ಈ ಲಾವ್‌-ತ್ಸು ಯಾರು? ಯಾವಾಗ ಬದುಕಿದ್ದ? ಅವನು ನಿಜವಾಗಿ ಇದ್ದನೆ? ಇತ್ಯಾದಿ ಪ್ರಶ್ನೆಗಳು ಐರೋಪ್ಯ ಚಿಂತಕರನ್ನು ಬಹುವಾಗಿ ಕಾಡಿವೆ. ವಸ್ತುನಿಷ್ಠ ಧೀಮಂತಿಕೆಯಲ್ಲಿ ಅತಿಶ್ರದ್ಧೆಯುಳ್ಳ, ಹಾಗೂ ವ್ಯಾವಾಹಾರಿಕ ಸ್ವರೂಪದ ಐರೋಪ್ಯ ಮನಸ್ಸಿಗೆ, ಕಾಲಬದ್ಧ ಚರಿತ್ರೆಯಲ್ಲಿ ದಾಖಲಿಸಿ ಇಡಲಾರದ್ದು ನಿಜವಲ್ಲ. ಚೀನೀ ಮನಸ್ಸು ಹಿಂದೆ ಹೇಗಿತ್ತೋ ನನಗೆ ಸರಿಯಾಗಿ ತಿಳಿಯದು. ಆದರೆ, ಭಾರತೀಯ ಮನಸ್ಸಂತೂ ಕಾಲಾನುಕ್ರಮದ ಚರಿತ್ರೆಯ ಬಗ್ಗೆ ದಿವ್ಯ ನಿರ್ಲಕ್ಷ್ಯವುಳ್ಳದ್ದು. ಈ ದೇಶಕ್ಕೆ ಅಲೆಕ್ಸಾಂಡರ್ ದಂಡೆತ್ತಿ ಬಂದಿದ್ದನೆಂಬುದೇ ನಮ್ಮ ಸ್ಮೃತಿಯಲ್ಲಿ ದಾಖಲಾಗದೇ ಹೋಗಿದೆ. ನಮ್ಮ ಸ್ಮೃತಿಗಳ ಪ್ರಕಾರ, ನಮ್ಮ ಉನ್ನತಿಯ ಕಾಲ ಅರಣ್ಯಕರದ್ದು; ಪಟ್ಟಣಗಳನ್ನು ಕಟ್ಟಿದ ಚಕ್ರವರ್ತಿಗಳದ್ದಲ್ಲ.

ಆದರೆ ನಮ್ಮಲ್ಲಿಯೂ ಚರಿತ್ರೆ ಇದೆ; ಅದು ಪುರಾಣದ ರೂಪದಲ್ಲಿದೆ. ಉದಾಹರಣೆಗೆ, ನಮ್ಮ ಪ್ರತಿಯೊಬ್ಬ ಹಿಂದಿನ ಕವಿಯ ಬಗ್ಗೆಯೂ ನಮ್ಮಲ್ಲಿ ಐತಿಹ್ಯಗಳಿವೆ. ತುಳಸೀದಾಸನು, ಹೆಂಡತಿಯ ಮೋಹದಿಂದ, ನಡುರಾತ್ರಿ ಆಕೆ ಮಲಗಿದ್ದ ಉಪ್ಪರಿಗೆಯನ್ನು ಏರುತ್ತಾನೆ; ಸರ್ಪವನ್ನೇ ಬಳ್ಳಿಯೆಂದು ಭಾವಿಸಿ ಹಿಡಿದು ಹತ್ತುತ್ತಾನೆ. ಕಾಳಿದಾಸ ನಿರಕ್ಷರನಾಗಿದ್ದ ಕುರುಬ; ಸರಸ್ವತಿ ಅವನ ನಾಲಗೆಯ ಮೇಲೆ ಬರೆದು ಅವನ್ನು ಕವಿಯಾಗಿ ಮಾಡುತ್ತಾಳೆ. ಕುಮಾರವ್ಯಾಸ ತಣ್ಣೀರಿನಲ್ಲಿ ಬಟ್ಟೆಸಹಿತ ಮಿಂದು, ಗದುಗಿನ ವೀರನಾರಾಯಣನ ಎದುರು ಕೂತು ಮೈ ಒಣಗುವ ತನಕ ಬರೆಯುತ್ತಾನೆ. ಹರಿಹರ, ತನ್ನ ಅಳಿಯನಾದ ರಾಘವಾಂಕನ ಕಪಾಳಕ್ಕೆ ಹೊಡೆಯುತ್ತಾನೆ-ಇಂಥ ಕಥೆಗಳೆಲ್ಲವನ್ನೂ, ಆಯಾ ಲೇಖಕರ ಕಾವ್ಯದ ಬಗ್ಗೆ, ಓದುಗರಾದ ನಮ್ಮ ಅಪೇಕ್ಷೆಗಳೆಂದೋ ವ್ಯಾಖ್ಯಾನಗಳೆಂದೋ ತಿಳಿಯಬೇಕು. ವಾಲ್ಮೀಕಿ ಬೇಡನಾಗಿದ್ದದ್ದು, ಆಮೇಲೆ ಪರಿವರ್ತನೆಯಾಗಿ ಋಷಿಯಾದ್ದು, ಕ್ರೌಂಚವಧದಿಂದ ಉದ್ವೇಗಗೊಂಡದ್ದು, ಬೇಡನನ್ನು ಶಪಿಸಿದ್ದು , ಮತ್ತೆ ಪರಿತಪಿಸಿದ್ದು, ಅವನ ಶೋಕವೇ ಶ್ಲೋಕವಾದ್ದು – ಹೀಗೆ ಇಡೀ ರಾಮಾಯಣ ಕಾವ್ಯದ ಆರ್ತನಾದವು ಓದುಗನ ವಿರಹದ ಅನುಭವವನ್ನೇ ವ್ಯಂಜಿಸುವ ಕಥೆಯಾಗಿದೆ. ಅಮೆರಿಕಾದ ಮ್ಯಾಡಿಸನ್‌ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು, ತೆಲುಗು ಲೇಖಕರೂ ರಾಮಾನುಜನ್‌ಗೆಳೆಯರೂ ಆದ ಪ್ರೊಫೆಸರ್ ನಾರಾಯಣರಾವ್‌ಹೇಳುವಂತೆ, ಈ ಬಗೆಯ ಕವಿಜೀವನದ ದಂತಕಥೆಗಳಿಗೂ, ಕವಿಗಳ ಕೃತಿಗಳ ಭಾರತೀಯ ಓದಿಗೂ ಸಂಬಂಧವಿದೆ; ಅಂಥ ಸಂಬಂಧಗಳ ಬಗ್ಗೆ ಅವರು ಅಮೂಲ್ಯ ಸಂಶೋಧನೆ ನಡೆಸಿದ್ದಾರೆ.

ಅವರ ಸಂಶೋಧನೆಯ ಇಂಗಿತವನ್ನು ಹಿಡಿದು, ಲಾವ್‌ತ್ಸೆ ಬಗ್ಗೆ ಇರುವ ಕಥೆಗಳನ್ನು ನೋಡಬೇಕು. ಲಾವ್‌ತ್ಸೆ ಎಂದರೆ ಅಥ – ಅಜ್ಜ . ಅಂದರೆ, ಪ್ರೀತಿಯಿಂದ, ಸಲುಗೆಯಿಂದ ಯಾರನ್ನಾದರೂ ಅಜ್ಜಪ್ಪ ಎಂದೋ, ಏ ಅಜ್ಜ ಎಂದೋ ಹಳ್ಳಿಯವರು ಕರೆದ ಹಾಗೆ. ‘ತ್ಸೆ’ ಅಥವಾ ‘ತ್ಸು’ ಎಂದರೆ ‘ಆಚಾರ್ಯ’ ಎಂದರ್ಥ. ಈತ ಕ್ರಿಸ್ತಪೂರ್ವ ಆರನೇ ಶತಮಾನದ ಕನಫ್ಯೂಶಿಯಸ್‌ನ ಸಮಕಾಲೀನನೆಂದು ಭಾವನೆ. ಕ್ರಿ.ಪೂ. ೧ ಅಥವಾ ೨ನೆಯ ಶತಮಾನದಲ್ಲಿ ಲಭ್ಯವಾದ ಒಂದು ಐತಿಹ್ಯದ ಪ್ರಕಾರ, ಈಗಿನ ಹೊನಾನ್‌ಪ್ರಾಂತ್ಯದಲ್ಲಿ ಅವನು ಹುಟ್ಟಿದ. ಅವನ ಮನೆತನದ ಹೆಸರು ‘ಲಿ’. ವಯಸ್ಕನಾದಮೇಲೆ ಅವನ ಹೆಸರು, ಟಾನ್‌. ಆದ್ದರಿಂದ ಚೀನೀ ತಾತ್ವಿಕ ಗ್ರಂಥಗಳಲ್ಲಿ ಅವನನ್ನು ಲಾವ್‌-ತ್ಸು ಎಂದೋ ಲಾವ್‌-ತ್ಸೆ ಎಂದೋ, ಲಾವ್‌-ಟಾನ್‌ಎಂದೋ ಕರೆಯುತ್ತಾರೆ.

