. ಸವಾಲ್: ಬೀಜಮೊದಲೋಏನ್ಭೂಮಿಮೊದಲೋ

ಭಲೆರೆ ಭಲೆರೆ ಭಪ್ಪರೇ ಕವೆಸೂರ ಚಿತ್ತಕೊಟ್ಟು ಕೇಳಿರಿ
ಅಣ್ಣ ಕೇಳಿ ಸಿಟ್ಟ ತಾಳಿರಿ
ಭೂಮಿ ಮೊದಲೋ ಏನ್ ಬೀಜ ಮೊದಲೋ ಯಾವುದು ಮೊದಲು ಹೇಳಿರಿ || ಜೀ ||

ನಿರಂಕಾರದಾಗ ನೀರೇ ನೀರೆ ಅಂತಿದಿ ನೀರಿನ ತೆಳಗೇನಿತ್ತೋ |
ಖರೆ ಹೇಳಿದರ ತಿಳಿದಿತ್ತೋ
ಮ್ಯಾಲ ಕೆಳಗ ಶಕ್ತಿಯ ಸ್ವರೂಪ ನಡಬರಕ ನೀರ ತುಂಬಿತ್ತೋ || ಜೀ ||

ಅಂತರದಿಂದ ನೀರ ಹ್ಯಾಂಗ ನಿಂತಿತ್ತೊ | ನೀರಿಗೇನು ಗೊತ್ತಿತೋ
ಆ ನೀರಿಗೇನು ಸುತ್ತಿತೋ
ಮ್ಯಾಲ ಕೆಳಗ ಶಕ್ತಿಯ ಸ್ವರೂಪ ನಡಬರಕ ನೀರ ತುಂಬಿತೋ || ಜೀ ||

ಇಳುವ:
ಆದಿ ಹಡಗಲಾ ತುಂಬಿ ತುಳಕತಿತ್ತೋ ನೀರ
ಆ ಶಕ್ತಿ ಸ್ವರೂಪಕ ಯಾರಿದ್ದರಪ್ಪ ಮಾಲಕರ
ನಾ ಮಾಡಿ ಇಟ್ಟ ಓಂಕಾರ
ನಿನಗೇನು ಠಾವಿಕ್ಯಾದ ನನ ಮುಂದ ಹುಟ್ಟಿದೆ ಮೂಳ || ಜೀ ||

ನೀನೊಬ್ನೆ ಶ್ರೇಷ್ಠಂತ ಹೇಳತಿದಿ ಏನು ಕಾರಣ
ಸುಳ್ಳೆ ಅಗಬ್ಯಾಡೋ ಹೈರಾಣ
ನನ್ನಲ್ಲಿ ಬೋಧ ತಗೋ ತಗಸತೀನಿ ಪತಿಪೂರ್ಣ || ಜೀ ||

ಏರ :
ಅಹಂಕಾರ ನಿರಂಕಾರ ಎರಡು ನನ್ನಲ್ಲಿ ನಾನು ನೋಡಿದ್ದು ಖರೇ
ನೀವು ಕಿವಿಲಿ ಕೇಳಿದ್ದು ಸುಳ್ಳರಿ
ಭೂಮಿ ಮೊದಲೋ ಏನ್ ಬೀಜ ಮೊದಲೋ ಯಾವುದು ಮೊದಲು ಹೇಳಿರಿ || ಜೀ || ಚೌಕ

ವೃಕ್ಷಗೋಳು ಒಂದೊಂದು ಭೂಮಿ ಮ್ಯಾಲ ಅನೇಕ ಸಂಪಾದಿಸಿ
ನೀ ಕುಂತ ಕೇಳೋ ಹರದಾಸಿ
ಹೂ ಮುಂದ ಆ ಮ್ಯಾಲಕಾಯಿ ಅದರೊಳಗ ಬೀಜ ಬೇಧಿಸಿ || ಜೀ ||

ಇದರಂತೆ ಪೃಥ್ವಿ ಮಂಡಣ ನೀ ಕೇಳೋ ತಮ್ಮ ಉಪದೇಶಿ
ನಾ ಕೇಳತೀನಿ ಶೋಧಿಸಿ
ಹೂ ಮುಂದ ಆ ಮ್ಯಾಲ ಕಾಯಿ ಅದರೊಳಗ ಹುಟ್ಯಾನ್ರಿ ಜಗದೇಶಿ || ಜೀ ||

