆಯ ತರಗತಿಯನ್ನು ಒಂದನೆಯ ತರಗತಿಯೆಂದೂ ಇಂಟರ‍್ ತರಗತಿಯನ್ನು ಎರಡನೆಯ  ತರಗತಿಯೆಂದೂ ಕರೆಯಲಾಯಿತು. ಕ್ರಮೇಣ ರೈಲ್ವೆಯಲ್ಲಿ ಎರಡನೇ ತರಗತಿಗಳಿರಬೇಕು ಎಂಬುದು ಅವರ ಉದ್ದೇಶ. ಮೂರನೆಯ ತರಗತಿಯ ಪ್ರಯಾಣಿಕರಿಗೆ ಅನೇಕ ಹೊಸ ಸೌಲಭ್ಯಗಳು ಒದಗಲು ಲಾಲ್ ಬಹಾದುರರು ಕಾರಣ. ಮೂರನೆಯ ತರಗತಿಯ ಡಬ್ಬಿಗಳಲ್ಲಿ ವಿದ್ಯುತ್ ಬೀಸಣಿಗೆಯನ್ನು ಹಾಕಿದ್ದು ಅವರು ರೈಲ್ವೆ ಮಂತ್ರಿಯಾಗಿದ್ದ ಕಾಲದಲ್ಲಿ. ರೈಲ್ವೆ ಆಡಳಿತದ ಸುಧಾರಣೆ, ರೈಲ್ವೆಯಲ್ಲಿ ಕಳ್ಳತನದ ನಿವಾರಣೆ ಇವಕ್ಕಾಗಿಯೂ ಅವರು ಶ್ರಮಿಸಿದರು.

ತಮ್ಮ ಇಲಾಖೆಯಲ್ಲಿ ಏನೇ ತಪ್ಪು ಸಂಭವಿಸಿದರೂ ಅದಕ್ಕೆ ತಾವೇ ಹೊಣೆ ಎಂಬ ಮಟ್ಟಿಗೆ ಇವರು ಅದರಲ್ಲಿ ಒಂದಾಗುತ್ತಿದ್ದರು. ಇವರು ರೈಲ್ವೆ ಮಂತ್ರಿಯಾಗಿದ್ದಾಗ ೧೯೫೬ರಲ್ಲಿ ತಮಿಳುನಾಡಿನ (ಆಗ ಮದ್ರಾಸ್ ರಾಜ್ಯ) ಅರಿಯಲೂರಿನ ಬಳಿ ಸಂಭವಿಸಿದ ಅಪಘಾತದಲ್ಲಿ ೧೪೪ ಜನ ಮಡಿದರು. ಇದಕ್ಕೆ ಮೂರು ತಿಂಗಳ ಹಿಂದೆ ಮೊಹ್ಬೂಬ್ ನಗರದಲ್ಲಿ ಸಂಭವಿಸಿದ ಅಪಘಾತವೊಂದು ೧೧೨ ಜನರ ಆಹುತಿ ತೆಗೆದುಕೊಂಡಿತ್ತು. ಈ ಅಪಘಾತಗಳಿಗೆ ಲಾಲ್ ಬಹಾದುರರು ಎಷ್ಟುಮಟ್ಟಿಗೂ ಕಾರಣವಲ್ಲ. ಆದರೂ ಅವರ ಮನಸ್ಸು ಬಲು ನೊಂದುಕೊಂಡಿತು. ಇದರ ಹೊಣೆಯಿಂದ ನಾನು ತಪ್ಪಿಸಿಕೊಳ್ಳಲಾರೆ ಎಂಬುದು ಅವರ ಭಾವನೆ. ಮೆಹ್ಬೂಬ್ ನಗರದಲ್ಲಿ ಅಪಘಾತ ಸಂಭವಿಸಿದಾಗಲೇ ಅವರು ತಮ್ಮ ಮಂತ್ರಿಪದವಿಗೆ ರಾಜೀನಾಮೆ ಸಲ್ಲಿಸಿದರು. ಆದರೆ ನೆಹರೂ ಅದನ್ನು ಒಪ್ಪಲಿಲ್ಲ. ಅರಿಯಲೂರು ದುರಂತವಾದ ಮೇಲೆ, ’ಇದಕ್ಕೆ ಪ್ರಾಯಶ್ಚಿತವಾಗಿ ನಾನು ಅಧಿಕಾರದಿಂದ ಹೋಗಲೇಬೇಕು, ಬಿಟ್ಟುಕೊಡಿ’ ಎಂದು ಕೇಳಿಕೊಂಡರು. ಅವರ ಪ್ರಾಮಾಣಿಕತೆ ಅಷ್ಟೊಂದು ಮೇಲ್ಪಟ್ಟದ್ದಾಗಿತ್ತು.

