೧೧

ಚಕ್ರ ಮಾಡುವುದು ಹಳಿಗಳಿಂದ

[1]
ಆದರೆ ಬಂಡಿ ಚಲಿಸುವುದು ಮಧ್ಯದ ತೂತಿನಿಂದ

ಮಣ್ಣನ್ನು ತುಳಿದು ತಟ್ಟಿ ಮಡಕೆ ಮಾಡುವುದು,
ಆದರ ಒಳಗಿನ ಖಾಲಿ ತುಂಬಿಸಿಕೊಳ್ಳುವುದು

ಕುಯ್ಯಿಸಿ, ಸುಟ್ಟು ಒಂದರಮೇಲೊಂದನ್ನ ಜಮಾಯಿಸಿ
ಇಟ್ಟಿಗೆಯಿಂದ ಮನೆಕಟ್ಟುವುದು
ಒಳಗಿನ ತೆರವಿನಲ್ಲಿ ಬದುಕುವುದು

ಇರುವುದನ್ನು ದುಡಿಸಿಕೊಳ್ಳುವುದು
ಇರದ್ದು ಒದಗುವುದು.

೧೨

ಅತಿಬಣ್ಣದಿಂದ ಕಣ್ಣು ಮಂಜಾಗುತ್ತದೆ.
ಅತಿಶಬ್ದದಿಂದ ಕಿವಿ ಕೆಪ್ಪಾಗುತ್ತದೆ.
ಅತಿರುಚಿಯಿಂದ ನಾಲಿಗೆ ಕೆಡುತ್ತದೆ.
ಜೂಜು ಮತ್ತು ಬೇಟೆಯಿಂದ ಮನ ಮದಿಸುತ್ತದೆ.
ಅಪರೂಪದ ವಸ್ತುಗಳ ವ್ಯಾಮೋಹ ಉನ್ನತಿಗೆ ಕಂಟಕವಾಗುತ್ತದೆ.

ಆದ್ದರಿಂದ ನಮ್ಮ ರಾಜಋಷಿ
ಒಡಲಿಗೆ ಪರವಾಗಿದ್ದು
ಕಣ್ಣಿಗೆ ವಿರೋಧವಾಗಿ
ತನ್ನ ಆಯ್ಕೆ ಮಾಡುತ್ತಾನೆ.

೧೩

ಕೃಪೆ, ಅವಕೃಪೆ – ಎರಡೂ ಗಲಿಬಿಲಿಗೆ ಕಾರಣ
ಉನ್ನತ ಪದವಿಯಂತೆ, ಶರೀರವೂ ಕಳವಳದ ಉಗಮ

ಕೃಪೆ, ಅವಕೃಪೆ-ಎರಡೂ ಗಲಿಬಲಿಗೆ ಕಾರಣ ಅಂದರೇನು ಅರ್ಥ?

ಮೇಲಿನವರ ಕೃಪೆಗೆ ಒಳಗಾದಾಗ ಪ್ರಜೆ ಗಲಿಬಿಲಿಗೊಳ್ಳುತ್ತಾನೆ
ಮೇಲಿನವರ ಕೃಪೆ ಕಳಕೊಂಡಾಗಲೂ ಪ್ರಜೆ ಗಲಿಬಿಲಿಗೊಳ್ಳುತ್ತಾನೆ
– ಎಂದು ಅದರ ಅರ್ಥ

ಉನ್ನತ ಪದವಿಯಂತೆ, ಶರೀರವೂ ಕಳವಳದ ಉಗಮ
ಅಂದರೆ ಏನು ಅರ್ಥ?
ನಾನು ಕಳವಳಪಡಲು ಕಾರಣ ನನಗೊಂದು ಶರೀರ ಇರುವುದು
ಈ ಶರೀರವನ್ನು ಕಳಕೊಂಡಬಳಿಕ ಎಲ್ಲಿಯ ಕಳವಳ?
– ಎಂದು ಅದರ ಅರ್ಥ.

