ಚಾಲದುಮಾಲಿಇಳುವು

ಲಾವಣಿ – ಗೀ ಗೀ ಹಾಡಿನ ಸಂಪೂರ್ಣ ಸತ್ವವನ್ನು ಹಿಡಿದಿಟ್ಟು ಕೇಳುಗರ ಮನೋಲ್ಲಾಸ ಗಳಿಸುವುದೇ ಚಾಲ. ‘ತುಂಬಿ ಹರಿಯುವ ನದಿಗೆ ಅಡ್ಡಲಾಗಿ, ಶಿಖರ ಎದಿರು ಬಂದಾಗ ಬೇರೆ ಗತಿ ಪಡೆದಾಗಿನ ಸ್ಥಿತಿಯೇ ಚಾಲ ಪ್ರತಿಬಿಂಬಿಸುತ್ತದೆ’ ಎನ್ನುವ ಶ್ರೀರಾಮ ಇಟ್ಟಣ್ಣವರ ಮಾತು ನಿಜವೆನಿಸುತ್ತದೆ. ಚಾಲ ಚಿಕ್ಕ ಚಿಕ್ಕ ಸಾಲುಗಳ ನುಡಿಯಾಗಿರುವುದರಿಂದ ಪ್ರಾಸಗಳು ಬಹು ಬೇಗನೆ ಬಂದು ಕಿವಿಯ ಮೇಲೆ ಪಟ ಪಟನೆ ಬಡಿದಂತೆ ಭಾಸವಾಗುತ್ತದೆ. ಹಾಡು ಹಾಡೂವಾಗ ಯಾವ ಹಾಡುಗಾರನು ಇದು ಚಾಲ ಎಂದು ಹೇಳಿ ಹಾಡುವುದಿಲ್ಲ. ಅದಕ್ಕಿರುವ ಲಯ, ಧಾಟಿ, ಪ್ರಾಸಗಳನ್ನು ಕೇಳಿಯೆ ಸ್ಪಷ್ಟಪಡಿಸಿಕೊಳ್ಳಬೇಕಾಗುತ್ತದೆ. ಕವಿಗಳು ಹಾಡುಗಳನ್ನು ಬರವಣಿಗೆಗೆ ಇಳಿಸುವಾಗ ಮಾತ್ರ ಹಾಳೆಯ ಒಂದು ಬದಿಯಲ್ಲಿ ಚಾಲ ಎಂದು ಬರರೆದಿರುತ್ತಾರೆ ಅಥವಾ ಅನಕ್ಷರಸ್ಥ ಕೃರ್ತ್ಯು ಆಗಿದ್ದರೆ ಲಿಪಿಕಾರರಿಂದ ಬರೆಸುತ್ತಾರೆ.

ಹಾಡಿನಲ್ಲಿರುವ ವೈವಿಧ್ಯಮಯವಾದ ನಾದ, ಲಯಗಳನ್ನು ಹಿಡಿದಿಡುವ ಕೆಲಸ ಚಾಲ ಮಾಡುತ್ತದೆ. ಹಾಡಿನ ಅನುಕ್ರಮಣಿಕೆಯಲ್ಲಿ ಚಾಲ ಬಳಕೆಗೆ ಬಂದ ತಕ್ಷಣ ಹಾಡುಗಳಲ್ಲಿಯ ಒಂದು ಚೌಕ ಮುಗಿಯುತ್ತಾ ಬಂದು ಎಂದು ತಿಳಿದುಕೊಳ್ಳಬೇಕಾಗುತ್ತದೆ. ‘ಚಾಲ’ಕ್ಕೆ ‘ದುಮಾಲಿ’ ಇಳುವ ಎಂತಲೂ ಕರೆಯುತ್ತಾರೆ. ‘ಧುತ್’ ಲಯದ ಓಡುವಿಕೆಯ ನುಡಿ ಇರುವುದರಿಂದ ‘ದುಮಾಲಿ’ ಎಂದು ಹೆಸರಿಸಿರಬಹುದು. ಹಾಡು ಆರಂಭವಾದಾಗಿನ ಪಲ್ಲದಿಂದ ಹಿಡಿದು ಮೂರು ನಾಲ್ಕು ನುಡಿಯವರೆಗೂ ಏರೆತ್ತರದ ಧ್ವನಿಯಲ್ಲಿ ಹಾಡುತ್ತ, ‘ಚಾಲ’ ಬಂದಾಗ ಹಾಡಿನ ಗತಿಯನ್ನು ಇಳಿಸುತ್ತ ಹೋಗುವುದರಿಂದ ‘ಇಳುವು’ ಎಂದು ಕರೆದಿರಬೇಕು.

ಚಾಲ ಹೀಗಿದೆ ;

ಬೀಜ ಇದ್ದಾಂಗ ಆಗತಾದ ಬೆಳಿ
ಮ್ಯಾಲ ಬೇಕು ಮಳಿ
ಬಿಟ್ಟರ ಛಲೋ ಗಾಳಿ
ಭತ್ತಕ ಅನುಕೂಲ
ಇದರಂತೆ ನೋಡು ಸರ್ವೆಲ್ಲ || ಜೀ ||

‘ಚಾಲ’ ಹಾಡಿಗೆ ಸಂಬಂಧಿಸಿದ ವಿಷಯವೆ ಆಗಿರುತ್ತದೆ. ‘ಳ’ ಕಾರ ಬಂದರೆ ಅದನ್ನೆ ಬಳಸುವುದು. ‘ಲ’ ಕಾರ ಬಂದರೆ ಅದನ್ನೆ ಬಳಸುವುದು ಒಟ್ಟಾರೆ ಅಂತ್ಯ ಪ್ರಾಸ ಮುಂದುವರೆಸಿಕೊಂಡು ಹೋಗಲಾಗುತ್ತದೆ. ಸ್ವರ ವ್ಯಂಜನಗಳಲ್ಲಿ ಯಾವ ಅಕ್ಷರವೇ ಬರಲಿ ಅವನ್ನೇ ಅಂತ್ಯ ಪ್ರಾಸಕ್ಕಾಗಿ ಜೋಡಿಸುವ ಕ್ರಮ, ವಿಷಯಕ್ಕೆ ಅಡಚಣೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹಾಡುಗಾರಿಗೂ, ಕವಿಗಳಿಗೂ ಇರುತ್ತದೆ. ಏಕೆಂದರೆ ಪ್ರೇಕ್ಷಕ ಸಮುದಾಯಕ್ಕೆ ಒಂದೇ ಲಯ, ಒಂದೇ ಧಾಟಿ ಬೆಸರಿಸಬಾರದೆಂಬ ಕಾರಣಕ್ಕಾಗಿ ‘ಚಾಲ’ದ ಸೃಷ್ಟಿಯಾಗಿದೆ ಎಂದೆನಿಸುತ್ತದೆ.

ಕೂಡ ಪಲ್ಲಏರು

ಚೌಕದ ಕೊನೆಯ ಹಂತದಲ್ಲಿ ಬರುವುದೆ ಕೂಡ ಪಲ್ಲ. ಹಾಡಿನಲ್ಲಿ ಹೇಳುವ ವಿಷಯದ ಒಂದು ಹಂತ ತಲುಪಿದೆ ಎಂದರ್ಥ. ಇದೇ ಕೂಡ ಪಲ್ಲ-ಏರು ಧ್ವನಿಯಲ್ಲಿ ಹಾಡುದುವದರಿಂದ, ‘ಚಾಲ’-ದುಮಾಲಿ-‘ಇಳುವು’ ನಂತರದ ಏರಗತಿ ಇದಕ್ಕಿರುವುದರಿಂದ ‘ಏರ’ ಎಂತಲೂ ಕರೆಯುತ್ತಾರೆ. ಉದಾಹರಣೆಗಾಗಿ ಕೆಳಗಿನ ಐದು ಸಾಲಿನ ನುಡಿ ನೋಡಬಹುದು.

ಕ್ರಿಯಾ ವಿಚ್ಛಾಜ್ಞಾನ ಮೂರು ಒಮ್ಮಿಲೆ ಅರಿಮುಟ್ಟ
ದುಂದಗಾರ ಅದರ ಅಂದ ತಿಳುಗುಟ್ಟ
ನಿನಗ ಮಂದ ಮತಿ ಅಂದಾರು ಚರಕಟ
ಅನಾದಿಕಿನ್ನ ಆದಿಶಕ್ತಿ ಕಡಿಮಿ ಅಂದ್ರ
ಪಂಡಿತರಿಂದ ಬಿಳತಾವ ಏಟ || ಜೀ ||

ಕೂಡ ಪಲ್ಲದಲ್ಲಿ ಬರುವ ಮೊದಲಿನ ಮೂರು ನುಡಿಗಳು ಏರು ಧ್ವನಿಯಲ್ಲಿ ಹೇಳುತ್ತಾರೆ. ಅದಕ್ಕೆ ಪದ್ಯದ ‘ಪಲ್ಲ ಕೂಡಿಸಿಕೊಂಡಿರುವ ಕೊನೆಯ ಎರಡು ಸಾಲು ಇವೆ. ಹೀಗೆ ಏರು ಧ್ವನಿಯಲ್ಲಿ ಪಲ್ಲ ಕೂಡುವುದರಿಂದ ಕೂಡ ಪಲ್ಲವೆಂದು ಕರೆಯಲಾಗುತ್ತದೆ.

