. ಸವಾಲ್: ದೈವಇದ್ದಲ್ಲಿದೇವರಂತುಇದ್ದೇಇರತಾನ

ಹತ್ತುಮಂದಿ ದೈವಕ್ಕೆಲ್ಲ ಕೈ ಮುಗಿದು ಹೇಳುವೆನು
ದೈವ ಇದ್ದಲ್ಲಿ ದೇವರಂತು ಇದ್ದೇ ಇರತಾನ
ಆ ದೇವರು ಇದ್ದು ಇಲ್ಲದಂಗಾಗಿ ಸುಮ್ಮನ ಕುಂತಾನ
ಒಬ್ಬದೇವರಿಗಿಂತ ದುಡಕಂಡವಗ ಸಿಕ್ಕೆ ಸಿಗತಾನ
ದೇವರು ಸಿಗಲಿ ಸಿಗಲಾರದೆ ಇದ್ದರು ಇರಲಿ
ಪರದೇವರ ಮೇಲೆ ಭಕ್ತಿ ನಮದು ಜನ್ಮ ಇರುತಾನ || ಜೀ ||

ದೇವರಂತು ಘಟಮುಟಹಾನ ದೇವರ ಮೇಲೆ ಬೋಜಾನಮದು
ದೇವರಿಗಿ ಹತ್ತಿದ ಮಾತು ಐತಿ ಕಟ್ಟ ಕಡಿತಾನ
ಆ ದೇವರ ಆಡಿದ ಮಾತಿಗಿ ಮನವೆ ಸಾಕ್ಷಿ ಇರತಾನ
ಅಪ್ಪಾ ದೇವರಂತು ಸರ್ವರಲ್ಲಿ ಸಾಕ್ಷಾತ ಹಾನ
ದೇವರಿಗಿ ಬಿಟ್ಟು ಗತಿ ಇಲ್ಲ ದೇವರಲಿಂದೆ ನಾವು ನೀವೆಲ್ಲ
ಗರತೆರಿಗಿ ಗಂಡ ಇದ್ದಂಗ ದೇವರ ಇರತಾನ || ಜೀ ||

ಮರ್ತ್ಯ ಲೋಕದವರಿಗೆಲ್ಲ ಒಬ್ಬನೆ ಗಂಡ ಒಬ್ಬನೆ ದೇವರು
ಪೃಥ್ವಿಗಂಡ ಬ್ಯಾರೆ ಅದಾನು ಸೂರ್ಯ ನಾರಾಯಣ
ಮತ್ತು ಚಿಕ್ಕಿ ಗಂಡ ಚಂದ್ರಾಮನ ಚಿಕ್ಕ ಮುತ್ತೈದೇರ ಖೂನ
ಇವರು ಮುತ್ತೈತಾನ ಉಂಡು ಬಂದಾರ ಹೋಗಿ ಅಲ್ಲಿತಾನ
ಐದು ಮಂದ ಮುತ್ತೈದ್ಯಾರು ಒಂದೆ ಅಗಲಲ್ಲಿ ಉಂಡಿದಾರು
ಐದು ಮಂದಿಗಿ ಶ್ರೀಕೃಷ್ಣ ಒಬ್ಬನೆ ಸಲುವ್ಯಾನ || ಜೀ ||

ದುಮಾಲಿ :
ಇಲ್ಲಿಗಿ ಬಂದಾನ ಈ ಮಾತ
ಹತ್ತುವಲ್ದು ಗುರುತ
ಮಾಡ್ರಿ ಇದರ ಅರ್ಥ
ತಿಳಿವಲ್ದು ನನಗ
ಹೇಳ ಅಂತಿನಿ ಹೆಣ್ಣ ಹಾಡಕೀಗ ||

ಮದವಿಗಂಡ ದೇವರ ಸರಿ
ದೇವರಿಗಿ ಬಿಡತೀರಿ
ದೇವರಿದ್ದು ಹೋಗತಿರಿ ಪರದೇವರೀಗ
ಸುಳ್ಳು ಹೇಳತೀರಿ ಮನಿ ದೇವರಿಗ || ಜೀ ||

