೧೫.ಸವಾಲ್: ಹುಚ್ಚಿಹೆಚ್ಚ್ಯಾಂಗಾತುತಲವಾರಕಿನ್ನನಿನ್ನವರಿಯೇ

ಹೆಣ್ಣು ಗಂಡಿನ ಜಗಳ ಬಿಚ್ಚಲಂತಿದಿ ಹುರಿಯೇ ಕಚ್ಚಾ ಕಿರಿಕಿರಿಯೇ
ಹುಚ್ಚಿ ಹೆಚ್ಚಿಗಾದೇನು ತಲವಾರಕಿನ್ನ ನಿಮ್ಮ ವರಿಯೇ || ಜೀ ||

ನಮ್ಮ ತಲವಾರ ಹಿಡಿದು ಹೊಡಿ ಕತ್ತರಿಸಿ ಹೋಗುವದು ಕುರಿಯೇ
ಮತ್ತು ಕುರಿ ಮರಿಯೇ ಬರೀ ವರಿ ಹಿಡಿದು ಹೊಡದರ ಕಡಿಲಾರದು ಒಂದು ನೂರಿಯೇ || ಜೀ ||

ನಿಮ್ಮ ವರಿ ಹಿಡಿದು ಹರದು ತೋರಿಸು ಉಳಿಗಡ್ಡಿ ಪರಿಯೇ
ಈ ಮಾತು ಅರಿಯೇ ಹುಲಿ ಬಣ್ಣಕ್ಕಾಗಿ ಮೈಸುಟ್ಟ ಕಂಡಂಗಾತು ನರಿಯೇ || ಜೀ ||

ಇಳುವ :
ನಿಮ್ಮ ಹೆಣ್ಣಿನ ಕುಲ ಕುಲಗೇಡಿಯೆ
ಅಂತಿ ಕುಶಲದ ಕುರ್ಪಿ ಹಿಡಿಯೆ
ಹುರಪಿಲೆ ನುಡಿಯಬೆಡ ತಡಿಯೆ
ನಮ ಕುರ್ಪಿಕಾವಿಗಾಗಿ ಹಿಡಿ ಒಡದು ಪುಡಿ ಪುಡಿಯೆ || ಜೀ ||

ಕಡದು ತಲವಾರ ಮಾಡದು ತುಕಡಿಯೆ
ಮುರಿದು ಆಗುವದು ಪುಡಿ ಪುಡಿಯೆ
ಬರೆ ವರಿ ಹಿಡಿದು ಕಡದರ ಅಂತಿನಿ ಭಪ್ಪರೆ ಗಡಿಯೆ || ಜೀ ||

ಏರು:
ಬೆಂಕಿ ಮೇಲೆ ಕಸಹಾಕು ಆಗಲಾರದಿದ್ದಿತೇನು ಉರಿಯೆ
ಹೆಚ್ಚಿನ ಕಿರಿಕಿರಿಯೇ ಹುಚ್ಚಿ ಹೆಚ್ಚ್ಯಾಂಗಾತು
ತಲವಾರಕಿನ್ನ ನಿಮ್ಮ ವರಿಯೆ ||       ಚೌಕ

ಮೊದಲು ದೇವರ ಕೂಡಿಸಿ ಹಿಂದಿಂದ ಕಟ್ಟತಾರ ಗುಡಿಯೆ
ಗುಡಿ ಮುಗಿಯನ ಸಿಡಿಯೇ ಮೊದಲು ದೇವರಿಗೆ ಕೈ
ಮುಗಿದು ನಂತರ ಮುಟ್ಟುವರು ನಡಿಯೇ || ಜೀ ||

ಜೀವ ದೇಹದ ಮೇಲಬಿದ್ದು ದೇಹದ ಗುಡಿಯೆ
ಆಗತಾದಂತಿ ಪುಡಿಯೆ
ದೇವರು ಸತ್ತಿಲ್ಲ ಹುಟ್ಟಿಯೇ ಯಾವತ್ತು ಒಡಿಯೇ || ಜೀ ||

ಹೆಂಗ ಹೆಂಗಸರು ಕೂಡಿಕೊಂಡು ತುಂಬಿಕೊಳ್ಳಿರಿ ನಿಮ್ಮ ಉಡಿಯೆ
ಮಲ್ಲಿಗಿ ಮುಡಿಯೇ ನಮ್ಮ ಗಂಡಸಿಲ್ಲದ ಒಂದರ ಕೂಸ ಹಡಿಯೆ || ಜೀ ||