ಚೌಕ

ಲಾವಣಿ – ಗೀ ಗೀ ಹಾಡಿನ ಸವಾಲ್ ಜವಾಬ್‌ಗಳಲ್ಲಿ ಪಲ್ಲದಿಂದ ಆರಂಭಗೊಂಡ ಮೂರು – ನಾಲ್ಕು ನುಡಿಗಳು, ದುಮಾಲಿ, ಕೂಡಪಲ್ಲ, ಮುಗಿದಾಗಲೆ ಹಾಡಿನ ಒಂದು ಚೌಕ ಮುಗಿಯಿತೆಂದು ಅರ್ಥ. ಒಂದು ಪದ್ಯ ಒಟ್ಟು ಮೂರು ಚೌಕದ್ದಾಗಿದ್ದರೆ ಮಾತ್ರ ಲಾವಣಿ – ಗೀ ಗೀ ಹಾಡಿನ ಪದ್ಯವೆನಿಸಿಕೊಳ್ಳುತ್ತದೆ. ಅಲ್ಲದೆ ಇದರ ಜೊತೆಗೆನೆ ಸಖಿ – ಖ್ಯಾಲಿಗಳು ಇರುತ್ತವೆ ಎನ್ನುವುದು ಮರೆಯುವಂತಿಲ್ಲ. ಮೊದಲಿನ ಒಂದು ಚೌಕದಲ್ಲಿ ಯಾವ ರೀತಿ ಧಾಟಿ, ಲಯಗಳಿರುತ್ತವೆಯೋ, ಮುಂದಿನ ಎರಡು ಚೌಕದಲ್ಲಿಯೂ ಅದೇ ರೀತಿಯಾಗಿ ಮುಂದುವರೆಯುತ್ತವೆ. ಹಾಡು ಕೆಲವೊಂದು ಬಾರಿ ಸಂವಾದದ ರೀತಿಯಲ್ಲಿಯೂ ಮುಂದುವರೆಯಬಹುದು ಅಂತಹ ಹಾಡುಗಳು ಈ ಸಂಗ್ರಹದಲ್ಲಿಯೂ ಇವೆ.

ಒಂದು ಚೌಕದಲ್ಲಿ ದುಡಕಿ, ಶ್ಲೋಕ, ಮಿಲಾಪ, ಆಗಮ ಮುಂತಾದವುಗಳನ್ನು ಗುರುತಿಸಬಹುದು. ಆದರೆ ಇಲ್ಲಿ ಸಂಗ್ರಹಿಸಿದಂತಹ ಹಾಡುಗಳಲ್ಲಿ ಅವುಗಳನ್ನು ಗುರುತಿಸಿಲ್ಲ. ಆದರೂ ಮೇಲೆ ಸೂಚಿಸಿರುವ ಲಯ, ಗತಿಗಳಿಲ್ಲವೆಂದು ಹೇಳಲು ಸಾಧ್ಯವಿಲ್ಲ.

ಖ್ಯಾಲಿಗಳು

ಲಾವಣಿ ಹಾಡುಗಾರಿಕೆಯಲ್ಲಿ ಬರುವ ಖ್ಯಾಲಿ ಎನ್ನುವ ಪದಕ್ಕಿರುವಷ್ಟು ಮಹತ್ವ ಮತ್ತೊಂದಕ್ಕಿಲ್ಲ. ಒಂದು ಪಕ್ಷದ ಹಾಡುಗಾರನ ಹಾಡು ಮುಕ್ತಾಯವಾಗುತ್ತಾ ಬಂತು. ಮುಂದಿನ ಪಕ್ಷದವನು ಹೇಗಾದರೂ ಮಾಡಿಕೊಳ್ಳಲಿ ಎಂದು ತಾನು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡು ಮೊದಲೆದ್ದ ಹಾಡುಗಾರ ಅಶ್ಲೀಲ ಹಾಡುಗಳ ಗುಲ್ಲೆಬ್ಬಿ ಬಿಡುತ್ತಾನೆ. ಖ್ಯಾಲಿ>ಖ್ಯಾಲ ಎಂದರೆ ಮರಾಠಿಯಲ್ಲಿ ನೆನಪಿಸು, ನೆನಪು ಎಂದರ್ಥ. ಒಂದು ಹಾಡು ಹಾಡಿದ ನಂತರ ಆ ಹಾಡಿನ ಒಟ್ಟಾರೆ ಕಥೆಯ ಸಾರಾಂಶವನ್ನು ಪುನರ್ ವ್ಯಾಖ್ಯಾನ ಮಾಡುವುದೆ ಖ್ಯಾಲಿಯ ಉದ್ದೇಶವಾಗಿರುತ್ತದೆ.

ಈ ಖ್ಯಾಲಿಗಳಲ್ಲಿ ಹಾಡಿನ ಸಾರಾಂಶವಾದರೂ ಹೇಳಬಹುದು. ಮುಂದೆ ಹಾಡುವ ಪಕ್ಷದವರಿಗೆ ಸವಾಲ್ ಆದರೂ ಹಾಕಬಹುದು. ಹಿಂದಿನ ಪಕ್ಷದವರು ಹಾಕಿದ ಸವಾಲಿಗೆ ಜವಾಬ ಆದರೂ ಕೊಡಬಹುದು. ಇಲ್ಲಿ ಹಾಡುಗಾರನ ತೀರ್ಮಾನವೆ ಅಂತಿಮವಾಗಿ ಇರುತ್ತದೆ. ಈ ಖ್ಯಾಲಿಗಳು ಜನರ ಮನಸ್ಸಿನ ಆಕರ್ಷಣೆಯನ್ನು ಗಳಿಸಿಕೊಳ್ಳುತ್ತವೆ. ಇವುಗಳಲ್ಲಿ ಹೆಚ್ಚಾಗಿ ನೀತಿ, ತತ್ವ, ಆದರ್ಶ, ಶೃಂಗಾರದಂತಹ ನಿರೂಪಣೆಯು ಇರುತ್ತದೆ. ಖ್ಯಾಲಿ ಹಾಡುಗಳ ಮೂಲಕ ಜನರಿಗೆ ನೈತಿಕತೆಗೆ ಹಚ್ಚುವ ಕೆಲಸವು ನಡೆಯುತ್ತದೆ.

ಸಾಕು ಬಿಡು ಕಾಕ ಬುದ್ಧಿ
ಮೂಕಾಗಿ ಲೋಕ ಗೆದ್ದಿ
ಏಕ ಜೀವ ಎಲ್ಲರಲ್ಲಿ
ಬೇಕಾದ್ರ ಬಳಸಾಟ
ಸಾಕಾದ್ರ ಬಿಡು
ಬಿಟ್ಟರ ಓಡಾಟ || ಜೀ ||

ಒಬ್ಬನೇ ಗೀ ಗೀ – ಹಾಡುಗಾರ ಹಾಡಬೇಕಿದ್ದ ಪಕ್ಷದಲ್ಲಿ ಸಖಿಯಲ್ಲಿ ಸ್ತೋತ್ರ ಮಾಡಿ, ಮುಖ್ಯ ಹಾಡಿನಲ್ಲಿ ಕಥಾಸಾರವನ್ನು ಹಿಡಿದಿಟ್ಟು, ಕೊನೆಯ ಖಾಲ್ಯಲ್ಲಿ ಹಾಡಿನ ಪರಿಪೂರ್ಣತೆಯನ್ನು ಕೊಡಬಯಸುತ್ತಾನೆ. ಅಂತಹ ಸಖಿ-ಪದ್ಯ-ಖ್ಯಾಲಿ. ಒಟ್ಟಿಗೆ ಸೇರಿದ ಹಾಡುಗಳು ಇಲ್ಲಿಲ್ಲ. ಖ್ಯಾಲಿಗಳಲ್ಲಿ ಬಳಸಿಕೊಂಡ ಪದಗಳೆಲ್ಲ ಪ್ರಶ್ನೋತ್ತರದ ಮಾದರಿಗಳಾಗಿವೆ. ಅದರಲ್ಲಿಯೂ ಕೆಲವು ಸ್ತೋತ್ರ ರೂಪದವುಗಳು. ಕೆಲವು ನೀತಿ ಪದಗಳು ಮತ್ತು ಶೃಂಗಾರವನ್ನು ಹೊತ್ತುಕೊಂಡುವುಗಳಾಗಿವೆ. ಹಾಗಂತ ಅವು ಸವಾಲ್ – ಜವಾಬ್‌ನಿಂದ ಪ್ರತ್ಯೇಕಗೊಂಡವುಗಳಲ್ಲ. ಸವಾಲ್ – ಜವಾಬ್‌ನ ಅಂಶಗಳು ಇಂತಹ ಹಾಡುಗಳಲ್ಲಿಯೂ ಇರುತ್ತವೆ ಎನ್ನುವ ಉದ್ದೇಶದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.

