ದಾವ್‌ದ ಜಿಂಗ್‌’ ಗ್ರಂಥವನ್ನು ಅನುವಾದಿಸಬೇಕೆಂಬ ಆಸೆಯು ನನಗೆ ಹುಟ್ಟಲು ಕಾರಣ, ನನ್ನ ಯುವ ಮಿತ್ರ, ಕವಿ-ಶ್ರೀ ಎಸ್‌. ಮಂಜುನಾಥ ಅವರು ಮಾಡಿದ ಆ ಸೂತ್ರಗಳ ಭಾಷಾಂತರ. ‘ಸುಮ್ಮನಿರುವ ಸುಮ್ಮಾನ’ ಎಂಬ ಹೆಸರಿನ ಅವರ ಆ ಭಾಷಾಂತರವನ್ನು ಹಸ್ತಪ್ರತಿಯಲ್ಲೇ ಓದಿ, ಮೆಚ್ಚಿ, ಅಕ್ಷರ ಪ್ರಕಾಶನಕ್ಕೆ ಕಳುಹಿಸಿದ್ದೆ. ಅದು ಪ್ರಕಟಗೊಂಡಮೇಲೆ, ಅದನ್ನು ಓದುತ್ತಿದ್ದಂತೆ, ಲಾವ್‌ತ್ಸೆಯ  ಎಲ್ಲ ಸೂತ್ರಗಳನ್ನೂ ಅನುವಾದಿಸಬೇಕೆಂಬ ಆಸೆ ನನಗಾಯಿತು. ಆದರೆ, ಮಂಜುನಾಥರಂತೆ ಆ ಸೂತ್ರಗಳನ್ನು ಹೆಚ್ಚಾಗಿ ಕವಿತೆಯೆಂದು ಭಾವಿಸಿ ಭಾಷಾಂತರಿಸಿದೆ, ಬದಲು, ಮೂಲಕ್ಕೆ ಹತ್ತಿರವಾಗಿರುವಂತೆ ಅವುಗಳನ್ನು ಕನ್ನಡಕ್ಕೆ ತರಬೇಕೆಂದುಕೊಂಡೆ.

ಅಮೇರಿಕಾದ ನನ್ನ ಕೆಲವು ಲೇಖಕ ಮಿತ್ರರು ತುಂಬ ಇಷ್ಟಪಡುವ ಒಬ್ಬ ಅನುವಾದಕನಾದ ಮಿಚೆಲ್‌ಆತ ಜರ್ಮನ್‌ಕವಿ ರಿಲ್ಕ್‌ನ ಕಾವ್ಯದ ಅನುವಾದದಿಂದ ಪ್ರಸಿದ್ಧನಾಗಿದ್ದಾನೆ – ದೊಡ್ಡ ಪ್ರತಿಭಾವಂತ. ಅವನ ದಾವ್‌ಅನುವಾದ

[1] ನನಗೆ ತುಂಬ ಮೋಹಕವೆನ್ನಿಸಿತು; ಅವನನ್ನು ಅನುಸರಿಸಿ ನಾನು ಎಲ್ಲ ಸೂತ್ರಗಳನ್ನೂ ಭಾಷಾಂತರ ಮಾಡಿದೆ. ಆಮೇಲೆ ಕುತೂಹಲಕ್ಕಾಗಿ ಮ್ಯಾಕ್ಸ್‌ಮ್ಯುಲ್ಲರ್ ಸಂಪಾದಿಸಿದ ‘ಸೇಕ್ರೆಡ್‌ಬುಕ್ಸ್‌ಆಫ್‌ದಿ ಈಸ್ಟ್‌’ (ಸಂಪುಟ ೩೪) ನೋಡಿದೆ. ಅದರಲ್ಲಿರುವ ಜೇಮ್ಸ್‌ಲೆಗ್‌ನ ಗದ್ಯಾನುವಾದವು ಮೂಲಕ್ಕೆ ಹತ್ತಿರವಾಗಿರುವುದನ್ನೂ ಹಾಗೂ ಕಾವ್ಯದ ಹುಚ್ಚಿನ ಮಿಚೆಲ್‌ಕಡೆಗಾಣಿಸಿದ ಎಷ್ಟೋ ವಿವರಗಳನ್ನು ಒಳಗೊಂಡಿರುವುದನ್ನೂ ನಾನಲ್ಲಿ ಗಮನಿಸಿದೆ. ಆಮೇಲೆ, ಭಾರತೀಯ ಓದುಗನಿಗೆ ಪ್ರಸ್ತುವೆನ್ನಿಸಬಹುದಾದ ಆ ವಿವರಗಳನ್ನೆಲ್ಲ ಒಳಗೊಳ್ಳುವಂತೆ ಮತ್ತೆ ಅಷ್ಟು ಸೂತ್ರಗಳನ್ನು ಅನುವಾದಿಸಿದೆ. ಅಷ್ಟಕ್ಕೂ ನನ್ನ ಕುತೂಹಲ ತಣಿಯಲಿಲ್ಲ. ಲೆಗ್‌ನ ತರುವಾಯ, ಡಯ್‌ವೆನ್‌ಡಾಕ್‌ಎಂಬ ದೊಡ್ಡ ಚೀನೀ ವಿದ್ವಾಂಸ ಮಾಡಿರುವ ಇನ್ನೊಂದು ಅನುವಾದವನ್ನೂ-‘ದಾವ್‌ದ ಜಿಂಗ್‌’ (John Murray, London, 1954) -ಓದಿದೆ. ನನ್ನ ಅತೃಪ್ತಿ ಇನ್ನಷ್ಟು ಹೆಚ್ಚಾಗಿ, ಡಯ್‌ವೆನ್‌ಡಾಕ್‌ಕಾಣಿಸುವ ಪಾಠಾಂತರಗಳ ವಿವರಗಳನ್ನೂ ಒಳಗೊಳ್ಳಿಸಲು ಹೋಗಿ, ನನ್ನ ಅನುವಾದದ ಪಾಠಗಳು ಓದಲಾರದ ಕಗ್ಗಂಟುಗಳಾದವು. (ಡಯ್‌ವೆನ್‌ಡಾಕ್‌ಶುದ್ಧಪಾಠ ಯಾವುದಿರಬಹುದೆಂದು ತನ್ನ ಟಿಪ್ಪಣಿಗಳಲ್ಲಿ ಚರ್ಚಿಸುತ್ತಾನೆ. ಈ ಟಿಪ್ಪಣಿಗಳಿಗೆ ಮುಖಾಮುಖಿಯಾಗಿ ನಾನು, ಒಪ್ಪಿಗೆಯಲ್ಲೂ ವಿರೋಧದಲ್ಲೂ ತುಂಬ ಕಲಿತಿದ್ದೇನೆ. ಕೆಲವು ಪಾಠಗಳು ಕಲುಷಿತವಿರಬಹುದೆಂದು ಅವನು ತಿಳಿಯಲು ಕಾರಣ-ಅವನ ಐರೋಪ್ಯ ಪಾಂಡಿತ್ಯದ ಮಡಿವಂತಿಕೆಯೂ ಯಾಕಿರಬಾರದೆಂಬ ಅನುಮಾನ ನನಗಿದೆ.)

