ಲಾವಣಿಯ ಮೂಲ

ಉತ್ತರ ಕರ್ನಾಟಕದಲ್ಲಿ ಲಾವಣಿ ಮತ್ತು ಗೀ ಗೀ ಹಾಡುಗಳ ಕುರಿತಾದ ಮೂಲದ ಬಗೆಗೆ ನಡೆದಿರುವಷ್ಟು ಚರ್ಚೆ ಮತ್ತಾವ ಜನಪದ ಕಲೆಗಳ ಬಗೆಗೂ ನಡೆದಿಲ್ಲ ಎಂದೆನಿಸುತ್ತದೆ. ಇದು ಮಹಾರಾಷ್ಟ್ರದಿಂದ ಬಂದ ಕಲೆಯೋ, ಕರ್ನಾಟಕದಲ್ಲಿಯೇ ಇದ್ದಂತ ಕಲೆಯೋ ಎಂಬ ವಾದ, ವಿವಾದ ನಡೆಯುತ್ತಲೇ ಇದೆ. ಅಲ್ಲದೆ ಹಾಡಿನ ಪ್ರಕಾರದಲ್ಲಿಯೂ ಅಸ್ಪಷ್ಟತೆ ಇದೆ. ಲಾವಣಿ – ಗೀ ಗೀ ಹಾಡುಗಳು ಬೇರೆ ಬೇರೆ ಎಂದು ಕೆಲವರು ಹೇಳಿದರೆ, ಲಾವಣಿ – ಗೀ ಗೀ ಒಂದೇ ಎಂದು ಕೆಲವರ ತರ್ಕವಾಗಿದೆ. ಇವೆರಡು ವಿಷಯಗಳ ಕುರಿತು ಸ್ಪಷ್ಟ ನಿಲುವಿಗೆ ಬರಲು ಪ್ರಯತ್ನಿಸಲಾಗಿದೆ. ಮೊದಲನೆಯದಾಗಿ ಲಾವಣಿಯ ಮೂಲದ ಬಗೆಗೆ ಹೇಳುವುದಾದರೆ “ಲಾವಣಿ ಮರಾಠಿಯಿಂದ ಕನ್ನಡಕ್ಕೆ ಬಂದಿದೆ ಎಂಬುದು ಸ್ಪಷ್ಟವಾಗಿದೆ. ಮರಾಠಿ ಲಾವಣಿ ಸಾಹಿತ್ಯದ ಸುವರ್ಣಯುಗ ೧೭೫೦ ರಿಂದ ೧೮೫೦, ಅಲ್ಲಿ ಜನಪ್ರಿಯಗೊಂಡ ಲಾವಣಿ ಕರ್ನಾಟಕಕ್ಕೆ ಬರಲು ಕೆಲವು ವರ್ಷಗಳಾದರೂ ಬೇಕಲ್ಲವೆ? ಅಂದ ಮೇಲೆ ೧೯೫೦ರಲ್ಲಿದ್ದ ಗುಣಚಂದ್ರನು ಇನ್ನು ಕಣ್ಣು ತೆರೆಯದಿದ್ದ ಲಾವಣಿಯ ಬಗೆಗೆ ಹೇಳಿರುವ ಸಾಧ್ಯತೆ ಇಲ್ಲವೆಂದು ಒಪ್ಪಿಕೊಳ್ಳಬೇಕಾಗುತ್ತದೆ.’’

[1] ಹಾಗಾಗಿ ಲಾವಣಿಯು ಕನ್ನಡದ್ದಲ್ಲ ಬೇರೆ ಕಡೆಯಿಂದಲೆ ಬಂದಿರಬೇಕೆಂಬ ವಾದ ಸ್ಪಷ್ಟವಾಗುತ್ತದೆ.

‘ಈಗ ಕನ್ನಡದಲ್ಲಿ ಪ್ರಚಾರದಲ್ಲಿರುವ ಲಾವಣಿ ರಚನೆ ಹಾಗೂ ಹಾಡುಗಾರಿಕೆ ಮರಾಠಿಯಲ್ಲಿ ಪೇಶ್ವೆಯರ ಕಾಲದಲ್ಲಿ ಶ್ರೀಮಂತವಾಗಿ ಬೆಳೆದು ಬಂದಿದ್ದ ಲಾವಣಿ ಹಾಗೂ ಆ ಪೂರ್ವದಲ್ಲಿ ಅಲ್ಲಿ ಬೆಳೆದು ಬಂದಿದ್ದ ಪೋವಾಡಗಳ ನೇರ ಪ್ರೇರಣೆಗಳೆನ್ನುವುದು ನಿರ್ವಿವಾದ’[2] ಎನ್ನುವ ಡಾ. ಬಿ.ಬಿ. ಹೆಂಡಿಯವರ ಮಾತಿಗೆ, ಡಾ. ಸಂಗಮೇಶ ಬಿರಾದಾರ ಅವರು ಒಪ್ಪಿಕೊಳ್ಳುವುದಿಲ್ಲ. ಅವರು ಹೀಗೆ ಹೇಳುತ್ತಾರೆ. “ಒಂದು ವೇಳೆ ಮರಾಠಿ ಪೋವಾಡದಿಂದಲೆ ಕನ್ನಡದ ಲಾವಣಿಗಳು ಬಂದಿದ್ದರೆ ಆ ಶಬ್ದವು ಕನ್ನಡದಲ್ಲಿ ತದ್ವತ್ತಾಗಿಯಲ್ಲದಿದ್ದರೂ, ಶಾಹೀರೀ ಶಾವಿರಕಿಯಾಗಿ ಪರಿವರ್ತನೆಗೊಂಡಿರುವಂತೆ ಪರಿವರ್ತನೆಗೊಂಡಾದರೂ ಬರಬೇಕಾಗಿತ್ತು. ಕ್ವಚಿತ್ತಾಗಿಯು ಈ ಶಬ್ದದ ಬಳಕೆ ಕನ್ನಡದಲ್ಲಿಲ್ಲದಿರುವುದು ಗಮನಾರ್ಹ’’[3] ಹಾಗಾಗಿ ಲಾವಣಿಗಳು ಕನ್ನಡದವೆ ಆಗಿವೆ ಎಂದು ಹೇಳ ಬಯಸಿದ್ದಾರೆ. ಮೌಖಿಕ ಹಾಡುಗಳ ಬೆನ್ನು ಹತ್ತಿ ಹೋಗುವಾಗ ಲಿಖಿತ ಆಧಾರಗಳು ದೊರಕದೆ ಇರಬಹುದು. ಆದರೆ ಚಾರಿತ್ರಿಕ ಹಿನ್ನೆಲೆ ಭೌಗೋಳಿಕ ಪರಿಸರವನ್ನು ಆ ಹಾಡುಗಳಲ್ಲಿ ಕಾಣುತ್ತೇವೆ. ಜನಸಾಮಾನ್ಯರ ಜೀವನಾಡಿಯಾದ ಈ ಕೆಲಗಳು ಮೂಲದಲ್ಲಿ ತಮ್ಮ ಬೇರು ಬಿಟ್ಟಿರುತ್ತವೆ. ಕರ್ನಾಟಕದಲ್ಲಿ ಎಲ್ಲಿಯೂ ಸಿಗದ ಲಾವಣಿ – ಗೀ ಗೀ ಹಾಡಿನ ಹುಟ್ಟು, ಬೆಳವಣಿಗೆ ಮತ್ತು ಪ್ರಚಾರವನ್ನು ಉತ್ತರ ಕರ್ನಾಟಕದಲ್ಲಿ, ಅದು ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿಕೊಂಡಿರುವ ಹಳ್ಳಿಗಳಲ್ಲಿ ಇಂದಿಗೂ ಇದೆ. ಹಾಡಿನ ರಚನಾಕಾರರಿದ್ದಾರೆ. ಹಾಡಿನ ಕವಿಗಳ ಕುರಿತ ಅಧ್ಯಯನಗಳು ನಡೆದಿವೆ. ಪ್ರದೇಶದಿಂದ ಪ್ರದೇಶಕ್ಕೆ ಮೇಳ ಕಟ್ಟಿಕೊಂಡು ತಿರುಗುವ ಕಲಾವಿದರ ಜೀವಂತ ಬದುಕನ್ನು ಕಾಣುತ್ತೇವೆ. ಹಾಗಾಗಿ ಲಾವಣಿ – ಗೀ ಗೀ ಹಾಡುಗಾರಿಕೆ ಮಹಾರಾಷ್ಟ್ರದ ಪೋವಾಡದಿಂದಲೆ ಪ್ರೇರಣೆ ಪಡೆದ ಕಲೆ ಎಂದು ಖಚಿತವಾಗಿ ಗುರುತಿಸಲಾಗುತ್ತದೆ.

ಲಾವಣೀ ಗೀ ಗೀ ಸ್ಪಷ್ಟನೆ

ಲಾವಣಿ ಮೂಲದ ಬಗೆಗೆ ಎಷ್ಟು ಗೊಂದಲಗಳಿವೆಯೋ ಲಾವಣಿ – ಗೀ ಗೀ ಹಾಡುಗಾರಿಕೆಯ ಕುರಿತಾಗಿಯೂ ಅಷ್ಟೆ ಗೊಂದಲಗಳಿವೆ. ಕನ್ನಡ ಮತ್ತು ಮರಾಠಿ ಭಾಷೆಯ ಲಾವಣಿಗಳಲ್ಲಿರುವ ವ್ಯತ್ಯಾಸವೆನೆಂದರೆ “ಮರಾಠಿಯಲ್ಲಿ ವೀರ ರಸ ಪ್ರಧಾನವಾದ ಪದಗಳನ್ನು ‘ಪೋವಾಡ’ವೆಂದು, ಶೃಂಗಾರ ರಸ ಪ್ರಧಾನವಾದ ಹಾಡುಗಳನ್ನು ‘ಲಾವಣಿ’ ಎಂದು ಬೇರೆ ಬೇರೆಯಾಗಿ ಗುರುತಿಸಿದಂತೆ ಕನ್ನಡದಲ್ಲಿ ಇಲ್ಲ. ಶೃಂಗಾರವೆ ಇರಲಿ ವೀರ ರಸವೆ ಇರಲಿ, ಚರಿತ್ರೆ, ನೀತಿ, ತತ್ವಗಳಿಗೆ ಸಂಬಂಧಿಸಿದವೆ ಆಗಿರಲಿ ಗೀ ಗೀ ಹಾಡುಗಳನ್ನೆಲ್ಲ ಲಾವಣಿ ಎಂದೆ ಕರೆಯುವ ವಾಡಿಕೆ’’[4] ಹಾಗಾಗಿ ಲಾವಣಿ – ಗೀ ಗೀ ಬೇರೆ ಬೇರೆ ಅಲ್ಲ. ಅವೆರಡು ಒಂದೆ ಎಂಬ ಅಭಿಪ್ರಾಯ ಡಾ. ಬಿ.ಬಿ. ಹೆಂಡಿಯವರದಾಗಿದೆ. ಆ ನಿಟ್ಟಿನಲ್ಲಿ ಈ ಯೋಜನೆಯ ಪ್ರಸ್ತಾವನೆಯುದ್ದಕ್ಕೂ ಒಂದೇ ಎಂಬ ವಾದದ ಮೂಲಕ ಗುರುತಿಸಿಕೊಳ್ಳಲಾಗಿದೆ.