ಹಿಂಗಾಗಿ ಕೆಟ್ಟಾದ ನಮ್ಮ ನಡಿ
ಬದಲ ಬಿದ್ದು ನುಡಿ
ಕೂಸಗೋಳ ಸಿಡಿ ಕೆಟ್ಟಾವ ಮುಗಲಾಗ
ಬಿಡ್ಯಾಕ ಬಿದ್ದು ಹಡಿಲಾರದೆ ಸತ್ರ್ರೆ
ಮತ್ತೊಬ್ರ ಬಗಲಾಗ || ಜೀ ||

ಏರ:
ನುಡಿಯಂತೆ ನಡಿಯಿಲ್ಲ ನಡಿಯಂತೆ ನುಡಿಯಿಲ್ಲ
ನಡಿ ನುಡಿ ತಪ್ಪಿದ ಮೇಲೆ ದೇವರೇನ ಮಾಡತಾನ
ಆ ದೇವರು ಇದ್ದು ಇಲ್ಲದಂಗಾಗಿ ಸುಮ್ಮನ ಕುಂತಾನ
ಒಬ್ಬ ದೇವರಿಗಂತ ದುಡಕಂಡವಗ ಸಿಕ್ಕೆ ಸಿಗತಾನ
ದೇವರ ಸಿಗಲಿ ಸಿಗಲಾರದೆ ಇರಲಿ ಪರದೇವರ
ಮೇಲೆ ನಮದು ಜನ್ಮ ಇರೋತಾನ || ಜೀ ||   ಚೌಕ ೧

ದೇವರಂತ ಕೇಳುದಕ ಹೆಣ್ಣು ಗಂಡು ಕೂತಿರಿ ಇಲ್ಲಿ
ಬಂಡ ಮಾಡಿ ಭಾಟರಂಗ ಬಾಯಿ ಬಡಿಬ್ಯಾಡರಿ
ನಾವೇನ ಕೊಂಡು ತಂದ ಜೋಳ ಅಲ್ಲ ಬಿತ್ತಿ ಬೆಳ ದೇವರಿ
ನಮ್ಮ ಮುಕಳಿ ತುಂಬಿ ಎತ್ತಿ ಕೊಟ್ಟರ ಒತ್ತಿ ಅಳಿತಾರಿ
ಬಿತ್ತಿ ಬೆಳಿವಂಥ ಶರಣರಿಗೆಲ್ಲ ಕೈ ಮುಗಿದು ಹೇಳುವೆನು
ಹತ್ತಿ ಹಿಡ್ರಿ ಹೊಲದಾಗ ಹೊಲಾ ಕಳದಿರಿ || ಜೀ ||

ದೇವರ ಮಾಡಿದ್ದು ಹೆಸರಿಗೈತು ನಾವು ಮಾಡಿದ್ದು ಬಸರಿಗೈತು
ಸ್ವಲ್ಪ ಕಸರ ಸೇರಿ ಕಿಂವ ಆಗಿ ನೆಳ್ಳಲಕತ್ತೆವರಿ
ಅದು ಹಳಿ ಹುಣ್ಣಿಗಿ ಬಿದ್ದಾದ ಬಾ ಬಾ ಲ್ವಾಳಿಗೊಂಡದರಿ
ಸದ್ಯೆ ನಾಸರಾಡಿ ಲ್ವಾಳಿ ಬಿದ್ದು ಸೋರಲಕತ್ತೆದರಿ
ಲ್ವಾಳಿ ಬಿದ್ದು ಕಂಟಲೆ ಎತ್ತ ಏಳೂರ ಸಿಮ್ಯಾಗ ಹೋಗಿಸತ್ತ
ಏಳೂರ ಕಾಗಿ ಎಬ್ಬಿಸಲಾಕ ಬೀರಯ್ಯ ಹೋಗ್ಯಾನರಿ || ಜೀ ||

