೭.ಸವಾಲ್: ಆದಿಶಕ್ತಿಇದ್ದಿದ್ದಿಲ್ಲ

ಅನಂತ ಯುಗದ ಅಚಿಕಡಿ ಆದಿಶಕ್ತಿ ಇದ್ದಿದಿಲ್ಲ
ಖಂಡಿತ ಮಾತ ಹೇಳತನಿ ಬರದ ಶಾಸ್ತರ
ಅರ್ಥ ತಿಳಿಲಾರದೆ ಕವನಾ ಮಾಡಿ ಹಾಡತರಿ ಅಡತಾರ
ನಿಮಗೇನು ಗುರುತು ವಾರ‍್ಯಾಗ ಉಚ್ಚಿ ಹೊಯ್ಯುವ ಹೆಂಗಸರ
ಪ್ರಥಮ ಪೈಲೆ ಪೂರ್ವಿದಾಗ ನಿರಂಕಾರ ನೀರ ಇತ್ತು
ಮೂಲ ಸ್ತಂಭ ಓದಿ ನೋಡರೆ ಇದರ ವಿಸ್ತಾರ
ನಿಮಗ ಕಲಿಸಿದ ಗುರು ಯಾಂವ ಹಾನ ಮಳ್ಳ ಮಾಸ್ತರ || ಜೀ ||

ನಿರಂಕಾರ ನೀರ ಇತ್ತು ಭೂಮಿ ಆಕಾಶ ಇದ್ದಿದಿಲ್ಲ
ಸೃಷ್ಠಿ ನಿರ್ಮಾಣ ಆಗಿದ ಕಥಿ ಹೆಂತ ಅನವ್ಯಾರ
ಮೊಟ್ಟ ಮೊದಲ ಮಲಿ ಮಂಜನ ಇತ್ತರಿ ಭರಪೂರ
ನಾದಿನಾಗೆ ನಾದ ಬಿಂದು ಶಬ್ದ ಭಯಂಕಾರ
ಮೂಲಸ್ಥಾನದ ಬಡ್ಡಿ ಬೇಧ ತಿಳಿಸಿ ನಿಮಗ ಹೇಳತಿನಿ
ಓಂಕಾರಲಿಂದೆ ಹುಟ್ಟಿ ಬಂತರೆ ಓಂ ಅಕ್ಷರ
ಪಂಚ ಭೂತಗಳು ಅದರಲಿಂದ ಆಗ್ಯಾವ ತಯ್ಯಾರ || ಜೀ ||

ತಗಲ ಮಾತ ಆಡಿ ನೀವು ಹುಚ್ಚನಂಗ ಒದರಬ್ಯಾಡರೆ
ಅಂಧಕಾರ ಹರಡಿತ್ತು ಇದ್ದಿದಿಲ್ಲ ಸೂರ್ಯ ಚಂದಿರ
ಆಲದ ಎಲಿ ಮ್ಯಾಲ ಮಲಗಿ ಕೊಂಡಿದ ನಮ್ಮ ಶಂಕರ
ಯಾವ ಆಧಾರ ಇಲ್ದೆ ಮನಗಿದಾನ್ರೆ ಬಹಳ ಅಂತರ
ವಿಷ್ಣು ನಾಭಿ ಕಮಲದಿಂದ ಬ್ರಹ್ಮದೇವ ಹುಟ್ಟಿದಾನು
ಜಗ ಉತ್ಪನ್ನ ಮಾಡಲಾಕ ಅಂವಾ ತಾಳಿದ ಅವತಾರ
ಶಿವಸ್ವತ ಅವನ ಜ್ಞಾನಕ ಕೊಟ್ಟ ಅಧಿಕಾರಿ || ಜೀ ||      ಚೌಕ ೧