“ಲಾವಣಿ ಮತ್ತು ಗೀ ಗೀ ಪದಗಳಿಗಿರುವ ಅಂತರ, ಗೋಷ್ಠಿ ವಿಧಾನದಲ್ಲಿಯೇ ಹೊರತು ರಚನಾಶಿಲ್ಪದಲ್ಲಲ್ಲ. ಮೂಲತಃ ಲಾವಣಿ ಕವಿ ಒಂದು ಹಾಡನ್ನು ಒಬ್ಬನೆ ಹಾಡಬೇಕು ಅಥವಾ ಮೇಳದವರೆ ಹಾಡಬೇಕು ಎಂದು ನಿಶ್ಚಿಯಿಸಿ ಕಟ್ಟುವುದಿಲ್ಲ. ಒಂದು ಲಾವಣಿ ಪದ ನಿರ್ಮಣಗೊಂಡ ಮೇಲೆ ಅದನ್ನು ಒಬ್ಬನೆ ನಿಂತು ಹಾಡಬಹುದು ಅಥವಾ ಮೇಳಗೂಡಿಯೆ ಹಾಡಬಹುದು. ಒಬ್ಬನೆ ನಿಂತು ಹಾಡುವಾಗ ಅದು ಬಯಲು ಲಾವಣಿ ಎನಿಸಿಕೊಳ್ಳುತ್ತದೆ. ಮೇಳಗೂಡಿ ಹಾಡುವಾಗ ಅದು ಮೇಳ ಲಾವಣಿ ಎನಿಸಿಕೊಳ್ಳುತ್ತದೆ. ಈ ಮೇಳ ಲಾವಣಿಗೆ ಗೀ ಗೀ ಪದ, ಶಾವಿರಿಕಿ ಹಾಡು, ಜೀ ಜೀ ಪದ ಎಂಬ ಪರ್ಯಾಯ ನಾಮಗಳಂಟು’’[5] ಮೂಲದಲ್ಲಿ ‘ಲಾವಣಿ’ ಎನ್ನುವ ಪದ ಒಂದೇ ಇರುತ್ತದೆ. ಹಾಡುಗಾರರು ತಮಗೆ ಬೇಕಾದ ರೀತಿಯಲ್ಲಿ ಮಾರ್ಪಡು ಮಾಡಿಕೊಳ್ಳುತ್ತಾರೆ. ಹಾಗಾಗಿ ಗೀ ಗೀ – ಲಾವಣಿ ಒಂದೇ ಎನ್ನುವ ಧ್ವನಿಯೂ ಇಲ್ಲಿದೆ.

ಈ ಮೇಲಿನ ಮಾತಿಗೆ ಇನ್ನೊಂದು ಮಾತನ್ನು ಸೇರಿಸುವುದಾದರೆ ಲಾವಣಿ – ಗೀ ಗೀ ಹಾಡುಗಾರಿಕೆ “ನಾಮ ನಿರ್ದೇಶನದಿಂದ ಬೇರೆ ಬೇರೆಯಾಗಿದ್ದರು. ಎಲ್ಲವು ಒಂದೇ ಎನ್ನುವುದನ್ನು ಲಕ್ಷ್ಯದಲ್ಲಿಟ್ಟಿರಬೇಕು. ಕೆಲವರು ಇವು ಭಿನ್ನ ಭಿನ್ನವೆಂದು ಹೇಳಿರುವುದನ್ನು ಕಾಣುತ್ತೇವೆ. ಬಹುತರವಾಗಿ ಲಾವಣಿ ಸಾಹಿತ್ಯದ ಬಗೆಗೆ ಪೂರ್ಣ ಜ್ಞಾನ ಇಲ್ಲದವರು ಈ ಹೇಳಿಕೆ ಕೊಟ್ಟಿರಬಹುದು.’’[6] ಇಲ್ಲಿಯೂ ಕೂಡ ಲಾವಣಿ – ಗೀ ಗೀ ಬೇರೆ ಬೇರೆ ಅಲ್ಲ ಎನ್ನುವ ಮಾತೆ ಕೇಳಿಸುತ್ತದೆ. ಆದರೆ ಡಾ. ಸೋಮಶೇಖರ ಇಮ್ರಾಪೂರ ಅವರು ತಮ್ಮ ಜಾನಪದ ಆಲೋಕನ ಪುಸ್ತಕದಲ್ಲಿ ಹಂತಿ, ಗೀ ಗೀ ಮತ್ತು ಲಾವಣಿ ಸಂಪ್ರದಾಯ ಎಂಬ ಲೇಖನದಲ್ಲಿ ಗೀ ಗೀ ಮತ್ತು ಲಾವಣಿಗಳನ್ನು ಬೇರ್ಪಡಿಸಿ ನೋಡಿದ್ದಾರೆ. “ಗೀ ಗೀ ಸಂಪ್ರದಾಯ ಪರಂಪರೆಯುದ್ದಕ್ಕೂ ಗ್ರಾಮೀಣರನ್ನು ರಂಜಿಸುತ್ತ ಬಂದಿದೆ. ಜಾತ್ರೆಯ ಮೋಜು ಮಜಲು ಉತ್ಸವಾದಿಗಳಲ್ಲೆಲ್ಲಾ ಗೀ ಗೀ ಮೇಳ ಕರೆಸಿ, ಹಾಡಿಸಿ ಕೇಳುವುದೆಂದರೆ ಹಳ್ಳಿಗರಿಗೂ ಹಿಗ್ಗಿನ ವಿಷಯ’’[7] ಇನ್ನೂ ಮುಂದೆ ಹೋಗಿ ಅವರೆ ಹೀಗೆ ಹೇಳುತ್ತಾರೆ. ‘ಲಾವಣಿ ಗೀ ಗೀ ಹಾಡುಗಾರಿಕೆ ಇಡೀ ಕರ್ನಾಟಕದ ಅದರಲ್ಲೂ ಉತ್ತರ ಕರ್ನಾಟಕದ ಪ್ರಸಿದ್ಧ ಮತ್ತು ವಿಶಿಷ್ಟವಾದ ಸ್ವರೂಪ ಲಕ್ಷಣಗಳನ್ನು ಹೊಂದಿದ ಎರಡು ಜನಪದ ಗೀತ ಸಂಪ್ರದಾಯಗಳು’ ಎಂದು ಪ್ರತ್ಯೇಕಿಸುತ್ತಾರೆ. ಅಲ್ಲದೆ ‘ಉತ್ತರ ಕರ್ನಾಟಕದಲ್ಲಿ ಇತ್ತೀಚೆಗೆ ಗೀ ಗೀ ಯಾವುದೋ, ಲಾವಣಿ ಯಾವುದೋ ನಿರ್ಧರಿಸಲಾರದಷ್ಟು ಅವು ಏಕರೂಪತೆಯನ್ನು ಸಾಧಿಸಿವೆ’ ಎನ್ನುತ್ತಾರೆ. ಹಾಗಾದರೆ ಲಾವಣಿ ಕುರಿತ ಅದರ ಮೂಲದ ಕುರಿತು ನಡೆದಿರುವಷ್ಟು ಅಧ್ಯಯನ ಮತ್ತು ಚರ್ಚೆಗಳು ಗೀ ಗೀ ಕುರಿತು ನಡೆದಿಲ್ಲದ ಕಾರಣ ಗೀ ಗೀ ಮತ್ತು ಲಾವಣಿ ಒಂದೇ ಎನ್ನುವುದು ಅಥವಾ ಲಾವಣಿಯ ಮುಂದುವರಿಕೆಯ ಭಾಗವೆ ಗೀ ಗೀ ಎನ್ನುವುದು ನನ್ನ ಅಭಿಪ್ರಾಯ. ಕ್ಷೇತ್ರಕಾರ್ಯದ ಮಾಹಿತಿಯಂತೆ ಹತ್ತಾರು ಲಾವಣಿ ಮೇಳದವರನ್ನು ಭೇಟಿಯಾಗಿ ಲಾವಣಿ – ಗೀ ಗೀ ಹಾಡುಗಾರಿಕೆಗಿರುವ ವ್ಯತ್ಯಾಸವನ್ನು ಕೇಳಿದ್ದೇನೆ. ಅವರು ಹಾಡುವ ವಿಧಾನಗಳನ್ನು ಹೇಳಿಕೊಟ್ಟರು. ಒಬ್ಬನೆ ಗೀ ಗೀ ಹಾಡುಗಾರ ಲಾವಣಿ ಮತ್ತು ಗೀ ಗೀ ಪದಗಳನ್ನು ಹಾಡುವ ರೀತಿ ಗಮನಿಸಲಾಗಿ, ಒಬ್ಬನೆ ಆ ಎರಡರ ಸಾಧ್ಯತೆಗಳನ್ನು ತಿಳಿಸಿಕೊಟ್ಟನು. ಒಂಟಿ ಲಾವಣಿ ಬರೀ ಪೌರಾಣಿಕ, ಚರಿತ್ರೆ, ನೀತಿ, ತತ್ವ ಮತ್ತು ಘಟನಾತ್ಮಕ ವಿಷಯಗಳನ್ನು ಹೇಳುವುದರಿಂದ ಆ ಎಲ್ಲಾ ಹಾಡುಗಳ ಸ್ವರೂಪ ಒಂದೇ ಎನಿಸಿಕೊಂಡಿತು. ಆದರೆ ಮೇಳ ಲಾವಣಿಯಲ್ಲಿ ವೈವಿಧ್ಯಮಯವಾದ ಧಾಟಿ ರೂಢಿಸಿಕೊಂಡಿದ್ದರಿಂದ ಈ ಹಾಡುಗಾರಿಕೆ ಹೆಚ್ಚು ಆಕರ್ಷಕವಾಯಿತು. ಹರದೇಶಿ -ನಾಗೇಶಿ ಮತ್ತು ಸವಾಲ್-ಜವಾಬ್ ಅಂಶಗಳು ಸೇರಿದ ನಂತರ ಹೆಂಗಸೆ ಪ್ರತ್ಯಕ್ಷವಾಗಿ ಹಾಡುಗಾರಿಕೆಗೆ ಇಳಿದಾಗ ಇದರ ಆಕರ್ಷಕತೆ ಇನ್ನೂ ಹೆಚ್ಚಿತು.