ಕ್ರಿ.ಪೂ. ಒಂದನೇ ಶತಮಾನದ ‘ಶಿ-ಚಿ’ ಎಂಬ ಗ್ರಂಥದಲ್ಲಿ ಮೇಲೆ ಹೇಳಿದ ವೃತ್ತಾಂತವಿದ್ದು, ಅದರ ಪ್ರಕಾರ – ಚೌ ರಾಜನ ಪತ್ರಾಗಾರದಲ್ಲಿ ಲಾವ್‌-ತ್ಸು ಮೇಲ್ವಿಚಾರಕನಾಗಿದ್ದ; ಕನ್‌ಫ್ಯೂಶಿಯಸ್‌ಅವನನ್ನು ಭೇಟಿಯಾಗಿದ್ದ. ಈ ಭೇಟಿಯ ಕಥೆ ಹೀಗಿದೆ: ಕನ್‌ಫ್ಯೂಶಿಯಸ್‌ಚೌ ರಾಜ್ಯಕ್ಕೆ ಹೋಗಿ.ಲಾವ್‌-ತ್ಸುನನ್ನು ನೋಡಿ, ‘ಆಚರಣೆ’ಗಳ ಬಗ್ಗೆ ಪ್ರಶ್ನಿಸುತ್ತಾನೆ. ಅದಕ್ಕೆ ಲಾವ್‌-ತ್ಸು ಹೀಗೆ ಉತ್ತರಿಸುತ್ತಾನೆ:

ನೀನು ಮಾತಾಡುತ್ತಿರುವ ಪುರಾತನರ ಎಲುಬುಗಳು ಈಗ ಧೂಳಾಗಿ ಹೋಗಿವೆ; ಅವರ ಮಾತುಗಳು ಮಾತ್ರ ಉಳಿದಿವೆ. ಏನೇ ಇರಲಿ, ಒಬ್ಬ ವ್ಯಕ್ತಿಯು ತನ್ನ ಕಾಲದಲ್ಲಿ ಅದೃಷ್ಟಶಾಲಿಯಾಗಿದ್ರೆ, ಅವನು ರಾಜನ ದರ್ಬಾರಿಗೆ ಸಾರೋಟಿನಲ್ಲಿ ಪ್ರಯಾಣ ಮಾಡುತ್ತಾನೆ. ಅವನು ಅದೃಷ್ಟಶಾಲಿ ಅಲ್ಲದಿದ್ದರೆ, ಸಾಮಾನ್ಯ ಬಟ್ಟೆತೊಟ್ಟು ಅಲೆಯುತ್ತಿರುತ್ತಾನೆ. ನಾನು ಕೇಳಿರುವಂತೆ, ಒಬ್ಬ ಶ್ರೀಮಂತ ವ್ಯಾಪಾರಿಯು ತನ್ನ ನಿಧಿಯನ್ನು ಬಚ್ಚಿಟ್ಟು ತಾನೊಬ್ಬ ಬಡವನೆಂಬಂತೆ ಕಾಣಿಸಿಕೊಳ್ಳುತ್ತಾನೆ. ಘನವಂತನಾದ ಮನುಷ್ಯ, ಆತ ಎಷ್ಟೇ ಧೀಮಂತನಿರಲಿ, ತನ್ನ ಥನವಂತಿಕೆಯನ್ನು ಬಚ್ಚಿಟ್ಟು ದಡ್ಡನಂತೆ ಕಾಣಿಸಿಕೊಳ್ಳುತ್ತಾನೆ. ಆದ್ದರಿಂದ ನಿನ್ನ ಅಧಿಕಪ್ರಸಂಗವನ್ನೂ , ನಿನ್ನ ದುರಾಸೆಯನ್ನೂ, ನಿನ್ನ ಉತ್ಸಾಹವನ್ನೂ ಬಿಟ್ಟುಬಿಡು ಅವುಗಳಿಂದ ನಿನಗೇನು ಪ್ರಯೋಜನವಿಲ್ಲ.

ಇದನ್ನು ಕೇಳಿಸಿಕೊಂಡ ಕನ್‌ಫ್ಯೂಶಿಯಸ್‌ಅಲ್ಲಿಂದ ಹೊರಟುಹೋಗಿ ತನ್ನ ಶಿಷ್ಯರಿಗೆ ಹೇಳುತ್ತಾನೆ:

ಹಕ್ಕಿಗಳು ಹಾರುತ್ತವೆಂದು ಕೇಳಿದ್ದೇನೆ; ಮೀನು ಈಜುತ್ತದೆಂದು ಕೇಳಿದ್ದೇನೆ; ಚತುಷ್ಪಾದಿಗಳು ಭೂಮಿಯ ಮೇಲೆ ಎಲ್ಲೆಲ್ಲೂ ಸಂಚರಿಸುತ್ತವೆಂದು ಕೇಳಿದ್ದೇನೆ. ಅಲೆದಾಡುವ ಪ್ರಾಣಿಗಳನ್ನು ಖೆಡ್ಡಾಗಳಲ್ಲಿ ಹಿಡಿಯಬಹುದು. ಮೀನನ್ನು ಗಾಣದಿಂದ ಹಿಡಿಯಬಹುದು. ಹಕ್ಕಿಗಳನ್ನು ಬಾಣಬಿಟ್ಟು ಕೆಡಹಬಹುದು. ಆದರೆ ಡ್ರೇಗನ್ನನ್ನು ಇಂಥ ಉಪಾಯಗಳಿಂದ ಹಿಡಿಯಲಾಗದು. ಅದು ಮುಗಿಲನ್ನೂ, ಗಾಳಿಯನ್ನೂ ಏರಿ ದಿವಿಯಲ್ಲಿ ಸಂಚರಿಸುತ್ತದೆ. ನಾನು ಇವತ್ತು ಲಾವ್ತ್ಸುನನ್ನು ನೋಡಿದೆ. ಅವನು ಡ್ರೇಗನ್ನಂತೆ ಇದ್ದಾನೆ.

ಈ ಕನ್‌ಫ್ಯೂಶಿಯೊಸ್‌ಪ್ರಣೀತ ವ್ಯವಸ್ಥೆಯ ವಿರೋಧಿಯೂ, ಲಾವ್‌ಭಿಕ್ತನೂ ಆದ ಜುವಾಂಗ್‌-ತ್ಸೆ ಹೇಳುವ ಒಂದು ಕಥೆಯಲ್ಲೂ ಈ ಬಗೆಯದೇ ಆದ ಚಿತ್ರ ನಮಗೆ ದೊರೆಯುತ್ತದೆ:

ಒಮ್ಮೆ ಕನಫ್ಯೂಶಿಯಸ್ಲಾವ್ತ್ಸೆಯನ್ನು ಹೀಗೆ ಕೇಳಿದ;

ಈದಿನ ನಮಗೆ ಸ್ವಲ್ಪ ಸಮಯ ಸಿಕ್ಕಿದೆದಾವ್ಎಂದರೆ ಏನೆಂದು ನಿನ್ನನ್ನು ಕೇಳಬಹುದೆ?’

ಲಾವ್ತ್ಸೆ ಹೀಗೆ ಉತ್ತರಿಸಿದ:

ನಿನ್ನ ಮಿದುಳಲ್ಲಿ ತುಂಬಿಕೊಂಡಿರುವುದನ್ನು ಮೊದಲು ಖಾಲಿಮಾಡಿಕೊ.

