೬೬

ಕಣಿವೆಯ ಎಲ್ಲ ತೊರೆಗಳೂ ಸಮುದ್ರವನ್ನು ಸೇರುತ್ತವೆ,
ಯಾಕೆಂದರೆ ಸಮುದ್ರ ಅವುಗಳಿಗಿಂತ ತಗ್ಗಿನಲ್ಲಿದೆ,
ವಿನಯದ ಶಕ್ತಿ ಇದು.

ಜನರನ್ನ ನೀನು ಆಳುವುದಾದರೆ
ಅವರಿಗಿಂತ ತಗ್ಗಿನಲ್ಲಿ ಇರು
ಮುನ್ನಡೆಸುವುದಾದರೆ
ಅವರ ಹಿಂದೆ ಇರು.

ಜನರಿಗಿಂತ ಋಷಿ ಮೇಲಿನವನು
– ಆದರೆ ದಮನ ಮಾಡದೆ;
ಜನರಿಗಿಂತ ಮುಂದಿರುವವನು
– ಆದರೆ ಕರಾಮತ್ತು ಮಾಡದೆ.

ಯಾರ ಜೊತೆಗೂ ಅವನು ಸ್ಪರ್ಧಿಸುವುದಿಲ್ಲವಾದ್ದರಿಂದ
ಯಾರೂ ಅವನ ಪ್ರತಿಸ್ಪರ್ಧಿಗಳಲ್ಲ.

೬೭

ಕೆಲವರಿಗೆ ನನ್ನ ಉಪದೇಶ ಅಸಂಬದ್ಧವಾದರೆ
ಇನ್ನು ಕೆಲವರಿಗೆ ಅದು ಉನ್ನತ
ಅಂದರೆ ವ್ಯವಹಾರಕ್ಕೆ ಅಸಂಗತ

ಆದರೆ ತಮ್ಮ ಒಳಗನ್ನು ಕಂಡುಕೊಂಡುವರಿಗೆ
ಅದರ ಪರಿಪೂರ್ಣ ಸಂಬದ್ಧತೆ ಅರಿವಾಗಿರುತ್ತದೆ.
ಅದನ್ನು ಆಚರಣೆಗೆ ತಂದ ವ್ಯವಹಾರ ಕುಶಲರಿಗೆ
ಅದರ ಔನ್ನತ್ಯಕ್ಕೇ ಇಳಿದಿರುವ ಬೇರು
ಅದೆಷ್ಟು ಆಳ ಗೊತ್ತಿರುತ್ತದೆ.

ನಾನು ಕಲಿಸೋದು ಮೂರೇ ವಿಷಯಗಳನ್ನು:
ಸರಳತೆ, ತಾಳ್ಮೆ, ಅನುಕಂಪ
ಈ ಮೂರೂ ನಿನ್ನ ದೊಡ್ಡ ನಿಧಿಗಳು

ಕ್ರಿಯೆಯಲ್ಲೂ ಚಿಂತನೆಯಲ್ಲೂ ಸರಳವಾಗಿದ್ದರೆ
ಸಕಲದ ಮೂಲಾಧಾರವಾದ ತಳವನ್ನು ಅರಿತಿರುತ್ತೀಯ

ಗೆಳೆಯರಲ್ಲೂ ವೈರಿಗಳಲ್ಲೂ ತಾಳ್ಮೆಯಿಂದ ಇದ್ದರೆ
ಪ್ರಪಂಚವನ್ನು ಅದರ ಸಹಜ ಸ್ಥಿತಿಯಲ್ಲಿ ಒಪ್ಪಿಕೊಳ್ಳುತ್ತೀಯ

ನಿನ್ನ ಬಗ್ಗೆಯೂ ನೀನು ಅನುಕಂಪಿತನಾದಾಗ
ಸರ್ವ ಜೀವ ಜಂತುಗಳನ್ನು ಅನ್ಯೋನ್ಯವೆಂದು ಬಗೆಯುತ್ತೀಯ

೬೮

ಅತ್ಯುತ್ತಮ ಜಟ್ಟಿ
ಸನ್ನದ್ಧನಾದ ದಂಡನಾಯಕ
ತನ್ನ ವೈರಿಯ ಮನಸ್ಸನ್ನ ಪ್ರವೇಶಿಸುತ್ತಾರೆ .
ಅತ್ಯುತ್ತಮ ವ್ಯಾಪಾರಿ
ಸರ್ವಹಿತಕ್ಕಾಗಿ ಶ್ರಮಿಸುತ್ತಾನೆ.
ಅತ್ಯುತ್ತಮ ನಾಯಕ
ಜನರ ಇಚ್ಛಾನುಸಾರಿಯಾಗುತ್ತಾನೆ.

