. ಸವಾಲ್: ಪಿಂಡ ಮೊದಲೋ ಏನ್ ಪ್ರಾಣ ಮೊದಲೋ

ಜೀವ ಶಿವಕ ಭೇದಿಲ್ಲಂತಿರಿ ಹಿಂಗ ಅವಯಿ ಕೊಟ್ಟಿತೋ
ಶಾಸ್ತ್ರ ಯಾವಲ್ಲಿ ಹುಟ್ಟಿತೋ || ಪಿಂಡ ಮೊದಲು ಏನ್
ಪ್ರಾಣ ಮೊದಲು ಯಾವುದು ಮೊದಲು ಹುಟ್ಟಿತೋ || ಗಿ ||

ಮೊದಲು ಪಿಂಡ ಉತ್ಪತ್ತಿಯಾಗುವಾಗ
ಪ್ರಾಣ ಯಾವಲ್ಲಿ ಇತ್ತಣ್ಣ
ಇದು ಯಾರಿಗಿ ಗುರ್ತಣ್ಣ
ತಿಳಿದು ನೋಡಿರಿ ಪಿಂಡಿನ ಒಳಗ
ಪ್ರಾಣ ಹಿಂದಿಂದ ಬಂತಣ್ಣ || ಗೀ ||

ಮೊದಲು ಪಿಂಡ ಉತ್ಪತ್ತಿಯಾಗುವಾಗ
ಪ್ರಾಣ ಯಾವಲ್ಲಿ ಇತ್ತಣ್ಣ
ಇದು ಯಾರಿಗಿ ಗುರ್ತಣ್ಣ
ತಿಳಿದು ನಡಿರಿ ಪಿಂಡಿನ ಒಳಗ
ಪ್ರಾಣ ಹಿಂದಿಂದ ಬಂತಣ್ಣ || ಗೀ ||

ಪ್ರಾಣಕ್ಕಿಂತ ನಮ್ಮ ಪಿಂಡ ದೊಡ್ಡದು
ಪಂಡಿತರಿಗಿ ಕೇಳಣ್ಣ
ಇದು ಖಂಡಿತ ಮಾತಲ್ಲಣ್ಣ
ಪಿಂಡ ಪ್ರಾಣಕ ದೂರಂತಿರಿ
ನಾಲ್ಕು ತಿಂಗಳ ಫರಕಣ್ಣ || ಗೀ ||

ಯಾವ ತತ್ವದ ಇದು ಪಿಂಡಂತಿರಿ
ಸುಳ್ಳಂದಿರಿ ಸುಖ ಜಾಣ
ಓದಿ ನೋಡು ಪುರಾಣ
ಒಂದರ ಬೆನ್ನಿಗಿ ಬ್ಯಾರೆ ಬ್ಯಾರೆ ಕೂಡಿ
ಪಿಂಡಾಂತ ಐತು ನಿಮಾಣ || ಗೀ ||

ಇಳುವ:
ಇವು ಎಲ್ಲಾ ಹ್ಯಾಂಗ ಆದುವು ಅಂದ್ರ ಹೇಳುವೆ ಜರಾ
ತನ್ನ ಕಲ್ಪನದಿಂದ ಮಣ್ಣ ತಂದು ಕುಂಬಾರ
ಅದರೊಳಗೆ ಹಿಂದಿನಗಡಿದು ತಂದು ಹಾಕಿದಾನು ನೀರ
ತುಳ ತುಳದ ಜಿಗಟ ಮಾಡಿ ಕೆಸರ
ಮಾಡಿಟ್ಟ ಮಡಕಿ ಸಾವಿರಾ
ತನ್ನ ಕೈಲಿ ಬರೆದ ಚಿತ್ತಾರ
ಹಿಂದಿನಗಡಿದು ಗಾಳಿಗಿ ವೈದು ಇಟ್ಟ ಪರಬಾರ || ಗೀ ||

