೩೮

ಘನವಾದ ಗುಣ ಹಾಗೆ ಅಂದುಕೊಳ್ಳುವುದಿಲ್ಲ,
ಆದ್ದರಿಂದ ಅದು ನಿಜವಾದ ಗುಣ;
ಕಳಪೆಯಾದ ಗುಣ ತನ್ನನ್ನ ಮರೆಯುವುದೇ ಇಲ್ಲ,
ಆದ್ದರಿಂದ ಅದು ಗೌಣ.

ಘನವಾದ ಗುಣ ಏನೂ ಮಾಡುವುದಿಲ್ಲ;
ಮಾಡಿದ್ದನ್ನ ಉಳಿಸಲೂ ಹೋಗುವುದಿಲ್ಲ.
ಕಳಪೆಯಾದ ಗುಣ ಏನಾದರೂ ಮಾಡುತ್ತಲೇ ಇರುತ್ತದೆ,
ಆದರೆ ಮಾಡಬೇಕಾದ್ದು ಉಳಿದೇ ಇರುತ್ತದೆ.
ಘನವಾದ ದಯಾವಂತಿಕೆ ಸಕ್ರಿಯವಾಗಿರುತ್ತದೆ, ಆದರೆ ಅಪೇಕ್ಷೆಪಡುವುದಿಲ್ಲ
ನ್ಯಾಯಪರತೆ ಸಕ್ರಿಯವಾಗಿರುತ್ತದೆ, ಅಪೇಕ್ಷೆಯನ್ನೂ ಪಡುತ್ತದೆ.

[1]

ವಿಧಿವತ್ತಾದ ಸದಾಚಾರ ಸಕ್ರಿಯವಾಗಿರುತ್ತದೆ;
ತನ್ನ ಅಪೇಕ್ಷೆ ಫಲಿಸದೆ ಹೋದದ್ದೇ
ತೋಳು ಮಡಿಸಿ ಎದುರು ಬೀಳುತ್ತದೆ.

ಪಥ ಮರೆಯಾದಾಗ ಗುಣ ತಲೆದೋರುತ್ತದೆ.
ಗುಣ ಮರೆಯಾದಾಗ ದಯಾವಂತಿಕೆ ತಲೆದೋರುತ್ತದೆ.
ದಯಾವಂತಿಕೆ ಮರೆಯಾದಾಗ ನ್ಯಾಯಪರತೆ ತಲೆದೋರುತ್ತದೆ.
ನ್ಯಾಯಪರತೆ ಮರೆಯಾದಾಗ ಸದಾಚಾರ ತಲೆದೋರುತ್ತದೆ.

ವಿಧಿವತ್ತಾದ ಆಚರಣೆಯಲ್ಲಿ ಪ್ರಾಮಾಣಿಕತೆ ಕ್ಷೀಣಿಸಿ
ನಿಷ್ಠೆ ಮಾಯವಾಗಿ
ಗೊಂದಲ ಶುರುವಾಗುತ್ತದೆ.

ಆದ್ದರಿಂದ ಋಷಿ ತನ್ನ ತೂಕ ತಪ್ಪದಂತೆ
ಆಳದಲ್ಲಿ ಇರುತ್ತಾನೆ;
ಅವನ ಆಸ್ಥೆ ತೋರುವ ಹೂವಿನಲ್ಲಿ ಅಲ್ಲ, ತಿರುಳಿನಲ್ಲಿ.
ಆದ್ದರಿಂದ ಅವನು ಪಥವನ್ನು ಮೊದಲೇ ಊಹಿಸುವುದಕ್ಕೆ ಹೋಗದೆ
ಅದರ ಸತ್ಯದಲ್ಲಿ ನೆಲಸಿ ಇರುತ್ತಾನೆ.

೩೯

ದಾವ್‌ನಲ್ಲಿ ಸಮರಸವಾಗಿ-
ಆಕಾಶ ತಿಳಿ
ಭೂಮಿ ಭದ್ರ
ದೇವತೆಗಳು ತೇಜಸ್ವಿಗಳು
ಕಣಿವೆಗಳು ಸಂಪನ್ನ
ಚರಾಚರ ಸೃಷ್ಟಿ ಜೀವಂತ
ದೊರೆಗಳಿಗೆ ಆಳ್ತನ.