ಇವರೆಲ್ಲರೂ ಪೈಪೋಟಿಯನ್ನು ತೊರೆದು ಧನ್ಯರಾದ
ಗುಣಶಾಲಿಗಳು.
ಮೇಲಾಟ ಅವರಿಗೆ ಪ್ರಿಯವಲ್ಲ ಎಂದು ಇದರ ಅರ್ಥವಲ್ಲ-
ದಾವ್‌ಗೆ ಅನುಗುಣವಾಗಿ
ಸ್ಪರ್ಧೆ ಅವರಿಗೆ ಕೇವಲ ಆಟ.

ಇದರಲ್ಲಿ ಅವರು ಮಕ್ಕಳಂತೆ.

೬೯

ದಂಡನಾಯಕರು ಹೇಳುವುದು ಇದೆ:
ದಾಳಿಯನ್ನು ಪ್ರಾರಂಭ ಮಾಡುವುದಕ್ಕೆ ಮುಂಚೆ
ಕಾದು ನೋಡುವುದು ಒಳ್ಳೆಯದು
ಒಂದು ಇಂಚು ಮುಂದುವರಿಯುವುದಕ್ಕಿಂತ
ಒಂದು ಗಜ ಹಿಂದಿರುವುದು ಲೇಸು

ಇದನ್ನೇ ಮುನ್ನುಗ್ಗದಂತೆ ಮುಂದಿರುವುದು ಎಂದೂ
ಶಸ್ತ್ರಗಳನ್ನ ಬಳಸದೆ ಹಿಮ್ಮೆಟ್ಟಿಸುವುದು ಎಂದೂ
ಅನ್ನುತ್ತಾರೆ

ನಿನ್ನ ವೈರಿಯ ನೈಜ ಯೋಗ್ಯತೆಯನ್ನು ಅಂದಾಜಿಗೆ ತೆಗೆದುಕೊಳ್ಳದೆ
ಇರುವುದಕ್ಕಿಂತ ದೊಡ್ಡ ದುರದೃಷ್ಟವಿಲ್ಲ;
ವೈರಿಯ ಯೋಗ್ಯತೆಯನ್ನು ತಪ್ಪಾಗಿ ಅಂದಾಜು ಮಾಡುವುದು ಅಂದರೆ
ಅವನನ್ನು ದುರುಳ ಅಂತ ಅಂದುಕೊಳ್ಳುವುದು,
ಈ ಪ್ರಕಾರ ನೀನು ನಿನ್ನ ಮೂರು ನಿಧಿಗಳನ್ನ ಕಳೆದುಕೊಂಡು
ನೀನೇ ನಿನಗೆ ವೈರಿಯಾಗಿ ಹೋಗುತ್ತೀಯ

ಎರಡು ದೊಡ್ಡ ಶಕ್ತಿಗಳು ಒಂದಕ್ಕೊಂದು ಎದುರಾದಾಗ
ಜಯಗಳಿಸುವುದು ಯಾರು ಅಂದರೆ-
ಬಿಟ್ಟುಕೊಡುವುದು ಹೇಗೆ ಅನ್ನುವುದನ್ನು ಬಲ್ಲವರು

೭೦

ನನ್ನ ಉಪದೇಶಗಳನ್ನು ಅರಿಯುವುದೂ ಸುಲಭ
ಆಚರಿಸುವುದೂ ಸುಲಭ
ಆದರೆ ನಿನ್ನ ಧೀಮಂತಿಕೆಗೆ ಅವು ನಿಲುಕುವುದಿಲ್ಲ
ಆಚರಿಸುವುದಕ್ಕೆ ಪ್ರಯತ್ನಬಿಟ್ಟರೆ, ಆಗುವುದಿಲ್ಲ

ಅತಿ ಪುರಾತನವಾದದ್ದು
ಬುದ್ಧಿವಂತಿಕೆಗೆ ಗೊತ್ತಾಗಿ ಬಿಡುವುದಿಲ್ಲ;
ಅರಿಯಬೇಕೆಂದರೆ
ನಿನ್ನ ಒಳಗನ್ನೇ ಕಂಡಕೊ

೭೧

ಗೊತ್ತಿಲ್ಲ ಅಂತ ಇರುವುದು ನಿಜವಾದ ಜ್ಞಾನ
ಗೊತ್ತಿದೆ ಅನ್ನುವ ಪ್ರತಿಷ್ಠೆ, ರೋಗ.
ಹುಷಾರು ತಪ್ಪಿರುವುದು ತಿಳಿದ ಮೇಲೆ ಮಾತ್ರ
ಗುಣಮುಖಿಯಾಗುವುದು ಸಾಧ್ಯ.