ಮತ್ತೆ, ಇನ್ನೊಂದು ಆಶ್ಚರ್ಯ ನನಗೆ ಕಾದಿತ್ತು. ೧೯೭೩ರಲ್ಲಿ, ದಕ್ಷಿಣ ಚೀನಾದ ಹುನಾನ್‌ಪ್ರಾಂತ್ಯದ ಮಾ-ವಾಂಗ್‌ದೂಯಿ ಎಂಬ ಸಣ್ಣ ಹಳ್ಳಿಯಲ್ಲಿ, ಆರ್ಕಿಯಾಲಿಜಿಷ್ಟರು ಹುಡುಕಿ ತೆಗೆದ ಒಂದು ಪಾಠವನ್ನು ರಾಬರ್ಟ್ ಹೆನ್ರಿಕ್ಸ್‌ಎಂಬ ವಿದ್ವಾಂಸ ಭಾಷಾಂತರಿಸಿ ಪ್ರಕಟಿಸಿದ್ದ; ಆ ಗ್ರಂಥ-The Bodly Head (London, 1990) -ನನ್ನ ಕಣ್ಣಿಗೆ ಬಿತ್ತು. ಈವರೆಗೆ ನನಗೆ ಸಿಕ್ಕ ಎಲ್ಲ ಪಾಠಗಳಲ್ಲಿ ಈ ಗ್ರಂಥವು ಎರಡು ಭಾಗಗಳಲ್ಲಿತ್ತು-ಅಧ್ಯಾಯ ೧ ರಿಂದ ೩೭ ರವರೆಗಿನದು ದಾವ್‌ಸ್ವರೂಪ ಕುರಿತ ಸೂತ್ರಗಳು; ಮತ್ತು ಅಧ್ಯಾಯ ೩೮ರಿಂದ ೮೧ರ ವರೆಗಿನದು’ದ ಕುರಿತ ಸೂತ್ರಗಳು. ಹೀಗೆ ಎರಡು ಭಾಗಗಳಲ್ಲಿರುವ ಆ ಗ್ರಂಥ, ಮಾ-ವಾಂಗ್‌ದುಯಿ ಪಾಠದಲ್ಲಿ ಅದಲು ಬದಲಾಗಿತ್ತು. ಆದ್ದರಿಂದ ಇಲ್ಲಿ, ಗ್ರಂಥದ ಹೆಸರೇ ‘ದ-ದಾವ್‌ಜಿಂಗ್‌’ಎಂದಾಗಿದೆ.

ಇದಕ್ಕೆ ಹಲವು ಕಾರಣಗಳನ್ನು ಊಹಿಸಲಾಗಿದೆ – ಪ್ರಾಯಶಃ ಲಿಪಿಕಾರ ಪೆಟ್ಟಿಗೆಯಲ್ಲಿ ಜೋಡಿಸುವಾಗ ತಾನು ಮೊದಲು ಚಿತ್ರಿಸಿದ್ದನ್ನು ಕೆಳಗೂ, ಅನಂತರ ಚಿತ್ರಸಿದ್ದನ್ನು ಮೇಲೂ ಇಟ್ಟು ಹೀಗಾಗಿರಬಹುದು; ಅಥವಾ ಗ್ರಂಥದ ಮೂಲಸ್ವರೂಪದ ವ್ಯಾಖ್ಯೆಯನ್ನು ಆಧರಿಸಿಯೇ ಈ ಜೋಡಣಾಕ್ರಮ ಬದಲಾಗಿದ್ದಿರಲೂಬಹುದು. ಆವರೆಗೆ ದೊರೆತ ಎಲ್ಲ ಪಾಠಗಳಲ್ಲೂ ಮೊದಲನೆಯ ಭಾಗವು ತಾತ್ವಿಕವಾದ ದಾವ್‌ಸ್ವರೂಪದ ಧ್ಯಾನ; ಎರಡನೆಯದು – ‘ದ’ ಕುರಿತ ಭಾಗ – ಅದು, ಆಳುವ ದೊರೆಗಳಿಗಾಗಿ ಇರುವ ನೀತಿ ಸೂತ್ರಗಳು. ಅಂದರೆ, ಜೋಡಣಾಕ್ರಮದ ಪಲ್ಲಟದಿಂದಾಗಿ ಈ ನೀತಿ ಸೂತ್ರಗಳೇ ಲಾವ್‌ತ್ಸು ಗ್ರಂಥದ ಮುಖ್ಯ ಉದ್ದೇಶ ಎಂದಂತೆ ಆಯಿತು. ಈ ವ್ಯಾಖ್ಯೆಯು, ಮೊದಲು ಮಿಚೆಲ್‌ನನ್ನು ನಾನು ಅನುಸರಿಸಿದಾಗ ಕಂಡ ಭಾವುಕ ಕವಿದರ್ಶನಕ್ಕಿಂತ, ಬಹಳ ಬೇರೆಯದೇ ರೀತಿಯ ಓದುವ ಕ್ರಮ ಆಗಿತ್ತು.

ಈ ಕುರಿತು, ದೆಹಲಿಯಲ್ಲಿರುವ ಒಬ್ಬ ಚೀನೀ ವಿದ್ವಾಂಸ, ಡಾ. ಗಿರಿ ದೇಶಿಂಕರ್ ಅವರನ್ನು ಕೇಳಿದಾಗ ಅವರು-ನನ್ನ ಸಮಸ್ಯೆ ಬಗೆ ಹರಿಯಲು ಡಿ.ಸಿ. ಲಾವ್‌ಎಂಬುವರು ಮಾಡಿದ ಭಾಷಾಂತರವನ್ನು ಓದಬೇಕು-ಎಂದರು. ಪೆಂಗ್ವಿನ್‌ಪ್ರಕಟಿಸಿದ ಈ ಪುಸ್ತಕ ಸುಲಭವಾಗಿ ಲಭ್ಯವಾಗಲಿಲ್ಲ. ಕೊನೆಗೆ ಅದೂ ಸಿಕ್ಕಿತು; ಮತ್ತು ಆ ಭಾಷಾಂತರವೂ ಕೆಲವು ಸೂತ್ರಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯಮಾಡಿತು. ಆದರೆ, ಸರಳವೆಂದು ನಾನು ತಿಳಿದಿದ್ದ ಇನ್ನು  ಕೆಲವನ್ನು ಮತ್ತಷ್ಟು ತೊಡಕುಗೊಳಿಸಿತು.

ಹೀಗೆ ನಾನು ಬಗೆಹರಿಸಿಕೊಳ್ಳಲಾಗದಂತಹ ತೊಡಕುಗಳು ಎದುರಾದಾಗ, ಲಾವ್‌ತ್ಸೆಯನ್ನು ಬಹುಜನಪ್ರಿಯಗೊಳಿಸಿದ್ದ ಲಿನ್‌ಯುಟಾಂಗ್‌ನ ಭಾಷಾಂತರವನ್ನೂ (The Wisdom of Lao Tse, The Modern Library, New York, 1948) ಹಾಗೂ ನನಗೆ ಬಹುಪ್ರಿಯವಾದ ಮಿಚೆಲ್‌ನ Tao Te Ching (Harper Perennial. 1988)ನ್ನೂ ಬಳಸಿಕೊಂಡಿದ್ದೇನೆ. ಇದನ್ನು, ಚೀನೀ ಭಾಷೆಯ ನನ್ನ ಅಜ್ಞಾನದಿಂದ ಉಂಟಾದ ಸೋಲೆಂದೇ ನಾನು ತಿಳಿದಿದ್ದೇನೆ.

ಇಲ್ಲಿ ಇನ್ನೊಂದು ವೈಯಕ್ತಿಕ ವಿಷಯವನ್ನೂ ಹೇಳಬೇಕು. ೧೯೯೩ರ ಮಾರ್ಚ್ ತಿಂಗಳಲ್ಲಿ, ಚಿಕಾಗೋ ಯುನಿವಿರ್ಸಿಟಿಯ ಪುಸ್ತಕದ ಅಂಗಡಿಯೊಂದರಲ್ಲಿ ನಾನು ಮಿಚೆಲ್‌ನ ಪುಸ್ತಕವನ್ನು ಕೊಂಡಿದ್ದು. ಆಗ, ನನ್ನ ಜೊತೆಯಲ್ಲಿ ಮಿಚೆಲ್‌ನಷ್ಟೇ ಪ್ರಸಿದ್ಧರಾದ, ಆದರೆ ಅವನಿಗಿಂತ ಹೆಚ್ಚು ಮೂಲಪಾಠನಿಷ್ಠರಾದ, ಗೆಳೆಯ ಪ್ರೊಫೆಸರ್ ಎ.ಕೆ. ರಾಮಾನುಜನ್‌ಇದ್ದರು. ಈಗ ರಾಮಾನುಜನ್‌ಇಲ್ಲ. ಅವರು ಸತ್ತ ಸುದ್ದಿ ಕೇಳಿದಾಗ ನಾನು ಮಿಚೆಲ್‌ನನ್ನು ಓದಿ ಭಾಷಾಂತರಿಸಲು ತೊಡಗಿದ್ದೆ. ಈ ಕಾಲದ ಅತ್ಯುತ್ತಮ ಭಾಷಾಂತರಕಾರರಾದ ರಾಮಾನುಜನ್‌ನೆನಪಿಗೆ ನನ್ನ ಈ ಅನುವಾದವನ್ನು ಅರ್ಪಿಸುತ್ತಿದ್ದೇನೆ.