ಖಂಡಿತ ಮಾತ ಹೇಳತಿನಿ ವಿಚಾರ ಮಾಡಿ ಮನಸಿನ ಒಳಗ
ಅಚ್ಚಾ ಉಚ್ಚಾ ಮಾಡಿ ನೀವು ಯಾಕ ಹೇಳತಿರಿ ಬಡಿವಾರ
ಮೊಟ್ಟ ಮೊದಲು ಯಾರು ಇದ್ದಿದಿಲ್ಲ ಒಬ್ಬರ
ಕಶ್ಯಪ ಬ್ರಹ್ಮ ಜನನ ಭವದಾಗ ಹುಟ್ಟಿ ಬಂದಾರ
ದೇವಾದಿ ದೇವತ್ರೆಲ್ಲ ಅವನ ಹೊಟ್ಟಿಲಿ ಹುಟ್ಟಿದಾರ
ಅವನಿಂದ ಉತ್ಪನ್ನ ಐದು ಈ ಜಗದ ಆಕಾರ
ಇದು ಸುಳ್ಳಂದ್ರ ನಿಮಗೆ ತಿಕ್ಯಾಡಿ ಹರದಾರ || ಜೀ ||

ಬ್ರಹ್ಮನಿಂದ ಭವ ಬ್ರಹ್ಮಾಂಡ ಉತ್ಪನ್ನ ಐತು ಪಿಂಡ
ದೈತ್ಯದಾನವರು ಆಗ್ಯಾರ ಉತ್ಪತ್ತಿ
ನಿನಗೇನು ಗುರುತು ಎಲ್ಲಮ್ಮನ ಜೋಗತಿ || ಜೀ ||

ಗಂಡಿನಿಂದ ಪಿಂಡ ಎಂದು ನೌಖಾಂಡ ಎಲ್ಲ ಸಾರತೈತಿ
ಗಂಡಗ ಬಿಟ್ಟು ಮುಂಡ್ಯಾರು ನೀವು ಆಗಿಲ್ಲ ಬಸರ
ಬಸರಾಗಿ ಹಡಿಯಲಾಕ ಮೊದಲು ಬೇಕು ನಮ್ಮ ಮೊಸರ
ಪ್ರಥಮ ಪೈಲೆ ಪೂರ್ವಿದಾಗ ನಿರಂಕಾರ ನೀರ ಇತ್ತು
ಮೂಲಸ್ತಂಭ ಓದಿ ನೋಡರೆ ಇದರ ವಿಸ್ತಾರ
ನಿಮಗ ಕಲಿಸಿದ ಗುರು ಯಾಂವ ಹಾನ ಮಳ್ಳ ಮಾಸ್ತರ || ಜೀ || ಚೌಕ

ಭವದ ಆಕಾರ ಮಾಡುವುದಕ ಪಂಚತತ್ವ ಉತ್ಪನ್ನಾದವು
ಪಂಚ ಮುಖದ ಪರಮೇಶ್ವರ ಬರೆದ ಪ್ರಕರಣ
ಪೈಲೆ ಪ್ರಥಮ ಇತ್ತ ನೋಡರಿ ಅವನ ಲಕ್ಷಣ
ಹೆಣ್ಣಿನ ಪೌರುಷ ಯಾಕ ಹೇಳತಿದಿ ಅರಿಯಕಿ ಹೂರಣ
ಕೊಲ್ಲುವದು ಹುಟ್ಟಿಸುವದು ಶಿವನ ಅಧಿಕಾರ ಕೇಳು
ಗಂಡಗ ಬಿಟ್ಟು ರಂಡ್ಯಾರೆ ನೀವು ಆಗಿಲ್ಲ ಗರ್ಭಿಣ
ಅವನಿಂದೆ ಈ ಜಗ ಎಲ್ಲಾ ಆಗ್ಯಾದ ನಿರ್ಮಾಣ || ಜೀ ||

