. ಸವಾಲ್: ಮಣ್ಣುಶ್ರೇಷ್ಠ

ಹಾದಿ ಹಿಡಿದು ಹಾಡು ಹರದಾಸ ಹುಡುಗ
ಖಾರಾ ಹಾಕ್ಯಾನಿನ ಕಣ್ಣಾಗ
ಸ್ವರ್ಗ ಮೃತ್ಯ ಪಾತಾಳ ಮೂರೇಳು ಲೋಕ ನಿರ್ಮಾಣ
ಆಗ್ಯಾವ ಮಣ್ಣಾಗ || ಪಲ್ಲ ||

ನೀರೆ ನಿರಂಜನ ಇರುವುದು ಇತ್ತು ಸುರಂಜನ
ಸರ್ವಾಂಜನ ಯಾಕ ಐತು ನಮ್ಮ ಮಣ್ಣಾಗ |
ಸಾವಿರ್ದೆಂಟು ಬ್ರಹ್ಮಾಂಡ ನವಖಾಂಡ ದಶಖಾಂಡ
ಮೂಡಿದವು ನಮ್ಮ ಮಣ್ಣಾಗ || ಜೀ ||

ಬ್ರಹ್ಮ ವಿಷ್ಣು ರುದ್ರ ಮಹಾದೇವರ ಮುದ್ರಾ ಮೂಡಿತ್ತು
ಬಾದ್ದೂರ ಮಣ್ಣಾಗ
ಬಾಗಿದ ಹೊಡಿಯೊಳು ಮೂಡಿದ ಬಸವಣ್ಣ
ಹೊಡಿಯು ಬೆಳದಿತ್ತು ಇದೆ ಮಣ್ಣಾಗ || ಜೀ ||

ಇಳುವ :
ಓಂ ಶಿವಾಯ ಸೋಹಂ ಶಿವಾಯ ನಮಃ ಶಿವಾಯ ಮಣ್ಣಾಗ
ಕಾಮಿತ ಫಲದಾಯಕ ಮಣ್ಣಾಗ || ಜೀ ||

ಸುಖವಸ್ತು ಪರವಸ್ತು ನಿರವಸ್ತು ನಿಜ ಮಣ್ಣಾಗ
ಇಹಪರ ಸುರುವೆಲ್ಲ ಮಣ್ಣಾಗ || ಜೀ ||

ಸಿದ್ಧ ಸಾಧ್ಯ ವಿದ್ಯಾಧರರು ಉದ್ಭವಿಸಿರು ಮಣ್ಣಾಗ
ಕಿನ್ನರ ಕಿಂಪುರುಷರು ಮಣ್ಣಾಗ || ಜೀ ||

ಏರ:
ಹಕಾರ ವಕಾರ ಯಕಾರ ಮಕಾರ ಶಿಕಾರ
ಜರೂರ ಜನನ ಐತು ಮಣ್ಣಾಗ
ಸ್ವರ್ಗ ಮೃತ್ಯು ಪಾತಾಳಲೋಕ ನಿರ್ಮಾಣ
ಆಗ್ಯಾವ ನಮ್ಮ ಮಣ್ಣಾಗ || ಜೀ || ಚೌಕ

ಬ್ರಹ್ಮಾಂಡ ಮಣ್ಣಾಗ ಪಿಂಡಾಂಡ ಮಣ್ಣಾಗ
ಅಂಡ ಅಖಿಲಾಂಡ ಮೂಡಿ ಮಣ್ಣಾಗ
ನಮ್ಮ ನಾರಾಯಣ ನವ ವೀರರು ನವನಾಥರು
ಹುಟ್ಯಾರ ಮಣ್ಮಾಗ || ಜೀ ||

ಸೂರ್ಯ ಚಂದ್ರ ದೇವೇಂದ್ರ ವೃಷಭೇಂದ್ರ ಮಹಾಮಂದರ
ಅಂತವರು ನಿಂತೂ ಮೂಡಿ ಮಣ್ಣಾಗ |
ಅಷ್ಟವದಾನ ಅಷ್ಟೈಶ್ವರ್ಯ ಅಷ್ಟಶೋಭೆ ಪುಟ್ಟಿ ಮಣ್ಣಾಗ || ಜೀ ||

ಅತಲ ವಿತಲ ಸುತಲ ರಸಾತಲ ತಲಾತಲ ಮಹಾತಲ
ಪಾತಾಳ ಮಣ್ಣಾಗ |
ಕಣ್ಣಿಗಿ ಕಂಡಿದ್ದೆಲ್ಲ ಮಣ್ಣಾಗ ಹುಟ್ಯಾವ ಸಪ್ತ
ದ್ವೀಪಗಳು ಮಣ್ಣಾಗ || ಜೀ ||

