ಲಾವಣಿ – ಗೀ ಗೀ ಹಾಡುಗಾರಿಕೆಯು ಉತ್ತರ ಕರ್ನಾಟಕದಲ್ಲಿ ಇಂದಿಗೂ ಕೂಡ ಪ್ರಚಾರದಲ್ಲಿದೆ. ಗ್ರಾಮೀಣ ಪ್ರದೇಶದ ಜನರಿಗೆ ಈ ಹಾಡುಗಳು ಕೇಳುವುದು ಎಂದರೆ ಎಲ್ಲಿಲ್ಲದ ಸಂತೋಷ ಮತ್ತು ಸಂಭ್ರಮ. ಆದರೆ ಜಗತ್ತನ್ನೆ ಒಂದು ಮುಷ್ಠಿಯಲ್ಲಿ ಹಿಡಿಯುವಂತಹ ಆಧುನಿಕತೆಯ ತಂತ್ರಜ್ಞಾನದ ಮನೋರಂಜನೆಯ ಸಾಧನಗಳು ಹಳ್ಳಿ ಹಳ್ಳಿಗೆ ಲಗ್ಗೆ ಇಟ್ಟಿವೆ. ಅವುಗಳ ಮುಂದೆ ಜನಪದ ಕಲೆಗಳು ಮತ್ತು ಹಾಡುಗಾರಿಕೆ ನೆಲಕಚ್ಚಿದೆ. ಇದೇ ರೀತಿ ಆಧುನಿಕತೆಯ ಪ್ರಭಾವಕ್ಕೆ ಒಳಗಾಗುತ್ತಾ ಹೋದರೆ ಜನಪದ ಕಲೆಗಳು ಸಂಪೂರ್ಣವಾಗಿ ಮರೆಯಾಗಿ ಹೋಗುವುದರಲ್ಲಿ ಸಂಶಯವಿಲ್ಲ. ಇಂದಿನ ಯುವ ಪೀಳಿಗೆಯವರು ಜನಪದ ಕಲೆಗಳನ್ನು ಕಲಿಯುವುದು ಒತ್ತಟ್ಟಿಗಿರಲಿ, ನೋಡಲು ಸಹ ಬರದೆ ಇರುವಂತಹ ಸ್ಥಿತಿ ಬಂದೊದಗಿದೆ. ಹಾಗಾಗಿ ಮುಂದಿನ ತಲೆಮಾರಿಗೆ ಜನಪದ ಕಲೆಯಾದ ಲಾವಣಿ-ಗೀ ಗೀ ಹಾಡುಗಾರಿಕೆಯು ಉಳಿಯುತ್ತದೆ ಎಂಬ ವಿಶ್ವಾಸ ಇಲ್ಲದಂತಾಗಿದೆ.

ಮೊದಲನೆಯ ತಲೆಮಾರಿನ ಕವಿಗಳು ಮತ್ತು ಕಲಾವಿದರು ಅಪ್ಪಟವಾದ ದೇಸಿತನದ ಹಾಡುಗಳನ್ನು ಕಾವ್ಯಬದ್ಧವಾಗಿ ಹಾಡುತ್ತಿದ್ದರು. ಎರಡನೆಯ ತಲೆಮಾರಿನ ಕಲಾವಿದರಲ್ಲಿ ಸಾಕಷ್ಟು ಬದಲಾವಣೆಗಳಾದವು. ಅವೇನೆಂದರೆ ಜನಪ್ರಿಯ ಸಿನೆಮಾ ಮತ್ತು ನಾಟಕದಲ್ಲಿಯ ಹಾಡುಗಳಿಗೆ ಧಾಟಿ ಸೇರಿಸಿ ಹಾಡುವುದು, ಮೂರನೆ ತಲೆಮಾರಿನವರಲ್ಲಿ ಈ ಹಾಡುಗಾರಿಕೆ ಕಲಿಯಬೇಕೆಂಬ ಉತ್ಸಾಹ ಕಾಣುತ್ತಿಲ್ಲ. ಹಾಗಾಗಿ ಇಲ್ಲಿ ಸಂಗ್ರಹಗೊಂಡಂತಹ ೪೬ ಹಾಡುಗಳು ಮೊದಲನೆ ತಲೆಮಾರಿನ ಕವಿಗಳ ಹಾಡುಗಳಾಗಿವೆ. ಈ ಸಂಗ್ರಹದ ವಿಶೇಷತೆ ಏನೆಂದರೆ, ಸವಾಲ್ ಹಾಡು ಸಿಕ್ಕರೆ ಜವಾಬ್ ಹಾಡು ಸಿಗುವುದಿಲ್ಲ. ಜವಾಬ್ ಹಾಡು ಸಿಕ್ಕರೆ ಸವಾಲ್ ಹಾಡು ಸಿಗುವುದಿಲ್ಲ ಹೀಗೆ ಸಿಗುವುದು ಅಪರೂಪ. ಈ ಸವಾಲ್‌ಗೆ ಇದ ಜವಾಬ್ ಎಂದು ಹೇಳುವಂತಹ ಹೊಸ ಪ್ರಯೋಗವೆ ಈ ಕೃತಿಯಾಗಿದೆ.

