೧೩.ಸವಾಲ್: ಲಿಂಗವಂತಪುರುಷ

ಲಿಂಗವಂತ ಪುರುಷನ ರಂಗೇನು ಹೇಳಲಿ ನೋಡಿ
ದಂಗ ಬಡಿದು ಕುಳಿತೆ ಅವನ ಅಂಗಕ ಧರಿಸುವೆ ಬುಕಿಟ
ಜರದ ಅಂಗಿ ಮೇಲೆ ಹಾಕಿ ಜಾಕಿಟ
ಮುಕುಂದ್ರಾಯನಂಗ ಇವನ ಮುಕುಟ
ಅರಳಿಗಿಳಿಯಂಥ ಪುರುಷ ಇಂವ ಅರ್ಜುನಂಬಂಗ
ಕಾಣಸ್ತಾನ ಅಂಗುಲಿಯೊಳು ಸಿಗರೇಟ || ಜೀ ||

ದೀವಳಿಗಿ ಹಬ್ಬದ ದಿವಸ ಹೋಳಿಗಿ ಉಂಬುವದು ಬಿಟ್ಟು
ಮ್ಯಾಳಿಗಿ ಏರಿ ನೋಡಿದ್ರ ಗಾಳಿಗಿ ಹಾರತಿತ್ತು ಅವನ ರುಂಬಾಲ
ಆ ವ್ಯಾಳೆದೊಳು ನಾ ನಂಬಲಿಲ್ಲ
ನಾಳೆ ಹೋಗಬೇಕೆಂಬುದೆ ಹಂಬಲ
ಹನುಮಂತನಂತ ಪುರುಷ ಇಂವ ಹಾರಿಗೀರಿ
ಹೋದಾನೇನೋ ಮಾರುತಿ ಇದ್ದ ಮೊದಲ || ಜೀ ||

ಮರು ದಿವಸ ಮುಂಜಾನೆ ಮಾರ ಹೊತ್ತು ಏರಿ ನೋಡದರೊಳಗ
ಮಾರಿ ತಪ್ಪಿಸಿ ಹೋಗಿದನವ್ವ ಹಾರುತಿ ಎಂಬುದು ಹಡಗಿಲ
ಮೀರಿ ಒಲ್ಲಂತ ಕೂತಾನ ಶಿವಕೂಲ
ಗಳ್ಯಾ ಜಾರಿ ಬೀಳ ಬಿದ್ದಾಂಗಾತು ಹೊಲ
ಬಹಳ ದಿವಸ ಆಯಿತು ಬಾಲಿ ಬಾಯಿ ತೆರೆದು
ಕೇಳತಿನಿ ಬರತೀನಿ ಅಂತ ಕಾಯ ಅನುವಲ್ಲ || ಜೀ ||

ಚಾಲ:
ಇವನ ಜೋಕ ನೋಡಿ ನಾ ರೋಕಡ ಲಾಕ ರೂಪಾಯಿ
ಕೊಡತೀನಂದ್ರ ಯಾಕ ವಲ್ಲಂತಾನ ಅಂಥಾ ಚೂಕ
ಏನ ಮಾಡ್ಯಾನಿಂವ ಲೋಕದೊಳಗಿಲ್ಲೆನು ದೊರಿಯೆ || ಜೀ ||

ಇವನ ಸೂರತ ನೋಡಿ ನಾ ಹೈರತಾಗಿ ಮನಬೆರೆತು
ಕುಂತಿನಿ ಮಹಾ ಮೇರು ಪರ್ವತದೊಳಿರುವಂತ ಮಂದರ ಗಿರಿಯೇ || ಜೀ ||

ಇವನ ಸೂರತ್ತೇನು ಅಸಲ ಶುದ್ಧ ಸೂರ್ಯನ ಬಿಸಲ
ಇಂವ ಯಾವೂರಿನ ವಕೀಲ ಏನು ಗೋಕುಲದೊಳಗಿನ ಮುರಹರಿಯೇ || ಜೀ ||

ಏರ :
ಹಂಬಲಿಸಿ ಮನದೊಳು ನಂಬಿಗಿಟ್ಟು ಎನ್ನ ಮೇಲೆ
ಚುಂಬಿಸುತ ಮನದೊಳು ಗುಂಭ ಜ್ಞಾನದ
ಅಂಗಡಿಯೊಳು ತುಂಬಿ ಮಾಡಣ್ಣ ಮಾರಾಟ ಅಲ್ಲಿ ನಂಬಿಗತ್ತುವದು ಅಜಕಟ
ಇದು ಬಲ್ಲಂವಗ ಬಹು ರುಚಿಕಟ
ಅರಗಿಳಿಯಂಥ ಪುರುಷ ಇಂವ ಅರ್ಜುನಂಬಂಗ
ಕಾಣಸ್ತಾನ ಅಂಗುಲಿಯೊಳು ಸಿಗರೇಟ || ಜೀ || ಚೌಕ