“ಲಾವಣಿಗಳೆಂದರೆ ಅವು ಹೆಣ್ಣು-ಗಂಡು ಇಲ್ಲವೆ ಪ್ರಕೃತಿ ಪುರುಷ ಶಕ್ತಿಗಳ ಹೆಚ್ಚುಗಾರಿಕೆಯನ್ನು ಕುರಿತ ಸ್ವಾರಸ್ಯಪೂರ್ಣ ಶೃಂಗಾರ ಗೀತೆಗಳ ಸಂವಾದಗಳು ಮಾತ್ರ’’[8] ಈ ಸಂವಾದದ ಹಾಡುಗಳು ಆದಿಯಿಂದ – ಆಧುನಿಕತೆಯವರೆಗೂ ಪಾರಂಪರಿಕವಾಗಿ ಸಾಗಿ ಬರುತ್ತಿವೆ. ೧೮೪೨ರಿಂದ ದ್ಯಾಗಾಯಿಯ ಮಹಾಲಿಂಗ – ಮಹಾರುದ್ರರಿಂದಲೂ ಈ ಮೇಳಗಳನ್ನು ಕಾಣುತ್ತೇವೆ. ನಾಡಿನಾದ್ಯಂತ ಅವರ ಶಿಷ್ಯರು ಗೀಗೀ ಹಾಡಿನ ಮೇಳ ಕಟ್ಟಿಕೊಂಡೆ ತಿರುಗುತ್ತಿರುವುದು ಕಂಡು ಬರುತ್ತದೆ. ಒಂಟಿ ಲಾವಣಿಯಿಂದ ಮೇಳ ಲಾವಣಿ ಮಾಡಿಕೊಳ್ಳುವಾಗ ಬದಲಾವಣೆಯಾದಂತಹ ಒಂದು ಅಂಶವೆಂದರೆ ಜೊತೆಯಲ್ಲಿ ಹಾಡುವವರ ಹೆಸರನ್ನು ಹಾಡಿನ ನಾಮಾಂಕಿತದಲ್ಲಿ ಸೇರಿಸಿಕೊಂಡಿದ್ದು. ಉದಾಹರಣೆಗಾಗಿ ಮಹಾಲಿಂಗ-ಮಹಾರುದ್ರ, ಗುಂಡು-ಭದ್ರು. ಭೀಮು-ಬಸಯ್ಯ, ಮಲ್ಲಾ-ಹಸನ, ರಾಣುಕೂಬಣ್ಣ ಮುಂತಾದ ಜೋಡಿ ಹೆಸರುಗಳು ಲಾವಣಿ ಹಾಡುಗಾರಿಕೆಯ ಆರಂಭದ ಸಂದರ್ಭದಲ್ಲಿ ಮೊದಲನೆ ತಲೆಮಾರಿನವರು ಬಳಸಿರುವುದಾಗಿದೆ. ನಂತರದಲ್ಲಿ ಬಂದ ಲಾವಣಿ – ಗೀ ಗೀ ಹಾಡುಗಾರರು ಈ ರೀತಿ ಬಳಸಿಲ್ಲದ್ದೂ ಕಂಡು ಬರುತ್ತದೆ.

ಲಾವಣಿ : ಕಾಲಮಾನಕ್ಕೆ ಸ್ಪಂದಿಸುವ ಗುಣ ಹೊಂದಿದೆ

ಯಾವುದೇ ಒಂದು ಜನಪದ ಕಲೆಗೆ, ಸಮಕಾಲೀನತೆಗೆ ಸ್ಪಂದಿಸುವ ಗುಣ ಇರಬೇಕು. ಅಂದಾಗಲೆ ಅದು ಬದುಕಿ ಉಳಿಯಲು ಸಾಧ್ಯ. ಇಲ್ಲದಿದ್ದರೆ ಅದು ತನ್ನ ಕಾಲದ ಗರ್ಭದಲ್ಲಿಯೇ ಕಮರಿ ಹೋಗಬೇಕಾಗುತ್ತದೆ. ಇಂದಿನ ಗೀಗೀ ಹಾಡುಗಾರಿಕೆಯೂ ಬಹಳಷ್ಟು ಹಿಂದಿನದೇನಲ್ಲ. ೨೫೦ ವರ್ಷಗಳಿಗಿಂತಲೂ ಅದರ ಚರಿತ್ರೆ ಹಿಂದೆ ಸರಿಯುವುದಿಲ್ಲ. ಆದರೂ ಕೂಡ ಈ ಕಲೆ ಯಾವುದೇ ಸಂಪ್ರದಾಯ, ಆಚರಣೆ ಮತ್ತು ನಂಬಿಕೆಗಳಿಂದ ಕೂಡಿಲ್ಲ. ಇದೊಂದು ಅಪ್ಪಟ ಮನೋರಂಜನೆಯ ಕಲೆಯಾಗಿ ಕಾಲಕಾಲಕ್ಕೆ ಸ್ಪಂದಿಸುತ್ತಾ ಬರುತ್ತಿದೆ. ಹಾಗಾಗಿ ಇದು ರಾಷ್ಟ್ರೀಯ ಕಲೆಯಾಗಿ ಹೆಗ್ಗಳಿಕೆ ಪಡೆದದ್ದುಂಟು. ಸ್ವಾತಂತ್ರ್ಯ ಹೋರಾಟಗಾರರು ಲಾವಣಿ ಹಾಡುಗಾರರನ್ನು ಬಳಸಿಕೊಂಡು ಬ್ರಿಟಿಷರನ್ನು ದೇಶ ಬಿಡಿಸಿ ಓಡಿಸುವ ಸಲುವಾಗಿ ಹಳ್ಳಿಹಳ್ಳಿಗಳಲ್ಲಿ ಸ್ವಾತಂತ್ರ್ಯ ಹರಾಟಗಾರರು ಲಾವಣಿ ಹಾಡುಗಾರರನ್ನು ಬಳಸಿಕೊಂಡು ಬ್ರಿಟಿಷರನ್ನು ದೇಶ ಬಿಡಿಸಿ ಓಡಿಸುವ ಸಲುವಾಗಿ ಹಳ್ಳಿ ಹಳ್ಳಿಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಊದಲು ನಾಂದಿಯಾಯಿತು. ಸ್ವಾತಂತ್ರ್ಯ ಹೋರಾಟಗಾರರಿಗೆ ಇರುವಷ್ಟು ಜವಾಬ್ದಾರಿ, ಕಲಾವಿದರಿಗೂ ಇತ್ತು. ಏಕೆಂದರೆ ಹೋರಾಟದ ಜಾಗೃತಿ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಮುಟ್ಟಿಸಬೇಕಾಗಿತ್ತು. ಆ ನಿಟ್ಟಿನಲ್ಲಿ ಈ ಹಾಡುಗಾರಿಕೆ ಕೆಲಸ ಮಾಡಿತು. “ಕಲಬುರ್ಗಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ಮಹಾಗಾಂವ ಚಂದ್ರಶೇಖರ ಪಾಟೀಲರು ತಮ್ಮ ಊರಿನ ಗೀ ಗೀ ಕಲಾವಿದನಾದ ಮೀರಾಸಾಬನನ್ನು ಬಳಸಿಕೊಂಡರು. ಹೋರಾಟದ ವೇದಿಕೆಯ ಮೇಲೆ ಪಾಟೀಲರು ಭಾಷಣ ಮಾಡಿದರೆ, ಅದೇ ವೇದಿಕೆಯ ಮೇಲೆ ಮೀರಾಸಾಬ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಹಾಡು ಹಾಡುತ್ತಿದ್ದರು’’[9] ಇವೆಲ್ಲವೂ ಕೂಡ ಕಾಲ ಮಿತಿಯಲ್ಲಿಯೇ ರಚನೆಯಾಗಿ ಬಳಕೆಯಾದವೆ ಹೊರತು ಆ ಹಾಡುಗಳನ್ನು ಹಿಡಿದಿಡಬೇಕೆಂಬ ಪ್ರಯತ್ನ ಯಾರೂ ಮಾಡಲಿಲ್ಲ. ಆ ಸಂದರ್ಭದಲ್ಲಿ ಬಳಸಿಕೊಂಡ ಕಲಾವಿದನಿಗೆ ‘ಪಂಚಾಕ್ಷರಿ’ ಎಂಬ ಬಿರುದನ್ನು ಕೊಡಿಸಿದರೆ ವಿನಹ ಸ್ವಾತಂತ್ರ್ಯ ಹೋರಾಟದ ಪಿಂಚಣಿ ದೊರೆಯಲಿಲ್ಲ. ಬಡ ಕಲಾವಿದರು ಮೇಲ್ವರ್ಗದವರು ಬಳಸಿಕೊಳ್ಳುವ ಕೈಗೊಂಬೆಗಳಾಗಿಯೆ ಉಳಿದಿರುವುದು ವಿಷಾದದ ಸಂಗತಿ.

ಲಾವಣಿ ಹಾಡುಗಾರರು ಎಲ್ಲಿಯೆ ಬಳಕೆಗೊಂಡರು. ತಾತ್ಕಾಲಿಕವಾದ ನೆಮ್ಮದಿಯೆ ಪಡೆದರು ಹೊರತು, ಶಾಶ್ವತ ಪರಿಹಾರ ಸಿಕ್ಕಿಲ್ಲ. ಇಂದಿಗೂ ಕೂಡ ಜಾತ್ರಾ ಮಹೋತ್ಸವಗಳಲ್ಲಿ ಹಳ್ಳಿ ಹಳ್ಳಿಗೆ ತಿರುಗಿ ಹರದೇಶಿ ನಾಗೇಶಿ ಪಕ್ಷದಿಂದಲೆ ತಮ್ಮ ಲಾವಣಿ ಗೀ ಗೀ ಹಾಡುಗಳನ್ನು ಹಾಡುತ್ತ ದಿನ ಕಳೆಯುತ್ತಿದ್ದಾರೆ. ಅದರಲ್ಲಿಯೂ ಇಂದಿನ ಯುವ ಪೀಳಿಗೆಯವರು ಈ ಹಾಡುಗಾರಿಕೆಗೆ ತರಬೇತಿ ಪಡೆದು ಮುಂದೆ ಬರುವುದೊತ್ತಟ್ಟಿಗಿರಲಿ, ಹಾಡುಗಳನ್ನು ಕೇಳಲುಸಹ ಬರುತ್ತಿಲ್ಲ. ಈ ಹಾಡುಗಾರಿಕೆ ಕೇಳುವ ಶ್ರೋತೃ ವರ್ಗವೆಂದರೆ ವಯಸ್ಸಾದವರು, ಗ್ರಾಮೀಣರು, ಅನಕ್ಷರಸ್ಥರು ಇರುತ್ತಾರೆ. ಇವರಲ್ಲಿಯೇ ಹರದೇಶಿ ಪಂಗಡದವರು ಹಾಡಲು ಸಿಕ್ಕರೆ, ನಾಗೇಶಿ ಪಂಗಡವರನ್ನು ಹುಡುಕುವುದೇ ಒಂದು ಸಾಹಸದ ಕೆಲಸ.

