೨೧

ತನ್ನ ಎಲ್ಲ ಚಲನವಲನದಲ್ಲಿ ಋಷಿ
ಪಥಮಗ್ನ, ಪಥೇವ ಮಗ್ನ;
ಬಣ್ಣಿಸಲು ಹೋದರೆ ಪಥ
ಅಗ್ರಾಹ್ಯ, ಅಸ್ಪಷ್ಟ.
ಅಸ್ಪಷ್ಟ ಅಗ್ರಾಹ್ಯವೆಂದರೂ
ಪಥದಲ್ಲೊಂದು ಬಿಂಬವಿದೆ;
ಅಗ್ರಾಹ್ಯ ಅಸ್ಪಷ್ಟವೆಂದರೂ
ಪಥದಲ್ಲೊಂದು ಬಿಂಬವಿದೆ;
ಅಗ್ರಾಹ್ಯ ಅಸ್ಪಷ್ಟವೆಂದರೂ
ಪಥದಲ್ಲೊಂದು ತಥ್ಯವಿದೆ.
ನಿಗೂಢ, ಕಾಳ ಎನ್ನಿಸಿದರೂ
ಅದರಲ್ಲೊಂದು ಸಾರವಿದೆ.
ಈ ಸಾರ ಸಾಚ,
ಪ್ರಮಾಣ ಲಭ್ಯ.
ಪ್ರತ್ಯಕ್ಷಗೊಳ್ಳುವ ಅದರ ನಾಮರೂಪಗಳಿಗೆ
ಮೊದಲಿಲ್ಲ ಕೊನೆಯಿಲ್ಲ;
ಈ ನಾಮ ರೂಪಗಳಲ್ಲಿ ತಂದೆಯ ಶೋಭೆ.

ಕಾಣುವುದು ಹೇಗೆ ಈ ಶೋಭೆ?
ಹೀಗೆ-

೨೨

ಉಪಾಯದಿಂದಲೂ ಕೌಶಲ್ಯದಿಂದಲೂ ಮನುಷ್ಯ ಜನ್ಮ
ಇಡಿಯಾಗುವುದು.
ಖಾಲಿಯಾಗಿದ್ದರೆ ತುಂಬುವುದು
ಬಾಗಿದ್ದರೆ ನೇರವಾಗುವುದು
ಸತ್ತರೆ ಹುಟ್ಟುವುದು
ಮಿತಿಯಿಂದಾಗಿ ಗಳಿಸುವುದು
ಅತಿಯಿಂದಾಗಿ ನಶಿಸುವುದು

ಆದ್ದರಿಂದ ಋಷಿಗಳು ದಾವ್‌ನಲ್ಲಿ ಸಮರಸವಾಗಿ
ಲೋಕಕ್ಕೆ ದೃಷ್ಟಾಂತವಾಗುತ್ತಾರೆ

ತೋರುಗಾಣಿಗಳಲ್ಲದ್ದರಿಂದಲೇ ಅವರು ತೋರುವುದು
ಸಮರ್ಥಿಸಿಕೊಳ್ಳದ್ದರಿಂದಲೇ ಅವರು ಸಮರ್ಥರಾಗುವುದು
ಕೊಚ್ಚಿಕೊಳ್ಳದ್ದರಿಂದಲೇ ಅವರು ಕೀರ್ತಿವಂತರಾಗುವುದು
ನಿಗರ್ವಿಗಳಾದ್ದರಿಂದಲೇ ಅವರು ತೇಜಸ್ವಿಗಳಾಗುವುದು
ಗೆಲ್ಲುವ ಇಚ್ಛೆಯಿಲ್ಲದ್ದರಿಂದಲೇ ಅವರು ಅಜೇಯರಾಗುವುದು

ಉಪಾಯದಿಂದಲೂ ತಿಳಿದ ಕೌಶಲ್ಯದಿಂದಲೂ ಮನುಷ್ಯ ಇಡಿಯಾಗುತ್ತಾನೆ.

ಎನ್ನುವ ಪುರಾತನ ಸೂತ್ರ ಹೇಗೆ ಪೊಳ್ಳಾದೀತು?
ಸಂಪೂರ್ಣವಿದ್ದಾಗಲೂ
ಸತ್ಯಕ್ಕೆ ಉಪಾಯದ ಅಗತ್ಯ ಇರುತ್ತದೆ.

