ಹಾಡುಗಳ ಕಥಾಸಾರ

ಪಿಂಡ ಮೊದಲೋ ಏನ್ ಪ್ರಾಣ ಮೊದಲೋ ಎಂಬ ಹಾಡಿನಲ್ಲಿ ಪಿಂಡ ಮೊದಲು ಎಂದು ನಾಗೇಶಿ ಪಕ್ಷದಿಂದ ಸಮರ್ಥಿಸಿಕೊಳ್ಳುತ್ತ, ಪಿಂಡದ ಶ್ರೇಷ್ಠತೆಯನ್ನು ನೆರೆದ ಸಭೆಯ ಮುಂದೆ ಪ್ರಸ್ತಾಪಿಸುತ್ತ ಹೋಗುತ್ತಾಳೆ ಹೆಣ್ಣು. ಮೊದಲು ಪಿಂಡವೆ ಉತ್ಪತ್ತಿಯಾದದ್ದು ಆ ವೇಳೆಯಲ್ಲಿ ಪ್ರಾಣ ಎಲ್ಲಿತ್ತು ಎಂದು ಹರದೇಶಿ ಹಾಡುಗಾರನಿಗೆ ಪ್ರಶ್ನೆ ಮಾಡುವುದಾಗಿದೆ. ನಂತರದಲ್ಲಿ ಪಿಂಡ ಉತ್ಪತ್ತಿಯಾಗುವಂತಹ ವಿಧಿವಿಧಾನಗಳನ್ನು ಹೇಳಿಕೊಡುತ್ತಾಳೆ. ಮೊದಲನೆ ಚೌಕದಲ್ಲಿ ತಾತ್ವಿಕ ನೆಲೆಗಟ್ಟಿನ ಮೇಲೆ ನಿಂತು ಮಾತನಾಡಿ ಪ್ರಾಪಂಚಿಕ ಬದುಕಿನಲ್ಲಿ ಕುಂಬಾರ ಯಾವ ರೀತಿ ಗಡಿಗೆ ಮಾಡುತ್ತಾನೋ ಅದೇ ಕಲ್ಪನೆಯೆ ನಮ್ಮ ಪಿಂಡದ ಉತ್ಪತ್ತಿಗೆ ಹೋಲಿಸಿಕೊಂಡು ಹೋಗುತ್ತಾಳೆ. ಎರಡನೆಯ ಚೌಕದಲ್ಲಿ ಪ್ರತಿಯೊಂದು ನುಡಿಯು ಪ್ರಶ್ನಾರ್ಥಕವಾಗಿ ಕಂಡು ಬರುತ್ತವೆ. ಪಿಂಡ ಉಣ್ಣುವುದೋ, ಪ್ರಾಣ ಉಣ್ಣುವುದೋ, ಕಳವು ಯಾವುದು ಮಾಡುವುಗು, ಹೊಡೆಸಿಕೊಳ್ಳುವುದಾವುದು. ಜನರ ಜೊತೆ ಮಾತನಾಡುವುದು ಯಾವುದು? ಎಂಬ ಪ್ರಶ್ನೆಗಳಿವೆ. ಪಿಂಡ ಮೂಡಿದಾಗಲೆ ಗಂಡು-ಹೆಣ್ಣು ಎಂದು ವಿಭಾಗೀಕರಿಸಲು ಸಾಧ್ಯವಿತ್ತೆ? ಪಿಂಡ-ಪ್ರಾಣದಲ್ಲಿ ಮರಣ ಯಾರಿಗಿದೆ ಎನ್ನುವ ಮಾತು ಮಾರ್ಮಿಕವಾದುದು. ಮೂರನೆ ಚೌಕದಲ್ಲಿ ನಿದ್ರಿ ಸಾವಿಗಿ ಒಂದೇ ಅಂತಿರಿ? ನಿದ್ರಿ ಹತ್ತಿದಾಗ ಮನುಷ್ಯ ಶ್ವಾಸ ಆಡಬಾರದು, ಅಂದಾಗ ಒಂದೇ ಎಂದು ಕರೆಯುವೆನೆಂದು ಹೇಳುತ್ತಾಳೆ. ಅಲ್ಲದೆ ಪ್ರತಿಯೊಂದು ಜೀವಿಯ ಹಣೆಬರಹ ಬರೆಯುವವಳು ಶೆಟವಿ. ಬ್ರಹ್ಮ ಹಣೆಬರಹ ಬರೆಯುವನೆಂದು ಹೇಳುವ ಹರದೇಶಿಯವನಿಗೆ, ಬರೆಯುವಾಗ ದವತಿ, ಲೇಖನಿ ಎಲಿಂದ ತರುವನೆಂದು ಪ್ರಶ್ನೆ ಮಾಡುವುದನ್ನಿಲ್ಲಿ ಕಾಣುತ್ತೇವೆ.

ಪಿಂಡ ಮೊದಲೋ ಏನ್ ಪ್ರಾಣ ಮೊದಲೋ ಎಂಬ ಪದ್ಯಕ್ಕೆ ಪ್ರಾಣವೇ ಮೊದಲು ಎಂದು ಉತ್ತರ ಕೊಡುವ ಖಚಿತತೆಯು ಇಲ್ಲಿದೆ. ವಾಮದೇವ ವಾಯು ರೂಪದಿಂದ ನೀರಿನ ಮೇಲೆ ಅಂತರ ಇದ್ದ. ಅಂತಹ ಗಂಡು ಜೀವಿಯ ಹತ್ತಿರವೇ ಪಿಂಡ ಮೂರು ತಿಂಗಳ ಮುಂಚೆ ಇತ್ತು ಎಂಬುದಕ್ಕೆ ಉಲ್ಲೇಖ ಕೊಡುತ್ತಾನೆ. ಹಿಂದಿನ ಪದ್ಯದಲ್ಲಿ ಕುಂಬಾರನ ಕುರಿತು ಹೇಳಿದರೆ, ಇಲ್ಲಿ ಸ್ವತಃ ಬ್ರಹ್ಮನೆ ಕುಂಬಾರನ ಸ್ಥಾನದಲ್ಲಿ ನಿಂತು ಗಡಿಗೆ ಮಡುವ ತೆರನಾಗಿ, ಜೀವಿಗಳ ಉತ್ಪನ್ನ ಮಾಡಿದ್ದಾನೆಂದು ಹರದೇಶಿಯವನು ಹೇಳಿಕೊಳ್ಳುತ್ತಾನೆ. ಮನುಷ್ಯನ ಆಯುಷ್ಯ ನೂರು ವರ್ಷ ಇದ್ದಂತೆ ಗಡಗಿಯ ಆಯುಷ್ಯವು ನೂರು ವರ್ಷವೆಂದು ಪರ್ಯಾಯುವಾಗಿ ಹೇಳಿಕೊಂಡು ಹೋಗಿದ್ದಾನೆ. ಪ್ರಾಣವೆ ಮೊದಲು ಪಿಂಡ ನಂತರವೆಂದು ಸಾರುತ್ತಾನೆ. ಪ್ರಾಣ ಬೆಳೆಯುತ್ತದೋ ಪಿಂಡ ಬೆಳೆಯುತ್ತದೋ ಎಂಬ ಪ್ರಶ್ನೆ ಪ್ರಾಣವೆ ಬೆಳೆಯುತ್ತದೆಂದು ನಿಖರವಾಗಿ ಹೇಳುತ್ತಾನೆ. ಪ್ರಾಣ ಉಣಿಸುತ್ತದೆ ಪಿಂಡ ಉಣ್ಣುತ್ತದೆ. ಪ್ರಾಣ ಚಂಚಲವಾದರೆ ಪಿಂಡಕ್ಕೆ ತೊಂದರೆ. ಪಿಂಡವೆ ಕಳವು ಮಾಡುವುದು ಲತ್ತಿ (ಹೊಡೆತ) ತಿನ್ನುವದೆಂದು ಹೇಳುತ್ತಾನೆ. ಪ್ರಾಣ ಲಡಾಯಿ ಮಾಡಿದ್ರೆ ಪಿಂಡ ಓಡಿ ಹೋಗುವುದೆಂದು, ಪ್ರಾಣದ ಶ್ರೇಷ್ಠತೆಯನ್ನು ಹೇಳಿದ್ದಾನೆ. ಸತ್ತ ಮನುಷ್ಯ ನಿದ್ರಿ ಹತ್ತಿದ ಮನುಷ್ಯನಲ್ಲಿಯ ವ್ಯತ್ಯಾಸವನ್ನು ಗುರುತಿಸುತ್ತಾನೆ. ಎಷ್ಟು ಅಕ್ಷರದಿಂದ ಬ್ರಹ್ಮ ಹಣೆ ಬರಹ ಬರೆದಾನೆಂದುದ್ದಕ್ಕೆ, ಸಪ್ತಸಾಗರವೆ ಶಾಯಿ, ಮಹಾಮಂದರವೆ ಲೇಖನಿ ಮಾಡಿಕೊಂಡಿದ್ದ ಎಂದು ಜವಾಬ ಕೊಟ್ಟು, ಶೆಟವಿ ಎಷ್ಟಕ್ಷರದಿಂದ ಬರೆದಿದ್ದಾಳೆ. ನಿಮ್ಮ ಫಣಿ ಎಂದು ತಿರುಗಿ ಸವಾಲು ಹಾಕುವುದರ ಮೂಲಕ ವಾದದ ಅಲೆ ಆರಂಭವಾಗುತ್ತದೆ.

