೧೧. ಸವಾಲ್: ತಾಅಂತಾಳರೇಷಿಮಿಮಡಿ(ಸೀರೆ)

ಗೆಳತಿ ಹೇಳತಾನ ಗೆಳಿಯಾನ ಕರದು ಅಳತಿ ಆರ ಬಟ್ಟ ಖಡಿ
ರುದ್ರಾಕ್ಷಿ ಹೂವಿನ ದಡಿ ಸೋಮವಾರ ಸಂತಿ ಸೊಲ್ಲಾಪುರದು
ತಾ ಅಂತಾಳ ರೇಷಿಮಿ ಮಡಿ || ಜೀ ||

ತೊಂಬತ್ತಾರು ಅಂಗೂಲಿ ಪಿತಾಂಬರ ಅಳತಿ ಇರಲಿ ಉದ್ದಿಗಿ
ಅದಕ ಇರಬಾರದು ಬದ್ದಗಿ ಜಲ್ದಿ ಹೋಗುನ ಸಮೀಪ ಆಗುವದು
ಇಲ್ಲೆ ಸ್ಟೇಷನ್ ದುದ್ದಗಿ || ಜೀ ||

ಮಡಿಯ ಬಣ್ಣ ನನ್ನಂಗ ಇರಬೇಕು ತೋರಬಾರದು ಯಾರಿಗಿ
ಗಂಡ ಬಾವ ಮೈದುನದೇರಿಗಿ ಪರಪುರುಷಾನ ಮಡಿ
ಉಟ್ಟಾಳಂತ ಹಿಂದ ಅನಬಾರದು ಯಾ ಭಾರಿಗಿ || ಜೀ ||

ಚಾಲ :
ಲಗು ತಂದ ಕೊಟ್ರ ಮುಂದ ಉಡತಾ ಹಿಂದ ಬಿಡತಾ
ಬಲು ಜ್ವಾಕಿ ಮಾಡಿ ಕಟ್ಟಿ ಇಡತಾ ಹಾಗೆ ಕೂಡತಾ
ಮಾಸಿದ್ರ ಮಡಿ ಮೈಲಿಗಿ ಹೋಗಲೆಂದು ಸುಡತಾ || ಜೀ ||

ನೀ ಕೊಟ್ಟಿಯಂತ ನಿನಗ ಬೇಡತಾ ನಾ ಕಾಡತಾ
ನಿನ್ನ ಹೆಸರ ಮೇಲೆ ಉಟ್ಟು ನೋಡತಾ ಕೊಂಡಾಡ ತಾ
ನಾ ಇರೋತಾನ ನಿನ್ನ ಮಡಿ ಉಟ್ಟು ಕಡಿ ಮಾಡತಾ || ಜೀ ||

ಏರ:
ಗಳಿಯಾನ ಮುಂದೆ ಗೆಳತಿ ಕೇಳತಾಳ ಮಡಿ ಎಂಬೋದು
ಬೇಡತಾಳ ಪಡೀ ನೀ ಉಡಸಿ ತುಂಬೋ ನನ್ನ ಉಡಿ
ಸೋಮಾರ ಸಂತಿ ಸೊಲ್ಲಾಪುರದು ತಾ ಅಂತಾಳ ರೇಷಿಮಿ ಮಡಿ || ಜೀ || ಚೌಕ ೧

ಮತ್ತು ಕೇಳತಾಳ ಮೋಹದ ಸುಗುಣಗ ಮೇಲ ಇರಬಾರದು ಕಮಿ
ಅದಕ ಇರಬೇಕು ಹುರಿ ರೇಷಿಮಿ ಮಡಿಯ ಉಟ್ಟು ಹೋಗಿ
ಯಾತ್ರಾ ಮಾಡೋಣ ಬನಶಂಕರಿ ಬಾದಾಮಿ || ಜೀ ||

ಗೆಳತಿಯ ಮಾತಿಗೆ ಗೆಳಿಯ ಹೇಳತಾನ ಮನಸಿನಲ್ಲಿ ಆರಾಮಿ
ಸ್ವಸಿ ತರತಿನೆಂದ ಖಮಿ ಖಮಿ ಸದ್ಭಾವ ಎಂಬ ಸಂದೂಕ
ತೆರೆದ ರೂಪಾಯಿ ಮಾಡಿಕೊಂಡ ಜಮಿ || ಜೀ ||