ಅಲ್ಲಿಂದ ಆಂವಗ್ಯಾಗ ವೈದು ಇಟ್ಟ ಚಾತುರ
ಉಸಲಾಡಲದಂಗ ಮ್ಯಾಲ ಮುಚ್ಚಿ ಭರಪೂರ
ಪುಟು ಮಾಡಿ ಹಚ್ಚಿದಾನು ಬೆಂಕಿ ಎದ್ದಿತೋ ದುಂದಕಾರ
ಇವು ಎಲ್ಲಾ ಸುಟ್ಟು ಶಾಹೀರ ಹಿಂಗ ತಿಳಿರಿ ಗಡಗಿ ಮಜಕೂರ
ಆಗ ಪ್ರಾಣ ಬಂತು ಹತ್ತಿರ
ಆ ಗಡಗಿ ನಾದ ತುಂಬಿ ನುಡಿಯುತ್ತಿತ್ತು ಜಯಂಕಾರ || ಜೀ ||

ಇದರಂತೆ ತಿಳಿಯಿರಿ ಈ ಪಿಂಡದಾನ ಆಕಾರ
ಬಹುಕಾಲ ನಡದಿತ್ತೋ ಇದರಲಿಂದೆ ತಕರಾರ
ಈ ತತ್ವ ಒಂದಕ್ಕೊಂದ ಸಂಗತಿಲೋ ಕವಿಗಾರ
ಪಿಂಡದ ಮೂಲ ಮಂತರ ತಿಳಿಯದೋ ಇದರ ತಂತರ
ಇವು ಯಾರಿಗಿ ಸ್ವಾತಂತರ ಇವು ಎಲ್ಲ ಆಗದು ಒಂದಿನ ಅತಂತರ || ಜೀ ||

ಕೂಡಪಲ್ಲ:
ಇದರ ಮರ್ಮ ತುರೆದಂವಗ ತಿಳಿಯದು ಕೈ ಹಿಡಿದು ಕಟ್ಟಿತೋ
ಮೂರು ಲೋಕಕ ಮುಟ್ಟಿತೋ ಪಿಂಡ ಮೊದಲು ಏನ್
ಪ್ರಾಣ ಮೊದಲು ಯಾವುದು ಮೊದಲು ಹುಟ್ಟಿತೋ || ಜೀ || ಚೌಕ

ಪಿಂಡ ಉಣತಾದೇನೂ ಪ್ರಾಣ ಉಣತಾದ ಹೇಳು ಯಾವುದು ಉಣತಾದೋ
ಸುಳ್ಳ ಯಾವುದು ಆಡತಾದೋ
ತಿಳಿದ ನೋಡರಿ ಎರಡರ ಒಳಗ ಕಳವು ಯಾವುದು ಮಾಡತಾದೋ || ಜೀ ||

ಹೊಡಸಿ ಬಡಸಿಕೊಂಡು ಯಾವದು ಅಳತಾದೋ
ನೋಡಿ ಯಾವದು ನಗತಾದೋ ಅಂಜಿ ಯಾವದು ಓಡತಾದೋ
ಗಟ್ಟಿ ಧೈರ್ಯ ಮಾಡಿ ರಣದಾಗ ನಿಂತು ಲಡಾಯಿ ಯಾವದು ಮಾಡತಾದೋ
ಪಿಂಡ ಮಾತಾಡ್ತಾದೇನು ಪ್ರಾಣ ಮಾತಾಡ್ತಾದಹೇಳು
ಯಾವದು ಮಾತಾಡ್ತಾದೋ ಇದು ಯಾರಿಗಿ ತಿಳಿದಾದೋ
ಬಲ್ಲವರಾದವರು ಜಲ್ದಿ ಹೇಳಿರಿ ನಿಮಗ ಮುಕ್ತಿ ದೊರಿತಾದೋ || ಜೀ ||