ತಂಗಳ ಪದಾ ಹಾಡಬ್ಯಾಡ ಮನಿ ಅಂಗಳ ಉಡಗಕಿ ನೀನು
ಅಷ್ಟದಿಕ್ಕುಗಳುಅವನಿಂದ ಆದುವು ಉತ್ಪನ್ನ
ಸೂರ್ಯ ಚಂದ್ರ ಚುಕ್ಕಿಗಳು ರಚಿಸಿದ ನಮ್ಮ ಮುಕ್ಕಣ್ಣ
ಏಕ ಅಂಕಿಮ್ಯಾಲ ಪಂಚ ಪೂಜಾ ಹಾಕಿರಲಾಕ ಸಂಪೂರ್ಣ
ಪೂಜಾ ಸುಳ್ಳಾದರೆ ಲಾಕ ಹೋಗಿ ಏಕಾಗುವದು
ಕಚ್ಚಿ ಕಳಿದು ಉಚ್ಚಿ ಹೊಯಿದು ಮುಚ್ಚುವರು ಮಣ್ಣ
ಹಾದಿ ಬಿಟ್ಟು ಪದಾ ಹಾಡಿದರೆ ಆಗುವುದು ಹೈರಾಣ || ಜೀ ||

ಆದಿ ಅನಾದಿ ಅಚ್ಚಿ ಕಡಿಗ ಆಗಿದ ಮಾತ ಕೇಳ ತಂಗಿ
ಭೂಪ ಬಸವ ಹುಟ್ಟು ಮಾಡಿದಾನರೆ ಭೂಮಿ ಮಂಡಣ
ಶಕ್ತಿ ಹೆಚ್ಚ ಅಂದ್ರ ತೆಲಿ ಬೋಳಸಿ ಬಿಡತಾರ ಹೈವನ
ನಮ್ಮ ಪರಮ ಜ್ಯೋತಿ ಎಲ್ಲರಲ್ಲಿ ಅಡಕ ಆಗಿ ಕುಂತಾನ
ಸೃಷ್ಟಿ ನಿರ್ಮಾಣ ಆಗಿದ ಕಥಿ ನಿನಗಿಲ್ಲ ಕೇಳ ಗುರುತ
ಪ್ರಪಂಚ ಪಾತಕ ಮಾಡಿದಾನರೆ ನಮ್ಮ ಭಗವಾನ
ಛಲ್ಯಾಪಿಲ್ಯಾ ಆದಾವು ರಾತ್ರಿ ನಿಮಗ ಹೊಡದರ ಗಾಣ || ಜೀ ||

ದುಮಾಲಿ :
ಮೊದಲ ಇದ್ದಿದಿಲ್ಲ ನಾಲ್ಕು ದಿಕ್ಕ ತಿಳಿಕೋರ ಪಕ್ಕ || ಜೀ ||
ಶೋಧ ಮಾಡಿ ಕೊಡತಿನಿ ಮಳ್ಳಬೋಳಿ
ಸಭಾದಾಗ ಮಾಡಬ್ಯಾಡೆ ನಿಲುವಳಿ || ಜೀ ||

ಭವದ ಆಕಾರ ಮಾಡಿ ಇಟ್ಟ ಅನಬ್ಯಾಡ ಝೂಟ
ಸಕಲ ಜೀವಕ ಬೇಕು ನಮ್ಮ ಗಾಳಿ
ನಿನಗೇನು ಗುರುತಿಲ್ಲದೇವರ ಸೂಳಿ || ಜೀ ||

ಕೂಡಪಲ್ಲ:
ದೇಶದೊಳು ದ್ಯಾಗಾಯಿ ಠೋಕ ಜಿಂದಾವಲಿ ದರ್ಗಾಠೀಕ
ಕವಿ ಗುಲಾಬ ಕವನ ಮಾಡಿ ಹೀಂಗ ತಿಳಿಶ್ಯಾರ
ಸಭಾದಾಗ ಬಂದು ಕರ ಮುಗಿದು ವರುವ ಬೇಡತಾರ || ಜೀ ||   ಚೌಕ

ಪ್ರಥಮ ಪೈಲೆ ಪೂರ್ವಿದಾಗ ನಿರಂಕಾರ ನೀರ ಇತ್ತು
ಮೂಲಸ್ತಂಭ ಓದಿ ನೋಡರೆ ಇದರ ವಿಸ್ತಾರ
ನಿಮಗ ಕಲಿಸಿದ ಗುರು ಯಾಂವ ಹಾನ ಮಳ್ಳ ಮಾಸ್ತರ || ಜೀ ||

 