ಲಾಲ್ ಬಹಾದೂರರು ಆಗ ಸಂಪುಟದಿಂದ ಹೊರಬಂದದ್ದು ಆಡಳಿತ ಪಕ್ಷಕ್ಕೆ ಒಳ್ಳೆಯದಾಯಿತು. ಮರುವರ್ಷ ನಡೆದ  ಮಹಾಚುನಾವಣೆಯಲ್ಲಿ ಅವರು ಮತ್ತೆ ಪಕ್ಷಕ್ಕಾಗಿ ಕೆಲಸ ಮಾಡಿದರು. ಆನಂತರ ಸಾರಿಗೆ ಸಂಪರ್ಕ ಮಂತ್ರಿಯಾಗಿಯೂ, ವಾಣಿಜ್ಯ ಮತ್ತು ಕೈಗಾರಿಕೆ ಮಂತ್ರಿಯಾಗಿಯೂ ಕೆಲಸ ಮಾಡಿದರು. ೧೯೬೧ರಲ್ಲಿ ಪಂತರು ತೀರಿಕೊಂಡಾಗ ಲಾಲ್ ಬಹಾದೂರ‍್ ಭಾರತದ ಗೃಹಮಂತ್ರಿಯಾದರು.

ಲಾಲ್ ಬಹದೂರರನ್ನು ಜನ ’ಗೃಹವಿಲ್ಲದ ಗೃಹಮಂತ್ರಿ’ ಎನ್ನುತ್ತಿದ್ದರು. ಅವರ ಸ್ವಂತದ್ದು ಎಂದು ಒಂದು ಮನೆಯೂ ಅವರಿಗಿರಲಿಲ್ಲ. ಅಲಹಾಬಾದಿನಲ್ಲಿ ಸಣ್ಣಮನೆಗೆ ಬಾಡಿಗೆ ಕೊಟ್ಟು ಇಟ್ಟುಕೊಂಡಿದ್ದರು. ಮಂತ್ರಿಗಳಾಗಿದ್ದಾಗಲೂ ಅಲಹಾಬಾದಿಗೆ ಹೋದಾಗ ಅಲ್ಲಿಯೇ ಇರುತ್ತಿದ್ದರು. ಕೆಲವು ದಿನಗಳ ನಂತರ ಮನೆಯಾತ ಅದನ್ನು ಬೇರೊಬ್ಬರಿಗೆ ಕೊಟ್ಟ. ಲಾಲ್ ಬಹಾದುರರು ಮಂತ್ರಿ ಪದವಿ ಬಿಟ್ಟಾಗ ಸರ್ಕಾರ ಕೊಟ್ಟ ಮನೆಯನ್ನು ಬಿಟ್ಟರು; ಇರಲು ಒಂದು ಮನೆ ಇರಲಿಲ್ಲ!

ಆ ಕಾಲದಲ್ಲಿ ದೇಶಕ್ಕೆ ಒದಗಿದ ದೊಡ್ಡ ಗಂಡಾಂತರವೆಂದರೆ ಚೀನೀಯರಿಂದ ಭಾರತದ ಉತ್ತರ ಗಡಿಯ ಆಕ್ರಮಣ (೧೯೬೨). ಹಿಮಾಲಯವನ್ನು ದಾಟಿ ಸಮುದ್ರದ ತೆರೆಗಳಂತೆ ಭಾರತದ ನೆಲದ ಮೇಲೆ ಹಾಯ್ದು ಬರುತ್ತಿದ್ದ ಆ ಆಕ್ರಮಣಕಾರಿ ಸೈನ್ಯದ ವಿರುದ್ಧವಾಗಿ ಭಾರತದ ಜನತೆ ಏಕದೇಹವೆಂಬಂತೆ ಎದ್ದು ನಿಂತಿತು. ಚೀನೀಯರು ತಾವಾಗಿಯೇ ಹಿಂದಿರುಗಿದರು. ಆದರೂ ನಮ್ಮ ನೆಲವನ್ನು ಅವರು ಬಿಟ್ಟುಕೊಡಲಿಲ್ಲ. ದ್ರೋಹ ಬಗೆದು ಚೀನ ಭಾರತದ ಸ್ನೇಹವನ್ನು ಕಳೆದುಕೊಂಡಿತು.

ಉತ್ತರದಲ್ಲಿ ಚೀನವೂ ಪೂರ್ವ ಪಶ್ಚಿಮಗಳಲ್ಲಿ ಪಾಕಿಸ್ತಾನವೂ ಕಿರುಕುಳ ಕೊಡುತ್ತಿದ್ದಾಗ ಭಾರತದ ಜನರೆಲ್ಲ ತಮ್ಮಲ್ಲಿಯೇ ಒಳಭೇದಗಳನ್ನು ಮರೆತು ಅಣ್ಣ ತಮ್ಮಂದಿರಂತೆ ಅಕ್ಕತಂಗಿಯರಂತೆ ಒಂದಾಗುವುದು ಅಗತ್ಯವಾಗಿತ್ತು. ಇಂಥ ಐಕ್ಯವನ್ನು ಭಾವೈಕ್ಯವನ್ನು ಸಾಧಿಸುವುದಕ್ಕೆ ಲಾಲ್ ಬಹಾದೂರರು ಗೃಹಮಂತ್ರಿಯಾಗಿ ತುಂಬ ಶ್ರಮಿಸಿದರು.