ಇಳುವ :
ಖರೆ ಖರೆ ಕಾಣ ತಾದ್ರಿ ನಿಮ್ಮ ಕಣ್ಣಿಗೆ ಕಾಣಲಾರದು
ಆ ಟೆಂಗಿನ ಫಲಕ ಮ್ಯಾಲ ಗುಂಜು ಮೂಡದು
ಅದರೊಳಗ ನೀರ ಹುಟ್ಟುದು
ನೀರ ಸುತ್ತು ಪರಟಿ ಕಟ್ಟುದು
ಆ ನಿಂತ ನೀರ ಇದರಂತೆ ಪೃಥ್ವಿ ಹುಟ್ಟುದು | .ಜೀ ||

ಏರ:
ಗುನಿಯ ಹಚ್ಚಿ ನೀವು ಗ್ವಾಡಿ ಕಟ್ಟತೀರಿ ಮ್ಯಾಲಕಂಬ ಎಳದೀರಿ
ತಮ್ಮ ಸೋಸಿ ಪಾಯ ಅಗಳೀರಿ
ಭೂಮಿ ಮೊದಲೋ ಏನ್ ಬೀಜ ಮೊದಲೋ ಯಾವುದು ಮೊದಲು ಹೇಳಿರಿ || ಜೀ ||

ಹರದೇಶಿ ಹಾಡವರಿಗಿ ಹಟಗಾಸಿ ಕೇಳತಿನಿ ಬಿರದ ಕಟ್ಟಿಕಯ್ಯಾಗ
ಬಗಿ ಹರಸಿ ಹೋಗರಿ ಇದರಾಗ
ಹೇಳಲಾರದೆ ಹೋಳ ಬಿದ್ದು ಹೋದಿರಂದರ ಅಣಿ ಆದರಿ ನಿಮ್ಮಗ || ಜೀ ||

ಹರದೇಶಿ ಹಾಡವರಿಗಿ ಬಾಳಮಂದಿಗಿ ನೆರಸಿ ಕೇಳತಿನಿ ಒಬ್ಬೊಬ್ಬಗ
ತಿಳಿ ಮಾಡಿ ಹೇಳ್ರಿ ನನ್ನಗ
ಹೇಳಲಿಕ್ಕ ನಿಮ್ಮ ಧೂಳ ಹಾರಸಿ ಬಿಡತಿನ್ರೋ ನಡು ಮಂದ್ಯಾಗ || ಜೀ ||

ಇಂಗಳಗಿಯವರಗೂಡ ವಿರುದ್ಧ ಮಾಡತಿರಿ ಇದು ಯಾತರ ಕೆಲಸರಿ
ನಮ ನಿಮದು ಏನ್ ತೋರಿಸರಿ
ಆಸ್ತಿ ಗಟಾಸ್ತಿ ಸೆಂವಿ ಸುಖ ಜನಕೆರಡೂ ಇಲ್ಲೆ ಬಳಸರಿ || ಜೀ ||

ಇಳುವ:
ಇದರಾಗ ನೀನು ಮುಪ್ಪಾದಿ
ಇದರಂತೆ ಹಾಡಬೇಕ್ರಿ ಒಂದೇ ಶಾಸ್ತ್ರದ ಹಾದಿ
ತಿಳಿಲಾರದೆ ಬಂದು ಬಿದ್ರೊ ನೆಲಿ ಇಲ್ದ ನೀರಲ್ಲಿ || ಜೀ ||

ಇಂಗಳಗಿ ಈರಣ್ಣನ ನೋಡಿ
ಹಲ್ಲಕಿಸಿಯುತಾವರಿ ಇವು ಖೋಡಿ
ಸುಳ್ಳೆ ಧಿಮಾಕ ಮಾಡತಾವರಿ ಮೂರಶೇಣಿ ಮೂರದಮಡಿ || ಜೀ ||

ಏರ:
ಭಲರೆ ಭಲರೆ ಭಪ್ಪರೆ ಕವೆಸೂರ ಚಿತ್ತಕೊಟ್ಟ ಕೇಳಿರಿ
ಅಣ್ಣ ಕೇಳಿ ಸಿಟ್ಟ ತಾಳೀರಿ
ಭೂಮಿ ಮೊದಲೋ ಏನ್ ಬೀಜ ಮೊದಲೋ ಯಾವುದು ಮೊದಲು ಹೇಳಿರಿ || ಜೀ || ಚೌಕ

 