ಪ್ರಕೃತಿಯನ್ನು ಆಯ್ಕೆ ಮಾಡಿಕೊಂಡು ತಾತ್ವಿಕ ನಿಲುವನ್ನು ಸ್ಪಷ್ಟಪಡಿಸುವುದು ಕಾಣುತ್ತೇವೆ. ಭೂಮಿ ಮತ್ತು ಬೀಜದಲ್ಲಿ ಯಾವುದು ಮೊದಲು, ನಾಗೇಶಿ ಹಾಡುಗಾರ್ತಿ ಭೂಮಿನೆ ಮೊದಲು ಎನ್ನುವ ವಾದ ಇಲ್ಲಿದೆ. ನೀರು ಶ್ರೇಷ್ಠವೆಂಬ ಹರದೇಶಿ ಪಕ್ಷಕ್ಕೆ ನೀರು ಎಷ್ಟೆ ಪಾತಾಳದಲ್ಲಿದ್ದರೂ, ಅದಕ್ಕೆ ತಳ ಎನ್ನುವ ಭೂಮಿ ಇದ್ದೇ ಇರುತ್ತದೆ. ಭೂಮಿ ಶ್ರೇಷ್ಠ ಅಂದಾಗ ಶಕ್ತಿ ಶ್ರೇಷ್ಠವೆಂದೆ ಅರ್ಥ. ಇನ್ನೂ ಸ್ಪಷ್ಟಪಡಿಸಲು ಪೃಥ್ವಿಯ ನಿರ್ಮಾಣವನ್ನು ತಂಗಿನಕಾಯಿಯ ಉತ್ಪನ್ನ ಆಗುವ ರೂಪವನ್ನು ಪ್ರಸ್ತಾಪಿಸುತ್ತ, ತೆಂಗಿನಲ್ಲಿ ನೀರು ಹೇಗಿರುವುದೋ, ಭೂಮಿಯ ಸುತ್ತಲೂ ನೀರು ಇದೆ. ಈಹಾಡನ್ನು ಹೇಳುವುದಕ್ಕೆ ಹಲವಾರು ರೀತಿಯ ಬಯ್ಗಳು ಹಾಡಿನಲ್ಲಿ ಬಂದು ಹೋಗುತ್ತವೆ.

ಸವಾಲ್ ಹಾಕಿದಂತಹ ಹಾಡುಗಾರ್ತಿಗೆ ಜವಾಬ ಕೊಡುವ ಹಾಡಿನಲ್ಲಿ ಮೊದಲಿಗೆ ಆಕೆಯನ್ನು ಹಿಯ್ಯಾಳಿಸುತ್ತಾನೆ. ದೊಡ್ಡದು -ಚಿಕ್ಕದು. ಗುರು ಶಿಷ್ಯರ ಹೋಲಿಕೆಯೆಂದು ಹೇಳುತ್ತಾನೆ. ವಾದ ಇವತ್ತಿನದಲ್ಲ ಬಹುಕಾಲದಿಂದಲೂ ಬಂದದ್ದು. ತಾಯಿ ಆಗುವಾಕೆ ಮಗುವಿಗೆ ಜನ್ಮ ನೀಡಬೇಕಾದರೆ, ಒಬ್ಬ ತಂದೆ ಹಾಕಿದ ಬೀಜ ಅಲ್ಲವೆ? ಹೆಣ್ಣಿಗೆ ಸ್ವತಂತ್ರವಾಗಿ ಜನ್ಮ ಕೊಡುವ ಶಕ್ತಿಯಿಲ್ಲ ಪ್ರಕೃತಿ ನಿರ್ಮಾಣದಲ್ಲಿ ತೊಡಗಿದ ಪರಮಾತ್ಮ ಜಲಮುನಿ ಪುರುಷನಾಗಿ ಹುಟ್ಟಿಕೊಳ್ಳುತ್ತಾನೆ. ಹಾಲಮುನಿ, ಹೆಪ್ಪಮುನಿ, ಬಿಗಿ ಮುನಿಯರ ಮರಣದಿಂದ ಭೂಮಿಯಾಯಿತು ಎಂದೂ ಬೀಜ ಮೊದಲೆ ಇತ್ತೆಂದು ಹೇಳುತ್ತಾನೆ.

ಹೆಣ್ಣು ತನ್ನ ಪಕ್ಷದ ವತಿಯಿಂದ ಮಣ್ಣು ಶ್ರೇಷ್ಠವೆಂದು ಹಾಡುವ ಹಾಡು ಇಲ್ಲಿದೆ. ಭೂಮಿ ಆಕಾರಾಗುವುದಕ್ಕಿನ್ನ ಮೊದಲು ನೀರೆ ನೀರಿತ್ತು ಎಂದು ಹೇಳುವ ಹರದೇಶಿ ಸವಾಲಿಗೆ, ಸಾವಿರ್ದೆಂಟು ಬ್ರಹ್ಮಾಂಡ, ನವಖಂಡ ದಶಖಾಂಡಗಳೆಲ್ಲವು ನಮ್ಮ ಮಣ್ಣಿನಲ್ಲಿಯೇ ಅಕಡಕವಾಗಿವೆ. ಓಂ ಶಿವಾಯ ನೀರವಸ್ತು ಸಿದ್ಧ ಸಾಧ್ಯ ವಿದ್ಯಾಧರರೆಲ್ಲ ಮಣ್ಣಲ್ಲಿ ಹುಟ್ಟಿದ್ದಾರೆ. ದೇವರೆಂದು ಪೂಜೆಗೈಯುವ ನಾರಾಯಣ, ನವನಾಥ ಸೂರ್ಯ ಚಂದ್ರರೆಲ್ಲ ಮಣ್ಣಲ್ಲಿ ಹುಟ್ಟಿದ್ದು ಹೇಳುತ್ತಾಳೆ. ಮಣ್ಣಲ್ಲಿ ಅಡಕವಾಗಿರುವ ನವರತ್ನ ಕಂಚು, ಕಬ್ಬಿಣ, ಹಿತ್ತಾಳಿ, ಉಕ್ಕು, ಸೀಸ ಅಲ್ಲದೆ ಮನುಷ್ಯನ ಉತ್ಪತ್ತಿ, ಸ್ಥಿತಿ, ಲಯ ಕೂಡ ಮಣ್ಣಲ್ಲಿ ಎನ್ನುವುದಕ್ಕೆ ಆಧಾರ ಕೊಡುತ್ತಾಳೆ. ಅಷ್ಟಾವರಣ ಪಂಚಾಚಾರಗಳೆಲ್ಲ ಮಣ್ಣಲ್ಲಿ ಹುಟ್ಟಿದ್ದು ಹೋಮ ಹವನ ಕ್ರಿಯಾ ವಿಚಾರ ಮಣ್ಣಲ್ಲಿ, ವೀರ ಶೂರ ಧೀರರೆಲ್ಲರಿಗೂ ಮಣ್ಣಲ್ಲಿ ಮುಚ್ಚುವುದರಿಂದ ಧರಣಿಯ ಮೇಲಿನ ಮಣ್ಣೆ ಶ್ರೇಷ್ಠ. ಭೂಮಿ ಶ್ರೇಷ್ಠ ದರ್ಜೆಯ ಮಣ್ಮು ಹೊತ್ತಿದರೆ ಬೆಳೆಯು ಶ್ರೇಷ್ಠ, ಬಿತ್ತುವುದು, ಬೆಳೆಯುವುದು ಮಣ್ಣಲ್ಲಿ ಅದರಿಂದಲೇ ಜೀವಿಗಳ ಉಪಜೀವನ ಮಣ್ಣಿನಿಂದ ಸಹಾಯ ಪಡೆಯುವುದು ಎಂದು ನೆನಪಿಸುತ್ತಾಳೆ.

ಮಣ್ಣು ಶ್ರೇಷ್ಠ ಮಾಡಿ ಪದ ಹಾಡುವ ಹಾಡುಗಾರ್ತಿಗೆ, ಮಣ್ಣಿಗೆ ಮೇಲೆ ನೀರು ಹಾಕಿದರೆ ಸಹಜವಾಗಿ ಮಣ್ಣು ಕರಗಿ ಹೋಗುವುದೆಂಬ ನೀರಿನ ಶ್ರೇಷ್ಠತೆಯನ್ ಹರದೇಶಿ ಹೇಳುತ್ತಾನೆ. ಅಷ್ಟ ಪರ್ವತ, ಸಪ್ತಸಮುದ್ರ ಮುಳಗ್ಯಾವ ನೀರಾಗ. ಓಂಕಾರ ಧ್ವನಿ ನೀರಾಗ ಇಷ್ಟಲ್ಲದೆ ಬಹುಮುಷ್ಯವಾಗಿ ಸತ್ತರು ನೀರ ಇದ್ದರು ನೀರ. ಮುತ್ತು ಮಾಣಿಕ್ಯ ಹವಳ ನೀರಾಗ. ಮೂರು ಭಾಗ ನೀರ ಒಂದು ಭಾಗ ಭೂಮಿ ಎಂಬ ವೇದಶಾಸ್ತ್ರಗಳು ಇವೆ ಎಂದು ನಾಗೇಶಿಗೆ ತಿಳಿಸುತ್ತಾನೆ. ಮೇಘರಾಜ, ಸಮುದ್ರರಾಜರೆಂಬ ಹೆಸರು ನೀರಿಗಿದೆ. ಕೊನೆಗೆ ಮನುಷ್ಯ ಮಾಡಿದ ಪಾಪ ಕರ್ಮವನ್ನು ತೊಳೆಯಲು ನೀರೆ ಪವಿತ್ರವೆಂದು ಸ್ನಾನ ಮಾಡಿ ಪಾವನರಾಗುತ್ತಾರೆ ಎಂದು ನೀರಿನ ಶ್ರೇಷ್ಠತೆ ತಿಳಿಸುತ್ತಾನೆ.

ಬೆಟ್ಟದ ತುದಿಯಲ್ಲಿ ಬೆಳೆದಿದ ಮರ
ನೀರಿಲ್ಲದೆ ಹ್ಯಾಂಗಾಗ್ಯದ
ನೀರ ಹೆಚ್ಚ ಏನ್ ಭೂಮಿ ಹೆಚ್ಚ ಶಾಹೀರ
ಸಮ್ಮ ಆಗಬ್ಯಾಡ ಗಪ್ಪ || ಜೀ ||

ಮಣ್ಣಿನಾಶ್ರಯವಿಲ್ಲದೆ ಬೆಳೆ ಬೆಳೆಯುವುದು, ಮಳೆ ಒಂದಿದ್ದರೆ ಸಾಕು ಎಂಬ ಅರ್ಥ ಮೇಲಿನ ನುಡಿಯಲ್ಲಿದೆ. ಮಳೆ ಬರದೆ ಇದ್ದಾಗ ಏನೇನು ಅನಾಹುತ ಘಟಿಸುವುದೆಂದು ಹೇಳುತ್ತಾನೆ. ಹರದೇಶಿ ಪಕ್ಷದ ಶ್ರೇಷ್ಠತೆಯನ್ನು ಹೇಳಬಹುದೇ ವಿನಹ ಇವೆರಡು ಪ್ರತ್ಯೇಕವಾಗಿ ಮಾಡುವುದು ಅಸಾಧ್ಯ. ಏಕೆಂದರೆ ಭೂಮಿ ಇದ್ದರೆ ಬೆಳೆ, ಬೆಳೆಗೆ ಬೇಕು ಮಳೆ, ಒಂದಕ್ಕೊಂದು ಅನ್ಯೋನ್ಯತೆ ಬೆಸೆದುಕೊಂಡಿವೆ.