ಜಾನಪದ ಅಧ್ಯಯನ ವಿಭಾಗದ ಈ ಯೋಜನೆಯನ್ನು ಕೈಗೊಳ್ಳಲು ಅನುಮತಿ ನೀಡಿದ್ದ ಹಿಂದಿನ ಕುಲಪತಿಗಳಾಗಿದ್ದ ಡಾ. ಎಚ್.ಜೆ. ಲಕ್ಕಪ್ಪಗೌಡ, ಆಗ ಕುಲಸಚಿವರಾಗಿದ್ದ ಡಾ. ಕೆ.ವಿ. ನಾರಾಯಣ ಅವರಿಗೆ ಮೊದಲು ನೆನೆಯುತ್ತೇನೆ. ಈ ಯೋಜನೆಯ ಪ್ರಕಟಣೆಗಾಗಿ ಅನುಮೋದನೆ ನೀಡಿದ ಕುಲಪತಿಗಳಾದ ಡಾ. ಹಿ.ಚಿ. ಬೋರಲಿಂಗಯ್ಯನವರಿಗೂ, ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ಕೃತಜ್ಞನಾಗಿದ್ದೇನೆ.

ವಿಭಾಗದ ಗೆಳೆಯರಾದ ಡಾ. ಮಂಜುನಾಥ ಬೇವಿನಕಟ್ಟಿ, ಡಾ. ಸ.ಚಿ. ರಮೇಶ್, ಡಾ. ಮೊಗಳ್ಳಿ ಗಣೇಶ್, ಡಾ. ಹೆಬ್ಬಾಲೆ ಕೆ. ನಾಗೇಶ್, ಡಾ. ಸಿ.ಟಿ. ಗುರುಪ್ರಸಾದ್ ಹಾಗೂ ಶ್ರೀ ವಿರುಪಾಕ್ಷಯ್ಯ, ಶ್ರೀ ಅಬ್ದುಲ್ ನಬಿ ಅವರಿಗೂ ನೆನೆಯುತ್ತೇನೆ.

ನನ್ನ ಅಧ್ಯಯನಕ್ಕೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಮಾಡುತ್ತಿರುವ ಗುರುಗಳಾದ ಪ್ರೊ. ವೀರಣ್ಣದಂಡೆ, ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸಹಾಯ ಮಾಡಿದ ಡಾ. ಅಪ್ಪಾಸಾಬ ಬಿರಾದಾರ, ಸಾವಳಗಿ ಮಹ್ಮದಸಾಬನ ಹಾಡುಗಳನ್ನು ಕೊಟ್ಟು ಸಹಕರಿಸಿದ ಅವರ ಮಕ್ಕಳಾದ ಮೋದಿನ್‌ಸಾಬ, ದಸ್ತಗಿರಿ ಮತ್ತು ಕಲಾವಿದರಾದ ಕಾಶಿನಾಥ ಚವ್ಹಾಣ, ದಿ. ಶಾಂತಪ್ಪ ಬಿದನೂರ ಅವರಿಗೆ, ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ, ಶ್ರೀ ಕೆ.ಎಲ್. ರಾಜಶೇಖರ್ ಮತ್ತು ಕಲಾವಿದ ಶ್ರೀ ಕೆ.ಕೆ. ಮಕಾಳಿ ಅವರಿಗೆ ಹಾಗೂ ಅಕ್ಷರ ಸಂಯೋಜನೆಯನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟ ವಿದ್ಯಾರಣ್ಯ ಗಣಕ ಕೇಂದ್ರದ ಶ್ರೀ.ಜೆ. ಬಸವರಾಜ ಅವರಿಗೆ ನೆನೆಯದೆ ಇರಲಾರೆ.

ಡಾ. ಹರಿಶ್ಚಂದ್ರ ದಿಗ್ಸಂಗಿಕರ್