೪೫. ಸವಾಲ್: ಸೀರ್ಯಾಗ

ಜಗವೆಲ್ಲ ಹುಟ್ಯಾದ ಸೀರ‍್ಯಾಗ
ನಿನಗೇನ ಗೊತ್ತ ಪಿಚ್ಚ ಗಣ್ಣ ಪೀರ‍್ಯಾಗ
ನಿಮ್ಮಂತ ಚೌರೆ ಐಂಸಿ ಹುಳ ಎಲ್ಲಾ ಹುಟ್ಯಾವ
ಇದೆ ನಮ್ಮ ಸೀರ‍್ಯಾಗ || ಜೀ ||

ಚಲ್ಲಾ ಪಿಲ್ಯಾ ಆಗಬ್ಯಾಡ ವಾರ‍್ಯಾಗ
ಇಲ್ಲೆ ನಿಂದು ಪೌರುಷ ಕೇರ‍್ಯಾಗ
ಕೋತಿ ಮರಿ ಹಂಗ ಎಲ್ಲಿ ಕುಂತಿತೇನೋ
ಯಾ ಗುಡ್ಡದಾನ ವಾರ‍್ಯಾಗ || ಜೀ ||

ದೇಶದೊಳು ಹಿರೇ ಸಾವಳಗಿ ಜಾಗ
ಸಿದ್ಧ ನೆನದಾನೋ ಧರಿವಳಗ
ದಸ್ತಗೀರ ಹಿಂಗ ಬಂದ ಹೇಳತಾನ
ಬೆಲಿಯಿಲ್ಲ ನಾರಿಗ || ಜೀ ||

 

೪೬. ಜವಾಬ್: ದೋತರದಾಗ

ಜಗವೆಲ್ಲ ಹುಟ್ಯಾದಂತಿ ಸೀರ‍್ಯಾಗ
ನಿನಗೇಗೂ ಪಿಚ್ಚಗಣ್ಣ ಪೋರಿಗ
ಮೊದಲೆ ಕೇಳ ನಮ ದೋತರದಾನ
ನೀರ ಬಿದ್ದಾವ ಬಚ್ಚಲ ಮೋರ‍್ಯಾಗ || ಜೀ ||

ಎಲ್ಲಾ ಮಂದಿ ಹುಟ್ಯಾದಂತಿ ಸೀರ‍್ಯಾಗ
ಸೀರಿ ಇಲ್ಲದ ಏಸ ಮಂದಿ ಹುಟ್ಯಾರ ಕಡಿಗ
ನಾಯಿ ನರಿ ಕುರಿ ಕೋಳಿ ಹುಟ್ಯಾವೇನ
ಇದೆ ನಿನ್ನ ಸೀರ‍್ಯಾಗ || ಜೀ ||

ಸೀರಿ ನಿಂದು ನೇಯ್ದಾರ ಯಾವೂರಾಗ
ಶಂಬರ ವರ್ಷ ನಂಬರ ಶರಗೀಗ
ಮೂಗ ಮಾಡಿದವಗ ಮೊದಲೆ ಮರತಿದಿ
ನೆನಸೆ ಮೂಗುತಿ ಮಾಡಿದವಗ || ಜೀ ||

ದೇಶದೊಳು ವಾಸ ಬಿದನೂರ ಜಾಗ
ಶರಣು ಬಸಯ್ಯ ಬಂದು ಸಭಾದಾಗ
ಸಖಿ ಮಾಡಿ ಹೇಳ್ಯಾರ ಜನರೀಗ || ಜೀ ||