ಒಂದು ವಿಷಯದಲ್ಲಿಯಾದರೂ, ನಾನು ರಾಮಾನುಜನ್‌ರನ್ನು ಅನುಸರಿಸಿದ್ದೇನೆ. ಯಾವ ಭಾಷಾಂತರವನ್ನೂ ಸಮರ್ಪಕವಾಗಿ ಮುಗಿಸುವುದು ಎಂಬುವುದಿಲ್ಲ, ಸುಸ್ತಾಗಿ ಕೈಬಿಟ್ಟದ್ದನ್ನು ನಾವು ಪ್ರಕಟಿಸುವುದು ಅಷ್ಟೇ-ಎಮದು ಅವರು ಹೇಳುತ್ತಿದ್ದರು. ಹತ್ತಾರು ವರ್ಷ ತನ್ನ ಭಾಷಾಂತರವನ್ನು ತಿದ್ದಿತಿದ್ದಿ ಸೋತನಂತರ, ಮೂಲದ ಭಾಷೆ ಗೊತ್ತಿದ್ದವರಾಗಿಯೂ ಅವರು ಹೇಳುತ್ತಿದ್ದ ಮಾತು ಇದು. ನನಗೆ ಮೂಲದ ಭಾಷೆ ಗೊತ್ತಿಲ್ಲ. ಗೊತ್ತಿಲ್ಲದೆ ಇಂಥ ಕೆಲಸಕ್ಕೆ ಕೈಹಾಕುವುದು ಸರಿಯಲ್ಲ.

ಆದರೆ ನನ್ನ ದುಡುಕಿಗೊಂದು ಸಮರ್ಥನೆಯಿದೆ. ಇಂಗ್ಲಿಷ್‌ಬಲ್ಲ ಕನ್ನಡಿಗರಿದ್ದಾರೆ. ಅವರು, ಇಂಗ್ಲಿಷಿನಲ್ಲಿ ನಾನು ಓದಿದ ಎಲ್ಲವನ್ನೂ ಓದಬಲ್ಲರು. ಆದರೆ ಕನ್ನಡವನ್ನು ಮಾತ್ರ ಬಲ್ಲವರಿಗೆ ನನ್ನ ಶ್ರಮದಿಂದ ಉಪಯೋಗ ಆಗಬಹುದು. ಮುಂದೊಂದು ದಿನ, ಚೀನೀ ಭಾಷೆಯನ್ನು ಕಲಿತ ಕನ್ನಡಿಗನೊಬ್ಬ, ನನ್ನ ಅನುವಾದದಿಂದ ಅತೃಪ್ತನಾಗಿ ಮತ್ತೆ ‘ದಾವ್‌ದ ಜಿಂಗ್‌’ನ್ನು ಕನ್ನಡಕ್ಕೆ ತಂದಾನು. ಇಂಗ್ಲಿಷಿನಲ್ಲಿ ಇರುವ ನೂರಾರು ದಾವ್‌ಅನುವಾದಗಳೂ ಕೂಡಾ, ಹೀಗೆಯೇ, ಚೀನೀ ಭಾಷೆ ಬಲ್ಲವರು ಮೂಲಕ್ಕೆ ಹತ್ತಿರವಾಗುವಂತೆ, ಇಂಗ್ಲಿಷಿಗೆ ಚೀನೀ ಗುಣವನ್ನು ತಂದುಕೊಡಲು ಶ್ರಮಿಸಿದ್ದರ ಫಲಗಳು.

ಐರೋಪ್ಯ ವಿದ್ವಾಂಸರನ್ನೆಲ್ಲ ಓದುತ್ತಿದ್ದಂತೆ ನನಗೊಂದು ವಿಷಯ ಮನವರಿಕೆಯಾಯಿತು. ಅವರು ಬಹುಶ್ರುತರು, ಉತ್ತಮ ಶೋಧಕರು. ಆದರೆ ಐರೋಪ್ಯ ಮನಸ್ಸಿಗೆ ಏಷ್ಯಾದ ಚಿಂತನಕ್ರಮ ಅರ್ಥವಾಗುವುದಿಲ್ಲ; ಭಾವುಕವಾಗಿ ಅವರು ಒಲಿದಾಗಲೂ ಶಾಸ್ತ್ರೀಯವಾಗಿ ಅವರು ಒಲಿಯಲಾರರು. ಅವರು ಏಷ್ಯಾದ ಅನುಭಾವವನ್ನು ಪರಿಶುದ್ಧ ಸ್ಥಿತಿಯಲ್ಲಿ ಕಾಣಲು ಆಸೆಪಡುತ್ತಾರೆ. ಅವರ ಪ್ರಕಾರ-ಒಂದೋ ಮನುಷ್ಯ ಅನುಭಾವಿಯಾಗಿ ಅಲೌಕಿಕನಾಗಿರಬೇಕು; ಅಥವಾ ಅವನು ಲೌಕಿಕನಾಗಿ  ಭೌತಪ್ರಪಂಚದ ಪ್ರಯೋಜನಕಾರಿಯಾದ ವಿಷಯಗಳಲ್ಲಿ ಆಸಕ್ತನಾಗಿರಬೇಕು. ಅವನು ಒಟ್ಟಾಗಿ ಎರಡೂ ಆಗಿರಲಾರ. ಹೀಗೆ, ಇಲ್ಲವಾದರೆ ಹಾಗೆ; ಎರಡರಲ್ಲಿ ಒಂದು ಮಾತ್ರ ನಿಜ – ಇದು ಅವರ ಗ್ರಹಿಕೆ.

