ದಾವ್‌ತಿಳಿಯಲು ಇನ್ನೊಂದು ಅಗತ್ಯವಾದ ಶಬ್ದ -ದ. ದಾವ್‌ಎಂದರೆ ‘ಪತ’ (ನನ್ನ ೮೧ ಅಧ್ಯಾಯಗಳಲ್ಲೂ ಎಲ್ಲೆಲ್ಲಿ ನಾನು ‘ದಾವ್‌’ ಎಂದಿದ್ದೇನೊ ಅಲ್ಲೆಲ್ಲಾ ‘ಪಥ’ ಎಂದು ಓದಿಕೊಳ್ಳಬಹುದು). ‘ದ’ ಎಂದರೆ ಧರ್ಮ. ಎಲ್ಲವುದಕ್ಕೂ ಅದರದರ ಧರ್ಮ ಇದೆ – ಅದೇ ‘ದ’. ದಾವ್‌ವ್ಯಕ್ತಗೊಳ್ಳುವುದು ಈ ಪ್ರಪಂಚದಲ್ಲಿ ‘ದ’ ಆಗಿ. ನನ್ನ ಭಾಷಾಂತರದಲ್ಲಿ ನನಗೆ ತುಂಬ ತೊಡಕನ್ನು ಉಂಟುಮಾಡಿದ ಶಬ್ದವೆಂದರೆ ‘ದ’. (ರೋಮನ್‌ಲಿಪಿಯಲ್ಲಿ ‘Te’ ಎಂದು ಈ ಚೀನೀ ಶಬ್ದವನ್ನು ಬರೆಯುತ್ತಾರೆ. ನಮ್ಮ ಭಾಷೆಗಳಲ್ಲಿ Tao-Te-Ching ಅನ್ನು ದಾವ್‌-ದ-ಜಿಂಗ್‌ಎಂದು ಉಚ್ಚರಿಸಿದರೆ ಚೀನೀ ಉಚ್ಚಾರಣೆಗೆ ಸ್ವಲ್ಪ ಹತ್ತಿರವಾದಂತೆ ಎಂದು ನನಗೆ ಸೂಚಿಸಿದವರು ಮತ್ತು ಈ ಶಬ್ದಗಳಿಗೆ ‘ಪಥ ಧರ್ಮ ಸೂತ್ರ’ ಎನ್ನುವ ಅನುವಾದವನ್ನೂ ಸೂಚಿಸಿದವರು ಪ್ರಸಿದ್ಧ ಚೀನೀ ವಿದ್ವಾಂಸ ‌ಪ್ರೊಫೆಸರ್ ಗಿರಿ ದೇಶಿಂಕರ್ ಅವರು.)

ಮುವತ್ತೆಂಟನೆಯ ಅಧ್ಯಾಯದಿಂದ ಪ್ರಾರಂಭವಾಗುವ ಎರಡನೆಯ ಭಾಗ ಈ ‘ದ’ ಕುರಿತದ್ದು. ಈ Te ಶಬ್ದವನ್ನು ಹಲವು ಇಂಗ್ಲಿಷ್‌ಅನುವಾದಕರು virtue ಎಂಬರ್ಥದಲ್ಲಿ ಭಾವಿಸುತ್ತಾರೆ. ಮಿಚೆಲ್‌ಈ ಶಬ್ದದ ಗೊಡವೆಗೇ ಹೋಗದೆ ಇಡೀ ಅಧ್ಯಾಯಗಳನ್ನು ಅನುವಾದ ಮಾಡಿಕೊಳ್ಳುತ್ತಾನೆ. ನನ್ನ ಲಮೊದಲ ಅನುವಾದದಲ್ಲಿ ಮಿಚೆಲ್‌ನನ್ನು ಅನುಸರಿಸಿ ನಾನು ಕೂಡ ಈ ಶಬ್ದದ ಗೊಡವೆಗೇ ಹೋಗಲಿಲ್ಲ. ಅನಂತರ ‘ದ’ವನ್ನು ನಾನು ‘ಶೀಲ’ ಎಂದು ತಿಳಿದು ಅನುವಾದಿಸಿದೆ. ಆದರೆ ‘ಶೀಲ’ ನಾವು ಕಲಿತು ಮೈಗೂಡಿಸಿಕೊಂಡದ್ದು-ಅದು, ಒಂದು ಸಂಸ್ಕೃತಿಗೂ ನೀತಿಸಂಹಿತೆಗೂ ಸಂಬಂಧಿಸಿದ್ದು. ಆದರೆ ಲಾವ್‌-ತ್ಸೆಯಲ್ಲಿ ಈ ‘ದ’ ಎಂಬುದು -ದಾವ್‌ಪ್ರಕಟಗೊಳ್ಳುವ ರೂಪ; ಎಲ್ಲ ವಸ್ತುಗಳಲ್ಲೂ ಅದರದರ ಧರ್ಮವಾಗಿ ವ್ಯಕ್ತವಾಗುವ, ಮತ್ತು ಹೊರಹೊಮ್ಮುವಾಗಿನ ದಾವ್‌ಸ್ವರೂಪ.

‘ದ’ವನ್ನು ಧರ್ಮ ಎಂದು ಅನುವಾದಿಸುತ್ತ ಹೋದರೆ ಲಾವ್‌-ತ್ಸೆಯ ಸೂತ್ರಗಳ ಚೀನೀ ಭಾಷಾ ವಿಶಿಷ್ಟತೆಯನ್ನೂ ಕಡೆಗಾಣಿಸಿ ಲಾವ್‌-ತ್ಸೆಯನ್ನು ಇನ್ನೊಬ್ಬ ಭಾರತೀಯ ಋಷಿಯಂತೆಯೇ ಕಾಣುವಂತೆ ಮಾಡಿದಂತಾಗುತ್ತದೆ ಎಂದು ನನಗನ್ನಿಸಿತು. ಲಾವ್‌-ತ್ಸೆಯ ಸೂತ್ರಗಳು ಐರೋಪ್ಯ ಸಂಸ್ಕೃತಿಗೂ ಭಾಷೆಗಳಿಗೂ ಅನ್ಯವಾದವು. ಈ ಅನ್ಯವನ್ನು ಎದುರಿಸುವಾಗಿನ ಕಷ್ಟ ಹಾಗೂ ಅದನ್ನು ತಮ್ಮ ಭಾಷೆಯಲ್ಲಿ ಒಳಗೊಳ್ಳುವಾಗಿನ ಬಿಕ್ಕಟ್ಟು-ಇದರಲ್ಲೇ ಐರೋಪ್ಯ ಬರಹಗಾರರು ತಮಗೆ ಹೊರತಾದ್ದನ್ನು ಕಲಿಯಬಲ್ಲವರಾಗಿದ್ದಾರೆ. ಇದರಿಮದ ಅವರಿಗೆ ಇನ್ನೊಂದು ಮಗ್ಗುಲಿಗೆ ಹೊರಳಿ ನೋಡುವ, ಕಾಣದ್ದನ್ನು ಕಾಣುವ ಸವಾಲಿದೆ. ಆದರೆ ಬೌದ್ಧ ಧರ್ಮವೂ, ಉಪನಿಷತ್‌ಪರಂಪರೆಯ ಭಾರತವೂ ಹಾಗೂ ಪ್ರಾಚೀನ ಚೀನವೂ ಒಂದೇ ಮನಸ್ಸಿನ ಸಾಂಸ್ಕೃತಿಕ ವಲಯಗಳು ಎಂದು ಅನ್ನಿಸಿದಾಗ ಚೀನೀ ವಿಶಿಷ್ಟತೆಯನ್ನು ಕಾಯುವುದು ಅತ್ಯಂತ ಎಚ್ಚರದ ಅಗತ್ಯವಾಗುತ್ತದೆ. ಅನುಭವದ ವಿಶಿಷ್ಟತೆಯನ್ನು ಕಾಯುವ ವ್ರತಶೀಲತೆ ಭಾಷಾಂತರಕಾರನಿಗೆ ಇಲ್ಲವಾದರೆ, ಅವನು ಪರ ಸಂಸ್ಕೃತಿಯನ್ನು ದೋಚುವ ಆಸೆಬುರುಕನಾಗಿ ಬಿಡುತ್ತಾನೆ. ಸಂಸ್ಕೃತದ ಕೆಲವು ಶಬ್ದಗಳಲ್ಲಿ ನಾವು ಒಡನಾಡತೊಡಗಿದಾಗ ನಮಗೆ ಅನ್ನಿಸದೇ ಹೋದದ್ದನ್ನೂ ನಾವು ಸುಸೂತ್ರವಾಗಿ ಹೇಳಿಬಿಡುತ್ತೇವೆ. ಭಾಷೆ ಸಲೀಸಾದಾಗ ನಾವು ಆ ಮೂಲಕ ಭಾವಿಸುವುದನ್ನೂ, ಸತ್ಯಕ್ಕೆ ಎದುರಾಗುವುದನ್ನೂ ನಿಲ್ಲಿಸಿಬಿಟ್ಟಿರುತ್ತೇವೆ. ವಚನಕಾರರು ‘ಬಯಲು’ ಎನ್ನುವ ಶಬ್ದಕ್ಕೆ ಅವರ ಆಳದ ಕಾಣ್ಕೆಯನ್ನು ಕೊಡಲಾಗದೇಹೋಗಿದ್ದಲ್ಲಿ , ಆಗ, ಭಾರತೀಯ ಸಂಸ್ಕೃತಿಗೆ ಒಳಗಿನವರಾಗಿದ್ದೂ ಅನನ್ಯವೆನ್ನಿಸುವಂತೆ ಹೇಳಬೇಕಾದ್ದನ್ನು ಹೇಳಲು ಅವರಿಗಾಗುತ್ತಿರಲಿಲ್ಲ. ‘ಬಯಲು’ ನೈಸರ್ಗಿಕವಾದ ಬಯಲೂ ಹೌದು; ದಿವ್ಯಾರ್ಥದ ಬಯಲೂ ಹೌದು. ವೇದದಲ್ಲಿ ಅಗ್ನಿಯು ಬೆಂಕಿಯೂ ಹೌದು; ಅಗ್ನಿಯೂ ಹೌದು. ಹೀಗೆಯೇ ವಾಯು, ಅನ್ನ, ಸೋಮ-ಇತ್ಯಾದಿಗಳು ‘ದಾವ್‌’ ಎಂಬುದು ಲಾವ್‌-ತ್ಸೆಗೆ ಹೆಸರಾಗಿ ಪ್ರಕಟವಾದ್ದೂ ಹೌದು; ಪ್ರಕಟವಾಗದೆ ಹೆಸರಿಲ್ಲದೆ ಇರುವಂಥದೂ ಹೌದು.