ಎಂಟು ತಿಂಗಳಾಯ್ತು ನಿನಗ ಗಂಟು ಬಿದ್ದು
ಗರತಿ ಹೆಣ್ಣು ಸಾರ್ಥಕವಾಗಲೆಂದು ಪ್ರೀತಿ ಇಟ್ಟು
ಮನದೊಳು ಬೆಳಗಲೇನು ಕನಕದಾರುತಿ
ಜಯಮಂಗಲವೆಂದು ಗಣ ಮೂರುತಿ
ಹೀಗೆಂದು ಸಾರುವೆನು ನಿನ್ನ ಸ್ತುತಿ
ಅಷ್ಟಮದ ಆಳದಂತ ಶ್ರೇಷ್ಠ ಬ್ರಹ್ಮನ
ಸತಿ ಸ್ಪಷ್ಟನಾ ಹೀನಿ ಸರಸ್ವತಿ || ಜೀ ||

ಭರತ ಮಾಡಿ ನಾನು ಬಹಳೊಂದು ಹೇಳಿದ್ರ
ನೀ ಯಾರಂತ ಕೇಳತಿ ಖರೆ
ಮಾಡತೀನಿ ನಿನ್ನ ಸೋಬತಿ
ನಾ ಪೋರಿ ಹೀನಿ ನಾರಿ ರಂಭಾವತಿ
ಪಾಪ ಪರಿಹಾರ ಮಾಡುವಂತ ಪಾರ್ವತಿ
ಅದ್ರ ತದ್ರ ಅಲ್ಲ ಇದು ಚಿತ್ರ ಮಾಡಿ ಹೇಳುವೆನು
ರುದ್ರ ಮುನಿ ಬರೆದ ಕಾಲಗತಿ || ಜೀ ||

ಹಸದು ಬಂದವರಿಗೆ ಹಾರಿಸಿ ಒಗಿತಾನ ಇವನ
ಶೌರ್ಯ ಏನು ಹೇಳಲಿ
ವೀರಶೂರ ಎಂದು ತಿಳಿಯಲಿ
ಹ್ಯಾಂಗ ಮೀರಿ ನಡೀತವ್ವ ಇವನ ಕಥಿ
ಎಳ್ಳ ಕಾಳಷ್ಟು ಇಲ್ಲ ಇಂವಗ ಎಥಿ
ಶಿವ ಸಾಂಬ ಇದ್ದಂಗ ಹಾನ ಸದ್ಗತಿ
ವೇದಶಾಸ್ತ್ರ ಓದಿಕೊಂಡು ನಾದ ಬಿಂದು ನೆಲೆ ತಿಳಿದು
ನಾರದಾಗಿಲ್ಲೇನು ಸಾರಥಿ || ಜೀ ||

ಚಾಲ:
ಸ್ವರ್ಗ ಮೃತ್ಯು ಪಾತಾಳ ನಿನ್ನ ಕೀರ್ತಿ ಸಾರುವದು
ಹೀಂಗ ವಾರ್ತೆ ಕೇಳಿ ಬಂದಿನಿ ನಾನು ನೆರೆತು ಕೂತ
ಹೆಣ್ಣು ಬಾಲಿ ತುರ್ತ ಬಾರೋ ನೀ ಮೊದಲೆ || ಜೀ ||

ನಿನ್ನ ಪಿಚ್ಯಾಕ ಬಂದು ಬಿದ್ದಿನೆಂದ್ರ ಲುಚ್ಚಾ ಸ್ತ್ರೀಯಳು
ಅನಬೇಡ ಎನಗ ವರಿಗಿ ಹಚ್ಚಿ ನೋಡಿದರ
ಅಚ್ಚಗರತಿ ಅನಿಸುವೆನು ಹೆಚ್ಚಿ ಕಾಮನ ಜ್ವಾಲಿ ಮೆಚ್ಚಿ ಬಂದಿನಿ ಅವಸರಲೆ || ಜೀ ||

ಅರಸ ನಿನ್ನ ಮೇಲೆ ನಾನು ಮನಸ ಮಾಡಿ ಸಾಯಿತಿನಿ
ಕನಸಿನ ಪರಿಯಂತೆ ದೇಹ ದಿನಸಿನಲಿಂದ ಬಾಯಿ
ತೆರೆದು ಹಲಸಿನ ಹಗ್ಗದಲಿ ನಾ ಹಾಕೋತಿನಿ ಉರಲೆ || ಜೀ ||

ಸುಂದ್ರ ನಿನ್ನ ಮುಖ ನೋಡಿ ಚಂದ್ರ ನಾಚಿ ಹೋದ ಓಡಿ
ಇಂದ್ರ ಅಲ್ಲ ನಿನ್ನ ಜೋಡಿ ಸುಂದ್ರಿ ಬಂದಿನಿ ಮಂದಿರಲೆ
ನಿನ್ನ ಜೋಡಿ ದಕ್ಷಬ್ರಹ್ಮ ಅಲ್ಲ ಲಕ್ಷ್ಮಣರಾಮ ಪಾಂಡವ
ರೊಳಗಿನ ಭೀಮ ದೇಹಕ ಸ್ವಯಂ ಬ್ರಹ್ಮ ನೀನೆ ಬಾರೋ ಅರತಿಲೆ || ಜೀ ||