ಖ್ಯಾಲಿ ಹಾಡುಗಳ ವಿಶೇಷತೆಯೆಂದರೆ, ಅವುಗಳನ್ನು ತತ್ವಪದಗಳನ್ನಾಗಿಯೂ ಹಾಡಬಹುದು. ತತ್ವಪದಗಳನ್ನು ಖ್ಯಾಲಿಗಳನ್ನಾಗಿಯೂ ಹಾಡಬಹುದು. ಧಾಟಿ, ಬದಲಿಸಿಕೊಳ್ಳುವುದರ ಮೂಲಕ ಒಂದೇ ಹಾಡು ಎರಡು ಕಡೆಗಳಲ್ಲಿ ಬಳಕ ಮಾಡಿಕೊಳ್ಳವ ಸಾಧ್ಯತೆ ಕಂಡು ಬರುತ್ತದೆ. ತತ್ವಪದಗಳೆಲ್ಲ ಭಜನೆ ಹಾಡುಗಳಲ್ಲಿ ಹಾಡುವುದರಿಂದ, ಅವು ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿಕೊಂಡಿರುತ್ತವೆ. ಹಾಗಾಗಿ ಗೀ ಗೀ ಹಾಡಿನಲ್ಲಿರುವ ಖ್ಯಾಲಿಯನ್ನು ಭಜನೆಯಲ್ಲಿ ಹಾಡಬೇಕೆನ್ನುವಂತಹ ಪ್ರೇಕ್ಷಕರು ಖ್ಯಾಲಿಯ ಬಗೆಗೆ ಹೆಚ್ಚಿನ ಗಮನ ಹರಿಸುತ್ತಾರೆ. ಆದರೆ ಮೇಳ ಲಾವಣಿಗಳಲ್ಲಿ ಕಂಡು ಬರುವ ನ್ಯೂನ್ಯತೆಗಳೆಂದರೆ ಹಾಡುಗಾರರು ಸಖಿ – ಮುಖ್ಯ ಪದಗಳನ್ನು ಅರ್ಧದಷ್ಟು ಹಾಡಿ, ನೇರವಾಗಿ ಖ್ಯಾಲಿಗೆ ಬಂದು ಬಿಡುತ್ತಾರೆ. ಈಗಿನ ಲಾವಣಿ ಹಾಡುಗಳಲ್ಲಿ ದೋಷಪೂರ್ಣ ಹಾಡುಗಾರಿಕೆ ಹೆಚ್ಚಾಗಿ ಕಂಡು ಬರುತ್ತಿದೆ. ಅವೆನಿದ್ದರೂ ಮೂಲದರಚನಾಕಾರನಿಂದ ಲಿಖಿತ ರೂಪದಲ್ಲಿ ಉಳಿದುಕೊಂಡಿದ್ದವುಗಳು ಮಾತ್ರ ಪೂರ್ಣ ಪ್ರಮಾಣದ ಹಾಡುಗಳಾಗಿ ಸಿಗುತ್ತವೆ.

ಸವಾಲ್ ಜವಾಬ್ ಹಾಡುಗಳ ಪ್ರಕ್ರಿಯೆ

ಲಾವಣಿ ಹಾಡುಗಾರಿಕೆಯಲ್ಲಿ ಸವಾಲ್ ಜವಾಬ್ ಹಾಡುಗಳ ಸರದಿ ಬಂದಾಗ ಮೇಳಗಳಲ್ಲಿಯ ಹಾಡುಗಾರರ, ಹಿಮ್ಮೇಳದವರ ಕಾರ್ಯ ಚಟುವಟಿಕೆಗಳು ತೀವ್ರಗತಿಯಲ್ಲಿರುತ್ತವೆ. ಲಾವಣಿ-ಮೇಳಗಳಲ್ಲಿ ಸವಾಲ್- ಜವಾಬ್‌ನ ಕ್ರಿಯೆ ಆರಂಭವಾದಾಗಲೆ, ಅದು ಪ್ರೇಕ್ಷಕರ ಗಮನ ಸೆಳೆಯಲು ಆರಂಭಿಸಿತು. ಮೇಳದವರು ಒಂದು ಊರಿಗೆ ಹಾಡಲು ಬರಬೇಕಾದರೆ, ಹರದೇಶಿ ಒಂದು ಕಡೆಯಿಂದ, ನಾಗೇಶಿ ಇನ್ನೊಂದು ಕಡೆಯಿಂದ ಕರೆಸಿಕೊಳ್ಳುವುದಿಲ್ಲ.

[1] ಹರದೇಶಿ-ನಾಗೇಶಿ ಎರಡು ಮೇಳಗಳಿದ್ದರೆ ಅವರಿಬ್ಬರು ಕೂಡಿಯೇ ಹಾಡಲು ಬರುತ್ತಾರೆ. ಹಾಡುಗಾರಿಕೆಯ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಗೊತ್ತಿಲ್ಲದವರಂತೆ ಪ್ರತ್ಯೇಕತೆಯನ್ನು ಅನುಸರಿಸುತ್ತಾರೆ. ನಿಂದಿಸುವುದು, ಬಯ್ಯುವುದು, ಮೊದಲಿಗೆ ಹಾಡಿ ಕುಳಿತಿರುವಂತಹ ಹಾಡುಗಾರನಿಗೆ ಅವನ ಪಕ್ಷದ ಹಿಮ್ಮೇಳದವರಿಗೆ, ವಾದ್ಯಪರಿಕರಗಳಿಂದ ತಿವಿಯುವುದು ಅಥವಾ ತಿವಿಯುತ್ತಿರುವಂತೆ ನಟನೆ ಮಾಡುವುದು ನಡೆದಿರುತ್ತದೆ. ಹೀಗೆ ನಡೆದಿರುವ ಸಂದರ್ಭದಲ್ಲಿ ಅಶ್ಲೀಲ ಪದಗಳ ಬಳಕೆ ಹೆಚ್ಚಾಗಿರುತ್ತದೆ. ಅದ್ಯಾವುದು ಕೂಡ ಈ ಹಾಡುಗಾರಿಕೆಯ ಮೇಳದವರು ತಮಗೇನೆ ಬಯ್ಯುತ್ತಿರುವುದು ಎಂದು ಅಂದುಕೊಳ್ಳುವುದಿಲ್ಲ. ಹರದೇಶಿ ತಾನು ಗಂಡು ಪಕ್ಷದಿಂದಲೂ, ನಾಗೇಶಿ ತಾನು ಹೆಣ್ಣು ಪಕ್ಷದಿಂದಲೂ ವಾದದ ಸಮರ್ಥನೆ ಮಾಡಿಕೊಳ್ಳುತ್ತಿದ್ದೇವೆಂದು ತಿಳಿದಿರುತ್ತಾರೆ. ಆಯಾ ಪಂಗಡದ ಸೋಲು ಗೆಲವು ಮಾನ ಅಪಮಾನಗಳೆಲ್ಲ, ಹರದೇಶಿಯವನದು – ಗಂಡು ಸಮುದಾಯಕ್ಕೆ, ನಾಗೇಶಿಯವಳದು ಹೆಣ್ಣು ಸಮುದಾಯಕ್ಕೆ ಬಿಟ್ಟಿದೆಂದು ತೀರ್ಮಾನ ಹಾಡುಗಾರರದಾಗಿರುತ್ತದೆ.

ಲಾವಣಿ ಹಾಡುಗಳಲ್ಲಿ ಸವಾಲ್ – ಜವಾಬ್ ಪದಗಳಿಗಿರುವ ವಿಶೇಷ ಮಹತ್ವವೇ ಬೇರೆ. ಇದಕ್ಕೆ ಹಲವಾರು ಪರ್ಯಾಯ ಹೆಸರುಗಳುಂಟು. ವಾದದ ಹಾಡುಗಳು, ಏರ್-ಚಡಾವ್, ತೋಡಿ-ತೋಡಿ, ಹರದೇಶಿ-ನಾಗೇಶಿ, ಕಲ್ಗಿ-ತುರಾ, ಹಾಡುಗಾರಿಕೆ ನಡೆದ ಸಂದರ್ಭದಲ್ಲಿ ಈ ಪದಗಳ ಬಳಕೆಯಾಗುತ್ತವೆ. ಉಳಿದ ಸಂದರ್ಭದಲ್ಲಿ ಇವೆಲ್ಲಕ್ಕೂ ಗೀ ಗೀ ಹಾಡುಗಳೆಂದೇ ಕರೆಯುವ ವಾಡಿಕೆ ಇದೆ. ಹೀಗೆಕೆ ಕರೆಯುತ್ತಾರೆ ಎನ್ನುವುದಕ್ಕೆ ಒಂದು ಸ್ಪಷ್ಟನೆ ಕೊಡಬಹುದಾದರೆ, ಮೇಲೆ ಗುರುತಿಸಿರುವ ಐದು ಹೆಸರಿನ ಪ್ರಕಾರಗಳ ಉದ್ದೇಶ ಪ್ರಶ್ನೋತ್ತರ ಸರಗಳ ಮಾಲಿಕೆಯದು.