ದಾವ್‌ನನ್ನು ಧ್ಯಾನಿಸುವಾಗ ಕೂಡ ನಮ್ಮ ಮನಸ್ಸು ತನ್ನ ವ್ಯಾಪಾರದಲ್ಲಿ ಅರಿತದ್ದನ್ನೂ, ಅರಿಯದಂತೆ ನಮ್ಮೊಳಗೆ ಸಹಜವಾಗಿ ಸುಮ್ಮನೆ ಇರುವುದನ್ನೂ ಒಂದನ್ನೊಂದು ನಿಷೇಧಿಸದಂತೆ ಹಿಡಿದಿಡುವ ಸೂಚನೆ ಎಲ್ಲ ಸೂತ್ರಗಳಲ್ಲೂ ಇದೆ. ಮಾತು ಹಿಂದೆಗೆಯುತ್ತಲೇ ಮುಂದಾಗುವ, ಅರ್ಥವಾಗುತ್ತಲೇ ಅರ್ಥವನ್ನು ಮೀರುವ ಈ ಸೋಜಿಗದ ಕುಶಲತೆ ಕಾವ್ಯದ್ದು:

ಕವಿಮನದ ಬ್ಯಾಸರಾ ಹರಿಸಾಕ
ಹಾಡನುಡಿಸಾಕ
ಹೆಚ್ಚಿಗೇನು ಬೇಕ?
ಒಂದು ಹೂತ ಹುಣಸಿ ಮರ ಸಾಖ   –ಬೇಂದ್ರೆ

ಯಾಕೆಂದರೆ ಅದು ಸಾಮಾನ್ಯ ಹುಣಸೆಮರವಾಗಿದ್ದೇ ದಿವ್ಯವಾದ್ದೂ ಕೂಡ.

ತಾನು ಇರುವಲ್ಲಿ, ಇರುವ ಪ್ರಪಂಚದಲ್ಲಿ,  ಈ ಪ್ರಪಂಚ ಜೀವಗೊಳ್ಳುತ್ತಿರುವ ಶಾಶ್ವತವಾದ ಕ್ಷಣಿಕತೆಯಲ್ಲಿ-ಅಂದರೆ ಬಿಟ್ಟು ಹಿಡಿಯುತ್ತಿರುವ, ಹಿಡಿದು ಬಿಡುತ್ತಿರುವ ಕ್ಷಣಿಕತೆಯಲ್ಲಿ – ಸದಾ ಜರೂರಾಗಿ ಹಾಜರಿರುವ ಪ್ರಜ್ಞೆಗೆ ವ್ಯಾವಹಾರಿಕವಾದ ಆಸಕ್ತಿಗಳೂ ಇರುತ್ತವೆ; ಮತ್ತು ಇಹ ಮತ್ತು ಪರ ಬೇರೆಯಾಗದಂತೆ ಅನ್ಯೋನ್ಯವಾಗಿಯೂ ಇರುತ್ತವೆ. ಆದ್ದರಿಂದ ‘ದ’ ಕುರಿತ ಎರಡನೇ ಭಾಗದ ಸೂತ್ರಗಳಲ್ಲಿ (ಹೀಗೆ ಸೂತ್ರಗಳನ್ನು ಭಾಗಮಾಡುವುದೂ, ಯಾವ ಸೂತ್ರದ ನಂತರ ಯಾವ ಸೂತ್ರವೆಂಬುದೂ ಲಿಪಿಕಾರರ ಪರಂಪರೆಯಿಂದ ಬಂದದ್ದು) ಗಾಢವಾದ ವ್ಯಾವಹಾರಿಕ ವಿವೇಕವಿದೆ. ದೇಶವನ್ನು ಆಳುವುದು ಹೇಗೆ ಎಂಬ ಬಗ್ಗೆ, ಯುದ್ಧ ಅನಿವಾರ್ಯವಾದಾಗ ಹೇಗೆ ವರ್ತಿಸಬೇಕು ಎಂಬ ಬಗ್ಗೆ, ಲಾವ್‌-ತ್ಸೆಯ ವಿಚಾರಗಳು ನಮ್ಮ ಕೌಟಿಲ್ಯ, ನಮ್ಮ ಮನು, ಚೀನೀಯರ ಕನ್‌ಪ್ಯೂಶಿಯಸ್‌ರ ಕಟ್ಟುಕಟ್ಟಳೆಗಿಂತ ಹೆಚ್ಚು ವಿವೇಕಯುತವಾಗಿವೆ ಎಂಬುದನ್ನು ಗಮನಿಸಬೇಕು.ವ್ಯಾವಹಾರಿಕ ಪ್ರಪಂಚದಲ್ಲಿ ಚೆನ್ನಾಗಿ ಬದುಕುವುದು ಹೇಗೆಂಬುದನ್ನು ಕೂಡ ಕಲಿಸುವ ಗುರು ಅವನು. ನಮ್ಮ ಗಾಂಧೀಜಿಯೂ ಪರಕ್ಕೆ ಸಲ್ಲುವುದನ್ನು ಮಾತ್ರ ಹುಡುಕಿದವರಲ್ಲ; ಇಹದಲ್ಲಿ ಸುಖಿಯಾಗಿರುವುದು ಹೇಗೆಂಬುದನ್ನೂ ಹುಡುಕಿದವರು. ರಾಮಕೃಷ್ಣ ಪರಮಹಂಸರು ಕೂಡ-ಅವರ ಭಾಷೆಯಲ್ಲಿ ವ್ಯಕ್ತವಾಗುವಂತೆ-ಬಲು ಜಾಣರಾದ ಪ್ರಾಪಂಚಿಕರು. ಆದ್ದರಿಂದ ಇವರೆಲ್ಲರೂ ನಗಬಲ್ಲವರು; ತುಂಟರಾಗಿ ಮಾತಾಡಬಲ್ಲವರು; ಕಣ್ಣು ಮಿಟುಕಿ ಗೇಲಿ ಮಾಡಬಲ್ಲವರು.

‘ದ’ವನ್ನು ಅದರ ಪರಿಚಿತ ಅರ್ಥದಲ್ಲೇ ಸುಲಭವಾಗಿ ವ್ಯಂಜಿಸಿ ಬಿಡಬಹುದೆಂಬ ಅನುಮಾನವನ್ನಿಟ್ಟುಕೊಂಡು ನನ್ನ ಅನುವಾದದಲ್ಲಿ ಅದನ್ನು ಧರ್ಮ ಎನ್ನಲಾರದೆ ‘ಗುಣ’ ಎಂದು ಭಾವಿಸಿಕೊಂಡು ಪ್ರಯೋಗಿಸಿದ್ದೇನೆ. ಯಾಕೆಂದರೆಲ, ಗುಣವು ನೀತಿಯಲ್ಲ; ಹೊರಗಿನಿಂದ ಆರೋಪಿತವಾದದ್ದಲ್ಲ; ಅಥವಾ ವಿಧಿಸಲ್ಪಟ್ಟದ್ದೂ ಅಲ್ಲ. ನೀತಿ ಹೇಳುವುದು: ನ ಪ್ರಮದಿತವ್ಯಂ- ದಾಟತಕ್ಕದ್ದಲ್ಲ; ಅದು ಹಿರಿಯರ ಅಪ್ಪಣೆ. ಈ ಅಪ್ಪಣೆಯಲ್ಲೂ ಆಳದ ಗ್ರಹಿಕೆಯಿರಲು ಸಾಧ್ಯ; ಅದರದರ ಅಂತರ್ಗತ ಗುಣ ಯಾವುದೋ ಅದನ್ನು ದಾಟತಕ್ಕದ್ದಲ್ಲ, ಎಂದು. ದಾವ್‌ನಲ್ಲಿ ಪ್ರಕಟವಾದದ್ದು ಮತ್ತು ಪ್ರಕಟವಾಗದ್ದು ಹೇಗೆ ಅಭಿನ್ನವಾಗಿ ಇವೆಯೋ, ಹಾಗೇ ಗುಣವೂ ವ್ಯಕ್ತವಾದ್ದರಲ್ಲಿ ಸಹಜವಾಗಿ ಇರುವ ಅಂಶ ಎನ್ನುವುದರ ಜೊತೆಗೇ, ಆ ಕಾರಣವಾಗಿಯೇ ಇರಬೇಕಾದ್ದು ಎಂದು ಹೇಳಬಹುದಾದ್ದು ಕೂಡ. ಎಂದೇ ‘ಗುಣವಂತ’ ಎನ್ನುವ ಪದಪ್ರಯೋಗ ಸಾಧ್ಯವಾದದ್ದು. ಚೀನೀ ಚಿತ್ರಭಾವಲಿಪಿಯು ಹರಿಯುವ ಮನಸ್ಸಿಗೆ ಹೊಳೆಯಿಸುವ ಇಬ್ಬಗೆಗಳನ್ನು ನಮ್ಮ ಭಾಷಾಪ್ರಯೋಗವು ಘನೀಕರಿಸಿ ಬಿಡುವುದರಿಂದ, ಅದನ್ನು ದಾಟಲು ನಾವು ನಮ್ಮದೇ ಆದ ಉಪಾಯಗಳನ್ನು ನಮ್ಮ ಭಾಷೆಯಲ್ಲಿ ಸೃಷ್ಟಿಸಿಕೊಳ್ಳಬೇಕಾಗುತ್ತದೆ.

ಘನವಾದ ಗುಣ ಹಾಗೆ ಅಂದುಕೊಳ್ಳುವುದಿಲ್ಲ, ಆದ್ದರಿಂದ ಅದು
ನಿಜವಾದ ಗುಣ;
ಕಳಪೆಯಾದ ಗುಣ ತನ್ನನ್ನ ಮರೆಯುವುದಿಲ್ಲ,
ಆದ್ದರಿಂದ ಅದು ಗೌಣ.(೩೮)

ತನಗೆ ಅಗತ್ಯವಾದಂತೆ ಲಾವ್‌-ತ್ಸೆಯನ್ನು ಒಡಮೂಡಿಸಿಕೊಳ್ಳಲು ಶ್ರಮಿಸುವ ಇಂಗ್ಲಿಷ್‌ಭಾಷೆಯಿಂದ, ನಾನು ಪಡೆದ ಇಂಗಿತಗಳಷ್ಟನ್ನಾದರೂ ಕನ್ನಡದ ಈ ಅನುವಾದದಲ್ಲಿ ಕೊಡುವುದು ಸಾಧ್ಯವಾಗಿದೆಯೊ ಇಲ್ಲವೊ ತಿಳಿಯೆ. ಹಲವು ಅನುವಾದ ಪ್ರಯತ್ನಗಳ ನಂತರ ನಾನು ಕೈಬಿಟ್ಟ ಸ್ಥಿತಿಯಲ್ಲಿ ಮೇಲಿನ ಮಾತುಗಳು ಉಳಿದುಕೊಂಡಿವಗೆ (ಗುಣವೆ? ಶೀಲವೆ? ಗುಣಶೀಲತೆಯೆ? ಗುಣವಂತಿಕೆಯೆ? ಧರ್ಮವೆ?). ಅಲಾನ್‌ವ್ಯಾಟ್ಸ್‌ತನ್ನ Tao, The Water course Way ಪುಸ್ತಕದಲ್ಲಿ Teಯನ್ನು virtue ಎಂದು ಅನುವಾದಿಸದೆ virtuality ಎಂದು ಅನುವಾದಿಸುತ್ತಾನೆ. ಸರ್ ಥಾಮಸ್‌ಬ್ರೌನ್‌ನಿಂದ ಈ ಶಬ್ದವನ್ನು ಪಡೆದು, ಸಮರ್ಥನೆಗಾಗಿ ಬ್ರೌನ್‌ನ ಈ ವಾಕ್ಯವನ್ನು ಉದ್ಧರಿಸುತ್ತಾನೆ.

ಭತ್ತದ ಒಂದು ಕಾಳಿನಲ್ಲಿ ಹಲವು ಕಾಳುಗಳ virtualit (ಗುಣ? ಧರ್ಮ?) ಸುಪ್ತವಾಗಿ ಇರುವುದರಿಂದ ಹಲವು ತೆನೆಗಳು ಅದರಿಂದ ಹುಟ್ಟಿಕೊಳ್ಳುತ್ತವೆ.

ಯಾವುದು ಅದರ ಒಳಗಿನ ಗುಣವೋ; ನಿಷ್ಠಾವಂತಿಕೆಯಿಂದ, ನೀತಿಪರವಾದ ಪ್ರಯತ್ನದಿಂದ ಪಡೆದದ್ದು ಅಲ್ಲವೋ – ಅದು ಸಹಜವಾಗಿ ಇರುವಂಥದು. ನನ್ನ ಪರಿವೆಯ ವ್ಯಸನ ನನಗಿಲ್ಲದಾದಾಗ, ನಾನು ನನ್ನ ಮುಂದಿನ ಈ ಸದ್ಯಕ್ಕೇ ತ್ರಿಕರಣಪೂರ್ವಕವಾಗಿ ಹಾಜರಿರುವಾಗ, ಏಕಾಗ್ರವಾದ ಲಕ್ಷ್ಯಕ್ಕೆ ಕಾಣುವುದು-ಅದದಕ್ಕಿರುವ ಅದರದರ ಗುಣ. ಈ ನಮ್ಮ ನಮ್ಮ ಗುಣಕ್ಕೆ ನಾವು ಸಹಜವಾಗಿದ್ದಾಗ (ಸ್ವಧರ್ಮ ಎಂದೂ ಓದಿಕೊಳ್ಳಿ), ನಾವಲ್ಲದ ಯಾರಂತೆಯೋ ನಾವಾಗಲು ಕೃತಕ ಪ್ರಯತ್ನ ಮಾಡದೇ ಇದ್ದಾಗ,ನಾವು ಪಡೆಯುವ ಸಹಜ ಸುಖಸ್ಥಿತಿಗೆ ನಿದರ್ಶನವಾಗಿ, ಜುವಾಂಗ್‌-ತ್ಸೆಯು ಒಂದು ಕಥೆ ಹೇಳುತ್ತಾನೆ. ‘ಬಡಗಿ ಮತ್ತು ಮರ’ ಎಂಬ ಈ ಕಥೆ ಚೀನೀಯರಲ್ಲಿ ಪ್ರಸಿದ್ಧವಾದ್ದು:

ಬಡಗಿ ಮತ್ತು ಮರ

ಒಬ್ಬ ಬಡಗಿ, ದಾರಿಯಲ್ಲಿ ಪವಿತ್ರವೆನ್ನಿಸಿಕೊಂಡ ಲಿಎಂಬ ಮರವೊಂದನ್ನ ನೋಡಿದ. ಸಾವಿರಾರು ದನಕರುಗಳು ಅದರ ನೆರಳಲ್ಲಿ ಆಶ್ರಯ ಪಡೆಯಬಹುದು ಎನ್ನುವಷ್ಟು ಅದು ದೊಡ್ಡದಾಗಿತ್ತು. ಅದರ ಕಾಂಡ ನೂರಾರು ಅಡಿಗಳಷ್ಟು ವಿಶಾಲವಾಗಿತ್ತು. ಬೆಟ್ಟದ ಮೇಲೆ ಅದು ಕೊಂಬೆಗಳನ್ನು ಹರಡುವುದಕ್ಕೆ ಮುಂಚೆ ೮೦ ಅಡಿಯಷ್ಟು ಎತ್ತರವಾಗಿತ್ತು. ಹತ್ತಿಪ್ಪತ್ತು ದೋಣಿಗಳನ್ನು ಮರದಿಂದ ಕೊಯ್ದು ತೆಗೆಯಬಹುದಾಗಿತ್ತು. ಆದರೆ ಬಡಗಿ ಅದನ್ನು ಕಣ್ಣೆತ್ತಿಯೂ ನೋಡದೆ ಮುಂದಕ್ಕೆ ಹೋದ. ಆದರೆ ಅವನ ಶಿಷ್ಯ ಕೇಳಿದ: ‘ಇದೇನು ಗುರುಗಳೇ ಇಂಥ ನಾಟಕವನ್ನು ಎಂದೂ ನೋಡಿದ್ದಿಲ್ಲ. ನಿಮ್ಮ ನಿರ್ಲಕ್ಷ್ಯ ನನಗೆ ಅರ್ಥವಾಗುತ್ತಿಲ್ಲ.’ ಅದಕ್ಕೆ ಬಡಗಿ ಹೇಳಿದ: ‘ಮಾತಾಡಿ ಪ್ರಯೋಜನವಿಲ್ಲ, ಮರೆತುಬಿಡು. ಮರ ಯಾವ ಉಪಯೋಗಕ್ಕೂ ಬಾರದು. ಅದರಿಂದ ದೋಣಿ ಮಾಡಿದರೆ ದೋಣಿ ಮುಳುಗುತ್ತದೆ; ಶವದ ಪೆಟ್ಟಿಗೆ ಮಾಡಿದರೆ ಅದನ್ನು ಒರಳೆ ತಿನ್ನುತ್ತದೆ; ಪೀಠೋಪಕರಣಗಳನ್ನು ಮಾಡಿದರೆ ಅವು ಸುಲಭವಾಗಿ ಮುರಿಯುತ್ತವೆ; ತೊಲೆಕಂಬ ಏನನ್ನ ಮಾಡಹೋದರೂ ಅದು ಲಡ್ಡು. ಯಾವ ಪ್ರಯೋಜನಕ್ಕೂ ಬಾರದಿದ್ದರಿಂದಲೇ ಮರ ಮುದಿಯಾಗಿ ಉಳಿದುಬಿಟ್ಟಿದೆ.’

ಬಡಗಿ ಮನೆಗೆ ಬಂದ ನಂತರ ಮರ ಅವನ ಕನಸಿನಲ್ಲಿ ಬಂದು ಈಗೆ ಹೇಳಿತು: ‘ನನ್ನನ್ನು ಯಾವುದರ ಜೊತೆ ನೀನು ಹೋಲಿಸಲು ಇಷ್ಟಪಡುತ್ತೀ? ಹೇಳು: ಚೆರಿ, ಕಿತ್ತಳೆ, ಸೇಬುಹಣ್ಣು ಬಿಡುವ ಯಾವ ಮರಗಳಾದರೂ ತಮ್ಮ ಪ್ರಾಯ ಕಳೆದುಕೊಂಡ ನಂತರ ಅವನ್ನು ಎಲ್ಲರೂ ಅನಾದರಿಂದ ಕಾಣುತ್ತಾರೆ. ಹೀಗೆ ಮರಗಳು ಫಲಗಳನ್ನು ಕೊಡುವುದರಿಂದಲೇ ತಮ್ಮ ಜೀವಕ್ಕೆ ಅಪಾಯವನ್ನು ತಂದುಕೊಳ್ಳುತ್ತವೆ. ಪ್ರಪಂಚದಿಂದ ಮೆಚ್ಚುಗೆಯನ್ನು ಗಳಿಸಿಕೊಳ್ಳಲು ಅವು ಹೀಗೆ ತಮ್ಮನ್ನು ತಾವೇ ಬೇಗ ನಾಶಪಡಿಸಿಕೊಳ್ಳುತ್ತವೆ. ಎಲ್ಲ ವಿಷಯಗಳೂ ಹೀಗೇ. ನಾನು ಬಹಳ ಕಾಲ ನಿಷ್ಪ್ರಯೋಜಕನಾಗಿ ಇರಲು ಬಯಸಿದೆ; ಜನರ ಕಣ್ಣು ತಪ್ಪಿಸಿ ಬದುಕಿ ಉಳಿದೆ. ಹೀಗಾಗಿ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು.’

ತನ್ನ ಶಿಷ್ಯನಿಗೆ ಬಡಗಿ ತನ್ನ ಕನಸನ್ನು ಹೇಳಿದಾಗ ಶಿಷ್ಯ ಕೇಳಿದ: ‘ಹಾಗಾದರೆ ಮರ ಹೇಗೆ ತಾನೆ ಪವಿತ್ರಮರ ಎನಿಸಿಕೊಂಡಿತು?’ ಗುರು ಉತ್ತರ ಕೊಟ್ಟ: ‘ಗಟ್ಟಿ ಮಾತಾಡಬೇಡ, ಬಾಯಿ ಮುಚ್ಚಿಕೋ, ಮರ ತನ್ನನ್ನು ರಕ್ಷಿಸಿಕೊಳ್ಳಲೆಂದು ದೇವಸ್ಥಾನದ ಆಶ್ರಯವನ್ನು ಪಡೆಯಿತು. ಅದು ಪವಿತ್ರವಲ್ಲದಿದ್ದರೆ ಯಾರಾದರೂ ಅದನ್ನು  ಕಡಿದುಬಿಡುತ್ತಿದ್ದರು.’

ಈ ‘ದ’ ಕುಶಲತೆಯೂ ಹೌದು. ಎಲ್ಲ ನೈಜ ಕುಶಲ ಕೆಲಸಗಾರರು ಈ ‘ದ’ವನ್ನು ಪಡೆದವರು. ಅವರು ಯೋಗಿಗಳಿದ್ದಂತೆ, ತಮ್ಮ ಲಕೆಲಸದಲ್ಲಿ ಏಕಾಗ್ರವಾಗಿ ನಿರತರಾದವರು (ಗೀತೆಯಲ್ಲಿ ಶ್ರೀಕೃಷ್ಣ ಹೇಳುವಂತೆ ಯೋಗವೆಂದರೆ ಕರ್ಮದಲ್ಲಿ ಕುಶಲತೆ).

ಲಾವ್‌-ತ್ಸೆಯನ್ನು ಶಾಶ್ವತದ ರಾಜಕೀಯ ಗುರುವೆಂದೂ ಓದಬಹುದು. (ಲೋಹಿಯಾ ಹೇಳುತ್ತಿದ್ದರು: ಏಕಕಾಲದಲ್ಲಿ ದಾರ್ಶನಿಕನೂ, ಕ್ಷುಬ್ಧಮನಸ್ಸಿನ ಉಗ್ರ ಕ್ರಾಂತಿಕಾರಿಯೂ ಆದವನೊಬ್ಬ ಹೇಳಬಲ್ಲ ಮಾತು ಅದು: ‘ಕ್ರಾಂತಿಕಾರಕವಾದ ರಾಜಕೀಯವು ಪ್ರಸ್ತುತದ ರಿಲಿಜನ್‌ಆದರೆ, ಎಲ್ಲ ರಿಲಿಜನ್‌ಗಳೂ ಶಾಶ್ವತದಲ್ಲಿ ಮಾಡುವ ರಾಜಕೀಯಗಳು.’ ಈ ದೃಷ್ಟಿಯಿಂದ ಲಾವ್‌-ತ್ಸೆ ಪ್ರಪಂಚದ ಗುಣ ತಿಳಿದ ಶಾಶ್ವತದ ಪರಮ ರಾಜಕಾರಣಿ). ಎಲ್ಲ ಪ್ರಭುತ್ವದ ಬಗ್ಗೆ ಅವನು ಹೇಳುವುದನ್ನು ನೋಡಿ:

ಒಂದು ದೊಡ್ಡ ರಾಜ್ಯವನ್ನಾಳುವುದು
ಒಂದು ಸಣ್ಣ ಮೀನನ್ನು ಹುರಿದಂತೆ
ತೀರಾ ಚುಚ್ಚುವುದಕ್ಕೆ ಹೋದರೆ ಅದು ಕೆಟ್ಟುಹೋಗುತ್ತದೆ (೬೨)

ಲೆನಿನ್‌, ಮಾವೊ, ನಮ್ಮ ಇಂದಿರಾಗಾಂಧಿ – ಎಲ್ಲರಿಗೂ ಈ ಮಾತುಗಳಲ್ಲಿ ಪಾಠವಿದೆ. ಮುಂದಿನ ಅಧ್ಯಾಯದಲ್ಲಿ (೬೧) ಅಮೇರಿಕಾದಂತಹ ಬೃಹತ್‌ರಾಷ್ಟ್ರವು ಸದ್ಯ ಕಲಿತುಕೊಳ್ಳಬೇಕಾದ ಪಾಠವಿದೆ: ಲಾವ್‌-ತ್ಸೆಯ ಶಿಷ್ಯನಾದ ಪರಮ ಕವಿ ಹೃದಯಿ ಜುವಾಂಗ್‌-ತ್ಸೆಯು ಪ್ರಪಂಚದ ಸ್ವಾಸ್ಥ್ಯವನ್ನು ಕಾಯುವ ‘ಗುಣ’ದ ಕಲ್ಪನೆಯನ್ನು ಒಂದು ಸೊಗಸಾದ ಕಥೆಯಲ್ಲಿ ಹೀಗೆ ವಿವರಿಸುತ್ತಾನೆ:

ರಾಜಬಡಗಿ ಜಿಂಗ್, ಸಂಗೀತದ ಉಪಕರಣಗಳನ್ನು ಇಡಲೆಂದು ಒಂದು ಸ್ಟಾಂಡನ್ನು ಕೊರಯುತ್ತಿದ್ದ. ಮುಗಿದ ಮೇಲೆ ಅದು ಅಲೌಕಿಕವಾದ ದಿವ್ಯ ಸೌಂದರ್ಯದ್ದು ಎಂದು ಕಂಡಿತು. ರಾಜಕುಮಾರ ಲು ಕೇಳಿದ: ‘ನಿನ್ನ ಕಲೆಯಲ್ಲಿರುವ ಅದ್ಭುತ ರಹಸ್ಯವನ್ನು ನನಗೆ ವಿವರಿಸು.’

ಜಿಂಗ್ಹೇಳಿದ, ‘ದೊರೆಗಳೆ, ಇದರಲ್ಲೇನೂ ರಹಸ್ಯವಿಲ್ಲ; ಆದರೆ ಇನ್ನೇನೊ ಇದೆ. ನಾನು ಇಂಥ ಒಂದು ಸ್ಟಾಂಡನ್ನು ಮಾಡಲು ಹೋಗುವ ಮುಂಚೆ ನನ್ನ ಪ್ರಾಣಶಕ್ತಿ ಸ್ವಲ್ಪವೂ ಇಂಗದಂತೆ ಎಚ್ಚರವಹಿಸುತ್ತೇನೆ. ಮೊದಲು ನನ್ನ ಮನಸ್ಸನ್ನು ಸಂಪೂರ್ನ ತಟಸ್ಥಗೊಳಿಸಿಕೊಳ್ಳುತ್ತೇನೆ. ಹಾಗೆ ಮೂರು ದಿನ ಕಳೆದ ಮೇಲೆ ನನ್ನ ಕೆಲಸಕ್ಕೆ ಫಲ ದೊರೆಯಬೇಕೆಂಬ ಆಸೆಯನ್ನು ಕಳೆದುಕೊಂಡಿರುತ್ತೇನೆ. ಆಮೇಲೆ ಏಳು ದಿನಗಳ ನಂತರ ನನ್ನ ಎರಡು ಕೈಕಾಲುಗಳ ಪರಿವೆಯಿಲ್ಲದವನಾಗುತ್ತೇನೆ . ಆಮೇಲೆ ದೊರೆಗಳಾದ ನಿಮ್ಮ ಆಸ್ಥಾನದ ಪರಿವೆಯೂ ಕಳೆದುಹೋಗಿ ನನ್ನ ಚಿತ್ತವು ನಿಷ್ಕಲ್ಮಷವಾಗಿಬಿಡುತ್ತದೆ. ಆಮೇಲೆ ನಾನು ಯಾವುದೋ ಒಂದು ಪರ್ವತದ ಕಾಡಿನೊಳಕ್ಕೆ ಹೋಗುತ್ತೇನೆ. ತಕ್ಕುದಾದ ಮರವನ್ನಲ್ಲಿ ಹುಡುಕುತ್ತೇನೆ. ಮರದಲ್ಲಿ ನಾನು ಕೊರೆಯಬೇಕಾದ ಆಕಾರ ಸುಪ್ತವಾಗಿರುವುದನ್ನು ಗಮನಿಸುತ್ತೇನೆ. ಆಕಾರವನ್ನು ಪಡೆದುಕೊಳ್ಳಲು ಸಿದ್ಧನಾಗಿ, ಒಳಗಣ್ಣಿಂದ ನಾನು ತಯಾರಿಸಬೇಕಾದ ಸ್ಟಾಂಡನ್ನು ಕಂಡು, ಕೆಲಸಕ್ಕೆ ತೊಡಗುತ್ತೇನೆ. ಇಲ್ಲವಾದರೆ ನಾನು ಏನನ್ನೂ ಮಾಡಲಾರೆ. ನನ್ನ ಸಹಜಶಕ್ತಿಯೂ ಮರದ ಗುಣವೂ ಹೊಂದಿಕೊಳ್ಳುವಂತೆ ಮಾಡಿಕೊಳ್ಳುತ್ತೇನೆ. ಅದ್ಭುತ ರಹಸ್ಯವೆಂದು ನನ್ನ ಕೃತಿಯಲ್ಲಿ ನೀವು ಕಂಡದ್ದು ಪ್ರಕ್ರಿಯೆಯಲ್ಲದೆ ಬೇರೇನೂ ಅಲ್ಲ.’

ದ್ರೋಣನ ಪರೀಕ್ಷೆಯನ್ನು ತೆಗೆದುಕೊಂಡ ಅರ್ಜುನನ ಏಕಾಗ್ರತೆಯೂ ಇಂಥ ಕುಶಲತೆಗೆ ಅಗತ್ಯ. ಪ್ರಪಂಚದಲ್ಲಿ ವ್ಯವಹರಿಸುವಾಗ ಅದರದರ ಗುಣವನ್ನು ಕಂಡವನು ಮಾತ್ರ ವಿವೇಕಯುತವಾದ ವ್ಯವಹಾರಜ್ಞನಾಗುತ್ತಾನೆ. ಅದನ್ನು ಕಾಣದವರು ಮೂರ್ಖರು; ಪ್ರಪಂಚವನ್ನು ತಮ್ಮ ಇಚ್ಛೆಯ ಮೇರೆಗೆ ಬದಲಿಸಲು ಹೊರಟ ಸ್ಟಾಲಿನ್‌-ಹಿಟ್ಲರ್ ನಂತಹ ರಾಕ್ಷಸರು. ಮಾತ್ರವಲ್ಲ – ಲೆನಿನ್‌, ಮಾವೊರಂತಹ ದುರಾಗ್ರಹದ ಆದರ್ಶವಾದಿಗಳು.

ಈ ಸೂತ್ರಗಳನ್ನು ನಾನು ಅನುವಾದಿಸುವಾಗ ಮೊದಲಿಗೆ, ಇಂಗ್ಲಿಷ್‌ಭಾಷಾಂತರಗಳಲ್ಲಿ sage , master ಎಂದು ಎಲ್ಲ ಕಡೆ ಕರೆಸಿಕೊಂಡಿರುವಾತನನ್ನು ಗುರು ಎಂದು ಕರೆದುಕೊಂಡೆ. ಅನಂತರ ಕೆಲವು ಸೂತ್ರಗಳಲ್ಲಿ ಅವನು ಆದರ್ಶ ದೊರೆಯಾಗಿಯೂ ಕಾಣಿಸಿಕೊಳ್ಳುವುದರಿಂದ ಅವನನ್ನು ರಾಜರ್ಷಿ ಎಂದು ಕರೆದೆ. ಅವನು ರಾಜನಾಗಿಯೂ ಋಷಿ; ಅಥವಾ ಋಷಿಯಾದ್ದರಿಂದಲೇ ರಾಜನಾಗಲು ಅರ್ಹ. ನಮ್ಮ ಪುರಾಣದ ಜನಕನಂತೆ.

ಅವನು ನಿಜವಾಗಿ ಜಡಭರತನೇ. ಅಥವಾ ಬಿಸಿಲು ಕಾಯುತ್ತ ಕೂತ ರ‍್ಯಕ್ವನಂಥವನು; ಅಥವಾ ರಮಣರಂತೆ ಬಂಡೆಗೊರಗಿ ಕೂತವನು. ಯಶಸ್ವಿಯಾದ ಒಬ್ಬ ಚೀನೀ ದೊರೆಯ ಬಗ್ಗೆ ಕನ್‌ಪ್ಯೂಷಿಯಸ್‌ಹೇಳಿದ್ದು ಇದನ್ನೇ. ಶುನ್‌ಎಂಬ ಆ ದೊರೆ ಏನೂ ಮಾಡಲು ಹೋಗಲಿಲ್ಲ; ಆತ ಪ್ರಭುತ್ವದ ಚಿಹ್ನೆಗಳನ್ನು ಧರಿಸಿ , ರಾಜದಂಡವನ್ನು ಹಿಡಿದು, ಘನತೆ-ಗೌರವದಿಂದ ದಕ್ಷಿಣಾಭಿಮುಖವಾಗಿ ನಿಂತು ಕಾಣಿಸಿಕೊಂಡ. ಆಗಬೇಕಾದ್ದೆಲ್ಲ ಆಯಿತು.