ಹೀಗಾಗಿ, ದೇಶದ ಪ್ರಭುವಾಗುವುದಕ್ಕಿಂತ
ಶರೀರದ ಮೇಲಿನ ನಿಗಾ ಹೆಚ್ಚು ಅಮೂಲ್ಯವೆಂದು ತಿಳಿದಾತ
ದೇಶವನ್ನು ಆಳಬಲ್ಲ;
ತನ್ನ ಶರೀರವನ್ನು ಹೆಚ್ಚು ಪ್ರೀತಿಸುವಾತ
ದೇಶವನ್ನು ಪಾಲಿಸಬಲ್ಲ.

೧೪

ದಿಟ್ಟಿಸು, ಆದರೆ ಕಾಣಲ್ಲ – ‘ಅಗೋಚರ’ ಅನ್ನುತ್ತೀವಿ
ಆಲಿಸು, ಆದರೆ ಕೇಳಲ್ಲ – ‘ಅಪೂರ್ವ’ ಅನ್ನುತ್ತೀವಿ
ನಿಲುಕು, ಆದರೆ ಎಟುಕಲ್ಲ – ‘ಅಪ್ರಾಪ್ಯ’ ಅನ್ನುತ್ತೀವಿ

ಈ ಮೂರನ್ನ ತುದಿಮುಟ್ಟಿ ಪರೀಕ್ಷಿಸುವುದಕ್ಕೆ ಆಗುವುದಿಲ್ಲ ಎಂದು
ಅವುಗಳನ್ನು ಕೂಡಿಸಿ ‘ಅದು’ ಎಂದು ಬಿಡುತ್ತೀವಿ

ಮೇಲೆ ಅದು ಪ್ರಕಾಶಿಸಲ್ಲ
ಕೆಳಗೆ ಅದು ಕತ್ತಲಲ್ಲ
ಕಂಡಂತೆ ಅನ್ನಿಸಿ ಅದು ಕಾಣಿಸುವುದಿಲ್ಲ-
ಅವ್ಯಕ್ತಕ್ಕೆ ವಾಪಾಸ್ಸಾಗುತ್ತಲೇ ಇರುವ
ರೂಪಗೊಳ್ಳದ ರೂಪ ಅದು
ದ್ರವ್ಯವಿಲ್ಲದ ಬಿಂಬ
ಸೂಕ್ಷ್ಮ, ಅತೀತ

ಹತ್ತಿರ ಹೋದರೆ ಅದರ ತಲೆ ಕಾಣಲ್ಲ
ಹಿಂಬಾಲಿಸಿದರೆ ಅದರ ಬೆನ್ನು ಕಾಣಲ್ಲ
ಪ್ರಾಚೀನ ಪಥವನ್ನು ಹಿಡಿದದ್ದೇ ಆದರೆ
ಸದ್ಯದ ಅನುಭವದಲ್ಲೆ ಅದು ಗ್ರಾಹ್ಯ

ಇದೇ ಪಥದ ಶುರುವಿನ ಸೂತ್ರ

೧೫

ಪುರಾತನ ಸೂರಿಗಳು ಗಾಢವಾದ ಜ್ಞಾನಿಗಳು
ಸೂಜಿ ಮೊನೆ ಸೂಕ್ಷ್ಮದ ಮತಿಯವರು

ಅವರ ಅರಿವಿನ ನಿಗೂಢಕ್ಕೆ ವ್ಯಾಖ್ಯಾನ ಬರೆದವರಿಲ್ಲ
ಅವರ ವಿವೇಕದ ಆಳ ಅಳೆದವರೆ ಇಲ್ಲ

ನಾವು ವರ್ಣಿಸಬಹುದಾದ್ದು
ಅವರದ್ದೇ ಎಂದು ಕಾಣಲು ಸಿಗುವ ಅವರ ಚರ್ಯೆ
ಮತ್ತು ಅವರ ವರ್ತನೆ:

