೨೩.ಸವಾಲ್: ಶಿವನಾಮದರಂಡಿನಮಾಡಣ್ಣ

ಶಿವನಾಮೆಂಬ ರಂಡಿನ ಮಾಡಣ್ಣ
ಕಂಡಿಡಿದು ಲಕ್ಷಣ || ಪ ||

ಹಿಡಿದಿದು ಬಿಡಬಾರದು ಜಾಣ
ಬಿಟ್ಟಿದ್ದಕಿಡಬಾರದು ಕಣ್ಣ
ಹಿಡಿದು ಬಿಡುದು ಎರಡು ಪ್ರಕರಣ
ನಡೆ ನುಡಿ ತೊಡಿ ಶುದ್ಧಿರಲಿ ತರುಣ || ಜೀ ||

ಕಾಯಪುರವೆ ಕಲ್ಯಾಣ
ಮನುರಾಜ ಬಿಜ್ಜಳ ಕೋಣ
ಭಕ್ತಿ ಎಂಬುವ ಬಸವಣ್ಣ
ಜೀವ ಶಿವ ಪ್ರಭು ದೇವ ಮುಕ್ಕಣ್ಣ || ಜೀ ||

ಮುಗ್ಧ ಸಂಗಯ್ಯ ನಿಜ ಶರಮ
ಬಸವಣ್ಣಗ ಬೇಡಿದ ಹಣ
ವೇಶ್ಯಾಂಗನಿ ಮನಿಗ್ಹೋಗಿ ಅಣ್ಣ
ದೋಷ ರಹಿತ ಅನಿಸಿದ ಕರಣ

ಕುಚ ಲಿಂಗೆಂದು ತಿಳಿದು ಪೂರ್ಣ
ಮಲಿ ಪೂಜಾ ಮಾಡಿದ ಧುರಿಣ
ಅವನಂತೆ ಸೌಂದರ್ಯ ನಂಬಿಯ
ಸುಖ ಮುನಿ ಸುಖ ಮಾಡಿದ ಜಾಣ || ಜೀ ||

ಕೊಲ್ಹಾಪುರ ಮಾ ಹೆಣ್ಣ
ಅಲ್ಲಮಪ್ರಭು ಸಿದ್ಧರೇವಣ್ಣ
ಮಲಿ ಮ್ಯಾಲಿಟ್ಟಿದ ತನ್ನ ಚರಣ
ರಕ್ತಕಾರಿ ಹೊಂದಿಳು ಮರಣ

ಧರೆಯೊಳು ಹಿರೇ ಸಾವಳಗಿ ಪಠಣ
ಅಲ್ಲಿ ಶ್ರೀ ಸಿದ್ಧನ ಠಾಣ
ಮಹ್ಮದಿಡಿದ ಆತನ ಚರಣ
ಮಾಡಿದ ಶಿವಶರಣರ ವರಣ || ಜೀ ||

 

೨೪.ಜವಾಬ್: ಶಿವನಾಮಶೀಲವಂತಿಹೆಣ್ಣ

ಶಿವನಾಮ ಎಂಬೋ ಶೀಲವಂತಿ ಹೆಣ್ಣ
ಸಿಗುವುದು ಬಹು ಕಠಿಣ || ಪ ||

ಓಂ ನಮಃ ಶಿವಾಯ ಎಂಬೋ ಪ್ರಣಮದ ಹೆಣ್ಣ
ಉಣಸಲಾರದೆ ಒಗಿದನು ನೋಡಿದ್ದಿಲ್ಲರೆಣ್ಣ
ಸಹಸ್ರ ವರ್ಷ ಮಾಡಿದ ಪಾರಾಯಣ
ಸ್ವಲ್ಪರೆ ತೆರೆದು ನೋಡಿಲ್ಲ ಕಣ್ಣ || ಜೀ ||

ರಂಗ ಮಹಲಿನಳು ಆದ ನಿನ್ನ ಠಾಣ
ನವ ದ್ವಾರಕ ಹರ ಅರಬ ಪಠಾಣ
ಸ್ವಪ್ನ ಸೂಸುಪ್ತಿ ಜಾಗೃತ ಹೆಣ್ಣ
ತುರಾ ಅವಸ್ತೆದಿಂದ ಮಾಡಕ್ಕಿ ಪಾರಾಯಣ || ಜೀ ||

ಕಣ್ಣ ಇದ್ದವರಿಗಿ ಕಾಣಲಾರದ ಹೆಣ್ಣ
ಶರಣರ ಕೈವಶಾ ಆಗ್ಯಾದ ಹೆಣ್ಣ
ಅಣುರೇಣು ತೃಣಕಾಷ್ಠಕ್ಕಿಂತ ಸಣ್ಣ
ಕಂಗಳರಿಗಿ ಕಾಣುವುದು ಹೆಣ್ಣ || ಜೀ ||

ನಂಬಿದರೆ ನೇರಲ ನಿಂಬಿ ಬಣ್ಣದ ಹೆಣ್ಣ
ಹಂಬಲಿಸಿದರೆ ಹಾರಿ ಹೋಯ್ತು ಕರಿ ಮಾರಿ ಹೆಣ್ಣ
ಶಿವನ ಜಡಿದಾಗ ಇತ್ತು ಸಂಬಾವಿತ ಹೆಣ್ಣ
ದುಂಬಿಯಾಗಿ ಹೋಯಿತು ಆಕಾಶದ ಹೆಣ್ಣ

ಭೂಲೋಕದಲ್ಲಿಪ್ರಕಾಶದ ಹೆಣ್ಣ
ನೀಲೂರ ಶರಣರ ಅಂಗಳ ಉಡುಗುವುದು ಹೆಣ್ಣ
ಹಾಲ ಕುಡದು ಹಲಬ್ಯಾನ ಬಾಲ ಪಂಚಮ್ಣ
ಇಲ್ಲಿಂದಲೆ ಬೈಲಡಗಿತು ಬಗಲಾನ ಹೆಣ್ಣ || ಜೀ ||