ಅಧಿಕಾರಕ್ಕೆ ಅಂಟಿಕೊಂಡಿದ್ದ ಕೆಲವು ಜನರು ಅನೇಕ ವೇಳೆ ತಮ್ಮ ಸಣ್ಣತನವನ್ನು ಪ್ರದರ್ಶಿಸುತ್ತಿದ್ದರು. ದೇಶವನ್ನು ಸಂಘಟಿಸುವುದಕ್ಕಿಂತ ಮಂತ್ರಿಪದವಿಗೆ ಅಂಟಿಕೊಂಡಿರುವುದೇ ಅನೇಕರ ಜೀವನದ ಧ್ಯೇಯ. ಈ ಕಾಲದಲ್ಲಿ ಆಡಳಿತ ಪಕ್ಷದ ಶುದ್ಧೀಕರಣಕ್ಕಾಗಿ ಹೊಸದಾದ ಯೋಜನೆಯೊಂದು ಜಾರಿಗೆ ಬಂತು. ರಾಜ್ಯದ ಎಲ್ಲ ಮುಖ್ಯಮಂತ್ರಿಗಳೂ ಕೇಂದ್ರದ ಹಿರಿಯ ಮಂತ್ರಿಗಳೂ ನೆಹರೂ ಅವರಿಗೆ ತಂತಮ್ಮ ರಾಜೀನಾಮೆ ಸಲ್ಲಿಸಬೇಕು. ಇವರಲ್ಲಿ ಯಾರು ಮಂತ್ರಿಯಾಗಿ ಮುಂದುವರಿಯತಕ್ಕದ್ದು, ಯಾರು ಪಕ್ಷದ ಕಾರ್ಯದಲ್ಲಿ, ದೇಶದ ಜನರನ್ನು ಸಂಘಟಿಸುವ ಕೆಲಸದಲ್ಲಿ, ನಿರತರಾಗತಕ್ಕದ್ದು ಎಂಬುದನ್ನು ನೆಹರೂ ತೀರ್ಮಾನಿಸಬೇಕು – ಎಂಬುದೇ ಈ ಯೋಜನೆ. ಇದರ ಪ್ರಕಾರ ಅವರೆಲ್ಲರೂ ತಂತಮ್ಮ ರಾಜೀನಾಮೆ ಸಲ್ಲಿಸಿದರು.

ಲಾಲ್ ಬಹಾದೂರರು ಮಂತ್ರಿಯಾಗಿಯೇ ಮುಂದುವರಿಯಬೇಕೆಂಬುದು ನೆಹರೂರವರ ಇಚ್ಚೆ. ಆದರೆ ಅವರು ಒಪ್ಪಲಿಲ್ಲ. ತಾವು ಅಧಿಕಾರ ತ್ಯಜಿಸಬೇಕೆಂದೇ ಒತ್ತಾಯ ಮಾಡಿದರು. ನೆಹರೂ ಒಪ್ಪಿಕೊಳ್ಳಲೇ ಬೇಕಾಯಿತು. ಅಧಿಕಾರದಿಂದ ಅವರ ತಲೆ ಎಂದೂ ಕೆಟ್ಟಿರಲಿಲ್ಲ. ತಾವು ನಾಯಕರಾಗಿರದಿದ್ದರೆ ದೇಶಕ್ಕೆ ಅಪಾರ ನಷ್ಟ ಎಂದು ಅವರ ಭಾವನೆಯಾಗಿರಲಿಲ್ಲ.

ಆದರೆ ಲಾಲ್ ಬಹಾದೂರ‍್ ಬಹುಕಾಲ ಸರ್ಕಾರದಿಂದ ಹೊರಗೆ ಇರುವುದು ಸಾಧ್ಯವಾಗಲಿಲ್ಲ. ಅವರು ಮಂ‌ತ್ರಿಪದವಿ ಬಿಟ್ಟ ಐದೇ ತಿಂಗಳಲ್ಲಿ ನೆಹರೂರವರ ಆರೋಗ್ಯ ಕೆಟ್ಟಿತು. ದೇಶದ ಒಗ್ಗಟ್ಟನ್ನು ಮುರಿಯುವ ಜನ ಹೆಚ್ಚುತ್ತಿದ್ದರು. ಕಾಶ್ಮೀರದ ಮುಸ್ಲಿಮರನ್ನು ಎತ್ತಿಕಟ್ಟಿ ಕೆಲವರು ಅಲ್ಲಿ ಗಲಭೆ ಎಬ್ಬಿಸಿದರು. ಬಹಾದುರರಂಥವರ ದೃಢಚಿತ್ತವೂ ಜಾದೂ ಕೈಯೂ ಸರ್ಕಾರಕ್ಕೆ ಅಗತ್ಯವಾಗಿತ್ತು. ಆದ್ದರಿಂದ ನೆಹರೂ ಲಾಲ್ ಬಹಾದೂರರನ್ನು ಮತ್ತೆ ಮಂತ್ರಿಯಾಗಬೇಕೆಂದು ಕರೆದರು. ಅವರು ಯಾವ ಖಾತೆಯೂ ಇಲ್ಲದ ಮಂತ್ರಿಯಾದರು.