ಹೊಲಾ ಬಿತ್ತೊ ಹೊಳಿಸಾಲ ಮನಿಸಾಲದಾಗ ಶುದ್ಧ ಇಲ್ಲ ತೆಲಿಸಾಲ
ಜರಾ ಸರಸಿ ಹಿಡಿದ ಬರಚಿ ಹೊಡಿಯಿರಿ
ಅಪ್ಪಾ ಈ ವರ್ಷ ಹಿಂಗೈತು ಯಾರಿಗಿ ಹೇಳೋಣರಿ
ಬರಸಾಲದಾಗ ಹೊಲಮನಿ ಕರಿಸಾಲ ಕೆಡವಿರಿ
ವರ್ಷಿನ ಮಳಿ ವರ್ಷಿಗಿಲ್ಲ ಬಿರಸ ಭೂಮಿ ಬೆಳಿಲಿಲ್ಲ
ಬರುವ ಮಳಿ ಯಾಕ ಬರಲಿಲ್ಲ ದೇವರಿಗಿ ಕೇಳೋಣರಿ || ಜೀ ||

ಇಳುವ:
ಇನ್ನ ಯಾರಿಗಿ ಕೇಳನು ದೇವರಾ
ದೇವರ ಹೇಳವರಾ ಇಲ್ಲ ನೋಡ್ರಿ ಯಾರ
ಹೋದ್ರು ತಮ್ಮ ಠಾಣ್ಯಾಕ ನಾವು ಸುಮ್ಮನೆ ಅತ್ತಂಗಾದ ಗುಡ್ಡದ ಅರಣ್ಯೇಕ || ಜಿ ||

ದೇವರು ಹೇಳವರು ಇಲ್ಲ ಯಾರ‍್ಯಾರ ನಾವೇ ಯಾರಕ್ಯಾರ
ನಮ್ಮಲ್ಲೆ ನಾವು ಶುದ್ಧ ಇಲ್ಲ ನಮ್ಮ ಮನಕ
ನಾವು ವಿನಾಃ ಕಾರಣ ದೇವರಿಗಿ ಅನ್ನುದ್ಯಾಕ || ಜೀ ||

ಏರ:
ಒಬ್ಬರ ವಿಶ್ವಾಸ ಒಬ್ಬರಿಗಿಲ್ಲ ದೇವರ ವಿಶ್ವಾಸ ಭಕ್ತರಿಗಿಲ್ಲ
ಗಣಸರ ವಿಶ್ವಾಸ ಹೆಂಗಸರಿಗಿಲ್ಲ ಅಂತಾನ
ಗುರುವೆ ದೇವರು ಇದ್ದು ಇಲ್ಲದಂಗಾಗಿ ಸುಮ್ಮನ ಕುಂತಾನ
ಆ ದೇವರಿಗಿಂತ ದುಡಕಂಡಂವಗ ಸಿಕ್ಕೆ ಸಿಗತಾನ
ದೇವರ ಸಿಗಲಿ ಸಿಗಲಾರದೆ ಇದ್ದರ ಇರಲಿ
ಪರದೇವರ ಮೇಲೆ ನಮದು ಜನುಮ ಇರುತಾನೆ || ಜೀ || ಚೌಕ

ದೇವರಂತು ಸರ್ವರಲ್ಲಿ ಭಕ್ತಿ ಇದ್ದಂಗ ಇರತಾನ
ಈ ನರ ಮನುಷ್ಯರಿಗಿ ತಂದಿ ತಾಯಿನೆ ದೇವರ
ತುದಿಲಿಂದೆ ತಾಯಿನೆ ಹುಟ್ಟಿ ಬಂದಾಳೋ ಮೊದಲಿನ ಆಕಾರ
ತಾಯಿ ತಂದಿಲಿಂದ ಹುಟ್ಟಿ ಬಂದೇವೋ ಸರ್ವರೆಲ್ಲರ
ಹುಟ್ಟಿಬಂದ ಮಾನವರಂತು ದೇವರೆಂದು ಆಗುವುದಿಲ್ಲ
ಹುಟ್ಟಿ ಸಾಯುದು ತಪ್ಪಲಿಲ್ಲ ನಮ್ಮ ನಿಮ್ಮ ಹಣಿಬಾರ || ಜೀ ||