. ಜವಾಬ್: ಆದಿಶಕ್ತಿಇದ್ದಕ್ಕಿ

ಆದಿಯುಗ ಹಿಡಿದು ಆದಿಶಕ್ತಿ ಇದ್ದಕ್ಕಿ
ಓದಿ ನೋಡು ವೇದಿನ ಗುಟ್ಟ
ವಾದ ವಿವಾದ ನಡಸಿದಿ ಅಡಮುಟ್ಟ
ನಿನ್ನಂತ ಕಸಮೂಳಹಾಡಂವಗ ನೋಡಿನಿ ಗಟ್ಟಾ
ಅನಾದಿಕಿನ್ನ ಆದಿಶಕ್ತಿ ಕಡಿಮಿಅಂದ್ರ
ಪಂಡಿತರಿಂದ ಬಿಳತಾವ ಏಟ || ಪಲ್ಲ ||

ಪರಂಜ್ಯೋತಿ ಶಕ್ತಿಯಿಂದ ಪರಬ್ರಹ್ಮ ಹುಟ್ಟಿದ
ಪಾರ್ವತಿ ಮಗ ಆದ ನೀಲಕಂಠ
ಪರಶಕ್ತಿ ರಚಿಸಿದಳು ದಿಕ್ಕಗಳು ಎಂಟ
ಕತಿಗೊತ್ತಿಲ್ದೆ ತಗಿಬ್ಯಾಡ ತಂಟ
ಹರದಿ ಹೃದಯದಿ ಹರ ಹುಟ್ಟಿದ ಖರೆ
ಅದು ನಿನಗೇನು ಗೊತ್ತು ಗರವಿಷ್ಟ || ಗೀ ||

ಲಕ್ಷ್ಮೀ ಜಡಿಯಿಂದ ನಾರಾಯಣ ಹುಟ್ಯಾನೆಂದು
ಶಕ್ತಿ ಪುರಾಣ ಬರದೈತಿ ಸ್ಪಷ್ಟ
ಅಕಿದಿಂದೆ ಬ್ರಹ್ಮ ಆದ ಪ್ರಕಟ
ಸಕಿಲ ಅಕಿಲ ಓದಿ ನೋಡು ಜಟಪಟ
ನಾರಿಯಿಂದ ಸಾವಿರ್ದೆಂಟು ಬ್ರಹ್ಮಾಂಡ
ಗಿರ್ವಾಣಿ ಪಾರಾಯಣ ಬರದಿಟ್ಟ || ಜೀ ||

ಇಳುವ :
ಬಲ ಬ್ರಹ್ಮ ಎಡ ವಿಷ್ಣು ಹುಟ್ಯಾರ ತಾಯಿ ಬಗಲಾಗ
ಕೂಡಿ ಉಂಡಾಗ ಅಕಿನ ಅಗಲಾಗ
ತೆತ್ತಿಸಕೋಟಿ ದೇವತರು ತಗಲ್ಯಾರ ತಾಯಿ ತೊಗಲಾಗ
ಅಂಗುಲಿ ಮನಿ ಅಂಗುಷ್ಟ ಹುಗಲಾಗ
ಮುಖ್ಯ ಮೂಳಸ್ತಂಭ ಹಿಂಗ ಬರದಿಟ್ಟಾರ ಮುಗಲಾಗ
ನಿಗಮ ಅಗಮ ಭೂಗೋಲ ತಗಲಾಗ || ಜೀ ||

ಕೂಡಪಲ್ಲ:
ಕ್ರಿಯಾ ವಿಚ್ಛಾ ಜ್ಞಾನ ಮೂರು ಒಮ್ಮಿಲೆ ಅರಿಮುಟ್ಟಾ
ದುಂಧಗಾರ ಅದರ ಅಂದ ತಿಳಿಗುಟ್ಟಾ
ನಿನಗ ಮಂದ ಮತಿ ಅಂದಾರು ಚರಕಟಾ
ಅನಾದಿಕಿನ್ನ ಆದಿಶಕ್ತಿ ಕಡಿಮಿ ಅಂದ್ರ
ಪಂಡಿತರಿಂದ ಬಿಳತಾವ ಏಟ || ಜೀ || ಚೌಕ