ಹರದೇಶಿಯವನು ಶಕ್ತಿ ಇದ್ದಿದ್ದಿಲ್ಲವೆಂಬ ವಾದ ಮಾಡುತ್ತ ಹೆಂಗಸಿನ ಜಾತಿಗೆ ಅವಮಾನ ಮಾಡುತ್ತಾನೆ. ಪ್ರಥಮ ಪೈಲೆ ನಿರಂಕಾರ ಇತ್ತು. ಭೂಮಿ ಆಕಾಶ ಇದ್ದಿದ್ದಿಲ್ಲ. ಸೂರ್ಯ ಚಂದ್ರರಿಲ್ಲ. ಅಂತಹ ಸಂದರ್ಭದಲ್ಲಿ ನಮ್ಮ ಶಿವ ಆಲದ ಎಲಿಯ ಮೇಲೆ ಮಲಗಿಕೊಂಡಿದ್ದ. ನಂತರ ವಿಷ್ಣು. ಅವನ ನಾಭಿಯ ಕಮಲದಿಂದ ಬ್ರಹ್ಮ ಹುಟ್ಟಿದ ಅವನಿಂದಲೆ ಗಂಡಿನ ಸಂತತಿ ಬೆಳೆಯಿತು. ಗಂಡಸಿಗೆ ಹಡೆದಂತಹ ತಾಯಿ ಇಲ್ಲ. ಅವನು ಸ್ವತಂತ್ರವೆಂದು ಹೇಳಿಕೊಳ್ಳುತ್ತಾನೆ. ಕಶ್ಯಪ ಬ್ರಹ್ಮನೆಂಬ ಋಷಿ ಹುಟ್ಟಿದಾಗ ಅವನ ಹೊಟ್ಟೆಯಿಂದಲೆ ಜಗತ್ತು ನಿರ್ಮಾಣವಾಗುವ ಆಕಾರ ಪಡೆಯಿತು. ಹೀಗೆ ಗಂಡು ಹುಟ್ಟಿದ ನಂತರ ಹೆಣ್ಣು ಹುಟ್ಟಿತು. ‘ಗಂಡಗ ಬಿಟ್ಟು ಮುಂಡ್ಯಾರು ಆಗಿಲ್ಲ ಬಸರ’ ಎಂಬ ವಾದ ಮಾಡುತ್ತಾನೆ. ಅಷ್ಟ ದಿಕ್ಕುಗಳು ಈಶ್ವರನಿಂದ ಆದವು, ಸೂರ್ಯ, ಚಂದ್ರ, ಚುಕ್ಕಿಗಳು ಗಂಡಿನ ಪ್ರಥಮ ಆಕಾರವೆಂದು ಹೇಳಿ ಹಾದಿ ಬಿಟ್ಟು ಹಾಡು ಹಾಡಬೇಡವೆಂದು ಉಪದೇಶ ಮಾಡುತ್ತಾನೆ. ಅಶ್ಲೀಲ ಹಾಡು ಕಲಿಸಿದ ಆಕೆಯ ಗುರುವಿಗೆ ಬಯ್ಯುತ್ತಾನೆ.

ನಾಗೇಶಿಯಾಕೆ ಆದಿ ಯುಗ ಹಿಡಿದು ಆದಿಶಕ್ತಿನೆ ಮೊದಲಿನಾಕೆ ಎಂದು ಎದುರಿನ ಪಕ್ಷದವನಿಗೆ ಹಿಯ್ಯಾಳಿಸುತ್ತಾಳೆ. ಪರಂಜ್ಯೋತಿ ಶಕ್ತಿಯಿಂದ ಪರಬ್ರಹ್ಮ ಹುಟ್ಟಿದ ಪಾರ್ವತಿ ಮಗ ಆದ ನೀಲಕಂಠ. ನೀಲಕಂಠ ಶ್ರೇಷ್ಠ ಅನ್ನುವ ಹಿಂದಿನ ಹಾಡು ಅವನಿಗಿಂತಲೂ ಅವನ ತಾಯಿ ಶ್ರೇಷ್ಠವಲ್ಲವೆ? ಎಂಬ ಪ್ರಶ್ನೆ ನಾಗೇಶಿ ಹಾಡುಗಾರ್ತಿಯದು. ಹರದೇಶಿ ಯಾರ‍್ಯಾರಿಗೆ ಶ್ರೇಷ್ಠವೆಂದು ಕರೆದನೋ ಅದಕ್ಕೆ ವಿರುದ್ಧವಾಗಿ ನಾಗೇಶಿಯಾಕೆ ಹೇಳುವ ರೀತಿ ಹೀಗಿದೆ. ಲಕ್ಷ್ಮೀ ಜಡಿಯಿಂದ ನಾರಾಯಣ ಹುಟ್ಟಿದ, ಬ್ರಹ್ಮ ಹುಟ್ಟಿದನೆಂದು ಆಕರ ಗ್ರಂಥ ಕೊಡುತ್ತಾಳೆ ಸುಮ್ಮನೆ ತಕರಾರು ತೆಗೆಯಬೇಡೆಂದು ಹೇಳುತ್ತಾಳೆ. ಪಾರ್ವತಿ ಲಕ್ಷ್ಮೀ ಸರಸ್ವತಿಯರಿಂದಲೆ ಬ್ರಹ್ಮಾಂಡದ ನಿರ್ಮಾಣವಾಗಿದೆ. ಬಸವ ಭುವನೇಶ್ವರಿಗೆ ಬಂದು ಭೇಟ್ಟಿ ಕೊಡುತ್ತಾನೆ. ಆಕೆ ಸೃಷ್ಟಿ ನಿರ್ಮಾಣ ಮಾಡೆಂದು ಹೇಳಿದಾಕ್ಷಣ ಬಸವ ಜಲಮುನಿ ಹತ್ತಿರ ಹೋಗಿ ಅವನ ಮಕ್ಕಳನ್ನು ಬೇಡುತ್ತಾನೆ. ಆತ ಕೊಡಲು ನಿರಾಕರಿಸಿದಾಗ ಶಕ್ತಿಯುದ್ಧಕ್ಕೆ ನಿಲ್ಲೆಂದು ಹೇಳುತ್ತಾಳೆ. ಯುದ್ಧದಲ್ಲಿ ಸೋತ ಜಲಮುನಿ ಮಕ್ಕಳನ್ನು ಕಳೆದುಕೊಳ್ಳುತ್ತಾನೆ. ಆದಿಶಕ್ತಿಯ ಸುಪರ್ದಿಗೆ ಬಂದ ಮಕ್ಕಳನ್ನು ಕೊಂದು ಸ್ವತಃ ಸೃಷ್ಠಿ ನಿರ್ಮಾಣ ಮಾಡುತ್ತಾಳೆ.

ದೇವರು ಸಾಕ್ಷಾತ ಪ್ರತಿಯೊಬ್ಬನು ಮಾತನಾಡುವ ಮನಸಿಗೆ ಸಾಕ್ಷಿ ಇರುತ್ತಾನೆ. ಗರತಿಯರಿಗೆ ಗಂಡ ಇದ್ದಂತೆ, ಪ್ರತಿ ಗಂಡಸಿಗೂ ದೇವರೆ ಗಂಡನಾಗುತ್ತಾನೆ. ನೀರು ಶ್ರೇಷ್ಠವೆಂದು ಹರದೇಶಿಯಿಂದ ಕರೆಯುತ್ತಿದ್ದೀರಿ? ಗಂಗಾದೇವಿಗೆ ಗಂಡಸು ಎಂದು ತಿಳಿದಿದ್ದಿರಾ? ಎನ್ನುತ್ತಾಳೆ. ಸೂರ್ಯ ಚಂದ್ರ ಚುಕ್ಕಿಗಳೆಲ್ಲ ಅಚ್ಚ ಹೆಣ್ಣಿನ ಖೂನದಿಂದಿವೆ. ಮುತೈದೆ ಮಂಡಿಯ ಸೆರಗು ಕುಂಡಿಯ ಮೇಲೆ ಬಂದಾದೆಂದು ಹೇಳುವ ಹರದೇಶಿಗೆ, ಉಂಡಮನಿ ಜಂತಿ ಎಣಿಸುವೆನೆಂಬ ಪಟ್ಟ ಕಟ್ಟುತ್ತಾಳೆ. ಹಾದರತನ ಆಗುತ್ತವೆಂದು ಹೇಳುವ ಗಂಡು ತಾನು ನಿಯತ್ತಿನ ಮೇಲಿದ್ದರೆ ಏಕಾಗುತ್ತವೆಂದು ಪ್ರಶ್ನೆ ಮಾಡುತ್ತಾಳೆ. ಹೆಣ್ಣಿಗೆ ಹೊಲದ ಪ್ರತಿಮೆಯನ್ನು ಕೊಟ್ಟು ತನ್ನ ಹೊಲದಲ್ಲಿ ತನಗೆ ದಿಕ್ಕಿಲ್ಲವೆನ್ನುತ್ತಾಳೆ. ಅರಿವೆ ಮನುಷ್ಯನಿಗೆ ಗುರು ಅಂತಹ ಅರಿವನ್ನು ಪಡೆದರೆ ಅಕ್ಕಮಹಾದೇವಿಯೆಂದು ತಿಳಿಸುತ್ತಾಳೆ. ರೈತ ವರ್ಗದ ಜನರಿಗೆ ತುಂಬಾ ಬೇಗ ಗ್ರಹಿಸಿಕೊಳ್ಳಲು ಇಂತಹ ಹೊಲದ, ಕುಂಟೆ, ನೇಗಿಲುಗಳು ಉಪಮೆಕೊಡುವುದು ಕಾಣುತ್ತೇವೆ.

