೫೬
ತಿಳಿದಾತ ದಾವ್ಬಗ್ಗೆ ಮಾತಾಡಲು ಮುಂದಾಗುವುದಿಲ್ಲ
ಹಾಗೆ ಮುಂದಾಗುವ ಜಾಣ ದಾವ್ನನ್ನ ತಿಳಿದಿರುವುದಿಲ್ಲ
ತಿಳಿದಾತ ಬಾಯನ್ನೂ ಮೂಗನ್ನೂ ಮುಚ್ಚಿಕೊಂಡು ತಟಸ್ಥನಾಗಿರುತ್ತಾನೆ,
ಜಟಿಲವಾದ್ದರ ಸಿಕ್ಕು ಬಿಡಿಸುವುದರಲ್ಲಿ ಮಗ್ನನಾಗಿರುತ್ತಾನೆ,
ತನ್ನ ತೇಜಸ್ಸನ್ನು ಸೌಮ್ಯಗೊಳಿಸಿಕೊಂಡು
ಅಜ್ಞಾತಕ್ಕೆ ಒದಗಿದವನಾಗಿರುತ್ತಾನೆ,
ಅವನ ಚಕ್ರ ಜಾಡಿನಲ್ಲೇ ಚಲಿಸುತ್ತಿರುತ್ತದೆ,
ಇದು ಆದ್ಯದಲ್ಲಿ ಏಕಗೊಂಡ ಸ್ಥಿತಿ.
ಅಂಥವನ ಜೊತೆ ಸಲಿಗೆಯೂ ಸಾಧ್ಯವಿಲ್ಲ
ನಿಷ್ಠುರವೂ ಸಾಧ್ಯವಿಲ್ಲ,
ಲಾಭನಷ್ಟಗಳ ದೃಷ್ಟಿಯಿಂದ ಅವನನ್ನು ಕಾಣಲಾಗದು,
ಅವನನ್ನು ಗೌರವಿಸಲೂ ಬಾರದು,
ಅವಮಾನಿಸಲೂ ಬಾರದು.
ಆದ್ದರಿಂದ ಸಕಲ ಸೃಷ್ಟಿಯಲ್ಲಿ ಆತ
ಸಂಭಾವಿತ.
೫೭
ರಾಜ್ಯಾಡಳಿತಕ್ಕೆ ಕಟ್ಟುಕಟ್ಟಳೆಗಳು ಬೇಕು
ಯುದ್ಧ ಗೆಲ್ಲುವುದಕ್ಕೆ ಉಪಾಯಬೇಕು
ಆದರೆ ಸಾಮ್ರಾಜ್ಯವನ್ನೇ ಗಳಿಸಲು ಅನಾಸಕ್ತನಾಗಿರಬೇಕು
ನಿಷೇಧಗಳು ಹೆಚ್ಚಾದಂತೆ
ಪಾಪಿಗಳ ಸಂಖ್ಯೆ ಬೆಳೆಯುವುದು;
ಶಸ್ತ್ರಾಸ್ತ್ರಗಳು ಅಧಿಕವಾದಂತೆ
ನಿರಾಳತೆ ಕಮ್ಮಿಯಾಗುವುದು;
ಉತ್ತೇಜನ ಅತಿಯಾದಂತೆ
ಉದ್ಯಮಶೀಲತೆ ಹಿಮ್ಮೆಟ್ಟುವುದು.
ಆದ್ದರಿಂದ ರಾಜರ್ಷಿ ಹೇಳುತ್ತಾನೆ:
ನಾನು ಕಟ್ಟುಕಟ್ಟಳೆಗಳನ್ನು ಕಡ್ಡಾಯಗೊಳಿಸುವುದಿಲ್ಲ,
ಆಗ ಜನ ಋಜುಮಾರ್ಗದಲ್ಲಿರುತ್ತಾರೆ;
ನಾನು ಸಂಪತ್ತಿನ ಸೃಷ್ಟಿಗೆಂದು ಬೃಹತ್ಯೋಜನೆಗಳನ್ನು ಹಮ್ಮಿಕೊಳ್ಳುವುದಿಲ್ಲ,
ಆಗ ಜನ ಭಾಗ್ಯವಂತರಾಗಿರುತ್ತಾರೆ;
ನಾನು ಮತಧರ್ಮಗಳನ್ನು ಅವರ ಮೇಲೆ ಹೇರುವುದಿಲ್ಲ,
ಆಗ ಜನ ಪ್ರಶಾಂತರಾಗಿರುತ್ತಾರೆ;
ಸುಖೀರಾಜ್ಯಕ್ಕಾಗಿ ನಾನು ಆಸೆಪಡುವುದಿಲ್ಲ,
ಆಗ ಸುಖ ಹುಲ್ಲಿನಷ್ಟು ಹುಲುಸಾಗಿ ಹಬ್ಬಿರುತ್ತದೆ.
