ಹೈಡೆಗರ್, ತನ್ನ ಜೀವನದ ಅತ್ಯಂತ ಸೃಜನಶೀಲ ವರ್ಷಗಳಲ್ಲಿ, ದಾವ್‌ ಅನುವಾದದಲ್ಲಿ ತೊಡಗಿದ್ದ. ದಾವ್‌ನಿಂದ ಹೈಡೆಗರ್ ಏನನ್ನು ಕಲಿತಿರಬೇಕು? ತುಂಬ ಸರಳವಾಗಿ ಹೇಳುವುದಾದರೆ, ಪಶ್ಚಿಮದ ಅನೇಕ ದುರಭ್ಯಾಸಗಳ ನಿಯಂತ್ರಣವನ್ನು ದಾಟಲು ಹೈಡೆಗರ್ ದಾವ್‌ನ್ನು ಬಳಸಿಕೊಂಡ. ಪ್ರಸ್ತುತ ಟಿಪ್ಪಣಿಯಲ್ಲಿ ಅದೇ ಆಶಯವನ್ನು ಆಧರಿಸಿ , ಪಶ್ಚಿಮದ ಅಭ್ಯಾಸಗಳನ್ನು ದಾಟುವ ಕ್ರಮವನ್ನು ಸಂಕ್ಷಿಪ್ತವಾಗಿ ಶೋಧಿಸಲಾಗಿದೆ.

ಆಧುನಿಕ ಪಶ್ಚಿಮದ ಜಗತ್ತು ಕಳೆದ ನೂರೈವತ್ತು ವರ್ಷಗಳಿಂದ ಶೋಧಿಸಿರುವ ತಾತ್ವಿಕ ಆಶಯ ಎಂದರೆ ಅಧಿಕಾರದ್ದು. ಅದರಲ್ಲೂ ಪ್ರಭುತ್ವದ ಅಧಿಕಾರ ಸ್ವರೂಪವನ್ನು ಕುರಿತ ಶೋಧನೆಯೇ ಪಶ್ಚಿಮದ ತಾತ್ವಿಕತೆಯ ಈಚಿನ ಅತ್ಯುತ್ತಮ ಸಾಧನೆ. ಮಾರ್ಕ್ಸ್‌ನಿಂದ ಹಿಡಿದು ಫೂಕೊ ತನಕವೂ ಈ ಮಾತು ಸಲ್ಲುತ್ತದೆ. ಅಧಿಕಾರದಿಂದ ನಿಯಂತ್ರಣಗೊಳ್ಳುವ ಬಗೆಗೇ ಕ್ರಾಂತಿಕರಿಗಳ ಧ್ಯಾನವಿದೆ. ಪ್ರಭುತ್ವ ಮತ್ತು ಕ್ರಾಂತಿ-ಈ ಎರಡರ ಸರಳ ವೈರುದ್ಧ್ಯದಲ್ಲೇ ಆ ಚಿಂತನಾಕ್ರಮ ಬೆಳೆಯುತ್ತ ಹೋಗುತ್ತದೆ. ಕ್ರಾಂತಿಯೇ ಪ್ರಭುತ್ವವಾಗುತ್ತ ಹೋಗುವುದು ಪಶ್ಚಿಮದ ಸಾಹಿತ್ಯದಲ್ಲಿ ಬಹುಮಟ್ಟಿಗೆ ಕ್ಲೀಷೆ. ಅಥವಾ ಪ್ರಭುತ್ವದ ತಿಕ್ಕಲುತನವನ್ನು ಕಾಣುವುದೂ ಅದಕ್ಕೆ ಸಹಜ. ಹೀಗೆ, ಅಧಿಕಾರದ ಸಮಸ್ಯೆಯನ್ನು ಒಂದು ದೊಡ್ಡ ಆಧ್ಯಾತ್ಮಿಕ ಸಮಸ್ಯೆ ಎಂದು ಕಾಣುವತನಕ ಪಶ್ಚಿಮದ ಪ್ರತಿಭೆ ಸಾಗಿಬಿಟ್ಟಿದೆ. ಕಮಕೂನ ‘ಕಾಲಿಗುಲ’ ಇದಕ್ಕೆ ಉತ್ತಮ ಉದಾಹರಣೆ. ಅತ್ಯಂತಿಕ ಅಧಿಕಾರ ತರುವ ಏಕಾಕಿತನಕ್ಕೆ, ಆಧ್ಯಾತ್ಮಿಕ ಬಿಕ್ಕಟ್ಟಿಗೆ ‘ಕಾಲಿಗುಲ’ ಸಾಕ್ಷಿ. ಅಂದರೆ ಲೌಕಿಕಾಧಿಕಾರದ ಅಂತಿಮ ಸ್ಥಿತಿಯಲ್ಲಿ, ಅದು ದೇವರೇ ಆಗಲು ಹವಣಿಸುತ್ತದೆ. ಮಾನುಷಾಧಿಕಾರಕ್ಕೆ ಆಗ ಎಲ್ಲ ಬಗೆಯ ಅಸಂಬದ್ಧತೆ, ಶೃಂಗಾರ, ತೀವ್ರ ಅನೈತಿಕತೆ ಒದಗಿಬರುತ್ತವೆ. ಕಾಲಿಗುಲನ ವರ್ತನೆ ಅನೇಕ ರೀತಿಯಲ್ಲಿ ದೇವರ ವರ್ತನೆಯಂತೆಯೇ ಇರುತ್ತದೆ; ಆದರೆ , ಹಳೆಯ ಟೆಸ್ಟಮೆಂಟಿನ ದೇವರ ವರ್ತನೆಯಂತೆ ಇರುತ್ತದೆ. ಪ್ರಭುತ್ವಾಧಿಕಾರಿ ಮತ್ತು ಕ್ರಾಂತಿಕಾರಿಗಳಿಬ್ಬರೂ ಒಂದೇ ಆಗಿರುತ್ತಾರೆ. ಈ ಒಳನೋಟ ಪಶ್ಚಿಮದ ಆಧುನಿಕ ಸಾಹಿತ್ಯದ ಸತ್ವ. ದಾಸ್ತೊವಸ್ಕಿ’ಯು ‘ದಿ ಪೊಸೆಸ್ಡ್‌’ನಲ್ಲಿ, ಜೋಸೆಫ್‌ ಕಾನ್ರಾಡ್‌ ತನ್ನ ರಾಜಕೀಯ ಕಾದಂಬರಿಗಳಲ್ಲಿ ಶೋಧಿಸುವುದು ಈ ಮನೋಧರ್ಮವನ್ನೇ. ರಾಜಕೀಯ ತತ್ವಜ್ಞಾನದಲ್ಲೂ ಕೂಡ ಇದೊಂದು ಪ್ರಮುಖ ವಸ್ತು ಎನ್ನುವುದನ್ನು ಬೇರೆ ವಿವರಿಸಬೇಕಿಲ್ಲ. ಅಂತಿಮವಾಗಿ, ಲೌಕಿಕಾಧಿಕಾರವೇ ಶಿಥಿಲವಾಗಿ ಉದುರಿ ಹೋಗುವುದನ್ನು ಮಹತ್ವದ ರಾಜಕೀಯ ಆದರ್ಶವಾಗಿ ಪಶ್ಚಿಮ ಕಂಡಿತ್ತು. ಹೀಗಾಗಿ, ಪಶ್ಚಿಮದ ಕ್ರಾಂತಿಕಾರೀ ಸಿದ್ಧಾಂಥಗಳಲ್ಲೆಲ್ಲಲ ಅನಾರ್ಕಿಸಂನ ಅಂಶಗಳು ಇರದೇ ಇದ್ದರೆ ಅದಕ್ಕೆ ಪ್ರತಿರೋಧದ ಶಕ್ತಿಯೇ ಕೂಡಿಬರುವುದಿಲ್ಲ.

ಆದರೆ, ಇದಕ್ಕೆ ಪೂರ್ಣ ವಿರುದ್ಧ ದಿಕ್ಕಿನಲ್ಲಿ ದಾವ್‌ನ ‘ರಾಜ ಋಷಿ’ ಕಲ್ಪನೆ ಇದೆ. ಅಥವಾ ರಾಜ ಋಷಿಯ ದೃಷ್ಟಿಕೋನದಿಂದ ಮಂಡಿಸುವ ದೃಷ್ಟಿಕೋನಗಳು ಪಶ್ಚಿಮದ ಮುಖ್ಯಧಾರೆಯ ಮಾನಸಿಕ ಅಭ್ಯಾಸಗಳಿಗಿಂತ ಬೇರೆಯಾದದ್ದನ್ನೇ ಹೇಳುತ್ತವೆ. ‘ನಿಶ್ಚಲವಾಗಿ ತೊಡಗಿರುತ್ತಾನೆ, ಮಾತಾಡದೆ ಕಲಿಸುತ್ತಾನೆ’-ಈ ರೀತಿಯ ಸಾಧನೆ ಪಶ್ಚಿಮಕ್ಕೆ ತುಂಬ ಎಂದರೆ ತುಂಬ ಕಷ್ಟ. ಅದರ ಸಾಹಿತ್ಯ ಹಾಗೂ ತತ್ವಜ್ಞಾನಗಳು, ತಮ್ಮ ಸ್ವಭಾವವನ್ನು ಬಿಟ್ಟು ಅನ್ಯವಾಗಲು ಪ್ರಯತ್ನಿಸಿದಾಗ ಮುಖಾಮುಖಿಯಾಗುವುದು ಇದನ್ನೇ. ಟಾಲ್‌ಸ್ಟಾಯ್‌ ತನ್ನ ‘ವಾರ್ ಅಂಡ್‌ ಪೀಸ್‌’ ಕೃತಿಯಲ್ಲಿ, ಚರಿತ್ರೆಯ ನಿಜಸ್ವರೂಪವನ್ನು ದಾರ್ಶನಿಕನ ತೀವ್ರತೆಯಲ್ಲಿ ಕಾಣುವುದು, ಇದರ ಇನ್ನೊಂದು ಮಗ್ಗುಲನ್ನೆ. ಅವನಿಗೆ ಚರಿತ್ರೆಯಲ್ಲಿ ಹೀರೋಗಳು ಹೇಗೆ ತೊಡಗಿಸಿಕೊಳ್ಳುತ್ತಾರೆ ಎಂಬ ಬಗ್ಗೆ ಅಪಾರ ಕುತೂಹಲವಿದ್ದು, ಅದನ್ನೇ ಮತ್ತೆಮತ್ತೆ ಹುಡುಕುತ್ತಾನೆ. ನೆಪೋಲಿಯನ್‌ ಕೂಡಾ ನೆಣಗೊಬ್ಬಿನ ಹಂದಿಯಾಗಿಬಿಡುತ್ತಾನೆ; ತೊಡಗಿಕೊಳ್ಳುವುದಕ್ಕೆ ಅನಿವಾರ್ಯವಾಗಿ ನೆಣಗೊಬ್ಬಿನ ಹಂದಿಯ ಗುಣ ಬರುತ್ತದೆ. ಯುದ್ಧದ ನಡುವೆ, ಇದ್ದಕ್ಕಿದ್ದಂತೆ ದೀರ್ಘವಾಗಿ, ಒಂದು ಬೆಳಗಿನಜಾವದ ವರ್ಣನೆಯನ್ನು ಮಾಡಲು ಟಾಲ್‌ಸ್ಟಾಯ್‌ ಪ್ರಯತ್ನಿಸುತ್ತಾನೆ. ಹೀರೋಗಳಿಗಿಂತ ಭಿನ್ನವಾಗಿ ತೊಡಗುವ ಸಾಧ್ಯತೆಯನ್ನೂ ಟಾಲ್‌ಸ್ಟಾಯ್‌ ಶೋಧಿಸುತ್ತಾನೆ;  ಆದರೆ ,ಅಪೂರ್ಣವಾಗಿ ಶೋಧಿಸುತ್ತಾನೆ. ಅದಕ್ಕೆಂದೇ ಪಶ್ಚಿಮದ ಜತೆಗೆ-ಮುಖ್ಯಧಾರೆಯ ಪಶ್ಚಿಮದ ಜತೆಗೆ – ಉಗ್ರ ಭಿನ್ನಮತೀಯನಾದರೂ ತಾನು ಹುಟ್ಟಿದ ಕುಲದ ಹಂಗನ್ನು ಆತ ತೊರೆಯಲಾರ.

ಹಾಗಾದರೆ, ಟಾಲ್ ಸ್ಟಾಯ್‌ ಯಾವ ಪಶ್ಚಿಮೇತರ ಸ್ಥಿತಿಯನ್ನು ತನ್ನ ಚಾರಿತ್ರಿಕ ದರ್ಶನದಲ್ಲಿ ಕಾಣಬಯಸಿದ? ದಾವ್‌ನಲ್ಲಿ ಇದು ತುಂಬ ಸರಾಗವಾಗಿ ಬಂದು ಅವತರಿಸುತ್ತದೆ.

ಗಂಡಸನ್ನು ತಿಳಿ
ಆದರೆ, ಹೆಣ್ಣಿನಲ್ಲಿ ನೆಲಸು:
ಆಗ ನೀನು ಪೃಥಿವಿಯ ಕಮರಿಯಾಗುತ್ತೀಯ
ಹೀಗೆ ಸ್ವೀಕಾರದ ಕಮರಿ ನೀನು ಆದಾಗ
ದಾವ್ನಿನ್ನ ಬಿಟ್ಟುಕೊಡುವುದಿಲ್ಲ
ನೀನೊಂದು ಮಗುವಿನಂತೆ ಇರುತ್ತೀಯ.