ಲಾವಣಿ ಸಂವಹನ ಮಾಧ್ಯಮವಾಗಿ ಬಳಕೆಗೊಳ್ಳುತ್ತಿದೆ

ಕಲೆಗಳು ಆಧುನಿಕತೆಗೆ ಹೊಂದಿಕೊಂಡು ಬೆಳೆಯುವುದು ಅನಿವಾರ್ಯ, ಅವು ಕೂಡ ಬದಲಾವಣೆಯನ್ನು ಬಯಸುತ್ತಿರುತ್ತವೆ. ಹಾಗಾಗಿ ಲಾವಣಿ ಎನ್ನುವ ಪದಕ್ಕೆ ಪರ್ಯಾಯವಾಗಿ ಗೀ ಗೀ ಎನ್ನುವ ಪದ ವ್ಯಾಪಕವಾಗಿ ಹರಡಿದೆ. ಲಾವಣಿಯ ಸ್ಥಾನ ಗೀ ಗೀಯೇ ಆಕ್ರಮಿಸಿಕೊಂಡಿರುವುದರಿಂದ ಇವಕ್ಕೆ ಮೇಳ ಲಾವಣಿಗಳೆಂದು ಕರೆಯದೆ ಜನರು ಗೀ ಗೀ ಹಾಡುಗಾರಿಕೆಯಂದು ಕರೆಯುವುದು ಸಹಜವಾಗಿದೆ. ಏಕೆಂದರೆ ನುಡಿಯು ಪ್ರತಿ ಚರಣದಲ್ಲಿಯೂ ಗೀ ಗೀ ಎಂದು ಸ್ವರಾಲಾಪನೆ ಮಾಡುವುದರಿಂದ. ಇಂದಿಗೂ ಈ ಹಾಡುಗಾರಿಕೆ ಎಷ್ಟೊಂದು ಮಹತ್ವ ಪಡೆದಿದೆ ಎಂದರೆ “ಸ್ವಾತಂತ್ರ್ಯ ಸಂಗ್ರಾಮದಿಂದಿಚ್ಚಿನ ಲಾವಣಿಗಳಲ್ಲಿ ರಾಷ್ಟ್ರೀಯತೆ, ಕಾಂಗ್ರೇಸ್ ಪ್ರಚಾರ, ಕುಟುಂಬ ಯೋಜನೆ ಪಾನ ನಿರೋಧ ಸಾಕ್ಷರತಾ ಆಂದೋಲನ ಜನ ಜಾಗೃತಿಯಂತಹ ಸಮಕಾಲೀನ ವಿಷಯಗಳ ಕುರಿತು ಹಾಡುಗಳು ರಚನೆಗೊಂಡವು’’[10] ಭಾರತ ದೇಶ ಹಳ್ಳಿಗಳಿಂದ ಕೂಡಿದ್ದು ಗ್ರಾಮ ಉದ್ಧಾರವಾಗದ ಹೊರತು ದೇಶ ಉದ್ಧಾರವಾಗದು. ಹಾಗಾಗಿ ಸರಕಾರದ ಯೋಜನೆಗಳನ್ನು ಗ್ರಾಮಗಳಿಗೆ ಮುಟ್ಟಿಸುವ ಕೆಲಸ ಈ ಗೀ ಗೀ ಮಾಡುತ್ತಿದೆ.

ಸರಕಾರ ಹಲವಾರು ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಆ ಯೋಜನೆಗಳು ಗ್ರಾಮಗಳಿಗೆ ತಲುಪಬೇಕು. ಅಂದಾಗ ಮಾತ್ರ ಸರಕಾರದ ಯೋಜನೆಗಳು ಫಲಪ್ರದವಾಗುವುವು. ಆ ನಿಟ್ಟಿನಲ್ಲಿ ಈ ಗೀ ಗೀ ಕಲೆ ಎನ್ನುವುದು ಸರಕಾರಕ್ಕೆ ಸಂವಹನ ಮಾಧ್ಯಮವಾಗಿ ಬಳಕೆಗೊಂಡಿತು. ಅನಿವಾರ್ಯವಾಗಿ ಸರಕಾರದ ಯೋಜನೆಗಳ ಪ್ರಚಾರಕ್ಕಾಗಿ ಈ ಕಲೆ ಬಳಸಿದರು. ಈ ಹಾಡುಗಾರಿಕೆಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದಾಗಿನಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಸರಕಾರದ ಇಲಾಖೆಗಳು ಬಳಸಿಕೊಳ್ಳುತ್ತಿವೆ. ಆದರೆ ಸರಕಾರ ಇವರಿಗೆ ಖಾಯಂ ಆಗಿ ಹಾಡುಗಾರಿಕೆಯ ಕೆಲಸವೇನು ಕೊಡುತ್ತಿಲ್ಲ. ವರ್ಷದಲ್ಲಿ ಒಬ್ಬ ಕಲಾವಿದನಿಗೆ ಒಂದು ಬಾರಿಯ ಹಾಡುವ ಅವಕಾಶ ಸಿಗುತ್ತದೆ. ಸಣ್ಣ ಪುಟ್ಟ ಕಲಾವಿದರಂತೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ.

ಲಾವಣಿ ಹಾಡುಗಾರಿಕೆ ಋತುಮಾನಕ್ಕೆ ತಕ್ಕಂತೆ ಆಚರಣೆಯಲ್ಲಿದೆ. ಚೈತ್ರಮಾಸದಿಂದ ಜೇಷ್ಠಮಾಸದವರೆಗೆ ಆ ನಂತರದಲ್ಲಿ ಹಾಡುಗಾರ ತನ್ನ ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ತಲ್ಲಿನನಾಗಬೇಕು ಕುಟುಂಬದ ನಿರ್ವಹಣೆಗಾಗಿ. ಮನೆ ಕಟ್ಟಡ ಕೆಲಸ, ಚಹದ ಅಂಗಡಿ, ಇಟ್ಟಿರುವುದು, ಟೈಲರಿಂಗ್ ಕೆಲಸ, ಮುಂತಾದವು ಮಾಡುತ್ತಾರೆ. ಸಣ್ಣವರಿರಲಿ ದೊಡ್ಡವರಿರಲಿ ಪಾರಂಪರಿಕವಾದ ಈ ಕಲೆಯಿಂದ ಜನರ ಮನಸ್ಸನ್ನು ಸೂರೊಗೊಳ್ಳುತ್ತಾರೆ. ಹಳ್ಳಿ ಹಳ್ಳಿಗೆ ಇನ್ನೂ ಮೇಳ ಕಟ್ಟಿಕೊಂಡು ಹೋಗುತ್ತಾರೆ. ಸವಾಲ್ ಜವಾಬ್ ಪದಗಳು ಹಾಡುತ್ತಾರೆ. ಈ ಕಲಾವಿದರು ಸರಕಾರ ಬಳಸಿಕೊಳ್ಳುವ ಕೈವಸ್ತ್ರದಲ್ಲಿ ಹರದೇಶಿ ನಾಗೇಶಿ ಮೇಳದಿಂದಲೆ ಜಾತ್ರಾ ಮಹೋತ್ಸವದಲ್ಲಿ ಹಾಡಿ ನೆಮ್ಮದಿ ಪಡೆಯುತ್ತಿರುವುದು ಮಾತ್ರ ನಿಜ ಸಂಗತಿಯಾಗಿದೆ.

ಲಾವಣಿ ಹಾಡುಗಳ ಬಳಕೆ

ಜಾತ್ರೆಗಳೆಂದರೆ ಜನಪದರಿಗೆ ಎಲ್ಲಿಲ್ಲದ ಸಂತೋಷ ಮತ್ತು ಸಂಭ್ರಮಗಳನ್ನು ತಂದುಕೊಡುವ ದಿನಗಳು. ರೈತಾಪಿ ವರ್ಗದವರು ತಮ್ಮ ರಾಶಿಯ ಇಕ್ಕೆಲಗಳೆಲ್ಲವು ಮುಗಿಸಿದ ಮೇಲೆನೆ ಈ ಜಾತ್ರೆಗಳ ಹುಟ್ಟಿನ ಆರಂಭವಾಗುತ್ತದೆ. ಜಾತ್ರೆಗೆ ಏನೇನು ಮನೋರಂಜನೆಯ ವ್ಯವಸ್ಥೆ ಮಾಡಬೇಕು ಎನ್ನುವುದು ಆ ಊರಿನ ಮುಖಂಡರು ನಿರ್ಧರಿಸುತ್ತಾರೆ. ಯಾವುದೇ ರೀತಿಯ ಮನೋರಂಜನೆಗೆ ತಾತ್ಸಾರ ತೋರಿಸಿದರೂ, ಗೀ ಗೀ ಹಾಡುಗಾರಿಕೆ ನಡೆಯುವುದು ಮಾತ್ರ ಕಡ್ಡಾಯ. ಅದರಲ್ಲಿನ ಸವಾಲ್ ಜವಾಬ್ ಪದಗಳ ಮೆರಗಲನ್ನು ಕೇಳಲು ಸಾವಿರಾರು ಜನರು ನೆರೆದಿರುತ್ತಾರೆ. ಅದರಲ್ಲಿ ವಾಸ್ತವ ಬದುಕಿನ ಚಿತ್ರಣ ಗಂಡು ಹೆಣ್ಣಿನ ಸಂವಾದವಿರುತ್ತದೆ. ಅಲ್ಲದೆ ಭೌತಿಕ ವಸ್ತುಗಳನ್ನಿಟ್ಟುಕೊಂಡು ನಡೆಸುವ ಸಂಘರ್ಷ ಮಾರ್ಮಿಕವಾಗಿರುತ್ತದೆ.

ಲಾವಣಿ – ಗೀ ಗೀ ಹಾಡುಗಾರಿಕೆಯು ಹಿಂದೂ ದೇವರ ಜಾತ್ರೆಗಳಲ್ಲಿ ಮುಸ್ಲಿಂ ದೇವರ ಉರ್ಸುಗಳಲ್ಲಿ ನಡೆಯುತ್ತವೆ. ಜಾತ್ರೆಯ ರಥೋತ್ಸವ, ಉರ್ಸಿನ ಗಂಧ – ದೀಪಮುಗಿದ ಮೇಲೆ ಸಹಜವಾಗಿ ಕತ್ತಲೆ ಆವರಿಸಿಕೊಳ್ಳುತ್ತದೆ. ಭಕ್ತಿಯೇ ಪ್ರಧಾನವಾಗಿಟ್ಟುಕೊಂಡು ಉತ್ಸವ ನೋಡಲು ಬಂದಂತಹ ಜನಸಮೂಹ ಮರಳಿ ತಮ್ಮೂರಿಗೆ ಹೋಗದಾಗದೆನೆ, ಜಾತ್ರೆಗಾಗಿ ನಡೆಸುವ ನಾಟಕವೋ, ಲಾವಣಿ ಹಾಡುಗಾರಿಕೆಯೋ ಕೇಳಿ ನೋಡಿ, ಸಂತೋಷಪಟ್ಟು, ಆ ರಾತ್ರಿ ದೇವರ ಘೌಳಿಯಲ್ಲಿಯೇ ಕಳೆಯುತ್ತಾರೆ. ಚರಿತ್ರೆಯ, ಭಕ್ತಿಯ ಅನುಭಾವದ ಹಾಡುಗಳನ್ನು ಕೇಳುವುದರ ಮೂಲಕ ಅವರ ಭಕ್ತಿ ಇಮ್ಮಡಿಯಾಗುತ್ತದೆ. ಹಾಗಾಗಿ ಲಾವಣಿ ಗೀ ಗೀ ಹಾಡುಗಾರಿಕೆ ಜಾತ್ರೋತ್ಸವಗಳ ರಾತ್ರಿಯ ಜಾಗರಣೆಯ ಸಂದರ್ಭಗಳಲ್ಲಿ ಹೆಚ್ಚಾಗಿ ಬಳಕೆಗೊಳ್ಳುತ್ತವೆ.