ಶೀತಕ್ಕೆ ಹೆಪ್ಪುಗಟ್ಟಿದ ನೀರಿನ ಮೇಲೆ ಆಯತಪ್ಪದಂತೆ
ನಡೆಯುವವರು ಹೇಗೊ, ಹಾಗೆ ಅವರು ಬಲುಹುಷಾರು;
ವೈರಿವಲಯದಲ್ಲಿ ಚಲನವಲನ ಮಾಡಬೇಕಾಗಿಬಂದ ಯೋಧರಂಥೆ
ಅವರು ಬಲುಚುರುಕು;
ಅತಿಥಿಗಳಂತೆ ಅವರು ದಾಕ್ಷಿಣ್ಯಶಾಲಿಗಳು;
ಕರಗಿಬಿಡುವ ಮಂಜುಗಡ್ಡೆಯಂತೆ
ಸುಲಭರು;
ಮರದ ದಿಮ್ಮಿಯಂತೆ ಕೊಟ್ಟರೂಪ ಪಡೆಯಬಲ್ಲವರು;
ಕಣಿವೆಯಂತೆ ಅವರ ಸ್ವೀಕಾರ.

ರಾಡಿಯೂ ಆಗಿದ್ದು, ಕೆಸರು ಕಂತಿದ ಬಳಿಕ
ತಿಳಿಯೂ ಆಗುವ ವ್ಯವಧಾನ ಉಳ್ಳವರು ಯಾರೋ,

ಜಡವೆನ್ನಿಸುವಂತೆ ತಟಸ್ಥ ಇದ್ದೂ,
ನಿಧಾನ ಮೈಮುರಿದೆದ್ದು ಚುರುಕಾಗಿಬಿಡುವರು ಯಾರೋ,
ಪಥ ಹಿಡಿದ ಅಂಥ ಸೂರಿಗಳನ್ನು ಪೂರ್ಣತೆಯ ಗೀಳು ಹಿಡಿಯದು,

– ಎಂದೇ ಅವರು ಬಳಲಿ ಬಾಡುವುದು,
ಹೊಸಬರೂ ಆಗುವುದು.

೧೬

ಏನೇನೂ ಅಲ್ಲದ ಸೊನ್ನೆಯಾಗಿ ಬಿಡು,
ನಿರಾತಂಕ ಪ್ರಶಾಂತಿಯಲ್ಲಿ ಏಕಾಗ್ರನಗು

ಹಲವು ಹತ್ತುಸಾವಿರ ಜೀವ ಜಂತುಗಳು
ಬರುತ್ತಲೇ ಇವೆ, ಮರಳುತ್ತಲೇ ಇವೆ
ಸೊಕ್ಕಿ ಸಮೃದ್ಧವಾಗುತ್ತವೆ
ತಮ್ಮ ತಮ್ಮ ಮೂಲದ ಸೊನ್ನೆಗೆ ಮತ್ತೆ ವಾಪಸ್ಸಾಗುತ್ತವೆ
ಎಂಬುದನ್ನು ಆಗ ಕಾಣುವಿ
– ಹೀಗೆ ಕಾಣುವುದು ಪ್ರಶಾಂತ ಸ್ಥಿತಿ

ಈ ಸ್ಥಿತಿಯಲ್ಲಿ ನಾವು ನಮ್ಮ ಅ-ದೃಷ್ಟಕ್ಕೆ ವಾಪಸ್ಸಾಗುವುದು
ವಾಪಸ್ಸಾಗಿರುವುದೆಂದರೆ ಸ್ಥಿರವಾಗಿರುವುದು
ಸ್ಥಿರವಾದದ್ದನ್ನು ಕಾಣುವುದು ವಿವೇಕ

