೧೯. ಸವಾಲ್: ಶಂಭೋಹರ

ಬಂಗಾರಕ ವರಿಗಲ್ಲ ಬೇಕು
ಗುರು ಇದ್ದರ ಮಠ ಬೇಕು
ಭವಕ ಬಂದರ ಭಕ್ತಿ ಬೇಕು
ವಲಿತಾನ ಗಿರಿಧರ
ಪದಕ ಶುದ್ಧ ಪ್ರಾಸ ಬೇಕು
ಹಾಡಿನ ಮ್ಯಾಲ ದ್ಯಾಸ ಬೇಕು
ನನಗ ನಿನ್ನ ಪ್ರಾಸ ಬೇಕು || ಶಂಭೋಹರ ಓಂ ಶಂಭೋಹರಾ ||

ಮಾನವರಲ್ಲಿ ಧರ್ಮ ಬೇಕು
ಮಾಡಿದ ಕರ್ಮ ಕಳೆಯಬೇಕು
ಗೆಳೆಯರಲ್ಲಿ ಪ್ರೇಮ ಬೇಕು
ನಡೆಯುದು ಜೋರದಾರ
ಲಾಯಕರಲ್ಲಿ ನ್ಯಾಯಬೇಕು
ಹಾಡುವುದಕ ಲಯಬೇಕು || ಶಂಭೋಹರ ಓಂ ಶಂಭೋಹರಾ ||

ದೇವರಿಗಿ ಗುಡಿಯಬೇಕು
ಪೂಜಾರಿಗಿ ಎಡಿಯಬೇಕು
ಶಿವನಾಮ ನುಡಿಯಬೇಕು
ತಿಳಕೋರಿ ಹಿರಿಯರಾ
ಮಾತಿನ ಮರ್ಮ ತಿಳಿಯಬೇಕು
ಪರ ಆತ್ಮಕ ದುಡಿಯಬೇಕು
ಶುದ್ಧ ಮಾರ್ಗ ಹಿಡಿಯಬೇಕು || ಶಂಭೋಹರ ಓಂ ಶಂಭೋಹರಾ ||

ಸಂಸಾರಕ ಸೂತ್ರ ಬೇಕು
ನೋಡುವುದಕ ನೇತ್ರ ಬೇಕು
ಶ್ರೀ ಗುರು ಸ್ತೋತ್ರ ಬೇಕು
ಆಗುವುದು ಪರಿಹಾರ
ತೂಗಲಾಕರ ತಕಡಿ ಬೇಕು
ಕಾರಣಕ ಬಂಡಿ ಬೇಕು
ಮುತೈದೇರಿಗಿ ದಂಡಿಬೇಕು || ಶಂಭೋಹರ ಓಂ ಶಂಭೋಹರಾ ||

ದ್ಯಾಗಾಯಿಯಂಥ ಊರಬೇಕು
ಜಿಂದಾವಲಿಯಂಥ ದೇವರ ಬೇಕು
ಗುಲಾಬನಂಥ ಗುರು ಬೇಕು
ಕಲಿಸುವ ಕಲಾಕಾರ
ಅಂತರಂಗದ ಅರಿವು ಬೇಕು
ಬಲವಂತಗ ಬಲಬೇಕು
ಕವಿ ಮಾಡಲು ವರುಬೇಕು || ಶಂಭೋಹರ ಓಂ ಶಂಭೋಹರಾ ||

 

೨೦. ಜವಾಬ್: ಗಜಾನನ

ಬಿತ್ತುವದಕ ಮಂಡಿ ಚಂದ
ಖಳದ ಸುತ್ತ ಇಂಡಿ ಚಂದ
ಎತ್ತಗಳಿಗಿ ಬಂಡಿ ಚಂದ
ಸಾಗುವುದು ಬಲು ಠೀಕ
ಹೊಟ್ಟಿ ಬಡಕಗ ತಿಂಡಿ ಚಂದ
ಮುತ್ತೈದೇರಿಗಿ ದಂಡಿ ಚಂದ
ಮುಖಕ ನಿನ್ನ ಸೊಂಡಿ ಚಂದ || ಗಜಾನನ ಬಾ ಗಜಾನನ || ಜೀ ||

ಮಾರಿ ಮುಂದ ಕನ್ನಡಿ ಚಂದ
ಹುಡಿಗಿ ಕಿವಿಯಲಿ ಬುಗಡಿ ಚಂದ
ಆಟದಲ್ಲಿ ಪಗಡಿ ಚಂದ
ಸೋಲೋದು ಗೆದಿಯೋದಕ
ಅಷ್ಟಾವರ್ಣ ನೇಮಚಂದ
ಸತಿ ಪತಿಯ ಪ್ರೇಮ ಚಂದ
ಲಂಬೋಧರ ನಿನ್ನ ನಾಮಚಂದ || ಗಜಾನನ ಬಾ ಗಜಾನನ || ಜೀ ||

ಊರಿಗೊಂದು ಚಾವಡಿ ಚಂದ
ಕೊರಳಾಗ ಸರ ಕವಡಿ ಚಂದ
ಜೋಗಾ ಬೇಡವಗ ಪರಡಿ ಚಂದ
ಉಗೆ ಉಗೆ ಅನ್ನೋದಕ
ಹಟ್ಟಿಲಿ ಇದ್ರ ಬಸಿರ ಚಂದ
ವಿಘ್ನೇಶ್ವರ ನಿನ್ನ ಹೆಸರ ಚಂದ || ಗಜಾನನ ಬಾ ಗಜಾನನ || ಜೀ ||

ವಡಿ ದ್ಯಾಗಾಯಿ ನಡಿ ಚಂದ
ಗುಡ್ಡದ ಮ್ಯಾಲ ಗುಡಿ ಚಂದ
ಗುಡಿಯ ಮುಂದ ಸಿಡಿಚಂದ
ಭಕ್ತರ ದರ್ಶನಕ
ಜಿಂದಾವಲಿ ಕೊಡಿ ಚಂದ
ಆನಂದರಾಯನ ನುಡಿಚಂದ
ನುಡಿಗಿ ನಿನ್ನ ಅಡಿ ಚಂದ || ಗಜಾನನ ಬಾ ಗಜಾನನ || ಜೀ ||