ಇಳುವ :
ನವದಾನ್ಯ ನವನಿಧಿ ನವರತ್ನ ಆಗ್ಯಾವ ಮಣ್ಣಾಗ
ನಮ್ಮ ತ್ರಿವೇಣಿ ಹರಿದು ಮಣ್ಣಾಗ |
ಕಂಚ ಕಬ್ಬಿಣ ಹಿತ್ತಾಳಿ ಸೀಸ ಉಕ್ಕ ಮಣ್ಣಾಗ
ಉಡಪು ಮುಚ್ಚವು ವಸ್ತ್ರ ಮಣ್ಣಾಗ
ಉತ್ಪತ್ತಿ ಸ್ಥಿತಿ ಲಯ ಆಯಾ ಗಯಾ ಕಾಯಾಮ ಮಣ್ಣಾಗ
ಉದದಿ ಉಗಮ ಆಯಿತು ಮಣ್ಣಾಗ || ಜೀ ||

ಏರ:
ವರ್ಣಾಶ್ರಮ ಮಣ್ಣ ಏಳು ಬಣ್ಣ ಮಣ್ಣ
ಪೂರ್ಣ ನಿರ್ಮಾಣಾದವು ಮಣ್ಣಾಗ
ಸ್ವರ್ಗ ಮೃತ್ಯು ಪಾತಾಳಮೂರೇಳು ಲೋಕ
ನಿರ್ಮಾಣಾಗ್ಯಾವ ಮಣ್ಣಾಗ || ಜೀ ||

ಗುರುಲಿಂಗ ಜಂಗಮ ಪಾದೋದಕ ಪ್ರಸಾದ ಚಂಗ್ಯಾ ಬಿಂಗ್ಯಾ
ಹಿಂಗ್ಯಾವ ಮಣ್ಣಾಗ |
ವಿಭೂತಿ ರುದ್ರಾಕ್ಷಿ ಮಂತ್ರ ಯಂತ್ರ ಜಂತ್ರ ಸರೂ ತಂತ್ರ
ಹುಟ್ಟಿತು ಮಣ್ಣಾಗ || ಜೀ ||

ಸಿಂಪಿ ಮಣ್ಣ ಕಪ್ಪಿ ಭರ್ಪ ಮೀನಾ ಮೂಡಿವು ಮಣ್ಣಾಗ
ಗಪ್ಪಾಗಿ ಕೇಳು ಅಪ್ಪನ ಮಗನೆ ತುಪ್ಪ ಹುಟ್ಟಿತು ಮಣ್ಣಾಗ
ಜಪ ತಪ ಹೋಮ ಹವನ ಕ್ರಿಯಾ ವಿಚಾರ ಶಿವಾಚಾರ
ಗಣಾಚಾರ ಮಣ್ಣಾಗ || ಜೀ ||

ವೀರ ಶೂರ ಬೀರ ಪೀರ ಧೀರ ಸರ್ವರು ಹೋಗುವದು
ಮಣ್ಣಾಗ |
ಬಿತ್ತೋದು ಮಣ್ಣಾಗ ಬೆಳಿಯೋದು ಮಣ್ಣಾಗ ಉರಳಿ
ಸರಳ ಹೊರಳುವದು ಮಣ್ಣಾಗ

ಅಳಿತು ಹೊಳಿತು ತಿಳಿತು ಕಳಿತು ಕೊಳತು
ಹೋಗುವದು ಮಣ್ಣಾಗ || ಜೀ ||

ದುಮಾಲಿ:
ಕಣ್ಣಿಗಿ ಕಾಣುವುದು ಎಲ್ಲ ಮಣ್ಣೆ ಮಣ್ಣು ಐತಿರೆಣ್ಣ
ಶಕ್ತಿಮಯ ಜಗತ್ತೆಲ್ಲ ಹೆಣ್ಣ || ಜೀ ||

ಮಣ್ಣಿಗಿ ಹೆಣ್ಣಿಗಿ ಧರಣಿನೆ ಆಗ್ಯಾದ ಸಣ್ಣ
ಹರಸೂರವರ‍್ದು ಅದರ ಮೇಲ ಕಣ್ಣ || ಜೀ ||

ಹೆಣ್ಣಿನ ಕಾಲಾಗ ಪುಣ್ಯ ಪುರುಷರು ಹೊಂದ್ಯಾರ ಮರಣ
ಇದೆ ಹೆಣ್ಣು ಮಾಡಿತು ಗರು ಹರಣ || ಜೀ ||

ಏರ:
ಧರಣಿಗಧಿಕ ಕರಣಿ ಮಠದ ಸಾವಳಗಿ ಪೂರ್ಣ
ಮಹ್ಮದನ ಶರೀರ ಮಣ್ಣಾಗ
ಸ್ವರ್ಗ ಮೃತ್ಯು ಪಾತಾಳ ಮೂರೇಳು ಲೋಕ
ನಿರ್ಮಾಣಾಗ್ಯಾವ ನಮ್ಮ ಮಣ್ಣಾಗ || ಜೀ ||

