೩೩.ಸವಾಲ್: ಸತ್ತರೇನುಸಂಗಾಟಬರುವುದಿಲ್ಲ

ಸತ್ತರೇನು ಸಂಗಾಟ ಬರುದಿಲ್ಲ
ಇದು ಬಯಲಿಗಿ ಬಯಲ || ಪ ||
ನಾ ಇರುವ ತನಕ ಊರನ ಮನಿಯೋ
ಸತ್ತ ಮ್ಯಾಲ ಮಣ್ಣಿನ ಕುಣಿಯೋ
ಗಳಸಿಟ್ಟಿನಂತಿದಿ ಬದಕ
ಬೆಳ್ಳಿ ಬಂಗಾರ ಮುತ್ತ ಮಾಣಿಕ
ಅದು ಬರೂದಿಲ್ಲಯಾತಕ || ಜೀ ||

ಬಿಟ್ಟು ನಡದಿ ಎಲ್ಲಿಂದಲ್ಲಿ
ಎರಡು ಕೈಲಿಂದ ಖಾಲಿ
ಬಂದಂಗ ನಡದಿ ಬತ್ತಲೆ
ಯಮಪೂರಕ ಹ್ವಾದಿ ಹೊಂಟ
ಧರ್ಮ ಕರ್ಮದ ಕಟಗೊಂಡ ಗಂಟ || ಜೀ ||

ಸುಣ್ಣದ ಮಡವಿನಂತೆ ಸಂಸಾರ
ತಣ್ಣಗೆಂದು ತಿಳಿಬ್ಯಾಡ ಚೋರ
ಹೆಣಗ್ಯಾಡತಿ ಎಲ್ಲಿತಾನ
ನೀ ಹಚ್ಚಿ ನೋಡೋ ಅಂಜನ
ಇದರೊಳಗ ಸೇರ‍್ಯಾದ ಮಂಜನ
ನೀಲೂರ ದಸ್ತಗಿರಿಯ ಆಟ
ರಹೆ ತೇರಾ ಸಾರಾ ಜೀವನ ಝಾಟ || ಜೀ ||


೩೪. ಜವಾಬ್: ಸತ್ತರಸಂಗಾಟಬರುವುದುವಾರ್ತೆಕೀರ್ತಿ

ಸತ್ತರ ಸಂಗಾಟ ಬರುವದು ವಾರ್ತೆ ಕೀರ್ತಿ ತಿಳಿಪೂರ್ತಿ
ಮಣ್ಣ ಮರಿಯಾಗಿ ಹೋಗುವದು ಮೂರ್ತಿ || ಪ ||

ಸತ್ತರ ಸಂಗಾಟ ಬರುವುದು ಭಕ್ತಿ
ಭಕ್ತಿ ಮಾಡಿದವಂಗೈತಿ ಮುಕ್ತಿ
ಸತ್ತರ ಸಂಗಾಟ ಬರುವುದುಪುಣ್ಯ
ಪುಣ್ಯ ಹೀನ ಅನಿಸುವವ ಟೊಣ್ಯಾ
ಹರದಾಡುತ ಹೋಗುವದು ಮನಸ
ಮನ ನಿರ್ಧರಿಸಿ
ಆಗುವದು ಜಿನಸ
ಈ ಸಂಸಾರ ಅನ್ನುವದು ಕನಸ
ಜೀವ ಇರುವವರೆಗೂ ಗರತಿ
ಹಾರಿ ಹೋದ ಮೇಲೆ ಹಾದರಗಿತ್ತಿ || ಜೀ ||

ಮಾನವ ಆಗಿ ಮಾಡಕೋ ಸಂತಿ
ದಾನವ ಆದ್ರ ಅದ ಹುದಲಂತಿ
ಪರೋಪಕಾರಕ ಕೊಡು ನಾಣ್ಯ
ಪರದೇಶಿಗಿ ಕೊಡಬೇಕು ದೇಣ್ಯ
ಪರಲೋಕ ಆಗೋ ಆಗ್ರಣ್ಯ
ದೇಹ ಆಗಿ ಹೋಗುವದು ನಾಸ
ಬಿದ್ದು ನಾರುವದು ಹಡಿ ಹೊಲಸ
ಈ ಹೇಡಿದು ಏನೈತಿ ಕೆಲಸ
ಆಸ್ತಿ ಜಾಸ್ತಿಯಲ್ಲಿ ಭರ್ತಿ
ತೂಕ ತಗೋ ಸೋಳಾಣಿ ಸೂರ್ತಿ || ಜೀ ||

ಸತ್ತರ ಸಂಗಾಟ ಬರುವದು ಶಾಂತಿ
ಶಾಂತಿ ಇದ್ದಾಂವ ಹೊಳಿವನು ಕಾಂತಿ
ಅರಿತು ಹೊಡಿ ಅನುಭವ ಫಾಣ್ಯ
ಆರೂಢ ದೊರಕುವದು ಅಣ್ಯ
ಶಿವ ಸಿಗುವನು ಸುಬ್ರಹ್ಮಣ್ಯ
ಅನಭಾವಿಗೈತು ಕೈಲಾಸ
ತನುಬಾವಿಗಿ ಇಲ್ಲೆ ರಹಿವಾಸ
ಮನಬಾವಿಗಿ ಸದಾ ವನವಾಸ
ಧರೆಯೊಳು ಹಿರೇ ಸಾವಳಗಿ ಭರ್ತಿ
ಕವಿ ಮಹ್ಮದಸಾಬಗ್ಯಾಕ ಮರತಿ || ಜೀ ||