೨೧. ಸವಾಲ್: ಶಿವಎಲ್ಲೆಲ್ಲೂಇಲ್ಲ

ಶಿವ ನಿನ್ನಲ್ಲೆ ಹಾನ ನೀ ನೋಡಿಲ್ಲ
ಎಲ್ಲಿ ಹುಡುಕಿದರಿಲ್ಲ ಶಿವ ಎಲ್ಲೆಲ್ಲೂ ಇಲ್ಲ || ಪ ||

ಸತ್ಯಲೋಕ ಶಿವಲೋಕ ವೈಕುಂಠ ಹುಡುಕ್ಯಾಡಿದರಿಲ್ಲ
ಇಂದ್ರಲೋಕ ಚಂದ್ರಲೋಕ ಮಹೇಂದ್ರ ಲೋಕ ಹುಡುಕ್ಯಾಡಿದರಿಲ್ಲ
ಆಗ್ನೇ ವಾಯು ನೈರುತ್ಯ ಈಶಾನ್ಯ ನೋಡಿ ಮಿಡಕ್ಯಾಡಿದರಿಲ್ಲ || ಜೀ ||

ನಿತ್ಯ ಸತ್ಯ ಸಾವಿರ್ದೆಂಟು ಬ್ರಹ್ಮಾಂಡ ಎತ್ಯಾಕಿದರಿಲ್ಲ
ಅಂಡ ಪಿಂಡ ಅಖಿಲಾಂಡ ನವಖಾಂಡ ಸುತ್ತ್ಯಾಕಿಲ್‌ಲ
ಅಪ್ ತೇಜ ವಾಯು ಆಕಾಶ ಒತ್ತಿ ನೋಡಿದರಿಲ್ಲ || ಜೀ ||

ನಾಲ್ಕು ವೇದ ಆರು ಶಾಸ್ತ್ರ ಹದಿನೆಂಟು ಪುರಾಣ ಓದಿದರಿಲ್ಲ
ಇಪ್ಪತ್ತೆಂಟು ನಿಗಮ ಆಗಮಗಳು ಹುಡಕ್ಯಾಡಿದರಿಲ್ಲ
ಪಂಚಾಕ್ಷರಿ ತೋಡಿ ಗ್ವಾಡಿಗಿ ಕೂಡು ಮೃಢ ಇಲ್ಲಿಲ್ಲ || ಜೀ ||

ಕಾಶಿ ಕೇದಾರ ಉಳವಿ ಗೋಕರ್ಣ ಓಡ್ಯಾಡಿದರಿಲ್ಲ
ಪಂಚ ಮುಖದ ಪಂಚ ಸಿಂಹಾಸನ ನೋಡಿ ನೆರಳ್ಯಾಡಿದರಿಲ್ಲ
ನಿನ್ನಲ್ಲಿ ಶಿವ ಅಲ್ಲಿಲ್ಲ ಇಲ್ಲಿಲ್ಲ ಸತ್ಯ ಸತ್ಯ ಇಲ್ಲ || ಜೀ ||

ಧರೆಯೊಳು ಮೆರೆಯುವ ಹಿರೇ ಸಾವಳಗಿ ಗಿರಿಯೊಳು ಇಲ್ಲ
ಜಗದ್ಗುರು ಶ್ರೀ ಸಿದ್ಧ ನಿನ್ನಲ್ಲಿ ಒಳಗ್ಹನ ಕೇಳಿದರು ಇಲ್ಲ
ಸಿದ್ದನ ಉಪದೇಶದೊಳು ಕುದ್ದ ಮಹ್ಮದಗ ಬಂದು ಬಳಗಿಲ್ಲ || ಜೀ ||

 

೨೨. ಜವಾಬ್: ಸದಾನಿನ್ನಲ್ಲೆಇರತಾನ

ಸತ್ಯ ಶಿವ ಸದಾ ನಿನ್ನಲ್ಲಿ ಇರತಾನ
ಇದೇ ಸ್ಥಾನದಲ್ಲಿ ಇರ್ತಾನೆಂದು ಯಾರಿಗಿ ಗುರ್ತಾನ || ಜೀ ||

ಕರ್ತ ಕರವಿತ ಸಮರ್ಥ ಶಿವ ಸೋಯಂ ನಿರಥಾನ
ಅರವಿಲೆ ನೋಡು ಅಣುರೇಣು ತೃಣಕಾಷ್ಟದಲ್ಲಿ ದೊರಿತಾನ
ಭಕ್ತಿಲಿ ಭಜಿಸಿದರ ಭಗವಂತ ಬರತಾನ || ಜೀ ||

ಆಧಾರ ಸ್ವಾಧಿಷ್ಠಾನ ಮಣಿಪುರ ಚಕ್ರದಿ ಸೇರತಾನ
ಅನಹೂತ ಈ ಸುದ್ದಿ ಅಗ್ನಿ ಚಕ್ರಕ ತೋರತಾನ
ಶಿಖ ಬ್ರಹ್ಮರಂಧ್ರ ಪಶ್ಚಿಮ ಚಕ್ರದಿ ವಕ್ರ ಆಗಿ ಮೆರಿತಾನ || ಜೀ ||

ಜಾಣ ಭಕ್ತ ಬಾಣಾಸುರನ ಬಾಗಿಲ ಕಾಯದಾನ
ವಿಠ್ಯಾ ಮಹಾರಾಗಿ ದಾಮೋಜಿ ಪಂಥನ ಬಿಟ್ಟಿ ವೈದಾನ
ತೊತ್ತಿನ ಮಗೆಂದು ಸುಂದರ ನಂಬಿಯಣ್ಣಗ ಬೈದಾನ || ಜೀ ||

ದಿಟ್ಟ ರಾವಣಗ ಆರು ಕೋಟಿ ಆಯುಷ್ಯ ಕೊಟ್ಟಾನ
ತಿರಗಿ ಬಿದ್ದವರಿಗಿ ಅಂವ ಯಾಕ ಇಟ್ಟಾನ
ನಂದಿ ಹನಮಂತನಾಗಿ ಬಂದು ಲಂಕಾ ಸುಟ್ಟಾನ || ಜೀ ||

ಹಿರೇ ಸಾವಳಗಿ ಗಿರಿಯೊಳು ಅದೃಶ್ಯ ಆಗ್ಯಾನ
ನಂಬಿಗಿಟ್ಟ ಭಕ್ತಗ ಸಾಂಬ ತೊಟ್ಟಿಲ ತೂಗ್ಯಾನ
ಹೆಚ್ಚಿನ ಮಹತ್ವ ಕಂಡು ಮಹ್ಮದ ಅವರ ಪಾದಕ ಬಾಗ್ಯಾನ || ಜೀ ||