ವಿವರಣೆಗೆ ದಕ್ಕುವ ದಾವ್‌
ಶಾಶ್ವತ ದಾವ್‌ಅಲ್ಲ
ಗುರುತಿಸುವುದಕ್ಕೆ ಸಿಗುವ ಹೆಸರು
ಶಾಶ್ವತ ಹೆಸರು ಅಲ್ಲ

ಹೆಸರಿಗೆ ದಕ್ಕದ್ದು ಸರ್ವಸ್ವಕ್ಕೂ ಆದಿ
ದಕ್ಕಿದ್ದು, ಎಲ್ಲ ಸೃಷ್ಟಿಯ ಮಾಯಿ

ಯಾವ ದಾವ್‌ಒಡಲುಗೊಂಡು ಹೊರಹೊಮ್ಮಿ ಹೆಸರು ಪಡೆಯುವುದೊ;

ಪಡೆದು, ಇಬ್ಬಗೆಯಾಗಿ ತೋರುವುದೊ;
ತೋರಿದರೂ ಉಗಮದಲ್ಲಿ ಗೂಢಕ್ಕೂ ಗೂಢವಾದದ್ದೊ
ಅದೇ ಎಲ್ಲ ಮರ್ಮದ ಮುಂಬಾಗಿಲು.

ಸೌಂದರ್ಯದ ಕಲ್ಪನೆಯಲ್ಲಿ ಕುರೂಪದ ಹುಟ್ಟು ಇದೆ
ಒಳಿತಿನ ಕಲ್ಪನೆಯಲ್ಲಿ ಕೆಡುಕಿನ ಹುಟ್ಟು ಇದೆ

ಸತ್‌-ಅಸತ್‌ಒಂದನ್ನೊಂದು ಪಡೆಯುತ್ತದೆ
ಕಷ್ಟ-ಸುಲಭ ಒಂದಕ್ಕೊಂದು ಪೂರಕವಾಗುತ್ತದೆ
ಉದ್ದ-ಗಿಡ್ಡ ಒಂದಕ್ಕೊಂದು ಕಾರಣವಾಗುತ್ತದೆ
ಎತ್ತರ-ತಗ್ಗು ಒಂದನ್ನೊಂದು ತುಂಬುತ್ತದೆ
ದನಿ-ಧಾಟಿ ಒಂದನ್ನೊಂದು ಮೇಳೈಸುತ್ತದೆ
ಮುಂದು-ಹಿಂದು ಒಂದನ್ನೊಂದು ಹಿಂಬಾಲಿಸುತ್ತದೆ.

ಆದ್ದರಿಂದ ನಮ್ಮ ರಾಜ ಋಷಿ
ನಿಶ್ಚಲವಾಗಿ ತೊಡಗಿರುತ್ತಾನೆ
ಮಾತಾಡದೆ ಕಲಿಸುತ್ತಾನೆ
ಆಗುವುದಕ್ಕೆಲ್ಲ ಅನುವಾಗುತ್ತಾನೆ
ನಶಿಸುವುದಕ್ಕೆ ಸೈ ಅನ್ನುತ್ತಾನೆ
ದುಡಿಯುತ್ತಾನೆ, ನಿರೀಕ್ಷಿಸುವುದಿಲ್ಲ
ಮಾಡಿ ಮರೆಯುತ್ತಾನಾದ್ದರಿಂದ
ಅವನು ಮಾಡಿದ್ದು ಮರೆಯುವುದಿಲ್ಲ.

ದೊಡ್ಡವರನ್ನೆಲ್ಲ ಅತಿ ಶ್ರೇಷ್ಠರೆಂದು ಅಟ್ಟಕ್ಕೇರಿಸಿಟ್ಟರೆ
ಉಳಿದವರೆಲ್ಲ ಕುಬ್ಜರಾಗಿ ಬಿಡುತ್ತಾರೆ
ಪದಾರ್ಥಗಳು ತೀರ ತುಟ್ಟಿಯಾಗಿಬಿಟ್ಟರೆ
ಜನ ಕದೀತಾರೆ
ತೋರುಗಾಣಿಕೆಯಲ್ಲಿ ನಿನ್ನ ಸೌಭಾಗ್ಯವನ್ನು ಮೆರೆದಾಡಿದರೆ
ಅಸೂಯೆ ಹುಟ್ಟಿ ಜನ ಕಂಗೆಡುತ್ತಾರೆ