ಪೃಥಿವಿಯ ಕಮರಿಯಾಗಿರುವುದು ಅಥವಾ ಮಗುವಾಗಿರುವುದು ದಾವೋಗೆ ತುಂಬ ಸಹಜವಾದ ಸ್ಥಿತಿ. ಬೇಂದ್ರೆಯವರ ‘ಮೊದಲಗಿತ್ತಿ’ ಅಥವಾ ‘ಚಿಗರಿಗಂಗಳ ಚೆಲುವೆ’ ಕವನಗಳ ದರ್ಶನವೂ ಇದೇ. ಹೀಗೆ ಸ್ವೀಕರಿಸುವ ಸನ್ನದ್ಧ ಸ್ಥಿತಿಯಿಂದಲೇ ಯೋಗದ ದಿವ್ಯಸ್ಥಿತಿ ಪ್ರಾಪ್ತವಾಗುವುದು. ಹ್ಯೆಡೆಗರ್ ಪಶ್ಚಿಮದ ಅಭ್ಯಾಸಗಳಿಂದ ಬಿಡುಗಡೆ ಪಡೆಯಲು ದಾವ್‌ ನೆರವು ಪಡೆದದ್ದೆ ಇಲ್ಲಿ. ಪಶ್ಚಿಮದ ವಿಜ್ಞಾನ ಎಲ್ಲವನ್ನು ಲಿಟರಲ್‌ ಆಗಿ ತೆಗೆದುಕೊಂಡಾಗ, ಮಾನವನ ಬುದ್ಧಿಗೂ ಈ ಗುಣ ಅಂಟಿಕೊಂಡುಬಿಟ್ಟಿತು. ಹೀಗಾಗಿ, ಆತ ಹಾತೊರೆದದ್ದು-ಚಲಿಸದೆ ಚಲಿಸುವುದಕ್ಕಾಗಿ; ಮನೆಯ ಹೊಸ್ತಿಲನ್ನು ದಾಟದೆ ಜಗತ್ತಿನ ವಿದ್ಯಮಾನಗಳನ್ನು ಅರಿಯುವುದಕ್ಕಾಗಿ; ಕಿಟಕಿಯನ್ನು ತೆರೆದು ಇಣುಕದೆ ದೇವಲೋಕದ ದರ್ಶನ ಮಾಡಿಕೊಳ್ಳುವುದಕ್ಕಾಗಿ.

ಹೈಡೆಗರ್ ನ ಚಡಪಡಿಕೆ ಮತ್ತು ಆತ ದಾವ್‌ನಲ್ಲಿ ಕಂಡ ಸ್ವಾತಂತ್ಯ್ರದ ಮೂಲ ನಮಗೆ ಅರ್ಥವಾಗುವುದು ಇಲ್ಲಿಯೇ. ಅಥವಾ ಒಟ್ಟು ಆಧುನಿಕ ಮನಸ್ಸಿನ ಸ್ಥಿತಿಗೂ ಇದು ಅನ್ವಯವಾಗುವಂಥದು. ಆಧುನಿಕ ಜಗತ್ತಿನಲ್ಲಿ ಸದಾ ಅರ್ಥವಾಗದ ಉದ್ವೇಗ; ನಿರಂತರವಾಗಿ ಏನನ್ನೋ ಹಿಡಿಯುವ ಚಪಲ; ಸದಾ ಗಿರ್ರೆ‍ನ್ನುವ ವೇಗ-ಇದೇ ಆಧ್ಯಾತ್ಮಿಕ ಸೆರೆ ಮನೆಯ ಸ್ಥಿತಿ . ಸಂತೆ ಮುಗಿಯುವುದರೊಳಗೆ ಸರಕು ಮಾರಲೇಬೇಕಾದವನ ವೇಗ ಇದು. ‘ಲಘುವಿನ ಬೇರು ಗುರು. ಆ ವೇಗದ್ದು ಸ್ವಾಸ್ಥ್ಯ’- ಎಂದು ಹೇಳುವಾಗ ಆಧುನಿಕರ ಚಡಪಡಿಕೆಯನ್ನು ದಾವ್‌ ಹೇಳುತ್ತದೆ. ‘ವಾಲಾಡುತ್ತಾ ಇದ್ದವನ ಬೇರು ಊರುವುದಿಲ್ಲ’ ಎಂಬ ಒಂದು ರೂಪಕ ಆರ್ಥರ್ ಮಿಲ್ಲರ್ ನ ‘ಡೆತ್‌ ಆಫ್‌ ಎ ಸೇಲ್ಸ್‌ಮನ್‌’ ಬಗೆಗೆ ಮಾಡಿದ ಮಾರ್ಮಿಕ ವಿಮರ್ಶೆಯೂ ಆಗುತ್ತದೆ. ಆದರೆ ಏನನ್ನಾದರೂ ಏಕೆ ಬೆಳೆಯಬೇಕು-ಎಂಬ ನಾಯಕನ ಆಸೆ ಅರ್ಥವಾಗುತ್ತದೆ. ಕಾಲ ಎನ್ನುವುದು ಸೆರೆಮನೆಯಾದಾಗ, ‘ದೇಶ’ವೊಂದು ಸ್ವಾತಂತ್ಯ್ರದ ಸಮೃದ್ಧ ಭೂಮಿ ಎಂಬಂತೆ ಕಾಣುತ್ತದೆ. ಕಾಲ-ದೇಶಗಳ ವೈರುಧ್ಯದಲ್ಲಿಯೇ ಸೃಜನಶೀಲತೆ ಇದೆ ಎಂದು ಆಧುನಿಕರ ಮನಸ್ಸು ಭಾವಿಸುತ್ತದೆ. ಕಾಲದಾಚೆಗೆ ಇರುವ ದೇಶ ಯುಟೋಪಿಯ. ದಾವ್‌ನ ಪರಿಕಲ್ಪನೆಯಲ್ಲಿ ಇವೆಲ್ಲ ಪಲ್ಲಟವಾಗುತ್ತವೆ. ಹೀಗಾಗಿ, ಇಲ್ಲಿ ಕಾಣುವ ನಿರಾಳತೆಗೆ ದೊಡ್ಡ ಆಧ್ಯಾತ್ಮಿಕ ಶಕ್ತಿ ಇದೆ. ಆದರೆ, ಅದು ಲೋಕಾತೀತವಾದ ಮುಗ್ಧತೆ ಅಲ್ಲ; ಲೋಕದ ವ್ಯವಹಾರಗಳ ಹಂಗಿರದ ಮುಗ್ಧತೆಯೂ ಅಲ್ಲ. ವ್ಯಾವಹಾರಿಕ ಸತ್ಯಗಳೆಲ್ಲವೂ ಅರ್ಥವಾಗುತ್ತದೆ ದಾವಿಗನಿಗೆ. ಆಗರೆ, ವ್ಯಾವಹಾರಿಕ ಸತ್ಯವು ಇವನನ್ನು ಭಂಗಿಸಲಾಗುವುದಿಲ್ಲ ಎನ್ನುವುದೂ ಸತ್ಯ. ಈತ ಅಧಿಕಾರದ ವಿರಾಟ್‌ ಸ್ವರೂಪವನ್ನು ಕಂಡು ಬೆಚ್ಚಿಬೀಳುವುದಿಲ್ಲ. ಅವನ ಪ್ರಕಾರ ಅದು ವಿರಾಟ್‌ ಅಲ್ಲವೇ ಅಲ್ಲ. ದಾವ್‌ನ ಭೂಮದ ಕಲ್ಪನೆಯೇ ಬೇರೆ.

‘ಒಂದು ದೊಡ್ಡ ರಾಜ್ಯವನ್ನಾಳುವುದು ಒಂದು ಸಣ್ಣ ಮೀನನ್ನು ಹುರಿದಂತೆ’ – ಈ ಉಪಮೆಯಲ್ಲಿ ಎಲ್ಲ ಅಧಿಕಾರಕೇಂದ್ರಿತ ಚಿಂತನಾಕ್ರಮಗಳನ್ನು ಒಮ್ಮೆಗೇ ದಾಟುವ ನಿರಾಳತೆ ಇದೆ. ಕ್ರಾಂತಿಕಾರಿಗಳಲು ಈ ರೀತಿಯ ಉಪಮೆಯನ್ನು ಸೃಷ್ಟಿಸಲಾರರು. ದೊಡ್ಡ ರಾಜ್ಯ ಮತ್ತು ಸಣ್ಣಮೀನುಗಳ ನಡುವೆ ಒಂದು ಅಪರಿಹಾರ್ಯವಾದ ವೈರುಧ್ಯವಿದೆ ಎಂಬ ನಂಬಿಕೆಯೇ ಆಧುನಿಕ ಜಗತ್ತಿನ ಧರ್ಮಸೂತ್ರ. ಈ ರೀತಿಯ ‘ಬೈನರಿ ಆಪೋಸಿಷನ್‌’ಗಳನ್ನು ದಾಟುವುದೇ ಆ ಇಡೀ ದಾವ್‌ ಸಾಹಿತ್ಯದ ವೈಶಿಷ್ಟ್ಯ. ಆಧುನಿಕ ಮನಸ್ಸು ಯಾವ್ಯಾವುದನ್ನು ಅತ್ಯಂತಿಕ ವೈರುಧ್ಯವೆಂದು ಭಾವಿಸುತ್ತದೋ ಅವೆಲ್ಲ ಇಲ್ಲಿ ಮುರಿದು ಬೀಳುತ್ತವೆ. ಸೌಂದರ್ಯ-ಕುರೂಪ, ಬಲ-ದುರ್ಬಲ, ಒಳಿತು-ಕೆಡುಕು, ಅಧಿಕಾರ-ಶರಣಾಗತಿ, ಸತ್ಯ-ಅಸತ್ಯ -ಹೀಗೆ ಎಲ್ಲವೂ ಮುರಿದುಬೀಳುತ್ತವೆ.