ಆಮೇಲೆ ಸ್ನಾನ ಮಾಡಿ ಶುಚಿಯಾಗಿ ಬಾನಿನ್ನ ಪಾಂಡಿತ್ಯವನ್ನೆಲ್ಲ ದೂರ ಎಸೆದುಬಿಡು. ಅದ್ಯಾವ ಮಹಾಋಷಿ ನೀನು ಅಂತ ಅಂದುಕೊಂಡಿದೀಯ? ಹಿಡಿಯಲಿಕ್ಕೆ ಹೋದರೆ ದಾವ್ನುಣುಚಿಕೊಳ್ಳುತ್ತದೆ. ಅದು ಕತ್ತಲು. ಆದರೂ ಅದರ ರೂಪುರೇಷೆ ಹೇಳ್ತೀನಿ, ಕೇಳಿಸಿಕೋ. ಬೆಳಕು ಕತ್ತಲಿನಿಂದ ಬರುತ್ತೆ. ನಾವು ಧೃಡ ಅಂತ ತಿಳಿಯೋದು ನಿರಾಕಾರದಿಂದ ಬರುತ್ತೆ. ಹೀಗೆಯೇ ಪ್ರಾಣಶಕ್ತಿ ದಾವ್ನಿಂದ, ಅಂಗಾಂಗಗಳು ಪ್ರಾಣಶಕ್ತಿಯಿಂದ ಉತ್ಪನ್ನವಾಗುತ್ತವೆ. ರೀತಿ ಸೃಷ್ಟಿಯಾದ ವಿಷಯಗಳು ಹಲವು ರೂಪಗಳಲ್ಲಿ ವಿಕಾಸಗೊಳ್ಳುತ್ತವೆ. ಕೆಲವು ಪ್ರಾಣಿಗಳು, ಒಂಭತ್ತು ರಂಧ್ರಗಳ ಮೂಲಕ ತಮ್ಮ ಮರಿಗಳಿಗೆ ಮೊಲೆ ಉಣಿಸಿ ವೃದ್ಧಿಯಾಗುತವೆ. ಜೀವಿಗಳೆಲ್ಲವೂ, ಕಾಣಲಾಗದ ಮೂಲವೊಂದರಿಂದ ಉತ್ಪನ್ನವಾಗಿ, ಅನಂತದಲ್ಲಿ ಲೀನವಾಗುತ್ತವೆ. ಮಹತ್ತಾದ ವಿಸ್ತಾರದ ನಡುವೆ ಅವು ಪ್ರವೇಶವಾಗಲೀ, ನಿಷ್ಕ್ರಮಣವಾಗಲೀ ಮಾಡದಂತೆ, ಛಾವಣಿಯಾಗಲೀ ಇಲ್ಲವೆಂಬಂತೆ ಇರುತ್ತವೆ. ದಾವ್ನನ್ನು ಅನುಸರಿಸುವವರು ಧೃಡಕಾಯರೂ, ಸ್ಫುಟವಾದ ಮನಸ್ಸುಳ್ಳವರೂ, ಸ್ಪಷ್ಟ ದೃಷ್ಟಿಯವರೂಚುರುಕಾದ ಶ್ರವಣಶಕ್ತಿ ಯುಳ್ಳವರೂ ಆಗಿರುತ್ತಾರೆ. ಚಿಂತೆಯಿಂದ ಅವರ ಮನಸ್ಸು ಗಿಜಿಗುಟ್ಟುವುದಿಲ್ಲ. ಅವರು ಹೊರಗಿನ ಸನ್ನಿವೇಶಕ್ಕೆ ಹೊಂದಿಕೊಳ್ಳಬಲ್ಲ ಪಟುತ್ವ ಪಡೆದಿರುತ್ತಾರೆ. ಆಕಾಶವು ಎತ್ತರದಲ್ಲಿಲ್ಲದೆ ಇರಲಾರದು; ಭೂಮಿಯು ವಿಶಾಲವಾಗಿಲ್ಲದೆ ಇರಲಾರದು; ಸೂರ್ಯಚಂದ್ರರು ಸುತ್ತುತ್ತಿರದೆ ಇರಲಾರರು; ಸೃಷ್ಟಿಯ ಸಕಲವೂ ಬದುಕದೇ ಬೆಳೆಯದೇ ಇರಲಾರವು. ಇದನ್ನೇ ಪ್ರಾಯಶಃ ನಾವು ದಾವ್ಎನ್ನುವುದು. ಅಲ್ಲದೆ, ವಿದ್ಯಾವಂತರು ವಿವೇಕಿಗಳಗಿರಬೇಕೆಂದೇನಿಲ್ಲ; ಒಳ್ಳೆಯ ವಾಗ್ಮಿಯು ನಿಜವಾದ ಜಾಣನೆಂದೂ ತಿಳಿಯಬೇಕಾಗಿಲ್ಲ. ಋಷಿಯು ಇಂಥ ಪ್ರಲೋಭನೆಗಳಿಂದ ಮುಕ್ತನಾಗಿರುತ್ತಾನೆ. ಯಾವುದು ಕೂಡಿದರೆ ಹೆಚ್ಚುವುದಿಲ್ಲವೋ, ಹಾಗೆಯೇ ಕಳೆದರೆ ಕಮ್ಮಿಯಾಗುವುದಿಲ್ಲವೋ ಅದನ್ನೇ ರಕ್ಷಿಸಿಕೊಳ್ಳಲು ಋಷಿ ಕಾತರನಾಗಿರುತ್ತಾನೆ. ಅದು ಆಳ ಅರಿಯಲಾರದ ಸಮುದ್ರ. ದಿಗಿಲು ಹುಟ್ಟಿಸುವ ಅದಕ್ಕೆ ತುದಿಯಿಲ್ಲ ಮೊದಲಿಲ್ಲ. ಎಲ್ಲಿ ಅದಕ್ಕೆ ಕೊನೆಯೋ, ಅಲ್ಲಿ ಅದರ ಆರಂಭ. ಅದು ಎಂದಿಗೂ ಬರಿದಾಗದು, ಬತ್ತದು. ಇದಕ್ಕೆ ಹೋಲಿಸಿದಾಗ ಎಲ್ಲ ಸಭ್ಯರ ಉಪದೇಶವೂ ಮೇಲುಮೇಲಿನದು ಎನ್ನಿಸುತ್ತದೆ . ಎಲ್ಲ ಸೃಷ್ಟಿಗೆ ಯಾವುದು ಜೀವ ಕೊಡುತ್ತದೋ ಯಾವುದು ಎಂದೂ ಬತ್ತಲಾರದೋಅದೇ ದಾವ್’.

ಲಾವ್‌-ತ್ಸು ಅನಾಮಿಕನಾಗಿ ಉಳಿಯಲು ಬಯಸುವ ಋಷಿ. ಆದರೆ ಈತ ವಿನೋದಿ, ಸರಸನಾದ ಮನುಷ್ಯ, ಕುಶಲಿ – ಎಲ್ಲದರಲ್ಲೂ ಉಲ್ಲಾಸದಿಂದ ಒದಗಿಕೊಂಡಿರುವುದು ಅವನ ಗುಣ. ಐತಿಹ್ಯದ ಪ್ರಕಾರ ಇವನು ಚೌ ರಾಜ್ಯದಲ್ಲಿ ಬಹಳಕಾಲ ಬಾಳಿ, ತನ್ನ ದೇಶವು ಅವನತಿಯ ಹಾದಿಯಲ್ಲಿರುವುದನ್ನು ಕಂಡು ಊರನ್ನು ಬಿಟ್ಟುಹೋದ. ದಾರಿಯಲ್ಲಿ ಒಬ್ಬ ಕಾವಲುಗರ ಕೇಳಿದ, ‘ನೀನು ಈ ಪ್ರಪಂಚವನ್ನು ತ್ಯಜಿಸುವಂತೆ ಕಾಣುವಿಯಾದ್ದರಿಂದ ನನಗೊಂದು ಪುಸ್ತಕ ರಚಿಸಬಾರದೇ?’ ಪರಿಣಾಮವಾಗಿ ಲಾವ್‌-ತ್ಸು ಎರಡು ಭಾಗಗಳ ಒಂದು ಪುಸ್ತಕ ರಚಿಸಿದ. ಈ ಗ್ರಂಥವೇ ದಾವ್‌ದ  ಜಿಂಗ್‌- ಐತಿಹ್ಯದ ಪ್ರಕಾರ ಐದುಸಾವಿರ ಚಿತ್ರ ಭಾವಲಿಪಿಗಳದು. ಅವನು ಪುಸ್ತಕ ರಚಿಸಿದ ನಂತರ ಎಲ್ಲಿ ಹೋದನೆಂಬುದು ತಿಳಿಯದು. ಅವನು ನೂರರವತ್ತೋ ಇನ್ನೂರೋ ವರ್ಷ ಬದುಕಿದ್ದನೆಂಬ ಕಥೆಗಳೂ ಇವೆ.

ಲಾವ್‌-ತ್ಸು ಮತ್ತು ಕನ್‌ಫ್ಯೂಷಿಯಸ್‌- ಇವರಿಬ್ಬರೂ ಚೀನೀ ಸಂಸ್ಕೃತಿಗೆ ಪುರಾತನ ಕಾಲದಿಂದಲೂ ತೆರೆದಿರುವ ಎರಡು ಪರ್ಯಾಯ ದಾರಿಗಳು. ಕ್ರಿಸ್ತಪೂರ್ವ ಎರಡನೇ ಶತಮಾನದಿಂದ ಈ ಎರಡು ದಾರಿಗಳ ಪ್ರತಿಪಾದಕರ ನಡುವೆ ನಡೆದ ವಾಗ್ವಾದ ಅತ್ಯಂತ ಗಹನವಾದದ್ದು; ಈ ನಮ್ಮ ಪ್ರಪಂಚವನ್ನು ಅರಿಯಲು ಅಗತ್ಯವಾದದ್ದು; ಮತ್ತು, ಪ್ಲೇಟೋ ದರ್ಶನದಂತೆಯೇ ಜಗತ್ತಿನ ಎಲ್ಲರಿಗೂ ಇವತ್ತಿಗೂ ಪ್ರಸ್ತುತವಾದದ್ದು.

