೪೭

ಮನೆಯ ಹೊಸ್ತಿಲನ್ನು ದಾಟದೆ
ಜಗತ್ತಿನ ವಿದ್ಯಮಾನಗಳನ್ನು ಅರಿಯಬಹುದು
ಕಿಟಕಿಯನ್ನು ತೆರೆದು ಇಣುಕದೆ
ದೇವಲೋಕದ ದರ್ಶನವಾಗಬಹುದು

[1]

ಆದ್ದರಿಂದ ಪುರಾತನ ಋಷಿಗಳು ಇರುವಲ್ಲೆ ಇದ್ದು
ಕ್ಷೇತ್ರಜ್ಞರಾದರು
ಕಾಣಲು ಹೋಗದೆ ಕಾಣ್ಕೆ ಪಡೆದರು
ನಿಷ್ಕಿರ್ಮಿಗಳಾಗಿದ್ದು
ಲೋಕದ ಪ್ರವರ್ತನಕ್ಕೆ ಆಧಾರವಾದರು

೪೮

ಜ್ಞಾನದ ವರ್ಧನೆಗೆ
ಪ್ರತಿನಿತ್ಯ ಅದನ್ನು ಗಳಿಸುತ್ತ ಹೋಗಬೇಕು;
ದಾವ್‌ಆಚರಣೆಗೆ
ಪ್ರತಿನಿತ್ಯ ತನ್ನನ್ನು ಕಳೆಯುತ್ತ ಹೋಗಬೇಕು;
ಕಳೆದೂ ಕಳೆದೂ ತಟಸ್ಥ ಸ್ಥಿತಿ ತಲುಪಬೇಕು;
ಹೀಗೆ ಏನೂ ಮಾಡದೆ ಇರುವಾಗ
ಮಾಡದೇ ಬಿಟ್ಟದ್ದು ಇರಲ್ಲ.

ಅಧಿಕ ಪ್ರಸಂಗಿಯಲ್ಲದವನು ಪ್ರಪಂಚವನ್ನು ಗೆದ್ದಿರುತ್ತಾನೆ
ಕರ್ಮಠ ಕಳೆದುಕೊಂಡಿರುತ್ತಾನೆ.

೪೯

ಋಷಿಗೆ ತನ್ನದೇ ಮತಿ ಎಂಬುದಿಲ್ಲ
ಸಕಲದ್ದೂ ಅವನದಾಗಿರುತ್ತದೆ.

ಒಳ್ಳೆಯವರೂ ಅವನಿಗೆ ಒಳ್ಳೆಯವರು,
ಕೆಡಕರೂ ಅವನಿಗೆ ಒಳ್ಳೆಯವರು,
ಹೀಗೆ ಒಳ್ಳೆತನ ಸರ್ವತ್ರವಾಯಿತು.

ಅರ್ಹರನ್ನೂ ಅವನು ನಂಬುವನು
ಅನರ್ಹರನ್ನೂ ನಂಬುವನು
ಹೀಗೆ ನಂಬಿಕೆ ಸರ್ವತ್ರವಾಯಿತು.

ಋಷಿಗೆ ಮೇಲಿಲ್ಲ ಕೀಳಿಲ್ಲ,
ಅವನು ಸಮದರ್ಶಿ;
ಜನರ ಕಣ್ಣುಕಿವಿಗಳು ಅವನಲ್ಲಿ ನೆಟ್ಟಿರುತ್ತವೆ,
ಅವರಿಗೆ ಅವನು ತಾಯಿ.

೫೦

ಹುಟ್ಟುತ್ತಿದ್ದಂತೆ ಮನುಷ್ಯ ಸಾಯುವುದಕ್ಕೂ
ತೊಡಗಿ ಬಿಡುತ್ತಾನೆ.
ಬದುಕಿನ ಸಂಗಾತಿಗಳು ಹದಿಮೂರು:
ಎರಡುಕೈ, ಎರಡುಕಾಲು ಮತ್ತು ಒಂಬತ್ತು ರಂಧ್ರಗಳು.
ಮೃತ್ಯುವಿನ ಸಂಗಾತಿಗಳು ಕೂಡ ಈ ಹದಿಮೂರು.
ಯಾಕೆ ಬದುಕಿನ ಸಂಗಾತಿಗಳೇ ಮೃತ್ಯುವಿನ ಸಂಗಾತಿಗಳು?
ಯಾಕೆ ಅಂದರೆ: ತನ್ನ ಜೀವವನ್ನು ಜೀವಿ ಅತಿಯಾಗಿ ಹಚ್ಚಿಕೊಂಡು
ಉರಿಯತೊಡಗುತ್ತದೆ.