ಜಾತ್ರೆಗಳೆಂದರೆ ಕ್ಷಣದಲ್ಲಿಯೇ ಮುಗಿದು ಹೋಗುವ ಕ್ರಿಯೆ ಅಲ್ಲ. ಕನಿಷ್ಟ ಮೂರು ದಿವಸಗಳಿಂದ ಮುಂದೆ ಎಷ್ಟು ದಿವಗಳವರೆಗಾದರೂ, ನಡೆಯಬಹುದು. ಆದರೆ ಜಾತ್ರೆಯ ಭರ್ಜರಿ ಇರುವವರೆಗೂ ಗೀ ಗೀ ಹಾಡುಗಾರಿಕೆ ಹಗಲು ರಾತ್ರಿ ಸತತವಾಗಿ ನಡೆಯುತ್ತದೆ. ಹತ್ತಾರು ದಿನಗಳವರೆಗೆ ನಡೆಯುವ ಹಾಡುಗಾರಿಕೆ ಒಂದೆರಡು ಮೇಳಗಳಿಂದ ಕೊಡಲು ಸಾಧ್ಯವಿಲ್ಲ. ಹಾಗಾಗಿ ಹತ್ತಾರು ಮೇಳಗಳು ಅಲ್ಲಿ ಸ್ಪರ್ಧೆಗಾಗಿ ನೆರೆದಿರುತ್ತವೆ. ಅಷ್ಟೊಂದು ಮೇಳಗಲಿದ್ದಾಗ, ಒಂದೇ ದಾಟಿಯ, ಒಂದೇ ಲಯದ, ಒಂದೇ ವಿಷಯದ ಹಾಡು ಯಾರೂ ಹಾಡಲಾರರು. ಇಂತಹ ಗುಂಪಿನಲ್ಲಿಯೇ ತಮ್ಮ ಪಾಂಡಿತ್ಯ, ಪ್ರತಿಷ್ಠೆಯು ನೆರೆದ ಜನರ ಮುಂತೆ ತೋರ್ಪಡಿಸಬೇಕೆಂಬ ಇರ್ಷೆ, ಹಾಡುಗಾರರದಾಗಿರುತ್ತದೆ. ತನಗೆ ಬರುವಂತಹ ವೈವಿಧ್ಯಮಯವಾದ ಕಲಾ ನೈಪುಣ್ಯತೆಯ ಪ್ರದರ್ಶನ ಮಾಡುತ್ತಾನೆ. ಅಂತಹ ಏರುಜವ್ವನೆಯ ಲಾವಣಿಹಾಡಿನಲ್ಲಿಯ ಒಂದು ಸಂದರ್ಭವೆ ಸವಾಲ್ ಜವಾಬ್‌ನದಾಗಿದೆ. ಅದರಲ್ಲಿ ಬರುವ ಗಂಡು ಹೆಣ್ಣಿನ ಕಚ್ಚಾಟ ಹೇಳತೀರದಷ್ಟು ವಿಕೋಪಕ್ಕೆ ಹೋಗಿರುತ್ತದೆ

ತಾಲ್ಲೂಕು ಹಾಗೂ ಜಿಲ್ಲೆಗೆ ಒಂದರಂತೆ ಪ್ರಮುಖವಾದ ದೇವರ ಜಾತ್ರೆ, ದೊಡ್ಡ ಪ್ರಮಾಣದಲ್ಲಿ ತಿಂಗಳವರೆಗೂ ನಡೆಯುತ್ತದೆ.[11] ಇಂತಹ ಜಾತ್ರೆ ಮುಗಿದ ನಂತರವೆ ಗ್ರಾಮೀಣ ಪ್ರದೇಶದ ಸಣ್ಣ ಪುಟ್ಟ ಜಾತ್ರೆಗಳು ನಡೆಯುತ್ತವೆ. ಹತ್ತಾರು ಮೇಳಗಳ ಪ್ರದರ್ಶನ ಕಂಡ ಗ್ರಾಮೀಣರು. ಒಳ್ಳೆಯ ಸ್ಪರ್ಧಿ ಎನಿಸುವ ಎರಡು ಮೇಳಗಳನ್ನು ಹರದೇಶಿ ನಾಗೇಶಿಯರನ್ನು ತಮ್ಮೂರ ಜಾತ್ರೆಗೆ ಕರೆಸಿಕೊಳ್ಳುತ್ತಾರೆ. ನಮ್ಮ ಊಹಿಗೆ ಎಡೆ ಮಾಡಿಕೊಡುವ ಒಂದು ವಿಚಾರವೆಂದರೆ ತಾಲ್ಲೂಕು ಮತ್ತು ಜಿಲ್ಲೆಗೆ ಒಂದರಂತೆ ನಡೆಯುವ ದೊಡ್ಡ ಜಾತ್ರೆಯನ್ನು ಗೀ ಗೀ ಮೇಳಗಳ ಆಯ್ಕೆಯ ವಿಧಾನವೆಂದು ಗುರುತಿಸಲಾಗುವುದು.

ಲಾವಣಿ ಗೀ ಗೀ ಹಾಡುಗಾರಿಕೆಯ ವಾದ್ಯಪರಿಕರಗಳು

ಒಂಟಿ ಲಾವಣಿ ಹಾಡುಗಾರಿಕೆಯಲ್ಲಿ ಒಬ್ಬನೆ ಹಾಡುಗಾರನಿರುತ್ತಾನೆ. ಎಡಗೈಯಲ್ಲಿ ಚಿಟಿಕೆ ತಾಳ, ಬಲಗೈಯಲ್ಲಿ ಡಪ್ಪು ಹಿಡಿದಿರುತ್ತಾನೆ. ಆದರೆ ಮೇಳ ಲಾವಣಿ ಅಥವಾ ಗೀ ಗೀ ಹಾಡಿನ ಮೇಳಗಳಲ್ಲಿ ಸಾಮಾನ್ಯವಾಗಿ ಮೂರು ಜನರಿರುತ್ತಾರೆ. ಇಲ್ಲಿ ಬಳಕೆಗೊಂಡಿರುವ ಹಾಡುಗಳ ಕುರಿತಾಗಿ, ಕ್ಷೇತ್ರಕಾರ್ಯದ ಹಿನ್ನೆಲೆಯಲ್ಲಿ ಪ್ರತಿಯೊಂದು ಹಾಡಿನ ಕೊನೆಯ ಸಾಲಿನಲ್ಲಿ ಗೀ ಗೀ ಎಂದು ಉಚ್ಚರಿಸುವುದರಿಂದ ನಾನೂ ಗೀ ಗೀ ಹಾಡಿನ (ಮೇಳ ಲಾವಣಿ) ವಿವರಣೆ ಮಾತ್ರ ಕೊಡಬಯಸಿದ್ದೇನೆ.

ಗೀ ಗೀ ಹಾಡುಗಾರಿಕೆಯ ಮೇಳದ ಮೂರು ಜನರ ಕೈಯಲ್ಲಿ ಒಂದೊಂದು ವಾದ್ಯಪರಿಕರಗಳಿರುತ್ತವೆ. ಮೊದಲನೆಯದಾಗಿ ಪ್ರಮುಖ ಹಾಡುಗಾರನ ಕೈಯಲ್ಲಿ ಡಪ್ಪು. ಎರಡನೆಯವನ ಕೈಯಲ್ಲಿ, ತುಂತುನಿ, ಮೂರನೆಯವನ ಕೈಯಲ್ಲಿ ತಾಳ ಇರುತ್ತವೆ.[12] ಇಲ್ಲಿ ಹೇಳಿದ ಮೂರು ಪರಿಕರಗಳಲ್ಲಿ, ಯಾವುದೇ ಒಂದು ಪರಿಕರ ಇಲ್ಲ ಎಂದರೂ ಹಾಡುಗಾರಿಕೆ ನಡೆಯುವುದಿಲ್ಲ. ನಡೆದರೂ ಅದು ಪರಿಪೂರ್ಣ ಎನಿಸಿಕೊಳ್ಳುವುದಿಲ್ಲ. ಹಾಡುಗಾರಿಕೆಯ ಸಂದರ್ಭದಲ್ಲಿ ಈ ವಾದ್ಯಪರಿಕರಗಳು ಅಷ್ಟೊಂದು ಪ್ರಮುಖ ಪಾತ್ರ ವಹಿಸುತ್ತವೆ.

ಹಾಡುಗಾರರು ಈ ವಾದ್ಯಪರಿಕರಗಳಿಗೆ ಪೂಜ್ಯನೀಯ ಭಾವನೆಯಿಂದ ನೋಡಿಕೊಳ್ಳುತ್ತಾರೆ. ವಾದ್ಯ ತಯಾರಿಕೆಯಲ್ಲಿ ಡಪ್ಪು ಮತ್ತು ತುಂತುನಿಗೆ ಸಂಬಂಧಿಸಿದಂತೆ ಅವುಗಳಿಗೆ ಬಿಗಿಯುವ ಚರ್ಮ ಸತ್ತ ಪ್ರಾಣಿಯದಲ್ಲ. ವಾದ್ಯಪರಿಕರಗಳನ್ನು ತಯಾರಿಸಲು ಉದ್ದೇಶ ಪೂರ್ವಕವಾಗಿ ಜೀವಂತ ಪ್ರಾಣಿಯನ್ನು ಖರೀದಿಸಿ ಅದನ್ನು ಕುಯ್ದು ಅದರ ಚರ್ಮದಿಂದ ವಾದ್ಯ ಪರಿಕರಗಳನ್ನು ತಯಾರಿಸುವ ಪದ್ಧತಿ ಇದೆ. ಹಾಗಾಗಿ ಡಪ್ಪು ಕಲಾವಿದರ ಜೊತೆಗಿರುವ ಜೀವಂತಿಕೆಯನ್ನು ಪ್ರತಿನಿಧಿಸುತ್ತದೆ. ಪ್ರಾಣಿ ಬಲಿ ಎನ್ನುವುದು ಪಾಪ ಕೃತ್ಯವಲ್ಲವೆ? ಎಂದು ಪ್ರಶ್ನಿಸಿದಾಗ, ಈಹಾಡುಗಾರಿಕೆ ನಡೆಯುವುದು ದೇವರ ಘೌಳಿಯಲ್ಲಿ, ಗುಡಿಯ ಪರಾಂಗಣದಲ್ಲಿ, ದೇವ ದೇವತೆಗಳ ಚರಿತ್ರೆಯನ್ನು ನುಡಿಯುವುದಕ್ಕಾಗಿ ಎಂಬ ಕಾರಣ ಕೊಡುತ್ತಾರೆ. ಆರಾಧನೆಯ ಒಂದು ರೂಪವು ಕೂಡ ‘ಸಖಿ’ ಎಂಬ ಸ್ತೋತ್ರದ ಹಾಡು ಹೇಳುವುದು ಕಡ್ಡಾಯ. ಹಾಗಾಗಿ ಸತ್ತ ಪ್ರಾಣಿಯ ಚರ್ಮ ನಿಷಿದ್ಧವಾಗಿದೆ ಮತ್ತು ಅಪವಿತ್ರತೆಯನ್ನು ಸೂಚಿಸುತ್ತದೆ ಎಂಬ ದೇವರ ಮೇಲಿನ ಅವರ ಮುಗ್ಧ ಭಕ್ತಿ ತೋರ್ಪಡಿಸುತ್ತಾರೆ. ಈ ವಾದ್ಯಪರಿಕರಗಳ ತಯಾರಿಕೆಯಲ್ಲಿ ಹಲವಾರುಸಮುದಾಯಗಳ ಪಾತ್ರವು ಇದೆ ಎನ್ನುವುದು ಮರೆಯುವಂತಿಲ್ಲ.