ದೈವ ಎಲ್ಲಿರುವುದೋ ದೇವರು ಅಲ್ಲಿ ಇದ್ದೆ ಇರುತ್ತಾನೆ. ಮರ್ತ್ಯು ಲೋಕದವರಿಗೆಲ್ಲ ಒಬ್ಬನೆ ಗಂಡ ಒಬ್ಬನೇ ದೇವರು, ಮದವಿ ಗಂಡ ಮಾತ್ರ ದೇವರ ಸಮಾನ ಎನ್ನುವುದು ನಾಗೇಶಿ ಮರೆಯಬಾರದು. ನಡೆ ನುಡಿ ಸರಿಯಿದ್ದ ಮೇಲೆ ಆ ದೇವರೆತಕ್ಕೆ, ಮನುಷ್ಯನಲ್ಲಿ ವಿಶ್ವಾಸ ಮುಖ್ಯ ಎಂದು ಹರದೇಶಿ ಸಾರುತ್ತಾನೆ. ಎಷ್ಟೋ ಮಂದಿ ಹುಟ್ಟಿಸುತ್ತಿದ್ದಾರೆ. ಆದರೆ ಪ್ರಪಂಚದಲ್ಲಿ, ಪ್ರಕೃತಿಯಲ್ಲಿ ಯಾವ ಬದಲಾವಣೆಯು ಇಲ್ಲ. ಏಕೆಂದರೆ ಅವು ದೈವತ್ವದ ಸ್ವರೂಪ. ದೇವರು ಅವರವರ ಭಕ್ತಿಗೆ ಮಚ್ಚಿವಲಿಯುತ್ತಾನೆ ಎಂದು ಹೇಳುತ್ತಾನೆ.

ಸೀರೆ ಒಂದು ಸಾಂಕೇತಿಕವಾಗಿ ಇಟ್ಟುಕೊಂಡು ಅಷ್ಟಾವರಣ ಪಂಚಾಚಾರವನ್ನೆಲ್ಲಅದಕ್ಕೆ ಅರ್ಪಿಸಿಕೊಂಡು ಹೋಗುವುದನ್ನು ಕಾಣುತ್ತೇವೆ. ಪೂರ್ತಿ ಅದ್ಯಾತ್ಮವನ್ನು ಒಳಗೊಂಡ ಈ ಪದ್ಯವು, ಜೀವಾತ್ಮನನ್ನು ಹಿಡಿದುಕೊಂಡು ಪರಮಾತ್ಮನವರೆಗೂ ಪರಮಾನಂದ ಪಡೆಯಬೇಕು ಎನ್ನುವುದಕ್ಕಾಗಿ ಕಟ್ಟಿಕೊಂಡ ಹಾಡಾಗಿದೆ ಎನಿಸುತ್ತದೆ. ಮಡಿ ಎನ್ನುವುದು ನೂರು ವರ್ಷದ ಆಯುಷ್ಯವೆಂದು ಪರಿಗಣಿಸಲಾಗುತ್ತದೆ.

ಮಡಿ ನೇಯ್ಯುವುದಕ್ಕೆ ಕೈಯಿಲ್ಲದ ಹಟಗಾರನಿದ್ದ ಅನ್ನುವಲ್ಲಿ ಆತ ಶಿವನೆಂದು ಅರಿಯಬೇಕು. ಅಂತಹ ಮಡಿಗೆ ಬಸವ ಪುರಾಣದ ಲೇಪವನವನ್ನು ಕೊಟ್ಟುಕೊಂಡದ್ದು ಮಡಿಯ ಮೂಲಕ ಅಧ್ಯಾತ್ಮದ ಒಳಹೊಕ್ಕು ನೋಡುವುದನ್ನು ಶೈವ ತತ್ವ ಸಿದ್ಧಾಂತಗಳನ್ನು ಅರಿಯುವುದಾಗಿದೆ.

ಮಡಿ ನಿನಗ್ಯಾಕ ಬೇಡತಾಳ ಅನ್ನುವ ಜವಾಬ್‌ನಿಂದ ಹಾಡು ಆರಂಭಗೊಳ್ಳುತ್ತದೆ. ಮೇಲಿನ ಹಾಡಿನಂತೆ ಇದಕ್ಕೆ ದುಮಾಲಿ, ಇಳುವ ಕೂಡಪಲ್ಲ, ಚೌಕಗಳಿಲ್ಲ. ಸಾರಸಗಟಾಗಿ ಹಾಡಿಕೊಂಡು ಹೋಗಿರುವುದರಿಂದ ಇದೊಂದು ಒಂಟಿ ಲಾವಣಿ ಪದ್ಯವೆಂದು ನಮಗೆ ತಿಳಿದು ಬರುತ್ತದೆ. ಒಬ್ಬರಿಂದಲೆ ಮಡಿ ತಯ್ಯಾರಾಗುವುದಿಲ್ಲ. ಇಬ್ಬರೂ ಕೂಡಿಯೇ ಮಡಿ (ಸೀರೆ) ಮಾಡಿದ್ದು ಎಂದು ಸಮರ್ಪಣ ಭಾವದಲ್ಲಿ ಉತ್ತರ ಹುಡುಕುವುದನ್ನು ಕಾಣುತ್ತೇವೆ. ಮನುಷ್ಯ ನಿರ್ಮಿಸಿದ ವೀರಶೈವ ತತ್ವಾನುಚರಣೆಯನ್ನು ಮೀರಿ ಪ್ರಕೃತಿ ದತ್ತವಾದ ಪಂಚ ಮಹಾಭೂತಗಳಿಂದ ಕೂಡಿಸಿ ಪಿತಾಂಬರ ತಯ್ಯಾರಿಸಲಾಗಿದೆ ಎಂದು ನಾಗೇಶಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಪದ ಹಾಡುತ್ತಾನೆ. ಅರಿಷಡ್ವರ್ಗವನ್ನು ಬಿಟ್ಟು ಪಿತಾಂಬರ ನೆಯುವುದು, ಹಗಲು ರಾತ್ರಿ ಇಂದಿಗೂ ನೇಯ್ಯುವುದು ಬಟ್ಟಿಲ್ಲವೆಂದು ಪ್ರಾಪಂಚಿಕ ಜನತೆಯ ಹುಟ್ಟನ್ನು ಹೇಳಿಂದತೆನಿಸುತ್ತದೆ.

ಸವಾಲ್-ಜವಾಬ್ ಎಂದರೆ ಬರೀ ಪ್ರಶ್ನೋತ್ತರ ರೀತಿಯಲ್ಲಿ ಇರುತ್ತದೆಂದೆನು ಇಲ್ಲ. ಒಬ್ಬಕವಿ ಮಾಡಿದ ಕವಿತ್ವಕ್ಕೆ, ಅದರ ಪರ್ಯಾಯವಾಗಿ ಮತ್ತೊಂದು ಹಾಡು ಹೆಣೆಯುವುದು. ತದ್ರೂಪವಾದಂತಹ ಹಾಡಿದ್ದರೂ ಹಾಡಿನ ಶಬ್ದ ಮತ್ತು ಶೈಲಿಯಲ್ಲಿ ಬದಲಾವಣೆಯನ್ನು ಕಾಣುತ್ತೇವೆ. ಇಲ್ಲಿ ಬಳಸಿಕೊಳ್ಳುವ ಹಾಡುಗಳು ನಾಗೇಶಿ (ಹೆಣ್ಣು) ಪಕ್ಷದ ಹಾಡುಗಾರ್ತಿಯು (ಗಂಡು) ಹರದೇಶಿಯವನಿಗೆ ಮಾಡುವ ವರ್ಣನೆ ತುಂಬಾ ಮಾರ್ಮಿಕವಾದುದಾಗಿದೆ. ತಾನು ಪ್ರೀತಿಸುವ ಪ್ರಿಯಕರನು ತನಗೆ ಸಂದಿಸದೆ ಇದ್ದಾಗ ಹೆಣ್ಣು ಯಾವ ರೀತಿಯ ಪರಿತಾಪ ಪಡುತ್ತಾಳೆ ಎನ್ನುವುದು ವಿಧಿತವಾಗಿದೆ. ಗ್ರಾಮೀಣ ಪರಿಸರದಲ್ಲಿ ನಡೆಯುವ ಈ ಹಾಡುಗಾರಿಕೆಯು ಒಬ್ಬ ಗ್ರಾಮೀಣ ಪರಿಸರದ ಹೆಣ್ಣು ಮಗಳು ಯಾವ ರೀತಿಯ ವರ್ಣನೆ ಮಾಡುತ್ತಾಳೆಂದು ವರ್ಣಿಸುವ ಪರಿಯೇ ಈ ‘ಲಿಂಗವಂತ ಪುರುಷನ ರಂಗೇನು ಹೇಳಲಿ’ ಎಂಬ ಹಾಡಿನ ಶೀರ್ಷಿಕಯ ಮೇಲೆ ಅವಲಂಬನೆಯಾಗಿದೆ. ಒಂದು ಹೆಣ್ಣು ತನ್ನ ಪ್ರಿಯಕರನಿಗೆ ಮೋಹಿಸಿ ವರ್ಣನೆ ಮಾಡುತ್ತಿದ್ದಾಳೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ, ಒಳನೋಟದಲ್ಲಿ ‘ಜೀವಾತ್ಮನೆ’ ಗಂಡ, ದೇಹಾತ್ಮನೆ ಹೆಂಡತಿಯೆಂದು ಗೊತ್ತಾಗುತ್ತದೆ. ಪ್ರಿಯತಮನಿಗಾಗಿ ಕಾಯುವ ಪ್ರೇಯಸಿಯ ವರ್ಣನಾತ್ಮಕ ನುಡಿಗಳನ್ನು ಬಳಸಿಕೊಂಡು ಹೋಗಲಾಗಿದೆ. ಅಮೂರ್ತ ಸ್ವರೂಪನಾದ ಆತ್ಮನ ಸರಿಸಮಾನ ಇಂದ್ರಹ ಚಂದ್ರ ಯಾರೂ ಅಲ್ಲವೆಂದು, ಹೆಣ್ಣು ತಾ ಕಾಗಿಯುಂತಾಕೆಂದು ತಾನೆ ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಕಾಣುತ್ತೇವೆ. ಇಡೀ ಮೂರನೆ ಚೌಕ ಮಾತ್ರ ಆಧ್ಯಾತ್ಮದ ಪರಿಧಿಯೊಳಗೆ ಪ್ರಿಯತಮ ಪ್ರೇಯಸಿಯರಾರು ಎನ್ನುವುದು ಗೊತ್ತಾಗುತ್ತದೆ. “ಮನ ಎಂಬೋ ಮಂಚ, ಬುದ್ದಿ ಎಂಬೋಗಾದಿ, ಸುಜ್ಞಾ ಎಂಬೋ ಸಮೆ ಹಚ್ಚಿ ಕಾಮ ಕ್ರೋಧ ಕಾವಲಗಾರ ಕರೀಲಿಕತ್ತಿನಿ ಕಣಗೆಟ್ಟ’’ ಎಂದು ಹೇಳುವುದು ಎಂಟು ಮಂದಿ, ಅಷ್ಟಮಧ. ಆರು ಮಂದಿ ಅರಿಷಡ್ವರ್ಗ. ಮೂರು ಮಂದಿ, ತ್ರಿವಿಧಿ. ಒಂಬತ್ತು ಮಂದಿ, ಶರೀರದ ರಂಧ್ರ. ಮೂನ್ನೂರದರವತ್ತು ಶ್ವಾಸೋಚ್ಛಾಸ. ಬತ್ತೀಸ ಮಂದಿ ಹಲ್ಲುಗಳು, ಇವೆಲ್ಲ ಭಿನ್ನ ಆದ ಮೇಲೆ ಬಿಟ್ಟು ಹೋಗುತ್ತಾರೆ ಎನ್ನುವುದು ಸತ್ತ ಮೇಲೆ ಇವ್ಯಾವವು ಕೆಲಸ ಮಾಡುವುದಿಲ್ಲವೆಂದು ಹೇಳಿದಂತೆ, ಇಷ್ಟು ಮಂದಿಯ ಮೇಲೆ ಚಡತ್ತಾಗಿ ಬಂದ್ರೆ ಬಡತಾನ ಹಿಂಗುವುದು ಅನ್ನುವಲ್ಲಿ ತನಗೆ ಶಿವ ಒಲಿದರೆ ಮೋಕ್ಷ ಎಂಬ ಮಾತನ್ನು ಹೇಳಿರುವುದು ನೆನಪಿಸಿಕೊಳ್ಳಬಹುದು.