ಆದರೆ ಹದವರಿತು ಬದುಕುವ ಜೀವಿಯನ್ನು
ಘೇಂಢಾಮೃಗವಾಗಲೀ, ಹುಲಿಯಾಗಲೀ ಅಡ್ಡಕಟ್ಟುವುದಿಲ್ಲವೆಂಬ
ಪ್ರತೀತ ಇಯಿದೆ

ಖಡ್ಗವೂ ಅವನನ್ನು ತಿವಿಯಲಾರದಂತೆ
ಘೇಂಡಾಮೃಗದ ಕೊಂಬಿಗೆ ತಿವಿಯಲು ಅವನಲ್ಲಿ ಅವಕಾಶವಿರದು
ಹುಲಿಗೆ ತನ್ನ ಉಗುರನ್ನು ಕಂತಿಸಲು ಅವನಲ್ಲಿ ಎಡೆಯಿರದು
ಯೋಧನ ಖಡ್ಗ ಗಾಳಿಯನ್ನು ತಿವಿದೀತು – ಅಷ್ಟೆ.

ಸಾವಿಗೆ ಅವನಲ್ಲಿ ಸ್ಥಳವಿಲ್ಲ .

೫೧

ದಾವ್‌ಸೃಷ್ಟಿಸುತ್ತದೆ
ಗುಣ ಪಾಲಿಸುತ್ತದೆ
ಈ ವಸ್ತುಪ್ರಪಂಚ ಆಕಾರ ಕೊಡುತ್ತದೆ
ಆಯಾ ಕಾಲದ ಪರಿಸರ ಒಟ್ಟು ರೂಪ ಈಯುತ್ತದೆ

ಆದ್ದರಿಂದ ದಾವ್‌ನಲ್ಲಿ ಭಕ್ತಿ, ಗುಣದಲ್ಲಿ ಶ್ರದ್ಧೆ
ಕಡ್ಡಾಯದಿಂದ ಹುಟ್ಟುವುದಿಲ್ಲ, ಅದು ಸಹಜ.

ಹೀಗೆ ಎಲ್ಲವನ್ನೂ ಹುಟ್ಟಿಸಿಕೊಂಡು
ಪಾಲಿಸಿ, ಬೆಳೆಸಿ, ಆರೈಕೆ ಮಾಡಿ
ಸಮಾಧಾನಪಡಿಸಿ, ಕಾಪಾಡಿ
ಮತ್ತೆ ಹಿಂದಕ್ಕೆ ಕರೆಸಿಕೊಳ್ಳುವ ದಾವ್‌
ಅಧೀನಪಡಿಸಿಕೊಳ್ಳದೇ ಸೃಷ್ಟಿಸುತ್ತದೆ.
ನಿರೀಕ್ಷೆಯಿಲ್ಲದೆ ಶುಶ್ರೂಷೆ ಮಾಡುತ್ತದೆ.

ಇದನ್ನೇ ದಾವ್‌ನ ಗೂಢಚರ್ಯೆ ಎನ್ನುವುದು

೫೨

ದಾವ್‌ಸಕಲದ ಆಕರ, ವಿಶ್ವದ ತಾಯಿ
ತಾಯಿಯನ್ನು ತಿಳಿದಾತ ಮಕ್ಕಳನ್ನೂ ತಿಳಿಯುತ್ತಾನೆ;
ಯಾವ ತಾಯಿಯ ಮಗ ತಾನು ಎಂದು ತಿಳಿದವನು
ಆಜೀವ ತಾಯಿಯಿಂದ ರಕ್ಷಿತನಾಗಿ ಇರುತ್ತಾನೆ.