ಚಾಲ:
ಪಿಂಡ ಪ್ರಾಣದೊಳಗ ಯಾರ ದೈತಿ ಹಿರಿತನ
ಇದರೊಳಗೆ ದೈವುಳ್ಳಾಂಗ ಬಡವ ಯಾಂವ ಹೇಳಣ್ಣ
ನಾ ಎರಡು ಅರಿಯದೆ ನಿಮಗೆ ಕೇಳತಿನಣ್ಣ
ವೇದಾಂತದೊಳಗ ಹುಡುಕಣ್ಣ
ಈ ಮಾತ ಬಹಳ ತೊಡಕಣ್ಣ
ನೀ ಸಾಯುವತನಕ ಮಿಡಕಣ್ಣ
ಗಂಡಂಬದು ಹೇಳಿರಿ ಯಾವದು ಇದರೊಳಗೆ ಹೆಣ್ಣ || ಜೀ ||

ಪಂಚ ತತ್ವದಿಂದ ಇದು ಹುಟ್ಯಾದಂತಿರಿ ಪಿಂಡಾಂಡ
ದೇಹಯ ಕೊಳತು ಹೋಗಿ ಕೂಡದು ಮಣ್ಣಿಗಿ ಮಣ್ಣ
ಗಾಳಿಗಿ ಗಾಳಿ ಕೂಡಿತು ಕೈಗ್ಹಾ ಂಗ ಬರತಾದಣ್ಣ
ಬೆಂಕಿಗಿ ಬೆಂಕಿ ಸುಖ ಜಾಣ ನೀರಿಗಿ ನೀರ ನಿರ‍್ಮಾಣ |
ಇವು ಎಲ್ಲಾ ಆದುವು ಶಿಕ್ಷೆ ಯಾರಿಗಿ ಕೊಟ್ಟ ಭಗವಾನ || ಜೀ ||

ಒಳಿತಾಗಿ ಸೋಸಿ ನೀವು ತಗಿರಿ ಇದರ ಬಯ್ಯನ |
ಈ ಪಿಂಡ ಪ್ರಾಣದೊಳಗ ಯಾರದೈತಿ ಮರಣ
ಪ್ರಾಣ ಇಲ್ದ ಜಾಗ ಯಾವದು ಹೇಳಿ ಹಾಡಣ್ಣ
ತುರಾದವರಿಗಿ ಗಂಟಲ ಗಾಣ ತುರತ್ತಿಗಿ ಯಾರದಿಲ್ಲೋ ತ್ರಾಣ
ಸುಳ್ಳ ಆಗ ಬ್ಯಾಡ್ರೊ ಹೈರಾಣ
ಇದರ ಉತ್ತರ ಹೇಳುತಾನ ಮೂಗಿಗೆ ಮೂರ ಬಟ್ಟ ಸುಣ್ಣ || ಜೀ ||

ಕೂಡಪಲ್ಲ:
ತೊಗಲಂದೆ ಬರುವದು ದತೊಗಲಂದೆ ಹೋಗುವದು
ಏಕದಳ ಮುಟ್ಟಿತೋ | ಶಾಸ್ತ್ರ ಂiiವಲ್ಲಿ ಹುಟ್ಟಿತೋ
ಪಿಂಡ ಮೊದಲು ಏನ್ ಪ್ರಾಣ ಮೊದಲು
ಯಾವದು ಮೊದಲು ಹುಟ್ಟಿತ || ಜೀ || ಚೌಕ

ನಿದ್ರಿ ಸಾವಿಗಿ ದೂರಂತಿರಿ ಸಾರತಾವ ಶೃತಿಗಳ
ಅವಕ ಇವಕ ಏಸು ಮಳಾ
ನಿದ್ರಿ ಸಾವಿಗಿ ಬ್ಯಾರೆ ಅಂತಿರಿ ಬ್ಯಾರೆ ಐತ್ರಿ ಇದರ ಕಳಾ || ಜೀ ||

ನಿದ್ರಿ ಹತ್ತಿದ ಮನಷ್ಯಾಗ ಸತ್ತಿದ ಮನಷ್ಯಾಗ
ಮಾಡತೀರಿ ಒಂದು ಮೇಳಾ ನಿಮಗ ತಗೊಂಡಾದ ದಳ
ನಿದ್ರಿ ಹತ್ತಿದ ಮನಷಾ ಶ್ವಾಸ ಆಡಬಾರದು ಹೌದಂದೇನು ಯತಿಗಳಾ || ಜೀ ||

