೩೧

ಶಸ್ತ್ರಗಳು ಅಪಶಕುನದ ಅಸ್ತ್ರಗಳು
ಸಜ್ಜನ ಅವಕ್ಕೆ ಹೇಸುತ್ತಾನೆ.

ದಾವ್‌ಪಥದಲ್ಲಿರುವವನು ಶಸ್ತ್ರಗಳು ಇದ್ದಲ್ಲಿ ಇರುವುದೇ ಇಲ್ಲ.
ಹಿರೀಕರು ಶುಭಕಾರ್ಯದಲ್ಲಿ ಮನೆಯಲ್ಲಿ ಇದ್ದಾಗ ಎಡಗಡೆ ಕೂರುತ್ತಾರೆ

ಅದು ಮರ್ಯಾದೆ ಎಂದು.
ಆದರೆ ಶಸ್ತ್ರ ಹಿಡಿಯಬೇಕಾಗಿ ಬಂದರೆ
ಬಲಗಡೆ ನಿಲ್ಲುತ್ತಾರೆ.
ಅದೇ ಮರ್ಯಾದೆ ಎಂದು.

ನಿರ್ವಾಹವಿಲ್ಲದೆ ಅವರು ಶಸ್ತ್ರ ಹಿಡಿಯೋದು;
ಗೆಲ್ಲುವುದು ಅವರಿಗೆ ಶೋಭೆಯಲ್ಲ.
ಶಸ್ತ್ರಾಸ್ತ್ರಗಳಲ್ಲಿ ಸೊಬಗು ತೋರಿಬಿಟ್ಟರೆ
ಶೋಭೆಗಾಗಿ ಕೊಲ್ಲುವುದು ಶುರುವಾಗುತ್ತದೆ.

ಸಂಭ್ರಮದಲ್ಲಿ ಭಾಗವಹಿಸಿದಾಗ ಎಡಗಡೆ ಇರುವುದು
ಮರ್ಯಾದೆ ,
ದುಃಖದಲ್ಲಿ ಭಾಗಿಯಾದಾಗ ಬಲಗಡೆ ಇರುವುದು
ಮರ್ಯಾದೆ.

ಆದ್ದರಿಂದ ದಂಡನಾಯಕರಲ್ಲಿ ಮೇಲಿನವ ಬಲಗಡೆ ಇರುವುದು,
ಕೆಲಗಿನವ ಎಡಗಡೆ ಇರುವುದು
ಶವಸಂಸ್ಕಾರದ ನಡವಳಿಕೆ.

ಅಸಂಖ್ಯ ಜನ ಯುದ್ಧದಲ್ಲಿ ಹತರಾದಾಗ
ಗೆದ್ದವನು ಸಂಭ್ರಮಿಸುವುದಿಲ್ಲ;
ಶವಸಂಸ್ಕಾರದಲ್ಲಿ ಪಾಲುಗೊಳ್ಳುವಂತೆ
ಖಿನ್ನನಾಗಿ ತಲೆಬಾಗಿಸಿ,
ಬಲಗಡೆ ನಿಲ್ಲುತ್ತಾನೆ.

೩೨

ಶಾಶ್ವತವಾದ ದಾವ್‌ಗೆ ಹೆಸರಿಲ್ಲ,
ತನ್ನ ಆದಿಯ ಕೊರೆಯದ ದಿಮ್ಮಿಯ ಸಹಜತೆಯಲ್ಲಿ ದಾವ್‌
ಅಣುಸದೃಶವಾದದ್ದು ,
ಆದರೆ, ಇಡೀ ಜಗತ್ತಿನಲ್ಲಿ ಅದಕ್ಕೆ ಸರಿದೂಗುವ ಇನ್ನೊಂದಿಲ್ಲ.

ಆಳುವ ದೊರೆ ಅದಕ್ಕೆ ಅಧೀನನಾದರೆ
ಸಕಲರೂ ಅಂತ ಆಶ್ರಯದಲ್ಲಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ,
ಭೂಮ್ಯಾಕಾಶಗಳು   ಅದರ ಪರಾಮರಿಕೆಯಲ್ಲಿ
ಸಂಯೋಗವಾಗಿ,
ನರಮನುಷ್ಯರ ಹಂಗಿಲ್ಲದೆ ಸಮಭಾವದಿಂದ
ಎಲ್ಲೆಲ್ಲೂ ಶುಭ್ರ ಇಬ್ಬನಿಯನ್ನು ಹನಿಯುತ್ತವೆ.