ಈ ಘಟ್ಟದಲ್ಲಿ ದಾವ್‌ ಮತ್ತು ಉಳಿದ ಪೌರ್ವತ್ವ ಧಾರ್ಮಿಕ ನಿಲುವುಗಳ ಬಗೆಗಿನ ವ್ಯತ್ಯಾಸವನ್ನೂ ಕಾಣಿಸಬೇಕಾದ ಅಗತ್ಯವಿದೆ. ಆಧುನಿಕರ ಉದಾಹರಣೆಗಳನ್ನು ಬಳಸಿ ಹೇಳುವುದಾದರೆ, ರಮಣರಿಗೂ, ದಾವ್‌ ದರ್ಶನಕ್ಕೂ ಬಹಳ ವ್ಯತ್ಯಾಸಗಳಿವೆ. ವ್ಯಾವಹಾರಿಕ ಸತ್ಯ ಮತ್ತು ಪಾರಮಾರ್ಥಿಕ ಸತ್ಯ – ಇವು ಬೇರೆಬೇರೆ ಎಂಬ ನಿಶ್ಚಲ ವರ್ಗೀಕರಣದಲ್ಲೇ ರಮಣರ ದರ್ಶನ ಬೆಳೆಯುತ್ತದೆ. ಅದಕ್ಕೆಯೇ ರಮಣರ ಅಥವಾ ಆ ರೀತಿಯ ಅನುಭಾವಿಗಳ ಜಗತ್ತಿನಲ್ಲಿ ವ್ಯಾವಹಾರಿಕ ಸತ್ಯಕ್ಕೆ ಸ್ಥಳವಿಲ್ಲ. ಈ ಮಾತು ಪುರಂದರ-ಕನಕರ ಮಟ್ಟಿಗೂ ನಿಜ. ಅವರು ಇಲ್ಲಿರುವುದು ಸುಮ್ಮನೆ, ಅಲ್ಲಿರುವುದು ಅವರ ಮನೆ . ವ್ಯಾವಹಾರಿಕ ಸತ್ಯದ ವಿವರಗಳು ಅಲ್ಲಿ ಹೆಚ್ಚೆಂದರೆ ಬರೀ ಉಪಮೆಗಾಗಿ ಬಳಕೆಯಾಗುತ್ತವೆ.  ಆದರೆ, ದಾವ್‌ ದರ್ಶನದ ಮುಖ್ಯ ಲಕ್ಷಣ ಎಂದರೆ , ಇಲ್ಲಿ ವ್ಯಾವಹಾರಿಕ ಸತ್ಯ ಮತ್ತು ಪಾರಮಾರ್ಥಿಕ ಸತ್ಯಗಳು ಅಖಂಡವಾಗಿ ಬೆರೆತುಹೋಗಿವೆ. ಈ ದೃಷ್ಟಿಯಿಂದ ಪಥಧರ್ಮಸೂತ್ರದಲ್ಲಿ ಬರುವ ರಾಜರ್ಷಿಯ ಕಲ್ಪನೆಗೆ ವಿಶಿಷ್ಟವಾದ ಒಳಮುಖಗಳಿವೆ. ಆತ ರಾಜನೂ ಹೌದು, ಋಷಿಯೂ ಹೌದು. ಲೌಕಿಕದ ಬದುಕಿನಲ್ಲಿ ಮುಇಳುಗಿರುವ ಯಾವ ಸಾಮಾನ್ಯನಾದರೂ ರಾಜರ್ಷಿಯಾಗಬಹುದು. ಹೀಗಾಗಿ, ರಮಣರಲ್ಲಿ ಕಾಣದ ಅಭಿವ್ಯಕ್ತಿಸಾಂದ್ರತೆ, ದಾವ್‌ ದರ್ಶನದಲ್ಲಿ ಇದೆ. ಮಾಧ್ಯಮಿಕರ ಪರಿಭಾಷೆಯಲ್ಲಿ ಹೇಳುವುದಾದರೆ, ಸಂಸಾರ-ನಿರ್ವಾಣಗಳ ನಡುವೆ ಇಲ್ಲಿ ಅಂತರವಿಲ್ಲ. ಈ ರೀತಿಯ ದೃಷ್ಟಿಕೋನದಿಂದಾಗಿ ದಾವ್‌ ದರ್ಶನ ಅಧಿಕಾರಕ್ಕೆ ಯಾವ ಕ್ಷಣದಲ್ಲಾದರೂ ಕಂಟಕವಾಗಿಬಿಡಬಲ್ಲದು. ರಮಣ, ರಾಮಕೃಷ್ಣ ಪರಮಹಂಸರನ್ನು ಬೆದರಿಕೆಯಾಗಿ ಕಾಣದ ಅಧಿಕಾರವು ದಾವ್‌ನ್ನು ಹಿಡಿತದಲ್ಲಿಡಲಾಗದ ವಿದ್ರೋಹವೆಂಬಂತೆ ಕಾಣಬಹದು.