ಅದರದರ ಗುಣಧರ್ಮ ಅದಕ್ಕೆ ಎನ್ನುವುದನ್ನು ಮುಂದುವರಿಸಿ
ಹೇಳುವುದಾದರೆ:
ತಿಳಿಗೊಳಿಸುವ ಆ ಗುಣದ ಚ್ಯುತಿಯಿಂದ ಆಕಾಶ ಬಿರಿಯುತ್ತದೆ,
ಭದ್ರ ಇಟ್ಟಿರುವ ಆ ಗುಣದ ಚ್ಯುತಿಯಿಂದ ಭೂಮಿ ಕಂತುತ್ತದೆ,
ತೇಜಸ್ಸು ತರುವ ಆ ಗುಣದ ಚ್ಯುತಿಯಿಂದ ದೇವತೆಗಳು ಕುಸಿಯುತ್ತಾರೆ ,
ಸಂಪನ್ನಗೊಳಿಸುವ ಆ ಗುಣದ ಚ್ಯುತಿಯಿಂದ ಕಣಿವೆಗಳು ಒಣಗುತ್ತವೆ,
ಒಡೆತನಕ್ಕೆ ಅರ್ಹರಾಗುವ ಆ ಗುಣದ ಚ್ಯುತಿಯಿಂದ ದೊರೆಗಳು ಪತನಗೊಳ್ಳುತ್ತಾರೆ.

ಆದ್ದರಿಂದಲೇ ಇರಬೇಕು:
ಪ್ರಭುಗಳ ಸಂತತಿಯ ಮೂಲ ಅಲ್ಪವಾಗಿರುತ್ತದೆ ,
ಎತ್ತರವಾದ್ದರ ಮೂಲಾಧಾರ ತಗ್ಗಿನಲ್ಲಿರುತ್ತದೆ;

ಆಳಲು ಅರ್ಹರಾದ ಪ್ರಭುಗಳು
ದಿವ್ಯಲಾವಣ್ಯದ ಜೇಡ್‌ನಂತೆ ಎಂದು ತಮ್ಮನ್ನು ಪರಿಗಣಿಸಿಕೊಳ್ಳದೆ
ಗಟ್ಟಿಮುಟ್ಟಾದ ಕಲ್ಲಿನ ದೃಢತೆ ಬಯಸುತ್ತಾರೆ.

೪೦

ವಾಪಾಸ್ಸಾಗುತ್ತಲೇ ಇರುವುದು ದಾವ್‌ಚಲಿಸುವ ಕ್ರಮ
ಅಬಲವಾಗಿ ಸಲ್ಲುವುದು ಅದರ ಶೀಲ.

ಸಕಲವೂ ಇರುವುದರಿಂದ ಉತ್ಪನ್ನಗೊಂಡಿದ್ದಾದರೆ
ಇರುವುದು-ಏನೂ ಇರದ ಶೂನ್ಯದಿಂದ.

೪೧

ಉತ್ತಮನಾದವನು ದಾವ್‌ಬಗ್ಗೆ ಕೇಳಿಸಿಕೊಂಡಾಗ
ಅದನ್ನು ಮೈಗೂಡಿಸಿಕೊಂಡು ಬಿಡಲು ಶುರುಮಾಡುತ್ತಾನೆ;
ಮಧ್ಯಮ ಅರ್ಧ ನಂಬುತ್ತಾನೆ, ಅರ್ಧ ಅನುಮಾನಿಸುತ್ತಾನೆ;
ಮೂರ್ಖನಾದರೊ ದೊಡ್ಡದಾಗಿ ನಕ್ಕುಬಿಡುತ್ತಾನೆ.
ಅವನು ನಗದೇ ಹೋದರೆ
ಅದು ದಾವ್‌ಅಲ್ಲ.

ಆದ್ದರಿಂದ ಹೇಳುವುದು:
ಬೆಳಕಿನ ದಾರಿ ಕತ್ತಲೆ ಎಂದು ಅನ್ನಿಸುತ್ತದೆ.
ಮುನ್ನಡೆಯ ದಾರಿ ಹಿನ್ನಡೆಯದು ಅನ್ನಿಸುತ್ತದೆ.
ನೇರವಾದ ದಾರಿ ದೂರವಾದ್ದು ಅನ್ನಿಸುತ್ತದೆ.
ಘನವಾದ ಗುಣ ಕಣಿವೆಯಂತೆ ತಗ್ಗೆನ್ನಿಸುತ್ತದೆ.
ನೈಜ ನಿಷ್ಠೆ ಡೋಲಾಯಮಾನ ಅನ್ನಿಸುತ್ತದೆ.
ಸ್ಫುಟವಾದ್ದು ಮಬ್ಬೆನ್ನಿಸುತ್ತದೆ.
ನೈಜಪ್ರೇಮ ಉಪೇಕ್ಷೆಯಂತೆ ಕಾಣುತ್ತದೆ.
ಉತ್ಕ್ರಷ್ಟವಾದ ಬಿಂಬಕ್ಕೆ ರೂಪವೇ ಇರುವುದಿಲ್ಲ,
ಉತ್ಕ್ರೃಷ್ಟವಾದ ಚೌಕದಲ್ಲಿ ಮೂಲೆಗಳು ಇರುವುದಿಲ್ಲ,
ಉತ್ಕೃಷ್ಟವಾದ ಪಾತ್ರೆ ಮಾಡುವುದಕ್ಕೆ ಬಹಳ ಕಾಲ ಹಿಡಿಯುತ್ತದೆ.
ಉತ್ಕೃಷ್ಟವಾದ ಸಂಗೀತದಲ್ಲಿ ವಿರಳವಾದ ಧ್ವನಿಯಿರುತ್ತದೆ.