ಗಂಡು-ಹೆಣ್ಣು ಎರಡು ಪಂಗಡದವರು ಒಂದು ವಸ್ತುವನ್ನು ಆಯ್ಕೆ ಮಾಡಿಕೊಂಡು ಅದೇ ಶ್ರೇಷ್ಠವೆಂದು ಸಾಧಿಸಬೇಕಾದ, ವಾದದ ಸಮರ್ಥನೆ ಮಾಡಿಕೊಳ್ಳಬೇಕಾದ ಪ್ರಮೇಯವಿರುತ್ತದೆ.

ಒಂದು ಲಾವಣಿ ಪದಕ್ಕೆ ಮೂರು ಚೌಕಗಳಿರುವುದು ಕಡ್ಡಾಯ. ಅವು ಹಾಡುವ ಸಂದರ್ಭದಲ್ಲಿ ಯಾವುದೇ ಚೌಕದ ಪಲ್ಲ ನುಡಿ, ದುಮಾಲಿಗಳಲ್ಲಿ ಕೆಲವು ಸಾಲುಗಳು ಸವಾಲ್ ಹಾಕುವಂತಹವಾಗಿರುತ್ತವೆ ಒಂದು ನುಡಿಯಲ್ಲಿನ ಸವಾಲ್ ಹೀಗಿದೆ.

ಸವಾಲ್ :

ಇಚ್ಛಿಗಿ ಮೆಚ್ಚಿ ಬಂದ ಹುಚ್ಚ ಮುಂಡ್ಯಾರು
ವಿಚ್ಛಾ ಹೆಚ್ಚಿಗಿ ಎಂದು ನಡಸಿರಿ ಬಬ್ಬಾಟ
ಹಾದ್ಯಾಗ ಉಚ್ಚಿ ಹೊಯಿದುದು ಮುಚ್ಚಿಟ್ಟ
ಬಿಚ್ಚಿ ಹೇಳುವೆ ಕೇಳಿರಿ ನಿಮ ಲಿಸ್ಟ
ಅಚ್ಯುತನಂದನಕ್ಕಿನ್ನ ವಿಚ್ಛಾ ಹೆಚ್ಚಿಗಂದ್ರ
ಉಚ್ಚಿ ಹಚ್ಚಿ ಬೋಳಶ್ಯಾರ ಜುಟ್ಟ || ಜೀ ||

ಹೀಗೆ ಆದಿ ದೇವತೆಗಳಿಂದ ಇಂದಿನವರೆಗೂ ಹೆಂಗಸರ ಅವಹೇಳನ ಮಾಡಿಕೊಂಡು ಮುಂದಿನ ನುಡಿಗಳ ಸಾರಾಂಶ ಬೆಳೆಯುತ್ತ ಹೋಗುತ್ತದೆ. ಇಂತಹ ವಾದ, ಚರ್ಚೆಯಿಂದ ಬೇರೆ ಪಕ್ಷವನ್ನು ತೆಗಳುವುದರ ಮೂಲಕ ತನ್ನ ಪಕ್ಷ ಮೇಲೆಂದು ಬೀಗುವುದು ಅಥವಾ ನೇರವಾಗಿ ಸವಾಲ್ ಹಾಕುವಂತಹ ಪದದ ಮೂಲಕ ತಾನು ಮೇಲೆಂದು ಸಾಧಿಸುವ ಗುಣ ಹಾಡುಗಾರನಲ್ಲಿರುತ್ತದೆ. ನೇರವಾಗಿ ಸವಾಲ್ ಹಾಕುವ ಹಾಡಿನ ಪಲ್ಲ ಈ ಕೆಳಗಿನಂತಿದೆ.

ಸವಾಲ್ :

ಶಾಹೀರೆಂದು ಸುತ್ತಾ ಜಾಹೀರಾಗಿದಿ ಸುದ್ರಾಸಿ ಕೇಳು ನುಡಿ |
ಆದ್ರ ಆದೀತು ಎಚ್ಚರ ಹಿಡಿ |
ಸೂರ್ಯ ಚಂದ್ರಗ ಎಷ್ಟು ಯೋಜನ ಅಂತರ
ಉಲ್ಲೇಖ ಕೊಟ್ಟು ಡಪ್ಪ ಹೊಡಿ || ಜೀ ||

ಜನಪದರ ಜ್ಞಾನ ಶಾಖೆ ಎಷ್ಟೊಂದು ವಿಶಾಲ ಎನ್ನುವುದನ್ನು ಈ ಸವಾಲ್ ನುಡಿಯ ಮೂಲಕ ಅರಿಯಬಹುದು. ಅಮೂರ್ತವಾದಂತಹ ವಸ್ತುಗಳಾದ ಸೂರ್ಯ-ಚಂದ್ರ ನವಗ್ರಹ. ಚುಕ್ಕಿಗಳ ಕುರಿತು ಮಾತನಾಡುವುದುಸಾಮಾನ್ಯವಲ್ಲ. ಅದಕ್ಕಾಗಿಯೇ ಆಕಾಶ ಜಾನಪದವೆಂಬ ಹೆಸರು ಬಂದಿರಬೇಕು. ನಿರೀಕ್ಷೆಗೂ ಮೀರಿದ ಸವಾಲ್‌ಗಳು ಬಂದಾಗ ಎದುರಿನ ಪಕ್ಷದವನು ನಿರುತ್ತರನಾಗುವುದಿಲ್ಲ. ಈ ಹಾಡಿಗಿಂತಲೂ ಅಮೂರ್ತವಾದ ವಿಷಯದ ಮತ್ತೊಂದು ಹಾಡನ್ನು ಹಾಡಿ ತೋರಿಸುತ್ತಾನೆ. ಹೀಗೆ ಒಂದಕ್ಕಿಂತ ಇನ್ನೊಂದು ಹಾಡು ಕಡಿಮೆ ಇಲ್ಲ ಎನ್ನುವಂತೆ ಕೇಳುಗರಿಗೆ ಭಾಸವಾಗುತ್ತದೆ.

ಸವಾಲ್ ಹಾಕಿದ ಪಕ್ಷದವನು ಕುಳಿತುಕೊಂಡ ನಂತರದಲ್ಲಿ ಜವಾಬ್ ಮಾಡುವ ಪಕ್ಷದವನು/ಳು, ಏಳಬೇಕು. ತನ್ನ ಒಂದು ಹಾಡಿನ ಮೂರು ಚೌಕದ ಒಳಗಡೆಯೇ ಜವಾಬ ಕೊಡಲು ಪ್ರಯತ್ನಿಸಬೇಕು. ಅಲ್ಲಿಯೂ ಕೂಡ ಪಲ್ಲ, ನುಡಿ, ದುಮಾಲಿ ಯಾವುದರಲ್ಲಿಯಾದರೂ ಜವಾಬ ಕೊಡಬಹುದು. ಆದರೆ ಪಲ್ಲದಿಂದಲೆ ಜವಾಬ್ ಕೊಡುವ ಹಾಡನ್ನು ನೋಡಬಹುದು.

ಜವಾಬ್ :

ಗರ್ಕುಲಿ ಮಾಡಿ ಆಡುವ ಹೆಣ್ಣ ತಿರಕರಂತೆ ಒದರಬೇಡ
ಮುರ್ಕಾ ಮಾಡೋ ನಿನ ಮೀಗಿನ ತೂತಿಗೆ ಮಿಂಚೈತಿ ನಮಗಂಡ
ನೀ ಗುರು ಗುರು ಬೀಸುವ ಗೋಧಿ ಕಲ್ಲಿನ ಗೂಟೈತಿ ನಮಗಂಡ
ನಿನ ಬುರಕಿ ಹಾರಿಸಿ ದರಕಾರಿಲ್ಲದೆ ಮೆಟ್ಟೈತಿ ನಮಗಂಡ
ಶರೀರದೊಳು ಪಂಚ ಪ್ರಾಣಗಂಡ ಸಕಾರದೊಳು ಸರ್ವೇಶ್ವರ
ಪರಮೇಶ್ವರನ ಹನ ನಮಗಂಡ || ಜೀ ||

ಹೀಗೆ ಹೆಣ್ಣಿನ ಮೈ ಮೇಲಿರಿವ ಆಭರಣಗಳು ಹಿಡಿದು ಆಕೆ ದಿನನಿತ್ಯ ಬಳಸುವ ಸಾಮಗ್ರಿಗಳಲ್ಲಿಯು ಗಂಡಿನ ಗುರುತನ್ನು ಹೇಳುವುದರ ಮೂಲಕ ಜವಾಬ್ ಕೊಡಲು ಪ್ರಯತ್ನಿಸಿದ್ದು ಕಾಣುತ್ತೇವೆ.