. ಜವಾಬ್: ಬೀಜಮೊದಲ

ಸಾವಧಾನ ಸಾವಧಾನ ಹಾಡತಂಗಿ
ಅಳತಿ ತಪ್ಪಿ ಹಾಡಿದರ ತಿಂದಿಯೆ ಜೋಲಿ
ಇನಾ ಸಣ್ಣಕಿಇದ್ದಿ ನೀ ತಿಳಿದಿಲ್ಲ ಗಣಸರ ನೆಲಿ
ಎಂದಿಗಿ ಬಿಚ್ಚಿಲ್ಲ ನೋಡ ಕಣ್ಣಿಯವರಹಾಕಿದ ಬಲಿ
ಬೆಕ್ಕಿನ ಕಯ್ಯಾಗ ವಿದ್ಯಾಕಲ್ತು ಹುಲಿಗಿ ಬಾಳ ಸೊಕ್ಕ ಬಂತು
ಕಲಿಸಿದ ಗುರುವಿಗಿ ಹೊಡಿಬೇಕಂತ ಹೋಯಿತು ಮೈಮ್ಯಾಲ
ಬೆಕ್ಕ ಗಿಡ ಏರಿಕೂತಿದ ನೋಡಿ ಆಗ್ಯಾದ ಹುಚ್ಚು ಪ್ಯಾಲ || ಜೀ ||

ತಗಲ ಮಾತ ಹೇಳಬೇಡ ಬುಗಿಲ ಇಲ್ಲಿ ನಿನ್ನಂತಕಿದು
ಹಗಲ ಹಾಡೆ ಬಂದ ಬಿದ್ದಿ ಗುಮ್ಮ ನೀರಲ್ಲಿ
ಮೊದಲ ನಿನ್ನ ಜನ್ಮ ಉತ್ಪನ್ನ ಆತು ಹೇಳು ಯಾವಲ್ಲಿ
ತೊಗಲ ಫಡ ಫಡ ಅಂದ್ರ ಮುಲಘಡ ಘಡ ಅಂದಂಗ
ಆದೀತೇನ | ಹಿತಾಳಿ ಸಾಮಾನ ಯಾಕ ಇಡತಾರ ಬಂಗಾರ ಮಾರಲ್ಲಿ
ಬಗಲಾನ ಬಟ್ಟಲ ತಗೊಂಡ ಹಿಡಕೋ ನಿನ್ನ ಅಮೃತ ಸೋರಲ್ಲಿ || ಜೀ ||

ಭೂಮಿ ಮೊದಲು ಏನ್ ಬೀಜ ಮೊದಲು ಅಂತ ಸಹಜವಾಗಿ
ಕೇಳತಿದಿ ಬಹುಕಾಲ ಆತು ಬೇಕಾದ ಹೇಳಿ ಬಗಿ ಹರಿಸಲ್ಲಿ
ನಿನ್ನ ಅಜ್ಜನ ಹಿಡಿದು ಇದೆ ಹಾಡಿ ಹೆಜ್ಜೆ ಮುರಸಲ್ಲಿ
ನಿಮ್ಮ ಹಿರ‍್ಯಾರ ಕರಸಿ ಖರೆ ಖರೆ ಕರಾರ ಬರಸಲ್ಲಿ
ಅಜಾಹರಿ ರುದ್ರನ ಹಿಡಿದು ಕಜ್ಯಾ ನಡುಕೋತ ಬಂದಾದ ಇದು
ಬೀಜ ಇಲ್ಲದೆ ಹುಟ್ಟಿದವರಿಗೆ ತಂದು ತೋರಸಲ್ಲಿ
ನಿನಗ ಕಲಿಸಿದ ಗುರು ಹೆಂತಾವ ಹಾನ ಬಯಲಿಗಿ ತರಸಲ್ಲಿ || ಜೀ ||

ದುಮಾಲಿ :
ಮೊದಲು ಇತ್ತು ನೀರೆ ನಿರಂಕಾರ
ಶಬ್ದ ಓಂಕಾರ ನುಡಿಸಿದ ಶಂಕರ ||
ಹಿಡಿಸಿದಾನು ನಾದ
ಅನಂತಕಾಲ ಹತ್ತಲಿಲ್ಲದಾದ ||
ವಾಪಿನ ಪೆಟ್ಟಿಗಾಗಿ ನೀರ
ಹಾರಿತ್ತು ಏಳುದ್ದ ಮಾರ ||
ಗುಲ್ಲ ಅನವ್ಯಾರ ಹಿಡಿಸಿದಾನುನಾದ
ಜಲ ಮುನಿ ಹುಟ್ಯಾನ ನೀರಂದ || ಜೀ ||