ಕನ್‌ಫ್ಯೂಷಿಯಸ್‌(೫೫೧-೪೭೯ ಕ್ರಿ.ಪೂ.), ಚೀನೀ ನಾಗರೀಕತೆಯ ದೃಷ್ಟಿಯಿಂದ, ಲಾವ್-ತ್ಸುಗಿಂತ ಹೆಚ್ಚು ಯಶಸ್ವಿಯಾದ ಚಿಂತಕ ಎಂದು ಹೊರ ನೋಟಕ್ಕೆ ತಿಳಿಯುತ್ತದೆ. ಚೈನಾ ಮಾತ್ರವಲ್ಲ, ಜಪಾನ್‌ಕೊರಿಯಾಗಳ ಮೇಲೂ ಅವನ ಪ್ರಭಾವವಿತ್ತು. ಅವನ ಮುಯ ಸಿದ್ಧಾಂತಗಳು ಎರಡು: ಒಂದು, ಜೆನ್‌- ಅಂದರೆ, ಮಾನವೀಯತೆ; ಎರಡು, ಲಿ – ಅಂದರೆ, ನೈತಿಕತೆ, ನ್ಯಾಯಪರತೆ. ಕನ್‌ಫ್ಯೂಷಿಯಸ್‌ವ್ಯವಸ್ಥೆಯ ಪ್ರತಿಪಾದಕನಗಿದ್ದ; ಆದರೂ ಆತ ದೇಶ ತೊರೆದು ಅಲೆಯಬೇಕಾಯಿತು. ಕನ್‌ಫ್ಯೂಷಿಯಸ್‌ಪ್ರತಿಪಾದಿಸುವ ವ್ಯವಸ್ಥೆಯಲ್ಲಿ ಶ್ರೇಣಿಗಳು ಮತ್ತು ತಾರತಮ್ಯ ಅಗತ್ಯ – ಅಲ್ಲಿ ಪ್ರತಿ ವ್ಯಕ್ತಿಯು ತನ್ನ ಸ್ಥಾನಕ್ಕೆ ತಕ್ಕ ಹಾಗೆ ನಡೆದುಕೊಳ್ಳತಕ್ಕದ್ದು; ಸಂಸಾರದಲ್ಲಿ ಮೊದಲು ವ್ಯವಸ್ಥೆಯಿದ್ದು, ಅದು ದೇಶದ ವ್ಯವಸ್ಥೆಗೆ ಆಧಾರವಾಗಬೇಕು. ಆ ವ್ಯವಸ್ಥೆಯ ಪ್ರಕಾರ – ತಂದೆ-ಮಗ, ಗಂಡ-ಹೆಂಡತಿ, ಅಣ್ಣ-ತಮ್ಮ, ದೊರೆ-ಪ್ರಜೆ, ಮತ್ತು ಗೆಳೆಯರು – ಹೀಗೆ ಐದು ಸಂಬಂಧಗಳು ನಮ್ಮ ನೈತಿಕತೆ, ನಡವಳಿಯ ಆಧಾರಗಳು.

ಪಾರಮಾರ್ಥಿಕ ವಿಷಯಗಳ ಬಗ್ಗೆ ಕನ್‌ಫ್ಯೂಷಿಯಸ್‌ಉದಾಸೀನನಾಗಿದ್ದ. ದಿವಿಯ ಅಣತಿಯ ಮೇಲೆ ತಾನು ಉಪದೇಶಿಸುತ್ತೇನೆಂದು ಆತ ಹೇಳಿದರೂ ಸೃಷ್ಟಿಯ ರಹಸ್ಯಗಳನ್ನು ಕುರಿತು ಅವನು ತಲೆಕೆಡಿಸಿಕೊಂಡವನಲ್ಲ. ಸಾವಿನ ನಂತರ ಏನೆಂದು ಕೇಳಿದಾಗ ಅವನು ಹೇಳಿದ್ದು – ‘ಜೀವವೆಂದರೆ ಏನೆಂದೇ ನಮಗೆ ತಿಳಿಯದು; ಸಾವಿನ ಬಗ್ಗೆ ತಿಳಿಯುವುದಾದರೂ ಹೇಗೆ?’ ಕನ್‌ಫ್ಯೂಷಿಯಸ್‌ನ ಜಗತ್ತಿನಲ್ಲಿ ಅಲೌಕಿಕಕ್ಕೆ ಅಷ್ಟು ಪ್ರಾಶಸ್ತ್ಯವಿಲ್ಲ – ಅಲ್ಲಿ, ಪಿತೃಗಳಿಗೆ ಶ್ರಾದ್ಧ ಮಾಡುವುದೂ ಲೋಕಾಚಾರ್ಯಕ್ಕಾಗಿ, ನೈತಿಕತೆಗಾಗಿ; ದೇವರಿಗೆ ಪ್ರಾರ್ಥನೆ ಮಾಡುವುದರಿಂದ ಕೂಡಾ ಪ್ರಯೋಜನವಿಲ್ಲ. ಮತ್ತು ಆ ದರ್ಶನದ ಪ್ರಕಾರ, ದಿವಿ ನಿಯತವಾದದ್ದು, ತನ್ನ ನಿಯಮಕ್ಕೆ ಬದ್ಧವಾದ್ದು. ಜನರೂ ಕೂಡ ಒಳ್ಳೆಯ ಹೆಸರನ್ನು ಪಡೆದವರಾಗಿರಬೇಕು, ಮತ್ತು ತಮ್ಮ ಹೆಸರಿಗೆ ತಕ್ಕಂತೆ ನಡೆದುಕೊಳ್ಳಬೇಕು. ಒಬ್ಬ ‘ಗುಣಶೀಲ’ ಎಂದು ಹೆಸರು ಪಡೆದಿದ್ದರೆ, ಅವನು ತನ್ನ ವರ್ತನೆಯಲ್ಲೂ ಗುಣಶೀಲನಾಗಿರಬೇಕು: ಹಾಗಿರಬೇಕು ನಮ್ಮೆಲ್ಲರ ನಡಾವಳಿ-ನಮ್ಮ ನಮ್ಮ ಹೆಸರಿಗೆ ತಕ್ಕಂತೆ, ಸ್ಥಾನಕ್ಕೆ ತಕ್ಕಂತೆ. ತಂದೆ ತಂದೆಯ ಹಾಗಿದ್ದರೆ, ಮಗ ಮಗನ ಹಾಗಿದ್ದರೆ, ದೊರೆ ದೊರೆಯ ಹಾಗಿದ್ದರೆ ಪ್ರಪಂಚದ ವ್ಯವಸ್ಥೆಗೆ ಕೇಡು ತಟ್ಟುವುದಿಲ್ಲ.

ಕನ್‌ಫ್ಯೂಷಿಯಸ್‌ನ ವಿಚಾರಗಳು ಕ್ರಮೇಣ ದಾವ್‌ವಿಚಾರದಿಂದಲೂ ಬೌದ್ಧ ವಿಚಾರದಿಂದಲೂ ಪ್ರಭಾವಿತವಾದವು. ಆದರೆ ಇವನ ವಿಚಾರಕ್ಕೂ ಲಾವ್‌-ತ್ಸುನ ದಾರ್ಶನಿಕತೆಗೂ ಇರುವ ವ್ಯತ್ಯಾಸವು ನಮಗೆ ಮುಖ್ಯವಾದುದು. ರಾಜ್ಯದ ಅಧಿಕಾರಿಗಳು ಕನ್‌ಫ್ಯೂಷಿಯಸ್‌ನ ವಿಚಾರ ಎತ್ತಿ ಹಿಡಿದರು; ಆದರೆ ಕವಿಗಳೂ ಭಾವುಕರೂ ಲಾವ್‌-ತ್ಸೆಯನ್ನು ಮೆಚ್ಚಿಕೊಂಡರು. ಆದರೆ ಕವಿಗಳೇ ಅಧಿಕಾರಿಗಳೂ ಆದಾಗ, ಬಹಿರಂಗದಲ್ಲಿ ಕನ್‌ಫ್ಯೂಷಿಯಸ್‌ನನ್ನು ಅಂತರಂಗದಲ್ಲಿ ಲಾವ್‌-ತ್ಸುನನ್ನೂ ಇಷ್ಟಪಟ್ಟರು. ಇವತ್ತಿಗೂ ಇದು ನಿಜ ತಾನೆ?

ಲಾವ್‌-ತ್ಸುನನ್ನು ಓದುವಾಗ ನಮಗೆ ಎದುರಾಗುವ ಇನ್ನೊಬ್ಬ ಮಹಾಪುರುಷ-ಜುವಾಂಗ್‌-ತ್ಸೆ. ಇವನ ಕಾಲ ಕ್ರಿಸ್ತಪೂರ್ವ ೩೬೯ ರಿಂದ ೨೮೬. ಇವನು ರಚಿಸಿದ ಗ್ರಂಥದ ಹೆಸರೂ ‘ಜುವಾಂಗ್‌-ತ್ಸೆ’. ಇವನು ದೊಡ್ಡ ಪದವಿಗಾಗಿ ಆಸೆಪಡಲಿಲ್ಲ; ಪದವಿಯನ್ನು ಕೊಟ್ಟಾಗ ಯಾವ ಅಧಿಕಾರವೂ ಬೇಡವೆಂದು ನಿರಾಕರಿಸಿದ; ಬಡವನಾಗಿ ಬದುಕಿದ. ಈ ಕಥೆ ತುಂಬ ಸ್ವಾರಸ್ಯಕರವಾಗಿದೆ:

ಚೌ ರಾಜ್ಯದ ದೊರೆ ವೆನ್ಎಂಬಾತನು ಜುವಾಂಗ್ತ್ಸೆಯ ಕೀರ್ತಿಯನ್ನು ಕೇಳಿ, ಅವನನ್ನು ತನ್ನ ಮಂತ್ರಿಯನ್ನಾಗಿ ಮಾಡಿಕೊಳ್ಳಲು ಬಯಸಿ, ಅನರ್ಘ್ಯ ಬಹುಮಾನಗಳ ಸಹಿತ ಒಬ್ಬ ದೂತನನ್ನು ಕಳುಹಿಸಿಕೊಟ್ಟ. ಜುವಾಂಗ್ತ್ಸೆಯು ದೂತನನ್ನು ಕಂಡು ನಗುತ್ತ ಹೇಳಿದ: ‘ಸಾವಿರ ಬಂಗಾರದ ನಾಣ್ಯದ ಬೆಲೆ ಬಹಳ ಹೆಚ್ಚೆಂದು ನನಗೆ ಗೊತ್ತು, ಹಾಗೆಯೇ ಮಂತ್ರಿ ಪದವಿಯ ಮರ್ಯಾದೆ ಎಷ್ಟು ದೊಡ್ಡದೆಂದೂ ನನಗೆ ಗೊತ್ತು. ಆದರೆ ಬಲಿಗೆ ಕೊಂಡೊಯ್ಯುವ ಗೂಳಿಯನ್ನು ನೀನು ಕಂಡಿದ್ದೀಯಲ್ಲವೆ? ಹಲವು ವರ್ಷ ಗೂಳಿಯನ್ನು ಕೊಬ್ಬಿಸಿ, ರಂಗುರಂಗಾದ ಹೂವುಗಳಿಂದ ಅದನ್ನು ಅಲಂಕರಿಸಿ, ಬಲಿ ಕೊಡಲೆಂದು ದೇವರಗುಡಿಗೆ ಅದನ್ನು ಮೆರವಣಿಗೆಯಲ್ಲಿ ನಡೆಸಿಕೊಂಡು ಹೋಗುತ್ತಾರೆ. ಹೊತ್ತಿನಲ್ಲಿ ಗೂಳಿಗೆತಾನೊಂದು ಪುಟ್ಟ ಹಂದಿಯಾಗಿದ್ದರೆ ಯಾರೂ ತನ್ನನ್ನು ಗಮನಿಸುತ್ತಿರಲಿಲ್ಲವೆಂದೂ ಆಗೆಷ್ಟು ಸುಖದಿಂದ ಇರುತ್ತಿದ್ದೆನೆಂದೂ ಅನ್ನಿಸುತ್ತೆ. ಆದರೆ ಅಷ್ಟರಲ್ಲಿ ಕಾಲ ಸಂದುಹೋಗಿರುತ್ತದೆ. ಆದ್ದರಿಂದ ದಯಮಾಡಿ ಇಲ್ಲಿಂದ ತೊಲಗು. ನನ್ನನ್ನು ಕಲುಷಿತಗೊಳಿಸಬೇಡ. ನನ್ನಷ್ಟಿದಂತೆ ನಾನು ಬದುಕಿಕೊಂಡಿರುತ್ತೇನೆ. ನನಗೆ ರಾಜಾಶ್ರಯ ಬೇಡ.

ಸುವ್ಯವಸ್ಥೆಯನ್ನೂ, ಆದ್ದರಿಂದ ಪ್ರಭುತ್ವವನ್ನೂ ತನ್ನ ವ್ಯಸನವನ್ನಾಗಿ ಮಾಡಿಕೊಂಡ ಕನ್‌ಫ್ಯೂಷಿಯಸ್‌ನನ್ನು ಜುವಾಂಗ್‌-ತ್ಸೆ ಯಾಕೆ ಅಷ್ಟು ತೀವ್ರವಾಗಿ ಟೀಕಿಸಬೇಕೆಂದು ಈ ಕಥೆಯಿಂದ ತಿಳಿಯುತ್ತದೆ. ಜುವಾಂಗ್‌-ತ್ಸೆ, ಚೀನೀ ವಿದ್ವಾಂಸರ ಪ್ರಕಾರ , ಅತ್ಯಂತ ಮಾರ್ಮಿಕ ದರ್ಶನದ ಕವಿ, ಸರಸ ಶೈಲಿಯ ಗದ್ಯಲೇಖಕ. ದಾವ್‌-ದ-ಜಿಂಗ್‌ಓದಿದ ನಂತರ ಖಂಡಿತ ಓದಲೇಬೇಕಾದ್ದು ಜುವಾಂಗ್‌-ತ್ಸೆಯನ್ನು. ಆತನು ಹೇಳುವ ಕಥೆಗಳು ಬಹಳ ಗೂಢವಾಗಿರುತ್ತವೆ; ಸಾವು ಮತ್ತು ಹುಟ್ಟು ಪರಮಸತ್ಯದ ಎರಡು ಮಗ್ಗಲುಗಳು ಎನ್ನುವುದನ್ನು ತುಂಬ ಸ್ವಾರಸ್ಯವಾಗಿ ಹೇಳುತ್ತವೆ:

ಒಮ್ಮೆ ನಾನು, ಜುವಾಂಗ್, ಹಾರಾಡುವ ಚಿಟ್ಟೆಯಾಗಿ ಖುಷಿಯಲ್ಲಿದ್ದೇನೆ ಎನ್ನುವ ಕನಸನ್ನು ಕಂಡೆ. ಆಗ ನಾನು ಜುವಾಂಗ್ಆಗಿರಲಿಲ್ಲ, ಹಾರಾಡುವ ಚಿಟ್ಟೆಯಾಗಿಬಿಟ್ಟಿದ್ದೆ. ಬಳಿಕ, ಥಟ್ಟನೆ ಎಚ್ಚೆತ್ತು ನಾನು ಜುವಾಂಗ್ಎಂದುಕೊಂಡೆ. ಆದರೆ ನನಗೆ ತಿಳಿಯದು: ತಾನು ಚಿಟ್ಟೆಯೆಂದು ಕನಸು ಕಂಡ ಜುವಂಗ್ನಾನೋ? ತಾನು ಜುವಾಂಗ್ಎಂದು ಕನಸು ಕಾಣುವ ಚಿಟ್ಟೆಯೇ ನಾನೋ?

ಯಾವಾಗಲೂ ಒಂದು ಘಟವನ್ನು ಬಡಿಯುತ್ತ, ಹಾಡಿಕೊಂಡು ಉಲ್ಲಾಸದಲ್ಲಿರುತ್ತಿದ್ದ ಈ ದಾರ್ಶನಿಕ ಕವಿಯ ಬಗ್ಗೆ ಅನೇಕ ಕಥೆಗಳಿವೆ. ಅವನು ತನ್ನ ಸಾವಿನ ಬಗ್ಗೆಯೇ ಹೇಳಿಕೊಂಡದ್ದು ಹೀಗೆ – ಒಮ್ಮೆ, ಜುವಾಂಗ್‌-ತ್ಸುನ ಶಿಷ್ಯರು ತಮ್ಮ ಗುರುವಿಗೆ ಒಂದು ಭರ್ಜರಿಯಾದ ಶವಸಂಸ್ಕಾರ ಮಾಡಬೇಕೆಂದು ಯೋಜಿಸುತ್ತಾರೆ. ಆಗ, ಯಾವ ಪರಿಯಲ್ಲಿ ಅವನನ್ನು ಹೂಳಬೇಕೆಂದು ಅವರು ಚರ್ಚಿಸುವಾಗ ಜುವಾಂಗ್‌ಹೇಳುತ್ತಾನೆ: ‘ಆಕಾಶ ಮತ್ತು ಭೂಮಿಯ ನಡುವಿನ ಜಗ ನನ್ನ ಶವದ ಪೆಟ್ಟಿಗೆ: ಸೂರ್ಯಚಂದ್ರರು ನನ್ನ ಶವದ ಪೆಟ್ಟಿಗೆಯನ್ನು ಅಲಂಕರಿಸುವ ಹರಳುಗಳು, ಅಸಂಖ್ಯ ನಕ್ಷತ್ರಗಳು ಅದರ ಮೇಲೆ ಹೊಳೆಯುವ ರತ್ನಗಳು. ಇಡೀ ಸೃಷ್ಟಿಯೇ ನನ್ನ ಸಂಸ್ಕಾರದಲ್ಲಿ ಪಾಲುಗೊಳ್ಳುವಾಗ ಹೆಚ್ಚಿನದೇನು ಅಗತ್ಯ?’ ಆಗ ಶಿಷ್ಯರು ಹೇಳುತ್ತಾರೆ: ‘ಹದ್ದುಗಳು ಬಂದು ನಮ್ಮ ಗುರುವನ್ನು ಕಿತ್ತುಕಿತ್ತು ತಿಂದುಹಾಕುತ್ತವೆಯಲ್ಲ?’ ಅದಕ್ಕೆ ಜುವಾಂಗ್‌ಹೇಳುತ್ತಾನೆ: ‘ಅಯ್ಯಾ, ಭೂಮಿಯ ಮೇಲೆ ನನ್ನ ಶವವಿದ್ದರೆ ಹದ್ದುಗಳು ತಿನ್ನುತ್ತವೆ; ಒಳಗಿದ್ದರೆ ಇರುವೆಗಳು ನನ್ನನ್ನು ಉಣ್ಣುತ್ತವೆ. ಒಂದರಿಂದ ನನ್ನನ್ನು ಕಸಿದುಕೊಂಡು ಇನ್ನೊಂದಕ್ಕೆ ಯಾಕೆ ಕೊಡುತ್ತೀರಿ? ಯಾಕೆ ನೀವು ಇರುವೆಗಳ ಪರ?’