ಒಂದು ಸವಾಲ್ – ಜವಾಬ್ ಕ್ರಿಯೆ ಆರಂಭಿಸಬೇಕಾದರೆ ಅದು ಇಂದು ನಿನ್ನೆಯದಲ್ಲ. ಕಾಲಾಂತರದಿಂದಲೂ ನಡೆದುಕೊಂಡು ಬಂದದ್ದು ಎನ್ನುವ ಪರಿಜ್ಞಾನ ಮೂಡಿಸುವುದಕ್ಕೋಸ್ಕರ ಅನಾದಿ – ಆದಿ ಎಂಬ ಶಬ್ದಗಳ ಬಳಕೆಯಾಗುತ್ತವೆ. ಇಲ್ಲಿ ಅನಾದಿ ಪ್ರಥಮವೆಂದು ಹಾಡಿದ ಹಾಡಿನತೋಡಿಯ (ಜವಾಬ್) ಹಾಡು ಇಲ್ಲಿದೆ. (ಆದಿ-ಹೆಣ್ಣು ಅನಾದಿ-ಗಂಡು)

ಜವಾಬ್ :

ತ್ರಿಶಕ್ತಿಯಿಂದ ತ್ರಿಮೂರ್ತಿಗಳು ಜನಿಶ್ಯಾರ ಪಸಂದ
ಒಳ್ಳೇ ನೇಮದಿಂದ ಕೇಳು ಸಂದ |
ಮೊದಲು ಎಲ್ಲಿ ಇತ್ತೋ ಕಾಳಂಕ ದುಂದ ||
ಬ್ರಹ್ಮ ವಿಷ್ಣು ರುದ್ರ ಮೂವರ ಕಿನ್ನ
ಮಹಾಶಕ್ತಿ ಮಹಾದೇವಿ ಇದ್ದಾಳೋ ಮುಂದ ||

ಪೃಥ್ವಿ ನಿರ್ಮಾಣ ಮಾಡುವುದರಲ್ಲಿ ಶಿವ ಎಷ್ಟು ಸಮರ್ಥನೋ ಶಕ್ತಿಯು ಅಷ್ಟೇ ಸಮರ್ಥಳೆಂಬ ವಾದದ ಮಂಡನೆ ಹಾಡಿನ ತುಂಬಾ ನಡೆಯುತ್ತದೆ. ಈ ಮೇಲೆ ಉದಾಹರಣೆಗಾಗಿ ಬಳಸಿಕೊಂಡ ಹಾಡುಗಳ ಸಂಗ್ರಹ ಇಲ್ಲಿಲ್ಲ. ಏಕೆಂದರೆಸವಾಲ್ ಇದ್ದರೆ ಜವಾಬ್ ಸಿಕ್ಕಿಲ್ಲ. ಜವಾಬ್ ಇದ್ದರೆ ಸವಾಲ್ ಸಿಕ್ಕಿಲ್ಲ. ಹಾಗಾಗಿ ಇದ್ದಂತಹ ಸಂಗ್ರಹದ ಜೊತೆಗೆ ಈ ಹಾಡುಗಳು ಬಳಕೆಗೊಳ್ಳಲೆಂದು ಆಯ್ಕೆ ಮಾಡಿಕೊಳ್ಳಲಾಗಿದೆ. ಹರದೇಶಿ ಸವಾಲ್ ಮಾಡಿದರೆ ನಾಗೇಶಿ ಬವಾಬ್ ಕೊಡಬೇಕು. ನಾಗೇಶಿ ಸವಾಲ್ ಮಾಡಿದರೆ ಹರದೇಶಿ ಜವಾಬ್ ಕೊಡಬೇಕೆಂಬ ನಿಯಮ ಸಂಗ್ರಹದಂತೆ ಇಲ್ಲಿ ಪಾಲಿಸಿಲ್ಲ. ಒಟ್ಟಾರೆ ಹರದೇಶಿಯವನೆ ಹಾಕುವಂತಹ ಸವಾಲ್ ಇರಬಹುದು, ಕೊಡುವಂತಹ ಜವಾಬು ಇರಬಹುದು. ಪ್ರಬಲವಾದ ಸವಾಲ್ ಜವಾಬ್ ಕ್ರಿಯೆ ಗುರುತಿಸಲು ನುಡಿ ಬಳಕೆಯಾಗಿವೆ.

ಸವಾಲ್ ಜವಾಬ್ ಹಾಡುಗಳು ಮೇಳಗಳಲ್ಲಿ ಹೆಚ್ಚಾಗಿ ಶ್ರೋತೃ ವರ್ಗದ ಗಮನ ಸೆಳೆಯುತ್ತವೆ. ಹರದೇಶಿ – ನಾಗೇಶಿಯರಲ್ಲಿ ನೆಯುವ ಈ ಕ್ರಿಯೆ ಕೇಳಲು ಮನೋರಂಜನೆಯನ್ನುಂಟು ಮಾಡುತ್ತದೆ. ಆದರೆ ಈ ಕ್ರಿಯೆ ಬರೀ ಹರದೇಶಿ ನಾಗೇಶಿಯರಲ್ಲಿಯೇ ನಡೆಯುತ್ತದೆ ಎನ್ನುವುದು ತಪ್ಪು ತಿಳುವಳಿಕೆಯಾಗುತ್ತದೆ.ಹರದೇಶಿ ಹರದೇಶಿಯರಲ್ಲಿಯೂ ನಡೆಯುವ ರೀತಿ ಬೇರೆ ತೆರನಾದುದಾಗಿರುತ್ತದೆ. ಸಂತರ, ಶರಣರ ಜೀವನ ಚರಿತ್ರೆಯನ್ನು ಅವರು ಮಾಡಿದ ಪವಾಡಗಳನ್ನು ಒಬ್ಬ ಕವಿ ರಚನೆ ಮಾಡಿದ ಹಾಡಿಗೆ, ಅದೇ ಸಂತರ, ಶರಣರ ಮೇಲಿನ ಚರಿತ್ರೆ ಭಿನ್ನವಾಗಿ ಕಟ್ಟಿಕೊಡುವ ರೀತಿ. ಇಲ್ಲಿಯೂ ಕೂಡ ಮೊದಲು ರಚನೆ ಮಾಡಿದವನಕ್ಕಿಂತಲೂ ನಾನೇನು ಕಡಿಮೆ ಅಲ್ಲ ಎಂದು ತೋರ್ಪಡಿಸುವ ಇರ್ಷೆ ಕಾಣುತ್ತೇವೆ. ಸವಾಲಿಗೆ ಪ್ರತಿ ಸವಾಲ್ ಎಂಬ ವಾದದ ಎಳೆ ಕೇಳುಗರ ಕಿವಿಗೆ ಭಾಸವಾಗದಿರದು.