ಏರ:
ಐನೂರ ಗಜ ಎತ್ರವಾದ ಆಲದ ಮರ ಹುಟ್ಟಿತು ಅಲ್ಲಿ
ಅಂವಸರ ಮಾಡಿ ಅಪ್ಪಿಕೊಂಡ ತೆಕ್ಕಿಲಿ
ಜಂಬು ಬಸವೇಶ್ವರ ಹುಟ್ಟಿದಾನು ನೀರಲ್ಲಿ
ಅಂವ ಏಸೋಕಾಲ ತಿರಗಿದಾನೋ ಅಂತರಲಿ || ಜೀ || ಚೌಕ

ಜಲ ಮುನಿ ಮಂತ್ರದಿಂದ ಮೂರು ಗಂಡಸ ಮಕ್ಕಳು ಅದ್ರು
ವೀರ ಶೂರರು ಯಾರು ಇಲ್ಲ ಅವರ ಸಮಾನ
ಜಂಬು ಬಸವೇಶ್ವರ ಮನಸಿನೊಳಗ ಹಿಂಗ ತಿಳದಾನ
ಈ ಪೃಥ್ವಿ ನಿರ್ಮಾಣ ಮಾಡುದ್ಯಾಂಗ ಮುಂದಿನ ಸೂಚನ
ಹಾಲಮುನ ಹೆಪ್ಪಮುನಿ ಬಿಗಿಮುನಿ ಮೂರು ಮಕ್ಕಳ ನಾಮ ಸ್ವತ ಇಡಶ್ಯಾನ
ಪ್ರಾಯಕಬರೋತನ ಮೂವರ‍್ನ ಜಾಕಿ ಜತನ ಮಾಡ್ಯಾನ || ಜೀ ||

ಭೂಮಿ ಹುಟ್ಟುವ ಬೀಜ ಇವರಲ್ಲೆ ಕಾಣುವದೆಂದು
ಒಂದು ದಿವಸ ಬಸವರಾಜ ಮುನಿಗಿ ಹೇಳ್ಯಾನ
ನಿನ್ನ ಮಕ್ಕಳಿಗಿ ಕೊಡು ಅಂತ ವರದಿ ಕೊಟ್ವಾನ
ಒಂದು ದಿವಸ ಹಾಲ ಮುನಿ ಮೇಲ ನೋಡುತ ನಿಂತಿದ್ದ
ಗಪ್ಪನಂತ ಬಸವೇಶ್ವರ ಅವನಿಗಿ ಹೊಡದಾನ
ಅವನ ಹಾಲಿನಂತ ರಕ್ತ ನೀರ ಮೇಲೆ ಔಗದಾನ || ಜೀ ||

ಸಪ್ಪಳ ಕೇಳಿ ಹೆಪ್ಪ ಮುನಿ ಅವಸರ ಮಾಡಿ ಓಡಿ ಬಂದ
ಹಿಂದಿನಂತೆ ಬಸವೇಶ್ವರ ಅವನಿಗಿ ಹೊಡದಾನ
ಅವನ ರಕ್ತತೆಗೆದು ನೀರ ಮೇಲೆ ಒಗದು ಬಿಟ್ಟಾನ
ಇಷ್ಟೆಲ್ಲಾ ಆಗದು ಬಿಗಿ ಮುನಿ ನಿಂತು ನೋಡ್ಯಾನ
ಅಣ್ಣದೇರನ ಕೊಂದಾನೆಂದು ಕಣ್ಣ ಕೆಂಪಗ ಮಾಡಿಕೊಂಡು
ಸಣ್ಣ ಹುಡುಗ ರಣದಾಗ ಬಂದು ರಣಗಂಭ ಹೂಡ್ಯಾನ
ಯುದ್ಧ ಮುಗಿಯೋತನಕ ದೇವರಿಗಿ ಬಹಳ ಕಾಡ್ಯಾನ || ಜೀ ||

ದುಮಾಲಿ :
ಬಸವೇಶ್ವರ ಅವನಿಗಿ ಹೊಡದಿದ್ದ
ಭೂಮಿ ಆಗ್ಯಾದ ||
ಬೀಜ ಮೊದಲಿಂದ ನೋಡು ನೀ ತಿಳಿದ
ಹುಡಕ ಬೇಡ ಕಳಕೊಂಡು ಕೈಯಾಂದ || ಜೀ ||