೧೯೬೪ರ ಮೇ ೨೭ನೆಯ ದಿನಾಂಕ ಬಂತು ನೆಹರೂ ಹಠಾತ್ತನೆ ತೀರಿಕೊಂಡರು.

ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಲಾಲ್ ಬಹದೂರ‍್ ಅವಿರೋಧವಾಗಿ ನಾಯಕರಾಗಿ ಆಯ್ಕೆಯಾದರು. ನಾಯಕತ್ವದ ಪ್ರಶ್ನೆಯನ್ನು ಕುರಿತ ಚರ್ಚೆಯಲ್ಲಿ ಲಾಲ್ ಬಹದೂರ‍್ ಯಾವ ಆಸಕ್ತಿಯನ್ನೂ  ತಳೆಯಲಿಲ್ಲ. ಅದು ತಮಗೆ ಸಂಬಂಧಪಡದ ವಿಚಾರ ಎಂಬಂತೆ ಅವರು ದೂರ ಇದ್ದುಬಿಟ್ಟರು. ಅವರು ಆಗ ತೋರಿಸಿದ ನಿರ್ಲಿಪ್ತತೆ ಆಶ್ಚರ್ಯಕರ.

ಭಾರತದ ಗೌರವದ ರಕ್ಷಾಕವಚ

ಲಾಲ್ ಬಹಾದುರ‍್ ಪ್ರಧಾನಿಯಾಗಿದದ್ದು ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಕಾಲದಲ್ಲಿ.  ದೈಹಿಕವಾಗಿ ದುರ್ಬಲರಾಗಿದ್ದ ಈ ವ್ಯಕ್ತಿ ಆಗ ದೇಶದ ಮುಂದೆ ಬಂದ ಸಮಸ್ಯೆಗಳನ್ನೆಲ್ಲ ದಿಟ್ಟತನದಿಂಣದ ಎದುರಿಸಿದರು. ಪ್ರಧಾನಮಂತ್ರಿಯಾದ ಕೂಡಲೇ ಅವರು ಎದುರಿಸಬೇಕಾಗಿ ಬಂದು ಸಮಸ್ಯೆಯೆಂದರೆ ಪಾಕಿಸ್ತಾನವನ್ನು ಕುರಿತದ್ದು. ಭಾರತದ ನೆಲವನ್ನೇ ಕೊರೆದುಕೊಂಡು ಹುಟ್ಟಿದ ಈ ದೇಶ ಭಾರತಕ್ಕೇ ದ್ರೋಹ ಬಗೆಯುತ್ತಿತ್ತು. ಭಾರತದ ಮುಸ್ಲಿಮರನ್ನು ಪ್ರಚೋದಿಸುತ್ತಿತ್ತು. ಚೀನೀ ಆಕ್ರಮಣದ ಆನಂತರ, ಭಾರತದ ಆತ್ಮವಿಶ್ವಾಸ ಸ್ವಲ್ಪ ಕಡಿಮೆಯಾಗಿದ್ದ ಕಾಲದಲ್ಲಿ, ನಮ್ಮ ಗಡಿಯ ಬಳಿ ಪಾಕಿಸ್ತಾನ ಅತಿಯಾದ ಚೇಷ್ಟೆಗೆ ತೊಡಗಿತು.