ಸಾವಳಗಿ ಸಂಪ್ರದಾಯದ ಮೇಲಿನ ಹಾಡಿಗೆ ದ್ಯಾಗಾಯಿ ಸಂಪ್ರದಾಯದ ಕವಿ ಗುಂಡಪ್ಪ, ತಾನೇನು ಕಡಿಮೆಯಲ್ಲ ಎಂದು ತೋರಿಸುವುದಕ್ಕಾಗಿಯೇ ಮೇಲಿನ ಹಾಡಿಗೆ ಪ್ರತಿಯಾಗಿ ಗಂಡು, ಹೆಣ್ಣಿಗೆ ವರ್ಣಿಸುವುದನ್ನು ಕಾಣುತ್ತೇವೆ. ಒಂದು ಗಂಡು ಹಣ್ಣಿಗಾಗಿ ಕಾತರಿಸಿದಾಗ ಆಕೆಗೆ ಮಿಲನ ಹೊಂದುವ ಆತುರದ ಮಾತುಗಳ ಗಣಿಯೇ ಈ ಹಾಡು. ‘ಕಬ್ಬರ ಕರ್ಜಗಿ ಸೀರಿಯುಟ್ಟು, ಹುಬ್ಬಳ್ಳಿ ಕುಪ್ಪಾಸತೊಟ್ಟು ಹುಬ್ಬಿನ ಮೇಲೆ ಹಣಚಿ ಬಟ್ಟ ಜುಬ್ಬಾ ಹಾರಸಕೋತ ಹೊಂಟಾಳಪ್ಪ ಜಿಬ್ಬಿ ಮೇಲೆ ಗಂಟಿ ಸರಪಳಿ’ ಇಂತಹ ಕಾವ್ಯದ ಸಾಲುಗಳು ಯಾವ ಪಂಡಿತರಿಗೂ, ವರ್ಣನೆಗೆ ನಿಲುಕಲಾರದುವು. ಹೆಣ್ಣು ತನಗೆ ಕಾಣಬೇಕು, ಆಕೆಯ ಭವಬಂಧನದಿಂದ ಹೊರಬರಬೇಕಾದರೆ ಯಾವ ಯಾವ ಉಪಾಯಗಳನ್ನು ಹೇಳಬೇಕು ಎಂದು ಕಲಿಸಿಕೊಡುತ್ತಾನೆ. ಪಾರಿಜಾತ ಪುಷ್ಪದಂತಹ ಹೆಣ್ಣು, ಪಾತರಗಿತ್ತಿಯಂತಹ ಹೆಣ್ಣೆಂದು ನೋಡಲು ಮಾತ್ರ ಸುರದ್ರೂಪಿ ಬಳಸಿದರೆ ಅಪಾಯವೆನ್ನುವುದು ತಿಳಿಯಪಡಿಸುತ್ತಾನೆ. ಮುಂದಿನ ನುಡಿಗಳಲ್ಲಿ ಗಂಡು ಹೆಣ್ಣು ಇಬ್ಬರು ಮಾತನಾಡುತ್ತಾರೆ. ಒಂದು ರೀತಿ ಈ ಹಾಡು ಸಂವಾದದಂತೆ ಕಾಣುತ್ತದೆ. ಇಂತಹ ಹಾಡುಗಳಿಂದಲೆ ‘ಸಣ್ಣಾಟ’ ಎಂಬ ರಂಗ ಪ್ರಕಾರಕ್ಕೆ ಸಿದ್ಧ ಮಾದರಿಯ ಸಂಭಾಷಣೆಯಾಗಿರಲುಬಹುದು. ಬಹಳಷ್ಟು ಗೀ ಗೀ ಹಾಡುಗಾರಿಕೆಯ ಕವಿಗಳು ಸಣ್ಣಾಟದ ಕೃರ್ತ್ಯುಗಳು ಎನ್ನುವುದು ನೆನಪಿಸಲೇಬೇಕು.

ಹರದೇಶಿ-ನಾಗೇಶಿ ಸಂಪ್ರದಾಯದ ಹಾಡುಗಾರರು ಸವಾಲ್ ಜವಾಬ್‌ಗಳಲ್ಲದೆ ಸಾಮಾನ್ಯವಾಗಿ ಕೆಲವು ಸಂಕೇತಗಳನ್ನು ತಮ್ಮ ಪಕ್ಷ ಪ್ರತಿನಿಧಿಸುತ್ತದೆ ಎಂದು ತಿಳಿಯಪಡಿಸುತ್ತಾರೆ. ಬೆಳಕು-ಹರದೇಶಿ, ಕತ್ತಲು-ನಾಗೇಶಿ, ಬೀಜ-ಹರದೇಶಿ, ಭೂಮಿ-ನಾಗೇಶಿ, ತಲವಾರ-ಹರದೇಶಿ ವರಿ-ನಾಗೇಶಿ. ಈ ರೀತಿ ಬಳಕೆ ಮಾಡಿಕೊಂಡಾಗ, ಗಂಡು-ಹೆಣ್ಣು ಎಂದು ಪ್ರತ್ಯೇಕ ಮಾಡಿ ನೋಡಬೇಕಾಗಿಲ್ಲ. ಆ ಸಾಂಕೇತಿಕತೆನೆ ಗುರುತು ಹಿಡಿಯುವಂತೆ ಮಾಡುತ್ತದೆ. ತಲವಾರ (ಖಡ್ಗ) ಎನ್ನುವುದು ಗಂಡಿನ ಸಂಪ್ರದಾಯಕ್ಕೆ ಸೇರಿದ ವಸ್ತುವಾಗಿದೆ. ಹರದೇಶಿಯವನು ತಲವಾರ ಇಟ್ಟುಕೊಂಡು ಏನೇನು ಮಾಡಬಹುದೆಂಬುದನ್ನು ತಿಳಿಯಪಡಿಸುತ್ತಾನೆ. ತನ್ನ ಸರಿಸಮಾನ ಹೆಣ್ಣಿನ ಪಕ್ಷ ಬರುವುದಿಲ್ಲ ಎನ್ನುವುದಕ್ಕೆ ‘ಹುಲಿಯ ಬಣ್ಣಕ್ಕಾಗಿ ಮೈ ಸುಟ್ಟಕಂಡಂಗಾಯ್ತು ನರಿಯೆ’ ಎಂಬ ವ್ಯಂಗ್ಯದ ಮಾತನ್ನು, ಹರದೇಶಿ ತಾನು ಹುಲಿ, ನಾಗೇಶಿ ನರಿ ಎಂದು ತಿಳಿಸುತ್ತಾನೆ. ಸವಾಲ್‌ಗಳು ಸಹಜವಾಗಿ ಹೇಗೆ ಏಳುತ್ತವೆ ಎನ್ನುವುದಕ್ಕೆ ಉದಾಹರಣೆ ಕೊಡುತ್ತ ‘ಬೆಂಕಿ ಮೇಲೆ ಕಸ ಹಾಕು ಆಗಲಾರದಿದ್ದಿತೇನು ಉರಿಯೆ’ ಹೀಗೆಯೇ ತಕರಾರುಗಳ ಸೃಷ್ಟಿಯಾಗುವುದು ಎನ್ನುತ್ತಾನೆ. ಹೆಂಗಸು-ಹೆಂಗಸರಿದ್ದು ಏನು ಮಾಡಲು ಸಾಧ್ಯ. ‘ನಮ್ಮ ಗಂಡಸಿಲ್ಲದೆ ಒಂದರೆ ಕೂಸ ಹಡಿಯೆ’ ಎಂದು ಸವಾಲ್ ಹಾಕುತ್ತಾನೆ. ಅಲ್ಲದೆ ಹಾಡು ಅತೀರೆಕಕ್ಕೆ ಹೋದಾಗ ಇನ್ನೂ ಹೆಚ್ಚಿನ ಸವಾಲ್‌ಗಳು ಕಾಣುತ್ತೇವೆ. ತಾನೇನು ಮಾಡುವನೋ ಅದನ್ನೆ ಮಾಡಲು ಹೇಳುವ ಉದಾಹರಣೆಯಿದೆ. ‘ಗ್ವಾಡಿಮ್ಯಾಲ ಉಚ್ಚಿ ಹೊಯ್ದು ಬರೆದು ತೋರಿಸಿರಿ ಸಿರಿಯೇ ಹೆಚ್ಚಿನ ಕಿರಿಕಿರಿಯೆ’ ಹುಚ್ಚಿ ಹೆಚ್ಯಾಂಗಾತು ತಲವಾರಕಿನ್ನ ನಿಮ್ಮವರಿಯೇ’ ಎಂದು ಕೇಳುತ್ತ ನಾಗೇಶಿ ಯಾಕೆ ಮಾಡಿದ ಸವಾಲ್‌ಗೆ ಜವಾಬ್‌ನ್ನು ಈ ರೀತಿ ಕೊಡುತ್ತಾನೆ.