೨೩

ಮಿತವಾಗಿ ಮಾತಾಡುವುದು
ಶೀಲವಂತನ ಗುಣ.
ಗಾಳಿ ಚಂಡಿ ಹಿಡಿಯುವುದು ಇದೆ,
ಆದರೆ ಇಡೀ ಬೆಳಿಗ್ಗೆ ಹಿಡಿದಿರುವುದಿಲ್ಲ.
ಮಳೆ ಜಡಿದು ಹುಯ್ಯುವುದು ಇದೆ,
ಆದರೆ ಇಡೀ ದಿನ ಹುಯ್ಯುತ್ತಲೇ ಇರುವುದಿಲ್ಲ.
ದ್ಯಾವಾಪೃಥಿವಿಗಳಿಗೇ ಇಂಥ ಮಿತಿ ಇರೋವಾಗ
ಮನುಷ್ಯನದೇನು ಪ್ರತಿಷ್ಠೆ?

ದಾವ್‌ಅಂದರೆ ಧರ್ಮ:
ಸೋತಾಗಲು ಅಷ್ಟೆ
ಗೆದ್ದಾಗಲು ಅಷ್ಟೆ
ಅದರಲ್ಲಿ ನೆಲಸಿದಾತ ಸಮಚಿತ್ತ.

ದಾವ್‌ಅಂದರೆ ಪಥ:
ಹಿಡಿದರೆ ಉಂಟು,
ಬಿಟ್ಟರೆ ಇಲ್ಲ,
ಅದರಲ್ಲಿ ನಡೆಯುವಾತ ಸಮದರ್ಶಿ.

೨೪

ತುದಿಗಾಲಲ್ಲಿ ನಿಂತಿರುವಾತ
ಅಭದ್ರ.
ಮುನ್ನುಗ್ಗುವ ಆತುರಿ
ಮುಂಗಸಿ.
ಹೊಳೆಯಬೇಕೆನ್ನುವ ವಿಲಾಸಿ
ಅವಜ್ಞ.
ತಾನು ಯಾರೂಂತ ವಿವರಿಸಿಕೊಳ್ಳುವಾತ
ಅಜ್ಞ.
ಅಧಕಾರ ಚಲಾಯಿಸುವಾತ
ಅದೃಢ.
ತನ್ನ ಪ್ರತಿಷ್ಠಗೇ ಆತುಕೊಂಡ ವ್ಯಾಮೋಹಿ
ವಿಫಲಿ.

ಪಥದ ದೃಷ್ಟಿಯಿಂದ ಎಲ್ಲ ಅತಿಗಳು
ಅಜೀರ್ಣ ಆಮಶಂಕೆಯಂತೆ-
ಹೇಸಿಗೆ.

೨೫

ದ್ಯಾವಾ ಪೃಥಿವಿಗಳು ಹುಟ್ಟುವುದಕ್ಕೆ ಮುಂಚೆ
ನಿರಾಕಾರವೂ ಅಖಂಡವೂ ಆದ ‘ಒಂದು’ ಇತ್ತು.
ಅದು ಕೇವಲ ಇತ್ತು:
ನಿರಂಬಳವಾಗಿ, ಅನಂತವಾಗಿ.

ಬದಲಾಗದೆ ಸದಾ ಇರುವ ಅದು
ವಿಶ್ವದ ತಾಯಿ.
ಹೆಸರು ಅರಿಯದ್ದರಿಂದ ಅದನ್ನ ದಾವ್‌ಅನ್ನುವೆ.
ಹಾಗೆ ಅಂದಮೇಲೆ ಅದನ್ನ ಸ್ಪಷ್ಟ ಮಾಡಲೆಂದು ‘ಘನ’ ಅನ್ನುವೆ.
ಘನವಾದ್ದರಿಂದ
ಒಳಗೂ ಹೊರಗೂ ಸರ್ವಸ್ವದಲ್ಲೂ
ಅದು ಹರಿಯುತ್ತದೆ;
ಹೀಗೆ ಹರಿಯುತ್ತಾ ಹೋಗುವುದು
ಸಕಲ ವಸ್ತುಗಳ ಸೃಷ್ಟಿ ಮೂಲಕ್ಕೆ
ವಾಪಸ್ಸಾಗುತ್ತಲೇ ಇರುತ್ತದೆ.

ಆದ್ದರಿಂದ ದಾವ್‌ಘನವಾದದ್ದು
ದಿವಿ ಘನವಾದದ್ದು
ಭೂಮಿ ಘನವಾದದ್ದು
ದೊರೆತನ ಘನವಾದದ್ದು
– ಇವೇ ನಾಲ್ಕಲು ದೊಡ್ಡ ಶಕ್ತಿಗಳು.