ಕೋಗಿಲ ಮಹಾರಾಯ ನೀನು ಕೂಗ ಹೊಡಿದು
ಹೋಗುವ ಮುಂದ ಕಾಗಿಯಂಥ ಹೆಣ್ಣು ಬಾಲಿ
ಬಾಗಿ ಪಾದಕ ಬಿದ್ರ ಸಾಗಿ ಮುಂದಕ ಹೋಗ ಬೇಡ
ಆದರಾಗಲಿ ಜನಧರಲೇ || ಜೀ ||

ಕೂಡಪಲ್ಲ:
ಮನ ಎಂಬೋ ಮಂಚ ಮಾಡಿ
ಬುದ್ದಿ ಎಂಬೋ ಗಾದಿ ಹಾಸಿ
ಸುಜ್ಞಾನ ಎಂಬೋ ಸಮೆ ಹಚ್ಚಿ
ಕಾಮ ಕ್ರೋಧ ಕಾವಲಗಾರ ಕರಿಲಿಕ ಬಂದಿನಿ ಕಣಗೆಟ್ಟ
ನೀ ವಲ್ಲಂತ ಮಾಡಬೇಡ ಹಟ
ಹುಕುಮ ಹೇಳಿ ಆಡಿದಂಗ ಇಸ್ಪಿಟ
ಅರಗಿಳಿಯಂಥ ಪುರುಷ ಇಂವ ಅರ್ಜುಂಬಂಗ
ಕಾಣಸ್ತಾನ ಅಂಗುಲಿಯೊಳು ಸಿಗರೇಟ || ಜೀ ||           ಚೌಕ

ಎಂಟು ಮಂದಿ ನೆಂಟರೊಳು ಭಂಟಾಗಿ ತಿರಗಿ
ನಾನು ಒಂಟಿ ಅನಿಸಿಕೊಂಡಿಲ್ಲವೆಂದು
ಕುಂಟಲಗಿತ್ತಿದಲ್ಲ ವ್ಯವಹಾರ
ಮತ್ತು ಆರಮಂದಿ ಹಾರ ಧೀರರ
ಮೂರ ಮಂದಿ ಮೇಲೆ ನನಗ ಮತ್ಯಾರ
ಒಂಬತ್ತು ಮಂದಿ ಮೇಲೆ ನಂಬಿಗಿಟ್ಟು
ನಡದಿನಿ ತುಂಬಿ ನಡದಂಗ ಸಾಗರ || ಜೀ ||

ಮುನ್ನೂರದರವತ್ತ ಮಂದಿ ಬೆನ್ನಿಗಿ ಹರ ಎನಗ
ನ್ಯೂನ್ಯ ಬೀಳಲಾರದಂತೆ ದಿನ್ನಾ ಇಡತಾರ ನೆದರ
ಎನ್ನ ಪೂರ್ವಿ ಪುಣ್ಯ ಐತಿ ಜೋರದಾರ
ಬಿನ್ನ ಆದ ಮೇಲೆ ಬಿಟ್ಟು ಹೋಗತಾರ
ಬತ್ತೀಸ ಮಂದಿಗೂಡ ಅತ್ಯಂತ ಪ್ರೇಮದಿಂದ
ನಿತ್ಯ ಹಾಕತೀನಿ ಆಹಾರ ನೀರ || ಜೀ ||

ಬಾದ್ದೂರ ಕೇಳು ನನ್ನ ಮಾತು ಹಾದರಗಿತ್ತಿ ಅಲ್ಲ ನಾನು
ಸೋದರ ಮಾವ ನಿನಗ ಸಾಧಿಸಿ ಹಿಡದಿನಿ ಪದರ
ನೀ ನಿರ್ಧಾರ ಎತ್ತಿ ನೋಡು ನೆದರ
ಮಹಾದೇವನಾಣಿ ಮುಂದಕ ಹೋದರ
ಪಾದ ಮುಟ್ಟ ಪೇಳುವೆನು ವಾದ ವಿವಾದ ಬೇಡ
ಗಾದಿ ಮಾತು ಇದು ಚದರ || ಜೀ ||

ಇಳುವ:
ಇವರು ಇಷ್ಟು ಮಂದಿ ಮೇಲೆ ನೀ ಚಡತ್ತಾಗಿ ಬಂದರ
ಎನ್ನ ಬಡತಾನ ಹಿಂಗುವದು ಇಲ್ದರ ಕಡಿತಾನ ಇರುವದು ಇದೆ ಅವಸರವೆ || ಜೀ ||

ನಿನ್ನ ಹಿಡಿತ್ತೇನು ಹೇಳಲಿ ಬರತಾನೆಂಬುವದು ತಿಳಿದಿದ್ದೆ
ಬಿಡತಾನೆಂಬುದು ನನಗಿಲ್ಲ ಎಚ್ಚರವೇ || ಜೀ ||

ನೀ ಬಂದರೆ ಒಳಿತಾಯಿತು ಬಾರದಿದ್ರ ಸತ್ತು ಹೋಗತೀನಿ
ಈ ಪೃಥ್ವಿ ಯೊಳು ನೀನೆ ಪರಂಜ್ಯೋತಿ ಪರಬ್ರಹ್ಮನೆಂದು
ನಾ ಮನದೊಳು ಮಾಡಿದ ವಿಚಾರವೆ || ಜೀ ||

ಆ ಸೋಮಶೇಖರ ಹೇಳಿದ ಮಾತು ಹಿಂಗಾದ್ರ ಬರುವದಲಿಲ್ಲ
ರಂಗವಿಲ್ಲದ ಅಂಗಿ ತಂದ್ರ ಸಂಗ ಮಾಡತೀನಿ ಸಂಸಾರವೆ
ಆ ರಂಗವಿಲ್ಲದ ಅಂಗಿಗಾಗಿ ಕೊರಳ್ಳಿ ಇಂಗಳಗಿ ಕಲಬುರ್ಗಿ
ಅಂಬಿದ್ದು ಇಂದಿಗಾತು ಮುಖ ಎರವೆ | .ಜೀ ||

ಪಟ್ಟ ಬಾಯಿ ಪಟ್ಟಣ ಶೆರಬಿ ಉಡು ಹುಡಿಯುವ
ಉಡಚಣ ಲಕ್ಕಿ ಉದ್ದು ಹುರಿಯುವ ಉದ್ರಿ
ಸೂಳೆರೆಲ್ಲರೂ ಜಿದ್ದು ಹಾಕತಾರ ಇವರು
ತಂದು ಕೊಡತಿನೆಂದು ಬಂದು ಬಾಗಿ ಹಿಡಿದಾರು ಅವನ ಚರವೆ || ಜೀ ||

ಏರ :
ಬ್ರಂಗ ಹಿರೇ ಸಾವಳಗಿಯೊಳು ಶಿವಲಿಂಗನ ಸದ್ಭಕ್ತರು
ಶೃಂಗಾರ ದವಲಾ ಮೋದಿನ ಕವಿತ ಅಂಗುರ ಹಣ್ಣಿನಂತೆ ರುಚಿಕಟ
ಹಾಡುವ ಹೆಂಗೆಳಿಯರು ಬಹು ಹಲಕಟ
ಮಹ್ಮದನ ಅಂಗಿನೊಳು ಜಂಗಿನ ಮಠ
ಅರಗಿಳಿಯಂಥ ಪುರುಷ ಇಂವ ಅರ್ಜುನಂಬಂಗ
ಕಾಣಸ್ತಾನ ಅಂಗುಲಿಯೊಳು ಸಿಗರೇಟ || ಜೀ ||           ಚೌಕ

 

೧೪. ಜವಾಬ್: ಸಕ್ರಿಉಂಡಿಯಂಥಹೆಣ್ಣು

ಸಕ್ರಿ ಉಂಡಿಯಂಥ ಹೆಣ್ಣ ಮಕ್ರ ಹರಿಯಾದ ಪೋರಿ
ಶುಕ್ರವಾರ ಮಧ್ಯಾಹ್ನದಾಗ ನಕ್ರಿ ಆಡಿ ನಕ್ಕಾಳಪ್ಪ ಚಿಕ್ಕ ಕೋಮಲಿ
ಹಿಕ್ಕಿ ಹೀರಿ ಹೆಣಲ ಹಾಕಿದಾಳ ತೆಲಿ
ಇಕಿನ ತೆಕ್ಕಿಗಿ ಹೋಗಿ ಎಂದ ಬೀಳಲಿ
ತಕ್ಕಡಿಗಚ್ಚಿ ನಿನ್ನ ತೂಕ ನಿಕ್ಕಿ ಬಂಗಾರ ಕೊಡತ
ಪಕ್ಕಾ ಹೇಳ ಪೋರಿ ನಿನ್ನ ಬೆಲಿ || ಜೀ ||

ಕಬ್ಬರ ಕರಜಗಿ ಸೀರಿಯುಟ್ಟು ಹುಬ್ಬಳ್ಳಿ ಕುಪ್ಪಾಸ ತೊಟ್ಟು
ಹುಬ್ಬಿನ ಮೇಲೆ ಹಣಚಿ – ಬಟ್ಟು ಜುಬ್ಬಾ ಹಾರಸಕೋತ
ಹೊಂಟಾಳಪ್ಪ ಜಿಬ್ಬಿ ಮೇಲೆ ಗಂಟಿ ಸರಪಳಿ
ಚಾಂದಿ ಗುಬ್ಬಿ ಹೊಟ್ಟಿ ಕಾಲದೊಳು ರುಳಿ
ಕೈಯಾಗ ಡಬ್ಬಲ್ ಬಿಲ್ವಾರ ಊಂಚಿ ಬಳಿ
ರಬ್ಬಲ್ ಚಂಡಿನಂತ ಕುಚ ಉಬ್ಬಿ ಮೇಲೆ
ಬಂದಾವಪ್ಪ ಟಿಬ್ಬಿ ಬಿಚ್ಚಿ ಕುಬಸಿನ ಎಳಿ || ಜೀ ||