ಎಷ್ಟೋ ಮಂದಿ ಸತ್ತಾರು ಜಗ ಹುಟ್ಟಿ ಸತ್ತೆ ಇಲ್ಲ
ಎಷ್ಟೋ ಮಂದಿ ಸತ್ತೆ ಹೋದಾರು ಯಾರಿಗುಪಕಾರ
ಈ ಸ್ಥೂಲ ದೇಹದವರಿಗಿ ಮರಣ ತಪ್ಪಿಸುವರ‍್ಯಾರ
ಅಪ್ಪಾ ಜನನ ಮರಣ ದೇವರಿಗಿಲ್ಲ ಕೇಳಿರಿ ಹಿರಿಯರ
ಗುಡ್ಡದೊಳಗಿರುವಂತಹ ದೊಡ್ಡ ದೊಡ್ಡ ಮರಗಳಿಗಿ
ಕಟ್ಟಿ ನೀರ ಹಾಕತಾನ ಸೃಷ್ಠಿ ಈಶ್ವರ || ಜೀ ||

ನಮ್ಮ ಸಿದ್ಧ ಸಾಧುರಿಗೆಲ್ಲ ಇದ್ದ ದೇವರ
ಇದ್ದಂತೆ ಬುದ್ಧಿಗೇಡಿಗಳಿಗಿ ಇದ್ದಿದು ಯಾವುರ
ನಾವು ನಿದ್ದಿಗಣ್ಣಾಗ ಇದ್ದೇವು ನಮಗ ಸಿಕ್ಕಿಲ್ಲ ಆ ಊರ
ನಾವು ಖುದ್ಧ ಇರುವುದು ಹಿಂದೂ ದೇಶ ಅಲಮೇಲ ಊರ
ಭಕ್ತ ಮಾಡಿದ ಕವಿ ಬಲ್ಲವರಿಗಿ ಬಹಳ ಸವಿ
ಅಲ್ಲದಂತ ಅಜ್ಞಾನಿಗಳಿಗಿ ಬಹಳ ದುಸ್ತರ || ಜೀ ||

ಇಳುವ:
ಆಲಮೇಲ ಊರ ಜಾಹೀರ
ಗಾಲಿಬ ಸಾಹೇಬ ಪೀರ ಆ ತಂದೆ ಆಧಾರ
ವಿದ್ಯಾ ಬುದ್ಧಿಗಿ ಶ್ರೀಗುರು ತಿದ್ದಿ ಹೇಳಿದ ಸಿದ್ದಿಗಿ || ಜೀ ||

ಗಿರಿಮಲ್ಲ ಕವಿಗಾರ ಜೋಡಿಲಿ ಹಾಡುವರ
ಅಣ್ಣಾರಾಯ ವೇದ ಓದಾಂವ ಕೂತು ಗಾದಿಗಿ
ಎದಿ ಸೀಳಿ ಮೂರಕ್ಷರ ಹೇಳಿದ ವಾದಿಗಿ || ಜೀ ||

ಏರ:
ಕಂದ ರಾಮಸಿಂಗ ಕವಿ ಮಾಡಿ ಹೇಳತಾರು
ಸಂದ ಸಂದಿಗೆಲ್ಲ ದೇವರ ತುಂಬಿ ತುಳಕ್ಯಾನ
ಆ ದೇವರು ಇದ್ದು ಇಲ್ಲದಂಗಾಗಿ ಸುಮ್ಮನ ಕೂತಾನ
ಒಬ್ಬ ದೇವರಿಗಂತ ದುಡಕಂಡಂವಗ ಸಿಕ್ಕೆ ಸಿಗತಾನ
ದೇವರ ಸಿಗಲಿ ಸಿಗಲಾರದೆ ಇರಲಿ ಪರದೇವರ
ಮೇಲೆ ಭಕ್ತಿ ನಮದು ಜನ್ಮ ಇರುತಾನ || ಜೀ || ಚೌಕ