ತ್ರಿಶಕ್ತಿಯಿಂದ ತ್ರಿಮೂರ್ತಿಗಳು
ಮುಂಚಿತ ಜನಿಶ್ಯಾರ ಪಸಂದ
ಮೊದಲು ಎಲ್ಲಿಇತ್ತೋ ಕಾಳಂಕ ದುಂಧ
ಬ್ರಹ್ಮ ವಿಷ್ಣು ರುದ್ರ ಮೂವರಕಿನ್ನಾ
ಮಹಾಶಕ್ತಿ ಮಹಾದೇವಿ ಇದ್ದಾಳು ಮುಂದ || ಜೀ ||

ಪರಶಕ್ತಿ ಪಾದ ಇಟ್ಟ ಕೂಡಲೆ
ಪಾದವೆ ಪೃಥ್ವಿ ಆಗ್ಯಾದ
ಅಪ್‌ ತೇಜ ವಾಯು ಆಕಾಶ ಬಾಗ್ಯಾದ
ಮೊಳಕಾಲದಿಂದ ಮೃತ್ಯು ಸಾಗ್ಯಾದ
ನಾರಿ ಮಣಿಯಿಂದ ನವಖಾಂಡ ಜನಸಿ
ಹರನ ಹೃದಯದಿ ತೂಗ್ಯಾದ || ಜೀ ||

ನಂದಿನಿ ಅಂಗದೊಳು ಲಿಂಗ ಮಾಯಾಜಗ
ಶೃಂಗಾರ ಸೃಷ್ಠಿ ಹುಟ್ಯಾದ
ಮಂಗಲಾಂಗಿ ಪುರಾಣ ಬರದಿಟ್ಟಾದ
ನಿಮ್ಮ ಪರಮೇಶ್ವರಗ ಮೈದು ಕೊಟ್ಟಾದ
ಸರಸ್ವತಿ ಒಂಭತ್ತು ಲಕ್ಷ್ಮೀ ಹತ್ತು
ಪಾರ್ವತಿ ಹನ್ನೊಂದು ಅವತಾರ ಘಟ್ಯಾದ || ಜೀ ||

ಇಳುವ
ಅಕಿನ ಅಂಗ ರೋಮಿನ್ಯಾಗ ಲಿಂಗ ಹುಟ್ಯಾವ ನೌಕೋಟಿ
ಸಾವಧಾನದಂದ ಕೇಳು ಹುಚ್ಚಗೊಟ್ಟಿ ||

ಬಸವ ಭುವನೇಶ್ವರಿಗಿ ಬಂದು ಕೊಟ್ಟಿದಾನು ಭೇಟಿ
ತಾಯಿ ತಯ್ಯಾರ ಮಾಡ್ಯಾಳ ಈ ಸೃಷ್ಟಿ ||
ಈಶ್ವರಿ ವಿಶ್ವರೂಪ ಧರಿಸಿ ಬಸವ ಆದ ದುರಜಟ್ಟಿ
ಜನನಿ ಜಡಿಯೊಳಗಿಂದು ಜಲಪುಟ್ಟಿ || ಜೀ ||

ಕೂಡಪಲ್ಲ:
ಸದ್ಯೆ ಅದೇ ಜಲದೊಳಗಿಂದ ಜಲ ಮುನಿಗಿ
ಉದಿಸಿ ಜಲ ಸಾಧಿಸಿ ಹಾಕಿಳು ಕಟ್ಟಾ ||
ಅವನಿಗಿ ನಾಲ್ವರು ಮಕ್ಕಳಿದ್ದಾರು ಒಟ್ಟ
ಹಾಲ ಹೆಪ್ಪ ರಕ್ತ ಬಿಗಿ ಮುನಿಗಿ ಬಿಕ್ಕಟ್ಟ
ಅನಾದಿಕಿನ್ನ ಆದಿಶಕ್ತಿ ಕಡಿಮಿ ಅಂದ್ರ
ಪಂಡಿತರಿಂದ ಬಿಳತಾವ ಏಟ || ಜೀ || ಚೌಕ