ಎಲ್ಲ ಪಥಗಳೂ ಪಂಥಗಳಾಗುತ್ತವೆ. ದಾವ್‌ಪಥದ ಗತಿಯೂ ಇದೇ ಆಯಿತು. ಲಾವ್‌-ತ್ಸೆ ಹಠಯೋಗದ ವಿರೋಧಿ; ಆದರೆ ದಾವ್‌ವಾದಿಗಳು ಚಿರಾಯುಗಳಾಗುವುದು ಹೇಗೆ ಎಂಬುದರ ಹುಡುಕಾಟದಲ್ಲಿ ನಿರತರಾದರು. ಚೀನೀ ಭಾಷೆಯಲ್ಲಿ ದಾವ್‌-ಪಥಕ್ಕೂ ದಾವ್‌-ಪಂಥಕ್ಕೂ ವ್ಯತ್ಯಾಸ ಸೂಚಿಸುವ ಎರಡು ಪದಗಳಿವೆ: ಒಂದು ‘ದಾವ್‌-ಜಿಯಾ’, ಇನ್ನೊಂದು ‘ದಾವ್‌-ಜಿಯಾವ್‌’ (ಉಚ್ಚಾರಣೆಯನ್ನು ಕನ್ನಡಕ್ಕೆ ಒಗ್ಗಿಸಿಕೊಂಡಿದ್ದೇನೆ).

ದಾವ್‌-ಜಿಯಾವ್‌ಪಂಥದವರು ಪ್ರಾಣವಾಯುವನ್ನು ಪೋಷಿಸುವ ತಾಂತ್ರಿಕರು – ಪ್ರಾಣಶಕ್ತಿಯು ಒಂಭತ್ತು ರಂಧ್ರಗಳ ಮುಖೇನ ಪ್ರವೇಶಿಸುತ್ತದೆ, ಹಾಗೂ ನಿರ್ಗಮಿಸುತ್ತದೆ; ಆದ್ದರಿಂದ ಅದನ್ನು ಎಚ್ಚರದಿಂದ ಕಾಯಬೇಕು- ಎಂಬುದು ಅವರ ನಂಬಿಕೆ. ಆದ್ದರಿಂದ ಈ ಕಾಯುವಿಕೆಗಾಗಿ ತಕ್ಕ ಆಹಾರ,ತಕ್ಕ ಔಷಧ, ಇತ್ಯಾದಿಗಳ ಹುಡುಕಾಟ ಅವರಲ್ಲಿ ಶುರುವಾಯಿತು.ನಮ್ಮ ಶರೀರದ ಒಳಗೆ ಕಲ್ಯಾಣದಾಯಕ ದೇವತೆಗಳು ಮಾತ್ರ ಇರುವುದಲ್ಲ; ಮೂರು ವಿನಾಶಕಾರಕ ಹುಳಗಳೂ ಅದರಲ್ಲಿವೆ-ಎಂದವರು ಭಾವಿಸಿದ್ದರು. ಈ ಹುಳಗಳು ಮನುಷ್ಯನ ವೀರ್ಯಶಕ್ತಿಯನ್ನು ತಿನ್ನುತ್ತವೆ. ಆದ್ದರಿಂದ ತಕ್ಕ ಆಹಾರ ಸೇವನೆಯಿಂದ ಈ ರಾಕ್ಷಸ ಹುಳಗಳನ್ನು ಮರ್ದಿಸಿ, ಸಾಧಕರು ಇಬ್ಬನಿಯಿಂದ ಪೋಷಿತರಾಗಬೇಕು. ಸಾವಿರ ಉಸಿರಾಟಗಳಿಗೆ ಅಗತ್ಯವಾದಷ್ಟು  ಹೊತ್ತು ಯಾರು ಉಸಿರನ್ನು ತಡೆಹಿಡಿಯಬಲ್ಲರೋ ಅವರು ಸಾವನ್ನು ಗೆಲ್ಲುವರು. ಇದಕ್ಕೆ ಅಗತ್ಯವಾದ ವಿಧಾನ: ಮಗು ಪಿಂಡವಾಗಿದ್ದಾಗ ತಾಯಿಯ ಗರ್ಭದಲ್ಲಿ ಉಸಿರಾಡುವಂತೆ ಉಸಿರಾಡುವುದು-ಹೀಗೆ ಅವರ ಚಿಂತನೆ.

ಚಿರಾಯುವಾಗಲು ಇನ್ನೂ ಹಲವಾರು ತಂತ್ರಗಳಿವೆ. ಶಯ್ಯಾಗಾರದ ತಂತ್ರ ಲೈಂಗಿಕತೆಯನ್ನು ಬಳಸುತ್ತದೆ; ‘ಯಿನ್‌’-ಮಾರ್ಗ ವೀರ್ಯ ಕೆಳಕ್ಕಿಳಿದು ಹೋಗದೆ ಮಿದುಳಿಗೆ ಏರುವುದನ್ನು ಕಲಿಸುತ್ತದೆ. ಅಂದರೆ, ಸ್ಖಲನವಾಗದಂತೆ ಸಂಭೋಗ ಮಾಡುವುದನ್ನು ಈ ತಂತ್ರ ಕಲಿಸುತ್ತದೆ. ಪಾಶ್ಚಾತ್ಯ ಲೇಖಕ ಹಕ್ಸ್ಲೆಯು, ಎಲ್ಲ ಹಿಪ್ಪಿಗಳಿಗೆ ಪ್ರಿಯವಾಗಿದ್ದ ತನ್ನ ಕೊನೆಯ ಪ್ರಸಿದ್ಧ ಕಾದಂಬರಿಯಲ್ಲಿ, ಈ ಕ್ರಮದ ಸಂಭೋಗದ ಬಗ್ಗೆ ಬರೆದಿದ್ದಾನೆ. ಇದು ಸಂಭೋಗವಲ್ಲ, ಇದು ಮೈಥುನ; ಯಾಂಗ್‌-ಯಿನ್‌ಸಮರಸಗೊಳ್ಳುವ ಸ್ಥಿತಿ.

ಭಾರತೀಯ ತಾಂತ್ರಿಕರನ್ನು ನೆನಪಿಸುವ ಈ ಎಲ್ಲಲ ಮಾಂತ್ರಿಕ ಪ್ರಯೋಗಗಳಿಗೆ ಮಾತ್ರವಲ್ಲದೆ, ದಾವ್‌-ಪಂಥವು ರಸವಿಜ್ಞಾನ – ಆಲ್ಕೆಮಿಗೂ-ಪ್ರೇರಕವಾಯಿತು. ಈ ಬಗ್ಗೆ ವಿಸ್ತಾರವಾಗಿ ಬರೆಯುತ್ತ ಹೋದರೆ, ಸದ್ಯ ನಮ್ಮ ಎದುರಿಗಿರುವ ‘ದಾವ್‌ದ ಜಿಂಗ್‌’ನ ಸ್ವೀಕಾರದ ಕಾರ್ಯ ಮಸಕಾಗಿಬಿಡುತ್ತದೆ. ಆದ್ದರಿಂದ ಜುವಾಂಗ್‌-ತ್ಸೆಯಿಂದ ಇನ್ನೆರಡು ವೃತ್ತಾಂತಗಳನ್ನು ನಿಮ್ಮ ಮುಂದಿಟ್ಟು ಮುಗಿಸುತ್ತೇನೆ- ಈ ವೃತ್ತಾಂತಗಳ ಮೂಲಕ ನೈಜ ಪಥ ಯಾವುದು,ಲ ಪಂಥ ಯಾವುದು ಎಂಬುದು ತಿಳಿಯಾಗಿ ಕಾಣುವಂತಿದೆ:

ಪುರಾತನ ಸೂರಿಗಳು

ಪರಿಶುದ್ಧರಾದ ಪುರಾತನರು ಕನಸುಗಳು ಬೀಳದಂತೆ ನಿದ್ದೆ ಮಾಡುತ್ತಿದ್ದರು. ಚಿಂತೆ ಇಲ್ಲದಂತೆ ಎಚ್ಚರಾಗುತ್ತಿದ್ದರು. ಊಟದಲ್ಲಿ ಅವರಿಗೆ ನಾಲಿಗೆಯ ಚಪಲವಿರಲಿಲ್ಲ. ಅವರು ದೀರ್ಘ ಉಚ್ಛ್ವಾಸನಿಃಶಾಸ್ವದಿಂದ ಉಸಿರಾಡುತ್ತಿದ್ದರು. ನಿಜವಾದ ಮನುಷ್ಯರು ತಮ್ಮ ಪಾದಗಳಿಂದ ಉಸಿರೆಳೆದುಕೊಳ್ಳಬೇಕು. ಅಲ್ಪರು ಮಾತ್ರ ತಮ್ಮ ಗಂಟಲ ಮೇಲಿಂದ ಉಸಿರಾಡುತ್ತಾರೆ. ಜನರ ಆಸೆಗಳು ಹೆಚ್ಚಾದಂತೆ ಅವರ ದೈವಿಕ ಶಕ್ತಿ ಇಳಿಮುಖವಾಗುತ್ತದೆ.