ಸೌರಸಿಕೊಂಡು ಹೋದ ಸೊಲ್ಲಾಪುರಕ ಸ್ಟೇಷನ್ ಊರದ ಸೀಮಿ
ಆ ಸಿದ್ದೇಶ್ವರನ ಕೆರಿಯ ಸಮಿ
ಮಗ್ಗ ಇಲ್ಲದ ಹಟಗಾರನ ಮನಿ ಆ ಹುಡುಗ ಇತ್ತು ಮಾಲುಮಿ || ಜೀ ||

ಚಾಲ:
ಕೈಯಿಂದೆ ನೋಯ್ದ ಹಟಗಾರ ಇಟಗಾರ
ಅವನ ಮೇಲೆ ಇಟ್ಟು ನಿಷ್ಠಿಪೂರ ದೃಷ್ಟಿದೂರ
ಮಡಿ ನೇಯ್ದು ಕೊಟ್ಟು ಘಡಿ ಮಾಡಿದಾನು ಮುಟ್ಟ ಮೂರ || ಜೀ ||

ಅದರ ಮೇಲೆ ಒಂದು ನಂಬರ ಶಂಬರ
ಮಡಿ ತಂದು ಕೊಟ್ಟ ಗಂಭೀರ ಜುಂಬರ
ಆ ಮಡಿ ಕಂಡು ಇಕಿ ಆಗ್ಯಾಳ ದಿಗಂಬರ || ಜೀ ||

ಅದಕ ಇದ್ದಿದಿಲ್ಲ ಕುಂಡಿ ಪದರ ಕೇಳ ಚದರ
ಮೇಲೆ ಮುಸಿಯು ಮುರ್ದ ಜರತರ ತರತರ
ಹೇಳಿಕಿ ಮಡಿ ತಾಳಿಕಿ ಬಂತು ಬಂದೂರ || ಜೀ ||

ಏರ :
ಸದಾಚಾರ ಎಂಬ ಮಡಿ ಉಡಬೇಕೆಂದು ಬಾಲಿ ಮಾಡ್ಯಾಳ ಗಡಿಬಿಡಿ
ಗೆಳಿಯಾ ಅಂತಾನ ಜರಾ ದಮ್ಮ ಹಿಡಿ ಸೋಮಾರ ಸಂತಿ
ಸೊಲ್ಲಾಪುರದು ತಾ ಅಂತಾಳ ರೇಷಿಮಿ ಮಡಿ || ಜೀ || ಚೌಕ

ಮಡಿಯ ಕೊಟ್ಟು ಗೆಳಿಯ ಉಡಬ್ಯಾಡಂದಾನ
ಇದು ಎಂಥ ಸೂಜಿಕ ಆ ನಾರಿ ಇತ್ತು ನಾಜುಕ
ಬಿಚ್ಚಿ ನೋಡಿದರ ಬಸವ ಪುರಾಣ ಮೇಲೆ ಹಚ್ಚಿತು ದೃಢ ಬಾಜಿಕ || ಜೀ ||

ನಾಲ್ಕು ವೇದ ಆರು ಶಾಸ್ತ್ರಾಂಗಳು ನೈಗಿದೊಳಗ ಸೇರಿಕ
ಅದುತು ಬಹಳ ಬಾರಿಕ ಹಟಗಾರ ಹೇಳತಾನ
ಇಟಗಾರನ ಮಡಿ ಒದಿದಕ್ಕಿ ಇಟಗೋ ಬೇಕ || ಜೀ ||

ಓಂ ಸೋಹಂ ಎಂದು ಸುರವಿನ ಹಿಡಿದಿ ಬಾಲಿ ನಿಂತಾಳ ಓದೋದಕ
ಅದು ನಡಿತು ಮುಂದ ಮುಂದಕ
ಬಹಳ ದಿವಸ ಆತು ಶ್ರೀ ಗುರುವಿನ ಸುತ್ತಾ ನಿಂತು ಹೊಡಿಯ ತಾಳ ಹಕ || ಜೀ ||

ಇಳುವ :
ಬಾಲಿ ನಿಂತಿದಾಳು ಓದುತಲಿ ಬರೆ ಬತ್ತಲಿ
ಓದಿದ್ದು ಉಟ್ಟೆನೆನ್ನುತಲಿ ಉನ್ಮತಲಿ
ಕೃತಾ ತ್ರೇತಾ ದ್ವಾಪಾರ ಕಲಿಯುಗ ಬಿತ್ತು ಕತ್ತಲಿ || ಜೀ ||

