೩೧.ಸವಾಲ್: ಸಾಕುಬಿಡುಕಾಕಬುದ್ದಿ

ಸಾಕು ಬಿಡು ಕಾಕ ಬುದ್ದಿ
ಮೂಕಾಗಿ ಲೋಕ ಗೆದ್ದಿ
ಏಕ ಜೀವ ಎಲ್ಲರಲ್ಲಿ
ಬೇಕಾದ್ರ ಬಳಸಾಟ
ಸಾಕಾದ್ರ ಬಿಡು ಬಿಟ್ಟರ ಓಡಾಟ || ಜೀ ||

ಕಾಟಕನ ಕಯ್ಯಾನ ಕತ್ತಿ
ಕಿಟಕನೆ ಹಿಡಿದಾನ ಬುತ್ತಿ
ಊಟಕ ಮುಂಚ ಊದಬತ್ತಿ
ಮಠದಾಗ ಗುರು ಇದ್ದರ ಭರ್ತಿ
ಬೇಡಿಕೊಳ್ಳೋ ಜಟಪಟ
ಗುರುಪಾದ ಹಿಡಕೊಳ್ಳೋ ಘಟಮೂಟ || ಜೀ ||

ಸಂದೂಕದೊಳಗ ಇದ್ದ ಗುರುವಿನ
ಮುಂದಕ ತರ್ರಿ ನಾವು ನೀವೆಲ್ಲ
ಕಂದ ಶರಣ ಕರ ಮುಗಿದು
ಬಂದ ಬಗಿನಿಯರಿಗಿ
ಶಿರ ಬಾಗತಾನ ಇಲ್ಲ ಕಪಟ
ಜಟ್ಟನೆತಿಳಿದು ಹಿಂದಿನಾದಿ ಬಿಟ್ಟ || ಜೀ ||

 

೩೨.ಜವಾಬ್: ಸಾಕೋಸಾಕೋಭವಇನ್ಯಾತಕೋ

ಸಾಕೋ ಸಾಕೋ ಈ ಭವ ಇನ್ಯಾತಕ ಬೇಕೆ
ಪ್ರಥಮ ಪೈಲೆ ಹುಟ್ಟಿದಿ ಏಕೋ
ಏಕಕ ಮುಂದ ಆಗ್ಯಾದ ಲಾಕಗೋ
ಏಕ ಎಲ್ಲಾನು ಕೂಡಿ ಲೋಕ ಗೆದಿಯಾಗ
ಹಿಂದಿದ್ದ ಜನ ಏನ ಉದ್ದ ಹರಿಯದಕೋ || ಜೀ ||

ಪಂಚ ತತ್ವದ ಘೋಡಾ ದೇಖೋ
ರಜ ತಮ ಸತ್ವದ ಖೋಗಿರ ಹಾಕೋ
ಆತ್ಮರಾಮನ ಸವಾರಿ ಆಗತಾದ
ಲಗು ಮಾಡಿ ಅಕಲದ ಲಗಾಮ ಹಾಕೋ || ಜೀ ||

ಗುರು ಶಿಷ್ಯಂದು ಒಂದೇ ತೂಕೋ
ಶಿಕ್ಷವಾಗಿ ಮುಂದ ಮೋಕ್ಷ ಹೊಂದದಕೋ
ದ್ಯಾಗಾಯಿ ಗುಂಡುನ ಕವಿತಾ ದಯದಿಂದ
ಸಾಲಿ ಕಲತು ನೀ ಸಮಾಜ ಗೆದಕೋ || ಜೀ ||