೭೬

ಮೆದುವಾಗಿ ಮೃದುವಾಗಿ ಮನುಷ್ಯ ಜನಿಸುವುದು
ಜಡ್ಡಾಗಿ ಸೆಟೆದು ಸಾಯುವುದು
ವನಸ್ಪತಿಯೂ ಅಷ್ಟೆ-ಬಳುಕಿ ಬಾಗಿ ಬೆಳೆಯುವುದು
ದರಗು ಮತ್ತು ಕುಂಟೆಯಾಗಿ ಒಣಗುವುದು

ಯಾರು ಕಠಿಣವಾಗುತ್ತಾರೊ, ಬಳುಕಲಾರದೆ ಬೀಗುತ್ತಾರೊ
ಅವರು ಸಾವಿಗೆ ಸಂದವರು;
ಮೃದುವಾಗಿ ಇರುವವರು, ಒಡ್ಡಿಕೊಳ್ಳುವವರು
ಬಾಳಿನ ಋಷಿ ಬಲ್ಲವರು.

ಗಟ್ಟಿಯಾದದ್ದು ಕಠಿಣವಾದದ್ದು ಮುರಿಯುತ್ತವೆ
ಮೃದುವಾದದ್ದು ಹಸಿಯಾದದ್ದು ಬಾಳುತ್ತವೆ.

೭೭

ಜಗತ್ತಲ್ಲಿ ತೊಡಗಿರುವಾಗ ದಾವ್‌
ಬಾಗಿಸಿ ಬಿಲ್ಲು ಮಾಡುವಂತೆ
ಮೇಲಿನ ತುದಿಯನ್ನ ಕೆಳಕ್ಕೆ ಜಗ್ಗುತ್ತ
ಬುಡದ್ದನ್ನು ಮೇಲಕ್ಕೆ ಎತ್ತುತ್ತ
ಇರೋದು

ಹೆಚ್ಚನ್ನೂ ಕಮ್ಮಿಯನ್ನೂ ಸರಿದೂಗಿಸುತ್ತ
ಸಮತೋಲ ನಿರಂತರ ಸಾಧಿಸೋದು;
ಉಳ್ಳವರಿಂದ ಇಸಿದುಕೊಳ್ಳುವುದು
ಇರದವರಿಗೆ ನೀಡುವುದು

ಅದೇ ಅಧಿಕಾರಮತ್ತ ಪಟ್ಟಭದ್ರರು
ದಾವ್‌ ಧರ್ಮದ ವಿರೋಧಿಗಳು;
ಇರದವರಿಂದಲೇ ಕಿತ್ತುಕೊಂಡು
ಉಳ್ಳವರನ್ನು ಇನ್ನಷ್ಟು ಕೊಬ್ಬಿಸುವವರು

ಋಷಿ ಕೊಡುಗೈಯವನಾದ್ದರಿಂದ
ಅವನ ಐಶ್ವರ್ಯಕ್ಕೆ ಮಿತಿಯಿಲ್ಲ
ನಿರೀಕ್ಷಿಸದೆ ಅವ ತೊಡಗುತ್ತಾನಾದ್ದರಿಂದ
ತನ್ನ ಸಾಧನೆಗೆ ಬೆಲೆ ಬೇಡಲ್ಲ.

ತಾನು ಉತ್ತಮ ಅಂತಲೂ ಅಂದುಕೊಳ್ಳುವುದಿಲ್ಲ.