ಆದ್ದರಿಂದ ನಮ್ಮ ರಾಜ-ಋಷಿ ತನ್ನ ಆಳ್ವಿಕೆಯಲ್ಲಲಿ
ಮಿದುಳನ್ನ ಖಾಲಿ ಮಾಡಿ ಒಡಲನ್ನು ತುಂಬುತ್ತಾನೆ
ಮಹತ್ವಾಕಾಂಕ್ಷೆಯನ್ನು ಸೊರಗಿಸಿ
ಮೂಳೆಗಳನ್ನು ದೃಢಗೊಳಿಸುತ್ತಾನೆ
ತಿಳಿಯೋ ತೆವಲು ಜನರಿಗೆ ತಟ್ಟದ ಹಾಗೆ ಮಾಡಿ
ತಿಳಿದವರ ತೀಟೆಗೆ ಅವಕಾಶವಿರದ ಹಾಗೆ ನೋಡಿಕೊಳ್ಳುತ್ತಾನೆ

ಜಗತ್ತು ಆಗ ಸ್ವಸ್ಥವಾಗಿರುತ್ತದೆ.

ದಾವ್‌ಒಂದು ಬಾವಿ
ಸೇದಿದಷ್ಟು ಒದಗುತ್ತದೆ
ಅದು ಶಾಶ್ವತ ತೆರವು
ತಳ ತೋರದಂತೆ ತುಂಬಿರುತ್ತದೆ

ಸದಾ ಇರುತ್ತದೆ, ಕಾಣಿಸಿಕೊಳ್ಳುವುದಿಲ್ಲ
ಯಾರಿಗೆ ಹುಟ್ಟಿತೊ ತಿಳಿಯುವುದಿಲ್ಲ
ದೇವರಿಗೆ ಅಂದರೆ-
ದೇವರಿಗೂ ಅದು ಪುರಾತನ

ದ್ಯಾವಾ ಪೃಥಿವಿಗಳಿಗೆ ದಯಾದಾಕ್ಷಿಣ್ಯವಿಲ್ಲ;
ವಿಸರ್ಜಿಸಿದ ಹುಲ್ಲಿನ ನಾಯಿಯಂತೆ ಸಚರಾಚರ ಸೃಷ್ಟಿ
ಅವಕ್ಕೆ.
ಕಾಲಜ್ಞ ಋಷಿಗಳಿಗೂ ದಯಾದಾಕ್ಷಿಣ್ಯವಿಲ್ಲ;
ವಿಸರ್ಜಿಸಿದ ಹುಲ್ಲಿನ ನಾಯಿಯಂತೆ ನರಮನುಷ್ಯರು
ಅವರ ಕಾಣ್ಕೆಗೆ.

[1]

ದ್ಯಾವಾ ಪೃಥಿವಿಗಳ ಅಂತರದ ಶೂನ್ಯ
ತಿದಿಯಂತೆ:
ಬತ್ತಿದಷ್ಟು ತುಂಬುವುದು,.
ದುಡಿಸಿದಷ್ಟು ಒದಗುವುದು.

ಮನುಷ್ಯರ ಅತಿಮಾತು ಅತಿಬುದ್ಧಿ ಮಾತ್ರ
ಸುಸ್ತಾಗಿ ಇಂಗುವುದು

– ಹೀಗಾಗಿ ಮನುಷ್ಯರಿಗೆ ಮಿತಿಯ ವ್ರತ.

ಕಣಿವೆಯ ಚೇತಸ್ಸು ಅವಿನಾಶಿ:
ಇದನ್ನೇ ನಿಗೂಢ ಹೆಣ್ಣೆನ್ನುವುದು. [2]

ಈ ನಿಗೂಢ ಹೆಣ್ಣಿನ ದ್ವಾರಗಳನ್ನೇ
ದ್ಯಾವಾ ಪೃಥಿವಿಗಳ ಬೇರೆನ್ನುವುದು.

ಈ ಶಾಶ್ವತಿಯ ತೆರವಿನಲ್ಲಿ
ಸತತ ಸೃಷ್ಟಿಯ ಜಾಲ

ಎಷ್ಟೇ ಬಳಸು
ಇದು ಬತ್ತದು-

ಯಾಕೆ ದಿವಿ ಅನಂತ? ಶಾಶ್ವತಿ ಪೃಥಿವಿ?
ತಮ್ಮ ಗಣನೆ ಅವಕ್ಕೆ ಇಲ್ಲವಾಗಿ
ದಿವಿ ಅನಂತ; ಶಾಶ್ವತಿ ಪೃಥಿವಿ.