ಸ್ಥಿರವಾದದ್ದನ್ನು ಅರಿಯದೇ ಇರುವುದು ಒರಟುಚೇಷ್ಟೆಯ ಹುಂಬತನ,

ಹುಂಬನಾದರೆ ನೀನು ಹಲುಬುತ್ತಿ

ಸ್ಥಿರವಾದದ್ದನ್ನು ತಿಳಿಯುವುದೆಂದರೆ ಇಡೀ ಸೃಷ್ಟಿಯನ್ನು ಅಪ್ಪಿಕೊಳ್ಳುವುದು

ಎಲ್ಲವನ್ನೂ ಅಪ್ಪಿಕೊಳ್ಳುವುದೆಂದರೆ ಸಮದರ್ಶಿಯಾಗುವುದು
ಸಮದರ್ಶಿಯಾಗುವುದೆಂದರೆ ದೊರೆಯಾಗುವುದು

ದೊರೆಯಾಗುವುದೆಂದರೆ ದಿವಿಗೆ ಸಮನಾಗುವುದು
ದಿವಿಗೆ ಸಮನಾಗುವುದೆಂದರೆ ದಾವ್‌ನಲ್ಲಿ ತಲ್ಲೀನನಾಗುವುದು

ದಾವ್‌ನಲ್ಲಿ ತಲ್ಲೀನನಾದವನಿಗೆ ಶುಭವಾಗುತ್ತದೆ. [2]

೧೭

[3]

ಋಷಿಯ ಆಳ್ವಿಕೆಯಲ್ಲಿ
ಜನಕ್ಕೆ ಅವನು ಇರುವುದೇ ಪತ್ತೆಯಾಗುವುದಿಲ್ಲ

ಜನರ ಪ್ರೀತಿಗೆ ಪಾತ್ರನಾಗುವ ದೊರೆ
ಇವನಿಗಿಂತ ಕಮ್ಮಿ;
ಭಯ ಹುಟ್ಟಿಸಿ ಆಳುವವನು
ಇನ್ನೂ ಕಮ್ಮಿ;
ದ್ವೇಷಕ್ಕೆ ತುತ್ತಾಗುವ ದೊರೆ
ಅಧಮ.

ತನ್ನ ಜನರನ್ನೆ ದೊರೆ ನಂಬದೇ ಹೋದರೆ
ಜನರೂ ಪಡಪೋಶಿಗಳಾಗಿ ಬಿಡುತ್ತಾರೆ

ಋಷಿ ಮಾತೇ ಆಡಲ್ಲ, ತೊಡಗಿ ಬಿಡುತ್ತಾನೆ
ಅವನ ಕಾರ್ಯ ಮುಗಿದ ಮೇಲೆ
ನಾವೇ ಇಷ್ಟನ್ನೂ ಸಾಧಿಸಿಬಿಟ್ಟೆವಲ್ಲ ಅಂತ
ಜನ ಚಕಿತರಾಗುತ್ತಾರೆ.

೧೮

ಘನವಾದ ದಾವ್‌ಮರೆತಾಗ
ಸದ್ಭಾವ ಸದಾಚಾರ ಶುರುವಾಗುತ್ತವೆ.

ದೇಹದ ಚುರುಕು ಕಮ್ಮಿಯಾದಾಗ
ಬುದ್ಧಿವಂತಿಕೆ ಮುಂದಾಗುತ್ತದೆ.

ಮನೆಯಲ್ಲಿ ನೆಮ್ಮದಿ ಕಳೆದಾಗ
ವಂಶಪ್ರಜ್ಞೆ ಉದ್ಧವಿಸುತ್ತದೆ.

ದೇಶ ಗೊಂದಲದಲ್ಲಿದ್ದಾಗ
ದೇಶಪ್ರೇಮ ಹುಟ್ಟಿಕೊಳ್ಳುತ್ತದೆ.