ಇದು ಸರಿವಲ್ದು ಎಲ್ಲೆಲ್ಲಿ ಗುರುಕೀಲಿ
ದೂರ ಕುಂತಾಳ ಇಂಗಳಗಿ ಮಲ್ಲಿ ಬರೆ ಮೈಲಿ
ಬೇಸತ್ತು ಕುಂತಿದಾಳ ಬಾಲಿ ನಾ ಸಾಯಲಿ
ಮಡಿ ಉಡಬಾ ಅಂತ ಕರದರ ಹಿಂದ ಮುಂದ ಮುಚ ಕೊಂಡಾಳು ಕೈಲಿ || ಜೀ ||

ಕವಿ ದೇಗಾಂವ ಜ್ಞಾನದ ಸಾಲಿ ಶಿವನ ಸೂಲಿ
ಓದಂತಾ ತ್ರಾಣ ಅವರ ಬಲ್ಲಿ ಗುರುಕೀಲಿ
ಗುರುಮೂರ್ತಿ ನೆನದಿದಾನು ಮಹಾಲಿಂಗನ ಮನದಲ್ಲಿ || ಜೀ ||

ಏರ :
ಗುಂಡಪ್ಪನ ಮಡಿಗಾಗಿ ಗುಂಡುಳ್ಳ ಗರತಿ
ಕುಂಡಿಬಿಟ್ಟು ಕುಣದಾಡಿ ಭಂಡ ಆದ್ರೆ ನೀವು ಭಯಗೇಡಿ
ಸೋಮಾರ ಸಂತಿ ಸೊಲ್ಲಾಪುರದು ತಾ ಅಂತಾಳ ರೇಷಿಮಿ ಮಡಿ || ಜೀ ||  ಚೌಕ
೧೨.ಜವಾಬ್: ನಿನಗ್ಯಾಕಬೇಡತಾಳಮಡಿ

ಪ್ರಾಣಲಿಂಗ ಗೆಳಿಯ ಗೆಳತಿ ಕೂಡಿ
ಮಾಡಿರೋ ಮನಸಿಲಿ ಮಡಿ
ತೆಲಿ ಸೆರಗೆಂಬ ನಾಗರೇಳು ಹೆಡಿ
ಸ್ವಾಮಾರ ಸಂತಿ ಬ್ರಹ್ಮ ತನ್ನೊಳು
ನಿನಗ್ಯಾಕ ಬೇಡತಾಳ ಮಡಿ || ಜೀ ||

ಪೃಥ್ವಿ ಅಪ್ ತೇಜ ವಾಯು ಆಕಾಶ
ಪಂಚ ತತ್ವ ಕೂಡಿಸಿ
ಅದಕ ಮುಂಚ ಭೇಟಿ ಮಾಡಿಸಿ
ಶಾಣೌಂ ಅಂಗುಲಿ ಅಳತಿ ಪಿತಾಂಬರ
ಉದ್ದಗಲಿಗಿ ಇಡಸಿ || ಜೀ ||

ಕಾಯಾಪುರ ಈ ಮಾಯಾ ಬಜಾರ
ಬಂದೋಬಸ್ತ ಮಾಡಿಸಿ
ಅದಕ ಸುತ್ತ ಗ್ವಾಡಿ ಎರಸಿ
ಮಡಿ ಉತ್ಪನ್ನಾಗೋ ಉತ್ತಮ ಜಾಗ
ಉನ್ಮನಿಯೊಳಗ ತೋಡಿಸಿ || ಜೀ ||

ಕಾಮ ಕ್ರೋಧ ಮೋಹ ಮಧ ಮತ್ಸರ
ರೇಟೋ ಬಿಂದು ಕೂಡಿಸಿ
ಆ ಮಾಯಾ ಮೋಹಕ ಜೋಡಿಸಿ
ವ್ಯಸನ ಏಳು ಎಂಬ ಮಸಿನ ಗಂಜ
ಹಚ್ಚಿ ಉನ್ಮನಿಯೊಳು ಹಾರಸಿ || ಜೀ ||