೫೮
ಮಂದಗಣ್ಣಿನ ರಾಜ್ಯಭಾರದಲ್ಲಿ
ಪ್ರಜೆಗಳು ನಿಷ್ಕಪಟಿಗಳಾಗಿ ಇರುತ್ತಾರೆ
ದೂರಾಲೋಚನೆಯ ರಾಜ್ಯಭಾರದಲ್ಲಿ
ಪ್ರಜೆಗಳು ಖದೀಮರಾಗುತ್ತಾರೆ.
ಸಂಪತ್ತಿನ ತಳದಲ್ಲಿ ವಿಪತ್ತು ಇರುತ್ತದೆ.
ವಿಪತ್ತು ಸಂಪತ್ತಿನಲ್ಲಿ ಅಡಗಿರುತ್ತದೆ.
ಇವುಗಳ ನಡುವಿನ ಗೆರೆ ತೆಳುವಾದದ್ದು
ರೂಢವಾದ್ದು ಭ್ರಷ್ಟವಾದೀತು
ಸುಶೀಲವಾದ್ದು ಪಿಶಾಚಿಯಾದೀತು
– ಜನರನ್ನು ಸದಾ ಕಂಗೆಡಿಸುವ ವಿದ್ಯಮಾನ ಇದು.
ಆದ್ದರಿಂದ ಋಷಿ ಮುಕ್ಕಾಗದಂತೆ ಚೌಕಟ್ಟಿನಲ್ಲಿರುತ್ತಾನೆ,
ಕೋನಗಳಿದ್ದೂ ತಿದಿಯಂತಿರುತ್ತಾನೆ,
ನಿಗುರಿಕೊಳ್ಳದಂತೆ ನೆಟ್ಟಗಿರುತ್ತಾನೆ,
ಕಣ್ಣುಕೋರೈಸದಂತೆ ಕಂಗೊಳಿಸುತ್ತಾನೆ.
೫೯
ದಿವಿಯ ಇಚ್ಛೆಯಂತೆ ಆಳಬೇಕಾದರೆ
ಮಿತವಾದಿಯೂ ಸೌಮ್ಯನೂ ಆಗಿರಬೇಕು
ಸೌಮ್ಯನಾದವನು ಮುಂದಾಗುವುದಕ್ಕೆ ಮುನ್ನವೇ ಸನ್ನದ್ಧನಾಗಿರುತ್ತಾನೆ;
ಮೊದಲೇ ಸನ್ನದ್ಧನಾದವನು
ದಾವ್ನ ಗುಣವನ್ನು ಶೇಖರಿಸಿಟ್ಟುಕೊಂಡಿರುತ್ತಾನೆ.
ಗುಣಿಯಾದವನು ಎಲ್ಲ ವಿಘ್ನಗಳನ್ನೂ ಬಗೆಹರಿಸಿಕೊಳ್ಳುತ್ತಾನೆ,
ಇಂಥವನಿಗೆ ಮಿತಿ ಇಲ್ಲ,
ದೇಶವೇ ಅವನ ವಶದಲ್ಲಿರುತ್ತದೆ.
ಇಂಥವನು ತಾಯಿಬಲದಿಂದ ಬಹುಕಾಲ ದೇಶವನ್ನು ಆಳುತ್ತಾನೆ.
ಇದನ್ನೇ
ಬಲವಾದ ಬೇರುಗಳನ್ನೂ
ಗಟ್ಟಿಯಾದ ಕಾಂಡವನ್ನೂ
ದೀರ್ಘಾಯಸ್ಸನ್ನೂ
ಚಿರದೃಷ್ಟಿಯನ್ನೂ ಪಡೆದಿರುವ ಭಾಗ್ಯ ಎಂದು ಅನ್ನುವುದು.