ಈ ವಾದ್ಯಪರಿಕರಗಳ ನಾದದ ಶೃತಿಯು ಹಾಡು ಆರಂಭವಾಗುವುದಕ್ಕಿಂತ ಮುಂಚೆ, ನುಡಿಯ ಸೊಲ್ಲನ್ನು ಎತ್ತುವುದಕ್ಕಿಂತ ಮುಂಚೆ, ಕಲಾವಿದರು ಐದು, ಹತ್ತು ನಿಮಿಷಗಳ ಕಾಲ ಸತತವಾಗಿ ಶೃತಿಯನ್ನು ಹಿಡಿಸುತ್ತಾರೆ. ಇದರ ನಾದದ ವೈಖರಿ ಬಾಯ್ಮಾತಿನಿಂದ ಹೇಳಲು ಅಸಾಧ್ಯ. ಈ ಜನಪದ ಸಂಗೀತ ಕೇಳಿಯೆ ಮನದಣಿಯಬೇಕು. ಇದರಲ್ಲಿರುವ ವೈವಿಧ್ಯಮಯವಾದ ಬಾರಿಸುವಿಕೆಯನ್ನು, ಬೆರಳಿನ ತರಂಗಿತ ಪಟ್ಟು, ಡಪ್ಪಿನ ಮೇಲಿನ ಧ್ವನಿ, ಮನುಷ್ಯನ ಮನಸ್ಸನ್ನು ಹಿಡಿದಿಡುತ್ತದೆ. ವಾದ್ಯ ಬಾರಿಸುವಿಕೆಯ ವಿಧಾನಲ್ಲಿಯೇ. ಯಾವ ಹಾಡು ಆರಂಭ ಮಾಡಬಹುದೆನ್ನುವುದನ್ನು ಹಾಡು ಕೇಳುವುದರಲ್ಲಿ ನಿಷ್ಣಾತರಾದವರು ಗುರುತಿಸುತ್ತಾರೆ. ಸವಾಲ್ ಜವಾಬ್ ಎಂದು ಹಾಡುಗಾರಿಕೆಯಲ್ಲಿ ತೋರ್ಪಡಿಸುವುದಲ್ಲದೆ, ನುಡಿಸುವ ವಾದ್ಯಪರಿಕರಗಳ ಜೋರಿನಿಂದಲೂ ಸವಾಲ್ ಜವಾಬ್ ನಡೆದಿದೆ ಎಂದು ಗೊತ್ತುಪಡಿಸಿಕೊಳ್ಳಬಹುದು. ಇವುಗಳ ಪ್ರಬಾವವು ಅಷ್ಟೊಂದು ಪರಿಣಾಮಕಾರಿಯಾಗಿರುತ್ತದೆ.

ಗೀಗೀಹಾಡಿನಸಾಮಾನ್ಯಸ್ವರೂಪ

ಸಖಿ

ಜನಪದ ಕಲೆಗಳಿಗೆ ಹವ್ಯಾಸ ಮತ್ತು ದೈವಾರಾಧನೆ ಇವೆರಡು ಮೂಲ ಪ್ರೇರಣೆಗಳು. ಈ ಗೀ ಗೀ ಹಾಡಿನ ಕಲೆ ಹವ್ಯಾಸವಾಗಿದ್ದರೂ, ಜನಪದರು ದೈವ ದೇವರುಗಳಿಲ್ಲದೆ, ತಮ್ಮ ಕೆಲಸ ಸುಗಮವಾಗಿ ಸಾಗದು, ತಮ್ಮ ನಡುವೆ ಯಾವ ವಿಘ್ನಗಳು ಬರಬಾರದೆಂದು ತಮಗೆ ಬರುವ ಹಾಡು, ಲಯ, ಧಾಟಿಗಲುದೈವದತ್ತವಾದವೆಂದು ನಂಬಿಕೊಂಡು ತಾನಾರಿಗೂ ಸೋಲರಿಯಬಾರದೆಂದು, ಹಾಡುಗಾರಿಕೆಯ ಮೊದಲಿನ ಪದವನ್ನು ದೇವರಿಗೆ ಅರ್ಪಿಸತೊಡಗಿದ, ಅದಕ್ಕಾಗಿಯೇ ಇಲ್ಲಿಯ ಸಖಿ ರೂಪದ ಪದಗಳು ಸ್ತೋತ್ರ ರೂಪದ ಪದಗಳಾದವು ಎನಿಸುತ್ತದೆ. ಈ ಪದಗಳಲ್ಲಿ ಸ್ತೋತ್ರ ಬಿಟ್ಟರೆ ಬೇರೆನು ಸಿಗದು. ಪದ ಕೂಡ ಎರಡು ಮೂರು ಚರಣದ್ದಾಗಿರುತ್ತದೆ. ನಾಗೇಶಿ ಪಕ್ಷದವರಿದ್ದರೆ ; ಶಾರದೆ, ಸರಸ್ವತಿ, ಪಾರ್ವತಿ, ಹೀಗೆ ಹೆಣ್ಣು ದೇವತೆಯ ಕುರಿತು ಸ್ತುತಿಸುತ್ತಾರೆ. ಹರದೇಶಿ ಪಕ್ಕದವರಿದ್ದರೆ ಗಣಪತಿ, ವಿಷ್ಣು, ಶಿವ ಹೀಗೆ ದೇವರನ್ನು ನೆನೆದು ಮುಂದಿನ ಹಾಡಿಗೆ ಚಾಲನೆ ಕೊಡುತ್ತಾರೆ.

ಈ ಗೀ ಗೀ ಹಾಡುಗಾರಿಕೆಯಲ್ಲಿ ನಡೆಯುವ ಕಚ್ಚಾಟವೆಂದರೆ ಸವಾಲ್ ಜವಾಬ್ ಮತ್ತು ವಾದದ ಹಾಡುಗಳಲ್ಲಿ ಮಾತ್ರ. ಅವು ಒಂದರಂತೆ ಇನ್ನೊಂದು ಹೆಣೆಯಲ್ಪಟ್ಟಿರುತ್ತವೆ. ಹಾಡುವ ಸಂದರ್ಭದಲ್ಲಿ ನನ್ನ ಧಾಟಿಯನ್ನೇ ಅನುಸರಿಸಿದ್ದಾನೆ ಎನ್ನುವ ಆರೋಪಗಳು ಹಾಡುಗಾರರ, ಕವಿಗಳ ಮೇಲೆ ಸಹಜವಾಗಿ ಬರುತ್ತವೆ. ಕ್ಷೇತ್ರ ಕಾರ್ಯದಲ್ಲಿಯ ನನ್ನ ಅನುಭವದ ಪ್ರಕಾರ ಸವಾಲ್ ಜವಾಬ್ ಹಾಡುಗಳು ಒಬ್ಬನೆ ಕವಿ ರಚನೆ ಮಾಡಿದ್ದರೆ ಅಷ್ಟೊಂದು ಶಾಬ್ದಿಕ ಅರ್ಥ ಬರುವುದಿಲ್ಲ. ಪ್ರತಿಸ್ಪರ್ಧಿಗಳಿದ್ದರೆ ಹಾಡುಗಾರಿಕೆಯ ಸ್ವಾರಸ್ಯವೆ ಬೇರೆಯಾಗಿರುತ್ತದೆ. ಕೇಳುಗರಿಗೆ ರೋಮಾಂಚನೆ ಹುಟ್ಟಿಸುತ್ತವೆ. ಕಲಬುರ್ಗಿ ಜಿಲ್ಲೆಯಲ್ಲಿ ಸಾವಳಗಿ ಮಹ್ಮದಸಾಬ ಒಬ್ಬನೆ ಹರದೇಶಿ ನಾಗೇಶಿ ಹಾಡುಗಳ ರಚನಾಕಾರ. ಎರಡು ಪಕ್ಷಗಳ ಹೊಳಹನ್ನು ತಿಳಿದಂತಹ ಪ್ರತಿಭಾವಂತ ಕವಿ. ಉದಾಹರಣೆಗಾಗಿ ಆ ಕವಿಯ ಹಾಡುಗಳನ್ನೆ ಸವಾಲ್ ಜವಾಬ್‌ಗಳಿಗೆ ಬಳಸಿಕೊಂಡಿದ್ದೇನೆ. ಅಲ್ಲದೆ ಇನ್ನುಳಿದ ಕವಿಗಳು ಹಾಕಿದ ಸವಾಲಿಗೆ ಜವಾಬ್ ಕೊಟ್ಟಿದ್ದು, ಮಹ್ಮದಸಾಬನೆ ಸವಾಲ್ ಮಾಡಿದಂತಹ ಹಾಡುಗಳಿಗೆಬೇರೆಯವರು ಜವಾಬ್ ಕೊಟ್ಟಿದ್ದು ವಿಶೇಷವಾಗಿ ಈ ಸಂಗ್ರಹದಲ್ಲಿ ಕಾಣಸಿಕೊಳ್ಳುತ್ತವೆ.

ಇಲ್ಲಿಯ ಸವಾಲ್ ಜವಾಬ್ ಪದಗಳಲ್ಲಿ ಗ್ರಾಮೀಣ ಬದುಕಿನ ಆಶೋತ್ತರಗಳಿವೆ. ವಾದದ ಮಂಡನೆ ಇದೆ. ಪ್ರಕೃತಿ ಪುರುಷರ ಹೆಚ್ಚುಗಾರಿಕೆ ಇದೆ. ನೀತಿಸಾರುವ ಅಧ್ಯಾತ್ಮವನ್ನು ಬೋಧಿಸುವ, ಶೃಂಗಾರಾತ್ಮಕ ಮತ್ತು ಮನೋರಂಜನೆಯನ್ನು ಪ್ರತಿಪಾದಿಸುವ ಉದ್ದೇಶವನ್ನು ಹೊತ್ತುಕಂಡವುಗಳಾಗಿವೆ. ಜನಪದ ಕಥೆಗಳಲ್ಲಿ ಕಂಡು ಬರುವ ಕ್ರಿಯೆ, ಪಾತ್ರ, ವಸ್ತು ಸಂವಿಧಾನದಲ್ಲಿಯ ಸುಸಂಬದ್ಧತೆ ಸವಾಲ್ ಜವಾಬ್ ಪದಗಳಲ್ಲಿ ಮುಖ್ಯವಾಗಿ ಕಾಣುತ್ತೇವೆ. ಈ ಹಾಡಿನಲ್ಲಿಯ ಇನ್ನೊಂದು ಗುಣ, ಏನೆಂದರೆ ಗದ್ಯವನ್ನು ಪದ್ಯವನ್ನಾಗಿಸುವ ಪದ್ಯವನ್ನು ಗದ್ಯವನ್ನಾಗಿಸುವ ಸರಳತೆ ಇದೆ. ಗೀ ಗೀ ಸಾಹಿತ್ಯದ ಬಹುಪಾಲು ಹಾಡುಗಳು ಕಥೆಯ ಅಂಶಕ್ಕೆ ಪ್ರಧಾನ್ಯತೆ ಕೊಡುತ್ತವೆ. ಅಂತಹವುಗಳೆಂದರೆ ಸಕ್ರಿ ಉಂಡಿಯಂಥ ಹೆಣ್ಣು ಲಿಂಗವಂತ ಪುರುಷ. ತಲವಾರ ವರಿ ಎನ್ನುವ ವಿಷಯವನ್ನಿಟ್ಟುಕೊಂಡು ಹೆಚ್ಚೆಂದು ವಾದ ಮಾಡುವುದು, ಸುದೀರ್ಘವಾದ ವಿಷಯವನ್ನು ಹೇಳಿಕೊಂಡು ಹೋಗುವುದರಿಂದ ಇದರಲ್ಲಿ ಒಂದು ಕಥೆ ಇದೆ ಎಂದು ಗೊತ್ತಾಗುತ್ತದೆ.