ಧ್ಯಾನಿಸಿ ನೋಡರಿ ದೇಹದ ಒಳಗ ಸ್ವರ್ಗ ಮೃತ್ಯು ಪಾತಾಳ
ಅವಕ ಅವ ನೌನಾಳ | ನೌನಾಳ ಯಾವ ಸ್ಥಾನಕ ಇರತಾವ
ಉತ್ರ ಹೇಳು ಝಳ ಝಳ || ಜೀ ||

ಸೂರ್ಯ ಚಂದ್ರ ಹುಟ್ಟಿ ಸಾವು ಒಟ್ಟಿಗಿ ಎಷ್ಟ ಆಗತಾವ ಫಳಾ
ನಾ ಕೇಳತಿನಿ ಇದರ ತಳ
ಗುರು ಪುತ್ರ ಇದ್ದರ ಗುರ್ತ ತೋರಿಸು ಆಗಬ್ಯಾಡ ನರಕದ ಹುಳ || ಜೀ ||

ಚಾಲ:
ನಾ ನಿಮಗೆ ಕೇಳತಿನಿ ನಿದ್ರಿ ಸಾವಿನ ಮನಿ
ಯಾವ ಜಾಗದಾಗ ಇರತಾದ ಹೆಸರ ಹೇಳು ಠಿಕಾಣಿ
ಸುಳ್ಳೆ ಜಪಾ ಓದತಿರಿ ಕೈಯಾಗ ಹಿಡಕೊಂಡ ಮಣಿ
ಏಸ ಜಪಾ ಆದವೋ ಅರಗಿಣಿ
ನಿನ್ನ ಮನ್ನೆ ನಿಮ್ಮ ವಾಯಿಣಿ
ಕವಿಕಟ್ಟಿ ಹಾಡತಾರಂತ ಸುದ್ದಿ ಕೇಳಿನಿ || ಜೀ ||

ಬಹಳ ದಿವಸ ಆಯಿತು ನಿಮಗೆ ಕಾಡತಾದ ಶನಿ
ಏಸ ಅಕ್ಷರದಿಂದ ಬ್ರಹ್ಮ ಬರೆದ ನಿಮ ಫಣಿ
ಎಲ್ಲಿತ್ತೋ ದವತಿ ಲೆಕ್ಕಣಿಕಿ ಹೇಳು ಶಿರೋಮಣಿ
ಮಸಿ ಎಲ್ಲಿ ಇತ್ತೋ ಕೇಳತನಿ
ನಾ ಕೇಳಿದವರಿಗಿ ಹೇಳತಿನಿ ನಮ್ಮ ತಾಳಿಕೋಟಿ ಪರಗಾಣಿ
ಇಂಗಳಗಿ ಪೀರಗ ವರುವಾದನು ರತ್ನದ ಖಣಿ || ಜೀ ||

ಮಲ್ಲಾ ಹಸನನ ಪದಗಳು ಕೇಳಿ ತಮ್ಮ ನೀ ದಣಿ
ಹರದೇಶಂವ ಕುಂತು ಬಡಕೋತಾನ ಹಣಿ ಹಣಿ
ಮಹ್ಮದ ಇಮಾಮಶಾ ಜೋಡ ಖ್ಯಾದಗಿಯ ತೆನಿ
ಬಡು ಫಕೀರ ಸುತ್ತ ವಾಯಿಣಿ | ಕಂಡು ಮರತಾಳ
ಮನಿ ಜಿನಗಾನಿ ಬೆನ್ನ ಹತ್ತಿ ಬಂದಾಳ ಪದ್ಮಿನಿ
ನಮ್ಮ ಡಪ್ಪಿನ ಮ್ಯಾಲ ಕಲ್ಗಿ-ಹಸರ ನಿಶಾನಿ || ಜೀ ||