೬೦
ಒಂದು ದೊಡ್ಡ ರಾಜ್ಯವನ್ನಾಳುವುದು
ಒಂದು ಸಣ್ಣ ಮೀನನ್ನು ಹುರಿದಂತೆ
ತೀರಾ ಚುಚ್ಚಕ್ಕೆ ಹೋದರೆ ಅದು ಕರಟಿಬಿಡುತ್ತದೆ.
ದಾವ್ರಕ್ಷಣೆಯಲ್ಲಿ ದೇಶವಿದ್ದರೆ
ಕೇಡು ಅದರ ಹತ್ತಿರ ಸುಳಿಯುವುದಿಲ್ಲ,
ಆಗೀಗ ಅದು ಕಾಣಿಸಿ ಕೊಂಡರೂ ಕೂಡ
ಜನ ಅದನ್ನು ಸರಿದು ನಡಿಯುತ್ತಾರೆ.
ವಿರೋಧಕ್ಕೆ ಏನೂ ಸಿಗದಂತೆ ನೋಡಿಕೊಂಡರೆ
ಕೇಡು ತೆಪ್ಪಗಾಗಿಬಿಡುತ್ತದೆ.
೬೧
ದೊಡ್ಡ ದೇಶ ನದಿಯ ಕೆಳಗಿನ ತಪ್ಪಲಂತೆ,
ಈ ತಪ್ಪಲು ಹೆಣ್ಣು: ವಿಶ್ವದ ಸಂಗಮಭೂಮಿ
ತನ್ನ ಸಮಾಧಾನ ಗುಣದಿಂದ ಹೆಣ್ಣು ಅಬಲೆಯಾಗಿ ಗಂಡನನ್ನ ಗೆಲ್ಲುತ್ತಾಳೆ
ತನ್ನ ಸಮಾಧಾನ ಗುಣದಿಂದ ಅಡಿಯಲ್ಲಿದ್ದು ಪಡೆಯುತ್ತಾಳೆ
ಆದ್ದರಿಂದ ದೊಡ್ಡ ದೇಶವೂ ತಗ್ಗಿ ಇರಲು ಸಮ್ಮತಿಸಿ
ಸಣ್ಣ ದೇಶವನ್ನು ಗೆಲ್ಲಬಹುದು;
ಸಣ್ಣ ದೇಶ ತಗ್ಗಿ ಇರುವುದರಿಂದಲೇ
ದೊಡ್ಡ ದೇಶವನ್ನು ಗೆಲ್ಲಬಹುದು
ದೊಡ್ಡದು ವಿನಯದಿಂದ ತಗ್ಗಿ ಗೆಲ್ಲುವುದು
ಚಿಕ್ಕದು ಸಹಜವಾಗಿ ತಗ್ಗಿ ಗೆಲ್ಲುವುದು
ದೊಡ್ಡ ದೇಶಕ್ಕೆ ಬೃಹತ್ ಪ್ರದೇಶದ ಜನರನ್ನ ಸಂಘಟಿಸಿ
ಒಟ್ಟಾಗಿ ಬಾಳಿಸಬೇಕು ಅನ್ನುವ ಆಸೆ ಹೊರತು ಬೇರೇನೂ ಇಲ್ಲ;
ಚಿಕ್ಕ ದೇಶಕ್ಕೆ ತಾನೂ ಒಳಗಿನವನಾಗಿ, ಎಲ್ಲರ ಅನುಕೂಲಕ್ಕೆ ಒದಗಿ,
ಬಾಳಬೇಕಲು ಅನ್ನುವ ಆಸೆ ಹೊರತು ಬೇರೇನೂ ಇಲ್ಲ
ಹೀಗೆ ಇಬ್ಬರಿಗೂ ತಮಗೆ ಬೇಕಾದದ್ದು ಸಿಗುವುದರಿಂದ
ದೊಡ್ಡ ದೇಶ ತಗ್ಗಿ ನಡೆಯುವುದು ಒಳ್ಳೆಯದು.