೧೯

ಸಂತಸಂಪನ್ನರನ್ನು ಉಚ್ಚಾಟಿಸು, ಜ್ಞಾನಾಮೃತವನ್ನು ಚೆಲ್ಲಿಬಿಡು
ಜನ ನೆಮ್ಮದಿಯಿಂದ ಇದ್ದಾರು.
ದಯಾವಂತಿಕೆಯನ್ನು ಉಚ್ಛಾಟಿಸು, ನಿಷ್ಠಾವಂತಿಕೆಯನ್ನು ಅಟ್ಟಿಬಿಡು
ತಾಯ್ಗರುಳು ಮತ್ತೆ ಮಿಡಿದೀತು.
ಉದ್ಯಮ ಉಚ್ಚಾಟಿಸು, ಫಾಯಿದೆ ಲೆಕ್ಕಕ್ಕೆ ಬೆಂಕಿಯಿಡು
ಕಳ್ಳರು ಯಾಕೆ ಇದ್ದಾರು?

ಬಹಿರಂಗದ ಈ ಮೂರು ಸೂತ್ರಗಳು ಸಾಲದೇ ಹೋಧಾವೆಂದು
ಅಂತರಂಗದ ಕಿವಿಮಾತು ಕೇಳು:

ಅಪ್ಪಟವಾಗಿರು
ಸಾದಾಸೀದಾ ವ್ಯವಹರಿಸು
ಸ್ವಾರ್ಥಕ್ಕೆ ಕಡಿವಾಣ ಹಾಕಿ,
ಆಸೆಗಳನ್ನು ಕಮ್ಮಿ ಮಾಡಿಕೊ.

೨೦

ತಿಳಿಯುವ ತೆವಲನ್ನು ಉಚ್ಚಾಟಿಸಿದ ಮೇಲೆ ನಿನ್ನಷ್ಟು ಸುಖಿ ಇಲ್ಲ.
ಸೌಜನ್ಯದಲ್ಲಿ ‘ಹೂ’ ಅನ್ನೋದಕ್ಕೂ ಗಡುಸಾಗಿ ಹೂಂಗುಡುವುದಕ್ಕೂ ಏನು ವ್ಯತ್ಯಾಸ?[4]

ಇದು ಯಾಕೆ ರೂಪ? ಅದು ಯಾಕೆ ಕುರೂಪ?
ಅವನು ಇವನಿಗೆ ಹೆದರಿದರೆ ಇವನೂ ಅವನಿಗೆ ಹೆದರುವುದು
– ಇವೆಲ್ಲ ಅಸಂಬದ್ಧ

ಮೆರವಣಿಗೆಯಲ್ಲಿ ಮೆರೆಯುವವರ ಥರ ಅದೇನು? ಗೌಜು ಇವರಿಗೆ?
ನನಗೊ ಯಾವುದರಲ್ಲೂ ಖುಶಿಯಿಲ್ಲ
ನನ್ನ ಮುಖ ನಿರ್ವಿಕಾರ
ನಗುವುದನ್ನ ಕಲಿಯುವ ಮುಂಚೆ ಮಗವಿನದು ಇರುವ ಹಾಗೆ

ಇವರು ಬೇಕಾದ್ದನ್ನ ಪಡೀಲಿ ಬಿಡು
ನಾನು ಯಾವ ಎಗ್ಗಿಲ್ಲದ ಅಲೆಮಾರಿ
ಶುದ್ಧ ಮುಟ್ಠಾಳ
ನನ್ನ ಜೇಬು, ಮನಸ್ಸು – ಯಾವತ್ತು ಖಾಲಿ

ಇವರು ಬೆಳಗತ ಇದ್ದರೆ
ನಾನು ಕರಿಯ.
ಇವರು ಜಾಣರಾದರೆ
ನಾನು ದಡ್ಡ.
ಇವರಿಗೆ ಗೊತ್ತಿದೆ, ಗುರಿಯಿದೆ,
ನಾನು ಅಜ್ಜ;
ಸಮುದ್ರದ ಅಲೆಯಂತೆ ಎಲ್ಲೆಲ್ಲೋ ಅಪ್ಪಳಿಸಿಕೊಂಡು ಇರುತ್ತೀನಿ ಗೊತ್ತು ಗುರಿಯಿಲ್ಲದೆ ಗಾಳಿ ಹಾಗೆ ಬೀಸಿಕೊಂಡು ಇದೀನಿ.