ಕೂಡಪಲ್ಲ:
ಬಡವ ಫಕೀರ ಖಾಸಿಂ ಕಟ್ಟಿ ಹಾಡತಾರ
ಅವರ ಬಿರದಾ ಸಾರಿತೋ | ಗುರು ಮಾತಿನಿಂದ ತೋರಿತೋ |
ಪಿಂಡ ಮೊದಲು ಏನ್ ಪ್ರಾಣ ಮೊದಲನೇನು
ಯಾವದು ಮೊದಲು ಹುಟ್ಟಿತೋ  ಚೌಕ೩

 

೨. ಜವಾಬ್: ಪ್ರಾಣ ಮೊದಲು

ಪ್ರಾಣ ಮೊದಲು ಏನ್ ಪಿಂಡ ಮೊದಲು ಎಂದು ಕೇಳತಿದಿ ಶಾಹೀರ
ನಾ ಮಾಡಿ ಹೇಳುವೆ ಜಾಹೀರ
ಪ್ರಥಮ ಪೈಲೆ ಪ್ರಾಣ ಉತ್ಪನ್ನ ಆತು ಪಿಂಡ ಹಿಂದಿಂದ ಆಗ್ಯಾದ ತಯ್ಯಾರ || ಜೀ ||

ವಾಮದೇವ ತಾ ವಾಯು ರೂಪದಿಂದ ಇದ್ದ ನೀರಿನ ಮೇಲೆ ಅಂತರ
ಬೇರೆ ಆತು ಅವನ ತಂತರ
ನಿರಧಾನ್ಯ ತಂದು ಊಟ ಮಾಡಲು ಆದ ಅವನೆ ಸ್ವಾತಂತ್ರ || ಜೀ ||

ಮೂರು ತಿಂಗಳ ಜೀವ ತಂದಿ ಬಲ್ಲಿ ಇತ್ತು ಆಗಿ ಬಿಂದುದಾಕಾರ
ಸುಳ್ಳೆ ಒದರಬೇಡ ಬೇಕಾರ
ಆರು ಶಾಸ್ತ್ರ ಆರನೆಯ ಅಧ್ಯಾಯದೊಳು ಹಿಂಗ ಕೊಟ್ಟಾದ ಲಕ್ಷರ || ಜೀ ||

ಇಳುವ :
ಸ್ವತಃ ಸೋಯಂ ಬ್ರಹ್ಮ ತಾ ಆಗಿ ನಿಂತ ಕುಂಬಾರ
ಪ್ರಾಣ ಪ್ರಕಟ ಮೊದಲೆ ಮಾಡಿ ಇಟ್ಟಿದ ಮೆಂಬರ
ಮಣ್ಣ ತಂದು ತುಳಿದು ಹದಾ ಮಾಡಿದಾನು ಕೆಸರ
ಹಾಸಗಟ್ಟಿ ಐತು ಅದು ಹಸರ
ಠಿಗರಿ ಮೇಲೆ ವೈದು ಇಟ್ಟ ಪೂರ
ಉಸರ ಹಿಡಿದು ತಿರವಿದ ಗರಗರರ
ಗಾಳಿ ಸ್ಪರ್ಶದಿಂದ ಠಿಗರಿ ವಾದ್ಯ ಕಟ್ಟಿತು ಭರಭರರ || ಜೀ ||

ಕರಡೋಗಟ್ಲೆ ಗಡಗಿ ಮಾಡಿ ಹಾಕಿದಾನು ನಂಬರ
ಒಂದೊಂದಕ ಅಂಕಿ ಬರದಿದಾನು ಶಂಬೋರ
ಒಯ್ದು ಆಂವಗಿಗಿ ಹಾಕಿದಾನು ಸಾರ
ಅಗ್ನಿ ಪುಟು ಕೊಟ್ಟಿದ ಶೂರ
ಅಷ್ಟು ಎಲ್ಲಾ ಸುಟ್ಟಿದಾವು ಪೂರ
ತಂದಿ ಬಿಂದುರೇತು ಕೂಡಿ ಶಬ್ದ ನುಡಿತು ಜಯಂಕಾರ | .ಜೀ ||