ವಾರಿಜಾಕ್ಷಿ ನಿನ್ನ ಪ್ರಾಯ ಪಾರಿಜಾತ ಪುಷ್ಪದಂತೆ
ತೋರಿ ಅಡಗುವ ಚಂದ್ರನಂಗ ಮಾರಿ ತರಿ ಮುದರವಾಣಿ
ನೀರಿಗಾರೆ ಬರತಿನೆಂದು ಹೇಳಿ
ನಮ್ಮ ಕೇರಿ ಮುಂದೆ ದಿನಾ ಬಂದು ಸುಳಿ
ನಿನ್ನ ಮಾರಿ ನೋಡಿ ಹೋದಾ ಮುಂಜಾಳಿ
ಪೋರಿ ನಿನ್ನ ಪುಣ್ಯದಿಂದ ಊರಿಗಿ ಹೋದಲ್ಲಿ
ಗಾರಿಗಿ ಉಂಡೇನು ಖೋಡ ಬಳಿ || ಜೀ ||

ಪಾತರಿಗಿತ್ತಿಯಂಥ ಹೆಣ್ಣ ಸೂತ್ರದ ಗೊಂಬಿ ಸುದ್ದಾ ಮುದ್ದಾ
ನೇತ್ರ ತೆರದ ನೋಡಿ ಎನಗಾ ಬಾಹತ್ರಿ ಹಜಾರ ನಾಡಿಸತ್ತು
ದೋತರ ಮ್ಯಾಲ ಬಿದ್ದಾಂಗಾತು ಖಲಿ
ಸೋಮಿತ್ರಿ ನಿನ್ನ ಮನಸಿಗಿ ತಿಳಿ
ಒಂದು ರಾತ್ರಿಯರೆ ಬಂದ ಹೊತ್ತಗಳಿ
ಉತ್ರಿಮಳಿಹಂಗೆ ನನಗೆ ಖಾತ್ರಿ ಹೇಳಿ ಬಾರದಿದ್ದರ
ಯಾತರ ಮೇಲೆ ಮಾಡಬೇಕು ಬೆಳಿ || ಜೀ ||

ದುಮಾಲಿ :
ಚಂದುಳ್ಳಿ ಚೆಲುವೆ ನೀ ಬಾರೆ
ಮಂದಿರಕ ಬಂದು ಮುಖ ತೋರೆ
ಕಂಡ ಈ ಕಣ್ಣೊಳಗೆ ಭವರೆ
ನಿಂದೆಷ್ಟು ಮಾಡಲಿ ವರ್ಣಿಕಿ ಆಯ್ತು ಮಿತಿ ಮೀರೆ
ಹಿಂದಿನ ಹೆಣತಿಯ ಹೊಸ ಸೀರೆ
ನಾ ಕುಡತಿನಿ ಎಮ್ಮಿ ಮಾರೆ

ಇಳುವ:
ನಾವು ಅಕ್ಕ ತಂಗಿಯರು ಆರು ಮಂದಿ ಚಿಕ್ಕಂದಿನ ಹಿಡಿದು
ತಾಯಿ ತಂದಿ ಕಾಕಿ ಆಯಿ ಅಜ್ಜಿ ಪಣಜಾ ನಿಕ್ಕಿ ಪತಿವೃತಾ ನಮ್ಮ ಥಳಿಯೇ || ಜೀ ||

ನೀನು ಸುಕ್ಕಾ ತೆಲಿಗೇರಿ ಬಂದು ದಕ್ಕಿ ಕೇಳೆನಂತಿ
ಲಕ್ಕಿ ಪೋಕಾ ತರಸಿ ನಿನ್ನ ಕೊಕ್ಕಿ ಸೈಲ ಮಾಡಸೇನು ತಿಳಿಯೇ
ಇನ್ನಾ ಧಕ್ಕಿ ತಿಂದಿ ಸುಮ್ಮನಿರೋ ಸೊಕ್ಕಿನ ಇಲಿ ಬೆಕ್ಕಿಗಿ ಅಂಜಿ
ಹಿಕ್ಕಿ ಇಟ್ಟಂಗ ಬಿಕ್ಕಿ ಬಿಕ್ಕಿ ಅತ್ತಿ ಉರಿ ಛಳಿಯೇ || ಜೀ ||

ಮಲ ಮೂತ್ರ ಮಾಯಾಂಗಿನಿ ಅಲ್ಲ ಕುಲಪುತ್ರ ಇದ್ದಿನಿ ಸೇಲ
ಜಾಲ ಪತ್ರಿ ಒಳಗಿನ ಹಾಲ ಬೇಲ ಪತ್ರಿ ಇದ್ದಂಗ ಶಿವನ ಬಳಿಯೇ
ಈ ಮುಲ್ಕಿಗೆ ದೈವಾನರು ಹಲ್ಕಾ ಪ್ರಕರಣ ನಾಲ್ಕು ಮಂದಿಕಿನ್ನ
ನಾ ಸಣ್ಣಾಕಿ ಮಲಮೂತ್ರಾ ಪಿಂಜಾರದಾನ ಗಿಳಿಯೇ || ಜೀ ||