ತಮ್ಮ ಹಿರಿಮೆಯನ್ನೂ, ಪ್ರಪಂಚದ ಮೇಲಿನ ತಮ್ಮ ಅಧಿಕಾರವನ್ನೂ ಲೋಕನಿಷ್ಠ ತಾಂತ್ರಿಕತೆಯಿಂದ ಸ್ಥಾಪಿಸಿಕೊಂಡುಬಿಟ್ಟಿರುವ ಐರೋಪ್ಯರಿಗೆ ಏಷ್ಯಾದ ಅನುಭಾವವು ತಮ್ಮ ಜೀವನಕ್ರಮದ ಲೋಪದಿಂದಾಗಿ – ಅಂದರೆ, ವಿಲೋಮಗುಣದಿಂದಾಗಿ – ಪ್ರಿಯವಾದ್ದು. ತಮ್ಮಲ್ಲಿ ಇಲ್ಲದ್ದನ್ನು, ತಮ್ಮದಲ್ಲದ್ದನ್ನು ಪರರಲ್ಲಿ ಕಾಣುವುದಾಗಲೀ, ಅದನ್ನು ಮೆಚ್ಚುವುದಾಗಲೀ ಅವರ ಲೌಕಿಕ ಪಾರಮ್ಯನನ್ನು ಅಲುಗಾಡಿಸುವಂಥ ಭಾವನೆಯಲ್ಲ. ತಮ್ಮ ಕೊರತೆ ಯನ್ನು ಬೌದ್ಧಿಕವಾಗಿ ಹೀಗೆ ತುಂಬಿಕೊಳ್ಳುವುದೂ ಅವರಿಗೆ ಗೊತ್ತಿಲ್ಲದಂತೆಯೇ ಅವರ ಲೌಕಿಕ ಪಾರಮ್ಯವನ್ನು ಬೆಳೆಸುವಂತ ಸಂಗತಿಯೇ ಸರಿ. ಆದ್ದರಿಂದ ಏಷ್ಯಾದ ಋಷಿಗಳು ತಮ್ಮದೇ ಆದ ರೀತಿಯಲ್ಲಿ ಈಲೋಕದ ಬಗ್ಗೆ ತಲೆಕೆಡಿಸಿಕೊಂಡ ಚಿಂತನಶೀಲರು ಎಂಬುದು ಅವರನ್ನು ಗೊಂದಲಕ್ಕೀಡುಮಾಡುತ್ತದೆ. ವಾಸ್ತವಿಕ ಪ್ರಪಂಚವನ್ನು ತಾವು ತಾಂತ್ರಿಕ ಜ್ಞಾನದಲ್ಲಿ ಅರಿತಂತೆಯೇ, ಏಷ್ಯಾದಲ್ಲೂ ಅನುಭಾವಿಗಳು ಅರಿಯಬಲ್ಲವರಾಗಿದ್ದರು ಎಂಬುದಾಗಲೀ, ಇಹಕ್ಕೂ ಪರಕ್ಕೂ ಒಟ್ಟಾಗಿ ಸಲ್ಲುವ ಸಮಗ್ರ ಪವಿತ್ರ ಕಲ್ಪನೆಯೊಂದು, ಐರೋಪ್ಯ ವೈಜ್ಞಾನಿಕ ಚಿಂತನಾಕ್ರಮಕ್ಕೆ ಲೌಕಿಕ ಕಾರಣಕ್ಕಾಗಿಯೇ ಸವಾಲಾಗಬಲ್ಲುದೆಂಬುದಾಗಲೀ ಅವರಿಗೆ ಮನದಟ್ಟಾಗುವುದು ಕಷ್ಟ. ಮನದಟ್ಟಾದರೆ ಅವರು ಈಗಿರುವಂತೆ ಇರಲಾರರು. ಅದು ಭಯ ಹುಟ್ಟಿಸುವ ಸಂಗತಿ.

ಒಮ್ಮೆ, ಅಮೇರಿಕಾದ ವೇದಾಂತಿಯೊಬ್ಬ ನನ್ನನ್ನು ಕೇಳಿದ; ‘ಈಶಾವಾಸ್ಯ ಉಪನಿಷತ್ತಿ’ನಲ್ಲಿ ಅಷ್ಟು ಉದಾತ್ತವಾಗಿ ಸೃಷ್ಟಿಯನ್ನು ಧ್ಯಾನಿಸುವ ಮಾತುಗಳ ಜೊತೆಗೇ ಬೇರೆಯವರ ಆಸ್ತಿಗೆ ಆಸೆಪಡಬೇಡ ಎಂಬರ್ಥದ ಲೌಕಿಕ ನೀತಿಯ ಮಾತು ಯಾಕೆ ಬರಬೇಕು? ಓದುವಾಗ ಈ ಮಾತಿನಿಂದ ಎಡವಿದಂತೆ ಆಗುತ್ತದೆಯಲ್ಲವೆ?

ಏಷ್ಯಾದ ನೈಜ ಚಿಂತನಾಕ್ರಮ, ಇಂಥ ಬೆರಕೆಯಲ್ಲೇ ಇದೆ. ಬೆರಕೆ ಎಂಬ ಶಬ್ದವೇ ಇಲ್ಲಿ ಸರಿಯಲ್ಲ. ವ್ಯಾವಹಾರಿಕ ಬದುಕು ಮತ್ತು ಆಧ್ಯಾತ್ಮಿಕವಾದ ಪರಮಸತ್ಯ-ಇವೆರಡೂ ನಮ್ಮ ಅತ್ಯುತ್ತಮ ಅನುಭಾವಿಗಳಿಗೆ ಬೇರೆ ಬೆರೆಯಲ್ಲ. ಹಾಗೆ ಅಂದುಕೊಂಡವರು ಭಾರತದಲ್ಲಿ ಇದ್ದರೆಂದು ಹೇಳಬಹುದು. ಶಂಕರರು ಹಾಗೋ?-ನನಗೆ ತಿಳಿಯದು. ಆದರೆ ಶಿವಶರಣರು ಕಾಯಕವನ್ನು ಕಲ್ಪಿಸಿಕೊಂಡ ರೀತಿ, ರಾಮಕೃಷ್ಣ ಪರಮಹಂಸರು ತಮ್ಮ ಗಾಢ ಅನುಭವಗಳನ್ನು ಹೇಳಿಕೊಳ್ಳಲು ಬಳಸುವ ಒರಟಾದ ಭಾಷೆ-ಇವೆಲ್ಲವೂ, ಅವರು ಎಷ್ಟು ಮಣ್ಣಿನವರೂ ಪ್ರಪಂಚದವರೂ ಆಗಿದ್ದು ಜತೆಗೇ, ದಿವ್ಯಕ್ಕೆ ಕೈ ಚಾಚಿದ್ದರು ಎಂಬುದನ್ನು ತೋರಿಸುತ್ತದೆ. ಲಾವ್‌ತ್ಸೆ ಕೂಡ ಈ ಬಗೆಯ ಒಬ್ಬ ಮನುಷ್ಯ. ಅವನ ಸೂತ್ರಗಳು ದಾವ್‌ಧ್ಯಾನವೂ ಹೌದು; ದಾವ್‌ಪ್ರಕಟಗೊಂಡು ಗೋಚರವಾಗುವುದರ ಪ್ರಾಪಂಚಿಕ ಧರ್ಮದ ಧ್ಯಾನವೂ ಹೌದು; ರಾಜ್ಯವನ್ನು ಹೇಗೆ ಆಳಬೇಕೆಂಬ ಅವನ ಕಾಲಕ್ಕೆ ಪ್ರಸ್ತುತವಾದ ನೀತಿಸಂಹಿತೆಯೂ ಹೌದು. ಅಂದರೆ ಈ ಸೂತ್ರಗಳು ಅವನಿಗೆ ಉಪಾಯಗಳು: ಉಪ + ಆಯ – ಅಂದರೆ ಸತ್ಯಕ್ಕೆ ಹತ್ತಿರವಾಗುವ ಧ್ಯಾನಗಳು.

ಮಿಚೆಲ್‌ನಂತಹ ಭಾವುಕ ಅನುವಾದಕರಿಗೆ ಲಾವ್‌ತ್ಸೆಯ ಪ್ರಾಪಂಚಿಕ ವಿವರಗಳು ಅನಗತ್ಯವಾಗಿ ಕಾಣುತ್ತವೆ. ಅವು ರಸದಲ್ಲಿ ಬೆರೆತುಹೋದ ಕಸ. ಉಳಿದ ಕಠಿಣನಿಷ್ಠೆಯ ಪಂಡಿತರಿಗೋ, ಚೀನೀ ಅನುಭಾವವು ಆಕರ್ಷಕವಾದ, ಚೀನೀಯರಿಗೇ ವಿಶಿಷ್ಟವಾದ, ಮತ್ತು ಯುರೋಪಿಗೆ ಕುತೂಹಲಕಾರಿಯಾದ – ಮಂಕುಬೂದಿ. ಈ ಮಂಕುಬೂದಿಯನ್ನು ಎರಚುವ ಉದ್ದೇಶ, ಜನರು ಅತೃಪ್ತರಾಗದಂತೆ ಅವರನ್ನು ತಣ್ಣಗಿಟ್ಟು ಆಳುವುದು. ಆದ್ದರಿಂದ ಲಾವ್‌ತ್ಸೆಯ ಉದ್ದೇಶವೂ, ಅವರ ಪ್ರಕಾರ, ಹೇಗೆ ಜನರ ಹೊಟ್ಟೆಯನ್ನು ತುಂಬಿ ಮಿದುಳನ್ನು ಖಾಲಿಯಾಗಿಡಬೇಕೆಂಬುದನ್ನು ರಾಜರಿಗೆ ಕಲಿಸುವುದು.