ಆ ಪರಿಯಲ್ಲೆ ಋಷಿ:
ಹಿಂದೆ ನಿಂತವನಾಗಿ ಮುಂದಿರುವುದು.

ಏನನ್ನೂ ಹಚ್ಚಿಕೊಳ್ಳದವನಾಗಿ
ಸಕಲ ಸೃಷ್ಟಿಯಲ್ಲಿ ಒಂದಾಗಿರುವುದು.

ಸ್ವಂತಕ್ಕೆ ಬದುಕದವನಾಗಿ
ಸಫಲವಾಗಿರುವುದು.

ಘನವಾದ ಒಳ್ಳೆತನ ನೀರಿನಂತೆ ಇರುತ್ತದೆ.
ಅನಿಮಿತ್ತವಾಗಿ ಸಕಲವನ್ನೂ ಆರೈಸುತ್ತದೆ.
ಕೀಳಾದ ತಗ್ಗಲ್ಲೇ ತಂಗುತ್ತದೆ.
ಸುಮ್ಮನೆ ಕೊಟ್ಟುಕೊಳ್ಳುತ್ತದೆ.

– ಹೀಗೇ ದಾವ್‌ಆಗ್ರಹವಿಲ್ಲದ್ದು.

ಋಷಿ ನೆಲಸುವುದು ನೆಲಕ್ಕೆ ಹತ್ತಿರವಾಗಿ
ಚಿಂತಿಸುವುದು ಸರಳವಾಗಿ
ಒಡನಾಡುವುದು ಉದಾರವಾಗಿ
ನುಡಿಯುವುದು ನೇರವಾಗಿ
ಆಳುವುದು ವ್ಯವಸ್ಥಿತವಾಗಿ
ವ್ಯವಹರಿಸುವುದು ನಿಖರವಾಗಿ
ಕೆಲಸ ಮಾಡುವುದು ಕಾಲಕ್ಕೆ ಉಚಿತವಾಗಿ.

– ಹೀಗೆ ಋಷಿ ಆಗ್ರಹ ಬಿಟ್ಟವನಾಗಿ
ನಿರ್ದೋಷಿ

ನಿನ್ನ ಬಟ್ಟಲನ್ನು ಅಂಚಿನತನಕ ತುಂಬುವುದಕ್ಕೆ ಆಸೆಪಟ್ಟರೆ
ತುಳುಕಿ ಚೆಲ್ಲುತ್ತದೆ.

ನಿನ್ನ ಚಾಕನ್ನು ತೀರ ಹರಿತ ಮಾಡುವುದಕ್ಕೆ ಹೋದರೆ
ಸವೆದು ಬಡ್ಡಾಗುತ್ತದೆ.

ವಜ್ರ ವೈಢೂರ್ಯಗಳು ನಿನ್ನ ನಿವಾಸದಲ್ಲಿ ಚೆಲ್ಲಾಡಿದರೆ
ಕಳ್ಳರ ಭಯ ಕಾಡುತ್ತದೆ.

ಐಶ್ವರ್ಯ ಅಧಿಕಾರಗಳ ಮದದಲ್ಲಿ ನೀನು ಸೊಕ್ಕಿದರೆ
ಸೊರಗುವ ಕಾಲವೂ ಬರುತ್ತದೆ.

ಗೆಯ್ಯುವುದನ್ನ ಗೆಯ್ದು ಹಿಂದೆ ಸರಿದರೆ ಮಾತ್ರ
ಹಾಯಾಗಿರುತ್ತದೆ.

೧೦

ನಿನ್ನ ಜೀವಾತ್ಮನೂ ನಿನ್ನ ಪರಮಾರ್ಥವೂ ಒಡೆದುಕೊಳ್ಳದಂತೆ
ಆ ‘ಒಂದ’ರಲ್ಲಿ ಸ್ವಸ್ಥ ನೆಲಸಿರಬಲ್ಲೆಯ?

ನಿನ್ನ ಉಸಿರಿನಲ್ಲಿ ಕೋಮಲವಾಗಿ ನೆಲೆಸಿ
ಹಸುಗೂಸಿನಂತೆ ಆಗಿಬಿಡಬಲ್ಲೆಯ?