ಅಂಬಿಗ್ಯಾನ ಗುರು ಯಾರೆಂದು ಕೇಳತಿದಿ ಜಿಗದ
ಹೇಳುವೆನು ತಗದ ಅಂಬಿಗ್ಯಾನ ಗುರು ಬಕಲಬ ಋಷಿ ನಗದ

ತಾನು ಹಾಡು ಮುಗಿಸುವ ಮುಂಚೆನೆ ಎದುರಿನವರು ಕೇಳಿದ ಸವಾಲ್‌ಗಳಿಗೆ ಒಂದೊಂದಾಗಿಯೇ ಜವಾಬ್ ಕೊಟ್ಟುಕೊಂಡು ತಾನು ಸವಾಲ್ ಹಾಕುವುದು ಸರ್ವೇಸಾಮಾನ್ಯ.

ತಲವಾರ ಶ್ರೇಷ್ಠ ಅನ್ನುವ ಹಾಡಿಗೆ ವರಿ ಶ್ರೇಷ್ಠ ಎಂದು ಹೇಳಿಕೊಳ್ಳುವುದು ಅಲ್ಲದೆ, ವರಿ ಇಲ್ಲದೆ ತಲವಾರ ಚೂಪಾಗದಿರುವುದು ಈ ಹಾಡಿನಲ್ಲಿ ತಿಳಿಸಲಾಗಿದೆ. ವರಿ ನಾಗೇಶಿಯ ಸಂಕೇತವಾಗಿ ಬಳಕೆಗೊಳ್ಳುತ್ತದೆ. ‘ಕುರುಪಿಗೆ ಹಿಡಿ ಮುಖ್ಯ ಹಿಡಿಯಿಲ್ಲದಿದ್ದರೆ ಕುರ್ಪಿ ಕೆಲಸ ಮಾಡದು’ ದೇವರು ಹೆಚ್ಚೆನ್ನುವ ಹರದೇಶಿಯ ವಾದಕ್ಕೆ, ಗುಡಿನೆ ಹೆಚ್ಚು ಎಂಬ ನಾಗೇಶಿಯ ವಾದವಿದೆ. ಏಕೆಂದರೆ ಗುಡಿ ದೇವರ ಮೇಲೆ ಬಿದ್ದರೆ ದೇವರು ಪುಡಿ ಪುಡಿ ಯಾಗುವುದೆಂದು ಹೇಳುತ್ತಾಳೆ. ‘ಮೊದಲು ಸಿಡಿಗೆ ನಮಸ್ಕಾರ ಮಾಡಿ ನಂತರ ದೇವರಿಗೆ ನಮಸ್ಕಾರ ಮಾಡುತ್ತಾರೆ ಅನ್ನುವ ಮಾತು ಸ್ಪಷ್ಟವಾಗಿದೆ.’ ಆದರೆ ಗುಡಿಗೆ ಬುರವ ಭಕ್ತರು ಮಾತ್ರ ದೇವರಿಗೆ ಅನ್ನುವುದು ಮರೆಯಬಾರದು. ಈ ಹಾಡಿನಲ್ಲಿಯು ಕೊನೆಗೆ ಇಬ್ಬರೂ ಕೂಡ ಐಕ್ಯತೆಗೆ ಬಂದು ಮುಟ್ಟುತ್ತಾರೆ. ಉದಾಹರಣೆ ಹೀಗಿದೆ.

ಬೇಧ ಮಾಡಿ ವಷಿಷ್ಠಂದು ಏನು ಆಯಿತು ಗತಿಯೇ
ಗೊತ್ತಿಲ್ಲೇನು ಸ್ಥಿತಿಯೇ’’

ನನ್ನ ನಿನ್ನಲ್ಲಿ ಬೇಧ ಬೇಡವೆಂದು ನಾಗೇಶಿ ಹೇಳುತ್ತಾಳೆ. ವರಿ ಮತ್ತು ತಲವಾರಕ್ಕಿರುವ ಅನ್ಯೋನ್ಯತೆಯನ್ನು ತಿಳಿಸುತ್ತಾಳೆ.

ನಮ್ಮ ವರಿ ಹ್ವಾದ ಮ್ಯಾಲ ತಲವಾರ ಬಾಳುವೆಯಾತಕ ಜಂಗು ನಟ್ಟಿಯೇ
ಜಂಗು ನಟ್ಟಿದೆಂದು ಜಂತ್ಯಾಗ ಸಿಗಸ್ಯಾದಪ್ಪ ಮ್ಯಾಕೋ

ತಲವಾರ ಚೂಪಾಗಬೇಕಾದರೆ ವರಿಯನ್ನು ಸ್ಪರ್ಶಿಸಲೇಬೇಕು. ಇಲ್ಲ ಅಂದರೆ ಜಂಗು (ತುಕ್ಕು) ಹಿಡಿದು ಕೆಲಸಕ್ಕೆ ಬಾರದಂತಾಗುವುದು ಎಂದು ತಿಳಿಸುತ್ತಾನೆ. ಅದನ್ನೇ ಹರದೇಶಿ ನಾಗೇಶಿಯಲ್ಲಿಯ ಅನ್ಯೋನ್ಯತೆಯು ಒಂದಕ್ಕೆ ಬಿಟ್ಟು ಇನ್ನೊಂದಿರಲಾರೆಂದು ಹೇಳುತ್ತಾಳೆ.

ಕೊನೆಯ ಎರಡು ಹಾಡುಗಳು ಚಿಗರಿ ಸವಾಲ್ ಮತ್ತು ಜವಾಬ್‌ನವು. ಈ ಹಾಡು ಉರ್ದು ಮತ್ತು ಕನ್ನಡ ದ್ವಿಭಾಷಿಕತೆಯ ಹಾಡಾಗಿದೆ. ಈ ಹಾಡಿನ ಅಂಶ ಇಡೀ ಮುಸ್ಲಿಂ ಸಂಸ್ಕೃತಿಯನ್ನು ತಿಳಿಸಿಕೊಡುವುದೆಂದು ಕಾಣುತ್ತದೆ. ಈ ಹಾಡುಗಳಲ್ಲಿ ಬಳಕೆಯಾಗುವ ‘ಶಯಿರಿಯತ್, ಹಕ್ಕಿಕತ್ ತರಿಯತ್ ಮಾರಿಖತ್’ ಎಂಬ ಹೆಸರಿನ ಚಿಗರಿಗಳು, ಇವುಗಳ ಮೂಲಕವೆ ಕಥೆ ಸಾಗುತ್ತದೆ. ಹೈದರಾಬಾದ್ ಕರ್ನಾಟಕವನು ಮುಸ್ಲಿಂ ಆಡಳಿತದ ಪ್ರಬಾವಕ್ಕೊಳಗಾಗಿರುವುದರಿಂದ ಸೂಫಿ ಸಂತರ ಪ್ರಬಾವ ಗೀ ಗೀ ಪದಕಾರರ ಮೇಲಾಗಿರುವುದರಿಂದ ಬರೀ ಕನ್ನಡದ ಹಾಡುಗಳನ್ನೇಕೆ ಉರ‍್ಸುಗಳಿಗೆ ಹೋದಾಗ ಉರ್ದುವಿನಲ್ಲಿ ಹಾಡುಗಳನ್ನು ಹಾಡಬೇಕೆಂದು ಬಯಸಿ ಹಾಡಿದಂತಹವು. ಈ ಹಾಡಿನ ಕಥಾವಸ್ತು ಓದಿಕೊಂಡು ಹೋದಂತೆ ಅಧ್ಯಾತ್ಮ ದ ಸಾರವಿರುವುದನ್ನ ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಇದು ಹರದೇಶಿ ಹರದೇಶಿಯರಲ್ಲಿಯೇ ನಡೆದ ವಾದದ ಪ್ರತಿಷ್ಠೆಯಾಗಿದೆ. ಸಾವಳಗಿ ಮಹ್ಮದಸಾಬ ಸವಾಲ್ ಮಾಡಿದರೆ ಅದಕ್ಕೆ ದ್ಯಾಗಾಯಿ ಹಜರತ್‌ಸಾಬ ಜವಾಬ ಮಾಡಿದ್ದು ಎರಡು ಹಾಡುಗಳು ಸಂಗ್ರಹಗೊಂಡಿವೆ. ಎಲ್ಲಾ ಹಾಡುಗಳಲ್ಲಿ ಇವೆರಡು ಹಾಡುಗಳು ವಿಶಿಷ್ಟ ಮತ್ತು ವೈವಿಧ್ಯಮಯ ಎನಿಸಿಕೊಳ್ಳುತ್ತವೆ.