ಹೀಗೆ, ಮಿಚೆಲ್‌ನ ಭಾವುಕ ಓದನ್ನೂ, ಮತ್ತು ಇನ್ನೊಂದು ಬಗೆಯ ಒಳಸಂಚಿನ ಅನುಮಾನದ ಓದನ್ನೂ – ಈ ಎರಡನ್ನೂ ತ್ಯಜಿಸಿ ಲಾವ್‌ತ್ಸೆಯ ಐಹಿಕ-ಪಾರಮಾರ್ಥಿಕಗಳೆರಡನ್ನೂ ಒಳಗೊಂಡ ಸಮಗ್ರದೃಷ್ಟಿಯನ್ನು, ನಾನು ಎಲ್ಲೆಡೆಯಲ್ಲೂ ವ್ಯಂಜಿಸಲಾರದೆ ಹೋಗಿದ್‌ಏನೋ ಎಂಬ ಅನುಮಾನದಲ್ಲಿ ಇದ್ದೇ, ಈ ಅನುವಾದ ಮಾಡಿದ್ದೇನೆ. ಉದಾಹರಣೆಗೆ, ಅವನು ‘ಮಿದುಳನ್ನು ಖಾಲಿಮಾಡಿ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತಾನೆ’ ಎನ್ನುವಾಗ ನಾನು ಅಂಜಿ, ‘ಹೊಟ್ಟೆ’ ಎನ್ನುವುದರ ಬದಲಾಗಿ ‘ಒಡಲು’ ಎನ್ನುವ ಶಬ್ದವನ್ನು ಬಳಸಿದ್ದೇನೆ.

ಆದ್ದರಿಂದ ನಮ್ಮ ರಾಜಋಷಿ ತನ್ನ ಆಳ್ವಿಕೆಯಲ್ಲಿ
ಮಿದುಳನ್ನ ಖಾಲಿ ಮಾಡಿ ಒಡಲನ್ನು ತುಂಬುತ್ತಾನೆ
ಮಹತ್ವಾಕಾಂಕ್ಷೆಯನ್ನು ಸೊರಗಿಸಿ
ಮೂಳೆಗಳನ್ನ ದೃಢಗೊಳಿಸುತ್ತಾನೆ.
ತಿಳಿಯೋ ತೆವಲು ಜನರಿಗೆ ತಟ್ಟದ ಹಾಗೆ ಮಾಡಿ
ತಿಳಿದವರ ತೀಟೆಗೆ ಅವಕಾಶವಿರುವ ಹಾಗೆ ನೋಡಿಕೊಳ್ಳುತ್ತಾನೆ
ಜಗತ್ತು ಆಗ ಸ್ವಸ್ಥವಾಗಿರುತ್ತದೆ. ()

ಚೀನೀ ಭಾಷೆಯ ಚಿತ್ರಭಾವಲಿಪಿಯನ್ನು ಓದಬಲ್ಲವರಿಗೂ ಇಂಥ ತೊಡಕು ಎದುರಾದರೆ, ಇನ್ನು, ಅದನ್ನು ತಿಳಿಯದ ನನ್ನ ಪಾಡೇನು?

ಚೀನೀಯರ ಚಿತ್ರಭಾವಲಿಪಿಯನ್ನು ಹೇಗೆ ಓದಬಹುದು ಎಂಬುದರಲ್ಲೇ, ಓದುಗನೊಬ್ಬ ತನಗೆ ಅಲ್ಲಿ ಕಂಡಷ್ಟನ್ನು ವ್ಯಾಖ್ಯಾನಿಸಿಕೊಳ್ಳುವ ಸಾಧ್ಯತೆಗಳನ್ನೂ ಅದು ಒಳಗೊಂಡಿರುತ್ತದೆ. ಚಿತ್ರಭಾವಲಿಪಿಯು, ಸಂಬಂಧಸೂಚಕವಾದ ಹಲವು ಶಬ್ದಗಳನ್ನು ಬಿಟ್ಟುಕೊಟ್ಟ ಟೆಲಿಗ್ರಾಂನ ಹಾಗೆ ಇರುತ್ತದೆಯಂತೆ. ಉದಾಹರಣೆಗೆ ದಾವ್‌ಸ್ವರೂಪವನ್ನು ಧ್ಯಾನಿಸುವ ಮೊದಲ ಅಧ್ಯಾಯವನ್ನು ಎತ್ತಿಕೊಳ್ಳಬಹುದು. ‘ವಿವರಣೆಗೆ ದಕ್ಕುವ ದಾವ್‌/ಶಾಶ್ವತ ದಾವ್‌ಅಲ್ಲ’-ಎಂದು ಇಲ್ಲಿ ಭಾಷಾಂತರವಾದ ಮಾತಿನ ಮೂಲ ಭಾವಲಿಪಿಯಲ್ಲಿ, ‘ದಾವ್‌’ನ್ನು ಸೂಚಿಸುವ ಭಾವಲಿಪಿಯು ‘ವಿವರಣೆಗೆ ದಕ್ಕುವ’ ಎಂಬ ಮಾತನ್ನೂ ಧ್ವನಿಸುತ್ತದೆ. ‘ದಾವ್‌’ ಎಂದರೆ ದಾವ್‌; ಹಾಗೆಯೇ ದಾವ್‌ಎಂದರೆ ದಾವ್‌ಇಸು – ‘ವಿವರಿಸು’ ಎಂದೂ ಅರ್ಥವಾಗಬಲ್ಲದು. (ಮೂರನೇ ಶತಮಾನದಲ್ಲಿ ಈ ಸಂಕೇತಕ್ಕೆ ಬೇರೆ ಅರ್ಥ ಇದ್ದಿರಬಹುದೆಂದು ಅಲಾನ್‌ವ್ಯಾಟ್ಸ್‌ಹೇಳುತ್ತಾನೆ. Tao Pelican. 1975) ಆದ್ದರಿಂದ ಮೇಲೆ ಉಲ್ಲೇಖಿಸಿದ ಸಾಲಿಗೆ, ಇಂಗ್ಲಿಷಿನಲ್ಲಿ ಈ ಕೆಳಗಿನ ಹಲವು ಭಾಷಾಂತರಗಳು ಸಾಧ್ಯವಾಗುತ್ತವೆ:

The Tao that can be told of is not the Absolute Tao (Lin Yutang)

The way can be told of is not an Unvarying way (Waley)

The Tao that is the subject of discussion is not the true Tao (Old)

The way that may truly be regarded as the way is other than a permanent way (Duyvendak)

The Tao that can be Tao-ed is not the invariable Tao (Fungyulan)

‘ದಾವ್‌’ನ ಭಾವಲಿಪಿಯು ಪಯಣದ ದಾರಿಯನ್ನೂ, ತಲೆಯನ್ನೂ ಸೂಚಿಸುವಂತೆ ಇದೆಯೆನ್ನುತ್ತಾರೆ. ಮುಂದೆ ಅದು ಶೀಘ್ರಪ್ರಯಾಣದ ಸೂಚಕವಾಗುವುದರ ಬದಲು, ಹೆಜ್ಜೆಸಾಲಿನ ಪಯಣದ ಸೂಚಕವಾಯಿತಂತೆ. ಹೀಗಾಗಿ ಅದು ನಡಿಗೆಯ ಲಯದಲ್ಲಿ ಮುಂದಾಗುವ ಯಾಂಗ್‌ನ್ನೂ (ಪುರುಷ) ಕಾಯುವ ಯಿನ್‌ನನ್ನೂ (ಸ್ತ್ರೀ ಸೂಚಿಸಬಲ್ಲುದಾಯಿತಂತೆ. ಭಾವಿಸಿದಂತೆ ಭಾಸವಾಗುವ ಈ ದಾವ್‌ನನ್ನು ಪಥವೆಂದೂ, ವಿಚಾರವೆಂದೂ, ಅದೃಷ್ಟವೆಂದೂ, ವಾಕ್‌ಎಂದೂ ಅರ್ಥ ಅರ್ಥಮಾಡಿಕೊಳ್ಳಲು ಸಾಧ್ಯವೆನ್ನುತ್ತಾರೆ. ‘ಯತ್‌ಭಾವಂ ತತ್‌ಭವತಿ’-ಅದು ದಾವ್‌.