 

೧೦.ಜವಾಬ್: ದೈವಇದ್ದಲ್ಲಿದೇವರಅಂವಹ್ಯಾಂಗಇರತಾನ

ಕೂಡಿದಂತ ಸಭಾದಾಗ ಹಾಡಿನಾನು ಹೇಳತೀನಿ
ದೈವ ಇದ್ದಲ್ಲಿ ದೇವರ ಅಂವ ಹ್ಯಾಂಗ ಇರತಾನ
ಒಬ್ಬ ದೈವುಳ್ಳವನ ದೈವದಲ್ಲಿ ದೇವರಿದ್ದಾನ
ಇಲ್ಲದ ದರಿದ್ರನ ದೈವದಲ್ಲಿ ದೇವರ ಎಲ್ಲಿ ಹಾನ
ಪ್ರಯತ್ನ ಪಡಿಯದ ಹೊರತು ಪರವಸ್ತು ಸಿಗೂದಿಲ್ಲ
ಅರವಿನೊಳು ಗುರು ಐಕ್ಯ ಆಗ್ಯಾನ || ಜೀ ||

ಭೂಮಿಗಂಡ ಮಳಿರಾಜ ಅಂತ ಮೇಳ ಮಾಡಿ
ಹೇಳತೀರಿ ಗಂಡಸಂತ ತಿಳಿದಿರೇನು ಗಂಗಾದೇವಿನ್ನ
ಸೂರ್ಯ ಚಂದ್ರ ಚಿಕ್ಕಿ ಸಹಿತ ಅಚ್ಚ ಹೆಣ್ಣಿನ ಚಿನ್ನ
ಪಂಚ ಭೂತಗಳು ಪ್ರಥಮದಲ್ಲಿಹೆಣ್ಣಿನ ಸಮಾನ
ಐದು ಮಂದಿ ಮುತ್ತೈದೇರು ನಿತ್ಯ ನಿನಗ ಉಣಸತಾರ
ಪತ್ತ ಕಳಕೋ ಬ್ಯಾಡ ಗೊತ್ತರಲಿ ಸ್ವಾನ || ಜೀ ||

ಮುತೈದಿ ಮಂಡಿ ಮೇಲಿನ ಸೆರಗ ಕುಂಡಿ ಮೇಲೆ
ಬಂದಾದಂತ ಕಂಡ ಕಂಡಂಗ ಹೇಳತಿರಿ ಬಂಡತಾನ
ಉಂಡಮನಿ ಜಂತಿ ಎಣಿಸುವ ಗಂಡಸಗ ಏನ ಖೂನ
ದಂಡಿ ತೊಂಡಲ ಕಟ್ಯಾಳ ಮಂಗಲವತಿ ಇಲ್ಲ ಅನಮಾನ
ಗರ್ತ್ಯೆರಿಗಿ ಗರವ ಇಲ್ಲ ಪತಿವರ್ತೆರಿಗಿ ಪಾಪವಿಲ್ಲ
ನೀಚ ಹಾಡಂವಗ ನಾಚಿಕಿ ಇಲ್ಲ ನರಕ ಮಲಿನ || ಜೀ ||