ಸಖಿಗಳುಖ್ಯಾಲಿಗಳು

ಸ್ತೋತ್ರ ಪದಗಳು: ಕಥಾಸಾರ

ದೈನಂದಿನ ಬದುಕಿನಲ್ಲಿ ಏನು ಬೇಕು ಎನ್ನುವುದನ್ನು ಹೇಳುತ್ತಲೆ ‘ಶಂಬೋಹರ’ ಎಂದು ಶಿವನನ್ನು ಸ್ಮರಿಸಲಾಗಿದೆ. ಮುಖ್ಯವಾಗಿ ಹಾಡುಗಾರನಿಗೆ ಪದರಚನೆ ಮಾಡಬೇಕು. ಹೇಗಿದ್ದರೆ ಪದ ಚೆನ್ನಾಗಿ ಕಾಣುವುದೆಂದು ಅರಿತಿರುತ್ತಾನೆ. ಮಾನವನಲ್ಲಿ ಏನಿರಬೇಕು, ಹೇಗಿರಬೇಕೆಂದು ತಿಳಿಸುತ್ತಾನೆ. ದೇವರಿಗೆ ಪೂಜಾರಿಗೆ ಏನೇನು ಬೇಕು ಎಂದು ತಿಳಿಸಿ ಸುಖಮಯವಾಗಿರಲು ಗುರುವಿನ ಸ್ತೋತ್ರಬೇಕೆನ್ನುತ್ತಾನೆ. ಈ ಹರದೇಶಿ ಹಾಡಿಗೆ ಹರದೇಶಿಯಾದ ಇನ್ನೊಂದು ತಂಡ ಗಜಾನನ ಪ್ರತಿಷ್ಠೆ ಹೇಳಿಕೊಂಡಿರುವುದು ಕಾಣುತ್ತೇವೆ. ಬೇರೊಬ್ಬರು ಮಾಡಿದ ಹಾಡಿಗೆ ತೋಡಿಯಾಗಿ ಅಥವಾ ಅಂತಹ ಛಂದ ಬಂದ, ಪ್ರಾಸ, ವಡಿ, ಲಯ ನಾನು ಮಾಡುವೆನೆನ್ನುವ ಇರ್ಷೆ ಕವಿಗಳಲ್ಲಿ ಇರುವುದು ಸೂಕ್ಷ್ಮವಾಗಿ ಅರಿಯಬೇಕು. ಯಾವುದಕ್ಕೆ ಯಾವುದು ಚಂದ ಎಂದು ಹೇಳಿರುವುದು ಕಾಣುತ್ತೇವೆ. ‘ಬಿತ್ತುವುದಕ ಮಂಡಿ ಚಂದ ಕಳದ ಸುತ್ತ ಇಂಡಿ ಚಂದ ಮುತ್ತೈದೆರಿಗೆ ದಂಡಿ ಚಂದ’ ಗಜಾನನ ಎಂದು ಇಂತಹ ಹಾಡು ಅತೀ ಚಿಕ್ಕ ಸಾಲುಗಳು, ಅಲ್ಲದೆ ಸರಳ ಮತ್ತು ಸುಂದರ ನೇಯ್ಗೆಯು ಕವಿಯ ಕಲಾತ್ಮಕತೆಯೆಂದೆ ಹೇಳಬೇಕು. ಪದ್ಯ ಓದುವುದಕ್ಕಿಂತಲೂ ಹಾಡುವುದನ್ನು ಕೇಳಿಯೇ ಆನಂದಿಸಬೇಕು.

ಈ ಹೊತ್ತಿನ ಡಾಂಬಿಕ ಬದುಕನ್ನು ಕಂಡು ರೋಷಿ ಹೋಗಿದ ಕವಿ ಶಿವನಿಗಾಗಿ ಯಾತ್ರಾ ಮಾಡುವುದು, ನೀರಿನಲ್ಲಿ ಮುಳುಗಿ ಎಳುವುದು, ಮರ ಬೆಟ್ಟ ಗುಡ್ಡಗಳನ್ನು ಹತ್ತಿ ತಿರುಗುವುದು. ತಲೆಕೆಳೆಗೆ ಕಾಲು ಮೇಲಕ್ಕೆ ಮಾಡಿ ನಿಲ್ಲುವುದು. ಇವೆಲ್ಲವು ಮಾಡುವುದು ಸುಳ್ಳು ಇಲ್ಲದ ದೇವರನ್ನು ಹುಡುಕುವ ಗೊಡವೆಗೆ ಹೋಗಬೇಡಿರೆಂದು ವೈಚಾರಿಕತೆಯ ಹಂದರವನ್ನು ಬಿತ್ತುತ್ತಾನೆ. ಇಪ್ಪತ್ತೆಂಟು ಆಗಮ ನಿಗಮ ಅಪ್, ತೇಜ, ವಾಯು, ಆಕಾಶದಲ್ಲಿಯೂ ಶಿವನಿಲ್ಲ ಜನ ಎಲ್ಲೆಲ್ಲಿ ಶಿವ ಇದ್ದಾನೆನ್ನುವರೋ ಅಲ್ಲೆಲ್ಲ ಶಿವನಲ್ಲವೆಂದೆ ಹೇಳುತ್ತಾನೆ. ಎಂತಲ್ಲಿ ಶಿವ ಇದ್ದಾನೆನ್ನುವುದು ಕವಿಯ ಬಾಯಿಯಿಂದಲೆ ಕೇಳಬೇಕು. ‘ಸತ್ಯ ಶಿವ ಸದಾ ನಿನ್ನಲ್ಲಿ ಇರತಾನ ಇದೆ ಸ್ಥಾನದಲ್ಲಿ ಇರತಾನೆಂದು ಯಾರಿಗೆ ಗುರ್ತಾನ’ ಭಕ್ತಿಯಿದ್ದವರಿಗೆ, ಅರಿವು ಇದ್ದವರಿಗೆ ಆದಾರ ಸ್ವಾದಿಷ್ಟ ಮಣಿಪುರದಲ್ಲಿರುವನು ಎಂದು ಹೇಳುತ್ತಾನೆ. ಆಪತ್ ಕಾಲದಲ್ಲಿ ನೆನೆಸಿಕೊಂಡರೆ ಬರುವನೆಂದು ಪೌರಾಣಿಕ ಕಥೆಗಳ ಆಧಾರ ಕೊಡುತ್ತಾನೆ. ಬಾಣಾಸುರನ ಬಾಗಿಲು ಕಾಯ್ದದ್ದು. ದಾಮೋಜಿ ಪಂಥನ ಬಿಟ್ಟಿ ವೈದದ್ದು, ಲಂಕಾ ಸುಟ್ಟಿದ್ದು ಅಂತಲ್ಲಿ ಮಾತ್ರ ಅದೃಶ್ಯನಾಗಿ ಕಾಣುತ್ತಾನೆ ಎನ್ನುವುದು ಕವಿ ಶಿವನ ಮೇಲೆ ಇಟ್ಟಿರುವ ಭಕ್ತಿಯೆಂದೆ ತಿಳಿಯಬೇಕು.

ಶಿವನಾಮೆಂಬ ರಂಡಿನ ಮಾಡಣ್ಣ, ರಂಡಿ ಅನ್ನುವ ಶಬ್ದ ಕವಿಯ ಕಲ್ಪನೆಯಲ್ಲಿ ಎಷ್ಟೊಂದು ಮಹತ್ವ ಪಡೆದಿದೆ ಎಂದು ತರ್ಕಿಸಬಹುದು. ರಂಡಿಯ ಮೇಲಿರುವಂತಹ ಪ್ರೀತಿ ಶಿವನ ಮೇಲಿಟ್ಟರೆ, ಜೀವನ ಸಾರ್ಥಕವಾಗುವುದು. ಬಸವಣ್ಣನ ಭಕ್ತಿಯನ್ನು ಪ್ರಸ್ತಾಪಿಸಿ, ಆತ ವೇಶ್ಯಾಂಗನೆಯ ಮನೆಗೆ ಹೋಗಿ ಬಂದರು. ದೋಷ ರಹಿತನಾದನೆಂದು ಹೇಳುತ್ತಾನೆ. ಹಿಡಿದಿದ್ದು ಬಿಡಬಾರದೆಂಬ ಛಲ ಇರಬೇಕು ಎಂದು, ಮಾಯೆ – ಅಲ್ಲಮರ ಸಂವಾದದಲ್ಲಿ ಮಾಯೆ ಸೋತಿರುವುದು ನೆನಪಿಸುತ್ತಾನೆ. ನಂತರದ ಹಾಡಿನಲ್ಲಿ ಶಿವನಾಮವೆಂಬ ಶೀಲವಂತಿ ಹೆಣ್ಣು ಇಲ್ಲಿ ಹೆಣ್ಣು ಅನ್ನುವುದೆ ದೇಹದ ಸಂಕೇತವಾಗಿ ಬಳಕೆಯಾಗಿದೆ. ಶರೀರದ ನವರಂದ್ರಗಳು, ನರನಾಡಿಗಳು, ಪಂಚೇಂದ್ರಿಯಗಳೆಲ್ಲವು ಹೇಗೆ ಬಳಕೆ ಆಗುತ್ತವೆ ಎನ್ನುವುದನ್ನು ತಿಳಿಸಿಕೊಡಲಾಗಿದೆ. ಗುರು, ಲಿಂಗ ಜಂಗಮದ ಹಾಡುಗಳನ್ನು ಹಾಡುತ್ತ ಇದ್ದರೆ ಪರಮಾನಂದ ನೀಡುತ್ತದೆಂದು ಹೇಳುತ್ತಾನೆ. ಹುಟ್ಟು ಸಾವಿನ ಜೊತೆಗಿರುವ ಆಟ ಒಂದಿನ ಕೊನೆ ಮುಟ್ಟುವುದು. ಅದಕ್ಕಾಗಿ ಮೋಕ್ಷದ ಕಡೆಗೆ ಗಮನಹರಿಸಲು ಕರೆಕೊಡುತ್ತಾನೆ.