೬೨
ದಾವ್ವಿಶ್ವದ ನಾಭಿ
ಗುಣಿಯ ಗುಪ್ತನಿಧಿ
ಕೆಡುಕನ ಆಶ್ರಯ
ಹೊಗಳಿಕೆಯಿಂದ ಮರ್ಯಾದೆಯಾಗಲೀ
ಸದಾಚಾರದಿಂದ ಗೌರವವಾಗಲೀ
ಸಿಕ್ಕಂತಲ್ಲ,
ಇವೆಲ್ಲಕ್ಕಿಂತ ದಾವ್ಅತೀತ
ನಾಯಕನನ್ನು ಆಯ್ದಾಗ
ನಿನ್ನ ಮುತ್ಸದ್ದಿತನ ಅವನಿಗೆ ಬೇಕಿಲ್ಲ,
ಲೌಕಿಕ ನೆರವಿನ ಅಗತ್ಯವಿಲ್ಲ,
ಅವನಿಗೆ ನೀನು ನೀಡಬೇಕಾದ್ದು
ದಾವ್ತಿಳುವಳಿಕೆ.
ಯಾಕೆ ಎಲ್ಲ ಪೂರ್ವಜರೂ ದಾವ್ನನ್ನು ಗೌರವಿಸಿದರು?
ದಾವ್ನಲ್ಲಿ ಏಕವಾದವರು
ಹುಡುಕಿದ್ದನ್ನು ಪಡಿಯುತ್ತಾರೆ
ತಪ್ಪು ಮಾಡಿದರೆ ಮಾಫಾಗುತ್ತಾರೆ
ಆದ್ದರಿಂದ ದಾವ್ಸರ್ವರಿಗೂ ಪ್ರಿಯವಾದ್ದು.
೬೩
ಅನಾಸಕ್ತನಾಗಿ ದುಡಿ
ತಟಸ್ಥನಾಗಿ ಶ್ರಮಿಸು
ರುಚಿಯಿಲ್ಲದ್ದರ ರುಚಿನೋಡು
ಚಿಕ್ಕದನ್ನು ದೊಡ್ಡದೂಂತ ತಿಳಿ
ಕೆಲವನ್ನ ಹಲವು ಎಂದುಕೊ
ಇನ್ನೂ ಸುಲಭವಾಗಿರುವಾಗಲೇ
ಕಷ್ಟವಾದದ್ದಕ್ಕೆ ಕೈ ಹಾಕು,
ದೊಡ್ಡ ಕೆಲಸವನ್ನ
ಚೂರು ಚೂರೇ ಮಾಡಿ ಮುಗಿಸು.
ಋಷಿ ದೊಡ್ಡದನ್ನ ಹಚ್ಚಿಕೊಳ್ಳಲಿಕ್ಕೆ ಹೋಗದ್ದರಿಂದ
ದೊಡ್ಡವನಾಗ್ತಾನೆ,
ಕಷ್ಟವಾದದ್ದು ಮೈಮೇಲೆ ಏರಿ ಬಂದಾಗ
ಸುಮ್ಮನಿದ್ದು ತನ್ನನ್ನ ಕೊಟ್ಟುಕೊಳ್ಳುತಾನೆ,
ತನ್ನ ಸೌಖ್ಯವನ್ನು ಕಡೆಗಣಿಸುವುದರಿಂದ
ತೊಡಕಿಗೆ ಸಿಗದೇ ಇರುತ್ತಾನೆ.
೬೪
ಬೇರಿರುವುದನ್ನ ಪಾಲಿಸುವುದು ಸುಲಭ
ಇತ್ತೀಚಿನದನ್ನ ತಿದ್ದುವುದು ಸುಲಭ
ಲಡ್ಡಾದ್ದನ್ನ ಒಡೆಯುವುದು ಸುಲಭ
ಕಾಣಿಸಿಕೊಳ್ಳೋಕೆ ಮುಂಚೆ ತೊಂದರೆಗಳನ್ನ ತೊಡೆದುಹಾಕು
ಆಗುವುದಕ್ಕೆ ಮೊದಲೇ ವ್ಯವಸ್ಥೆ ಮಾಡಿರು
ಮಹಾವೃಕ್ಷವಾಗುವ ಆಲದ ಮೂಲ ಒಂದು ಪುಟಾಣಿ ಬೀಜ
ಸಾವಿರ ಮೈಲುಗಳ ಪ್ರಯಾಣ ಶುರುವಾಗಿರುವುದು ನಿಂತ ನಿಲುವಿನಿಂದ
ಮುನ್ನುಗ್ಗಿದರೆ ಮುಗ್ಗರಿಸುತ್ತೀಯ
ಕಬಳಿಸಕ್ಕೆ ಹೋದರೆ ಕಳೆದುಕೊಳ್ಳುತ್ತೀಯ
ಒತ್ತಾಯ ಮಾಡುವುದಕ್ಕೆ ಹೋದರೆ –
ಮಾಗೋ ಮುನ್ನ ಕಿತ್ತುಬಿಡುತ್ತೀಯ.