 

೬. ಜವಾಬ್: ನೀರುಶ್ರೇಷ್ಠ

ಮಣ್ಣ ಹೆಚ್ಚ ಮಾಡಿ ಪದಾ ಹಾಡತಿ ಶ್ಯಾಣಿ ಕೇಳೆ ಶ್ಯಾಣ್ಯಾರಿಗ
ಮಣ್ಣಿನಾಗ ಎಲ್ಲಾ ಹುಟ್ಯಾದಂತಿ ಮಣ್ಣ ಕರಗಿ ಹೋಯಿತು ನೀರಾಗ || ಪಲ್ಲ ||

ಅಷ್ಟ ಪರ್ವತ ಸಪ್ತ ಸಮುದ್ರ ದಶಖಾಂಡ ಮುಳಗ್ಯಾವ ನೀರಾಗ |
ಯಥಾ ಬ್ರಹ್ಮಾಂಡ ತಥಾ ಪಿಂಡಾಂಡ ನವಖಾಂಡ ಪೃಥ್ವಿ ನೀರಾಗ || ಜೀ ||

ಓಂಕಾರ ಖಂಡಿಲ್ದೆ ನುಡಿಯತಿತ್ತೊ ಭಯಂಕಾರ ಧ್ವನಿ ನೀರಾಗ |
ಆಕಾರ ಯಕಾರ ಚಕಾರ ಸಕಾರ ಉಕಾರ ಉತ್ಪತ್ತಿ ನೀರಾಗ || ಜೀ ||

ತೆಪ್ಪಾದ ಪ್ರಕರ್ಣ ಧರ್ಣಿ ತೇಲಿತ್ತು ಹೆಪ್ಪ ಆಗಿತ್ತೋ ನೀರಾಗ |
ಕಪ್ಪು ಬಸಿಮತ ಖಪ್ಪರ ಗಡಗಿ ಉಪ್ಪಾಗಿತ್ತೊ ಯಪ್ಪ ನೀರಾಗ || ಜೀ ||

ಸತ್ತರ ನೀರ ಇದ್ದರ ನೀರ ಉತ್ಪತ್ತಿ ಆಗದು ನೀರಾಗ
ಮುತ್ತು ಮಾಣಿಕ ಸಿಂಪಿ ಶಂಖ ಚವದಾ ರತ್ನ ನೀರಾಗ || ಜೀ ||

ದುಮಾಲಿ :
ಆಗ ಎಲ್ಯಾಳ ಶಕ್ತಿ ಶೂನ್ಯ ಮಾರ್ಗ ನೀರಾಗ
ಜಗ ಮುಳಗಿ ಹೋಯಿತೋ ನೀರಾಗ || ಜೀ ||

ಉತ್ತಿ ಬೆಳಿತೀರಿ ನೀವು ಹತ್ತು ಧಾನ್ಯ ನೀರಾಗ
ನೀರಿಲ್ದೆ ಬಿತ್ತೆ ಭೂಮ್ಯಾಗ || ಜೀ ||

ಮಿಲಾಪ :
ಹುಸಿಯ ಮಾತ ಹುಲ್ಲ ಕೊಯ್ಯುವರೆಲ್ಲ
ಹಸಿಯ ಆದ ಅಪ ನಮ್ಮ ನೀರಾಗ
ಮಣ್ಮಾಗ ಎಲ್ಲಾ ಅದ ಅಂತಿ ಮಣ್ಣ ಕರಗಿ
ಹೋಯಿತೋ ನೀರಾಗ || ಜೀ || ಚೌಕ

ಮೂರ ಭಾಗ ನೀರ ಒಂದ ಭಾಗ ಭೂಮಿ ಮ್ಯಾಗ ತೆಳಗ
ಜಗತ್ತು ನೀರಾಗ ||
ಕೂಗ ಹೊಡದಾವಪ್ಪ ವೇದಶಾಸ್ತ್ರಗಲು ಮೇಘರಾಜ
ಅಂದ್ರೋ ನೀರಗ || ಜೀ ||