ಮಲಿನದೊಳಗ ಮನ ಸಿಲಕಿ ನೆಲಿ ನಿಮಗ ಸಿಗೂದಿಲ್ಲ
ಒಲಿ ಊದವರ ತಲಿ ಹಿಡ್ಯಾವರದು ಚಾಲ ಹೌದೇನ
ಹಡಿಲಾರದೆ ಸತ್ತಾರಂದಿರಿ ಬಿಡ್ಯಾಕ ಬಿದ್ದು ಬೆಳತಾನ
ತನ್ನ ಸತಿಗಿ ಬಿಟ್ಟು ಪರಸತಿಗಿ ಹೋಗಾಂವ ಪಶುವಿನ ಸಮಾನ
ಗಂಡಸರ ಹಾದಿಮ್ಯಾಗ ಇದ್ದರ ಹಾದರ ಹ್ಯಾಂಗ ಆಗತಾವ
ಹೋಗುವರು ಹೋಗತ್ತಿದ್ದರ ಮಾಡವರು ಮಾಡುದೇನ || ಜೀ ||

ಚಾಲ:
ಸರಿಯಾಗಿ ನಡದರ ಸಾಯುಜ್ಯ ಪದವಿ ಸುಕಾಲ
ಯಾಕ ಕಡಿಮಿ ಆದಿತು ಮಳಿಗಾಲ || ಜೀ ||

ಅತಿ ಹಿತದಿಂದ ಸ್ವತ ದುಡಿಯಬೇಕು ನಿನ ಹೊಲದಾಗ ತೋಲ
ಮಂದಿ ಹೊಲಕ ಮನಸ್ಸು ಇಟ್ಟು ನಿಂದೆ ಕೆಡುವಿನಕೊಂಡಿ ಕರಿಸಾಲ || ಜೀ ||

ಮಂದಿ ಹೊಲಮಾಡಿದರ ಮನಿತಾನ ಎಂದು ಹಿಂಗೋದಿಲ್ಲ
ಮಂದಿ ಹೊಲದಾಂದು ಮಂದಿಗಾತು ದೀಪಕ ದಿಕ್ಕಿಲ್ಲ || ಜೀ ||

ಏರ :
ಹ್ವೊಳಿದಾಗ ಹೊಲ ಉಳಿತು ಗಳ್ಯಾ ನೆಟ್ಟಗ ಆಗಲಿಲ್ಲ
ಫಳಿ ಹೊಡದರ ಒಳ್ಳೆ ಬೆಳಿ ಬರುವದು ಘನ್ನ ಘನ್ನ
ಸತ್ಯಾತ್ಮ ಶರಣರು ಬಿತ್ತಿದಂತ ಖೂನ
ಉಪದೇಶ ಎಂಬ ಬೀಜ ಬಿತ್ತಿ ಭಕ್ತಿಸ್ಥಾನ || ಜಿ || ಚೌಕ

ಅರು ಎಂಬೋ ಗುರು ನಿಮ್ಮ ಮನಿ ದೇವರ ಇದ್ದಂತೆ
ಅವನಿಗಿ ಮರತು ಮರವಿಗಿ ಬಿದ್ದು ಹಿಡದಿರಿ ಮಂದಿಕಾಲ
ಹಿಂಗ ಹಗ್ಗ ಇಲ್ಲದೆ ನಡದು ಅಗ್ಗ ಆದುವು ನಡೆಯಲ್ಲ
ಮಡಿ ಉಡಿ ಇಲ್ಲದೆ ಮೃಢ ಹರನ ನೋಡಿದೆ
ಬಾಡಿಗಿ ಎತ್ತ ಆಗಿ ದುಡಿದ ಭೂಮಿ ಮ್ಯಾಲ || ಜೀ ||

ಏಳು ಜನುಮ ತಿರಗಿ ಮರಳಿ ಮಾನವ ಜನ್ಮಕ ಬಂದ ಮ್ಯಾಲ
ಇದು ಏಳೂರ ಸೀಮಿ ತಿಳಿಯಬೇಕು ಕಡಿಕೌಲ
ಮಾಯ ಎಂಬ ಗಾಯಿ ಮಾಯಿಲಿಲ್ಲಸೋರಿತು ಸದೋ ಕಾಲ
ಕಾಕ ಗುಣ ಎಂಬ ಕಾಗಿ ಬಂದು ಕಚ್ಚೋದು ಮ್ಯಾಲ ಮ್ಯಾಲ
ಲ್ವಾಳಿ ಬಿದ್ದು ಗೋಳ ನಡಿತು ಏಳಲಾರದೆ ನೆಲಕ ಬಿತ್ತು
ಹೇಳಲಾರದೆ ಹಾಳಾಗಿ ಹೋಯಿತು ಕಾಳ ಬಿಡಲಿಲ್ಲ || ಜೀ ||