ಆದರೆ ಲಾಲ್ ಬಹಾದುರ‍್ ಅದರ ದುಷ್ಟತನಕ್ಕೆ ಸೊಪ್ಪುಹಾಕಲಿಲ್ಲ. ವಿಶ್ವದ ರಾಷ್ಟ್ರಗಳನ್ನು ತಮ್ಮ ಕಡೆಗೆ ಒಲಿಸಿಕೊಳ್ಳಬೇಕೆಂದು ಅವರು ಮೊದಲು ಪ್ರಯತ್ನಿಸಿದರು. ರಷ್ಯ, ಈಜಿಪ್ಟ್, ಕೆನಡ, ಬ್ರಿಟನ್ ಗಳಿಗೆ ಭೇಟಿಕೊಟ್ಟು ಭಾರತದ ನಿಲುವನ್ನು ಅಲ್ಲಿಯ ನಾಯಕರಿಗೆ ವಿವರಿಸಿದರು. ಯಾವ ಗುಂಪಿಗೂ ಸೇರದ (ಅಲಿಪ್ತ) ರಾಷ್ಟ್ರಗಳ ಸಮ್ಮೇಳನದಲ್ಲಿ ಭಾಗವಹಿಸಿ, ಭಾರತದ ಸ್ಥಿತಿಯನ್ನು ವಿವರಿಸಿದರು. ಆಗ ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಅಯೂಬ್ ಖಾನರಿಗೆ ಬುದ್ಧಿ ಹೇಳುವುದಕ್ಕೂ ಪ್ರಯತ್ನಿಸಿದ್ದುಂಟು. ಆದರೆ ಮೂರ್ಖರಿಗೆ ಬುದ್ಧಿವಾದ ಹಿಡಿಸುವುದಿಲ್ಲ. ಅವರಿಗೆ ಗೊತ್ತಾಗುವುದು ಒಂದೇ ಭಾಷೆ. ಅದು ಯುದ್ಧ.

ಯಾವುದಾದರೂ ನೆವ ಹೂಡಿ ಕಾಲ್ಕೆರಡು ಭಾರತದ ಮೇಲೆ ಬೀಳುವುದು ಪಾಕಿಸ್ತಾನದ ಹವ್ಯಾಸ.

ಹೇಗಾದರೂ ಮಾಡಿ ಕಾಶ್ಮೀರವನ್ನೂ ಕಬಳಿಸಬೇಕೆಂದು ಹೊಂಚು ಹಾಕುತ್ತಿದ್ದ ಪಾಕಿಸ್ತಾನ  ನಮ್ಮ ಪಶ್ಚಿಮದ ಗಡಿಯಲ್ಲಿ, ಗುಜರಾತ್ ರಾಜ್ಯದ ಕಛ್ ನಲ್ಲಿರುವ ರಣ್ ಪ್ರದೇಶದ ಮೇಲೆ, ೧೯೬೫ರ ಏಪ್ರಿಲ್ ಮೇ ತಿಂಗಳಲ್ಲಿ ತನ್ನ ಸೇನೆ ನುಗ್ಗಿಸಿತು. ಅನಿರೀಕ್ಷಿತವಾಗಿ ಬಂದೆರಗಿದ ಈ ಆಘಾತದಿಂದ ಲಾಲ್ ಬಹದೂರ‍್ ಅಧೀರರಾಗಲಿಲ್ಲ. ಬಹಳ ಚಾಕಚಕ್ಯತೆಯಿಂದ ಅವರು ಪರಿಸ್ಥಿತಿಯನ್ನು ಎದುರಿಸಿದರು. ಆಕ್ರಮಣಕಾರಿಗಳನ್ನು ನಮ್ಮ ಸೈನ್ಯ ಹೊಡೆದೋಡಿಸಿತು. ಎರಡು ಕಡೆಯ ಸೈನ್ಯಗಳೂ ಕದನ ನಿಲ್ಲಿಸಬೇಕೆಂದು ಒಪ್ಪಂದವಾಯಿತು.

ಆದರೆ ಸಾಮೋಪಾಯಗಳಿಂದ ಹಾವನ್ನು ಪಳಗಿಸುವುದು ಸಾಧ್ಯವಿಲ್ಲ. ಅದಕ್ಕಿರುವುದು ಒಂದೇ ಉಪಾಯ. ಅದರ ವಿಷದಂತದ ನಿರ್ಮೂಲ.

ಒಪ್ಪಂದಕ್ಕೆ ಲಾಲ್ ಬಹಾದುರರು ಹಾಕಿದ ಸಹಿಯ ಮಸಿ ಆರುವುದರೊಳಗೆ ಪಾಕಿಸ್ತಾನ ಮತ್ತೆ ಹೆಡೆ ಆಡಿಸತೊಡಗಿತು. ಪಾಕಿಸ್ತಾನಿ ಮತ್ತೆ ಹೆಡೆ ಆಡಿಸತೊಡಗಿತು. ಪಾಕಿಸ್ತಾನಿ ಆಕ್ರಮಣಕಾರಿಗಳು ಕಾಶ್ಮೀರದೊಳಕ್ಕೆ ವೇಷ ಮರೆಸಿಕೊಂಡು ನುಗ್ಗಿದರು, ಇದ್ದಕ್ಕಿದ್ದಂತೆ ತಮ್ಮ ವಿಷದ ಹಲ್ಲುಗಳನ್ನು ಪ್ರದರ್ಶಿಸಿದರು. ೧೯೬೫ರ ಸೆಪ್ಟಂಬರಿನಲ್ಲಿ ಛಂಬ್ ವಿಭಾಗದಲ್ಲಿ ಪಾಕಿಸ್ತಾನ ಅತ್ಯಂತ ಅಗಾಧವಾದ ರೀತಿಯಲ್ಲಿ ಆಕ್ರಮಣದಲ್ಲಿ ತೊಡಗಿತು. ಯುದ್ಧ ಬಹುಬೇಗ ಇಡೀ ಕಾಶ್ಮೀರದ ಕದನ ನಿಲುಗಡೆ ರೇಖೆಯ ಉದ್ದಕ್ಕೂ ವ್ಯಾಪಿಸಿತು.