ತಾನೇ ತನ್ನ ವೈದ್ಯನಾದ ಋಷಿ
ಎಲ್ಲ ಪ್ರತಿಷ್ಠೆಗಳಿಂದ ವಾಸಿಯಾಗಿದ್ದಾನೆ
ತನ್ನ ನಿಜದಲ್ಲಿ ಇಡಿಯಾಗಿದ್ದಾನೆ.

೭೨

ಜನ ತಮಗೆ ಸಹಜವಾದ ಬೆರಗು ಕಳೆದುಕೊಂಡಾಗ
ಮತಧರ್ಮಗಳ ಆಶ್ರಯ  ಪಡೆಯುತ್ತಾರೆ
ತಮ್ಮನ್ನ ತಾವೇ ನಂಬಿದಿದ್ದಾಗ
ಪ್ರಭುತ್ವಕ್ಕೆ ಜೋತು ಬೀಳುತ್ತಾರೆ

ಆದ್ದರಿಂದ ಋಷಿ ಸರಿದು ನಿಲ್ಲುವುದು
ಜನ ಗೊಂದಲಕ್ಕೆ  ಸಿಗದಿರಲಿ ಎಂದು;
ಕಲಿಸಲಿಕ್ಕೆ ಹೋಗದೇ ಕಲಿಸುವುದು
ಕಲಿಯುವ ಅಗತ್ಯ ಇರಬಾರದು ಎಂದು.

೭೩

ದಾವ್‌ ಯಾವತ್ತೂ ಆರಾಮಾಗಿರುತ್ತದೆ
ಸ್ಪರ್ಧಿಸದೆ ಗೆಲ್ಲುತ್ತದೆ
ಮಾತಿಲ್ಲದೆ ಉತ್ತರಿಸುತ್ತದೆ
ಕರೆಯದೇ ಬರುತ್ತದೆ
ಅಂದಾಜು ಮಾಡದೆ ಸಾಧಿಸುತ್ತದೆ

ಅದರ ಬಲೆ ವಿಶ್ವವ್ಯಾಪಿ, ಸುವಿಶಾಲ
ಈ ಬಲೆಯ ಕಣ್ಣುಗಳು ಎಷ್ಟು ವಿರಳವಾದರೂ
ಏನನ್ನೂ ನುಣುಚಿಕೊಳ್ಳಲು ಬಿಡುವುದಿಲ್ಲ.

೭೪

ಎಲ್ಲ ಪಲ್ಲಟವಾಗುತ್ತ ಇರುತ್ತದೆಂದು ಗೊತ್ತಾಗಿಬಿಟ್ಟರೆ
ಯಾವುದಕ್ಕೂ ನೀನು ಗಂಟುಬೀಳುವುದಿಲ್ಲ.
ಸಾಯುವುದಕ್ಕೆ ನೀನು ಹೆದರದೇ ಇದ್ದರೆ
ಸಾಧಿಸಲಾರದ್ದು ಇರುವುದಿಲ್ಲ.

ಭವಿಷ್ಯವನ್ನು ಕರಗತಗೊಳಿಸಿಕೊಳ್ಳಬೇಕು ಎಂದು ಆಸೆ ಪಡುವುದು
ವಿಶ್ವಕರ್ಮಿಯ ಸ್ಥಾನವನ್ನು ಕಸಿದುಕೊಂಡಂತೆ,
ಕಸುಬುದಾರನ ಮಟ್ಟುಗಳನ್ನ ಬಳಸುವುದಕ್ಕೆ ಹೋಗುವುದು
ನಿನ್ನ ಬೆರಳಿಗೇ ಅಪಾಯ ತಂದುಕೊಂಡಂತೆ.

೭೫

ತೆರಿಗೆ ಅತಿಯಾಗಿ ಬಿಟ್ಟರೆ
ಜನ ಕದಿಯುತ್ತಾರೆ
ಎಲ್ಲದರಲ್ಲಿ ಸರ್ಕಾರ ತಲೆ ಹಾಕಿದರೆ
ಸ್ಥೈರ್ಯ ಕಳೆದುಕೊಳ್ಳುತ್ತಾರೆ

ಜನರ ಒಳಿತಿಗಾಗಿ ದುಡಿ
ಅವರನ್ನು ನಂಬು
ಅವರ ಪಾಡಿಗೆ ಅವರನ್ನು ಬಿಟ್ಟುಬಿಡು