ಅದ್ರ ತದ್ರ ಅಂತ ಅರ್ಥ ತಿಳಿಯೋ ನೀ ಸಮುದ್ರನಾಥ
ಅಂದ್ರೋ ನೀರಿಗ
ಛಿದ್ರ ಮಾಡಿ ನೋಡೋ ಮುದ್ರ ಹೊಡದ ಬರದಿಟ್ಟಾರ
ರುದ್ರ ಭಾರತದಾಗ || ಜೀ ||

ಅಷ್ಟವರ್ಣ ಕಡಿ ಅರ್ಥದ ನೀರ ಶ್ರೇಷ್ಠ ಕಿರ‍್ಯಾ ಮಾಡಿ ನೀರಾಗ
ನಿಷ್ಠಿಲಿಂದ ನೀ ಕಟ್ಟಿದಿ ತೆಲಿ ಬ್ರಮಿಷ್ಟ ಕರ್ಮ ತೊಳಿ ನೀರಾಗ || ಜೀ ||

ದುಮಾಲಿ :
ಮಹಾಭಕ್ತಿಯುಳ್ಳ ನಬಿಸಾಬಗ ಬೇಕಾದ ನೀರ
ಐದು ಹೊತ್ತ ನಮಾಜಕ ನೀರ || ಜೀ ||

ಜನಮ್ಮ ಪವಿತ್ರ ಆಗದಕ ಮುಳಗಿ ಕ್ಷೇತ್ರ ಪಾಳ್ಯಾ ಗುಂಡದ ನೀರ |
ತಗೋ ಪ್ರಸಾದ ತೀರ್ಥದ ನೀರ || ಜೀ ||

ಮಿಲಾಪ:
ತಗೋ ಉತ್ರ ಗುರು ಪುತ್ರಹೇಳತಾನ ದೈವದ ಹತ್ರ
ಕೇಳೋ ನಿನ ಗುರುವಿಗ ಮಣ್ಣಿನಾಗ ಎಲ್ಲಾ ಹುಟ್ಯಾದ ಅಂತಿ
ಮಣ್ಣ ಕರಗಿ ಹೋಯಿತೋ ನೀರಾಗ || ಜೀ || ಚೌಕ

ಒಂದೇ ಭೂಮಿ ಒಂದೇ ಆಕಾಶ ಒಂದೆ ವಾಯು ಅಗ್ನಿ ದೀಪ
ಒಂದಕ ಎರಡು ಎರಡಕ್ಕ ಐದು ಐದು ಕಲ್ತು ಒಂದೇ ರೂಪ || ಜೀ ||

ಬೆಟ್ಟದ ತುದಿಯಲ್ಲಿ ಬೆಳದಿದ ಮರ
ನೀರಿಲ್ಲದೆ ಹ್ಯಾಂಗಾಗ್ಯಾದ ನೀರ ಹೆಚ್ಚ
ಏನ್ ಭೂಮಿ ಹೆಚ್ಚ ಶಾಹೀರ ಸುಮ್ಮ ಆಗಬ್ಯಾಡಗಪ್ಪ || ಜೀ ||

ದುಮಾಲಿ :
ಮೇಘರಾಜ ಬರಲಾರದರ ಏಳುದು ಎಂಥ ಸುಡಗಿ
ಗುಳ್ಯಾಕಟ್ಟಿ ಹೊತ್ತಾರಪ್ಪ ಗಡಗಿ || ಜೀ ||

ದೇವರೊಬ್ಬ ದಾವಾ ಮಾಡಬೇಕರಿ ನುಡಿ ನುಡಿಗಿ
ಬಾವಿಸಿದವ ಹಚ್ಯಾನ ಕಡಿಗಿ || ಜೀ ||

ಮಿಲಾಪ :
ದೇವಿ ಸ್ತೋತ್ರ ಮಾಡಿ ನೀವು ಹತ್ತೊದಿಲ್ಲ ಧಡಿಗಿ
ಏನ್ ಗೊತ್ತದ ನಾಗೇಶಿ ಹುಡಗಿ || ಜೀ ||

ನೇಮ ನಮಾಜ ಮಾಡಿಕವಿ ಹಜರತ್ ಮಾಡತಾನ
ಶಿವನ ಸ್ತುತಿ ನಿರಾಕಾರದಾಗ ಇದ್ದಿದಿಲ್ಲ ಪಾರ್ವತಿ
ಮಣ್ಮಿನಾಗ ಎಲ್ಲಾ ಹುಟ್ಟ್ಯಾದಂತಿ ಮಣ್ಣು ಕರಗಿ ಹೋಯಿತೋ ನೀರಾಗ || ಜೀ ||