ಮುಖ್ಯ ಪದಗಳು

ಅನಕ್ಷರಸ್ಥರ ಮಧ್ಯದಿಂದ ಮೌಖಿಕ ಪರಂಪರೆಯಲ್ಲಿ ಮತ್ತು ಲಿಖಿತ ರೂಪದಲ್ಲಿ ಉಳಿದುಕೊಂಡು ಬಂದ ಹಾಡುಗಳ ಸಂಗ್ರಹದ, ಸಂಶೋಧನೆಯ ಅಧ್ಯಯನಗಳು ಆರಂಭವಾದಾಗ ಈ ಹಾಡುಗಳ ಮಹತ್ವ ಗೊತ್ತಾಗಿದ್ದು. ಈ ಹಾಡುಗಳಿಗೆ ಒಬ್ಬ ಮೂಲ ಕತೃ ಇದ್ದೆ ಇರುತ್ತಾನೆಂದು ತಿಳಿದಿದ್ದು. ಈ ಹಾಡುಗಳ ರಚನೆಯ ಕವಿ ಹಾಡಿನ ಕೊನೆಯ ನುಡಿಯಲ್ಲಿ ತನ್ನ ಇಷ್ಟದೈವದ ಹೆಸರು, ತನ್ನೂರಿನ ಹೆಸರು, ತನ್ನ ಹೆಸರು ನಮೂದಿಸದೆ ಬಿಡುವುದಿಲ್ಲ. ಈ ಹಾಡುಗಾರಿಕೆಯಲ್ಲಿ ಕೊನೆಯ ನುಡಿ ಒಂದನ್ನು ಬಿಟ್ಟು ಹಾಡಿದರೆ ಯಾವ ಹಾಡುಗಾರ ಆ ಪದ್ಯವನ್ನು ಹಾಡುತ್ತಾನೋ ಆತನ ರಚನೆಯ ಪದ್ಯವೆ ಅದಾಗುತ್ತದೆ. ಕೃತಿ ಚೌರ್ಯದಂತಹ ಕೆಲಸ ಜನಪದರಲ್ಲಿ ಅಷ್ಟೊಂದು ಸುಲಭದ್ರವಲ್ಲ. ಕೇಳುಗರು ಕೂಡ ಈ ಹಾಡು, ಇದೆ ಕವಿಯ ರಚನೆಯಿರಬೇಕೆಂದು ಹಾಡಿನ ಶೈಲಿಯ ಮೇಲೆ ಗುರುತಿಸುವಷ್ಟು ಚಾಣಾಕ್ಷರಿರುತ್ತಾರೆ. ಕವಿಗಳ ಶಿಷ್ಯಂದಿರು ಕೂಡ ತಮ್ಮ ಗುರುವಿನ ಪದ್ಯ ಹಾಡಿ ಗುರು ನಾಮಾಂಕಿತವನ್ನು ಬಳಸದೆ ಇದ್ದವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಸಭೆಯಲ್ಲಿಯೇ ಮರ್ಯಾದೆ ಕಳೆಯುತ್ತಾರೆ. ಹಾಡುಗಾರಿಕೆಯೆನ್ನುವುದು ಮುಕ್ತ. ಒಬ್ಬ ಕವಿಯ ಹಾಡು ಯಾರಾದರೂ ಹಾಡಬಹುದು ಅವರದೇ ಅಂಕಿತ ಉಳಿಸಿಕೊಳ್ಳಬೇಕೆಂಬ ನಿಯತ್ತು ಹಾಡುಗಾರರಿಗಿದೆ. ಅಂದಾಗಲೆ ಡಾ. ಎಂ.ಎಸ್. ಲಠ್ಠೆಯವರಂತಹ ವಿದ್ವಾಂಸರು ‘ಜನಪದ ಕವಿ ಚರಿತೆ’ ಯಂತಹ ಕೃತಿ ರಚಿಸಲು ಸಾಧ್ಯವಾದುದು.

ಜನಪದ ಹಾಡುಗಳ ದಾಖಲಾತಿ, ಸಂಪಾದನೆ, ಸಂಗ್ರಹಣೆ ಬಹು ಮುಖ್ಯವೆಂದೆನಿಸುತ್ತದೆ. ಇಲ್ಲದೆ ಹೋದಲ್ಲಿ ಅವು ನಶಿಸಿ ಹೋಗುವುದರಲ್ಲಿ ಸಂಶಯವಿಲ್ಲ. ಒಬ್ಬ ಹಾಡುಗಾರ ಇನ್ನೊಬ್ಬ ಹಾಡುಗಾರನಿಗೆ ಸವಾಲ್ ಹಾಕಿದಾಗ ಅವನಿಗೆ ಆ ಜವಾಬ ಕೊಡಲು ಬರುತ್ತಿದ್ದರೆ ಮೇಳದಲ್ಲಿ ಯಾವುದೆ ಸಮಸ್ಯೆ ಇಲ್ಲ. ಇಲ್ಲದಿದ್ದರೆ ಎದುರಾಳಿ ಹಾಕಿದ ಸವಾಲನ್ನು ಬಿಡಿಸಲು ಬೇರೆ ಬೇರೆ ಕವಿಗಳ ಅಥವಾ ಕಲಿಸಿದ ಗುರುವಿನ ಹತ್ತಿರ ಹೋಗಬೇಕಾಗುತ್ತದೆ. ಇದರ ನಿಯಮಗಳನ್ನೆ ಪ್ರತ್ಯೇಕವಾಗಿ ಹೇಳಲಾಗಿದೆ.

ಕವಿ ಅಥವಾ ಹಾಡುಗಾರನಿಗೆ ವಿಷಯ ಪ್ರಸ್ತಾಪಿಸುವುದು ಮುಖ್ಯವಾಗುತ್ತದೆ ಹೊರತು ಸಂಗೀತವಲ್ಲ. ಹಾಗಾಗಿ ಕೇಳುಗುರ ಮುಖ್ಯ ಹಾಡಿನ ಕಥೆಯ ಕಡೆಗೆ ಹೆಚ್ಚಿನ ಗಮನವನ್ನು ಹರಿಸುತ್ತಾರೆ. ಹಾಡಿನ ಒಂದು ಬೈಠಕ್ ಮುಗಿಯಬೇಕಾದರೆ ಒಂದು ಗಂಟೆ ಸಮಯಬೇಕು. ಅಷ್ಟೊತ್ತಿವರೆಗೂ ಪ್ರೇಕ್ಷಕರನ್ನು ಒಂದೇ ಸ್ಥಳದಲ್ಲಿ, ಒಂದೇ ಮನಸ್ಥಿತಿಯಲ್ಲಿ ಹಿಡಿದಿಡಲು ಸಾಧ್ಯವಾಗದು. ಹಾಡುಗಾರಿಕೆ ನಡೆಯುವುದು ಬಯಲಿನಲ್ಲಿ. ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಅದಕ್ಕಾಗಿಯೇ ಒಂದೇ ಹಾಡಿನಲ್ಲಿ ವೈವಿಧ್ಯಮಯವಾದ ಧಾಟಿಗಳನ್ನು ಜೋಡಿಸಿರುತ್ತಾರೆ. ಪ್ರತಿಯಂದು ಹಾಡಿಗೂ ಪಲ್ಲ ಇರುತ್ತದೆ. ನಂತರ ನುಡಿ, ಚಾಲ, ಇಳುವ, ಏರ, ಕೂಡ ಪಲ್ಲ, ದುಡಕಿ ಶ್ಲೋಕ ಮತ್ತು ಮಿಲಾಪ. ಇವೆಲ್ಲವೂ ಒಂದು ಚೌಕ ಮುಗಿಯುವುದರೊಳಗಾಗಿ ಬಂದು ಹೋಗಬೇಕು.ಹಾಡಿನ ಪ್ರತಿಯೊಂದು ಚೌಕಕ್ಕೂ ಇಷ್ಟೊಂದು ಪ್ರಕಾರದ ಲಯ, ಗತಿಗಳು, ತಾಳ ಮಿತಿಗಳು ಅಳವಡಿಸಿಕೊಳ್ಳುವುದು ಅನಿವಾರ್ಯ. ಹಾಡು ಹೇಳುವ ಕಲಾವಿದರೂ ಈ ರೀತಿಯಾದ ಕ್ರಮವನ್ನು ಅನುಸರಿಸಬೇಕು. ಅಂದಾಗಲೆ ಅದೊಂದು ಲಾವಣಿ ಗೀ ಗೀ ಸಂಪ್ರದಾಯದ ಹಾಡು ಎಂದು ಪರಿಗಣಿಸಲಾಗುತ್ತದೆ.