ಕೂಡಪಲ್ಲ:
ಪಂಡಿತರ ಮುಂದ ನ್ಯಾಯ ಖಂಡಿತ ಆಗಲಿ
ಷಂಡ ಪಿಂಡ ನಿಮ್ಮ ಶರೀರ
ಪುಂಡ ಪ್ರಾಣ ಐತು ಅದಕ ವರ
ಪ್ರಥಮ ಪೈಲೆ ಪ್ರಾಣ ಉತ್ಪನ್ನ ಆತು
ಪಿಂಡ ಹಿಂದಿಂದು ಆಗ್ಯಾದ ತಯ್ಯಾರ || ಜೀ || ಚೌಕ

ಪ್ರಾಣ ಉಣತಾದೇನ ಪಿಂಡ ಉಣತಾದೆಂದು ಕೈಮಾಡಿ ಕರದಿದೆ
ನೀ ವಳಿತಾಗಿ ಕೇಳಿ ದಣದಿದೆ
ಪ್ರಾಣಕ ಗಾಳಿ ಹಣ್ಮು ಆಹಾರ ಈ ಕವಿ ಹಿಂಬಾಗ್ಲಿ ಹೆಣದಿದೆ || ಜೀ ||

ಪ್ರಾಣ ಬೆಳಿತಾದೇನ ಪಿಂಡ ಬೆಳಿತಾದೆಂದು ಸವಾಲ್ ನೀ ಮಾಡಿದೆ
ಸಂತ ಸಭಾದೊಳು ಕೇಳು ನಿಂತು ಹಾಡಿದೆ
ಉಂಡು ಪಿಂಡ ಬೆಳಿಸೋ ಸಲುವಾಗಿ ಕಂಡಂಗ ಬಿಕ್ಕಿ ಬೇಡಿದೆ || ಜೀ ||

ಪಿಂಡ ಬೆಳದಂಗ ಪ್ರಾಣ ಬೆಳದಿತಂದ್ರ ನೀ ಯಾವಲ್ಲಿ ಇರತಿದೆ
ಇಲ್ಲಿ ಹಾಡ್ಲಕ ಎಲ್ಲಿ ಬರತಿದೆ
ಜೀವ ಚಿರಂಜೀವ ನಿರಜೀವ ದೇಹ ಎಡ ಜೀವ ನಾಗೇಶಿ ಮರತಿದೆ || ಜೀ ||

ಇಳುವ:
ಪ್ರಾಣ ಉಣಸೋದು ಪಿಂಡ ಉಣ್ಣುವದು ತಿಳಿ ಇದರ ಭೇದ
ಪ್ರಾಣ ಸ್ವಚಿತ ಇದ್ದರ ಪಿಂಡಕ ಹತ್ತುವದು ಸ್ವಾದ
ಪ್ರಾಣ ಚಂಚಲ ಆದರ ಪಿಂಡಕ ಬೀಳೋದು ಗಾದ
ನೀ ಮರಳಿ ಮಾಡಿಕೋ ಶೋಧ
ಒಳ್ಳೆ ಗುರುವಿಂದ ತಗೋ ಗುರುಬೋಧ
ನಿನ್ನ ಸವಾಲಿಗಿ ಜವಾಬ ಇದು ನಗದ
ತಪ್ಪಿದ್ರ ಒಪ್ಪಿಕೋತ ಬೈಲಿಗಿ ಒಗಿಯೇ ನೀ ತಗದ || ಜೀ ||

ನಿಮ್ಮ ದುಷ್ಠ ಪಿಂಡ ಹೊಟ್ಟಿ ಕಿಚ್ಚಿಗಿ ಕಳವು ಮಾಡತಾದ
ನಮ್ಮ ಶ್ರೇಷ್ಠ ಪ್ರಾಣ ಸ್ಪಷ್ಟ ಬೆಡ ಅಂತ ಅದಕ ಹೇಳತಾದ
ಕೆಟ್ಟ ಕೃತ್ಯ ಮಾಡಿ ನಷ್ಟ ಪಿಂಡ ಎಷ್ಟ ಬಾಳತಾದ
ಕಳವು ಮಾಡಿ ಲತ್ತಿ ತಿಂತಾದ ತಾಳಲಾರದಕ ಕುಂತ ಅತ್ತಾದ
ಸುತ್ತ ಕೂತವರಿಗೆ ಗೊತ್ತಾದ ಜೀವ ಶಿವ ಸ್ವರೂಪ
ಎಂದು ನಿಮ್ಮ ಪಿಂಡವು ಸತ್ತಾದ || ಜೀ ||