ಮೋಕ್ಷ ಸಿಗದೆ ಏಳೂರ ಕಾಗಿ ಎಬ್ಬಿಸೂತ ನಡದ ಬೀರ
ಮರಳಿ ಮಾನವ ಜನ್ಮಕ ಬರೂದು ಭರೋಸ ಉಳಿಲಿಲ್ಲ
ಇದನ್ನು ಅರಿತು ಮಹಾತ್ಮರು ಮಾನು ಜನ್ಮ ಕಳಿಲಿಲ್ಲ
ಮಾಯದ ಗಾಯಿ ಮಾಯಿಸಿಕೊಂಡ್ರು ಕಾಗಿ ಸುಳಿಲಿಲ್ಲ
ಜನನ ಮರಣಗಳು ನಿಗಿ ಮನಿಜಾಣಗ ಮನಸ್ಸು ಇಟ್ಟು
ಅಕ್ಕ ಮಹಾದೇವಿ ಮುಕ್ತಿ ಪಡದಾಳ ಜಾಹೀರ ಜಗವೆಲ್ಲ || ಜೀ ||

ಚಾಲ :
ಅಂಗಸತಿ ಪ್ರಾಣಲಿಂಗ ಪತಿ ಶರಣರ ವಗತಾನ
ಮುಂದ ಪಡದಾರೋ ಮೋಕ್ಷದ ಸಂತಾನ || ಜೀ ||

ಹುಟ್ಟಿ ಬಂದು ಸತ್ತು ಹೋದ್ರು ಅಂದಿಗಿಂದಿಗಿ ಎಷ್ಟೋ ಜನ
ಸೃಷ್ಟಿ ಈಶ್ವರ ಸುಲುವ್ಯಾನಂದಿ ದುಡದಷ್ಟು ಪಗಾರ ಕೊಡತಾನ || ಜೀ ||

ಕಷ್ಟದಂತೆ ಫಲ ದೊರಿವದು ಭೋಗದ ಭೋಜನ
ಮಾಡಿದುಣ್ಣೋ ಮಾರಾಯ ಉಪಕಾರ ಯಾರಿಗಿ ಹೇಳತಿನ್ನ || ಜೀ ||

ಕೂಡಪಲ್ಲ:
ಉಪಕಾರಗೇಡಿಗಿ ನೆಪ್ಪ ಇಲ್ಲ ಅಪ್ಪ ಅನ್ನುವದು ಮರಿಯಲಿಲ್ಲ
ಆದಿಮಾಯಿ ತಾಯಿಲಿಂದ ತಂದಿ ಬಂದಾನ
ಹಿಂದಿಂದ ಏನಗೊತ್ತು ಮುಂದ ಹುಟ್ಟಿದ ಕಂದ ನೀನ
ತಾಯಿ ತಂದಿಲಿಂದ ಬಂದ ಕೂಡಿದಿ ಮಂದಿ ಮಕ್ಕಳನ್ನ || ಜೀ || ಚೌಕ೨

ನಿರಾಕಾರ ನೀಗಿ ನೀನು ಅಕಾರಕ ಸಾಗಿ ಬಂದಿ
ಸಾವಕಾರ ಅನಿಸಿಕೊಂಡಿ ಸಂಸಾರದಾಗ
ವಿಷ್ಣುನ ಸತಿ ಶ್ರೇಷ್ಠ ಅಲ್ಲೇನೋ ಲಕ್ಷ್ಮೀ ನಿನಗ
ಆ ಲಕ್ಷ್ಮೀದಿಂದ ಲಕ್ಷಾದೀಶ ಅನಸಿ ಜಗದಾಗ
ಬದಕ ಮಾಡಿ ಬ್ರಾಹ್ಮಿಗೆಟ್ಟು ಬರೆದು ಐತೋ
ಈ ಜನ್ಮ ನಾ ಯಾರ ಅನ್ನೂದು ಅರಿಯಲಿಲ್ಲ ನಿನ್ನೊಳಗ || ಜೀ ||