ಎಲ್ಲೂ ಕಾಣಿಸಿಕೊಳ್ಳದಂತೆ ದಾವ್‌
ಪಾಲಿಸುತ್ತ ಇರುತ್ತದೆ.

೪೨

ದಾವ್‌ಒಂದನ್ನು ಹುಟ್ಟುಹಾಕುತ್ತದೆ.
ಒಂದು, ಎರಡನ್ನ
ಎರಡು, ಮೂರನ್ನ
ಮೂರು, ಉಳಿದ ಹಲವು ಹತ್ತು ಸಾವಿರ ಸಕಲವನ್ನ.
ಹೀಗೆ ಸೃಷ್ಟಿಯಾದ ವಿಶ್ವದ ಹಿನ್ನೆಲೆಯಲ್ಲಿ ಹೆಣ್ಣು ಇದೆ
ಮುನ್ನಲೆಯಲ್ಲಿ ಗಂಡು ಇದೆ;
ಹೀಗೆ ಆವೃತವಾದ ಯಿನ್‌ಯಾಂಗ್‌ಸಂಯೋಗದಿಂದ
ಸಮರಸ ಇದೆ.

ಪರದೇಶಿಗಳೂ ಹೆಂಬೇಡಿಗಳೂ ಆಗಿರುವುದಕ್ಕೆ ಜನ ಹೇಸುತ್ತಾರೆ,
ಆದರೆ
ಪ್ರಭುಗಳು ಅತಿವಿನಯದಲ್ಲಿ ತಮ್ಮನ್ನು ಹಾಗೆ ಕರೆದುಕೊಳ್ಳುವುದುಂಟು;
ಕಳೆದುಕೊಳ್ಳುವುದರಿಂದ ಕೆಲವೊಮ್ಮೆ ಹೆಚ್ಚಾಗುವುದು ಇದ್ದಂತೆ
ಹೆಚ್ಚುಗಾರಿಕೆಯಿಂದ ಅವನತಿಯೂ ಇದೆ.

ಉಳಿದವರು ಕಲಿಸುವುದನ್ನ ನಾನೂ ಕಲಿಸುತ್ತೀನಿ.
ನನ್ನದೇ ಸೂತ್ರವೆಂದರೆ ಇದು:
‘ದುಷ್ಟರಿಗೆ ಸಹಜವಾದ ಸಾವು ಇಲ್ಲ.’

೪೩

ಈ ಪ್ರಪಂಚದಲ್ಲಿ ಅತಿ ಮೃದುವಾದದ್ದು
ಅತಿ ಕಠಿಣವಾದದ್ದನ್ನು ಗೆಲ್ಲುತ್ತದೆ,
ಗುರುತ್ವವಿಲ್ಲದ್ದು ಎಲ್ಲಾದರೂ ತೂರಿಕೊಳ್ಳುತ್ತದೆ,
– ಸುಮ್ಮನಿರುವುದರ ಗುಣ ಇದರಿಂದ ತಿಳಿಯುತ್ತದೆ.

ಮಾತಾಡದೇ ಕಲಿಸುವುದು
ಸುಮ್ಮನಿದ್ದು ಪ್ರವೃತ್ತಿಸುವುದು
– ಅದು ಋಷಿಮಾರ್ಗ .

೪೪

ಯಾವುದು ಹೆಚ್ಚು ಪ್ರಿಯಕರ?- ನಿನ್ನ ಹೆಸರೊ? ನಿನ್ನ ಸೌಖ್ಯವೊ?
ಯಾವುದು ಹೆಚ್ಚು ಅಮೂಲ್ಯ?-ನಿನ್ನ ಸೌಖ್ಯವೊ? ನಿನ್ನ ಆಸ್ತಿಯೊ?
ಯಾವುದು ಹೆಚ್ಚು ಅನಿಷ್ಟ?-ಲಾಭವೊ? ನಷ್ಟವೋ?

