೩೭.ಸವಾಲ್: ಈತಯಾರಸುತನ

ಈತ ಯಾರ ಸುತನ ಮಾಮಾ ಮನ್ಮಥನ
ಮಾರಿ ನೋಡೆ ಈತನ || ಪ ||

ತಾರಾ ಪ್ರಿಯ ಚಕೋರ ಚಂದ್ರನ
ಅಹಲ್ಯ ಮೋಹಿತ ದೇವೆಂದ್ರನ
ಇಂದ್ರ ಮಹೇಂದ್ರ ವೃಷಭೇಂದ್ರ
ಮಂದಿರ ಪರ್ವತದೊಳಿರುವ ರುದ್ರನ || ಜೀ ||

ನಿದ್ರಿಯೊಳು ಮುದ್ರಿ ತೋರ‍್ಯಾನ
ರುದ್ರನ ಪ್ರಕಾಶ ಬೀರ‍್ಯಾನ
ಅದ್ರಿ ತದ್ರಿವದ ಚಿನ್ಮಯ ಚಿದ್ರೂಪ
ಲಿಂಗ ಮುದ್ರಿಗಿ ಉಗರೊತ್ತಿ ಹಾರ‍್ಯಾನ || ಜೀ ||

ಕನಸಿನೊಳು ಜಿನಸ ಊರ‍್ಯಾನ
ಮನಸಿಗಿ ಮನಸ ಹಚ್ಯಾನ
ದಿವಸಕ ದಿವಸ ಕನಸ ಮನಸಿನೊಳು
ಅರ ನಿಮಿಷ ಅಗಲದೆ ಇರತಾನ || ಜೀ ||

ಸರದಾರ ಕರ ದಾರ ಬಂದಾನೇನ
ಏನಾರೆ ಅಂದಾನೇನ
ಅಂದಿಗಿಂದಿಗಿ ಎಂದಿಗಾರೆ ಒಂದಿವಸ
ದ್ವಂದ್ವ ಕುಚ ಪಿಡಿದು ನಿಂದಾನೇನ || ಜೀ ||

ಧರಿಗಿ ತಿರಿಗಿದೇನ
ಹೀರೇ ಸಾವಳಗ್ಯಾಗ ಇದ್ದಾನೇನ
ಸಿದ್ದನ ಬುದ್ದಿಯೊಳು ಕುಂತು
ಮಹ್ಮದ ಶುದ್ಧಗೈದು ಎನಗ ತಿದ್ಯಾನ || ಜೀ ||


೩೮.ಜವಾಬ್: ಇಕಿಯಾವುರಕಿ

ಇಕಿ ಯಾವುರಕಿ
ಏನ ಸಕಿ ಜಾನಕಿ || ಪ ||

ಮೈಮಾಟ ಮೇನಕಿ ನುಡಿದಂಗ ಹಾಲಕ್ಕಿ
ಕಡದಂಗ ಧೃವ ಚುಕ್ಕಿ
ಗಿಡಗನಂತ ಹುಡಗಿ ದಿಡಗ ನಡದಾಳೋ
ಕೂಡಕೊಂಡರ ಅಳತಾಳ ಬಿಕ್ಕಿ ಬಿಕ್ಕಿ || ಜೀ ||

ನಡೆಯುತ ಬಂದು ಹೊಡದಾಳ ಧಕ್ಕಿ
ಎರಡು ಭುಜಕ ನಡದಾಳ ತಿಕ್ಕಿ
ಮಿಕ್ಕಿದವರಿಗೆಲ್ಲ ದಿಕ್ಕ ತಪ್ಪಿಸಿ
ಒಕ್ಕಲಾಗಿ ನಡೆದಿಹಳು ಷನ್ಮುಖಿ || ಜೀ ||

ಪಾರ್ವತಿನೆ ಇರುವಳು ಇಕಿ
ಒಂದು ಪಕ್ಷ ಲಕ್ಷ್ಮೀ ಏನಕಿ
ಅಹಲ್ಯ ತಾರಾಮತಿ ದ್ರೌಪತಿ
ರಾಮ ಸೀತನಂಗ ಚೆಲುವಿಕಿ
ಕೈ ಕೈಲಿಂದೆ ಹೋದಳೋ ದುಡಕಿ
ಮಾಯೇ ಯಾರು ತರುವರೋ ಹುಡಕಿ
ಮನಿಮಾರ ಸರ್ವೆಶಾಮಮಾರಿ
ನಾರಿಗಾಗಿ ನಾ ಬೇಡುವೆ ಬಿಕ್ಕಿ || ಜೀ ||

ಧರೆಯೊಳು ಹಿರೇ ಸಾವಳಗಿ ಕಡಕಿ
ಶ್ರೀ ಸಿದ್ಧೇಶ್ವರನಲ್ಲಿ ದುಡಕಿ
ದಸ್ತಗಿರಿ ಬೆಡಗಿನ ನುಡಿ ಕವಿ ಹುಡಕಿ
ನಡೆದರ ಕಾವ್ಯ ಹೇಳಿದರು ಹುಡುಕಿ || ಜೀ ||