ಆತ ಬಾಯನ್ನೂ ಕಿವಿಯನ್ನೂ ಮುಚ್ಚಿಕೊಂಡು ಸುಮ್ಮನೆ
ಇರುವವನಾದ್ದರಿಂದ
ಸುಸ್ತಿಲ್ಲದೆ ತಣ್ಣಗೆ ಬಾಳುತ್ತಾನೆ,
ಅದೇ ಆತ ಬಾಯಿಬಾಯಿ ಬಿಡುತ್ತ ತನ್ನ ಮೇಲ್ಮೆಗಾಗಿ ಏದುಸಿರು
ಬಿಡುವವನಾದರೆ
ಸ್ವಾಸ್ಥ್ಯ ಕಳೆದುಕೊಂಡು ಅನಾಥನಾಗುತ್ತಾನೆ.

ಕಿರಿದಾದ್ದನ್ನು ಕಾಣಬಲ್ಲವನು ದಾರ್ಶನಿಕನಾಗುತ್ತಾನೆ,

ಮೃದುವಾದ್ದನ್ನು ಕಾಪಾಡಬಲ್ಲವನು ದೃಢನಾಗುತ್ತಾನೆ,
ಕಿರಣಗಳಲಿಂದ ಆಕರ್ಷಿತನಾಗಿ ಬೆಳಕಿಗೆ ಹಿಂತಿರುಗಬಲ್ಲವನು
ಸದಾ ಸ್ವಸ್ಥನಾಗಿರುತ್ತಾನೆ.

ಇದೇ ಪರವಸ್ತುವಿನಲ್ಲಿ ವಿಶ್ರಾಂತನಾಗೋದು ಎನ್ನುವುದು.

೫೩

ದಾವ್‌ಸುಲಭವಾದ ಹೆದ್ದಾರಿಯಾದರೂ
ಜನ ಅಡ್ಡದಾರಿಗಳಿಗೆ ಒಲಿದಿರುತ್ತಾರೆ.
ಅವರ ಮನೆಯ ದಿವಾನಖಾನೆ ಮತ್ತು ಅಂಗಳ
ಸುಸಜ್ಜಿತವಾಗಿರುತ್ತದೆ;
ಆದರೆ ಕಾಳು ಬೆಳೆಯುವ ಜಮೀನು ಹಾಳುಬಿದ್ದು
ಕಣಜ ಬರಿದಾಗಿರುತ್ತದೆ.

ಅವರ ಕಸೂತಿ ಹಾಕಿದ ಗೌನುಗಳೇನು !
ಅವರ ರತ್ನಖಚಿತ ಖಡ್ಗಗಳೇನು!
ಅವರ ಔತಣಕೂಟದ ಮೋಜೇನು!
ದರ್ಬಾರೇನು ! ಧಿಮಾಕೇನು!
ದೌಲತ್ತೇನು!

ಅದು ದುಂದು-
ಸ್ವಪ್ರತಿಷ್ಠೆ,
ದಾವ್‌ಸಹಿಸದ ದರೋಡೆ.

೫೪

ಭದ್ರ ಊರಿದ್ದನ್ನು ಕೀಳಲು ಬಾರದು,
ಭದ್ರ ಮುಚ್ಚಿದ್ದನ್ನು ಬಿಚ್ಚಲು ಬಾರದು,
– ಮೊಮ್ಮಕ್ಕಳ ಕಾಲಕ್ಕೂ ಶ್ರದ್ಧಾವಿಧಿಗಳು ಉಳಿಯುವುದು ಹೀಗೆ.

ದಾವ್‌ನನ್ನು ಸ್ವಂತ ಜೀವನದಲ್ಲಿ ಅನುಸರಿಸಿದಾಗ
ಅದರ ಗುಣ ಅಪ್ಪಟತನ,
ಸಂಸಾರದಲ್ಲಿ ಅನುಸರಿಸಿದಾಗ
ಅದರ ಗುಣ ಯಥೇಷ್ಟತೆ,
ಹಳ್ಳಿಯಲ್ಲಿ ಅನುಸರಿಸಿದಾಗ
ಅದರ ಗುಣ ಬಾಳಿಕೆ,
ಇಡೀ ಪ್ರಾಂತ್ಯದಲ್ಲಿ ಅನುಸರಿಸಿದಾಗ
ಅದರ ಗುಣ ಏಳಿಗೆ,
ಇಡೀ ಸಾಮ್ರಾಜ್ಯದಲ್ಲಿ ಅನುಸರಿಸಿದಾಗ
ಅದರ ಗುಣ ಸರ್ವತ್ರ.

