೨೯.ಸವಾಲ್: ಮರತಿರಬಾರದುಮಂಗ

ಅರ್ಥ ಬಲ್ಲವನಿಗೆ ತುರ್ತ ಕೇಳತಿನಿ
ಮರತಿರಬಾರದು ಮಂಗ
ಮಾಡೋ ಶಿವಶರಣರ ಸಂಗ
ಪ್ರಸಾದ ಸಿಕ್ಕಿತು ದುಡುದಂವಗ || ಜೀ ||

ಮಾತಿನರ್ಥ ಮಾತು ಬಲ್ಲವಗ
ಮಾತು ಬಿಟ್ಟು ಮಾತಾಡವ ಮಂಗ
ಗುರುತಿಟ್ಟು ನಡಿಯಾಂವ ಗುರುವಿನ ಮಗ
ಗುರು ಇಲ್ಲೇನೋ ಕಣ್ಣಿ ಕಲ್ಲಪ್ಪ ನಿನಗ || ಜೀ ||

ದ್ಯಾಗಾಯಿ ಗುಂಡಪ್ಪ ಗುರು ಇದ್ದನಂವ ಹ್ಯಾಂಗ
ಈ ಹಜರತ ವಡ್ಡರ ಕ್ವಾಣ ಇದ್ದಂಗ
ವಾಡಿ ಶಿವಮ್ಮ ಎಮ್ಮಿ ಮಣಕಿದ್ದಂಗ
ಸಿದ್ದಪ್ಪ ಮಣಕಿ ಡೊಂಗಿದ್ದಂಗ || ಜೀ ||

ಕ್ವಾಬಾಳ ಬಾವಾಷಾ ಇಸ್ಸಿತಿನ ಕೋಳಿ ಇದ್ದಂಗ
ಮೈತಾನ ಮಂದಿ ಅಂಗಳದಾಗ
ಇಸಿ ಮಾಡತಾನ ತನ ಗಂಗಳದಾಗ
ಪದ ಹಾಡತಾನ ಬಾಯಿಗಿ ಬಂದಂಗ || ಜೀ ||

ಕಲಗಿ ಪದಾಕಟ್ಟಿ ಹಾಡೋದರೊಳಗ
ಜಂಬಗಿ ಶರಣ ಬಾವಿ ಜರಿ ಇದ್ದಂಗ
ಜ್ಞಾನದ ಕೊಬ್ಬಿನ ಹೊರಿ ಇದ್ದಂಗ
ನೀವೆಲ್ಲ ಕಬ್ಬತಿನಿ ನರಿ ಇದ್ದಂಗ || ಜೀ ||

 

೩೦.ಜವಾಬ್: ಅರ್ಥಆದಿತುಹ್ಯಾಂಗ

ದುಸ್ತರ ಮಂದಿಗಿ ಶಾಸ್ತ್ರ ಹೇಳಿದರ
ಅರ್ಥ ಆದಿತು ಹ್ಯಾಂಗ
ಮಾಡೋ ಸಾಧು ಸಂತರ ಸಂಗ
ಕುಣಿಬ್ಯಾಡ ಕಾಲ ಬಿಟ್ಟ ಕತ್ತಿಹಂಗ || ಜೀ ||

ಕಾಮ ಸುಟ್ಟು ಸುಖ ಮುನಿ ತೋರಿಸಿದ ತನ್ನ ಅಂಗ
ಸ್ತ್ರೀ ಮುಟ್ಟಿದರಸಾಯಿತಿ ಆಗಿ ಮಾನಭಂಗ
ದೃಷ್ಟಾಂತ ಹೇಳಿದರ ತಿಳಿವಲ್ದು ಮಂಗ
ಕ್ವಾಣಿನ ಮುಂದ ಕಿನ್ನುರಿ ಬಾರಿಸಿದಂಗ || ಜೀ ||

ವಿಶ್ವಾಸ ಘಾತುಕ ದುಶ್ಯಾಸನಂಗ
ದ್ರೌಪದಿ ಸೀರಿ ಸೆಳೆದು ಮಣ್ಣ ಕಚ್ಚಿದಂಗ
ಬಸ್ಮಾಸುರ ನಾಚ ಮಾಡಿ ನರ್ತಕಿ ಹಂಗ
ತನ್ನ ಶರೀರ ತಾ ಸುಟಗೊಂಡ ಸತ್ತಂಗ || ಜೀ ||

ದ್ಯಾಗಾಯಿ ಕವಿ ನನ್ನ ಗುರು ಇದ್ದಂಗ
ಗುರು ದೀಕ್ಷಾ ಪಡಕೋರಿ ಬಿದ್ದು ಸಾಸ್ಟಾಂಗ
ಹುಲಿ ಬಣ್ಣಕ್ಕಾಗಿ ನರಿ ಬಿಕ್ಕಿ ಬಿಕ್ಕಿ ಅತ್ತಂಗ
ಕಂದ ಆನಂದರಾಯ ನೋಡಿ ಕುಲು ಕುಲು ನಕ್ಕಂಗ || ಜೀ ||