ಮೇಳದಲ್ಲಿ ಸವಾಲ್ ಹಾಕುವ ಸಂದರ್ಭ

ಲಾವಣಿ ಹಾಡುಗಾರಿಕೆ ಹಗಲು ರಾತ್ರಿ ಬಿಡುವಿಲ್ಲದೆ ನಡೆಯುವುದರಿಂದ ಯಾವ ಸಂದರ್ಭದಲ್ಲಿ ಸವಾಲ್ ಜವಾಬ್ ಕ್ರಿಯೆ ಆರಂಭವಾಗುತ್ತದೆ ಎನ್ನುವುದೆ ಕುತೂಹಲದ ಸಂಗತಿ. ಹಾಡುಗಾರಿಕೆ ಆರಂಭ ಮಾಡುವುದು ಸ್ತುತಿಯಿಂದ ಹಾಗಾಗಿ ಸ್ತುತಿಯ ನಂತರದಲ್ಲಿ ಚರಿತ್ರೆ, ಪುರಾಣ, ಅಧ್ಯಾತ್ಮ, ನೀತಿ ಮತ್ತು ತತ್ವ. ಹಾಡಿನ ಈ ಎಲ್ಲಾ ಸರದಿಗಳು ಮುಗಿಯುವ ವೇಳೆ ಶ್ರೋತೃಗಳು ಬೇಸತ್ತಿರುತ್ತಾರೆ. ಹಗಲಿದ್ದರೆ, ನಡು ಹಗಲಾಗಿರುತ್ತದೆ. ರಾತ್ರಿಯಿದ್ದರೆ ಮಧ್ಯ ರಾತ್ರಿ ಆವರಿಸುತ್ತದೆ. ಇಷ್ಟೆಲ್ಲಾ ಹಾಡುಗಳು ಮುಗಿದ ಮೇಲೆನೆ ಸವಾಲ್ ಜವಾಬಿಗೆ ತೆರೆ ಬೀಳುವುದು. ಹಾಡುಗಾರಿಕೆಗೆ ಎದ್ದಾಕ್ಷಣ ಸವಾಲ್ ಹಾಕಲು ನಿಂತರೆ ಶ್ರೋತೃಗಳಿಂದಲೆ ಅದೇನ ಹಲಕಟ್ ಹಾಡ ಆರಂಭಿಸಿರಿ ಎಂಬ ಉದ್ಘಾರ ಕೇಳಿ ಬರುತ್ತದೆ. ಹಾಗಾಗಿ ಹಾಡುಗಾರ ತುಂಬಾ ಸೂಕ್ಷ್ಮಮತಿಯುಳ್ಳವನು, ಸಭೆಯ ರಂಗು ನೋಡಿ ರಾಗ ತೆಗೆಯುವ ಕಲೆಗಾರಿಕೆ ಅವನಿಗೆ ಗೊತ್ತಿರುತ್ತದೆ. ಸವಾಲ್ ಮಾಡಬೇಕಾದ ಸಂದರ್ಭ ಬಂದರು ನೇರವಾಗಿ ಸವಾಲ್ ಮಾಡುವುದಿಲ್ಲ. ತನ್ನ ಹಾಡಿನ ಕೊನೆಯ ಚೌಕ ಅಥವಾ ಹಾಡಿನ ನುಡಿಗಳಲ್ಲಿ ಮಾಡುತ್ತಾನೆ. ಸಂಪೂರ್ಣವಾಗಿ ಸವಾಲಿಗೆ ಕೆಣಕುವ ಸಂದರ್ಭ ಎಂದರೆ ಖ್ಯಾಲಿ ಹಾಡುಗಳಿಂದಲೆ ಆರಂಭಿಸುತ್ತಾನೆ. ಸವಾಲ್ ಜವಾಬ್ ದಗಳು ಶೃಂಗಾರವನ್ನೇ ಹೇಳುವುದಿಲ್ಲ. ಅಲ್ಲಿ ಗಂಡು ಹೆಣ್ಣಿನ ಶ್ರೇಷ್ಠತೆಯ ವಾದದ ಕಚ್ಚಾಟವಿರುತ್ತದೆ. ಕೆಲವು ಶೃಂಗಾರದ ಹಾಡುಗಳಿದ್ದರು ಕ್ವಚಿತ. ಶೃಂಗಾರ ಲೇಪನವನ್ನು ಹೊದ್ದುಕೊಂಡು ಅಧ್ಯಾತ್ಮ, ನೀತಿ, ಬ್ರಹ್ಮಾಂಡ ಸೃಷ್ಟಿಯ ಉತ್ಪತ್ತಿ ನಿಯಮದ ಚರ್ಚೆಯ ವಾದ ನಡೆಯುತ್ತದೆ. ಹಾಡಿನ ಮುಗಿತಾಯದ ಸಂದರ್ಭದಲ್ಲಿ ಹಾಡಿನಲ್ಲಿರುವ ತಾತ್ವಿಕತೆ, ತಾರ್ಕಿಕತೆ ಕೇಳುಗರಿಗೆ ಅರ್ಥವಾಗುತ್ತದೆ. ಕೆಲವು ಕಲಾವಿದರು ಹಾಡನ್ನು ನಿಲ್ಲಿಸಿ ಮಧ್ಯೆ ಮಧ್ಯೆ ಸಾರಾಂಶವನ್ನು ಸಭಿಕರಿಗೆ ತಿಳಿಯಪಡಿಸುತ್ತಾರೆ.

ಕವಿಗಳು ಸವಾಲ್‌ನಲ್ಲಿ ಅಥವಾ ತಮ್ಮ ಹಾಡುಗಾರಿಕೆಯಲ್ಲಿ ನಿಗೂಡವಾದ ಶಬ್ದ, ಅರ್ಥ ಬಳಸಿಕೊಳ್ಳುವುದು ತಮ್ಮ ಪಾಂಡಿತ್ಯದ ಪ್ರಢಿಮೆಯೆಂದು ತಿಳಿದಿರುತ್ತಾರೆ. ತಮ್ಮದೆ ಆದ ಉಪಮೆ, ರೂಪಕ, ಸಂಕೇತಗಳನ್ನು ಕೊಟ್ಟುಕೊಂಡು ಹೋಗುತ್ತಾರೆ. ವಿಶೇಷವೆಂದರೆ ದೈನಂದಿನ ಬದುಕನ್ನೆ ಕಾವ್ಯದಲ್ಲಿ ಅಳವಡಿಸಿಕೊಳ್ಳುವುದಾಗಿರುತ್ತದೆ. ಲಾವಣಿಕಾರ ದ್ಯಾಗಾಯಿ ಗುಂಡಪ್ಪ ರಚಿಸಿದ ಹಾಡು ಈ ರೀತಿ ಇದೆ.

ಕಾಗಿ ಕರಿಯತಾದ ಪೋರಿ | ಕಾಗಿ ಕರಿಯತಾದ
ಕಾಗಿ ಕರಿಯುವುದು ನಿಜ ಯೋಗಿಗಿ ತಿಳಿದಿಲ್ಲ ||

ಇಲ್ಲಿ ಬಳಕೆಯಾಗುವ ‘ಕಾಗಿ’ ಸಾವಿನ ಸಂಕೇತವಾಗಿದೆ. ಯೋಗಿಯಾಗಿದ್ದರು, ಸಾವು ಬಿಡುವುದಿಲ್ಲ ಎಂಬ ಸಾವಿನ ಪ್ರಬಲತೆಯನ್ನು ಸೂಚಿಸುತ್ತಾನೆ. ಸಾವು ಎನ್ನುವುದು ಪದಕ್ಕೆ ಕಾಗಿ ಎನ್ನುವ ಅರ್ಥ ಧ್ವನಿಸುತ್ತದೆ.

ಸಾವಳಗಿ ಮಹ್ಮದಸಾಬ ಕವಿಯ ಒಂದು ಖ್ಯಾಲಿಯು ಇಲ್ಲಿ ನೆನಪಿಸಲಾಗುತ್ತದೆ.

ಪ್ರಾಣ ಪತಂಗ ಆಯುಷ್ಯ ದಾರ ಕಡಿತೋ
ಪರ ಲೋಕದ ದಾರಿ ಹಿಡಿದು ನಡಿತೋ || ||

ಇಲ್ಲಿಯ ‘ಪಲ್ಲ’ ನೋಡಲು ಸ್ಪಷ್ಟವಾಗಿಯೇ ಇದೆ. ‘ಜೀವಕ್ಕೆ’ ಪತಂಗದ ಪ್ರತಿಮೆಯನ್ನು ಕೊಟ್ಟುಕೊಂಡು ಆಯುಷ್ಯಕ್ಕೆ ‘ದಾರ’ದ ರೂಪ ಕೊಡಲಾಗಿದೆ. ಇಂತಹ ಮೂರ್ತವಾದ ರೂಪಕಗಳನ್ನು ಬಳಸಿ ಹಾಡನ್ನು ಗಟ್ಟಿಗೊಳಿಸುವ ಕವಿಗಳು, ಆಯಾ ಕವಿಯ ಆಳ ಅಧ್ಯಯನ ಹಾಡಿನ ಮೂಲಕವೆ ಗೊತ್ತಾಗುತ್ತದೆ. ಪ್ರಬಲವಾದ ಹರದೇಶಿ ಹಾಡುಗಾರನಿದ್ದರೆ, ಅಷ್ಟೆ ಸಮರ್ಥಳಾದ ನಾಗೇಶಿ ಹಾಡುಗಾರ್ತಿ ಇರಬೇಕೆಂದು ಬಯಸುವುದು ಪ್ರೇಕ್ಷಕರ ಗುಣಧರ್ಮ. ಹಾಗಾಗಿ ಹರದೇಶಿ v/s ನಾಗೇಶಿ ನಾಗೇಶಿ ಸ್ಪರ್ಧೆ ಮೇಳಗಳಿಂದಲೆ ತಿಳಿಯುತ್ತಾರೆ.