೭೮

ನೀರಿನಷ್ಟು ಮೃದುವಾದದ್ದು, ಮಣಿದು ಸಲ್ಲುವುದು
ಈ ಜಗತ್ತಲ್ಲಿ ಮತ್ತೊಂದಿಲ್ಲ
ಆದರೆ ಕಠಿಣವಾದದ್ದನ್ನ ಕರಗಿಸುವುದಕ್ಕೆ
ಅದಕ್ಕೆ ಮೇಲಾದದ್ದು ಇಲ್ಲ

ಸುಲಭವಾದದ್ದು ಕಠಿಣವಾದದ್ದನ್ನ ಗೆಲ್ಲತ್ತೆ ಅನ್ನುವುದು
ಮಾರ್ದವತೆ ಬಿಗುಮಾನವನ್ನ ಸಡಲಿಸತ್ತೆ ಅನ್ನುವುದು
ಎಲ್ಲರಿಗೂ ಗೊತ್ತು;
ಆದರೆ ಜನರ ಆಚರಣೆಯಲ್ಲಿ ಅದು ಕಾಣುವುದಿಲ್ಲ.

ಆದ್ದರಿಂದ ದುಮ್ಮಾನದ ಮಧ್ಯದಲ್ಲಿದ್ದು
ಋಷಿ ಪ್ರಶಾಂತನಾಗಿರುತ್ತಾನೆ.
ಅವನಲ್ಲಿ ಕೆಡುಕಿಲ್ಲ.
ಉಪಕಾರ ಮಾಡುವುದನ್ನ ಅವನು ಬಿಟ್ಟಿದ್ದರಿಂದ
ಅವನಷ್ಟು ಪರೋಪಕಾರಿ ಇಲ್ಲ.

ನಿಜವಾದ ಮಾತು ಒಗಟಿನಂತೆ ಕಾಣುತ್ತದೆ.

೭೯

ಸಂಧಾನ ಯಶಸ್ವಿಯಾದರೂ ದ್ವೇಷ ಉಳಿದು ಬಿಟ್ಟಿರುತ್ತದೆ
ತಾನೆ ಸೋತು ಬಿಡುವುದು ವಾಸಿ.

ನೋಡಿ-ತಾಳೆ ಲೆಕ್ಕದಲ್ಲಿ ಕಚ್ಚುಹಾಕಿದ ಬಲದ ಸೀಳನ್ನ ಸಾಲಿಗ ಇಟ್ಟುಕೊಂಡು
ಫಚೀತಿಗೆ ಸಿಕ್ಕಿಸುವ ಎಡದ ಸೀಳನ್ನು ಸಾಲಗಾರನಿಗೆ ಕೊಟ್ಟು
ವಸೂಲಿ ಮಾಡುವುದು;
ಆದರೆ ನಮ್ಮ ಸದ್ಗುರು ಹತ್ತರ ಕೈಗಡ ತೆಗೆದುಕೊಂಡರೆ
ಪಾವ್ತಿಗೆ ಒತ್ತಾಯವಿಲ್ಲ.
ಎಡದ ಸೀಳನ್ನು ತಾನೇ ಇಟ್ಟುಕೊಂಡು
ಸಾಲಗಾರನಿಗೆ ತಪ್ಪಿತಸ್ಥನೆಂಬ ಅಳುಕು ಕೂಡ ಹುಟ್ಟದಂತೆ
ವ್ಯವಹಾರ ಮಾಡುತ್ತಾನೆ
ಅಂದರೆ, ಗುರು ತಾಳೆ ಲೆಕ್ಕ ಇಟ್ಟುಕೊಂಡೇನೆ ಇರುತ್ತಾನೆ
ಆದರೆ ಹೀಗೆ-
ಸಮದರ್ಶಿಯಾಗಿ,
ಅಬಲವಾದ್ದರ ಪಕ್ಷಪಾತಿಯಾಗಿ.