ಆದರೆ, ದಾವ್‌ಬಗ್ಗೆ, ಇಷ್ಟು ಮಾತ್ರ ಎಲ್ಲರಿಗೂ ಸ್ಪಷ್ಟವಾಗುವಂತಿದೆ: ಅದು ತಂದೆಯಂತಲ್ಲ; ಅದು ತಾಯಿಯಂತೆ. ಅದು ನಿಂತಿರುವುದಲ್ಲ; ನೀರಿನಂತೆ ಹರಿಯುತ್ತದೆ. ಅದು ಕಾಣುವುದಿಲ್ಲ; ಆದರೆ ಅದನ್ನು ಪಡೆಯಬಹುದು. ಅದು ಹೆಸರಿಗೆ ಅತೀತ; ಆದರೆ ಆಸೆಪಟ್ಟಾಗ ಪ್ರತ್ಯಕ್ಷವಾಗುವ ಅದು ಹೆಸರನ್ನೂ ಪಡೆಯುತ್ತದೆ:

ವಿವರಣೆಗೆ ದಕ್ಕುವ ದಾವ್
ಶಾಶ್ವತ ದಾವ್ಅಲ್ಲ
ಗುರುತಿಸುವುದಕ್ಕೆ ಸಿಗುವ ಹೆಸರು
ಶಾಶ್ವತ ಹೆಸರು ಅಲ್ಲ

ಹೆಸರಿಗೆ ದಕ್ಕದ್ದು ಸರ್ವಸ್ವಕ್ಕೂ ಆದಿ
ದಕ್ಕಿದ್ದು, ಎಲ್ಲ ಸೃಷ್ಟಿಯ ಮಾಯಿ

ಹಂಬಲ ತೊರೆದು ಮೂಲದ ಮರ್ಮ ಅರಿ
ಹಂಬಲ ಪಟ್ಟು ಒಡಲುಗೊಂಡಷ್ಟು ಕಾಣು

ಯಾವ ದಾವ್, ಒಡಲುಗೊಂಡು ಹೊರಹೊಮ್ಮಿ ಹೆಸರು ಪಡೆಯುವುದೊ;
ಪಡೆದು, ಇಬ್ಬಗೆಯಾಗಿ ತೋರುವುದೊ;

ತೋರಿದರೂ ಉಗಮದಲ್ಲಿ ಗೂಢಕ್ಕೂ ಗೂಢವಾದದ್ದೊ
ಅದೇ ಎಲ್ಲ ಮರ್ಮದ ಮುಂಬಾಗಿಲು. ()

ಜ್ಞಾನದಿಂದ ಅದು ದಕ್ಕುವುದಿಲ್ಲ. ಜಿಡ್ಡು ಕೃಷ್ಣಮೂರ್ತಿ ಹೇಳುತ್ತಿದ್ದರು: ವಿಳಾಸ ಇತ್ಯಾದಿಗಳನ್ನು ತಿಳಿಯಲು ಮಾತ್ರ knowledge ಉಪಯುಕ್ತ. ಆದರೆ ಆತ್ಮದ ಬಗ್ಗೆಯಾಗಲಿ ನಮ್ಮ ಭಾವನಾಲೋಕದ ಬಗ್ಗೆಯಾಗಲಿ ಇರುವ ಜ್ಞಾನವೆಲ್ಲವೂ ನಿರುಪಯುಕ್ತ. ಅವರ ಪ್ರಕಾರ – ಕಾಣಬೇಕು, ಕಾಣುತ್ತ ಆಗಬೇಕು, ಏಕಾಗ್ರ ಮನಸ್ಸಿನಿಂದ ಎದುರಿರುವುದನ್ನು ಗಮನಿಸಬೇಕು – ಅಷ್ಟೆ. ತ್ರಿಕರಣಪೂರ್ವಕವಾಗಿ ಹಾಜರಾಗಿರುವ ಎಚ್ಚರದ ಸ್ಥಿತಿಯಿಂದ ಮಾತ್ರ ಲಭ್ಯವಾಗುವ ಸ್ಥಿತಿಯೊಂದನ್ನು ಅವರು ಪ್ರತಿಪಾದಿಸುತ್ತಿದ್ದರು. ಇದು ಕೂಡ ಪ್ರಯತ್ನಕ್ಕೆ ಲಭ್ಯವಲ್ಲ; ಶ್ರಮದಲ್ಲಿ ಆಯ್ದದ್ದಲ್ಲ. ಸಂಭವಿಸಿಬಿಡುವ ಸ್ಥಿತಿ ಅದು.

ಆದರೆ ಜೆಕೆಯವರು ಮಾತಿನಿಂದ ಪ್ರಯೋಜನವಿಲ್ಲವೆನ್ನುತ್ತಲೇ ಸತತವಾಗಿ ನಿರರ್ಗಳ ಮಾತಾಡುತ್ತಿದ್ದರು. ಇದೊಂದು ಅಭಾಸ. ಲಾವ್‌-ತ್ಸೆಯೂ ಯಾವುದನ್ನು ವರ್ಣನಾತೀತ ಎನ್ನುತ್ತಾನೋ ಅದನ್ನೇ ವರ್ಣಿಸುತ್ತಲೂ ಇರುತ್ತಾನೆ. ಪೋ ಚು ಯಿ ಎಂಬ ಚೀನೀ ಹಾಸ್ಯಗಾರ ಅವನನ್ನು ಹೀಗೆ ಗೇಲಿಮಾಡುತ್ತಾನೆ:

ನಿಜದ ಮಾತು ನಿರರ್ಗಳವಲ್ಲ. ನಿರರ್ಗಳ ಮಾತು ನಿಜವಲ್ಲ;’ಎಂದು ಲಾವ್ತ್ಸೆ ನಮಗೆ ಹೇಳುತ್ತಾನೆ ನಿಜ. ಆದರೆ ಅದು ಸಹಸ್ರ ಮಾತುಗಳ ಗ್ರಂಥದಲ್ಲಿ ಹಾಗೆ ಹೇಳುತ್ತಾನೆ. ತಾನೊಬ್ಬ ನಿಜ ತಿಳಿದವನಾಗಿದ್ದರೆ ಲಾವ್ತ್ಸೆ ಹೇಗೆ ಅಷ್ಟು ದೊಡ್ಡ ಬಾಯಿಬಡುಕನಾಗುತ್ತಿದ್ದ?

ಎಲ್ಲ ಆಧ್ಯಾತ್ಮಿಕ ಗುರುಗಳ ಸಮಸ್ಯೆ-ಇಲ್ಲಿದೆ. ಬೌದ್ಧದರ್ಶನದಲ್ಲಿನ ಒಂದು ರೂಪಕ ನನಗಿಲ್ಲಿ ನೆನಪಾಗುತ್ತದೆ. ಗುರುವು ಬೆರಳು ಮಾಡಿ ಚಂದ್ರನನ್ನು ತೋರುಸುತ್ತಾನೆ. ಆದರೆ ಗುರುವಿನ ಬೆರಳನ್ನು ಮಾತ್ರ ನೀನು ಕಾಣುವುದಾದರೆ, ಅವನು ತೋರಿಸುವ ಚಂದ್ರ ನಿನಗೆ ಕಾಣುವುದೇ ಇಲ್ಲ.