ಆದರೆ ವ್ಯವಸ್ಥೆಯ ಸಂಭಾವ್ಯತೆಗಾಗಿ ಹೆಸರುಗಳು ಹುಟ್ಟಿಕೊಳ್ಳುತ್ತವೆ,
ಕ್ರಮೇಣ ಹೆಸರುಗಳೇ ಗಣ್ಯವಾಗಿಬಿಡುತ್ತವೆ,
ಆಗ ಇಷ್ಟು ಸಾಕು ಎನ್ನಿಸಬೇಕು,ಅನ್ನಿಸಿದರೆ ನೀನು ಬಚಾವು.

ಕಣಿವೆಯಲ್ಲಿ ಹರಿಯುವ ತೊರೆಗಳಿಗೂ, ತಳದ ಸಮುದ್ರಕ್ಕೂ
ಇರುವ ಸಂಬಂಧದಂತೆ
ದಾವ್‌ಗೂ ವಿಶ್ವಕ್ಕೂ ಇರುವ ಸಂಬಂಧ.

೩೩

ತನಗೆ ಹೊರತಾದ್ದನ್ನು ತಿಳಿಯುವುದು ಜಾಣತನವಾದರೆ
ತನ್ನನ್ನೆ ಅರಿತುಕೊಳ್ಳಬಲ್ಲಾತ ವಿವೇಕಿ,
ಅನ್ಯರನ್ನ ಹತ್ತಿಕ್ಕುವುದು ತಾಕತ್ತು ಆದರೆ
ತನ್ನನ್ನೆ ನಿಗ್ರಹಿಸಿಕೊಳ್ಳುವುದು ಶಕ್ತಿ.

ಮದದಲ್ಲಿ ಮುನ್ನುಗ್ಗುವುದು ಛಲವಂತಿಕೆಯಾದರೆ,
ಎಷ್ಟು ಸಾಕು ಗೊತ್ತಾಗುವವನು ಸಿರಿವಂತ.
ಸ್ವಸ್ಥಳದಲ್ಲಿ ನೆಲಸಿರುವುದು ಸ್ವಾಸ್ಥ್ಯವಾದರೆ
ಸತ್ತು ಸಲ್ಲುವಾತ ಚಿರಾಯು.

೩೪

ಘನವಾದ ದಾವ್‌ಎಲ್ಲೆಲ್ಲೂ ಹರಿಯುತ್ತದೆ.
ಸಕಲವೂ ಅದರಿಂದ ಹುಟ್ಟುತ್ತದೆ.
ಆದರೆ ಅದು ಏನನ್ನೂ ಹುಟ್ಟುಹಾಕುವುದಿಲ್ಲ.

ತನ್ನ ಕೃತಿಯಲ್ಲಿ ತನ್ನನ್ನೆ ಸುರಿಸಿಕೊಳ್ಳುತ್ತದೆ.
ಆದರೆ ಇದು ತನ್ನದು ಅಂತ ಅಂದುಕೊಳ್ಳುವುದಿಲ್ಲ.

ಅಪರಂಪಾರದ ಆರೈಕೆ ಮಾಡುತ್ತದೆ, ಆದರೆ
ಯಾವುದಕ್ಕೂ ಆತುಕೊಳ್ಳುವುದಿಲ್ಲ.

ಹೀಗೆ ಸಕಲದ ಅಂತರಂಗದಲ್ಲಿ ತನ್ನನ್ನು ಅದು
ಕಳೆದುಕೊಳ್ಳುವುದರಿಂದ
ದಾವ್‌ದೀನ, ನಮ್ರ.
ಆದರೆ ಸಕಲವೂ ಅದರಲ್ಲಿ ಅಂತರ್ಗತವಾದದ್ದರಿಂದ
ಅದೊಂದೇ ಶಾಶ್ವತವಾದದ್ದರಿಂದ
ಅದು ಮಹಾಘನವಂತ

ಅದಕ್ಕೆ ತನ್ನ ಘನತೆ ತಿಳಿಯದು ಎಂದೇ
ಅದು ನಿಜವಾದ ಘನ.