ನಮ್ಮ ಪುಂಡ ಪ್ರಾಣ ರಣದೊಳು ಲಡಾಯಿ ಮಾಡತಾದ
ನಿಮ್ಮ ಷಂಡ ಪಿಂಡ ಕುಂಡಿ ತೋರಿಸಿ ಓಡತಾದ
ಕಡದು ತುಂಡ ಮಾಡಿದ್ರ ಬಿದ್ದಲ್ಲೆ ಬಿದ್ದು ಒದ್ಯಾಡತಾದ
ನಮ್ಮ ಪ್ರಾಣ ನೋಡಿ ನಕ್ಕಾದ ಅದು ಯಾರಿಗೇನು ಸಿಕ್ಕಾದ
ಈ ತ್ರಿಜಗಕ್ಕೆಲ್ಲ ಮಿಕ್ಯಾದ
ಈ ಪಿಂಡಾಂಡ ಧಿಕ್ಕರಿಸಿ ಬ್ರಹ್ಮಾಂಡಕ ಹೋಗಿ ಹೊಕ್ಕಾದ || ಜೀ ||

ಕೂಡಪಲ್ಲ:
ಜನನ ಮರಣ ರಹಿತ ಸಾಕ್ಷಾತ ಪರವಸ್ತು ಪರಮೇಶ್ವರ
ಓಂ ಪ್ರಣಮ ಬೀಜಾಕ್ಷರ ಪ್ರಥಮ ಪೈಲೆ ಪ್ರಾಣ
ಉತ್ಪನ್ನ ಐದು ಪಿಂಡ ಹಿಂದಿಂದ ಆಗ್ಯಾದ ತಯ್ಯಾರ || ಜೀ || ಚೌಕ

ಜೀವ ಶಿವ ಎರಡು ಸವನೆ ಅವ ಹೌದು ನಿಗೇನ ಗೊತ್ತು ಇದರ ಕಳ
ನೀ ಒದರಬೇಡ ಹಿಡಿದಂತ ದಳ
ಕನಸಿನೊಳು ಹಸಿ ತೃಷಿ ವ್ಯಸನಕ್ಕಾಗಿ ಹಾಸಗ್ಯಾಗ ಹರಿ ಬಿಡತಿ ಬಳಬಳಾ || ಜೀ ||

ಸತ್ತ ಮನಷ್ಯಾ ನಿದ್ರಿ ಹತ್ತಿದ ಮನಷಾ ಸವನಂತ ಹೇಳತಾರ ಯತಿಗಳ
ಹಿಂಗ ಸಾರತಾವ ಶೃತಿಗಳ
ಹೆಂಡಗಾರನಂತೆ ಖೊಂಡ ಒದರಬೇಡ ಮಂಡಗೈಲಿ ಹಾಕೆನೆಂದು ಮಳ || ಜೀ ||

ನಿದ್ರಿ ಸಾವಿಗಿ ಎಷ್ಟ ಫೇರ ಇರತಾದೆಂದು ಕೇಳತಿರಿ ಕವಿಗಳ
ಅದಕ್ಕಿದಕಂತಿರಿ ಎಸ ಮಳ
ಸಹಸ್ರ ದಳದ ಮೇಲೆ ಸುಳಿಯುವದು ಸೋಸಿ ಬ್ರ ಮಧ್ಯೆದಿ ನಿದ್ರಿದು ಮಧ್ಯಸ್ಥಳ || ಜೀ ||