ಮಾತ್ಸು ಎಂಬ ಗುರುವನ್ನು ಒಬ್ಬ ಭಿಕ್ಷು ಕೇಳುತ್ತಾನೆ: ‘ಮನಸ್ಸು ಬುದ್ದ ಎಂದು
ಯಾಕೆ ನೀನು ಉಪದೇಶ ಮಾಡುತ್ತಿ?’
ಮಾತ್ಸು ಹೇಳುತ್ತಾನೆ, ‘ಮಗು ಅಳುವುದನ್ನು ನಿಲ್ಲಿಸಲಿ ಅಂತ.’
ಭಿಕ್ಷು ಕೇಳುತ್ತಾನೆ, ‘ಮಗು ಅಳುವನ್ನು ನಿಲ್ಲಿಸಿದ ಮೇಲೆ ಮುಂದೇನು?’
ಮಾತ್ಸು ಹೇಳುತ್ತಾನೆ, ‘ಆಗ ನನ್ನ ಉಪದೇಶ: ಮನಸ್ಸೂ ಇಲ್ಲ, ಬುದ್ಧನೂ ಇಲ್ಲ.’
ಭಿಕ್ಷು ಕೇಳುತ್ತಾನೆ, ‘ ಎರಡರ ಬಗ್ಗೆಯೂ ನಿರಾಸಕ್ತರಾದವರಿಗೆ ಏನು ಹೇಳುತ್ತೀಯ?’
ಮಾತ್ಸು ಹೇಳುತ್ತಾನೆ, ‘ಜೀವಿಗಳೂ ಇಲ್ಲ ಎಂದು ಅಂಥವರಿಗೆ ಹೇಳುತ್ತೇನೆ
ಭಿಕ್ಷು ಕೇಳುತ್ತಾನೆ, ‘ಏನನ್ನೂ ಹಚ್ಚಿಕೊಳ್ಳದವನೊಬ್ಬ ನಿನಗೆ ಸಿಕ್ಕರೆ, ಅವನಿಗೆ ನೀನೇನು ಹೇಳುವಿ?’
ಮಾತ್ಸು ಉತ್ತರಿಸುತ್ತಾನೆ, ‘ಘನವಾದ ದಾವ್ನನ್ನು ಅನುಭವಿಸಲು ಅವನನ್ನು ಬಿಟ್ಟುಬಿಡುತ್ತೇನೆ.’

‘ಯತೋ ವಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ’ – ಅದು ಮಾತಿಗೆ ನಿಲುಕದ್ದು, ಮನಸ್ಸಿಗೂ ನಿಲುಕದ್ದು, ನಿಜ. ಆದರೆ ಹೇಳಲೇಬೇಕು ಎನ್ನಿಸಿದಾಗ ಅಲ್ಲಮನಂತೆ, ಲಾವ್‌-ತ್ಸೆಯಂತೆ, ಉಪನಿಷತ್ತಿನ ಋಷಿಗಳಂತೆ ವಕ್ರವಾಗಿ, ಒಗಟುಗಳಲ್ಲಿ, ವೈರುದ್ಯಗಳಲ್ಲಿ ಮಾತಾಡುವುದು ಅವರ ಕ್ರಮ. ಕಿರ್ಕ್‌ಗಾರ್ಡ್‌ನ ಪ್ರಕಾರ, ನಮ್ಮನ್ನು ತಟ್ಟುವ-ಮುಟ್ಟುವ ಸಾಕ್ರಟೀಸನ ಮಾತುಗಳೆಲ್ಲ ಹೀಗೇ ನಮ್ಮನ್ನು ಕೊಕ್ಕೆಯಂತೆ ಸಿಕ್ಕಿಸಿ, ನಮ್ಮ ತಾರ್ಕಿಕತೆಯು ಮುಗ್ಗರಿಸುವ ಹಾಗೆ ಮಾಡಿ ಧ್ಯಾನಕ್ಕೆ ಹಚ್ಚುವ ವಕ್ರ ಉಪಾಯಗಳು.

ದಾವ್‌ನ ಸ್ವರೂಪ ಕುರಿತು ಧ್ಯಾನಿಸುವಾಗೆಲ್ಲ ಲಾವ್‌-ತ್ಸೆಯು ಬಳಸುವ ಕೆಲವು ಚಿತ್ರಗಳನ್ನು ಗಮನಸಿಬೇಕು – ಅವು ಎತ್ತರವಾದದ್ದರ ಸೂಚಕಗಳಲ್ಲ, ತಗ್ಗಿನ ಸೂಚಕಗಳು; ಗಂಡಿನ ಸೂಚಕಗಳಲ್ಲ, ಹೆಣ್ಣಿನ ಸೂಚಕಗಳು.

ದಾವ್ಒಂದು ಬಾವಿ
ಸೇದಿದಷ್ಟು ಒದಗುತ್ತದೆ
ಅದು ಶಾಶ್ವತ ತೆರವು
ತಳ ತೋರದಂತೆ ತುಂಬಿರುತ್ತದೆ

ಸದಾ ಇರುತ್ತದೆ, ಕಾಣಿಸಿಕೊಳ್ಳುವುದಿಲ್ಲ
ಯಾರಿಗೆ ಹುಟ್ಟಿತೊ ತಿಳಿಯುವುದಿಲ್ಲ
ದೇವರಿಗೆ ಅಂದರೆ
ದೇವರಿಗೂ ಅದು ಪುರಾತನ           ()

ಇಲ್ಲಿ ಬರುವ – ಬಾವಿ, ಹಾಗೆಯೇ ಮುಂದಿನ ಅಧ್ಯಾಯಗಳಲ್ಲಿ ಬರುವ -ಕಣಿವೆ, ತಿದಿ, ಭೂಮ್ಯಾಕಾಶಗಳ ನಡುವಿನ ಜಗ, ಕೀಳಾದ ತಗ್ಗಲ್ಲಿ ಹರಿದು ನಿಲ್ಲುವ ನೀರು (ನೋಡಿ ಅಧ್ಯಾಯ ೫, ೬, ೮, ಇತ್ಯಾದಿ) – ಇವೆಲ್ಲವೂ ಹಲವು ಪರಿಯಲ್ಲಿ ದಾವ್‌ನ ಸ್ವರೂಪವನ್ನು ಕುರಿತಂಥವು.

ಆದರೆ ದಾವ್‌ವಿಶೇಷವಾದೊಂದು ಸ್ಥಿತಿಯಲ್ಲ. ಅದು ಸರ್ವ ಸಾಮಾನ್ಯವಾದ್ದು:

ಚಾವೊಚೌ ಎಂಬಾತ ನಾನ್ಜುವಾನ್ನನ್ನು ಕೇಳುತ್ತಾನೆ, ‘ದಾವ್ಎಂದರೆ ಏನು?>’
ನಾನ್ಜುವನ್ಉತ್ತರ, ‘ಪ್ರತಿನಿತ್ಯದ ಮನಸ್ಸೇ ದಾವ್’.
ಚಾವೊಚೌ ಹೇಳುತ್ತಾನೆ, ‘ಅದನ್ನು ನಾನು ಪಡೆಯುವುದು ಹೇಗೆ?’
ನಾನ್ಜುವಾನ್ಉತ್ತರ, ‘ಪಡೆಯಲು ಪ್ರಯತ್ನಿಸಿದಷ್ಟೂ ಅದು ನಿನ್ನಿಂದ ದೂರವಾಗುತ್ತದೆ.’
ಚಾವೊಚೌ ಕೇಳುತ್ತಾನೆ, ‘ಅದಕ್ಕೆ ಹತ್ತಿರವಾಗದೆ ಹೇಗೆ ಅದನ್ನು ಅರಿಯಲಿ?’
ಆಗ ಗುರು ಹೇಳುತ್ತಾನೆ, ‘ಅದು ಅರ್ಥವಾಗುವ ಅಥವಾ ಅರ್ಥವಾಗದಿರುವ ವಿಷಯವ್ಲ. ಅಥ್ವಾಗಿದೆ ಎಂದು ತಿಳಿಯುವುದು ಭ್ರಾಂತಿ. ಅರ್ಥವಾಗದಿರುವುದು ತಾತ್ಸಾರ. ಅಪ್ರಾಪ್ಯವಾದ ದಾವ್ನನ್ನು ನೀನು ಹೊಂದಿದಾಗ ಅದು ಶುದ್ಧವಾದ ಆಕಾಶದಂತೆ ಅನಂತವೂ ಪ್ರಶಾಂತವೂ ಆಗಿರುತ್ತದೆ. ನೀನು ಒಪ್ಪುವುದಕ್ಕಾಗಕೀ, ಒಪ್ಪದೇ ಇರುವುದಕ್ಕಾಗಲೀ ಅಲ್ಲಿ ಅವಕಾಶವೇ ಇರುವುದಿಲ್ಲ’ (ಜುವಾಂಗ್ತ್ಸೆ)

