೩೯. ಸವಾಲ್: ಹೇಡಿಗಂಡ

ಹೇಡಿ ಗಂಡ ಗಂಟ ಬಿತ್ತು ಎನಗೆ ಖೋಡಿ
ಹಗಲು ಹಾಡೆ ತಿಂತೈತಿ ಬಿಕ್ಕಿ ಬೇಡಿ || ಪ ||

ಹುಡಗಿ ದುಡದು ದುಡದು ಹಾಕಿದೆ ಧಂದಿ ಮಾಡಿ
ಬಡಿದಾಡಿ ಬಡಿದಾಡಿ ಬೆಂಡಾದೆನು ತೋಡಿ
ಉಂಡು ಉಟ್ಟು ಕಂಡಂಗ ಹೇಳತಾನ ಚಾಡಿ || ಜೀ ||

ಬಂಡ ಗಂಡ ಎಂದು ಹೇಳುವೆ ಕೇಳಿರಿ ಜಾಡಿ
ಮನಗಂಡ ಉಂಡು ಮನಗಂವ ಒಂದಿನ ಕೂಡಿ
ಹೆಂಡತಿ ಗಂಡಕ್ಕ ಕೈ ಹಾಕಿದರ ಖಂಡಿತ ಅಳಾಂವ ಹಾಡಿ || ಜೀ ||

ಗಂಡ ಗುಂಡ್ಯಾಡಿ ದಾಡಿ ಎಲ್ಲಿಂದ ರಾಡಿ
ಹೆಂಡತಿ ಮಾತ ಕುಂಡಿಗಿ ವರಸಾಂವ ಕುಲಗೇಡಿ
ಷಂಡನ ಗುಡ ನಾನೆ ಕೂಡ್ಯಾಡಿ || ಜೀ ||

ಒಮ್ಮೊಮ್ಮೆ ಸೀರಿ ಉಡಾಂವ ಮುರಕಾ ಮಾಡಿ
ಜಂಪರ ತೊಟ್ಟು ಹಂಪರಸಾಂವ ಜಿಗದಾಡಿ
ಬುಗಡಿ ಇಟಕಂಡು ತಿರಗಾಂವ ಅರ್ಥಗೇಡಿ || ಜೀ ||

ಮೂಗಿಗಿ ಮೂಗುತಿ ಕಿವಿಯೊಳು ಜುಮಕಿ
ಬುಗಡಿ ಸುಮ ಸುಮನೆ ಯಮಕಿ ಹಾಕಾಂವ
ಗಂಡ ಜೋಗಿಯರಂತೆ ಇರಾಂವ || ಜೀ ||

ನಡಗಡ್ಡಿ ಸಾವಳಗಿ ದಡಿ
ಪ್ರೌಢ ಸಿಂಹದೊಳು ಕಮರಿಯ ಗುಡಿ
ಕವಿ ದಸ್ತಗಿರಿಯ ಖವ್ವಾಲಿ ಮುತ್ತಿನ ಲಡಿ || ಜೀ ||

 

೪೦.ಜವಾಬ್: ಬಂಡಪಿಂಡದಹೆಂಡತಿ

ಬಂಡ ಪಿಂಡದ ಹೆಂಡತಿ ಬಿಡಕಿ
ಕಂಡಂಗೆ ಅಭಂಡ ಬಿಟ್ಟಳೋ ಖಿಡಕಿ || ಪ ||

ಮೂನ್ನೂರ ಅರವತ್ತ ಮಂದಿಗಿ ಇಕಿ ತೊಡಕಿ
ಇನ್ನೂರ ಹದಿನಾರು ಜನರಿಗಿ ಹುಡಕಿ
ನೂರಾ ಎಂಟನೆಯವರ ಖಳಶ್ಯಾಳೋ ಕೆಡಕಿ || ಜೀ ||

ಮೊದಲು ಖೂಳಗಂಡ ಆಳಿದ ಇವಳಿಗಿ ಹುಡಕಿ
ಹಿಂದಿಂದ ಮೂವರಿಗಿ ಆಗಿದಳೋ ಉಡಕಿ
ಆರು ಮಂದಿ ಹೊಡದರ ಇವಳಿಗಿ ಕೊಡಕಿ || ಜೀ ||

ಹತ್ತು ಮಂದಿ ಒತ್ತ್ಯಾಡಿ ಕೊಟ್ಟಾರ ಅಡಕಿ
ಹದಿನಾರು ಮಂದಿ ಹದವಾಗಿ ಉಡಸಿರು ಫಡಕಿ
ಇಪ್ಪತೈದು ಮಂದಿಗಿ ನಿಂತು ನೋಡಕಿ || ಜೀ ||

ಮೂವತ್ತಾರು ಮಂದಿಗಿ ಮುತ್ತಿನ ಹಾರ ಬೇಡಕಿ
ಎಪ್ಪತ್ತೆರಡು ಮಂದಿಗಿ ಸದಾ ಕಾಡಕಿ
ನೂರಾ ಒಂದು ಮಂದಿಗಿ ಆನಂದದಿ ಕೂಡಕಿ || ಜೀ ||

ಕೋಟ್ಯಾನು ಕೋಟಿ ಮಂದಿಗಿ ಹಾಡಕಿ
ಆಟ ನೋಟ ಘಾಟೆ ಕುಂತ ಬೇಡಕಿ
ಇಪ್ಪತ್ತೊಂದು ಸಾವಿರ ಆರು ನೂರಕ್ಕ ಒಡಕಿ || ಜೀ ||

ಧರೆಯೊಳು ಪರಿಪರಿ ಮೆರದಾಡಕಿ
ಹಿರೇ ಸಾವಳಗಿ ಸಿದ್ದಗ ಕರದಾಳಕಿ
ಕವಿ ಮಹ್ಮದನ ಕಾವ್ಯಕ ಸರದಾಳಕಿ || ಜೀ ||