ನಿನ್ನ ಒಳಗನ್ನಡಿಯನ್ನು ನಿರ್ದೋಷವಾಗುವಷ್ಟು ಸ್ಫುಟಗೊಳಿಸಿ
ಸದಾ ಶುಚಿಯಾಗಿ ಉಳಿಸಿಕೊಳ್ಳಬಲ್ಲೆಯ?

ಜನರನ್ನು ಪ್ರೀತಿಸುತ್ತಿದ್ದೂ ಒಂದು ದೇಶವನ್ನು ಆಳುವಾಗ
ನಿನ್ನ ಇಚ್ಛೆ ಹೇರದಂಥೆ ಇರಬಲ್ಲೆಯ?

ದಿವ್ಯ ದ್ವಾರಗಳು ಮುಚ್ಚುವಾಗ ತೆರೆಯುವಾಗ
ಹೇಂಟೆಯಂತೆ ಸುಮ್ಮನೆ ಇರಬಲ್ಲೆಯ?[3]

ಚುರುಕುಮತಿಯಾಗಿ ನಾಲ್ಕೂ ದಿಕ್ಕುಗಳನ್ನು
ಅವಧರಿಸಲಬಲ್ಲವನಾದಾಗ

ಏನೂ ತಿಳಿಯದ ಮುಕ್ಕನಂತೆ ತೆಪ್ಪಗೆ ಇರಬಲ್ಲೆಯ?

ಹುಟ್ಟಿಸಬೇಕಲು, ಪೋಷಿಸಬೇಕು,
ವಶಪಡಿಸಿಕೊಳ್ಳಲು ಹವಣಿಸಕೂಡದು,
ಬೆಳೆಸಬೇಕು, ಆಳಕೂಡದು

– ಇದು ಪರಮಶೀಲ.


[1] ‘ಬಲಕೊಡುವುದಕ್ಕಿಂತ ಮುಂಚೆ ಈ ಹುಲ್ಲಿನ ನಾಯಿಗಳನ್ನು ಒಂದು ಬುಟ್ಟಿಯಲ್ಲಿ ಇಡಲಾಗುವುದು.ಕಸೂತಿ ಹಾಕಿದ ಬಟ್ಟೆಯಿಂದ ಅವುಗಳನ್ನು ಸುತ್ತಲಾಗುವುದು. ಪಿತೃಗಳನ್ನು ಪ್ರತಿನಿಧಿಸುವಾತನೂ , ಮತ್ತು ಪೂಜಾರಿಯೂ ಉಪವಾಸವನ್ನು ಕೈಗೊಂಡು ಅವುಗಳನ್ನು ಪ್ರತಿಷ್ಠಾಪಿಸುವುದು. ಆದರೆ ಆಚರಣೆ ಮುಗಿದ ನಂತರ ದಾರಿಹೋಕರು ಅವುಗಳ ತಲೆಗಳನ್ನು ತುಳಿದು ನಡೆದಾಡುವರು. ಹುಲ್ಲನ್ನು ಕೊಯ್ಯುವವರು ಅವುಗಳನ್ನು ಕೊಂಡುಹೋಗಿ ಒಲೆ ಹಚ್ಚುವರು’: ಜುವಾಂಗ್‌ತ್ಸೆ

[2] ಈ ಹೆಣ್ಣು ಚೀನೀ ಕಲ್ಪನೆಯ ‘ಯಿನ್‌’-ಸ್ವೀಕರಿಸುವ, ತನ್ನನ್ನು ಒಡ್ಡಿಕೊಳ್ಳುವ ಚೈತನ್ಯ. ಇದಕ್ಕೆ ಪೂರಕವಾದ್ದು ‘ಯಾಂಘ್‌’ – ಪುರುಷ ಚೈತನ್ಯ.

[3] ಸದಾ ವಿಕಲ್ಪಗೊಳ್ಳುತ್ತಿರುವ ಪ್ರಪಂಚದ ವಿದ್ಯಮಾನಗಳಲ್ಲಿ ಹೇಂಟೆಯಂತೆ ಒಡ್ಡಿಕೊಂಡು ತಟಸ್ಥವಾಗಿರಬೇಕು. ‘ಯಾಂಗ್‌’ ಏರಿಹೋಗುವ ಹುಂಜವಾದರೆ, ಹೇಂಟೆ ‘ಯಿನ್‌’ ಎಂದು ಭಾವಿಸಬಹುದು. ದಾವ್‌ಸರ್ವಕ್ಕೂ ಸಾಕ್ಷಿ, ತಟಸ್ಥ.