ಇಳುವ :
ಹೆಣ್ಣ ಹೆಚ್ಚೆಂದು ಹೇಳತಿದಿ ಹಡಕ
ಮುಚಕೊಂಡ ಕೂತು ಗಂಡಿನ ಎಡಕ
ಕಂಡ ಕಂಡಂಗೆ ಹಾಯಕೊಂಡ ತೊಡಕ
ಬುಡಕ ಬಿದ್ದು ಮೇಲೆನಬಾರದು ಬಾಯಿ ಬಡಕ ||
ಜೋಲಿ ಕೊಡುದಿಲ್ಲ ತುಂಬಿದ ಕೊಡಕ
ಬಾಲಿ ಕೊಡ ಅನ್ನುವದು ದಡದಡಕ
ನೀ ನೆಟ್ಟಕ ಹಿಡಿಯೇ ಶಡಕ
ಕಲ್ಲು ಮುಳ್ಳು ತಗುಲಿ ನಿನ್ನ ಬಟ್ಟ ಆದವು ಒಡಒಡಕ || ಜೀ ||

ಏರ:
ಗ್ವಾಡಿ ಮ್ಯಾಲ ಉಚ್ಚಿ ಹೊಯ್ದ ಬರದ ತೋರಿಸಿರಿ ಸಿರಿಯೇ
ಹೆಚ್ಚಿನ ಕಿರಿ ಕಿರಿಯೇ ಹುಚ್ಚಿ ಹೆಚ್ಚ್ಯಾಂಗಾತು
ತಲವಾರಕಿನ್ನ ನಿಮ್ಮ ವರಿಯೇ || ಜೀ ||

ಅಂಬಿಗ್ಯಾನ ಗುರು ಯಾರೆಂದು ಕೇಳತಿದಿ ಜೀಗದ
ಹೇಳುವೆನು ತಗದ ಅಂಬಿಗ್ಯಾನ ಗುರು ಬಕಲಬ ರುಷಿ ನಗದ || ಜೀ ||

ಗಂಗಾನ ಮದಿಗಂಡ ಪರಶರ ರುಷಿಯಾದ ಮೊದಲಿನ ಬೇಧ
ಎರಡನೆ ಗಂಡ ಶಾಂತನು ಚಕ್ರವರ್ತಿ ಪ್ರಸಿದ್ಧ || ಜೀ ||

ಜೋಕುಮಾರನ ತಂದಿ ತೋಕು ಬಾಪಿತನಾದ ಸುಳ್ಳಲ್ಲ ಹೌದು
ಇಂದ್ರ ಜಿತನ ಹೆಂಡತಿ ಹೆಸರ ಹೇಳತಿನಿ ತೆಗದ || ಜೀ ||

ಇಳುವ :
ವಿಶ್ವಾಸು ಮಗ ರಾವಣ ರಾಮನ ಕೈಯಾಗಾತು ಅವನ ಮರಣ
ಯಾ ಬಾಗಿಲೆ ಹೋಗ್ಯಾದ ಪ್ರಾಣ ಈಗ ಹೇಳದಿದ್ರ ಮುಕಳಿಗಿ
ಮೂರ ಬಟ್ಟ ಸುಣ್ಣ || ಜೀ ||

ದಶಮುಖಗ ಹತ್ತು ತಲಿಪೂರ್ಣಯಾ ತಲಿ ಇದ್ದುವು ಯಾ ಯಾ ವರ್ಣ
ಅದರಾಗ ಯಾ ತಲಿ ಇತ್ತು ಸಣ್ಣ ನಿನಗೆ ಗೊತ್ತಿಲ್ಲದಿದ್ದರೆ
ನೋಡಿಕೋರೆ ರಾಮಾಯಣ || ಜೀ ||

ಧರೆಯೊಳು ಹಿರೇಸಾವಳಗಿ ಪಟ್ಟಣ ಅಲ್ಲಿ ಜಗದ್ಗುರು ಶಿವಯೋಗಿ ಠಾಣ
ಅಲ್ಲಿ ಪ್ರಸಾದ ಕೊಂಬುವ ಜಾಣ ಅದೇ ಪ್ರಸಾದ ತಿಂದು
ಮಹ್ಮದ ಆದ ನಿಪೂರ್ಣ || ಜೀ ||