ಮನುಷ್ಯ ಪೃಥಿವಿಯನ್ನ ಅನುಸರಿಸುತ್ತಾನೆ.
ಪೃಥಿವಿ ದಿವಿಯನ್ನು ಅನುಸರಿಸುತ್ತದೆ.
ದಿವಿ ದಾವ್‌ನನ್ನು ಅನುಸರಿಸುತ್ತದೆ.
ದಾವ್‌ಕೇವಲ ಇರುತ್ತದೆ.

೨೬

ಲಘುವಿನ ಬೇರು ಗುರು
ಆವೇಗದ್ದು ಸ್ವಾಸ್ಥ್ಯ.
ಆದ್ದರಿಂದ ಅನುಸರಣೆಗೆ ಅರ್ಹರಾದ ಜನ
ತಮ್ಮ ಗಂಟುಮೂಟೆ ಮೇಲೆ ನಿಗಾ ಇಟ್ಟೇ
ಸದಾ ಸಂಚರಿಸುವುದು,
ಸುಖದಲ್ಲಿದ್ದಂತೆ ಕಂಡಾಗಲೂ
ಪರಮಾರ್ಥಿಗಳಾಗಿರುವುದು.

ಸಹಸ್ರಾರು ರಥಗಳ ಅಧಿಪತಿಯಾದ ದೇಶದ ದೊರೆ
ನಾಡಿನಮೇಲೆ ನಿಗಾ ಇಡದೆ ವಿಲಾಸಿಯಾಗಿ ಬಿಟ್ಟರೆ
ತನ್ನ ಭೃತ್ಯರಿಗೆ ಹಗುರಾಗಿ ಬಿಡುತ್ತಾನೆ;
ವಾಲಾಡುತ್ತ ಇದ್ದವನ ಬೇರು ಊರಲ್ಲ,
ಆವೇಗದಲ್ಲಿ ಚಡಪಡಿಸುತ್ತ ಇದ್ದವನ ಹಿರಿತನ ಉಳಿಯದು.

೨೭

ನುರಿತ ಯಾತ್ರಿಕ ಜಾಡಿನ ಹಂಗಿಲ್ಲದೆ ಸಂಚರಿಸುತ್ತಾನೆ.
ಮತುಬಲ್ಲವನ ವಾಕ್‌ಸಿದ್ಧಿ ಹೊಗಳಿಸಿಕೊಂಡು ಪಡೆದದ್ದಲ್ಲ ,
ಕಾವಲುಗಾರ ಚಾಣಾಕ್ಷನಿದ್ದರೆ,  ಅಗಳಿ ಇಲ್ಲದೆಯೂ ಮನೆ ಭದ್ರ,
ಹಗ್ಗ ಹೇಗಿದ್ದರೂ ಪ್ರವೀಣ ಹಾಕಿದ್ದೇ ಕಗ್ಗಂಟು.

ರಾಜರ್ಷಿ ಕೂಡಾ ಹೀಗೇ ಮಹಾಕುಶಲಿ.
ಅಂಥವನು ಇಂಥವನು ಎಂದು ಭೇದ ಮಾಡದೆ
ಯಾವ ಕಚ್ಚಾ ಮಾಲನ್ನೂ ಅಸಡ್ಡೆಯಿಂದ ಕಾಣದೆ
ಸಕಲದ ಯೋಗಕ್ಷೇಮದಲ್ಲಿ ಅವನು ಮಗ್ನ
– ಇದನ್ನೇ ವಿವೇಚನಾ ಶಕ್ತಿ ಅನ್ನುವುದು.

ಒಳ್ಳೆ ಮನುಷ್ಯ ಅಂದರೆ ಏನು?
ಕೆಟ್ಟ ಮನುಷ್ಯನ ಶಿಕ್ಷಕ.
ಕೆಟ್ಟ ಮನುಷ್ಯ ಅಂದರೆ ಏನು?
ಒಳ್ಳೆ ಮನುಷ್ಯನ ಕಾರ್ಯ.

ಗುರುವನ್ನು ನಿರ್ಲಕ್ಷಿಸುವುದು,
ಎಂಥ ವಸ್ತುವನ್ನಾಗಲೀ ಅಸಡ್ಡೆಯಿಂದ ಕಾಣುವುದು,
ಜಾಣತನವಾಗಿ ಕಂಡರೂ ಅವಿವೇಕಿಯ ಲಕ್ಷಣ.

ಈ ಗುಟ್ಟನ್ನು ತಿಳಿದಿರು.