ಯಾಕೆಂದರೆ, ಖಾಸಗಿ ಕಣ್ಣಿಂದ ಇತರರನ್ನು ನಾವು ನೋಡುವುದು,
ಸಂಸಾರದ ಕಣ್ಣಿಂದ ಇತರ ಸಂಸಾರಗಳನ್ನ,
ಹಳ್ಳಿಯ ಕಣ್ಣಿಂದ ಇತರ ಹಳ್ಳಿಗಳನ್ನ,
ಪ್ರಾಂತ್ಯದ ಕಣ್ಣಿಂದ ಇತರ ಪ್ರಾಂತ್ಯಗಳನ್ನ,
ಸಾಮ್ರಾಜ್ಯದ ಕಣ್ಣಿಂದ ಇತರ ಸಾಮ್ರಾಜ್ಯಗಳನ್ನ.

ನನಗಿದು ಹೇಗೆ ಗೊತ್ತೆಂದರೆ
ಹೀಗೆ-

೫೫

ಗುಣಶಾಲಿ
ಹಸುಗೂಸಿನಂತೆ ಇರುತ್ತಾನೆ.

ಕೂಸಿನ ಮೂಲೆ ಮೃದು, ಸ್ನಾಯು ದುರ್ಬಲ
ಆದರೆ ಅದರ ಮುಷ್ಠಿ ಮಾತ್ರ ಬಲು ಬಿಗಿ;
ಗಂಡು ಹೆಣ್ಣಿನ ಸಂಬಂಧವನ್ನು ಅದು ಅರಿಯದಾದರೂ
ಅದರ ಜೀವಶಕ್ತಿ ಎಷ್ಟು ತೀವ್ರವೆಂದರೆ
ಅದರ ಜನನಾಂಗ ನಿಗುರಿ ನಿಲ್ಲಬಲ್ಲದು;
ಇಡೀ ದಿನ ಅದು ಕಿಟಾರನೆ ಕಿರುಚಿ ಅತ್ತರೂ
ಅದರ ಧ್ವನಿ ಒಡೆದು ಒರಟಾಗದು.
– ಅಷ್ಟು ಸಹಜವಾಗಿ ತನ್ನಲ್ಲಿ ಹೊಂದಿಕೊಂಡಿರುತ್ತದೆ ಶಿಶು.

ಸಾಮರಸ್ಯ ಅರಿಯುವುದೆಂದರೆ ನಿತ್ಯವಾದದ್ದನ್ನ ಅರಿತಂತೆ
ನಿತ್ಯವಾದದ್ದನ್ನ ಅರಿಯುವುದು ಒಳನೋಟ ಪಡೆದಂತೆ.

ಇರುವುದಕ್ಕಿಂತ ಹೆಚ್ಚು ಉಬ್ಬಿಕೊಳ್ಳುವುದು ಅಶುಭ,
ಪ್ರಾಣಶಕ್ತಿಯನ್ನು ಬುದ್ಧಿಬಲದಿಂದ ಹತೋಟಿಯಲ್ಲಿ ಇಟ್ಟುಕೊಳ್ಳುವುದಕ್ಕಾಗಿ

ಹವಣಿಸುವುದು ಆಕ್ರಮಣ,
ಬಲಿತದ್ದು ಮುದಿಯಾಗುವುದು ಧಜರ್ಮ.

ದಾವ್‌ಧರ್ಮಕ್ಕೆ ಬಲಪ್ರಯೋಗ ವಿರೋಧ
ದಾವ್‌ಗೆ ವಿರೋಧವಾದದ್ದು ಕ್ಷಣಿಕ.


[1] ಲಾವ್‌ತ್ಸೆ ಹೇಳುವುದನ್ನು ಪರಮಹಂಸರ ‘ಬಹೂದಕ’  (ಹಲವು ಊರುಗಳ ನೀರು ಕುಡಿದವನು)’ ಕುಟೀಚಕ’ (ಇದ್ದಲ್ಲೇ ಇದ್ದು ಅನುಭವಿಯಾಗುವವನು ) ಕಲ್ಪನೆಗಳ ಜೊತೆ ಹೋಲಿಸಬಹುದು.