ಕಾಶ್ಮೀರದ ಒಳಗಡೆ ಸೇರಿಕೊಂಡಿದ್ದ ಶತ್ರುಗಳ ಕುಟಿಲ ನೀತಿ, ಭಾರತದಲ್ಲೆಲ್ಲ ಇದ್ದ ಮುಸ್ಲಿಮರನ್ನು ಎತ್ತಿಕಟ್ಟುವ ಹಂಚಿಕೆ, ಗಡಿಯಲ್ಲಿ ಆಕ್ರಮಣದಲ್ಲಿ ತೊಡಗಿದ್ದ ಪಾಕಿಸ್ತಾನಿ ಸೈನಿಕರ ಕಾರ್ಯಾಚರಣೆ, ಪೂರ್ವದ ಗಡಿಗೂ ಈ ಯುದ್ಧ ಹಬ್ಬಬಹುದಾದ ಅಪಾಯ, ಉತ್ತರದ ಗಡಿಯಲ್ಲಿ ಚೀನೀಯರು ಮಾಡುತ್ತಿದ್ದ ಆಕ್ರಮಣ ಯತ್ನ ಇವುಗಳನ್ನೆಲ್ಲಾ ಲಾಲ್ ಬಹಾದುರರು ಅತ್ಯಂತ ಸ್ಥೈರ್ಯದಿಂದ ಎದುರಿಸಿದರು. ಇಂಥ ಬಿಕ್ಕಟ್ಟಿನ ಸಮಯದಲ್ಲಿ ಅವರ ವ್ಯಕ್ತಿತ್ವದ ಮಹತ್ವವೇನೆಂಬುದು ದೇಶಕ್ಕೆ ಗೊತ್ತಾಯಿತು. ಪಾಕಿಸ್ತಾನಕ್ಕೆ ಸರಿಯಾಗಿ ಬುದ್ಧಿ ಕಲಿಸಲು ಇದೀಗ ಸಮಯವೆಂದು ಅವರು ಭಾವಿಸಿದರು. ಭಾರತದ ಸೇನಾ ದಂಡನಾಯಕರಿಗೆ ಸಂಪೂರ್ಣ ಸ್ವಾತಂತ್ರ‍್ಯ ನೀಡಿದರು. ನೀವು ಮುನ್ನುಗ್ಗಿ ಪ್ರಹಾರ ಮಾಡಿ ಎಂಬುದು ಅವರ ಆದೇಶ.

೧೯೬೫ರ ಆಗಸ್ಟ್ ೧೩ ರಂದು ಶಾಸ್ತ್ರಿಗಳು ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತ, ಪಾಕಿಸ್ತಾನದ ಬೆದರಿಕೆಗಳನ್ನು ಪ್ರಸ್ತಾಪಿಸಿ ಹೇಳಿದರು : ’ಬಲಪ್ರಯೋಗವನ್ನು ಬಲಪ್ರಯೋಗದಿಂದಲೇ ಎದುರಿಸುತ್ತೇವೆ’. ಎರಡು ದಿನಗಳ ನಂತರ, ಸ್ವಾತಂತ್ರ‍್ಯ ದಿನಾಚರಣೆಯ ಸಮಯದಲ್ಲಿ ಕೆಂಪು ಕೋಟೆಯಿಂದ ಘೋಷಿಸಿದರು. ನಾವು ನಾಶವಾದರೂ ಚಿಂತೆಯಿಲ್ಲ, ಆದರೆ ನಮ್ಮ ಧ್ವಜದ ಕೀರ್ತಿಗೆ ಕಳಂಕ ಹತ್ತಲು ಅವಕಾಶ ಕೊಡುವುದೇ ಇಲ್ಲ’.

ಇದೇ ಸಮಯದಲ್ಲಿ ಮತ್ತೊಂದು ವಿಪತ್ತು ಒದಗಿತ್ತು. ಚೀನ ಭಾರತಕ್ಕೆ ಪತ್ರ ಬರೆಯಿತು: ’ಚೀನಕ್ಕೆ ಸೇರಿದ ಪ್ರದೇಶದಲ್ಲಿ ಭಾರತದ ಸೈನ್ಯ ಸೈನಿಕ ಸಲಕರಣೆಗಳನ್ನು ಸ್ಥಾಪಿಸಿದೆ. ಭಾರತವೇ ಈ ಸೈನಿಕ ಸಲಕರಣೆಗಳನ್ನು ಕಿತ್ತು ಹಾಕಬೇಕು. ಇಲ್ಲವಾದರೆ ಚೀನದ ಕೋಪವನ್ನು ಎದುರಿಸಬೇಕು.