೨೮

ಗಂಡಸನ್ನ ತಿಳಿ

[1]
ಆದರೆ ಹೆಣ್ಣಿನಲ್ಲಿ ನೆಲಸು:
ಆಗ ನೀನು ಪೃಥಿವಿಯ ಕಮರಿಯಾಗುತ್ತೀಯ.
ಹೀಗೆ ಸ್ವೀಕಾರದ ಕಮರಿ ನೀನು ಆದಾಗ
ದಾವ್‌ನಿನ್ನ ಬಿಟ್ಟುಕೊಡುವುದಿಲ್ಲ
ನೀನೊಂದು ಮಗುವಿನಂತೆ ಇರುತ್ತೀಯ.

ಬಿಳಿಯನ್ನ ತಿಳಿ
ಆದರೆ ಕಪ್ಪಲ್ಲಿ ನೆಲಸು:
ಪ್ರಪಂಚಕ್ಕೆ ದೃಷ್ಟಾಂತವಾಗು,
ಪ್ರಪಂಚಕ್ಕೆ ನೀನು ದೃಷ್ಟಾಂತವಾದರೆ
ದಾವ್‌ನಿನ್ನಲ್ಲಿ ದೃಢವಾಗುತ್ತದೆ.
ಆಗ ನೀನು ಮಾಡಲಾಗದ್ದು ಇರುವುದಿಲ್ಲ.

ಮೇಲನ್ನ ತಿಳಿ
ಆದರೆ ಕ್ಷುದ್ರದಲ್ಲಿ ನೆಲಸು:
ಪ್ರಪಂಚವನ್ನು ಅದು ಇರುವಂತೆ ಒಪ್ಪಿಕೊ
ಕಣಿವೆಯಂತೆ ಹೀಗೆ ಸ್ವೀಕರಿಸಿದರೆ
ದಾವ್‌ನಿನ್ನಲ್ಲಿ ಉಜ್ವಲವಾಗುತ್ತದೆ.
ಕೊರೆಯದ ದಿಮ್ಮಿಯಂತೆ ಇದ್ದ ಆದ್ಯಸ್ಥಿತಿಯನ್ನು ಮತ್ತೆ ನೀನು
ತಲುಪುತ್ತೀಯ.
ಘನವಾದ ದಿಮ್ಮಿಯಿಂದ ದಿನ ಬಳಕೆಯ ಪಾತ್ರೆಪರಟಗಳು ಒದಗಿ
ಆಕರಗೊಳ್ಳುತ್ತವೆ,
ಆಕೃತಿಗಳನ್ನು ಕೊರೆಯುವ ಕುಶಲಿ
ಸಿಗಿದು ಸೀಳುವುದಿಲ್ಲ.
ನಮ್ಮ ಗುರುವಿನ ಒಡೆತನದ ಗ್ರಹಿಕೆ ಮತ್ತು ನಿರ್ವಹಣೆ ಕೂಡ
ಹೀಗೆ.

೨೯

ಸಕಲ ಸೃಷ್ಟಿಯನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡು ತಿದ್ದುವುದಕ್ಕೆ
ಹವಣಿಸುವವನು ಮಣ್ಣು ಮುಕ್ಕುತ್ತಾನೆ-ಅಷ್ಟೆ.

ಪ್ರಪಂಚ ಪವಿತ್ರವಾದದ್ದು;
ಅದಕ್ಕೆ ಊರ್ಜಿತವೂ ಇಲ್ಲ, ಅವನತಿಯೂ ಇಲ್ಲ.

ಆದ್ದರಿಂದ ರಾಜ ಋಷಿ ಅದನ್ನ ತಿದ್ದಲು ಯತ್ನಿಸಿ ಕೆಡಿಸುವುದಿಲ್ಲ,
ದೋಚಲಿಕ್ಕೆ ಹೋಗಿ ಕಳೆದುಕೊಳ್ಳುವುದಿಲ್ಲ.

ಮುಂದಿರೋದು ಕೆಲವಾದರೆ, ಹಿಂದಿರೋದು ಕೆಲವು;
ಏಳೋವು ಕೆಲವಾದರೆ, ಬೀಳೋವು ಕೆಲವು;
ಹುರುಪಿನೋವು ಕೆಲವಾದರೆ, ಮೆತ್ತಗಿರೋವು ಕೆಲವು;
ಕೆಲವು ಸಮಯ ಅವೇ ಇವಾಗಿ ಅದಲು ಬದಲು.

ಆದ್ದರಿಂದ ಋಷಿ ದುಂದು ಮಾಡುವುದಿಲ್ಲ,
ಹದ್ದು ಮೀರುವುದಿಲ್ಲ,
ಅತಿಗಾಮಿಯಾಗಿ ಉಬ್ಬಿಕೊಳ್ಳುವುದಿಲ್ಲ,
ಬೀಗುವುದಿಲ್ಲ.