ಮಸ್ತಕ ಶಿವಲೋಕ ಮಧ್ಯ ಮರ್ತ್ಯುಲೋಕ ಪಾದೆಂಬುದೆ ಪಾತಾಳ
ಪಾತಾಳ ಕೆಳಗ ಸೀತಾಳ
ಸೂರ್ಯ ಚಂದ್ರಗ ಎರಡು ಯೋಜನ ಅಂತರ ನಾಭಿ ಕಮಲದಿ ನವನಳ || ಜೀ ||

ಇಳುವ :
ನಿಮಗ ಹೇಳುವೆ ಕೇಳ್ರಿ ನಿದ್ರಿ ಸಾವಿನ ಮನಿ
ಕುಬೀರ ಸ್ಥಳದಲ್ಲಿ ಇರುವುದು ಅದರ ಠಿಕಾಣಿ
ತನು ಕಾರಣ ಮಹಾಕಾರಣದಲ್ಲಿ ಕಾರಧಾನಿ
ಸ್ಥೂಲ ಸೂಕ್ಷ್ಮ ಕೇಳು ಸುಜ್ಞಾನಿ
ಅಡಿ ಬೀಳಬೇಡ ಅಜ್ಞಾನಿ
ಅರ್ಥ ಮಾಡಿ ಕೇಳೋ ಅರಗಿಣಿ
ಗುರುತಿಟ್ಟು ಗುರುಮೂರ್ತಿ ಪಾದಕ ಹಚ್ಚು ನಿನ್ನ ಹಣಿ || ಜೀ ||

ಎಷ್ಟು ಅಕ್ಷರದಿಂದ ಬ್ರಹ್ಮದೇವ ಬರದಾನಂತಿರಿ ನಮ್ಮ ಫಣಿ
ಸಪ್ತಸಾಗರವೆ ಶಾಯಿ ಮಾಡಿದ ಅಂತಃಕರುಣಿ
ಮಹಾ ಮಂದರಗಿರಿ ತಾ ಮಾಡಿಕೊಂಡ ಲೆಕ್ಕಣಿ
ಹ್ರೂಂ ಬ್ರೂಂ ಮಾಡಿ ಸಾಧನಿ
ನ ನರ್ಪ ಎಂಬ ನರ್ತನಿ
ಭಕ್ತಿಯಂತೆ ಮುಕ್ತ ಸಾಕ್ಷಾತ ಬರದ ನನ್ನ ಫಣಿ || ಜೀ ||

ಎಷ್ಟು ಅಕ್ಷರದಿಂದ ಶಟವಿ ಬರದಾಳಹೇಳರೆ ಸ್ತ್ರೀಯರ ಹಣಿ
ಯಾವಲ್ಲಿದು ತಂದಾಳ ಹೇಳರೆ ದವತಿ ಲೇಖನಿ
ಇದು ಹೇಳದಿದ್ದರೆ ಬೀ ಬೀ ಇಂಗಳಗೇವರಿಗಿ ಆಣಿ
ನಾ ಕೇಳದಾದ ಕೇಳಿನಿ ನೀ ಕೇಳಿದ್ದೆಲ್ಲ ಹೇಳಿನಿ
ನೀ ಅಂದದ್ದೆಲ್ಲಾ ತಾಳೀನಿ
ಸಮೆ ಜ್ಞಾನ ಸಾಧಿಸಿ ನಿನಗೆ ಸಾವಿರ ವರ್ಷ ಆಳಿನಿ || ಜೀ ||

ಏರ :
ಸಾವಳಗಿ ಊರ ಸದಾ ಗುಲ್‌ಜಾರ
ಮಹ್ಮದ ಹಚ್ಚಿ ಮೆರದಿದ ತುರಾ
ವೃದ್ಧ ಸಿದ್ಧಲಿಂಗನ ಆಧಾರ
ಪ್ರಥಮ ಪೈಲೆ ಪ್ರಾಣ ಉತ್ಪನ್ನ ಐತು
ಪಿಂಡ ಹಿಂದಿಂದ ಆತು ತಯ್ಯಾರ || ಜೀ || ಚೌಕ