೮೦

ಒಂದು ರಾಜ್ಯವನ್ನ ವಿವೇಕದಿಂದ ಆಳಿದ್ದಾದರೆ
ಅದರ ಪ್ರಜೆಗಳು ಸಂತೃಪ್ತರಾಗಿರುತ್ತಾರೆ,
ತಮ್ಮ ಕೈಗಳನ್ನ ಬಳಸಿ ಮಾಡೋ ಕೆಲಸವೇ ಅವರಿಗೆ ಇಷ್ಟವಾದ್ದರಿಂದ

ಯಂತ್ರಗಳನ್ನ ಸೃಷ್ಟಿಸಿ ಅವರು ಕೈಗಳ್ಳರಾಗುವುದಿಲ್ಲ
ತಮ್ಮ ಮನೇನೇ ಅವರಿಗೆ ಎಷ್ಟು ಪ್ರಿಯ ಅಂದರೆ
ಪ್ರಯಾಣ ಮಾಡೋದರಲ್ಲಿ ಅವರಿಗೆ ಮೋಜಿಲ್ಲ
ಸಾವು ಅವರಿಗೆ ಲಘು ಸಂಗತಿಯಲ್ಲ.

ಕೆಲವು ಬಂಡಿಗಳೊ ದೋಣಿಗಳೊ ಅಲ್ಲಿ ಇದ್ದಾವು
ಆದರೆ ಅವು ಎಲ್ಲೂ ಹೋಗಿವುದಿಲ್ಲ
ಅಲ್ಲಿ ಒಂದು ಶಸ್ತ್ರಾಗಾರ ಇದ್ದೀತು
ಯಾರೂ ಅದನ್ನ ಬಳಸುವುದಿಲ್ಲ.

ಜನ ತಮ್ಮ ಊಟವನ್ನೆ ಇಷ್ಟಪಡುತ್ತಾರೆ
ಸಂಸಾರದಲ್ಲಿರೋದನ್ನ ಸುಖಿಸುತ್ತಾರೆ
ಉಳಿದ ಸಮಯ ತಮ್ಮ ಹಿತ್ತಲಿನ ತೋಟದಲ್ಲಿ ದುಡಿಯುತ್ತಾರೆ
ನೆರೆ ಹೊರೆಗೂ ನೆರವಾಗುತ್ತಾರೆ

ಆದರೆ ತಮ್ಮ ನೆರೆಯಲ್ಲೇ ಇರುವ ಇನ್ನೊಂದು ರಾಜ್ಯ
ಕೋಳಿ ಕೂಗಿದರೆ, ನಾಯಿ ಬೊಗಳಿದರೆ ಕೇಳಿಸುವಷ್ಟು

ಹತ್ತಿರವಿದ್ದರೂ ಸಹ
ಆ ರಾಜ್ಯವನ್ನ ತಮ್ಮ ಬದುಕಿಡೀ ನೋಡಲು ಕೂಡ ಹೋಗದೆ
ವೃದ್ದಾಪ್ಯದಿಂದ ಸಾಯುವಷ್ಟು ಅವರು ತೃಪ್ತರಾಗಿರುತ್ತಾರೆ.

೮೧

ನಿಜದ ಮಾತು ನಿರರ್ಗಳವಲ್ಲ
ನಿರರ್ಗಳವಾದ ಮಾತು ನಿಜವಲ್ಲ
ವಿವೇಕಿಗಳು ತಮ್ಮನ್ನ ತಾವು ಸಮರ್ಥಿಸಿಕೊಳ್ಳುವುದಿಲ್ಲ
ತಮ್ಮನ್ನೇ ತಾವು ಸಮರ್ಥಿಸಿಕೊಳ್ಳುವವರು ವಿವೇಕಿಗಳಲ್ಲ

ಋಷಿಗೆ ಸ್ವಂತದ ಸ್ವತ್ತಿಲ್ಲ
ಕಳೆದಷ್ಟೂ ಅವನಿಗೆ ಸುಖ
ಇತ್ತಷ್ಟೂ ಅವ ಸಿರಿವಂತ

ಒತ್ತಾಯಪಡಿಸದೆ ದಾವ್‌ ಪೋಷಿಸುವುದು
ದಬ್ಬಾಳಿಕೆ ಮಾಡದೆ ಋಷಿ ದಾರಿ ತೋರುವುದು.