ಪಲ್ಲ

ಲಾವಣಿ : ಗೀ ಗೀ ಪದಗಳಲ್ಲಿ ಮೂರು ಭಾಗಗಳಿರುತ್ತವೆ. ಒಂದು : ಸಖಿ; ಎರಡು: ಪದ್ಯ; ಮೂರು : ಖ್ಯಾಲಿ. ಇವೆಲ್ಲದಕ್ಕೂ ಪಲ್ಲ ಇದ್ದೇ ಇರುತ್ತದೆ. ಈ ಮೂರು ಪ್ರಕಾರದ ಹಾಡಿನ ಮುಖ್ಯ ವಿಷಯವನ್ನೊಳಗೊಂಡ ಎರಡು ಸಾಲುಗಳ ನುಡಿಗಳು ಇರುತ್ತವೆ. ಆ ನುಡಿಗಳನ್ನೇ ಪಲ್ಲ, ಪಲ್ಲವಿ ಎಂದು ಕರೆಯಲಾಗುತ್ತದೆ. ಇದು ಇಡೀ ಹಾಡಿನ ಸತ್ವಸಾರವನ್ನೊಳಗೊಂಡಿರುತ್ತದೆ. ಪದ್ಯದಲ್ಲಿರಬೇಕಾದ ಮುಖ್ಯ ಅಂಗ ಇದು. ಪದದ ಅರ್ಥ ಪಲ್ಲವಿಯಲ್ಲಿ ಎಂಬ ಮಾತು ಎದ್ದು ಕಾಣುತ್ತಿರುತ್ತದೆ. ಹಾಡಿನ ವಿಷಯ ಎಷ್ಟೆ ವಿಷಯಾಂತರವಾದರೂ, ಪಲ್ಲದ ಪುನರಾವರ್ತನೆಯಾಗುವಾಗ ಹಾಡಿನ ನಿರಂತರತೆಯ ಅನುಭವ ಕೇಳುಗರಿಗೆ ಮನದಟ್ಟಾಗುತ್ತದೆ. ಪಲ್ಲ ಗೀ ಗೀ ಹಾಡುಗಳಲ್ಲಿ ಸಭಿಕರನ್ನು ಉದ್ದೇಶಿಸಿಯೇ ಇರುತ್ತದೆ. ಎರಡು ಸಾಲುಗಳಲ್ಲಿ, ಕೊನೆಯ ಸಾಲು ಹಾಡಿನಲ್ಲಿ ಹೇಳುವ ಕತೆಗೆ ಸಂಬಂಧಪಟ್ಟದ್ದಾಗಿರುತ್ತದೆ. ಉದಾಹರಣೆಗಾಗಿ ಸವಾಲ್ ಮತ್ತು ಜವಾಬ್‌ಗಳಲ್ಲಿರುವ ಪಲ್ಲಗಳನ್ನೇ ನೋಡಬಹುದು.

ನಾಗೇಶಿ ಸವಾಲ್ ಪದದ ಪಲ್ಲ

ಹಾದಿ ಹಿಡಿದು ಹಾಡು ಹರದಾಸ ಹುಡುಗ ಖಾರಾ ಹಾಕ್ಯಾನಿನ ಕಣ್ಣಾಗ
ಸ್ವರ್ಗ ಮೃತ್ಯು ಪಾತಾಳ ಮೂರೇಳು ಲೋಕ ನಿರ್ಮಾಣಾಗ್ಯಾವ ಮಣ್ಣಾಗ || ಪಲ್ಲ ||

ಹರದೇಶಿ ಜವಾಬ್ ಪದದ ಪಲ್ಲ

ಮಣ್ಣ ಹೆಚ್ಚ ಮಾಡಿ ಪದ ಹಾಡತಿ ಶಾಣಿ ಕೇಳ ಶಾಣ್ಯಾರಿಗ
ಮಣ್ಣಿನ್ಯಾಗ ಎಲ್ಲಾ ಹುಟ್ಯಾದಂತಿ ಮಣ್ಣ ಕರಗಿ ಹೋಯಿತೆ ನೀರಾಗ || ಪಲ್ಲ ||

ಈ ರೀತಿಯಾದ ಎರಡುಸಾಲಿನ ನುಡಿಯ ಪಲ್ಲದಲ್ಲಿ ವಿಷಯ ಮುಖ್ಯವಾಗಿ ಕಾಣುವುದು ಮಣ್ಣು ಮತ್ತು ನೀರು. ಇವೇ ಹಾಡಿನ ಕೇಂದ್ರ ಬಿಂದುಗಳು. ಯಾವುದೇ ವಿಷಯ ಪ್ರಸ್ತಾಪಿಸಿದರೂ ಸುತ್ತಾಡಿ ಮತ್ತೆ ಪಲ್ಲದ ವಿಷಯಕ್ಕೆ ಬರಬೇಕು. ಮೇಲೆ ತಿಳಿಸಿದ ನಾಗೇಶಿಯ ಪಲ್ಲವನ್ನು ಗಮನಿಸುವುದಾದರೆ ‘ಹಾದಿ ಹಿಡಿದು ಹಾಡು ಹರದಾಸ ಹುಡುಗ ಖಾರಾ ಹಾಕ್ಯಾ ನಿನ ಕಣ್ಣಾಗ’ ಎನ್ನುವ ನುಡಿಯೇ ಕವಿಗೆ ಹಾಕುವ ಸವಾಲಿನ ಸೂಚನೆಯಾಗುತ್ತದೆ. ‘ಸ್ವರ್ಗ ಮೃತ್ಯು ಪಾತಾಳ ಮೂರೇಳು ಲಕ ನಿರ್ಮಾಣಾಗ್ಯಾವ ಮಣ್ಣಾಗ’ ಎನ್ನುವ ನುಡಿ ಹಾಡಿನ, ಸವಾಲಿನ ಮುಖ್ಯ ವಿಷಯವಾಗುತ್ತದೆ. ನಾಗೇಶಿ ಹಾಡುಗಾರ್ತಿ ಮಣ್ಣನ್ನು ಆಯ್ಕೆ ಮಾಡಿಕೊಂಡು ಮಣ್ಣೆ ಶ್ರೇಷ್ಠವೆಂದು ಸಾಧಿಸುವುದು ಹಾಡಿನ ಉದ್ದಕ್ಕೂ ನಿರಂತರತೆಯನ್ನು ಕಾಪಾಡಿಕೊಳ್ಳುತ್ತದೆ.

ಹರದೇಶಿಯ ಜವಾಬ್ ನುಡಿಯು ವ್ಯಕ್ತಿಗತವಾಗಿ ಸಾಗದೆ ಸಭಿಕರನ್ನು ಪಲ್ಲದಲ್ಲಿಯೇ ಕ್ರೂಢೀಕರಿಸಿಕೊಳ್ಳುವ ಕ್ರಿಯೆ ಮುಂದುವರೆಯುತ್ತದೆ. ‘ಮಣ್ಣ ಹೆಚ್ಚ ಮಾಡಿ ಪದಾ ಹಾಡತಿ ಶಾಣಿ ಕೇಳೆ ಶ್ಯಾಣ್ಯಾರಿಗ’ ಇಲ್ಲ ಶಾಣಿ ಎನ್ನುವ ಪದ ನಾಗೇಶಿಯನ್ನು ಕುರಿತಾದರೆ ‘ಶ್ಯಾಣ್ಯಾರಿಗೆ’ ಎನ್ನುವ ಪದ ಕುರಿತು ಕೇಳುವ ಸಭಿಕರನ್ನ ಉದ್ದೇಶಿಸಿ ಎಂಬ ಮಾತು ಸ್ಪಷ್ಟವಾಗುತ್ತದೆ. ಮಣ್ಣು ಶ್ರೇಷ್ಠವೆಂಬ ನಾಗೇಶಿಯ ಮಾತಿಗೆ, ಮಣ್ಣಿನ ಮೇಲೆ ನೀರು ಹಾಕಿದಾಗ ಸಹಜವಾಗಿ ಮಣ್ಣು ಕರಗಿ ಹೋಗುತ್ತದೆ. ಹೀಗೆ ಜವಾಬ ಕೊಡುವುದರ ಮೂಲಕ ಮಣ್ಣಿನ ಕನಿಷ್ಠತೆಯನ್ನು ಹೇಳಿ, ಅದರ ಜೊತೆ ನೀರಿನ ಶ್ರೇಷ್ಠತೆಯನ್ನು ಸಾಧಿಸುವ ಗುರುತರವಾದ ಕೆಲಸ ಇಲ್ಲಿ ನಡೆದಿದೆ. ಹಾಡಿನ ಆರಂಭದಲ್ಲಿಯೇ ಹಾಡಿನೊಳಗೆ ಸಭೀಕರನ್ನು ಬಳಸಿಕೊಳ್ಳುವುದರಿಂದ, ಹಾಡು ಕೇಳುಗರ ಜವಾಬ್ದಾರಿಯು ಹೆಚ್ಚುತ್ತದೆ. ಮಣ್ಣು ಹೆಚ್ಚೆಂದು ಹಾಡಿದ ಸವಾಲ್ ನುಡಿಯ ಪಲ್ಲಕ್ಕೆ, ಜವಾಬ್ ನುಡಿಯ ಪಲ್ಲದ ಎರಡನೆಸಾಲಿನಲ್ಲಿಯೇ ಅದರ ಉತ್ತರ ಇದೆ. ಹೀಗೆ ಪಲ್ಲ ಒಂದರಲ್ಲಿಯೇ ಅಲ್ಲ. ಹಾಡಿನ ಪ್ರತಿಯೊಂದು ನುಡಿ ನುಡಿಗೂ ಹಾಕಿದ ಸವಾಲ್‌ಗಳಿಗೆ ಜವಾಬ್ ಇದ್ದೆ ಇರುತ್ತದೆ.

 


[1] ಸ್ವಾತಂತ್ರ್ಯ ಹೋರಾಟ ಮತ್ತು ಲಾವಣಿ ಸಾಹಿತ್ಯ, ಪುಟ ೪

[2] ಹರದೇಶಿ – ನಾಗೇಶಿ, ಪ್ರಸ್ತಾವನೆ ಪುಟ XIII

[3] ತೇರದಾಳದ ಲಾವಣಿಕಾರರು, ಪುಟ ೨೪

[4] ಹರದೇಶಿ – ನಾಗೇಶಿ, ಪುಟ XIV

[5] ಲಾವಣಿ, ಪುಟ ೨೮

[6] ತೇರದಾಳದ ಲಾವಣಿಕಾರರು, ಪುಟ ೧೦

[7] ಜಾನಪದ ಆಲೋಕನ, ಪು ೧೭೫

[8] ಹಂತಿ ಗೀ ಗೀ ಹಾಗೂ ಲಾವಣಿ ಸಂಪ್ರದಾಯ, ಪುಟ ೪೧

[9] ಮಹಾಗಾಂವ ಮೀರಾಸಾಬ, ಪುಟ೬

[10] ಹಂತಿ ಗೀ ಗೀ ಲಾವಣಅ ಸಂಪ್ರದಾಯ, ಪು ೨೬

[11] ಕಲಬುರ್ಗಿ ಜಿಲ್ಲೆಗೆ ಶರಣ ಬಸವೇಶ್ವರ ಜಾತ್ರೆ ಮತ್ತು ಖ್ವಾಜಾ ಬಂದಾ ನವಾಜ ಉರ‍್ಸು ಎರಡು ಬಹಳ ವಿಜೃಂಭಣೆಯಿಂದ ತಿಂಗಳವರೆಗೂ ನಡೆಯುತ್ತವೆ.

[12] ಗೀ ಗೀ ಮೇಳದಲ್ಲಿ ಮೂರು ಜನರಂತೂ ಕಡ್ಡಾಯ. ಇತ್ತಿತ್ತಲಾಗಿ ಇನ್ನೊಬ್ಬ ಸೇರಿಕೊಂಡಿದ್ದಾನೆ. ಅವನ ಕೈಯಲ್ಲಿ ಪಿಟಿಲು ಇರುತ್ತದೆ. ಈ ಹಾಡುಗಾರಿಕೆಗೆ ಈ ಪರಿಕರ ಅಷ್ಟೊಂದು ಮಹತ್ವದ್ದೇನಲ್ಲ.