ರಮಣಮಹರ್ಷಿಗಳೂ ಇದನ್ನೇ ಹೇಳುತ್ತಿರಬಹುದೆ?

ನಾವೇ ಸತ್ಯವಾಗಿದ್ದು, ಸತ್ಯವನ್ನು ನನ್ನ ಹೊರಗಿದೆ ಎಂದು ತಿಳಿದು ಹುಡುಕುವುದು ಇದೆಯಲ್ಲಇದೇ ಪರಮಾಶ್ಚರ್ಯದ ಸಂಗತಿ. ಸತ್ಯವನ್ನು ಏನೋ ಮುಚ್ಚಿದೆ, ಮುಚ್ಚಿದ್ದನ್ನು ಹರಿದುಹಾಕಿ ಸತ್ಯ ಕಾಣಬೇಕುಎಂದು ನಾವು ಪರದಾಡುತ್ತೇವೆಅದು ಎಷ್ಟು ಹಾಸ್ಯಾಸ್ಪದ! ಮುಂದೊಂದು ದಿನ, ಅರಿವಿನ ಬೆಳಗಿನಲ್ಲಿ, ಹಿಮದಿನ ನಿನ್ನ ಪರದಾಟ ನೆನೆದು ನೀನೇ ನಕ್ಕುಬಿಡುತ್ತೀಯ. ನೀನು ನಗೆಯಾಡುವ ಮುಂದಿನ ದಿನ ಇಂದು, ಇಲ್ಲೇ, ಸದ್ಯದಲ್ಲೇ ಇದೆಎಂಬುದನ್ನು ನೀನು ತಿಳಿಯೆ.

ಲಾವ್‌-ತ್ಸೆ ಹಸುಗೂಸಿನ ಸ್ಥಿತಿಯ ಬಗ್ಗೆ ಹೇಳುವುದನ್ನು ಗಮನಿಸಬೇಕು

ಕೂಸಿನ ಮೂಳೆ ಮೃದು, ಸ್ನಾಯು ದುರ್ಬಲ
ಆದರೆ ಅದರ ಮುಷ್ಠಿ ಮಾತ್ರ ಬಲು ಬಿಗಿ;
ಗಂಡು ಹೆಣ್ಣಿನ ಸಂಬಂಧವನ್ನು ಅದು ಅರಿಯದಾದರೂ
ಅದರ ಜೀವಶಕ್ತಿ ಎಷ್ಟು ತೀವ್ರವೆಂದರೆ
ಅದರ ಜನನಾಂಗ ನಿಗುರಿ ನಿಲ್ಲಬಲ್ಲದು“;
ಇಡೀ ದಿನ ಅದು ಕಿಟಾರನೆ ಕಿರುಚಿ ಅತ್ತರೂ ಅದರ ಧ್ವನಿ ಒಡೆದು ಒರಟಾಗದು.

ಅಷ್ಟು ಸಹಜವಾಗಿ ತನ್ನಲ್ಲಿ ಹೊಂದಿಕೊಂಡಿರುತ್ತದೆ ಶಿಶು. (೫೫)

ಲಾವ್‌-ತ್ಸೆಯ ಪರಮಶಿಷ್ಯನೂ ದಾವ್‌ನ ಪ್ರತಿಪಾದಕನೂ ಆದ ಜುವಾಂಗ್‌-ತ್ಸೆ-ಅವನೂ ಒಬ್ಬ ಮಹಾ ಕುಶಲಿಯಾದ ಮಾತುಗಾರ-ಆತ, ಮಗುವಿನ ಬಗ್ಗೆ ಹೀಗೆ ಬೆರಗಿನಲ್ಲಿ ಮಾತಾಡುತ್ತಾನೆ; ಲಾವ್‌-ತ್ಸೆಯನ್ನು ಹೀಗೆ ವಿವರಿಸುತ್ತಾನೆ:

ತನ್ನ ಗಂಟಲನ್ನು ದಣಿಸಿಕೊಳ್ಳದಂತೆ ಕೂಸು ಇಡೀ ದಿನ ಅಳುತ್ತಿರುತ್ತದೆ. ಇಡೀ ದಿನ ತನ್ನ ಮುಷ್ಠಿಗಳನ್ನು ಬಿಗಿಹಿಡಿದಿದ್ದೂ ಅದರ ಕೈಗಳು ಮರಗಟ್ಟುವುದಿಲ್ಲ. ಇಡೀ ದಿನ ದುರುಗುಟ್ಟುತ್ತದೆ, ಆದರೆ ಅದರ ಕಣ್ಣುಗಳು ಬಳಲುವುದಿಲ್ಲ. ಅದಕ್ಕೆ ತಾನೆಂಬ ತನ್ನ ಪರಿವೆಯಿಲ್ಲ. ಚಿಂತೆಯೆಂಬುದೇ ಇಲ್ಲ. ಯೋಚಿಸಿ ಅದು ಏನನ್ನೂ ಮಾಡುವುದಿಲ್ಲ. ಯಾವುದು ಯಾಕೆ ಆಗುತ್ತದೆಂದು ಶಿಶು ತಿಳಿದಿರುವುದಿಲ್ಲ. ತಿಳಿಯುವ ಅಗತ್ಯವೂ ಅದಕ್ಕಿಲ್ಲ.

ಧ್ಯಾನದ ಇಂತಹ ಪ್ರತಿಮೆಗಳು ದಾವ್‌ನನ್ನು ವಿಚಾರಾತೀತವೆಂದು ನಮ್ಮೆದುರು ಮಂಡಿಸಿದರೂ, ಈ ದಾವೋಪನಿಷತ್ತಿನಲ್ಲಿ ಅದರದೇ ಆದ ತರ್ಕವಿದೆ, ಪ್ರಾಪಂಚಿಕ ವಿವೇಕವಿದೆ, ವ್ಯವಹಾರ ಕುಶಲತೆಯೂ ಇದೆ.


[1] ‘ನ್ಯೂಯಾರ್ಕ್ ಟೈಮ್ಸ್‌’ನ ಒಂದು ವರದಿಯ ಪ್ರಕಾರ ಚೀನೀಭಾಷೆಯನ್ನು ತಿಳಿಯದ ಈ ಮಿಚೆಲ್‌ನ ಅನುವಾದವನ್ನು ಹಿಂದೆಂದೂ ಯಾವ ಅನುವಾದಕನಿಗೂ ಕೊಡದಷ್ಟು ಅಪಾರವಾದ ಹಣವನ್ನು ಕೊಟ್ಟು ಪ್ರಕಾಶಕರು ಪ್ರಕಟಣೆಯ ಹಕ್ಕನ್ನು ಮಿಚೆಲ್‌ನಿಂದ ಪಡೆದವರಂತೆ.