ಅನ್ನ ಹಾಕಿ ಪುಣ್ಯ ಪಡೆದು ಧನ್ಯನಾದೆನಂತಿದಿ
ನಿನಗ ಅನ್ನ ನೀರ ಕೊಟ್ಟವರನ್ನ ಮರ್ತಿ ಮೊದಲಿಗ
ನಂದ ಅಂತ ನಡದಿ ಒಂದಿನ ನರಕದಾಗ
ನೀನು ಗಳಿಸಿ ಇಟ್ಟ ಗಂಟ ಬರಲಿಲ್ಲ ಹೊಂಟ ಹೋದಾಗ
ಬೇಕಾದಷ್ಟು ಬಂದು ಬಳಗ ಬೆನ್ನಿಂದ್ಯಾರು ಬರಲಿಲ್ಲ
ಒಂದೇ ಹೋಗುವದು ಆತೋ ನೀನು ಬಂದಂಗ || ಜೀ ||

ಬುದ್ದಿಗೇಡಿ ಮಂದಿಗಂತು ಗುದ್ದಿ ಯಮ ಒಯಿತಾನ
ಒದ್ಯಾಡಿದ್ರ ಬಿಡೋದಿಲ್ಲ ನಿದ್ದಿಗಣ್ಣಾಗ
ಮುದ್ದಿ ಮಾಡಿ ಒಗಿತಾನ ಬಿದ್ದು ಸುಡುವದು ಬೆಂಕ್ಯಾಗ
ಎದ್ದು ಹೋದೆನಂದ್ರ ಸಾಧ್ಯವಿಲ್ಲ ಮುದ್ದಿನ ಮನಿಯಾಗ
ಮಾನವ ಜನ್ಮಕ ಬಂದು ಮೋಕ್ಷ ಪಡಿಯಬೇಕು
ಶಿಕ್ಷೆ ಕೊಡುವುದಿಲ್ಲ ಯಮ ನಿನಗ || ಜೀ ||

ಚಾಲ :
ನೀತಿವಂತರಾಗಿ ನಡಿರೆಂದು ಹೇಳುವೆ ಈ ಮಾತ
ಮಾತ ಕೇಳಿ ಮುತ್ತಿನ ಕಿಮ್ಮತ || ಜೀ ||

ಈ ನುಡಿ ಕೇಳಿ ಸುಡಬೇಕು ನಿಮ್ಮ ಕೆಟ್ಟನೇತ
ಸೃಷ್ಠಿಕರ್ತ ಸಲುವ್ಯಾನ ಜಗನ್ನಾಥ || ಜೀ ||

ಕಂಗೊಳಿಸುವ ಇಂಗಳೇಶ್ವರ ಈಶನ ನಾಮ ಭಜಿಸುತ
ಕೂಸ ಲಾಲ್‌ಶಾ ಮಾಡಿದ ಹಿಂಘ ಕವಿತ || ಜೀ ||

ಏರ :
ಸಕಿಂದ್ರ ಪೀರನ ಪಾದಕ ಎರಗಿ
ಪಾರಮಾರ್ಥದಲ್ಲಿ ದುಡಿರಿ ನೀವು ಕಡಿತಾನ
ಹಿಂಗ ದುಡಿದಂತ ಶರಣರಿಗಿ ಶಿವ ವರ ಕೊಡತಾನ
ಸ್ವರ್ಗದ ಅರಮನಿಯಲ್ಲಿ ನಿಮ್ಮನು ಸದಾ ಇಡತಾನ || ಜೀ ||      ಚೌಕ