ನೀತಿ ಬೋಧನೆ ಪದಗಳು: ಕಥಾಸಾರ

ನೀತಿ ಬೋಧನೆಯಿಂದಲೆ ಜನರು ಗೀ ಗೀ ಹಾಡುಗಾರಿಕೆಗೆ ಮಾರು ಹೋಗುತ್ತಾರೆ. ಅಶ್ಲೀಲ ಪದಗಳ ಬಳಕೆ ಮಾಡುವಂತ ಕವಿಗಳನ್ನು ಕವಿಗಳೆಂದು ಕರೆಯಬಾರದು. ಸಜ್ಜನರ ಸಂಗ ಮಾಡಬೇಕು. ಮಾತು ಬಿಟ್ಟು ಮಾತಾಡಬಾರದು. ಪರಸತಿಯ ನೋಡಬಾರದು. ಇಂತಹದೆಲ್ಲವನ್ನು ಹೇಳಿದ ಕವಿ ಇಷ್ಟಕ್ಕೆ ಸುಮ್ಮನಾಗದೆ ರಾಮಾಯಣ – ಮಹಾಭಾರತದ ಉದಾಹರಣೆಯನ್ನು ಕೊಟ್ಟುಕೊಂಡು ದುಷ್ಟರ ಸಂಹಾರವನ್ನು, ಶಿಷ್ಟರ ರಕ್ಷಣೆಯನ್ನು ಸಾರಿ ಹೇಳುತ್ತಾನೆ. ದಡ್ಡರಿಗೆ ಶಾಸ್ತ್ರ ಹೇಳಿದರೆ ಅರ್ಥವಾಗದು? ಅರ್ಥ ತಿಳಿಯಬೇಕೆಂದರೆ ಸಜ್ಜನರ ಸಂಗ ಮಾಡಬೇಕೆನ್ನುತ್ತಾನೆ.

ಒಮ್ಮೊಮ್ಮೆ ಹಾಡಿನಲ್ಲಿ ಕವಿಗೆ ನಿರಾಸಕ್ತಿ, ವೈರಾಗ್ಯ ಮೂಡುತ್ತದೆ. ಅಂತಹ ಸಮಯದಲ್ಲಿ ಬದುಕಿ ಏನು ಮಾಡುವುದು. ನನ್ನ ಜೊತೆ ಯಾವುದು ಬರಲಾರದು, ಎಷ್ಟು ಗಳಿಸಿದರೂ ಲಾಭವಿಲ್ಲವೆಂದು ಜಿಗುಪ್ಸೆ ಪಟ್ಟುಕೊಳ್ಳುತ್ತಾನೆ. ‘ಬಿಟ್ಟು ನಡದಿ ಎಲ್ಲಿಂದಲ್ಲಿ ಎರಡು ಕೈಲಿಂದ ಖಾಲಿ’ ಎಂಬ ಮಾತನ್ನಾಡಿ ಈ ಮರ್ತ್ಯೆದೊಳಗಿನ ಆಟವೆ ಸುಳಂದು ಸಾರುತ್ತಾನೆ. ಅವರವರಲ್ಲಿಯೇ ಸ್ಪರ್ಧೆ ಇರುವುದರಿಂದ ಬದುಕಬೇಕೆಂದು ಜೀವನದ ಬಗ್ಗೆ ಆಶೆ ಹುಟ್ಟಿಸುವ ಕವಿ ಇನ್ನೊಬ್ಬ ಕಾಣುತ್ತಾನೆ. ಸತ್ತರೆ ಸಂಗಾಟ ಬರುವುದು ವಾರ್ತೆ ಕೀರ್ತಿಯೆಂದು ತಳಿಯಪಡಿಸುತ್ತಾನೆ. ಪರೋಪಕಾರದಂತಹ ಪುಣ್ಯದ ಕೆಲಸದಲ್ಲಿ ತೊಡಗಿ ತಾನೇ ಸಾಕ್ಷಾತಪರಮಾತ್ಮನಾಗಬಹುದೆಂದು ಹೇಳುವುದರ ಮೂಲಕ ಮನುಷ್ಯನಲ್ಲಿ ದೈವತ್ವ ಕಾಣಲು ಬಯಸಿದವರು ಈ ಲಾವಣಿಕಾರರು.

ಶೃಂಗಾರ ಪದಗಳು : ಕಥಾಸಾರ

ಶೃಂಗಾರ ಪದಗಳು ಕೇಳುಗರಿಗೆ ಆಕರ್ಷಣೀಯವಾದವು. ಏಕೆಂದರೆ ಪ್ರೀತಿ, ಪ್ರೇಮ, ಪ್ರಯಣ ಸಲ್ಲಾಪದ ಬಗ್ಗೆ ವರ್ಣನೆ ಮಾಡುತ್ತ ಜನರನ್ನು ರಂಜಿಸುತ್ತವೆ. ಸ್ತೀ ಒಬ್ಬಾಕೆ ತನ್ನ ಪ್ರಿಯಕರನನ್ನು ಹೊಗಳುವ ರೀತಿ ಅದ್ಭುತವಾದದ್ದು. ಒಮ್ಮೆ ನೋಡಿದ ರೂಪ ಕಣ್ಣ ಮುಂದೆ ರಾಚುತ್ತಿದೆ. ನಿದ್ರೆಯಲ್ಲಿದ್ದಾಗ ಕನಸಿನಲ್ಲಿ ಬಂದು ಪರಿಪರಿಯಾಗಿ ಕಾಡುವ ವರ್ಣನೆಯಿದೆ. ಪ್ರಿಯತಮನಿಗಾಗಿ ಹಂಬಲಿಸುವ ಶಾಬ್ದಿಕ ವರ್ಣನೆ ಹೇಳತೀರದಷ್ಟಿದೆ. ಗಂಡಸು ಹಾಡುವಾಗಲು ಕೂಡ ‘ಇಕಿ ಯಾವುರಕಿ’ – ಎಂದು ಉದ್ಗಾರ ತೆಗೆದು ಆಕೆಯ ಮೈಮಾಟ ನಡೆ ನುಡಿಯ ವರ್ಣನೆ ಮಾಡುತ್ತಾನೆ. ಲಕ್ಷ್ಮೀ ಪಾರ್ವತಿ ಸರಸ್ವತಿಯರ ಸಮಾನ ಇಟ್ಟು ನೋಡುತ್ತಾನೆ. ಆಕೆಗಾಗಿ ತನ್ನೆಲ್ಲ ಆಸ್ತಿ ಕಳಕೊಂಡರು ಆಕೆಯೆ ಬೇಕು ಎಂದು ಹಂಬಲಿಸುವ ಛಾಯೆ ಇದೆ. ನಂತರದಲ್ಲಿ ಹಾಡಿನಲ್ಲಿ ‘ಗೆಳದಿ ಗಂಡನ ಮಾಡಿಕೊಂಡಿ ಆ ಗಂಡನ ಗಳಕಿ ಎರಡು ಕೈಲುಂಡಿ’ ಎಂದಾದರೆ ಇದಕ್ಕೆ ತದ್ವಿರುದ್ಧವಾಗಿ ‘ಉಂಡು ಉಂಡಿಲ್ಲನ ಬೇಡಗಳಕಿ’ ಎಂಬ ಹಾಡು ಮೇಲಿನ ಪಲ್ಲದಲ್ಲಿ ಶೃಂಗಾರವೆನಿಸಿದರು ಅಧ್ಯಾತ್ಮದ ಕಡೆ ವಾಲುತ್ತದೆ. ‘ಹೇಡಿ ಗಂಡ ಎಂದು ಹೆಣ್ಣು ಹೀಯ್ಯಾಳಿಸಿದರೆ, ಬಂಡ ಪಿಂಡದ ಹೆಂಡತಿ’ ಎಂದು ಗಂಡಸು ಹಿಯ್ಯಾಳಿಸುತ್ತಾನೆ. ಮೊದಲಿನೆರಡು ಹಾಡಿನಲ್ಲಿ ಒಬ್ಬರಿಗೊಬ್ಬರ ವರ್ಣನೆಯನ್ನು ಕಂಡರೆ ನಂತರದ ಹಾಡುಗಳಲ್ಲಿ ತದ್ವಿರುದ್ಧವಾದ ಮನಸ್ಸು ಕಾಣುತ್ತೇವೆ. ಇಂತಹ ಜೋಡಿ ಹಾಡುಗಳು ಒಬ್ಬ ಕವಿಯಲ್ಲಿ ರಚನೆಯಾದರೆ ಮಾತ್ರ ಸಿಗಲು ಸಾಧ್ಯ. ಆತನು ಎರಡು ಪಕ್ಷದ ಹಾಡುಗಳನ್ನು ರಚನೆ ಮಾಡುವವನಾಗಿರಬೇಕು.

ಜಗವೆಲ್ಲ ಸೀರೆಯಲ್ಲಿಯೇ ಹುಟ್ಟಿದೆಯೆಂದು ನಾಗೇಶಿಯಾಕಿ ಹೇಳಿದರೆ, ಹರದೇಶಿಯವನು ಮೊದಲು ನಮ್ಮ ದೋತರದಾನ ನೀರ ನಿಮ್ಮ ಬಚ್ಚಲ ಮೋವರಿಯಲ್ಲಿ ಬಿದ್ದಿವೆ ಎಂದು ಹೇಳುತ್ತಾನೆ. ಇನ್ನೂ ಮುಂದುವರೆದು, ನಾಯಿ, ನರಿ, ಕುರಿ ಕೋಳಿಗಳಿಗೆ ಸೀರೆ ಇವೆಯೇ ಎಂದು ಪ್ರಶ್ನೆ ಮಾಡುತ್ತಾನೆ. ಇಂತಹ ಸೂಕ್ಷ್ಮತೆಯನ್ನು ಹಿಡಿದು ಹಾಡಿನಲ್ಲಿ ಎದುರಾಳಿಗಳನ್ನು ಸೋಲಿಸುವುದು ಗೀ ಗೀ ಹಾಡುಗಾರಿಕೆಯ ಸವಾಲ್ ಜವಾಬ್ ಪ್ರಕ್ರಿಯೆಯಲ್ಲಿ ಮಾತ್ರ.

ಡಾ. ಹರಿಶ್ಚಂದ್ರ ದಿಗ್ಸಂಗಿಕರ