ಏರ :
ಮೂರು ಮಕ್ಕಳ ಪ್ರಾಣಕೊಂದಿದ ಮೇಲೆ ಭೂಮಿ ಆಗ್ಯಾದ ನೋಡ ಬಾಲಿ
ನೀ ಎಲ್ಯಾರ ಕಲತಿದೇನ ಕುಂಬಾರ ಸಾಲಿ
ಕೈಯಾಗ ಇಲ್ಲಂದರ ಕೇಳ್ಯಾನೇನ ಡೊಂಬರ ಬಾಲಿ
ಹಿತ್ತಾಳಿ ಸಾಮಾನ ಯಾಕ ಇಡತಾರ ಬಂಗಾರ ಮಾರಲ್ಲಿ || ಜೀ || ಚೌಕ

ಹಸಿ ನೋಡಿ ಬಿತ್ತಿದ ಬೀಜ ಹುಸಿ ಎಂದ ಹೋಗುದಿಲ್ಲ
ಒತ್ತಿ ಹಿಡಿದ ಕೂಡಲೆ ತಾಳ ಒಳಗ ನಟ್ಟಿತು
ಆದಿ ಅಂಕುರೆಂಬ ಕಂಬಳಕ ಹೋಗಿ ಮುಟ್ಟಿತು
ಮಹಾಜ್ಞಾನ ಎಂಬಕೋಲದಿಂದ ಬೀಜ ಮುಟ್ಟಿತು
ನಿಷ್ಠೂರದಿಂದ ಹೇಳತೀನಿ ಸಿಟ್ಟಿಗಿ ನೀನು ಬರಬೇಡ
ಹೊಟ್ಟಿ ಎಂಬೋ ಬುಟ್ಟಿ ನಿಂದು ಹ್ಯಾಂಗಬೆಳದಿತ್ತು
ನಿಂದು ನೀನೆ ಹೇಳು ಬಸರ ಆದರ ಹ್ಯಾಂಗ ತಿಳದಿತ್ತು || ಜೀ ||

ಹೇಳಕೋತ ಹೋದಂಗ ಎಂದು ಇದು ತಿಳಿರಾದು
ಜಾಡಿ ನೋಡಿದವರಿಗೆ ಗೊತ್ತು ಆಯಿತು
ಬರೆ ಕಲ್ತು ಹೋದಾವರಿಗೆ ಈ ಮಾತ ಹ್ಯಾಂಗ ನಿಲಕಿತು
ಆ ಮುತ್ತಿನ ಬೇಲಿಮಾಡಂದ್ರ ಹ್ಯಾಂಗ ತಿಳದಿತ್ತು
ಘಳೀ ಆಧಾರದಿಂದೆ ಏಳ ದಿವಸ ಒಳಗಾಗಿ
ಬೀಜ ಒಡದು ಮೆತ್ತಗಾಗಿ ಮುದ್ದಿ ಗಟ್ಟಿತು
ಮುಂದ ಮೂರು ಎಲಿಯಾಗಿ ಮೊಳಕಿ ಮ್ಯಾಲ ಬಂದಿತು || ಜೀ ||

ದುಮಾಲಿ:
ಬೀಜ ಇದ್ದಂಗ ಆಗತಾದ ಬಳಿ
ಮ್ಯಾಲ ಬೇಕ ಮಳಿ
ಬಿಟ್ಟರ ಛಲೋ ಗಾಳಿ
ಭತ್ತಕ ಅನುಕೂಲ
ಇದರಂತೆ ನೋಡು ಸರ್ವೆಲ್ಲ || ಜೀ ||
ಕಣ್ಣಿ ಗ್ರಾಮಕ ಬಾರ ನೀ ಮಳ್ಳಿ
ಬೇವಂಗ ಬ್ಯಾಳಿ
ಹೋಗ ನೀ ಹೊರಳಿ
ಇಲ್ಲಿ ನಿಂದ್ರೊದಲ್ಲ
ನಿನ್ನಾಟ ಇಲ್ಲಿ ನಡಿಯೋದಿಲ್ಲ || ಜೀ ||

ಏರ:
ಕೂಸ ಕಲ್ಲಣ್ಣ ಬಂದು ದಾಸ ಆಗಿ ಹೇಳತಾನ
ನಾಗೇಶವರಿಗೇನು ಗೊತ್ತು ಅನುಭವದ ಕೀಲಿ
ಹಾಡೋದಕಂದ್ರ ಬರತಾವ ಒಳ್ಳೆ ಹುರಪಿಲಿ
ಕರದ ವೈದು ಮಾರೆನಂತಿರಿ ಕಂಬಾರ ಕೇರಿಲಿ || ಜೀ || ಚೌಕ