ಆಕಾರ ಮಾಡೆಂದು ಮಾಯಿ ಭೀಕರಲಿಂದ
ಬಸವಗ ಹೇಳಿಳು
ಹೋಗಿದ ಅಂವ ಜಲ ಮುನಿ ಹಂತ್ಯಾಕ
ಜಾಣ ಬಸವ ಆಡಿದ ಒಂದು ಕೌತುಕ
ನಿನ್ನ ಮಕ್ಕಳಿಗಿ ಕೊಡು ಮೂಲಕಾರಣಕ
ನಾಲ್ವರಿಗಿ ಕೊಟ್ಟರ ನಾಟಕ ರಚಿಸುವೆ ನಿರಾಧಾರ ಏರಿಸಿ ಹೂರಣಕ || ಜೀ ||

ಮಕ್ಕಳಿಗಿ ಗೊಡೋದಿಲ್ಲೆಂದು ಧಿಕ್ಕರಿಸಿದ ಮುನಿ
ಮೂಳ ಬಸವಂದು ತಪ್ಪಿತು ದಿಕ್ಕ
ಶಕ್ತಿ ಸೂಚಿಸಿದಳು ನಿಂದ್ರೆಂದು ಯುದ್ಧಕ
ಬಸವಲ್ಲ ಹಲ್ಲು ಕಿಸ್ದಿದಾನು ಮಧ್ಯಕ
ಹಾಲು ಹೆಪ್ಪ ಬಿಗಿ ಮುನಿಗಿ ಕೊಂದು
ಸುರು ಮಾಡಿಳು ಭೂಮಿ ತಿದ್ದೋದಕ || ಜೀ ||

ಭುವನೇಶ್ವರಿಯಿಂದ ಭೂಮಿ ಆಗ್ಯಾದ
ಬಸವನ ಪೌರುಷ ಹೇಳಬೇಡ ತಿಕ್ಕ
ಅದರ ಬಗಿ ನಿನಗ ತಿಳಿಸುವೆ ಚೊಕ್ಕ
ಬಿಡು ಗೋಲಿ ಆಡುವ ಹುಡುಗಾಟಕಿ ಲೆಕ್ಕ
ಒತ್ತಿ ಕಟ್ಟಿದ ದಾಂವ ಬೆಲಿತನಕಲೂ
ಓಡ್ಯಾಡಿ ಮರುಕೋ ಬೇಡ ಸೊಣಕ || ಜೀ ||

ಇಳುವ:
ಭಕ್ತ ಬಸವ ಶಕ್ತಿದಿಂದ ಮುಕ್ತ ಆಗಿದಾನೋ ಹುಚ್ಚ
ಹಿಚ್ಚಿ ತಿನ್ನ ವರಂಗ ನೋಡಬೇಡ ಪೇಚ
ವಿಚ್ಛಾದಿಂದ ಕ್ರಿಯಾ ಕ್ರಿಯಾದಿಂದ ಜ್ಞಾನ ಆಯಿತ ಸ್ವಚ್ಛ
ಅಜ್ಞಾನ ಹ್ಯಾಂಗ ಆದಿತು ಹೆಚ್ಚ
ಶಕ್ತಿದಿಂದ ಆಕಾರ ನೀ ಬೇಕಾದ ನುಡಿಬೇಡ ಪಿಚ್ಚ
ನಿನ್ನ ಮುಕಳಿಗಿ ಹಾಕ್ಯಾರ ಕಚ್ಚ || ಜೀ ||

ಕೂಡಪಲ್ಲ:
ಧರೆಯೊಳು ಮೆರೆಯುವ ಹಿರೇ ಸಾವಳಗಿ
ಜಗದ್ಗುರು ಶಿವಯೋಗಿ ಪೀಠ
ಕವಿ ಮಹ್ಮದ ಅಲ್ಲಿ ಮಾಡಿರು ಊಟ
ಕಾಶಿನಾಥ ಎತ್ತಿದ ಎಂಜಲ ತಾ
ಅನಾದಿಕಿನ್ನ ಆದಿಶಕ್ತಿ ಕಡಿಮಂದ್ರ
ಪಂಡಿತರಿಂದ ಬಿಳತಾವ ಏಟ || ಜೀ || ಚೌಕ ೩