ನಾನು ಅನನ್ಯ;
ಮಹಾಮಾತೆಯ ಎದೆಯ ಹಾಲನ್ನು ಕುಡಿದುಕೊಂಡು ಹೀಗೇ ಇರುತ್ತೀನಿ.


[1] ಕೆಲವು ಅನುವಾದಗಳಲ್ಲಿ ಈ ಚಕ್ರಕ್ಕೆ ಮುವ್ವತ್ತು ಹಳಿಗಳು ಎಂದು ನಮೂದಾಗಿದೆ. ವಿಧ್ಯುಕ್ತಕ್ರಿಯೆಯಲ್ಲಿ ಬಳಸಲಾಗುವ ರಥದ ಚಕ್ರ ಇದಿರಬಹುದು. ರಥದ ವರ್ಣನೆ ಹೀಗಿದೆ: ‘ರಥದ ಚೌಕಾಕಾರದ ತಳಭಾಗ,  ಭೂಮಿ; ಪೀಠದ ವೃತ್ತಾಕಾರದ ಆಸನ, ಸ್ವರ್ಗ. ೩೦ ಹಳಿಗಳನ್ನು ಪಡೆದ ಚಕ್ರಗಳು ಸೂರ್ಯ ಚಂದ್ರರು; ಪೀಠದ ೨೮ ಕಮಾನುಗಳು ನಕ್ಷತ್ರಗಳು. ಅಲ್ಲದೆ ೩೦ ದಿನಗಳಿಗೊಮ್ಮೆ ಸೂರ್ಯಚಂದ್ರರು ಸುತ್ತಿ ಸಂಧಿಸುತ್ತಾರೆಂಬುದು ಈ ಸಂಖ್ಯೆಯ ವಿಶೇಷವಿರಬಹುದು.

[2] ಜುವಾಂಗ್‌ತ್ಸೆಯ ವ್ಯಾಖ್ಯಾನ ಹೀಗಿದೆ: ‘ಏನೂ ಇಲ್ಲದ ಆದಿಕಾಲ ಒಂದಿತ್ತು. ಹೆಸರಿಲ್ಲದ ಏನೋ ಒಂದು ಈ ಶೂನ್ಯದಲ್ಲಿ ಸಂಭವಿಸಿತು. ಇದರಿಂದ ‘ಒಂದು’ಹುಟ್ಟಿಕೊಂಡಿತು. ಈ ‘ಒಂದು’ವಿಗೆ ಆಕಾರವಿರಲಿಲ್ಲ. ಸಕಲವೂ ಸಂಭವಿಸುವ ಈ ಆಕಾರವನ್ನು ‘ದ’ ಎನ್ನುತ್ತಾರೆ. ಈ ‘ದ’ ದಾವ್‌ನ ‘ಗುಣ’. ಸಕಲ ವಸ್ತುಗಳು ತಮ್ಮ ರೂಪಧಾರಣೆಯನ್ನು ಪಡೆಯುವುದಕ್ಕಿಂತ ಮುಂಚೆಯೇ ‘ಯಾಂಗ್‌’ (ಧನಾತ್ಮಕ ) ಮತ್ತು ‘ಯಿನ್‌’ (ಋಣಾತ್ಮಕ) ತತ್ವಗಳು ದ್ವಂದ್ವದಲ್ಲಿ ಇದ್ದುಬಿಟ್ಟಿರುತ್ತವೆ. ಇವು ಅವಳಿ-ಜವಳಿಗಳಂತೆ ಇರುತ್ತವೆ. ಇವು ಚಲಿಸಲು ಪ್ರಾರಂಭಿಸಿದೊಡನೆಯೇ ಸಕಲವೂ ಸಂಭವಿಸಲು ಪ್ರಾರಂಭವಾಗುತ್ತದೆ . ಹೀಗೆ ಜೀವನದ ನಿಯಮಕ್ಕೆ ಅನುಗುಣವಾಗಿ ಸಕಲವೂ ಸಂಭವಿಸಿದಾಗ ನಾವು ಅದನ್ನು ‘ಆಕಾರಗೊಳ್ಳುವುದು’ ಎನ್ನುತ್ತೇವೆ. ಒಂದು ವಸ್ತುವಿನ ಗುಣ ನಿಂತಿರುವುದು ಅದರದೇ ಆದ ಚೈತನ್ಯವು ಅದರ ಶರೀರದಲ್ಲಿ ಹೇಗೆ ಕಾಪಾಡಲ್ಪಡುತ್ತದೆ ಎನ್ನುವುದರ ಮೇಲೆ. ಒಂದು ವಸ್ತುವಿ ನ ಸ್ವಭಾವ ಪರಿಷ್ಕಾರಗೊಂಡಾಗ, ಅದು ತನ್ನ‘ದ’ ತನಕ್ಕೆ ವಾಪಾಸ್ಸಾಗುತ್ತದೆ. ‘ದ’ ಹೀಗೆ ಪೂರ್ಣಗೊಂಡಾಗ ಸಕಲ ವಸ್ತುಗಳೂ ತಮ್ಮ ಮೂಲದಲ್ಲಿ ಏಕಗೊಳ್ಳುತ್ತವೆ. ಹೀಗೆ ಏಕಾವಾದಾಗ ತಾಟಸ್ಥ್ಯ ಉಂಟಾಗುತ್ತದೆ. ಈ ತಾಟಸ್ಥ್ಯ ಸದಾ ತೆರವಿನಲ್ಲಿ ಇರುವ ಸ್ಥಿತಿ.  ಎಲ್ಲ ಜೀವಿಗಳೂ ಈ ಪರಿಯಾಗಿ ತಟಸ್ಥರಾದಾಗ ಸತತವಾಗಿ ನಿರಾಕಾರಗೊಳ್ಳುತ್ತ ಅಪ್ರಜ್ಞೆಯಲ್ಲಿರುವಂತೆ ತೋರುತ್ತವೆ. ಇದೇ ಸಾಮರಸ್ಯದ ಅನುಭಾವ ಸ್ಥಿತಿ.