ಏರ :
ಕವಿ ಮೋದಿನನ ಕಾಲಿಗಿ ಹಿಡಿಯೇ ಬಿಡತಾನ ನಿಮ್ಮ ಕೈ ಸೈರಿಯೇ
ಬಿಡು ಕಿರಿಕಿರಿಯೇ ಹುಚ್ಚಿ ಹೆಚ್ಯಾಂಗಾತು ತಲವಾರಕಿನ್ನನಿಮ್ಮ ವರಿಯೇ || ಜೀ ||     ಚೌಕ

 

೧೬.ಜವಾಬ್: ಹೆಚ್ಚಿಗಾದನಿಮ್ಮತಲವಾರಕ್ಕಿಂತನಮ್ಮವರಿಯೇ

ಹೆಣ್ಣು ಗಂಡಿನ ಜಗಳ ಎಂದೆಂದು ಬಿಚ್ಚಿಲ್ಲ ಹುರಿಯೋ
ಪಂಚಿತಿ ಹರಿಯೋ
ಖರೆ ಹೆಚ್ಚಿಗಾದ ನಿಮ್ಮ ತಲವಾರಕ್ಕಿಂತ ನಮ್ಮವರಿಯೋ

ನಮ್ಮವರಿ ಹಾಕಿದ ಮ್ಯಾಲ ತಲವಾರ ಎತ್ತಿ ನೀ ಕಡಿಯೋ ಭಪ್ಪರೆ ಗಡಿಯೋ
ನಮ್ಮ ಪರಿಯ ಇರುತಾನ ತಲವಾರಾಗೆದಪ್ಪ ಸಿರಿಯೋ ||

ನಮ್ಮ ಹೆಣ್ಣಿನ ಕುಲದ್ದ ಒಂದು ಕುಸಲಾದ ಕುರುಪಿ ಹಿಡಿಯೇ ಎಚ್ಚರಿಟ್ಟು ನಡಿಯೆ
ನಮ್ಮ ಹಿಡಿ ಒಡದ ಮ್ಯಾಲ ಕುರಪಿ ಬಾತಿಲಾಯ್ತು ನಡಿಯೋ || ಜೀ ||

ಇಳುವ:
ನಿಮ್ಮ ಗಂಡಿನ ಕುಲ ಬಹಳ ಖೋಡಿ
ನನ್ನಲ್ಲೆ ಹುಟ್ಟಿತೋ ತಿಳಿಗೇಡಿ
ಮಲಿ ಹಾಲ ಕುಡಿಸಿದ್ದೆ ನೋಡಿ
ನಾ ಹೆಚ್ಚ ಅಂತಿದಿ ಎಂಥ ನಾಚಿಗಿಗೇಡಿ || ಜೀ ||

ಮಲ ಮೂತ್ರ ಸೇವನ ಮಾಡಿ
ನೌಖಾಂಡ ರಗತದಾಗ ಮೂಡಿ
ಯಮ ರಾಡಿಯೊಳಗ ಉಳ್ಳಾಡಿ
ನನ ಮುಟ್ಟಿನಲ್ಲಿ ನೀ ಹುಟ್ಟಿ ಬಂದ್ಯೋ ತಿಳಿಗೇಡಿ || ಜೀ ||

ಏರು :
ಎಷ್ಟಂತ ಹೇಳಲಿ ಸ್ವಚ್ಛವಾಗಿ ತಿಳಿ ಮಾಡಿ ಹಾ ಇನ್ನರೆ ತಿಳಿಯೋ
ಖರೆ ಹೆಚ್ಚಿಗಾದೋ ನಿಮ್ಮ ತಲವಾರಕ್ಕಿಂತ ನಮ್ಮ ವರಿಯೇ || ಜೀ ||        ಚೌಕ ೧

ನಾ ಗುಡಿ ಅಂದ ನೀ ದೇವರಂತಿದಿ ಗಡಿಯೋ ಇದರಂತೆ ನಡಿಯೋ
ನಮ್ಮ ಗುಡಿಯೊಳಗೆ ನಿಮ್ಮ ದೇವರಂಜಿ ಆಡಗೀತು ನಡಿಯೋ ||

ನಿಮ್ಮ ದೇವರ ತಲಿಮ್ಯಾಲ ಬಿದ್ದಿತು ನಮ್ಮ ಗುಡಿಯೋ
ದೇವರೊಡೆದು ಪುಡಿ ಪುಡಿಯೇ
ನಿಮ್ಮ ದೇವರು ಸತ್ತಾದಂತ ನಿಂತು ಬೊಬ್ಬಿ ನೀ ಹೊಡಿಯೋ || ಜೀ ||