ಈ ಹಲಕಾಬುದ್ದಿ ಹಾದರತಾನ ಹೊಲಿ ಕಬ್ಬಲಗೇರಿಗಿ ಆದರ
ಹೀನ ಸೂಲಕ ಬಿದ್ದು ಕೊಟ್ಟಾರ ಪ್ರಾಣ ಜೇಲಖಾನ್ಯಾಗ
ಬಹಳ ಮಂದಿ ಕೈ ಕಾಲದೊಳು ಸಾಕಳಿಯೇ || ಜೀ ||

ಅಂಥ ಮಂದ ಮತಿ ಮನಸೇಳಲ್ಲ ಚಿಂದಿ ಮೈ
ಮೇಲಿನ ಕೋರಿ ನಿಂದೆ ಅಂದರ ಹ್ಯಾಂಗರೆ ಬಂದು
ದಿನಾ ಬಂದಾಳಂಥ ಆಗಬ್ಯಾಡ ಹುಳಿಯೇ || ಜೀ ||

ನೀನು ಒಂದೇ ಹೆಣತಿಗಿ ಹುಟ್ಟಾ ಕಾಣಿಲ್ಲ ಹಿಂದಿನ
ಹೆಣತಿ ಹೊಸ ಸೀರಿ ತಂದು ಮಾರಿ ಕುಡತಾ
ಅಂತ ಅಂದು ಕೆಡಬ್ಯಾಡ ಅವಕಳಿಯೇ || ಜೀ ||

ಪರ ಮಂದಿ ಹೆಂಡರ ರೂಪಕ ಮೆಚ್ಚಿ
ಮುಂದಿನ ಜನ್ಮಕ ಹಂದಿಯಾಗಿ ತಿಂದಿ
ಬಿಳಬ್ಯಾಡ ನರಕದ ಹೊಳಿಯೇ || ಜೀ ||

ಏರ :
ಜಾಣ ಕೇಳೋ ಎನ್ನ ಸತ್ಯ ವಾಲಿ ಸುಗ್ರೀವ
ತಮ್ಮನ ರಾಣಿಗೆ ವಯಿದಾ
ಒಂದೇ ಬಾಣಿಲಿ ಹೊಡದ ರಾಮಸ್ವಾಮಿಯು
ಪ್ರಾಣ ತಂಗೊಂಡಿದಾಕ್ಷಣ
ರಾಮಪುರಾಣ ಓದಲದೆ ಕೇಳಿ ಒಲಿಯಾಂವ
ಮುಕ್ತಿಗಾಣೆನೋ ಹೇಳಿ
ಹತ್ತಿ ಬಿಡಿಸುವ ಹೆಂಗಸರ ಮಾತಾ ಹೊತ್ತ
ಮುಣಗಿದ ಕತ್ತಲಿಯಂತೆ
ಮುತ್ಯಾ ಮಾವ ಭಾವ ಮೈದುನ ಅತ್ತಿ ಮಾವ ಅತ್ತಿಗಿ
ಗಂಡ ಸತ್ತರ ಬರೋದಿಲ್ಲ ಸೋಬತಿ
ಗೊತ್ತಗೇಡಿ ಹೇಳಬೇಡ ಹಳಿಕಥಿ || ಜೀ ||

ಒಂದಿನಕ ರೂಪಾಯಿ ಸಾವಿರೆ
ನಿಂದಾಗಿರಲಿ ನನ್ನ ಮೈ ಮೇಲಿನ ಹಳಿಕೋರೆ
ನನ್ನ ಮಾತ ಕೇಳ ಏ ಸಸೂರೆ
ಅಣು ಮಾತೃ ಇಡೋದಿಲ್ಲ ಕಸೂರೆ
ಮನಿ ಹೊಲ ಮಾಡದು ನಿನ್ನ ಹೆಸರೆ
ನೀ ಬರಲಾದರ ನಾ ಹಾಕತೀನಿ ಉಸುರೆ || ಜೀ ||

ಬಿಟ್ಟ ಮಾಡಬ್ಯಾಡ ಜಾಣಿ ದೃಷ್ಠಿಯಿಟ್ಟು ನೋಡ ಸ್ವಲ್ಪ
ಹುಟ್ಟಿದ ಹನ್ನೊಂದ ವರ್ಷದೊಳು ಇಷ್ಟ ಇದ್ದಾಗ ಇಬ್ಬರು ಕೂಡಿ
ಆಟಡ ಆಡಿಲ್ಲೆನು ಕಟ್ಟಿ ಘರಕೂಲಿ
ಗಗ್ಗರ ಗಟ್ಟಿಯ ಮೇಲೆ ಸಣ್ಣ ವಲಿ
ರೊಟ್ಟಿ ಮಾಡಿ ಆಡಿಲ್ಲೇನೆ ಕುಂಬಳ ಎಲಿ || ಜೀ ||