೩೫

ಅದೃಶ್ಯ ದಾವ್‌ನನ್ನು ತನ್ನ ತೋಳಲ್ಲಿ ಅಪ್ಪಿಕೊಂಡವನನ್ನು
ಇಡೀ ಪ್ರಪಂಚ ಆದರಿಸುತ್ತದೆ;
ಅಲ್ಲಿ ಬಿಡುವು ಇದೆ, ಅಭಯವಿದೆ, ಶಾಂತಿಯಿದೆ
ನೆಮ್ಮದಿಯಿದೆ.

ಸಂಗೀತ, ರುಚಿಯಾದ ಪದಾರ್ಥಗಳ  ವಾಸನೆ
ದಾರಿಹೋಕರನ್ನೂ ಸುಖಿಸುವಂತೆ ಕರೆದು ನಿಲ್ಲಿಸುತ್ತದೆ;
ಆದರೆ ದಾವ್‌ಬಗ್ಗೆ ಕೊಂಡಾಡಿ ಮಾತಾಡುವುದು
ರುಚಿಹೀನ ರಗಳೆ ಎನ್ನಿಸುತ್ತದೆ.
ಅದನ್ನು ಕಾಣಲು ಹೋದರೆ, ಕಾಣಿಸುವಷ್ಟು ಇಲ್ಲ;
ಕೇಳಿಸಿಕೊಳ್ಳೋಣ ಅಂದೆ ಕೇಳಿಸುವಷ್ಟು ಇಲ್ಲ;
ಆದರೆ ಅದನ್ನು ಬಳಸಲು ಶುರು ಮಾಡಿದಾಗ ಮಾತ್ರ
ಅದು ಅಕ್ಷಯ.

೩೬

ಕುಗ್ಗಿಸಬೇಕೆಂದರೆ
ಮೊದಲು ಹಿಗ್ಗಿಸಬೇಕು;
ಗುಣಮಾಡಿಕೊಳ್ಳಬೇಕೆಂದರೆ
ಉಲ್ಬಣವಾಗಲು ಬಿಡಬೇಕು;
ಪಡೆಯಬೇಕೆಂದರೆ
ಕೊಟ್ಟುಬಿಡಬೇಕು;
– ಇದೇ ನಿಜಸ್ಥಿತಿಯ ಸೂಕ್ಷ್ಮಜ್ಞಾನ.

ಮೃದು ಕಠಿಣವನ್ನು ಗೆಲ್ಲುತ್ತದೆ
ನಿಧಾನ ಅವಸರವನ್ನು ಗೆಲ್ಲುತ್ತದೆ

ಆಳದಲ್ಲಿರುವ ಮೀನು ಮೇಲಕ್ಕೆ ಬರಬಾರದು
ಪ್ರಭುತ್ವದ ಆಯುಧಗಳು ಜನರಿಗೆ ಕಾಣಬಾರದು

೩೭

ದಾವ್‌ಏನು ಮಾಡದೇ ಇದ್ದರೂ
ಆಗಬೇಕಾದ್ದೆಲ್ಲ ಆಗುತ್ತದೆ.

ಆಳುವ ಜನ ದಾವ್‌ನಲ್ಲಿ ದೃಢವಾಗಿದ್ದರೆ
ಸಕಲವೂ ತನ್ನಿಂದ ತಾನೆ ಪರಿವರ್ತಿಸೀತು.

ತಮ್ಮ ನಿತ್ಯದ ಸರಳವಾದ ಬದುಕಿನಲ್ಲೇ
ಜನ ಆಗ ತಣಿಯುತ್ತಾರೆ
ಸಾಮರಸ್ಯದಲ್ಲಿರುತ್ತಾರೆ.

ಜನ ಮತ್ತೆ ಆಸೆಬುರುಕರಾದರೆ
ಕೊರೆಯದ ದಿಮ್ಮಿಯಾದ ದಾವ್‌ನ ಸರಳತೆಯಿಂದ
ಅವರನ್ನು ಪಳಗಿಸುತ್ತೇನೆ;
ಪಳಗಿಸಿದ ಮೇಲೆ ಅವರನ್ನು ಅವಮಾನಗೊಳಿಸುವುದಿಲ್ಲ,
ಅವಮಾನಗೊಳ್ಳದ್ದರಿಂದ ಅವರು ಶಾಂತರೂ ಸ್ವಸ್ಥರೂ ಆಗಿರುತ್ತಾರೆ .

ತಾನಾಗಿಯೇ ಸಾಮ್ರಾಜ್ಯ ವ್ಯವಸ್ಥಿತವಾಗಿರುತ್ತದೆ.