ರಾಜರ್ಷಿ ನನಗೆ ಜಡಭರತನಂತೆ ಕಾಣುತ್ತಾನೆ ಎಂದಮೇಲೆ ‘ದಾವ್‌’ ಮತ್ತು ‘ದ’ಗಳಂತೆಯೇ ಬಹುಮುಖ್ಯವಾದ ಇನ್ನೊಂದು ಶಬ್ದ-‘ವೂ-ವೈ’ (Wu-Wei) ಬಗ್ಗೆ ಒಂದಿಷ್ಟು ಹೇಳಬೇಕು. ಆಗಬೇಕಾದ ಎಲ್ಲವೂ ಸಹಜವಾಗಿ, ನಿರಾಯಾಸವಾಗಿ ಆಗುವುದು – ‘ವೂ-ವೈ’ ಸ್ಥಿತಿಯಲ್ಲಿ ಮಾತ್ರ. ಅದನ್ನು ನಿಷ್ಕರ್ಮ ಸ್ಥಿತಿ ಎನ್ನಬಹುದು. ಪ್ರಯತ್ನಪೂರ್ವಕವಾದ ಧಾರ್ಮಿಕ ಸಾಧನೆ, ಎಲ್ಲ ಬಗೆಯ ಹಠಯೋಗ, ಒತ್ತಾಯಪೂರ್ವಕವಾದ ಆಡಳಿತ, ತನಗೆ ಸಂಬಂಧಿಸದ ವಿಷಯದಲ್ಲಿ ಮೂಗುಹಾಕುವುದು, ಸಮಾಜ ಸುಧಾರಣೆಯ ಒತ್ತಾಸೆ-ಇವೆಲ್ಲವನ್ನೂ ನಿಷ್ಪ್ರಯೋಜಕವೆಂದು ಋಷಿ ಕಾಣುತ್ತಾನೆ. ಈ ಜಡಭರತ ಸ್ಥಿತಿಯನ್ನು ತಮಗೆ ಒಪ್ಪಿಗೆಯಾಗುವಂತೆ ಅನುವಾದಿಸುವುದು ಹಲವು ಐರೋಪ್ಯ ಲೇಖಕರಿಗೆ ಬಹಳ ಕಷ್ಟದ ಕೆಲಸ. ಆದರೆ ‘ವೂ-ವೈ’ ನಿಜವಾಗಿಯೂ ಅತ್ಯಂತ ಸರಳವಾದ, ಸಹಜ ಕಲ್ಪನೆ. ಅದು ಸೂಚಿಸುವುದು ಇಷ್ಟೆ: ಎಲ್ಲ ಕ್ರಿಯೆಯೂ ಆರೋಗ್ಯವಂತ ದೇಹವೊಂದರ ತತ್‌ಕ್ಷಣದ ಚುರುಕಾದ ಪ್ರತಿಕ್ರಿಯೆಯಂತೆ ಇರಬೇಕು. ಮತ್ತು, ಉದ್ದೇಶಪೂರ್ವಕವಾಗಿ ಅಥವಾ ಪೂರ್ವನಿಶ್ಚಿತವಾಗಿ ನಾವು ಮಾಡುವ ಎಲ್ಲವೂ ನಿರರ್ಥಕ ಅಥವಾ ಕೃತಕವಾಗಿರುತ್ತವೆ.

ಆದರೆ ಯುರೋಪು ಇದನ್ನು ಒಪ್ಪಿಕೊಳ್ಳಲಾರದು; ಯಾಕೆಂದರೆ ಅದು ತನ್ನ ಎಲ್ಲ ಜ್ಞಾನವನ್ನೂ ಗಳಿಸಿದ್ದು ಈ ಪ್ರಪಂಚವನ್ನು ತಾಂತ್ರಿಕ ತಿಳುವಳಿಕೆಯಿಂದ ಬದಲಿಸುವ ಪ್ರಯತ್ನದಲ್ಲಿ. ಯುರೋಪಿನ ಅತ್ಯಂತ ವಿಶಿಷ್ಟವಾದ ಗುಣ ಎಂದು ಯಾವುದನ್ನಾದರೂ ಕರೆಯಬಹುದಾದರೆ – ಅದು ಅವರ ತಾಂತ್ರಿಕತೆ; ಅವರ ಆಗ್ರಹಶೀಲತೆ. ‘ಏನಾದರೂ ಮಾಡುತಿರು ತಮ್ಮ, ನೀ ಸುಮ್ಮನಿರಬೇಡ’ – ಎಂಬುದನ್ನು ನಂಬುವ ಐರೋಪ್ಯ ಮನಸ್ಸು, ಎಲ್ಲ ಗುಟ್ಟುಗಳೂ ರಟ್ಟಾಗದ ಹೊರತು ತಣಿಯದಂಥದು. ಲೋಕಜ್ಞಾನದ ವಿಷಯದಲ್ಲಿ ಈ ದಾಹವು ಐರೋಪ್ಯರಿಗೆ ವಿಶಿಷ್ಟವಾದದ್ದು ಹೇಗೋ ಹಾಗೆಯೇ, ಧಾರ್ಮಿಕ ವಿಷಯದಲ್ಲಿ ಯಹೂದ್ಯ ಮೂಲದ ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಗುಣವೂ ಇದಕ್ಕೆ ಸಂವಾದಿಯಾದದ್ದು – ಎಲ್ಲರನ್ನೂ ಅವರವರು ಇರುವ ಸ್ಥಿತಿಯಿಂದ, ತಮ್ಮ ಕಲ್ಪನೆಗೇ ವಿಶಿಷ್ಟವಾದ ದೇವರಿಗೆ ಸಲ್ಲುವ ಹಾಗೆ ಪರಿವರ್ತಿಸಬೇಕೆಂದು ಆ ಧರ್ಮಗಳ ಹಂಬಲ. ಪಾಶ್ಚಿಮಾತ್ಯರ ಮತಗಳಿಗೆ ‘ಮಾಡು’ವುದು ಮುಖ್ಯ’ ಹಾಗೆಯೇ ಅವರ ಜ್ಞಾನಕ್ಕೂ ‘ತಾಂತ್ರಿಕವಾಗಿ ಮಾಡು’ವುದು ಮುಖ್ಯ. ಸತ್ಯ ಅವರಿಗೆ ಗೋಚರಿಸುತ್ತ ಹೋಗುವುದು, ಚರಿತ್ರೆಯ ಮುನ್ನಡೆಯಲ್ಲಿ. ಆದರೆ ದಾವ್‌ಅಂಥದಲ್ಲ – ಅದು, ಸದಾ ವಾಪಾಸ್ಸಾಗುತ್ತಿರುವಂಥದು; ಸುಮ್ಮೆನ ‘ಆಗು’ತ್ತಿರುವಂಥದು. ಅದು ಇದ್ದದ್ದು, ಮತ್ತು ಸದಾ ಇರುವಂಥದು. ದಾವ್‌ನ್ನು ಅರಿತರೆ ಆಗ, ಪ್ರಪಂಚೋದ್ಧಾರದ ಪ್ರಯತ್ನವನ್ನೇ ಬಿಡಬೇಕಾಗುತ್ತದೆ. ಅಧಿಕಾರವನ್ನು ಹೆಚ್ಚಿಸಿಕೊಳ್ಳುವ ಸಾಮ್ರಾಜ್ಯಶಾಹಿಯ ದರ್ಪ, ಮತ್ತು ಹೀಗೆ ಹೆಚ್ಚಿಸಿಕೊಂಡದ್ದನ್ನು ನಾಶಮಾಡುವ ಕ್ರಾಂತಿಕಾರಕತೆ, ಹಾಗೂ ಈ ಕ್ರಾಂತಿಕಾರಕತೆಯ ಫಲವಾಗಿಯೇ ಚೇತನಗೊಳ್ಳುವ ನವಸಾಮ್ರಾಜ್ಯಕಲ್ಪನೆ – ಈ ಇಡೀ ವಿಷವೃತ್ತದ ಚರಿತ್ರೆಯು ಹೆಗಲ್‌ಗೆ ಪ್ರಗತಿಯೆಂದು ಕಂಡಿರಬಹುದು; ಆದರೆ ಲಾವ್‌-ತ್ಸೆಗೆ ಅಲ್ಲ. ರಮಣ ಮಹರ್ಷಿಗಳು ಹೇಳುತ್ತಾರೆ:

ತನ್ನ ಒಳಗಿನ ನಿಜವನ್ನು ಅರಿತುಕೊಳ್ಳದೇ ಪ್ರಪಂಚವನ್ನು ಸರಿಪಡಿಸುತ್ತೇನೆ ಎಂದು ತೊಡಗುವುದು ಹೇಗಿರುತ್ತದೆಂದರೆ, ಮುಳ್ಳುಕಲ್ಲುಗಳನ್ನು ತುಳಿಯ ಬೇಕಾಗುವುದರಿಂದ ಉಂಟಾಗುವ ನೋವನ್ನು ನಿವಾರಿಸಿಕೊಳ್ಳಲು ಇಡೀ ಭೂಮಿಯನ್ನೇ ಚರ್ಮದಿಂದ ಹೊದಿಸಲು ಹೋದಂತೆ. ಅದರ ಬದಲು ನೀನೇ ಮೆಟ್ಟುಗಳನ್ನು ತೊಟ್ಟುಬಿಡುವುದು ಹೆಚ್ಚು ಸರಳವಾದ ಕ್ರಮ

ಈ ಸರಳತೆಯನ್ನು ಲಾವ್‌-ತ್ಸೆ ತನ್ನ ಸೂತ್ರಗಳಲ್ಲಿ ವಿಧವಿಧವಾಗಿ ಮಂಡಿಸಿದ್ದಾನೆ.

ಜ್ಞಾನದ ವರ್ಧನೆಗೆ
ಪ್ರತಿನಿತ್ಯ ಅದನ್ನು ಗಳಿಸುತ್ತ ಹೋಗಬೇಕಲು;
ದಾವ್ ಆಚರಣೆಗೆ
ಪ್ರತಿನಿತ್ಯ ತನ್ನನ್ನು ಕಳೆಯುತ್ತ ಹೋಗಬೇಕು;
ಕಳೆದೂ ಕಳೆದೂ ತಟಸ್ಥ ಸ್ಥಿತಿ ತಲುಪಬೇಕು;
ಹೀಗೆ ಏನೂ ಮಾಡದೆ ಇರುವಾಗ
ಮಾಡದೇ ಬಿಟ್ಟದ್ದು ಇರುವುದಿಲ್ಲ. (೪೮)

ರಾಜನು ಋಷಿಯೂ ಆಗದಿದ್ದಲ್ಲಿ ಅವನು ಆದರ್ಶ ದೊರಯಾಗಲಾರ. ಆದರ್ಶ ದೊರಯು ಮಾತ್ರ ‘ವೂ-ವೈ-ಗುಣ’ ಪಡೆದವನಾದ್ದರಿಂದ ಪ್ರಜೆಗಳಿಗೆ ಅವನು ಇರುವುದೇ ಪತ್ತೆಯಾಗಿರುವುದಿಲ್ಲ:

ಋಷಿಯ ಆಳ್ವಿಕೆಯಲ್ಲಿ
ಜನಕ್ಕೆ ಅವನು ಇರುವುದೇ ಪತ್ತೆಯಾಗುವುದಿಲ್ಲ

ಜನರ ಪ್ರೀತಿಗೆ ಪಾತ್ರನಾಗುವ ದೊರೆ
ಇವನಿಗಿಂತ ಕಮ್ಮಿ;
ಭಯ ಹುಟ್ಟಿಸಿ ಆಳುವವನು
ಇನ್ನೂ ಕಮ್ಮಿ;
ದ್ವೇಷಕ್ಕೆ ತುತ್ತಾಗುವ ದೊರೆ
ಅಧಮ.

ತನ್ನ ಜನರನ್ನೆ ದೊರೆ ನಂಬದೇ ಹೋದರೆ
ಜನರೂ ಪಡಪೋಶಿಗಳಾಗಿ ಬಿಡುತ್ತಾರೆ

ಋಷಿ ಮಾತೇ ಆಡುವುದಿಲ್ಲ, ತೊಡಗಿಬಿಡುತ್ತಾನೆ
ಅವನ ಕಾರ್ಯ ಮುಗಿದ ಮೇಲೆ
ನಾವೇ ಇಷ್ಟನ್ನೂ ಸಾಧಿಸಿಬಿಟ್ಟೆವಲ್ಲ ಅಂತ
ಜನ ಚಕಿತರಾಗುತ್ತಾರೆ. (೧೭)

ಒಂದು ಸಾಮ್ರಾಜ್ಯವು, ತನ್ನಿಂದ ತಾನೆ ಹೇಗೆ ವ್ಯವಸ್ಥಿತವಾಗುತ್ತದೆ – ಎಂಬುದರ ಧ್ಯಾನ ೩೭ನೇ ಅಧ್ಯಾಯದಲ್ಲೂ ಇದೆ:

ದಾವ್ಏನು ಮಾಡಲಿಕ್ಕೆ ಹೋಗದೆ ಇದ್ದರೂ
ಆಗಬೇಕಾದ್ದೆಲ್ಲ ಆಗುತ್ತದೆ
ಆಳುವ ದೊರೆ ದಾವ್ನಲ್ಲಿ ದೃಢವಾಗಿದ್ದರೆ
ಸಕಲವೂ ತನ್ನಿಂದ ತಾನೆ ಪರಿವರ್ತಿಸೀತು (೩೭)

ಈ ವೂ-ವೈ ಸ್ಥಿತಿಯಲ್ಲಿ – ಮಾನವೀಯತೆ, ಸಜ್ಜನಿಕೆ, ಆಚಾರವಂತಿಕೆ, ನೀತಿಪರತೆ – ಇತ್ಯಾದಿ ಗುಣಗಳು ಪ್ರಜ್ಞಾಪೂರ್ವಕವಾದ ನಡವಳಿಕೆಯಾಗಿರದೆ ಹೇಗೆ ಸಹಜಸ್ಥಿತಯಾಗಿರುತ್ತದೆ ಎಂಬುದನ್ನು ಜುವಾಂಗ್‌-ತ್ಸೆ ವರ್ಣಿಸುತ್ತಾನೆ:

ಪರಿಪೂರ್ಣ ಗುಣದ ಸ್ಥಿತಿಯಲ್ಲಿ ದೇಶದ ನಾಯಕರು ಕೈಬಿಚ್ಚಿ ದಾರಿತೋರುವ ಮರದ ಕೊಂಬೆಗಳಂತಿದ್ದರು; ಜನರು ಕಾಡು ಜಿಂಕೆಗಳಂತೆ ಇದ್ದರು. ಅವರು ಸಾದಾಸೀದಾ ವ್ಯವಹರಿಸುತ್ತಿದ್ದರು; ಆದೆ ಅದನ್ನು ಅವರು ನ್ಯಾಯಪರತೆ ಎಂದು ತಿಳಿದಿರಲಿಲ್ಲ. ಅವರು ಅನ್ಯೋನ್ಯ ಪ್ರೀತಿಯಿಂದ ಇರುತ್ತಿದ್ದರು; ಆದರೆ ಅದನ್ನು ಅವರು ಮಾನವೀಯತೆ ಎಂದು ತಿಳಿದಿರಲಿಲ್ಲ. ಆದ್ದರಿಂದ ಅವರ ಯಾವ ಕ್ರಿಯೆಯೂ ಗುರುತುಗಳನ್ನು ಬಿಟ್ಟುಹೋಗಲಿಲ್ಲ; ಮತ್ತು ಅವರ ವ್ಯವಹಾರ ಚರಿತ್ರೆಯಾಗಲಿಲ್ಲ.

ಲಿನ್‌-ಯೂಟಾಂಗ್‌‘ದಾವ್‌ದ ಜಿಂಗ್‌’ ದರ್ಶನದ ಬಗ್ಗೆ ತನ್ನ ಜನಪ್ರಿಯ ಪುಸ್ತಕದಲ್ಲಿ ಬರೆಯುತ್ತ ಅದನ್ನು Laissezs Fair ಎನ್ನುತ್ತಾನೆ. ಈ ಮುಕ್ತಮಾರುಕಟ್ಟೆಯ ಸಿದ್ಧಾಂತವು ಬಂಡವಾಳಶಾಹಿ ವ್ಯವಸ್ಥೆಯ ಅಮೆರಿಕಕ್ಕೆ ಬಹು ಪ್ರಿಯವಾದದ್ದು, ಯಾಕೆಂದರೆ ಅವರ ಆಸೆಬುರುಕ ವ್ಯವಸ್ಥೆಗೆ ಇದು ಉಪಯುಕ್ತ. ದಾವ್‌ನ್ನು ಆ ರೀತಿಯ ಒಂದು ಸರ್ವತಂತ್ರ ಸ್ವಾತಂತ್ಯ್ರದ ಮಾರುಕಟ್ಟೆಯ ಅರ್ಥವ್ಯವಸ್ಥೆಯನ್ನಾಗಿ ಅರ್ಥಮಾಡಿಕೊಳ್ಳುವುದು ಸರಿಯಲ್ಲ ಎಂಬುದು ಇಲ್ಲಿನ ಹಲವು ಸೂತ್ರಗಳಲ್ಲಿ ಕಾಣಸಿಗುವಂತಿದೆ. ಈ ಮಾರ್ಗದ ಪ್ರಕಾರ – ದುಂದುಮಾಡದ ಸರಳತೆಯಲ್ಲಿ ಮಾತ್ರ ಪ್ರತಿಜೀವಿಯೂ ಪಥವನ್ನು ಅರಿಯಬಲ್ಲ; ಅರಿತು, ದಾವ್‌ನ ‘ದ’ಕ್ಕೆ ಅನುಗುಣವಾಗಿ ಇರಬಲ್ಲ; ಮತ್ತು ಈ ತಟಸ್ಥ ತಲ್ಲೀನತೆಯಲ್ಲಿ ಆಗಬೇಕಾದ್ದಕ್ಕೆಲ್ಲ ಅನುವಾಗಬಲ್ಲ. ಇದು ದಾವ್‌ದಾರ್ಶನಿಕತೆ.