ಪುರಾತನರು ಜೀವನವನ್ನು ಪ್ರೀತಿಸಬೇಕು ಎಂದುಕೊಂಡವರಲ್ಲ; ಸಾವನ್ನು ದ್ವೇಷಿಸಬೇಕು ಎಂದುಕೊಂಡವರಲ್ಲ.ಹುಟ್ಟಿದ್ದಕ್ಕಾಗಿ ಅವರು ಗೆಲುವಾಗುತ್ತಿರಲಿಲ್ಲ; ಸಾಯುವ ದಿನವನ್ನು ಮುಂದುವರಿಸಲು ಅವರು ಹೆಣಗುತ್ತಿರಲಿಲ್ಲ. ಅಪೇಕ್ಷೆಯಿಲ್ಲದೆ ಪ್ರಪಂಚಕ್ಕೆ ಬಂದು, ಅಪೇಕ್ಷೆಯಿಲ್ಲದೆ ಅವರು ಹೊರಟುಹೋಗುತ್ತಿದ್ದರು. ಇರುವ ಜೀವನವನ್ನು ಅವರು ಸಂತೋಷದಿಂದ ಒಪ್ಪಿಕೊಂಡು, ತಾವು ಬಂದಲ್ಲಿಗೆ ವಾಪಸ್ಸಾಗಲು ಸಮಾಧಾನದಿಂದ ಕಾಯುತ್ತಿದ್ದರು. ದಾವ್ನಿಂದ ದೂರವಾಗದಂತೆ ಇರುವುದೆಂದರೆ ಇದೇ: ಸ್ವಪ್ರಯತ್ನದಿಂದ ನೈಸರ್ಗಿಕವಾದದ್ದನ್ನು ಬದಲಾಯಿಸದೇ ಇರುವುದು.

ಅಂಥ ಜನರು ನಿರಾಳವಾದ ಮನಸ್ಸುಳ್ಳವರಾಗಿರುತ್ತಾರೆ. ಅವರ ಹಣೆ ಎತ್ತರವಾಗಿರುತ್ತದೆ. ಅವರ ನಡೆನುಡಿ ಪ್ರಶಾಂತವಾಗಿರುತ್ತದೆ. ಅವರು ಶರತ್ಋತುವಿನಂತೆ ಕೆಲವೊಮ್ಮೆ ವಿಷಣ್ಣರಾಗಿರುತ್ತಾರೆ; ಕೆಲವೊಮ್ಮೆ ವಸಂತ ಋತುವಿನಂತೆ ಬೆಚ್ಚಗಿರುತ್ತಾರೆ. ಅವರ ಸುಖ ದುಃಖಗಳು ಋತುಗಳನ್ನು ಅನುಸರಿಸಿರುತ್ತವೆ. ಎಲ್ಲ ಸೃಷ್ಟಿಯಲ್ಲಿ ಅವರು ಸಮರಸಗೊಂಡಿರುತ್ತಾರೆ.

ಅವರು, ತಮ್ಮಲ್ಲೇನೋ ಕೊರೆತೆ ಇದೆಯಂಬಂತೆ ವಿನಯಶೀಲರಾಗಿ ಇರುತ್ತರೆ. ಆದರೆ ಅನ್ಯರನ್ನವರು ಆಶ್ರಯಿಸುವುದಿಲ್ಲ. ಸಹಜವಗಿ ಅವರು ಸ್ವತಂತ್ರ ಮನೋವೃತ್ತಿಲಯವರು; ಆದರೆ ಕಠಿಣ ಸ್ವಭಾವದವರಲ್ಲ. ಅಡತಡೆಯಿಲ್ಲದ ಸ್ವಾತಂತ್ಯ್ರದಲ್ಲಿ ಬದುಕಿದ್ದೂ ಅವರು ಆತ್ಮಪ್ರದರ್ಶನ ಮಾಡಿಕೊಳ್ಳುವುದಿಲ್ಲ. ತಮ್ಮಷ್ಟಕ್ಕೇ ಸಂತೋಷದಲ್ಲಿ ಇದ್ದವರಂತೆ ಅವರು ಮುಗುಳ್ನಗುತ್ತಾರೆ; ಸಂದರ್ಭಕ್ಕೆ ಉಚಿತವಾಗಿ ಮಾತ್ರ ಚಲಿಸುತ್ತಾರೆ. ಸಾಮಾಜಿಕ ಸಂಧರ್ಭಗಳಲ್ಲಿ ಅವರು ತಮ್ಮ ಶೀಲವನ್ನು ಬಿಟ್ಟುಕೊಡುವುದಿಲ್ಲ. ಬಾಗಿಲುಗಳನ್ನು ಮುಚ್ಚಿಕೊಂಡಿರುವವರಂತೆ ಅವರು ಭಾಸವಾಗುತ್ತಾರೆ. ಮಾತನ್ನು ಮರೆತುಬಿಟ್ಟವರಂತೆ ಅವರು ಅನ್ಯಮನಸ್ಕರಾಗಿರುತ್ತಾರೆ.

ಮನುಷ್ಯನ ಅವನತಿ ಹೇಗಾಯಿತು ಎಂಬುದಕ್ಕೆ ಜುವಾಂಗ್‌-ತ್ಸೆಯ ಕೆಲವು ಮಾತುಗಳು ಹೀಗಿವೆ.

ಮನುಷ್ಯನ ಅವನತಿ

ಒಂದಾನೊಂದು ಕಾಲದಲ್ಲಿ ಪುರಾತನರು ಸರಳವಾಗಿ ಬದುಕುತ್ತಿದ್ದರು. ಆಗ ಯಿನ್ಮತ್ತು ಯಾಂಗ್ಗಳು ಸಮರಸಗೊಂಡಿದ್ದವು. ಪ್ರಾಣಿಗಳ ಚೈತನ್ಯಗಳೂ ಮನುಷ್ಯರ ಚೈತನ್ಯಗಳೂ ಪರಸ್ಪರ ಹೊಂದಿಕೊಂಡಿದ್ದವು. ನಾಲ್ಕು ಋತುಗಳು ತಮ್ಮ ಕ್ರಮವನ್ನು ತಪ್ಪುತ್ತಿರಲಿಲ್ಲ. ಜನರು ಎಳೆ ವಯಸ್ಸಿನಲ್ಲಿ ಸಾಯುತ್ತಿರಲಿಲ್ಲ. ಜನರಿಗೆ ಜ್ಞಾನವಿದ್ದರೂ ಅದನ್ನು ಬಳಸಬೇಕೆಂದು ಅವರಿಗೆ ಅನ್ನಿಸುತ್ತಿರಲಿಲ್ಲ. ಅದು ಒಗ್ಗಟ್ಟಿನ ಕಾಲ. ತಮ್ಮ ಸ್ವಭಾವಕ್ಕೆ ಸಹಜವಾಗಿ ಜನರು ಬದುಕುತ್ತಿದ್ದ ಕಾಲ. ತದನಂತರ ಜನರ ಶೀಲದಲ್ಲಿ ಅವನತಿ ತಲೆದೋರಿತು. ಸೂಯಿಜೆನ್ಮತ್ತು ಹೂಷಿ ಎಂಬ ಇಬ್ಬರು ದೊರೆಗಳು ಹುಟ್ಟಿಕೊಂಡರು. ಅವರು ಬೆಂಕಿಯ ಉಪಯೋಗವನ್ನು ಕಂಡುಕೊಂಡರು; ಮತ್ತು ಪ್ರಾಣಿಗಳನ್ನು ಹೇಗೆ ಪಳಗಿಸಬೇಕೆಂಬುದನ್ನು ಕಲಿತರು. ಇದಾದ ನಂತರ ಅವರು ಆಳುತ್ತಿದ್ದ ಪ್ರಪಂಚವು ನಿಸರ್ಗಕ್ಕೆ ಹೊಂದಿಕೊಂಡಿದ್ದರೂ,. ಒಗ್ಗಟ್ಟು ಕಳೆದುಹೋಯಿತು. ಮನುಷ್ಯನ ಶೀಲ ಇಳಿಮುಖವಾಯಿತು. ಆಮೇಲಿಂದ ಶೆನುಂಗ್ಮತ್ತು ಹ್ವಾಂಗ್ವಿ ಎಂಬ ಇಬ್ಬರು ಚಕ್ರವರ್ತಿಗಳು ಹುಟ್ಟಿಕೊಂಡರು. ಅವರು ವ್ಯವಸಾಯವನ್ನು ಪ್ರಾರಂಭಿಸಿದರು. ರೇಷ್ಮೆಯ ಬಳಕೆಯನ್ನು ಕಲಿಸಿಕೊಟ್ಟರು. ಅವರ ಆಳ್ವಿಕೆಯಲ್ಲಿ ಶಾಂತಿಯಿತ್ತು; ಆದರೆ ಪ್ರಪಂಚವು ನಿಸರ್ಗದಿಂದ ದೂರವಾಗಲು ಮೊದಲಾಯಿತು. ಮನುಷ್ಯನ ಶೀಲ ಇನ್ನಷ್ಟು ಕೆಳಗೆ ಇಳಿಯಿತು. ಇದಾದ ಮೇಲೆ ಯಾವೊ ಮತ್ತು ಶುನ್ಎಂಬ ಇಬ್ಬರು ಚಕ್ರವರ್ತಿಗಳು ಪ್ರಪಂಚನ್ನು ಆಳಲು ಶುರುಮಾಡಿದರು. ಅವರು ತಮ್ಮ ಆಳ್ವಿಕೆಯಲ್ಲಿ ಸಂಸ್ಕೃತಿಯನ್ನು ತಂದರು. ಅದರಿಂದ ಮನುಷ್ಯ ಸುಳ್ಳಾಗಲು ಶುರುವಾದ. ಅವನ ಮೂಲದ ಸರಳತೆ ಕಳೆದುಹೋಯಿತು. ಮನುಷ್ಯ, ತಾನು ಒಳ್ಳೆಯವ ನಾಗಿರಬೇಕೆಂದು ಉದ್ದೇಶಪಟ್ಟು ಪ್ರಯತ್ನಿಸುವುದರಿಂದಾಗಿ, ದಾವ್ನಿಂದ ದೂರವಾದ; ಹೊಗಳಿಸಿಕೊಳ್ಳಬೇಕೆಂಬ ಆಸೆಯಿಂದ ಒಳ್ಳೆಯ ಕೆಲಸಗಳನ್ನು ಮಾಡಲು ಶುರುಮಾಡಿದ. ಪ್ರಕೃತಿಯಿಂದ ದೂರವಾಗಿ ತನ್ನ ಮನಸ್ಸನ್ನು ಬೆಳೆಸಿಕೊಳ್ಳಲು ಮನುಷ್ಯ ಹವಣಿಸಿದ. ಒಂದು ಮನಸ್ಸು ಇನ್ನೊಂದು ಮನಸ್ಸನ್ನು ಉಜ್ಜುವುದು ಶುರುವಾಗಿ ಜ್ಞಾನ ಹುಟ್ಟಿಕೊಂಡಿತು. ಆದರೆ ಜ್ಞಾನದಿಂದ ಮಾತ್ರ ಪ್ರಪಂಚದಲ್ಲಿ ಶಾಂತಿ ನೆಲೆಸಲಾರದು ಎಂದು ತಿಳಿದು, ಜನರು ಸಾಂಸ್ಕೃತಿಕವಾದ ನಯನಾಜೂಕುಗಳನ್ನು ಬೆಳೆಸಿಕೊಂಡರು; ತಮ್ಮ ವಿದ್ವತ್ತನ್ನು ಹೆಚ್ಚಿಸಿಕೊಂಡರು. ನಯವಾದ ಸಭ್ಯತೆ ಮನುಷ್ಯನ ಶೀಲವನ್ನು ನಾಶಮಾಡಿತು. ವಿದ್ವತ್ತು ಮನುಷ್ಯನ ಬುದ್ಧಿಶಕ್ತಿಯನ್ನು ಮಂಕಾಗುವಂತೆ ಮಾಡಿತು. ಕಾಲದಿಂದಲೂ ಜನರು ಗಲಿಬಿಲಿಗೆ ಒಳಗಾಗಿ, ತಮ್ಮ ದಾರಿಯನ್ನು ಕಳೆದುಕೊಂಡು, ತಮ್ಮ ನೈಜ ಸ್ವಭಾವಕ್ಕೆ ಮರಳುವ ದಾರಿ ಕಾಣದೆ ವಿಹ್ವಲರಾಗಿದ್ದಾರೆ.