ಸವಾಲ್ ಜವಾಬ್ನಲ್ಲಿ ಅನುಸರಿಸಬೇಕಾದ ನಿಯಮಗಳು

ಸವಾಲ್ ಜವಾಬ್‌ನಲ್ಲಿ ತೊಡಗಿಕೊಂಡ ಹಾಡುಗಾರ ವಿಶಾಲವಾದ ಜ್ಞಾನವುಳ್ಳವನಾಗಿರಬೇಕು. ಆಶುಕವಿತ್ವ ಶಕ್ತಿ ಹೊಂದಿದವನಾಗಿರಬೇಕು. ಪಂಚ ಮಹಾಭೂತಗಳ ಅರಿವಿರಬೇಕು. ಪುರಾಣ, ಚರಿತ್ರೆಗಳು ಗೊತ್ತಿರಬೇಕು. ಇವೆಲ್ಲ ಇಲ್ಲದೆ ಹೋದರೆ ಎದುರಾಳಿ ಹಾಕುವ ಸವಾಲಿಗೆ ತಲೆಬಾಗಬೇಕಾಗುತ್ತದೆ.ಲಾವಣಿ ಮೇಳದ ಹಾಡುಗಾರಿಕೆಯು ಏರು ಜವ್ವನೆಯಲ್ಲಿದ್ದಾಗ ಎದುರಾಳಿ ಹಾಕಿದ ಸವಾಲಿಗೆ ಜವಾಬ್ ಮಾಡದೆ ಇರುವಂತವನಿಗೆ ಡಪ್ಪನ್ನು ಕಸಿದುಕೊಂಡು ಕಳುಹಿಸಿಕೊಡುವ ರೂಢಿ ಇತ್ತೆಂದು ತಿಳಿದು ಬರುತ್ತದೆ.

೧. ಸವಾಲ್ ಹಾಗಿದ ಹಾಡಿಗೆ ಜವಾಬ್ ಮಾಡದೆ ಸೋತಂತಹ ಹಾಡುಗಾರ ತನ್ನ ಸೋಲನ್ನು ಒಪ್ಪಿಕೊಂಡು ಡಪ್ಪನ್ನು ಬಿಟ್ಟು ಕೊಡಬೇಕು.

೨. ತನ್ನ ಗುರುವಿನ ಹತ್ತಿರ ಹೋಗಿ ಸವಾಲ್ ಹಾಕಿದ ಪದಕ್ಕೆ ಜವಾಬ್ ಪದ ರಚಿಸಿಕೊಂಡು ಬಂದು ಹಾಡಿ ಡಪ್ಪುನ್ನು ಮರಳಿ ಪಡೆಯಬೇಕು.

೩. ಮೇಳದ ಹಾಡುಗಾರ ತನಗೆ ಸವಾಲಿನ ಜವಾಬ್ ಕೊಡಲು ಆಗದೆ ಇದ್ದ ಪಕ್ಷದಲ್ಲಿ ತನ್ನ ಗುರುವಿಗೆ ಕರೆದುಕೊಂಡು ಬಂದು ಪದ ಹಾಡಿ (ಜವಾಬ್ ಪದ) ಡಪ್ಪನ್ನು ಪಡೆಯಬೇಕು.

ಈ ಮೂರು ರೀತಿಯ ಆಯ್ಕೆ ಹಾಡುಗಾರನಿಗೆ ಬಿಟ್ಟಿದ್ದು.

‘ಗುರುವಿಗೆ ಕರೆದುಕೊಂಡು ಹೋಗಿ ಡಪ್ಪನ್ನು ಮರಳಿ ಪಡೆದಂತಹ ಉದಾಹರಣೆಯನ್ನು ವಕ್ತೃಗಳಿಂದ ತಿಳಿದುಕೊಳ್ಳಲಾಯಿತು. ಅದು ಹೀಗಿದೆ. ಹರದೇಶಿ ಹಾಡುಗಾರ ಅಂಬಾದಾಸ ಜಿತೂರಿ ಕರ್ನಾಟಕ ಮಹಾರಾಷ್ಟರದ ಗಡಿ ಭಾಗವಾದ ಸೊಲ್ಲಾಪುರದ ಸಿದ್ಧರಾಮೇಶ್ವರನ ಜಾತ್ರೆಯಲ್ಲಿ ನಾಗೇಶಿ ಹಾಡುಗಾರ್ತಿಯಾದ ಮಾಯವ್ವ ಹಾಕಿದ ಸವಾಲಿಗೆ ಜವಾಬ ಕೊಡದಾಗದ ಹಾಡಿನ ಗುರುವಾದ ಸಾವಳಗಿ ಮಹ್ಮದಸಾಬನ ಹತ್ತಿರ ಬಂದು, ಅವರನ್ನೆ ಸೊಲ್ಲಾಪುರಕ್ಕೆ ಕರೆದುಕೊಂಡು ಹೋಗಿ ಆಕೆ ಹಾಕಿದ ಸವಾಲಿಗೆ ಜವಾಬ ಕೊಡಿಸಿ ಡಪ್ಪನ್ನು ಪಡೆದರು’ ಎಂದು ಮಹ್ಮದಸಾಬರ ಮಗ ಮೋದಿನಸಾಬ ಹೇಳಿದರು. ಆದರೆ ಸವಾಲ್-ಜವಾಬ್ ಪದಗಳು ಯಾವುವು ಎನ್ನುವುದ್ನು ಖಚಿತವಾದ ಮಾಹಿತಿ ಲಭ್ಯವಾಗಲಿಲ್ಲ.

ಹಾಡಿನಲ್ಲಿಯೆ ಗಂಡ ಹೆಂಡತಿಯರಾದ ಕವಿಗಳು

ಒಂಟಿ ಲಾವಣಿಯಿಂದ, ಮೇಳ ಲಾವಣಿ ಗೋಷ್ಠಿಗಳಾಗಿ ಎಂದು ಮಾರ್ಪಾಡುಗೊಂಡವೋ ಅಂದಿನಿಂದಲೆ ಹರದೇಶಿ – ನಾಗೇಶಿ ಎಂಬ ಪಂಗಡಗಳು ಹುಟ್ಟಿಕೊಂಡವು. ವಾದದ ಮಂಡನೆ ಒಂದೇ ಅಲ್ಲ. ಹಾಡಿನುದ್ದಕ್ಕೂ ಮೇಳಗಳಲ್ಲಿ ಗಂಡ ಹೆಂಡತಿಯರಾಗಿ ಕಾಲ ಕಳೆಯೋಣವೆಂದು ನಿರ್ಣಂ ತೆಗೆದುಕೊಂಡು ಯಾವ ಊರಿಗೆ ಹಾಡಲು ಕರೆಸುತ್ತಾರೋ, ಅಲ್ಲಿಗೆ ತಾವು ಗೊತ್ತುಪಡಿಸಿಕೊಂಡ ಮೇಳದವರೆ ಹೋಗುವುದೆಂದು ಕರಾರು ಮಾಡಿಕೊಂಡ ತಂಡಗಳು ಇದ್ದವು ಎಂಬ ಮೌಖಿಕ ದಾಖಲೆಗಳು ಸಿಗುತ್ತವೆ. ತಾವು ಸಾಯುವವರೆಗೂ ಜೊತೆ ಜೊತೆಯಾಗಿಯೇ ಕಾಲ ಕಳೆದಂತಹವರಿದ್ದಾರೆ. ಉದಾಹರಣೆಗಾಗಿ ಈ ಕೆಳಗಿನ ಮೇಳಗಳನ್ನು ಗುರುತಿಸಬಹುದು.

೧.       ನಾಗೇಶಿ : ಮಹಾಗಾಂವ ಮೀರಾಸಾಬ
ಹರದೇಶಿ : ಸಾವಳಗಿ ಮಹಮ್ಮದಸಾಬ

೨.       ನಾಗೇಶಿ : ಜಂಬಗಿ ಶಿವಶರಣ
ಹರದೇಶಿ : ದ್ಯಾಗಾಯಿ ಹಜರತ

೩.       ನಾಗೇಶಿ : ಬಾಳಗೇರಿ ಅಪ್ಪಣ್ಣ
ಹರದೇಶಿ : ಕಡಣಿ ಕಲ್ಲಪ್ಪ

ನಾಗೇಶಿ ಪಕ್ಷವಹಿಸಿ ಹಾಡುವುದಕ್ಕೆ ಹೆಂಗಸರು ಇದ್ದಿದ್ದಿಲ್ಲ. ಆ ಸ್ಥಾನವನ್ನು ಗಂಡಸರೆ ತುಂಬಿರುವಂತದ್ದು ಕಾಣುತ್ತೇವೆ. ಅಲ್ಲದೆ ಹಾಡುವಾಗ ಹೆಂಗಸರಂತೆ ಸೀರೆ ಉಟ್ಟುಕೊಂಡು ದಂಡಿಕಟ್ಟಿಕೊಡು ಕೈಯಲ್ಲಿ ಬಳೆ ಹಾಕಿಕೊಂಡು ಹಾಡಿಗೆ ಸಿದ್ಧರಾಗುತ್ತಿದ್ದರೆಂಬ ಮಾಹಿತಿ ವಕ್ತೃಗಳಿಂದ ಪಡೆಯಲಾಯಿತು.