ಆದರೆ, ಲಿನ್‌-ಯೂಟಾಂಗ್‌ತನ್ನ ಪುಸ್ತಕವನ್ನು ಬರೆದದ್ದು ರಷ್ಯಾ ಮತ್ತು ಅಮೆರಿಕಾಗಳ ನಡುವೆ ಶೀತಯುದ್ಧ ಪ್ರಾರಂಭವಾದ ನಮ್ಮ ಕಾಲದಲ್ಲಿ. ಅದೇ ರೀತಿ, ಲಾವ್‌-ತ್ಸೆ ತನ್ನ ಸೂತ್ರಗಳನ್ನು ರಚಿಸಿದ್ದು ಚೀನೀ ಪ್ರಾಂತ್ಯಗಳು ಪರಸ್ಪರ ಬಡಿದಾಡುತ್ತಿದ್ದ ಆ ಕಾಲದಲ್ಲಿ. ಹಾಗಿದ್ದರೂ ಲಾವ್‌-ತ್ಸೆ ತನ್ನ ಕಾಲಕ್ಕೆ ಸ್ಪಂದಿಸುತ್ತಲೇ ಅದನ್ನು ಮೀರಿನಿಂತವನು; ತನ್ನ ಕಾಲಕ್ಕೆ ಸಲ್ಲುವವನಾಗಿಯೂ ಚಿರವಾಗಿ ಉಳಿದವನು. ಇಂಥ ಪುರಾತನ ದಾರ್ಶನಿಕನಾದ ಲಾವ್‌-ತ್ಸೆಯನ್ನು ಲಿನ್‌-ಯೂಟಾಂಗ್‌ನಂತಹ ಆಧುನಿಕ ಅನುವಾದಕರೆಲ್ಲರೂ, ತಮ್ಮ ತಮ್ಮ ಸಂಕೋಚಗಳಿಗೂ-‘ರಾಜಕೀಯ’ವೆಂದು ಪ್ರತ್ಯಕ್ಷವಾಗಿ ತಿಳಿಯದ ರಾಜಕೀಯ ಅಗತ್ಯಗಳಿಗೂ – ಹೇಗೆ ವ್ಯಾಖ್ಯಾನ ಮಾಡಿಕೊಳ್ಳುತ್ತಾರೆ ಎಂಬುದೇ ಇನ್ನೊಂದು ಅಧ್ಯಯನದ ವಿಷಯವಾಗಬಹುದು.

ಈ ವೂ-ವೈ ಸ್ಥಿತಿಯು ಐರೋಪ್ಯರ ಸ್ಪರ್ಧಾತ್ಮಕ ಅಭಿವೃದ್ಧಿಶೀಲ ಸಂಸ್ಕೃತಿಗೆ ಅನ್ಯವಾದ್ದರಿಂದಲೇ, ಅಂಥ ಸಂಸ್ಕೃತಿಯಿಂದ ಬಿಡುಗಡೆಗೆ ಆಸೆಪಡುವ ಹಲವು ಐರೋಪ್ಯ ದಾರ್ಶನಿಕರನ್ನು – ಅವರು , ಲಾವ್‌-ತ್ಸುನನ್ನು ತಿಳಿದಿರಲಿ, ತಿಳಿಯದೇ ಇರಲಿ – ಈ ದರ್ಶನವು ಆಕರ್ಷಿಸಿದೆ ಎನ್ನುವುದು ಮೇಲೆ ಹೇಳಿದ ಬಗೆಯ ಅಧ್ಯಯನದಲ್ಲಿ ಸ್ಪಷ್ಟವಾಗಬಹುದು. ರಷ್ಯಾದ ಟಾಲ್‌ಸ್ಟಾಯ್‌ನ War and Peace ನ ಒಂದು ಪಾತ್ರವು, ಯುದ್ಧದ ಮಧ್ಯೆಯೂ ನಕ್ಷತ್ರದೀಪ್ತ ಆಕಾಶವನ್ನು ನಿರ್ವಿಕಾರ-ತಟಸ್ಥನಾಗಿ, ಆದರೆ ಮೈಮನಸ್ಸುಗಳಲ್ಲಿ ಜಾಗೃತನಾಗಿ ಧ್ಯಾನಿಸುತ್ತಾನೆ. ವರ್ಡ್ಸ್‌‌ವರ್ತ ಕವಿಯು ಫ್ರೆಂಚ್‌ಕ್ರಾಂತಿಯಿಂದ ಭ್ರಮನಿರಸನನಾಗಿ, wise passivity ಯ ಬಗ್ಗೆ ಮಾತಾಡುತ್ತಾನೆ; ಅವನಿಗೆ ಅದೇ ಸ್ವೀಕಾರದ ತಟಸ್ಥ-ತಲ್ಲೀನ ನೈಜಸ್ಥಿತಿ. ಲಾರೆನ್ಸ್‌ತನ್ನೊಂದು ಪ್ರಬಂಧದಲ್ಲಿ ಮುಂದಾಗಬಹುದಾದ ಯುದ್ಧವೊಂದನ್ನು ಕಲ್ಪಿಸಿಕೊಂಡು ಕಂಗೆಟ್ಟು ಕೊರಗುವ ಇಬ್ಬರು ಹೆಂಗಸರ ಬಗ್ಗೆ ಬರೆಯುತ್ತ, ಅವರು ತಮ್ಮ ಕಣ್ಣೆದುರಿಗಿನ ನಿಸರ್ಗದ ಆಗುಹೋಗುಗಳನ್ನು ಗಮನಿಲಾಗದೆ ಚಡಪಡಿಸುವುದನ್ನು ಟೀಕಿಸುತ್ತಾನೆ. ಫ್ರೆಂಚ್‌ಭಾಷೆಯ ಶಬ್ದವಾದ insouiance ಈ ಹೆಂಗಸರಲ್ಲಿ ಕೊಂಚ ಇದ್ದಿದ್ದಲ್ಲಿ, ಅವರ ಇಂದ್ರಿಯಗಳು ತಮ್ಮ ಪಟುತ್ವ ಕಳೆದುಕೊಳ್ಳದೆ, ಸದ್ಯಕ್ಕೆ ಜೀವಂತವಾಗಿ ಮಿಡಯುತ್ತಿದ್ದವು – ಎನ್ನುತ್ತಾನೆ. ಏಟ್ಸ್‌ಕವಿಯಂತೂ ತನ್ನ ಒಂದು ಉತ್ತಮ ಪದ್ಯವಾದ Lapis Lazuliಯಲ್ಲಿ ನಿರ್ವಿಕಾರವಾದ ಧ್ಯಾನಸ್ಥ-ತಟಸ್ಥಿತಿಯ ಬಗ್ಗೆ ಮೆಚ್ಚುಗೆಯಲ್ಲಿ ಬರೆಯುತ್ತಾನೆ; ಅನಂತರ ಯುರೋಪಿಯನ್ನರಿಗಿರುವಂತೆ ಏಷ್ಯಾದ ಜನಕ್ಕೆ ಅದೃಷ್ಟವನ್ನು ಎದುರಾಗುವ ದುರಂತ ಪ್ರಜ್ಞೆಯಿಲ್ಲ-ಎಂದು ತನ್ನ ಪದ್ಯವನ್ನೇ ಐರೋಪ್ಯವಾಗಿ ಟೀಕಿಸಿಕೊಳ್ಳುತ್ತಾನೆ. ಏಟ್ಸನ ಯುರೋಪ್‌-ಏಷ್ಯ ಒಳತೋಟಿಯನ್ನು ಬಿಂಬಿಸುವ ಅತಿಮುಖ್ಯ ದ್ವಂದ್ವಕ್ಕೆ-ಮನಸ್ಸು-ದೇಹದ ದ್ವಂದ್ವಕ್ಕೆ-ಈ ಪದ್ಯವು ಉತ್ತಮ ನಿದರ್ಶನವಾಗಿದೆ.