ಅತಿಜಿಪುಣತನ ಅತಿಖರ್ಚಿಗೆ ದಾರಿಯಾಗುತ್ತದೆ,
ಅತಿಯಾಗಿ ಕೂಡಿಟ್ಟರೆ ಸರ್ವನಾಶಕ್ಕೆ ಎಡೆಯಾಗುತ್ತದೆ.

ತೃಪ್ತನಿಗೆ ಕಳಂಕ ತಟ್ಟದು,
ನೆಲೆ ತಿಳಿದವನಿಗೆ ಅಪಾಯವಿಲ್ಲ.

ಬಾಳಿ ಉಳಯುವ ದಾರಿ
ಇದು.

೪೫

ನಿರ್ದೋಷವಾದ ಘಟವನ್ನು ಬಿರುಕಾದ್ದು ಎಂದು ಭಾವಿಸಿಕೊಂಡರೆ
ಅದು ಬಳಸಿ ಹಾಳಾಗಲ್ಲ;
ತುಂಬಿದ ಘಟವನ್ನು ಬರಿದಾದ್ದು ಎಂದು ಭಾವಿಸಿಕೊಂಡರೆ
ಅದು ಬಳಸಿ ಖಾಲಿಯಾಗಲ್ಲ.

ನೇರವಾದದ್ದನ್ನು ಹೀಗೆಯೇ ಸೊಟ್ಟ ಎಂದು ಭಾವಿಸಿಕೊ
ನೈಪುಣ್ಯವನ್ನು ಗೊಡ್ಡು ಎಂದು ಭಾವಿಸಿಕೊ
ವಾಕ್‌ಪಟುತ್ವವನ್ನು ಉಗ್ಗು ಎಂದು ಭಾವಿಸಿಕೊ

ನೋಡು-ಶೀಘ್ರಚಲನೆಯಿಂದ ಶೈತ್ಯವನ್ನು ಗೆಲ್ಲುವುದು
ನಿಶ್ಚಲವಾದದ್ದು ಸೆಖೆಯನ್ನು ಗೆಲ್ಲುವುದು

ಕಲಕದಂತೆ ನಿರಾಕುಲವಾಗಿದ್ದು
ಜಗತ್ತಿಗೇ ದೊರೆಯಾಗುವುದು.

೪೬

ದಾವ್‌ನಲ್ಲಿ  ಈ ಜಗತ್ತು ನೆಲಸಿದ್ದಾಗ
ಯುದ್ಧಾಶ್ವಗಳನ್ನು ಉಳುವುದಕ್ಕಾಗಿ ಸಾಕುತ್ತಾರೆ;
ದಾವ್‌ನ್ನ ಈ ಜಗತ್ತು ತೊರೆದಾಗ
ಯುದ್ಧಾಶ್ವಗಳನ್ನು ಹೊಲ ಗದ್ದೆಗಳಲ್ಲಿ ಸಾಕಿ ಬೆಳೆಸುತ್ತಾರೆ.

ಅತೃಪ್ತಿಗಿಂತ ದೊಡ್ಡ ಶಾಪವಿಲ್ಲ
ಗಂಟುಮಾಡಿಡುವ ಆಸೆಗಿಂತ ದೊಡ್ಡ ಪಾಪವಿಲ್ಲ

ತಣಿದವನು ಮಾತ್ರ ತಾಳಿಯಾನು
ಬಾಳಿಯಾನು.


[1] ಕನ್‌ಫ್ಯೂಶಿಯಸ್‌ಬಳಸುವ ಮೂರುಶಬ್ದಗಳು ಇಲ್ಲಿ ಲಾವ್‌ತ್ಸು ಟೀಕೆಗೆ ಒಳಗಾಗಿವೆ.

೧. ‘ಜೆನ್‌’ ಎಂದರೆ ಮಾನವೀಯತೆ, ನಾನು ‘ದಯಾವಂತಿಕೆ’ ಎನ್ನುವ ಪದ ಬಳಸಿದ್ದೇನೆ. ಸ್ಯೆದ್ಧಾಂತಿಕವಾದ್ದನ್ನು ಲಾವ್‌ತ್ಸು ಒಪ್ಪದವನಾದ್ದರಿಂದ ‘ದಯಾವಂತಿಕೆ’ ಎನ್ನುವ ಶಬ್ದವೇ ಹೆಚ್ಚು ಸಮರ್ಪಕವಿರಬಹುದು.

೨. ‘ಯಿ’ ಎಂದರೆ ನ್ಯಾಯಪರತೆ,
೩. ‘ಲಿ’ ಎಂದರೆ ವಿಧಿವತ್ತಾದ ಆಚರಣೆ.