ಪ್ರಸ್ತುತ ಸಂದರ್ಭದಲ್ಲಿ ಮೇಳಗಳಲ್ಲಿ ಇಂತಹ ಗಟ್ಟಿತನ ಉಳಿದಿಲ್ಲ. ಯಾರಿಗೆ ಯಾರು ಅವಲಂಬಿತರಾಗಿಲ್ಲ. ಸವಾಲ್ ಮಾಡಿದಂತಹ ಹಾಡುಗಾರನಿಗೆ, ಜವಾಬ್ ಕೊಡದೆ ಪ್ರತಿ ಸವಾಲ್ ಹಾಕುವುದು ಹೆಚ್ಚಾಗಿದೆ. ಏಕೆಂದರೆ ನನ್ನ ಹಾಡಿಗೆ ನೀನು ಜವಾಬ್ ಕೊಡು. ನಿನ್ನ ಹಾಡಿಗೆ ನಾನು ಜವಾಬ್ ಕೊಡುತ್ತೇನೆಂದು ಕರಾರುಗಳು ಹಾಕಿಕೊಳ್ಳುತ್ತಾರೆ. ಇಲ್ಲವೆ ಈ ತಕಾರರೇ ಬೇಡವೆಂದು ಸವಾಲ್ ಜವಾಬ್ ಕ್ರಿಯೆ ಬಿಟ್ಟು ಒಪ್ಪಂದ ಮಾಡಿಕೊಳ್ಳುವುದು ನಡೆಯುತ್ತದೆ. ಈ ಹಾಡುಗಾರಿಕೆ ಮೊಟಕುಗೊಂಡು ಮೊದಲನೆಯ ತಲೆಮಾರಿನವರ ನಂತರ. ಎರಡನೆ ತಲೆಮಾರಿನವರಲ್ಲಿ ಹಾಡುಗಾರಿಕೆಯ ಗಟ್ಟಿತನ ಉಳಿಯದೆ ಬರೀ ಖ್ಯಾಲಿ ಹಾಡುಗಳಲ್ಲಿಯೇ ಹಾಡುಗಾರಿಕೆ ಮುಕ್ತಾಯ ಮಾಡಿ ಬಿಡುವುದು ನಡೆಯುತ್ತಿದೆ. ಇನ್ನು ಮೂರನೆ ತಲೆಮಾರಿನವರು (ಇಂದಿನವರು) ಹೊಸ ಪೀಳಿಗೆಯವರು ಈ ಹಾಡುಗಾರಿಕೆ ಮಾಡಲು ಯಾರು ಮುಂದೆ ಬರದೆ ಇರುವುದು ಕಂಡು ಬರುತ್ತದೆ.

ಜವಾಬ್ ಹಾಡುಗಳ ರಾಚನಿಕ ಸಂದರ್ಭ

ಲಾವಣಿ ಸವಾಲ್ ಜವಾಬ್ ಪದಗಳ ವಿಷಯ. ಯೋಜನೆಗಾಗಿ ಬೆಕೆಂತಲೆ ಆಯ್ಕೆ ಮಾಡಿಕೊಂಡಿದ್ದೇನೆ. ಮೌಖಿಕ ಪರಂಪರೆಯ ಈ ಸಾಹಿತ್ಯ ಹಾಡುಗಾರರು ಎಲ್ಲಿ ಹಾಡಿರುತ್ತಾರೋ ಅಲ್ಲಿಯೇ ಬಿಟ್ಟು ಬರುತ್ತಾರೆ. ಕೇಳುಗರು ಎಲ್ಲಿ ಕೇಳಿರುತ್ತಾರೋ ಅಲ್ಲಿಯೇ ಆನಂದಿಸುತ್ತಾರೆ. ಇವುಗಳ ಸಂಗ್ರಹ, ಸಂಪಾದನೆ – ದಾಖಲೆ ಮಾಡಿಕೊಳ್ಳಬೇಕೆನ್ನುವವರು ಯಾರು ಇರುವುದಿಲ್ಲ. ಕಾಲ ಸಂದರ್ಭಕ್ಕೆ ತಕ್ಕಂತೆ ಮನೋರಂಜನೆ ಪಡೆದು ಅವರವರ ಪಾಡಿಗೆ ತಿರುಗಿ ಹೋಗುತ್ತಾರೆ. ಲಾವಣಿ ಹಾಡುಗಳಲ್ಲಿ ಚರಿತ್ರೆ, ನೀತಿ, ತತ್ವ ಅಧ್ಯಾತ್ಮದಂತಹ ಮತ್ತು ಇನ್ನೊಂದು ಮೇಳದವನಿಗೆ ಸವಾಲ್ ಹೇಗೆ ಹಾಕಬೇಕೆಂಬ ಹಾಡುಗಳು ಮಾತ್ರ ಒಬ್ಬ ಕವಿಯ ಹತ್ತಿರ ದಾಖಲಾತಿಯಾಗಿ ನಮಗೆ ಲಭ್ಯವಾಗುತ್ತವೆ. ಸವಾಲ್-ಜವಾಬ್ ಪದಗಳ ವಿಶೇಷತೆ ಎಂದರೆ ಸವಾಲ್ ಹಾಕುವುದು ಪೂರ್ವನಿಯೋಜಿತ, ಸಮಯ ಪಡೆದುಕೊಂಡು ಹಾಡು ರಚನೆ ಮಾಡಬಹುದು. ಆದರೆ ಜವಾಬ ಕೊಡುವಹಾಡು, ಹಾಡುಗಾರನ ಬೌದ್ಧಿಕ ಶಕ್ತಿ ಸಾಮರ್ಥ್ಯ ಅಳೆಯುವದಾಗಿರುತ್ತದೆ.ಇಂತಹ ಸವಾಲ್ ಹಾಡೆ ಹಾಡುತ್ತಾನೆ ಎನ್ನುವ ನಿರ್ಧಾರ ಮಾಡುವುದೆ ಹೇಗೆ? ಸವಾಲ್ ಪದ ಯಾವುದೆ ಆಗಿದ್ದರೂ Ready Made ಜವಾಬ ಹಾಡುಗಳು ಯಾವ ಕವಿಯ ಹತ್ತಿರವು ಇರುವುದಿಲ್ಲ. ಅವು ಆಶುಕವಿತ್ವ ಶಕ್ತಿ ಪಡೆದಹಾಡುಗಳಾಗಿರುತ್ತವೆ. ಮಜಲಿನಲ್ಲಿ ಕವಿತ್ವ ಮಾಡಿದ ಮೇಲೆನೆ ಅವು ಲಿಪಿಗೊಳಪಡಿಸಲಾಗುತ್ತದೆ.ಇಂತಹ ಹಾಡುಗಳ ಮುಖಾಮುಖಿಯಾಗಿಸುವಂತಹ ಸಂಗ್ರಹಕಷ್ಟಸ್ಧ್ಯ. ಪೂರ್ವಸಿದ್ಧತೆಯಿಂದ ರಚನೆಯಾದ ‘ಸವಾಲ್’ ಪದಗಳು ಸಿಗುತ್ತವೆ. ಅವಕ್ಕೆ ಪ್ರತಿಸ್ಪರ್ಧಿಯಾಗಿ ಹಾಡುತ್ತಿದ್ದವರ ಕವಿಗಳ ಶಿಷ್ಯಂದಿರ, ಅವರ ಕುಟುಂಬದವರ ಹತ್ತಿರ ಹೋಗಿ ಸಂಗ್ರಹಿಸಿದಂತಹ ಹಾಡುಗಳಿವು. ಒಂದೊಂದು ಹಾಡಿಗೆ ಹತ್ತಾರು ಬಾರಿ ಸುತ್ತಿ ಸುತ್ತು ಜವಾಬ್ ಹಾಡು ಸಿಗದೆ ಹೋದ ಪಕ್ಷದಲ್ಲಿ ಮೇಳದವರಿಂದಲೇ ಹಾಡಿಸಿ ಕಲೆ ಹಾಕಿದಂತಹ ಹಾಡುಗಳ ಸಂಗ್ರಹವೆ ಈ ಸವಾಲ್ ಜವಾಬ್ ಪದಗಳು.

 


[1] ಹರದೇಶಿ- ನಾಗೇಶಿ ಮೇಳದವರಿಗೆ ಮೊದಲು ಬೇರೆ ಬೇರೆ ಕಡೆಯಿಂದಲೆ ಆಹ್ವಾನಿಸುತ್ತಿದ್ದರು. ಈಗ ಒಬ್ಬರಿಗೆ ವೀಳ್ಯೆ ಕಟ್ಟು ಇನ್ನೊಂದು ಮೇಳ ಕರೆದುಕೊಂಡು ಬರುವ ಜವಾಬ್ದಾರಿ ಅವರಿಗೆ ವಹಿಸುತ್ತಾರೆ.