ಛೀ ಹೋಗೋ ಯಾತರ ಮಾತ ಯಾವತ್ತು ಯನ್ನ ಮ್ಯಾಲದ್ಯಾಸ
ಎನ್ನ ಮೇಲೆ ನೀನು ಭಾವಿಸಿ ಮಾಡಿದಿ ಮನಸ
ಜೀವ ಹೊಡಿಸೋ ಪರ ಹೆಣ್ಣಿಗಿ ಯಾಂವ ಇದ್ದಿ ಹೇಳೋ ಆಯಕಾರ
ಚಿತ್ತಿ ಸುಮನ ನಮ್ಮಾವ ಸಾಹುಕಾರ
ಬಾಜಿರಾಯ ಬಾವ ಮೈದುನ ದೇರು
ದೇವರಂತ ನನ್ನ ಗಂಡ ದೇವ ಲೋಕದಾಗ ಮನಿ
ದೇವಿ ಹಂಗ ನನ್ನ ಕಾರಬಾರ || ಜೀ ||

ದತ್ತಗೇಡಿ ಬೆನ್ನ ಹತ್ತಿ ಬರಬೇಡ ಇನ್ನಾ ಹೊತ್ತಿದ ನುಚ್ಚಹಚ್ಚಿ
ನೆತ್ತಿ ಬಡಿದು ಸುಮ್ಮನಿರು ಮತ್ತ ಮಾಡಬೇಡ ತಕರಾರ
ನನಗೆ ಎತ್ತಿ ಕೊಡತಿನಂತಿ ಎಮ್ಮಿಕರ
ನಿಮ್ಮುತ್ಯಾ ಮಾರಿಲ್ಲೆನೆ ಬುಟ್ಟಿಮರ
ಸತ್ಯ ಅಂಯಿಸಿ ಸಾಲದಾಗ ಬಿತ್ತ ಬೀಜಿಗಾಗಿ ನಮ್ಮಲ್ಲಿ
ಒತ್ತಿ ಇಟ್ಟಿಲ್ಲೆನೆ ಉಡದಾರ || ಜೀ ||

ಕಾಡಗಲ್ಲಿನಂಥ ಕೆಟ್ಟ ಜೋಡಿ ನನ್ನಂತಕಿನ ಮೇಲ ನೋಡಿ
ಮೋಹಿನಿ ಬಿದ್ದು ಮನಸಾ ಮಾಡಿ ಮಿಡಕಿದರಾ
ಏನು ಬಂತು ಕ್ವಾಡಗನ ಕೊರಳಾಗ ಹವಳ ಸರಾ
ಕಟ್ಟ ಬ್ಯಾಡಂದಾರ ಹಿರಿಯರ
ಕೆಟ್ಟ ಮೂಢ ನಿನಗ ಬುದ್ಧಿಯಿಲ್ಲ ಜರ
ನಾಡಗೌಡನ ಮಗಳು ನಾನು ಜೋಡಿ ಚಂದ
ಬೇಡಿ ಬಂದೇನೋ ಕೂಡಿಸಿ ಕೊಟ್ಟಾನೇನು ಈಶ್ವರ || ಜೀ ||

ಸಂಬ ಸುತ್ತಿ ಸುತ್ತಿ ಹೋದ ಡಂಬತಿ
ಕತ್ತಿ ಕಾಯದಾ ಅಕಿನ ಮನ್ಯಾಗ ಮತ್ತ ಕೇಳೋ
ಮಹಾನಂದಿ ಮುಕ್ತಿ ಹೊಂದಿಲ್ಲೆನ ಪಾತರಗಿತ್ತಿ || ಜೀ ||

ಆಯಾಸ ಬಿಡಬ್ಯಾಡ ಖಾಲಿ ಕಾಯಾ ವಾಚಾ ಮನಸಾ ಪೂರ್ವಕ
ಸನಿಯಾಕ ಬಾ ಬೇಗಿ ಮನಿ ದೇವತಿ
ಇದಕೆ ಪಾಯಾ ಹಾಕಿದವರ ರತಿಪತಿ
ಪೈಲೆ ಮಾಯಾ ಮೋಹ ಮಾಡಿ ಇಟ್ಟ ಜತಿ
ತಾಯಿ ಮಗನಿಗಾ ಕಂಡು ವಾಯಿದೆ ಇಲ್ಲದೆ
ಮಾಡಿಕೊಂಡು ಮಾಯಿಗಿ ಮದವಿ ಹೆಂಡತಿ || ಜೀ ||