[3] ಅಧ್ಯಾಯ ೧೭, ೧೮, ೧೯ನ್ನು ಒಂದು ಘಟಕವೆಂದು ಓದಿಕೊಳ್ಳಬಹುದು. ಜುವಾಂಗ್‌-ತ್ಸೆಯು ನಾಗರಿಕತೆಯ ಹರಿಕಾರನೂ ಗುರುವೂ ಆದ ಕನ್‌ಫ್ಯೂಶಿಯಸ್‌ನನ್ನು ಟೀಕಿಸಲು ಈ ಅಧ್ಯಾಯಗಳನ್ನು ಬಳಸುತ್ತಾನೆ. ಬಣ್ಣ ಹಾಕದ ರೇಷ್ಮೆ, ಕೊರೆಯದ ಮರದ ದಿಮ್ಮಿ-ಇವು ಲಾವ್-ತ್ಸೆಗೆ ಸಹಜತೆಯನ್ನು ಸೂಚಿಸುತ್ತವೆ. ಅಧ್ಯಾಯ ೨೮ನ್ನೂ ನೋಡಿ.

[4] ಕನ್‌ಫ್ಯೂಶಿಯಸ್‌ಪ್ರತೀತವಾದ ನಯ, ನಾಜೂಕುಗಳಿಂದ ಕೂಡಿದ ಸಭ್ಯ ವರ್ತನೆಯ ನಿರಾಕರಣೆ ಇಲ್ಲಿದೆ. ಉದಾಹರಣೆಗೆ: ಹುಡುಗ ‘ಹೌದು’ ಎನ್ನುವಾಗ ದಿಟ್ಟವಾಗಿ ಹೇಳತಕ್ಕದ್ದು; ಆದರೆ ಹುಡುಗಿ ಸಂಕೋಚದಿಂದ ಹೇಳತಕ್ಕದ್ದು.