೩೫.ಸವಾಲ್: ಸತಿಯಿಂದಸದ್ಗತಿ

ಪತಿಯರಿಗೆ ಸತಿಯಿಂದ ಸದ್ಗತಿ
ಅವರವರಿಗೆ ಮಾಹಿತಿ || ಪ ||

ಮಂಡೋದರಿ ಮಹಾ ಪತಿವರ್ತಿ
ಮೀರಿದ ರಾವಳನ ಮದುವೆಯ ಹೆಣ್ತಿ
ಪ್ರಾಣ ಪ್ರತಿಷ್ಠ ಪಡಶ್ಯಾಳ ಆದಿಶಕ್ತಿ
ಯಮ ಧರ್ಮ ಸೋತ ನೋಡಿ ಅಕಿನ ಭಕ್ತಿ || ಜೀ ||

ಅತ್ರಿ ರುಷಿಯ ಅನಸೂಯ ಹಳ ಸತಿ
ಪರೀಕ್ಷಿಸಬೇಕೆಂದ್ರು ತ್ರಿಮೂರ್ತಿ
ಧರಿಸಿ ಬಂದಾರೋ ಕಾವಿ ಕಾಂತಿ
ತೊಟ್ಟಲಾಗ ಹಾಕಿ ಮಾಡಿ ಆರುತಿ || ಜೀ ||

ದಕ್ಷ ಬ್ರಹ್ಮನ ಸತಿ ಪ್ರಸೂತಿ
ಕೊಡಸಿದಾಳೋ ಸಾವಿಜ್ಯ ಮುಕ್ತಿ
ಯಾರಿಲ್ಲ ಅನಬ್ಯಾಡ ಅಡಮುಟ ಕತ್ತಿ
ಹಗಲ ಹಾಡ ನೆಲೆಗಾಣದೆ ಸತ್ತಿ || ಜೀ ||

ದೇಗಾಂವ ಕವಿ ದೇಶಕ ಜಾಸ್ತಿ
ಹಜರತ ಗುರು ಗುಂಡುನ ಸ್ತುತಿ
ಆನಂದರಾಯ ರಾಜೇಂದ್ರ ಸಾರಥಿ
ಸರ್ವರೆಲ್ಲ ಮಾಡಿ ಶರಣಾರ್ಥಿ || ಜೀ ||

 

೩೬.ಜವಾಬ್: ಪತಿಯಿಂದಪರಲೋಕ

ಪತಿಯಿಂದ ಪರಲೋಕ ಐತಿ ಹೆಣ್ಣ
ಪರ ಪುರುಷಾಗ ಇಡಬಾರದು ಕಣ್ಣ
ದೇವೆಂದ್ರಗ ಮನಸೋತು ಅಹಲ್ಯೆ
ಆಗಿ ಬಿದ್ದಾಳ ಪಾಷಾಣ || ಜೀ ||

ಬ್ರಹಸ್ಪತಿ ಹೆಂಡತಿ ತಾರಾ ಪ್ರವೀಣ
ಚಂದ್ರಗ ಮೋಹಿಸಿ ಕೆಟ್ಟಿಳೋ ಚಿಮಣ
ಬ್ರಹಸ್ಪತಿ ಶಾಪಕೊಟ್ಟ ರಾಕ್ಷಿ ಅಂಶಿನೊಳು
ಆಗಿಳು ನಿರ್ಮಾಣ || ಜೀ ||

ಮೂರು ಲೋಕಕ ಪುಂಡ ಅರ್ಜುನ
ಊರ್ವಶಿ ಶಾಪ ಕೊಟ್ಟಳು ನಿನಾಃಕಾರಣ
ಮನಿಯೊಳು ಪ್ರೇಮಿಲಿ ಕರದರ
ವಶ ಆಗಲಿಲ್ಲ ಫಾಲ್ಗುಣ || ಜೀ ||

ಧರೆಯೊಳು ಹಿರೇ ಸಾವಳಗಿ ಪಟ್ಟಣ
ಶ್ರೀಮನ್ ಶಿವಯೋಗಿ ಮುಕ್ಕಣ್ಣ
ಹರದಾಸ ಮಹಮ್ಮದನ ಸಕಿ ಕೇಳಿ
ಬಾಳಗೇರಿ ಪೋರಿ ತಿರವಿತ್ತ ಗೋಣ || ಜೀ ||