ಅಮೇರಿಕದಿಂದ ಸಮೃದ್ಧಿಯಾಗಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಪಡೆದ ಪಾಕಿಸ್ತಾನದೊಡನೆ ಭಾರತ ಹೋರಾಡುತ್ತಿತ್ತು. ಆಗಲೇ ಚೀನವನ್ನೂ ಎದುರಿಸಬೇಕಾದರೆ?

ಆದರೆ ಚೀನಾದ ಆಪಾದನೆಗಳೆಲ್ಲ ಸುಳ್ಳಿನ ಕಂತೆ. ಸೈನಿಕ ಸಲಕರಣೆಗಳನ್ನು ನಮ್ಮ ಸೈನಿಕರಿಂದ ತೆಗೆಸಿದರೆ, ಚೀನದ ಸುಳ್ಳನ್ನು ಒಪ್ಪಿದಂತೆ, ಅಲ್ಲದೆ ಅದರ ಗರ್ಜನೆಗೆ ನಾವು ಬೆದರಿದಂತೆ.

ಭಾರತ ಏನು ಮಾಡುತ್ತದೆ, ಲಾಲ್ ಬಹಾದುರರು ಏನು ಉತ್ತರ ಕೊಡುತ್ತಾರೆ ಎಂದು ಮಹಾರಾಷ್ಟ್ರಗಳೇ ಉಸಿರು ಬಿಗಿ ಹಿಡಿದು ಕಾಯುತ್ತಿದ್ದವು.

ಉತ್ತರ ಕೊಡಲು ಲಾಲ್ ಬಹಾದೂರರು ತಡಮಾಡಲಿಲ್ಲ. ಸೆಪ್ಟಂಬರ‍್ ೧೭ರ ಬೆಳಿಗ್ಗೆ ಪತ್ರ ಬಂತು: ಮಧ್ಯಾಹ್ನ ಅವರು ಲೋಕಸಭೆಯಲ್ಲಿ ಹೇಳಿದರು:

’ಚೀನಾದ ಮಾತೆಲ್ಲ ಸುಳ್ಳು. ಚೀನಾ ನಮ್ಮನ್ನು ಆಕ್ರಮಣ ಮಾಡಿದರೆ, ನಮ್ಮ ಸ್ವಾತಂತ್ರ‍್ಯಕ್ಕಾಗಿ ಹೋರಾಡಬೇಕೆಂಬುದು ನಮ್ಮ ಅಚಲ ನಿರ್ಧಾರ. ಚೀನಾದ ಶಕ್ತಿ, ನಮ್ಮ ಸಮಗ್ರತೆಯನ್ನು ಬಲಿಕೊಡುವಂತೆ ನಮ್ಮನ್ನು ಬೆದರಿಸಲಾರದು”

ಚೀನಾ ಸುಮ್ಮನಾಯಿತು.

ಭಾರತದ ಸೈನಿಕರು ಜೀವದ ಹಂಗುತೊರೆದು ಆಗ ತೋರಿದ ಶೌರ್ಯ ಅಭೂತಪೂರ್ವವಾದದ್ದು. ಭೂಸೇನೆ ವಾಯುಸೇನೆಗಳು ಒಂದೇ ದೇಹದ ಎರಡು ಕೈಗಳಂತೆ ವರ್ತಿಸಿದುವು. ಆಕ್ರಮಣಕಾರಿಗಳ ಪ್ರತಾಪ ನಡೆಯಲಿಲ್ಲ. ಭಾರತದ ಕೈ ಮೇಲೆಂಬುದು ಪ್ರಪಂಚಕ್ಕೆ ಮೊಟ್ಟಮೊದಲ ಬಾರಿ ಗೊತ್ತಾದದ್ದು ಆ ಸಮಯದಲ್ಲಿ.

ಈ ಯುದ್ಧದಲ್ಲಿ ಭಾರತಕ್ಕೆ ಸಂಪೂರ್ಣ ವಿಜಯ ಪ್ರಾಪ್ತವಾಗುವ ತಮ್ಮ ಪ್ರತಿಷ್ಠೆಗೆ ಕುಂದುಗಳುಂಟಾಗುವುದೆಂದು ಕೆಲವು ದೊಡ್ಡ  ದೇಶಗಳ ಅಂಜಿಕೆಯಾಗಿತ್ತು. ಕದನ ನಿಲುಗಡೆಯಾಗಬೇಕೆಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿ ಕರೆ ನೀಡಿತು.