ದುಮಾಲಿ :
ತನು ಎಂಬೋ ಉನ್ಮನಿಯೊಳಗ
ಉಂಕಿ ಮಗ್ಗದ ರಾಟಲ
ಹಗಲು ರಾತ್ರಿ ನಡದಾದೋ ಇನ್ನೂವರೆಗೂ ಖಟ್ಟಿಲ್ಲ
ಎಳಿ ಮ್ಯಾಲೆ ನಿಗ ಅಕಿ ನೈಯದು ಇನ್ನು ಬಿಟ್ಟಿಲ್ಲ
ಮಡಿ ಇಲ್ದೆ ಯಾರು ಹುಟ್ಟಿಲ್ಲ || ಜೀ ||

ಅಕಿ ಕೊಟ್ಟ ಮಡಿ ಉಟ್ಟು ತಾನೆ ಬಿದ್ದಾನೋ
ಮಡಿಲಿಂದೆ ಮರ್ತ್ಯಾಕ ಹಾಕ್ಯಾಳೋ ಮಾಯಾದ ಜಾಲ
ಬಂದೋ ಬಸ್ತ ಮಡಿ ಹಿಂದ ಮುಂದ ಜಡದಾರೋ ಕೀಲ
ನೀ ಚಂಡು ಮಗ ಗುಂಡುಗ ಇದು ಗುರುತಿಲ್ಲಿ
ಅವ ಏನು ಅಕಿಗ ಕೊಟ್ಟಿಲ್ಲ || ಜೀ ||

ಅಕಿಗಿ ಬಿಟ್ಟು ಮಡಿ ಹುಟ್ಟಿಲ್ಲ
ಮಡಿ ಉಟ್ಟ ಮಾನ್ಯರೆಲ್ಲ ಬಡಕೊಂಡಾರೋ ಗಲ್ಲ ಗಲ್ಲ
ನಿಂದೆಯ ಮಡಿಯ ಮೂಲ ಗಂಡಗ ಗುರತಾಗಲಿಲ್ಲ || ಜೀ ||

ಕಂಡು ನೋಡತಿದಿ ಖಡಿ
ಹಚ್ಚಿ ನಡದಿಳೋ ಬಂಗಾರ ಕೊಡಿ
ಸ್ವಾಮಾರ ಸಂತಿ ಸೋಹಂ ಬ್ರಹ್ಮ ತನ್ನೊಳು
ನಿನಗ್ಯಾಕ ಬೇಡತಾಳ ಮಡಿ || ಜೀ ||

ಮಡಿಯ ನೇಯ್ದಾಕಿ ಗಡಿಯ ಮುಡದಾಳೋ
ಮ್ಯಾಲ ಬಿತ್ತೋ ಬ್ರಹ್ಮಲಿಖ
ನೋಡಿ ಸಣ್ಣ ಮಾಡಿಳೋ ತನ್ನ ಮುಖ
ಜರದ ಪಿತಾಂಬರ ಹರದ ಹೋಗುವದೆಂದು
ಬರದಿಟ್ಟಾಳೋ ತಾರೀಖ || ಜೀ ||

ತಾನೆ ನೈದಿಳೋ ಮಡಿ ತನ್ಗ ಉಡ್ಲಕ
ಅಕಿ ಯಾಕ ಹೊಡಿಯತಾಳೋ ಹಕ
ನಿನ್ನ ಪ್ರಭುಗ ಆಗಲಿಲ್ಲ ಸುಖ
ಗಟ್ಟಿ ಸೆರಗಿನ ಸೀರಿ ಧಟ್ಟಿ ಪಿತಾಂಬರ
ಉಟ್ಟೆ ತೋರಶ್ಯಾಳೋ ಮುಖ || ಜೀ ||

ದುಮಾಲಿ :
ಅಕಿ ಯಾಕ ಕುಂತಾಳೋ ಬರಿ ಮೈಲಿ ಹುಚ್ಚದುಲ್ಲಿ
ನಿನಗೇನು ಗೊತ್ತು ಅಕಿ ಶೈಲಿ ತಿಂದಿ ಜೋಲಿ
ಇಪ್ಪತ್ತೆಂಟು ಯುಗಕ ಅಕಿ ಮೊದಲೆ ಜಡದಿದಾಳೋ ಕೀಲಿ || ಜೀ ||

ನೀ ಕಲ್ತಿಲ್ಲ ಹಿಪ್ಪರ್ಗಿಸಾಲಿ ಗುರುಕೀಲಿ
ಗುರುತಿಟ್ಟು ನಡಿ ಗುರುವಿನ ಬಲ್ಲಿ
ಶರಣಪ್ಪ ಹೇಳತಾನ ಶರೀರದ ಅನುಭವ ಸಾಲಿ || ಜೀ ||