ಆದ್ದರಿಂದ ತಮ್ಮ ಪಾಡಿಗೆ ಎಲ್ಲವನ್ನೂ ಆಗುವುದಕ್ಕೆ ಬಿಟ್ಟು
ಋಷಿ ತನ್ನ ಕರ್ಮದಲ್ಲಿ ತೊಡಗುತ್ತಾನೆ,
ಸುರುವಿನಲ್ಲೆಷ್ಟೊ ಕೊನೆಯಲ್ಲೂ ಅವನು
ತಣ್ಣಗೆ ಇರುತ್ತಾನೆ,
ಅವನ ಹತ್ತಿರ ಏನೂ ಇಲ್ಲವಾದ್ದರಿಂದ
ಏನನ್ನೂ ಅವ ಕಳೆದುಕೊಳ್ಳದೆ ಇರುವುದು,
ಆಸೆಯನ್ನು ಬಿಡುವುದನ್ನ ಅವನು ಆಸೆಪಡುವುದು,
ಕಳಚಿಕೊಳ್ಳುವುದನ್ನೆ ಕಲಿಯೋದು,
ಯಾವತ್ತಿನಿಂದಲೂ ನೀವು ಯಾರು ಅಂತ
ಜನಕ್ಕೆ ನೆನಪಿಸೋದು.
ದಾವ್ಬಿಟ್ಟು ಬೇರೆ ಯಾವುದರಲ್ಲೂ ಅವನಿಗೆ ಆಸ್ಥೆ ಇಲ್ಲದ್ದರಿಂದ
ಎಲ್ಲದರಲ್ಲೂ ಅವನಿಗೆ ಆಸ್ಥೆ ಇರುವುದು
೬೫
ಪುರಾತನ ಸೂರಿಗಳು
ಜನರ ತಲೆಯಲ್ಲಿ ವಿಷಯಗಳನ್ನು ತುಂಬುವುದಕ್ಕೆ ಪ್ರಯತ್ನಿಸಲಿಲ್ಲ
ಮನಸ್ಸನ್ನು ತೆರವಾಗಿ ತೆರೆದಿಟ್ಟುಕೊಳ್ಳುವುದಕ್ಕೆ ಕಲಿಸಿದರು
ಉತ್ತರ ಗೊತ್ತಿದೆ ಎಂದು ತಿಳಿದುಬಿಟ್ಟ ಬುದ್ಧಿವಂತರಿಗೆ
ದಾರಿತೋರುವುದು ಕಷ್ಟ
ಅದೇ, ತಿಳಿದಿಲ್ಲದೇ ತಿಳಿಯಾಗಿ ಇರುವವರು
ತಾವೇ ದಾರಿ ಕಂಡಾರು
ಆಳುವುದು ಹೇಗೆ ಎಂದು ಕಲಿಯುವ ಇಚ್ಛೆ ಇದ್ದರೆ
ಧನಿಕನೂ ಜಾಣನೂ ಆಗುವುದಕ್ಕೆ ಹೋಗಬೇಡ
ಸರಳವಾದಷ್ಟೂ ಆಕಾರ ಓರಣವಾಗಿರುತ್ತದೆ.
ಸರ್ವೇ ಸಾಧಾರಣವದ ಜೀವನದಲ್ಲಿ ನಿನಗೆ ನೆಮ್ಮದಿ ಇದ್ದರೆ
ತಮ್ಮ ತಮ್ಮ ಗುಣಕ್ಕೆ ಸಹಜವಾದದ್ದಕ್ಕೆ
ಜನ ಹಿಂದಿರುಗುವ ದಾರಿಯನ್ನ ತೋರೀಯ.
Leave A Comment