ಸೋವಿಯತ್ ಪ್ರಧಾನಿ ಕೊಸಿಗಿನ್ ರ ಆಹ್ವಾನದಂತೆ ಭಾರತದ ಪ್ರಧಾನಿ ಲಾಲ್ ಬಹಾದುರರೂ ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನರೂ ರಷ್ಯದ ತಾಷ್ಕೆಂಟಿನಲ್ಲಿ ೧೯೬೬ರ ಜನವರಿ ೪ ರಂದು ಸಭೆ ಸೇರಿದರು. ಎರಡು ಕಡೆಯ ಸೇನೆಗಳೂ ಕಾಶ್ಮೀರದಲ್ಲಿ ಹಳೆಯ ಕದನ ನಿಲುಗಡೆ ರೇಖೆಯ ಒಳಗೆ ವಾಪಸ್ಸಾಗಬೇಕು, ಎರಡು ದೇಶಗಳೂ ಸ್ನೇಹದಿಂದ ಬಾಳಬೇಕು ಎಂಬುದು ಆಗ ಆದ ಒಪ್ಪಂದ.

ಕಾಶ್ಮೀರವೆಲ್ಲ ನಮ್ಮದಾಗಿದ್ದರಿಂದ ಅಲ್ಲಿ ನಾವು ಪಾಕಿಸ್ತಾನದಿಂದ ಕಿತ್ತುಕೊಂಡ ಪ್ರದೇಶವನ್ನು ಅದಕ್ಕೆ ವಾಪಸ್ಸು ಕೊಡಬಾರದು – ಎಂಬುದು ಭಾರತದಲ್ಲಿ ಅನೇಕರ ಅಭಿಪ್ರಾಯವಾಗಿತ್ತು. ಅದರೆ ಸ್ನೇಹದಿಂದ ವರ್ತಿಸಲು ಪಾಕಿಸ್ತಾನಕ್ಕೆ ಇನ್ನೊಂದು ಅವಕಾಶ ನೀಡಬೇಕೆಂದು ಲಾಲ್ ಬಹಾದುರ‍್ ಆ ಸ್ನೇಹ ಒಪ್ಪಂದಕ್ಕೆ ಸಹಿ ಹಾಕಿದರು.

ಹಿಂದೆ ಎರಡು ಬಾರಿ ಹೃದಯಾಘಾತಕ್ಕೆ ತುತ್ತಾಗಿ ಜರ್ಝರಿತವಾಗಿದ್ದ ಲಾಲ್ ಬಹುದೂರರ ದೇಹ ಆ ಕಾಲದಲ್ಲಿ ವಿಶೇಷವಾದ ಒತ್ತಡವನ್ನು ಎದುರಿಸಬೇಕಾಯಿತು. ೧೯೬೬ರ ಜನವರಿ ಹತ್ತರೆಂದು ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಅಂದು ರಾತ್ರಿ ಮಲಗಿದ ಲಾಲ್ ಬಹಾದುರ‍್ ಮತ್ತೆ ಏಳಲಿಲ್ಲ.

ತಾಷ್ಕೆಂಟಿನಲ್ಲಿ ಲಾಲ್ ಬಹಾದುರರು ಹಠಾತ್ ನಿಧನರಾದರೆಂಬ ಸುದ್ಧಿ ಭಾರತದ ಮೇಲೆ ಸಿಡಿಲಿನಂತೆ ಎರಗಿತು. ಇಡೀ ದೇಶವೇ ದುಃಖದಲ್ಲಿ ಮುಳುಗಿತು.

ಅವರ ಸಾವು ಸಂಶಯಾಸ್ಪದವಾದದ್ದು – ಎಂದು ಕೂಡ ಹಲವರ ಅಂಜಿಕೆ. ಏನಾದರೇನು? ಈ ಯುದ್ಧವೀರ, ಶಾಂತಿದೂತ, ಚೀನೀ ಗಡಿಯಲ್ಲಿ ಕಳೆದುಹೋಗಿದ್ದ ಭಾರತದ ಗೌರವವನ್ನು ಮತ್ತೆ ವಿಶ್ವರಂಗದಲ್ಲಿ ಸ್ಥಾಪಿಸಿದ ಮಹಾ ರಾಜಕಾರಣಿ ಇನ್ನಿಲ್ಲ.

ಚಿಕ್ಕಮೂರ್ತಿ, ಚೊಕ್ಕಮೂರ್ತಿ, ಕೆಲಸ, ಮನಸ್ಸು, ಮಾತು ಮೂರನ್ನೂ ಶುದ್ಧವಾಗಿಟ್ಟುಕೊಂಡು ಬಾಳಿದ ಜೀವ. ನಿರ್ಲಿಪ್ತ, ಸ್ವಾರ್ಥರಹಿತ, ಸರಳತೆಯೇ ಸಾಕಾರ. ಇಂಥವರು ನಮ್ಮ ದೇಶದಲ್ಲಿದ್ದವರು. ಭಾರತದ ವೀರ ಪುತ್ರರ ಸಾಲಿಗೆ ಸೇರಿದರು.