ಇಷ್ಟು ಕೇಳಿ ನಾರಿ ಮನಕ ನಟ್ಟು ಬರತಿನಂಥ ಭಾಷೆ ಕೊಟ್ಟಾಳ
ಗೆಳಿಯಾಗ ಏಕ ನಿ,ಠಿಲಿ ಮಾಡಿ ಅವನ ಸ್ತುತಿ
ಜ್ಞಾನ ದೃಷ್ಠಿಲಿ ನೋಡಿ ನೆದರ ಎತ್ತಿ
ಅಕಿನ ಪಟ್ಟಾ ಕಟ್ಟಿದಾರೋ ವಿದ್ವತಿ
ಸುಟ್ಟು ಸೋರಂಗ ಭೋಗ ಕೊಟ್ಟಾಳ ಗಳಿಯಾಗ
ಸ್ವಲ್ಪ ಬಟ್ಟಾ ಹಚಗೋಲಿಲ್ಲ ಭಾಗವತಿ || ಜೀ ||

ಇಳುವ:
ಭೂಮಿ ಬಿಟ್ಟ ಅಂತರಲೆ ಮಹಾಲ ಕಟ್ಟಿದ ಗೆಳತಿಗೆ
ಹಸನ ಇಟ್ಟಾನಪ್ಪ ಚೌಕಾಸ್ತನವೆ
ಅಕಿನ ಮುಟ್ಟಲಾರದೆ ಭೋಗಕೊಟ್ಟು ಬಿಟ್ಟಂಥವ
ಗೆಳಿಯಾಗ ತುಪ್ಪಾ ರೊಟ್ಟಿ ಮಾಡಿ ನೀಡಿ ತನ್ನ ಮನವೆ ||
ಉಂಡು ಉಟ್ಟು ಉಪವಾಸ ಹುಟ್ಟಾ ಸನ್ಯಾಸ
ಗೆಳಿಯಾಗ ಅಷ್ಟಾಂಗ ಅಷ್ಟವರಣ ತನವೆ || ಜೀ ||

ಗುಪ್ತಾ ಮಾತೋ ಎಂಬೋ ಇಂದಿಕರಣಿ ತೂತದಲ್ಲಿ ಭೇಟಿ
ಮನಸಿನ ಹೇತು ಗರ್ಭ ಗಟ್ಟಿ ಗೆಳತಿ ನೇತ್ರದಲ್ಲಿ ಪಾತ್ರಪುಟ್ಟಿ
ಸೂತ್ರದಾರ ಬಾಳಲೋಚನವೇ || ಜೀ ||

ಜನ್ಮ ಜಾತಕ ತಗಿಸಿದರೆ ಕೂಸಿನ ಘಾತಕ ಹೊಂಡಲ್ದೆ
ಹೋಯಿತು ಘಾತಕ ಇಲ್ಲದ ಪಿಂಡ ಸಾ ಸಾ ತಂದರವೇ
ಸತ್ತ ಧಾತು ಇಲ್ಲದೆ ದುರವಾಸನವೇ || ಜೀ ||

ಗುರುನಾಥ ಅಂದರ ಆತನ ಗಂಡ ಭೂತಗಣ
ತಾತಜ ಜ್ಯೋತಿರ್ಲಿಂಗ ಜಂಗಮ ಗುಣವೇ
ಆ ಸುಗುಣಿ ಹೊಟ್ಟಿಲಿ ಹುಟ್ಟಿ ಮುಂದೆ ಅಗ್ನಿ ತೇಜಸ್ವಿ ಕಂಡ
ಮಗಳಿಗಾಗಿ ಮಗಾ ಆದ ಮಗಳ ಗಂಡಗಾದ ಭಾವ ಮೈದುನವೇ || ಜೀ ||

ಸ್ವಲ್ಪ ವೈರತ್ವ ಇಲ್ದಿದ್ರ ವೈರಿ ಹೆಣತಿ ಗಂಡಾಗಿ ವೈರಿ ಮಗನಿಗಿ
ಮಗಳ ಕೊಟ್ಟು ಮಾಡಿಕೊಂಡ ಸಂಪಾದನವೇ || ಜೀ ||

ಛಂದ ತಾಳ ಸೂರದವರ ಕಲಗಿ ಮೇಳದವರಿಗಿ ಕೇಳತಿನಿ
ಮೇಳಹಾಕಿ ಅರ್ಥ ಮಾಡಿ ಹೇಳವನಿಗಿ ಅಂತಿನಿ
ಕಾಳಿದಾಸ ಕವಿ ಸಂತಾನವೇ || ಜೀ ||

ವಾಯಿಣಿ ದೇಗಾಯಿ ಇಂಥಾ ಲಾವಣಿ ಹಾಡಂದರ
ಇಂಥ ಪಾವಣಿ ಕಮ್ಮಿದ್ದರ ದೇವಣಿ ಸಂತ್ಯಾಗ
ನಿನಗ ದಾವಣಿಗಿ ಹಚ್ಚಿ ಕಟ್ಟಿಸುವೆ ಬೇಲಿ
ನೀ ರಾವಣನಂಗಾಗಬ್ಯಾಡ ಗರ್ವಿಲಿ
ಸತ್ಯ ಛಾವಣಿಗಿ ಕರಿಯಿರಿ ಅರವಿಲಿ || ಜೀ ||