ಆಧುನಿಕ ಕ್ರಾಂತಿಕಾರಿಗಳಿಗೆ, ಅಥವಾ ಆಧುನಿಕ ಜಗತ್ತಿನ ಜೀವನ ಕ್ರಮಗಳಲನ್ನು ವಿರೋಧಿಸುವ ಮಂದಿಗೆ, ಈ ರೀತಿಯ ಸಂಶ್ಲೇಷಣೆ ತಕ್ಷಣದ ಒಂದು ಮಾನಸಿಕ ಅಗತ್ಯ ಎನ್ನುವುದನ್ನು ವಿವರವಾಗಿ ಹೇಳಬೇಕಿಲ್ಲ. ಅಧಿಕಾರವು ವಿರಾಟ್‌ ಆಗಿ ಬೆಳೆದಷ್ಟು ವಿದ್ರೋಹಕ್ಕೆ ಭೀತಿ-ಆತಂಕಗಳು ಹೆಚ್ಚಾಗುತ್ತ ಹೋಗುತ್ತವೆ. ಅದಕ್ಕೇ ಕ್ರಾಂತಿಕಾರಕ ಸ್ಥಿತಿಯು ಅಪಾರ ಗೊಂದಲ ಮತ್ತು ಅಧೀರತೆಗಳ ಸ್ಥಿತಿಯೂ ಆಗುತ್ತದೆ. ೧೯-೨೦ನೆ ಶತಮಾನದ ಪಾಶ್ಚಾತ್ಯ ಸಾಹಿತ್ಯಗಳಲ್ಲಿ, ಕ್ರಾಂತಿಕಾರೀ ಸನ್ನಿವೇಶಗಳ ಚಿತ್ರಣವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ  ಈ ಅಧೀರತೆಯ ಸ್ವರೂಪ ಅರ್ಥವಾಗುತ್ತದೆ. ತನ್ನ ಚಿಕ್ಕ ವ್ಯಕ್ತಿತ್ವದ ಉದ್ದೀಪನ ಸ್ಥಿತಿಯಾಗಿಯೇ ಅಲ್ಲಿ, ಕ್ರಾಂತಿಕಾರಕ ಸ್ಥಿತಿ ಕಾಣುತ್ತದೆ. ಅಧಿಕಾರ ಎನ್ನುವುದು ಭವ್ಯಬಂಗಲೆಯಾದರೆ, ವಿದ್ರೋಹ ಎನ್ನುವುದು ಅದರ ತಳಾದಿಗೆ ಇಟ್ಟ ಬಾಂಬಾಗಿ ಕಾಣುತ್ತದೆ. ಆದರೆ, ದಾವ್‌ನಲ್ಲಿ ಕಾಣಸಿಗುವ ಆಧ್ಯಾತ್ಮಿಕ ಮನಃಶ್ಯಾಸ್ತ್ರದ ದೃಷ್ಟಿಯೊಲ್ಲಿ, ರಾಜರ್ಷಿಯು ನಿಸ್ಸಂದೇಹವಾಗಿ ರಾಜನಿಗೆ ಸಮಾನ; ಅಥವಾ ರಾಜನೇ ಒಂದು ಮಟ್ಟದಲ್ಲಿ ಕೀಳು ಎಂದರೂ ನಡೆದೀತು. ಸಾಮ್ರಾಜ್ಯವನ್ನೇ ಗಳಿಸಲು ಬೇಕಾದ ಅನಾಸಕ್ತಿ ಆ ರಾಜರ್ಷಿಗಿದೆ ಎಂದೇ ಆತ ಆತ್ಮವಿನಾಶಕಾರೀ ಆತಂಕ ಮತ್ತು ಉದ್ವೇಗಗಳಿಂದ ಹೊರಗಿರಬಲ್ಲ. ಅದಕ್ಕಾಗಿಯೇ ಅಧಿಕಾರಕ್ಕೆ ರಾಜರ್ಷಿಗಳನ್ನು ಕಂಡರೆ ಪರಿಹರಿಸಲಾಗದಷ್ಟು ಭಯ; ರಾಜರನ್ನು ಕಂಡರೆ ಅಷ್ಟಿಲ್ಲ; ಋಷಿಗಳನ್ನು ಕಂಡರಂತೂ ಇಲ್ಲವೇ ಇಲ್ಲ. ರಾಜರಿಗೆ ಭೂಮಿ-ಕಾಸು-ಕಾಣಿ ಹಂಚಬಹುದು; ಋಷಿಗಳಿಗೆ ಆಶ್ರಮ ಕಟ್ಟಬಹುದು. ಆದರೆ, ರಾಜರ್ಷಿಗೆ ಇರುವ ನಿರಾತಂಕ ಸ್ಥಿತಿಯೇ ರಾಜನ ಅಡಿಪಾಯವನ್ನು ನಾಶಮಾಡುತ್ತದೆ. ಅಂದರೆ, ಇಲ್ಲಿ ಸಮಸ್ಯೆ ಎಂದರೆ, ಆಧುನಿಕ ಕ್ರಾಂತಿಕಾರೀ ಸಿದ್ಧಾಂತಗಳು ರಾಜಕೀಯ-ಚಾರಿತ್ರಿಕ ವಿಶ್ಲೇಷಣೇ ಮತ್ತು ಪರಿಕಲ್ಪನೆಗಳನ್ನು ನೀಡಿದವೇ ಹೊರತು ಕ್ರಾಂತಿಕಾರಿಗೆ ಬೇಕಾದ ಮನಃಶಾಸ್ತ್ರೀಯ ಪರಿಕಲ್ಪನೆಗಳನ್ನು ಶೋಧಿಸಲಿಲ್ಲ. ಇಲ್ಲಿ ನಿಜವಾಗಿ ಬೇಕಾದದ್ದು ಅಧಿಕಾರದ ಅಟ್ಟಹಾಸದಿಂದ ಬೆದರೆದ ಇರುವ, ಚೀರದೆ ಇರುವ ಮನಃಶಾಸ್ತ್ರ. ಪ್ರತಿರೋಧಕ್ಕೆ ಅಗತ್ಯವಾಗಿ ಬೇಕಾದ ತಾಳಿಕೊಳ್ಳುವ ಗುಣ. ಈ ಸಮಸ್ಯೆಯು ಜಗತ್ತಿನ ರಾಜಕೀಯ ಸಾಹಿತ್ಯದಲ್ಲಿ,  ಮುಖ್ಯವಾಗಿ ಆತ್ಮಕಥನಗಳಲ್ಲಿ ಮತ್ತೆ ಮತ್ತೆ ಆಶಯವಾಗಿ ಪುನರಾವರ್ತನೆಯಾಗುತ್ತದೆ. ರಾಮ ಮನೋಹರ ಲೋಹಿಯಾರ’ ಯೋಗದಲ್ಲಿ ಒಂದು ಅಧ್ಯಾಯ’-ಈ ಅನುಭವಕ್ಕೆ ಅತ್ಯಂತ ಉಜ್ವಲ ಉದಾಹರಣೆ. ಲೋಹಿಯಾ ಅಲ್ಲಿ ದಾವ್‌ನ ದಾರ್ಶನಿಕ ಸ್ಥಿತಿಗೆ ತಲುಪಿದರೆಂದೇ ಮತ್ತೆ ರಾಜಕಾರಣದಲ್ಲಿ ಸಕ್ರಿಯವಾಗಿ ಉಳಿದರು. ಅರವಿಂದರ ಹಾಗೆ ಅವರು ವ್ಯಾವಹಾರಿಕಸತ್ಯಕ್ಕೆ ವಿದಾಯ ಹೇಳಲಿಲ್ಲ. ಅರವಿಂದರಲ್ಲಿ ದಿವ್ಯಜ್ಞಾನ ಸ್ಫೋಟಿಸಿದ್ದು, ವ್ಯಾವಹಾರಿಕ ಸತ್ಯ ಹಾಗೂ ಪಾರಮಾರ್ಥಿಕ ಸತ್ಯಗಳು ಜಗ್ಗೆಂದು ಬೇರ್ಪಟ್ಟು. ಆದರೆ, ಲೋಹಿಯರ ಯೋಗದಲ್ಲಿ ಅವೆರಡೂ ಅಖಂಡವಾಗಿ ಮತ್ತೆಂದೂ ಬೇರೆಯಾಗದ ಹಾಗೆ ಬೆರೆಯುತ್ತವೆ. ಅಧಿಕಾರದ ಹಿಂಸೆಯಿಂದ ವ್ಯಕ್ತಿತ್ವ ಛಿದ್ರವಾಗದೆ ಉಳಿಯುತ್ತದೆ.

ಆಧುನಿಕ ರಾಜಕೀಯ ವ್ಯಕ್ತಿತ್ವಕ್ಕೂ ಅಗತ್ಯವಾಗಿ ಬೇಕಾದ ದರ್ಶನ ಮತ್ತು ಭಾವ ಸಮೂಹ – ದಾವ್‌.
– ಡಿ.ಆರ್. ನಾಗರಾಜ್‌