ಹೀಗೆ ವಿಹ್ವಲರಾದ ನಾವು ಯುರೋಪಿನ ತಂತ್ರಜ್ಞಾನದ ಅಭಿವೃದ್ಧಿಶೀಲ ದಾರಿಯನ್ನೇ ಹಿಡಿಯುತ್ತಿರುವ ನಾವು, ಈಗ ದಾವ್‌-ದ-ಜಿಂಗ್‌ಓದುತ್ತಿದ್ದೇವೆ. ಈ ಕೃತಿಯ ಬಗ್ಗೆ ತುಂಬ ವಿದ್ವತ್‌ಪೂರ್ಣವಾಗಿ ಬರೆಯುವುದೂ ಒಂದು ಆಭಾಸ – ಜೆ. ಕೃಷ್ಣಮೂರ್ತಿಯವರು, ಮಾತಾಡಿ ಪ್ರಯೋಜನವಿಲ್ಲ ಎನ್ನುತ್ತಲೇ, ಕೊನೆಯತನಕ ಅದೇ ಅಭಿಮಾನಿಗಳಿಗೆ ಅದೇ ಮಾತನ್ನು ಆಡಿದಂತೆ.

ಆದರೆ ನನ್ನ ತಂದೆಯವರಿಗೆ ಕೆಲವು ಸಾರಿ ದೇವೀ ಪೂಜೆಯ ಹುಚ್ಚು ಹಿಡಿದು ಒಂದು ದಿನವಿಡೀ ಬಣ್ಣ ಬಣ್ಣದ ರಂಗೋಲೆಯಲ್ಲಿ ದೊಡ್ಡದೊಂದು ಮಂಡಳವನ್ನು ರಚಿಸಿ ಅದರ ಕೇಂದ್ರದಲ್ಲಿ ದೇವಿಯನ್ನು ಆವಾಹಿಸಿ ಸ್ಥಾಪಿಸುತ್ತಿದ್ದರು. ಈ ಪ್ರಸ್ತಾವನೆಯ ಮಂಡಳವು, ಅದರ ಕೇಂದ್ರದಲ್ಲಿರುವ ಲಾವ್‌-ತ್ಸೆಯ ಸೂತ್ರಗಳಲ್ಲಿ ಏಕಾಗ್ರ ಗಮನ ಹರಿಸುವಂತೆ, ಕನ್ನಡದ ಓದುಗರನ್ನು ಪ್ರೇರೇಪಿಸಿದರೆ ನನ್ನ ಶ್ರಮ ಸಾರ್ಥಕ.

…     …     …

ಈ ಎರಡನೇ ಆವೃತ್ತಿಯಲ್ಲಿ ಅನುವಾದವನ್ನೂ ಪ್ರಸ್ತಾವನೆಯನ್ನೂ ಇನ್ನಷ್ಟು ಖಚಿತಗೊಳಿಸಲು, ಚುರುಕುಗೊಳಿಸಲು ಪ್ರಯತ್ನಿಸಿದ್ದೇನೆ. ಶ್ರೀ ಕೆ.ವಿ. ಸುಬ್ಬಣ್ಣ ಮತ್ತು ಕೆ.ವಿ. ಅಕ್ಷರ ಅವರು ಕಣ್ಣಿಟ್ಟು ಓದಿ ಮಾಡಿದ ವಿಮರ್ಶೆಯಿಂದ ಇದು ಸಾಧ್ಯವಾಗಿದೆ. ಅವರಿಗೆ ನಾನು ಕೃತಜ್ಞ. 

ಆಧಾರಗ್ರಂಥಗಳು:

ಜೈನ್‌, ಜಗದೀಶ ಚಂದ್ರ; ಪಥ್‌ಕಾ ಪ್ರಭಾವ್‌, ಸಾಹಿತ್ಯ ಅಕಾದಮಿ, ದೆಹಲಿ, ೧೯೭೩ (ಹಿಂದಿಯಲ್ಲಿ)

ಮಂಜುನಾಥ ಎಸ್‌: ಸುಮ್ಮನಿರುವ ಸುಮ್ಮಾನ, ಅಕ್ಷರ ಪ್ರಕಾಶನ, ಸಾಗರ, ೧೯೯೨

ಭಗವಾನ್‌ರಜನೀಶ್‌: ತಾವೊ ಉಪನಿಷತ್‌, ರಜನಕೀಶ ಫೌಂಡೇಶನ್‌ಲಿಮಿಟೆಡ್‌,

ಪೂನಾ, ೧೯೮೯ (ಹಿಂದಿ ಮತ್ತು ಇಂಗ್ಲೀಷಿನಲ್ಲಿ)

Waley, Arthur: Three Ways of thoughts in Ancient China, George Allen & Unwin, London, 1939

Cleary, Thomas: The Essential Tao, Harper, SanFrancisco, 1991

D.C. Lav: Lao Tzu: Tao Te Ching, Penguin Classics. 1963

Duyendak, J.J.L.: Lao Tzu: Tao Te Ching, John Murray, London, 1954.

Eliade, Mircea: A History of Religious Ideas, Vol. 2, Univ. of Chicago Press, 1982

Giles, Lionel: The Sayings of Lao Tzu, John Murray, London, 1959

Henricks, Rober G: Lao-Tzu, Te-Tao Ching, The Bodley Head, London, 1990

Lin-Yutang: The Wisdom of Laotse, The modern Library, N.Y., 1948

Mitchell, Stephen: Tao Te Ching, Harper Perenaial, 1988

Muller, Max: (Ed.) Sacred Books of the East, Vol.xxxix (tr. by James Legge), 1891

Schuhmacher, Stephen and Gert Woernner: (Eds.) The Encyclopedia of Eastern Philosophy and Religion, Shambala, Boston, 1983.

Sharma, Arvind: (Ed.) Our religions, Harper, Sanfrancisco, 1993