ನಿಮ್ಮ ದೇವರ ತಲಿಮ್ಯಾಲ ಗುಡಿ ಮುತ್ತಿನ ಕೊಡಿಯೋ
ಕಳಸ ಹಚ್ಚಿ ಇಳಿಯೋ
ಪೈಲೆ ಸಿಡಿಗಿ ನಮಸ್ಕಾರ ಮಾಡಿ ದೇರವ ಕಡಿ ನಡಿಯೋ || ಜೀ ||

ಇಳುವ:
ಗುಡಿಲಿಂದೆ ದೇವರಿಗಾಸರಾ
ಗಾಳಿ ಬಿಸಲ ಹತ್ತುವದಿಲ್ದೋ ಜರಾ
ಜರ ಇಲ್ಲವೋ ನಿನಗುಪಕಾರ
ಮಾಯಿ ನೀ ಜಗತೇಕ ಸಂರಕ್ಷಣ ಅಧಿಕಾರ || ಜೀ ||

ಮಾಯಿಗಿ ನಾಯಿ ಅಂತಿಯೋ ಚೋರ
ಮಾಯಿನೆ ನಿಮ್ಮ ದೇವರ
ನಿಮ್ಮ ದೇವರ ತಲಿಮ್ಯಾಲ ಪೂರ
ನಾಯಿ ಉಚ್ಚಿ ಹೊಯ್ದರ ನಿಮ ದೇವರಾಗ್ಯಾದೋ ಉದ್ಧಾರ || ಜೀ ||

ಏರು:
ಎಷ್ಟಂತ ಹೇಳಿ ಸ್ವಚ್ಛೇವಾಗಿ ನುಡಿಯೋ ಇನ್ನರೆ ತಿಳಿಯೋ
ಖರೆ ಹೆಚ್ಚಿಗಾದೋ ನಿಮ್ಮ ತಲವಾರಕ್ಕಿಂತ ನಮ್ಮ ವರಿಯೋ || ಜೀ ||       ಚೌಕ

ಉತ್ಪತ್ತಿ ಸ್ಥಿತಿ ಇವೆರಡು ನನ್ನಲ್ಲೆ ಮತಿಯೋ ಮಾಡಿಕೊಂಡ ಜತಿಯೋ
ಸಾಯುತಾನ ದುಡಿದು ನೀ ತಂದು ಹಾಕೋ ಮಂದ ಮತಿಯೋ || ಜೀ ||

ಭೇದ ಮಾಡಿ ವಷಿಷ್ಠಂದು ಏನು ಆಯಿತು ಗತಿಯೋ ಗೊತ್ತಿಲ್ಲೆನು ಸ್ಥಿತಿಯೋ
ಬ್ಯಾಡೂತಿ ಸಂಗಮಾಡಿ ಆಗಿ ಹ್ವಾದ ಫಜಿತಿಯೋ || ಜೀ ||

ನಮ್ಮ ವರಿಹ್ವಾದ ಮ್ಯಾಲ ತಲವಾರ ಬಾಳುವೆ ಯಾತಕ ಜಂಗು ನಟ್ಟಿತೋ
ದಂಗ ನಟ್ಟಿದೆಂದು ಜಂತ್ಯಾಗ ಸಿಗಸೇದಪ್ಪ ಮ್ಯಾಕೋ || ಜೀ ||

ಇಳುವ:
ಎಳಮೇಲೆರು ಹಳಿಪದ ಹಾಡಿ ಹೊಲಸೆಬಸಿರೆಪ್ಪತಲಿಗೂಡಿ
ಭೀಮಪ್ಪ ಶಿಷ್ಯ ಚಂಡ್ಹುಬ್ಬಿನ ಯಮನ್ಯಾ ಖೋಡಿ
ಇದರಂತೇಕ ಏನಿಲ್ಲಕವಡಿ
ಸುಳ್ಳೆ ಧಿಮಾಕ ಮಾಡತಾವರಿ ಮೂರಸೆಣಿ ಮೂರ ದಮಡಿ || ಜೀ ||

ಏರು :
ಮಲ್ಲಾ ಹಸನರ ಹಾಡೆಕ್ಕಿ ಸವಿ ಸಕ್ಕರಿ ಬೆಲ್ಲಾ
ತಿಂದು ನೋಡೋ ಮೊದಲಾ
ಖರೆ ಹೆಚ್ಚಿದಾಗ ನಿಮ್ಮ ತಲವಾರಕ್ಕಿಂತ ನಮ್ಮ ವರಿಯೋ || ಜೀ ||           ಚೌಕ