೩೦

ದಾವ್‌ನೆರವಿನಲ್ಲಿ ಜನರನ್ನು ಆಳುವಾತ
ಅತಿಯಾಗಿ ಆಗ್ರಹ ಮಾಡುವುದಕ್ಕೆ ಹೋಗುವುದಿಲ್ಲ,
ಹತ್ತಿಕ್ಕಬೇಕೂಂತ ಶಸ್ತ್ರ ಬಳಸುವುದಿಲ್ಲ,
ಅವನಿಗೆ ಗೊತ್ತು:
ಹಿಂಸೆ ಪುಟಿದು ರಾಚುತ್ತದೆ,
ಸೈನ್ಯ ಬೀಡುಬಿಟ್ಟಲ್ಲಿ ಮುಳ್ಳು ಪೊದೆ ಬೆಳೆದುಕೊಳ್ಳುತ್ತದೆ.

ಒಳ್ಳೆಯ ದಂಡನಾಯಕ  ಅಗತ್ಯವಿದ್ದಷ್ಟು ಮಾತ್ರ ದಂಡಿಸುತ್ತಾನೆ,
ಅನ್ಯ ಮಾರ್ಗವಿಲ್ಲಾಂತ ದೃಢವಾಗಿರುತ್ತಾನೆ,
ಆದರೆ ಹಮ್ಮಿನಲ್ಲಿ ಸೊಕ್ಕುವುದಿಲ್ಲ,
ಗೆದ್ದೇಂತ ಕೊಚ್ಚಿಕೊಳ್ಳುವುದಿಲ್ಲ.

ಬಲ ಪ್ರಯೋಗವಿಲ್ಲದಂತೆ
ಆಗಲೇಬೇಕಾದಷ್ಟು ಮಾತ್ರ ಆಗೋದು
ಹೀಗೆ.


[1] ಮೂಲದಲ್ಲಿ ಗಂಡು ಮತ್ತು ಹೆಣ್ಣು ‘ಹುಂಜ’ ಮತ್ತು ‘ಹೇಂಟೆ’ಗಳಿಂದ ಸೂಚಿತವಾಗಿವೆ. ಯಿನ್‌ = ಹೆಣ್ಣು = ಹೆಂಟೆ = ತಟಸ್ಥ = ತಗ್ಗಿಪಡೆಯುವುದು = ಸ್ವೀಕಾರದಕಣಿವೆ = ಕ್ಷುದ್ರ = ಕಪ್ಪು: ಇದೊಂದು ಭಾವ-ಅರ್ಥ ಸರಣಿಯಾದರೆ, ಯಾಂಗ್‌ನ ಶಕ್ತಿಪಾತವನ್ನು ಸೋರಿ ಹೋಗದಂತೆ ಉಳಿಸಿಕೊಳ್ಳುವ ಉಪಾಯವನ್ನು ಈ ಅರ್ಥಸರಣಿ ಸಂಕೇತಿಸುತ್ತದೆ. ಧಾರಾಕಾರವಾಗಿ ಸುರಿಯುವ ಮಳೆ ‘ಯಾಂಗ್‌’ ಆದರೆ, ಈ ಮಳೆಯನ್ನು ತಂಪಾಗಿ ಉಳಿಸಿಕೊಳ್ಳುವ ಧಾರಣಶಕ್ತಿಯಿರುವುದು ‘ಯಿನ್‌’ಗೆ,  ಅಂದರೆ ಕಣಿವೆಗೆ; ಅಪಾರ ಸಾಧ್ಯತೆಗಳ  ಮಗುವಿನ ಸ್ಥಿತಿಯೂ ಅದೇ.

ಮರದ ‘ದಿಮ್ಮಿ’ ಇದನ್ನು ಸಂಕೇತಿಸುತ್ತದೆ. ಏನಾದರೂ ಆಗಬಲ್ಲ ಸ್ಥಿತಿ ದಿಮ್ಮಿಯದು; ವಿವಿಧ ಪಾತ್ರೆಗಳು ದಿಮ್ಮಿಯನ್ನು ಕೊರೆದು ಆಗಿಬಿಟ್ಟವು ಮಾತ್ರ. ಪಾತ್ರೆಯಾದ ಮೇಲೆ ಅದರದೇ ಉಪಯೋಗ ಅದಕ್ಕೆ . ಅದರದೇ ರೂಪ ಅದಕ್ಕೆ.